ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ಚಂದ್ರಯ್ಯ ನಾಯ್ಡು ನನ್ನ ಕೈ ಹಿಡಿದರು..

ಸಾಹಿತಿ, ಸಂಘಟಕ, ಪ್ರಾಧ್ಯಾಪಕರಾಗಿದ್ದ ಪ್ರೊ. ಚಂದ್ರಯ್ಯ ನಾಯ್ಡು ಅವರು ಒಂದು ದಿನ ಚಿಕ್ಕಮಗಳೂರಿನಿಂದ ನೇರವಾಗಿ ನಮ್ಮ ಮುದ್ರಣಾಲಯಕ್ಕೆ ಬಂದು ಅವಸರವಸರವಾಗಿ… “ಬಾ ಇಲ್ಲಿ ಕಾರ್ ಹತ್ತಿಕೋ” ಎಂದು ಕರೆದುಕೊಂಡು ಹೊರಟರು. “ಎಲ್ಲಿಗೆ ಸರ್” ಎಂದರೆ… ಹೇಳ್ತೀನಿ ಬಾ ಎಂದು ಬಸವೇಶ್ವರನಗರದ ಗಂಗಮ್ಮ ತಿಮ್ಮಯ್ಯ ಸಮುದಾಯ ಭವನದ ಬಳಿ ಇರುವ ಒಂದು ದೊಡ್ಡ ಮನೆಗೆ ಕರೆದೊಯ್ದರು. ಮನೆ ಒಳಗೆ ಹೋದಮೇಲೆ ನನಗೆ ಗೊತ್ತಾಗಿದ್ದು… ಅದು ಆಗ ಬೆಂಗಳೂರು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾಗಿದ್ದ (M.D.) ನಾಗೇಂದ್ರ ಅವರ ಮನೆ ಎಂದು.

ಅವರಿಗೆ ನನ್ನನ್ನು ಪರಿಚಯಿಸಿ, ಒಳಕೋಣೆಗೆ ಕರೆದೊಯ್ದರು.

ಅಲ್ಲಿ ಅರಸೀಕೆರೆ ಬಳಿಯ ಕೋಡಿಮಠದ ಶ್ರೀ ಶ್ರೀ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳಿದ್ದರು. ನನಗೆ ಅತ್ಯಂತ ಆಶ್ಚರ್ಯ..! ತುಸು ಗಾಬರಿ..! ದೇಶದ ಪ್ರಧಾನಮಂತ್ರಿಯಿಂದ ಹಿಡಿದು ಎಲ್ಲ ರಾಜಕೀಯ ಧುರೀಣರು ಹಾಗೂ ದೊಡ್ಡ ದೊಡ್ಡ ಉದ್ಯಮಿಗಳು ಅವರವರ ಭವಿಷ್ಯ ಕೇಳಲು ಈ ಸ್ವಾಮೀಜಿಗಳ ಸಂದರ್ಶನಕ್ಕೆ ಕಾಯುತ್ತಿರುತ್ತಾರೆ. ಅಂತಹ ಸ್ವಾಮೀಜಿಗಳ ಮುಂದೆ ಅಷ್ಟು ಸುಲಭವಾಗಿ ನನ್ನನ್ನು ಕರೆದೊಯ್ದುಬಿಟ್ಟಿದ್ದರು..!

ಸ್ವಾಮೀಜಿಗಳ ಮುಂದೆ ನಮ್ಮ ಮುದ್ರಣಾಲಯದ ಬಗ್ಗೆ ತುಸು ಜಾಸ್ತಿಯೇ ಹೇಳಿ ಪರಿಚಯಿಸುತ್ತಾ – “ನೋಡಪ್ಪ ಕಿಟ್ಟಿ, ಸ್ವಾಮೀಜಿಯವರ ಪೀಠಾರೋಹಣವಾಗಿ 25 ವರ್ಷವಾಯಿತು. ಅದರ ಪ್ರಯುಕ್ತ ಮೂರು ದಿನಗಳ ಕಾಲ ಒಂದು ದೊಡ್ಡ ಮಟ್ಟದ ಬೆಳ್ಳಿ ಹಬ್ಬವೆಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮತ್ತು ವಿಶೇಷವಾದ ಸಂದರ್ಭ ಸಂಚಿಕೆ ಮುದ್ರಣವನ್ನು ಅಚ್ಚುಕಟ್ಟಾಗಿ ನೀನು ಮಾಡಬೇಕು” ಎಂದು ಅವರು ಅಲ್ಲಿಯವರೆಗೆ ಸಂಗ್ರಹಿಸಿದ್ದ ಲೇಖನಗಳನ್ನು ಕೊಟ್ಟು, “ಗುರುಗಳ ಕಾಲಿಗೆ ನಮಸ್ಕರಿಸಿ, ಹೋಗಿ ಕೆಲಸ ಶುರು ಮಾಡಿಕೋ..” ಎಂದು ಸ್ವಲ್ಪ ಮುಂಗಡ ಹಣವನ್ನು ಕೊಡಿಸಿ ಕಳಿಸಿದರು.

ಕಾರ್ಯಕ್ರಮದ ಹಿಂದಿನ ಕೆಲವು ದಿನಗಳವರೆಗೆ ಬಂದ ಅನೇಕ ಲೇಖನಗಳನ್ನು ಟೈಪ್ ಮಾಡಿಸಿ ಕರಡು ತಿದ್ದಿ ಅತ್ಯಂತ ಹಳೆಯ ಫೋಟೋಗಳನ್ನೆಲ್ಲ ಸೇರಿಸಿ ವಿನ್ಯಾಸಗೊಳಿಸಿ, ಕಾರ್ಯಕ್ರಮದ ಹಿಂದಿನ ದಿನ ಸಂಜೆ ಪುಸ್ತಕಗಳನ್ನು ಸಿದ್ಧಪಡಿಸಿ ಚಂದ್ರಯ್ಯ ನಾಯ್ಡು ಅವರ ಕೈಗೆ ಕೊಟ್ಟೆವು.

ಅವರು ವಿನ್ಯಾಸ, ಮುದ್ರಣ, ಬೈಂಡಿಂಗ್ ಎಲ್ಲಾ ನೋಡಿ ಬಹಳ ಸಂತೋಷಪಡುತ್ತಿದ್ದರು. ಆದರೆ ಅವರ ಆ ಸಂತೋಷ ಬಹಳ ಹೊತ್ತು ಉಳಿಯಲಿಲ್ಲ. ಪುಟಗಳನ್ನು ತಿರುವಿಹಾಕಿ ನೋಡುತ್ತಾ ಮುಖ ಕಿವುಚಿಕೊಂಡು “ಛೆ.. ಛೆ.. ಛೆ..” ಎಂಬ ಶಬ್ದದೊಂದಿಗೆ ಪುಸ್ತಕವನ್ನು ತಿರುವಿ ತಿರುವಿ ನೋಡಲು ಪ್ರಾರಂಭಿಸಿದರು. ನಮಗೆ ಗಾಬರಿ. “ಯಾಕೆ ಸರ್, ಏನಾಗಿದೆ” ಎಂದರೂ, ಅವರಿಂದ ಏನೂ ಮಾತೇ ಇಲ್ಲ..! ಮೌನವಾಗಿ ಕುಳಿತುಬಿಟ್ಟರು.

ಸ್ವಲ್ಪ ಸಮಯದ ನಂತರ “ಕಿಟ್ಟಿ ಎಂಥ ಅಚಾತುರ್ಯ ನಡೆದುಹೋಗಿದೆ..!!” ಎಂದರು. ಗಾಬರಿಯಲ್ಲಿ “ಏನು, ಏನಾಗಿದೆ ಹೇಳಿ” ಎಂದಾಗ, ನಾವು ಹಾಕಿರೋ ಕರಡು ದೋಷಗಳನ್ನು (ಕರೆಕ್ಷನ್ಸ್) ನಾನೇ ಕೂತು ಕಂಪ್ಯೂಟರ್ ನಲ್ಲಿ ಸರಿಪಡಿಸಿದ್ದೆ. ಆದರೆ ತಪ್ಪುಗಳು ಎಲ್ಲ ಹಾಗೆ ಉಳಿದಿವೆ. ಏನಿದು? ಯಾಕೆ ಹೀಗಾಗಿದೆ? ಎಂದರು. ನಾವು ಪ್ರೂಫ್ ಹಿಡಿದು ಕಂಪ್ಯೂಟರ್‌ನ ಫೈಲ್ ಓಪನ್ ಮಾಡಿ ನೋಡಿದರೆ, ಅದೇ ಗ್ರಂಥದ ಎರಡು ಫೈಲ್ ಗಳಿದ್ದವು. (ಕೆಲವು ಬಾರಿ ದೊಡ್ಡ ದೊಡ್ಡ ಪುಸ್ತಕಗಳನ್ನು ವಿನ್ಯಾಸ ಮಾಡುವಾಗ ಫೈಲ್ ಗಳಿಗೆ ತೊಂದರೆಯಾಗಿ ಫೈಲ್ ಗಳು ಓಪನ್ ಆಗದಿರಬಹುದೆಂದು ಅದೇ ಫೈಲನ್ನು ಇನ್ನೊಂದು ಫೈಲ್ ನಲ್ಲೋ, ಕಂಪ್ಯೂಟರ್ ನಲ್ಲೋ ಸೇವ್ ಮಾಡಿಟ್ಟುಕೊಳ್ಳುವುದು ವಾಡಿಕೆ) ಒಂದು ಫೈಲ್ ನಲ್ಲಿ ಕರೆಕ್ಷನ್ಸ್ ಆಗಿದೆ, ಇನ್ನೊಂದರಲ್ಲಿ ಕರೆಕ್ಷನ್ಸ್ ಆಗಿಲ್ಲ.

ಅಂತಿಮವಾಗಿ ಮುದ್ರಣಕ್ಕೆ ಹೋಗುವಾಗ ಹಗಲು ರಾತ್ರಿಯೆನ್ನದೆ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾವು ಸರಿಯಾಗಿ ಗಮನಿಸದೆ, ಕರೆಕ್ಷನ್ಸ್ ಆಗದೇ ಇರುವ ಫೈಲ್ ಮುದ್ರಣವಾಗಿ ಬಿಟ್ಟಿದೆ. ಏನು ಮಾಡುವುದೆಂದು ತೋಚಲೇ ಇಲ್ಲ. ಎಲ್ಲರಿಗೂ ಒತ್ತಡ ಒತ್ತಡ..!! ಮಾರನೇ ದಿನ ಬೆಳಗ್ಗೆ ಮಠದಲ್ಲಿ ಪ್ರಾರಂಭವಾಗುವ ಮೊದಲ ದಿನದ ಕಾರ್ಯಕ್ರಮದಲ್ಲಿ ಆ ಪುಸ್ತಕ ಬಿಡುಗಡೆಯಾಗಲೇ ಬೇಕು. ಆಹ್ವಾನ ಪತ್ರಿಕೆಯಲ್ಲಿ ಪುಸ್ತಕ ಬಿಡುಗಡೆಯ ಸಮಯ, ದಿನ ಮುದ್ರಣವಾಗಿ ರಾಜ್ಯಾದ್ಯಂತ ಆಹ್ವಾನ ಪತ್ರಿಕೆಯನ್ನು ಹಂಚಲಾಗಿದೆ. ಮಠದ ಪ್ರತಿಷ್ಠೆಯ ಪ್ರಶ್ನೆ.

ಈ ಪುಸ್ತಕವನ್ನು ಬಿಡುಗಡೆ ಮಾಡಿಸಿ ವೇದಿಕೆ ಮೇಲಿರುವ ಮತ್ತು ಸಮಾರಂಭದಲ್ಲಿ ಭಾಗವಹಿಸುವ ಗಣ್ಯರಿಗೆ ಹಾಗೂ ಮಠದ ಭಕ್ತರಿಗೆ ಈ ಪುಸ್ತಕವನ್ನು ಕೊಡಲು ಸಾಧ್ಯವೇ ಇಲ್ಲ ಎಂದುಬಿಟ್ಟರು ನಾಯ್ಡು ಅವರು. ಬೆಳಗಿನ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಆಗಲೇಬೇಕು.

ಕೊನೆಯಲ್ಲಿ ನಾಯ್ಡು ಅವರು “ನಾಳೆ ಬೆಳಗ್ಗೆ ಒಳಗೆ ಮತ್ತೆ ಹೊಸದಾಗಿ ಮುದ್ರಣ ಮಾಡಬಹುದಾ” ಎಂದಾಗ, ತುಸು ಯೋಚಿಸಿ “ಅದು ಕಷ್ಟಸಾಧ್ಯ..! ನಾಳೆ ಸಂಜೆ ಒಳಗೆ ಕೆಲವು ಪುಸ್ತಕ ಕೊಡಲು ಪ್ರಯತ್ನಿಸುತ್ತೇವೆ” ಎಂದಾಗ, “ಆಗಲಿ, ಈಗ ಹೊಸದಾಗಿ ಕರೆಕ್ಷನ್ ಆದ ಫೈಲ್‌ನ ಮುದ್ರಣ ಕೆಲಸ ಶುರು ಮಾಡಿ. ನಾನು ಇದರಲ್ಲಿ ಹತ್ತು ಪುಸ್ತಕಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತೇನೆ. ಅವುಗಳನ್ನೇ ಬಿಡುಗಡೆ ಮಾಡಿಸಿ ಬಿಡುಗಡೆಯಾದ ಪ್ರತಿಗಳನ್ನು ಯಾರ ಕಣ್ಣಿಗೂ ಬೀಳದ ಹಾಗೆ ನೋಡಿಕೊಳ್ಳುತ್ತೇನೆ. ನೀನು ನಿಮಗಾಗುವ ನಷ್ಟದ ಬಗ್ಗೆ ಯೋಚಿಸುತ್ತ ಕೂರದೆ, ಧೈರ್ಯವಾಗಿ ಕೆಲಸ ಮಾಡು. ನಾಳೆ ಸಂಜೆ 5 ಗಂಟೆಯೊಳಗೆ ತಿದ್ದುಪಡಿಯಾದ ಪುಸ್ತಕಗಳು ಮಠದಲ್ಲಿ ಇರಬೇಕು” ಎಂದು ಹೇಳಿ ಹೊರಟರು. ನಾವು ಮತ್ತೆ ಕಾರ್ಯೋನ್ಮುಖರಾದೆವು.

ಆ ಸಮಯದಲ್ಲಿ ‘ಲೋಟಸ್ ಪ್ರಿಂಟರ್ಸ್’ ಅವರ ಸಹಕಾರವನ್ನಂತೂ ಮರೆಯುವಂತೆಯೇ ಇಲ್ಲ..!! ಇಡೀ ರಾತ್ರಿ ಅವರ ಎರಡು ಯಂತ್ರಗಳಲ್ಲಿ ಮತ್ತು ನಮ್ಮ ಮುದ್ರಣಾಲಯದ ಎರಡು ಯಂತ್ರಗಳಲ್ಲಿ, ಬೆಳಗ್ಗೆ 8ರ ಹೊತ್ತಿಗೆ ಇಡೀ ಪುಸ್ತಕವನ್ನು ಹೊಸದಾಗಿ ಮುದ್ರಿಸಿಬಿಟ್ಟೆವು. ತರಾತುರಿಯಲ್ಲಿ ಬೈಂಡಿಂಗ್ ಮಾಡಿಕೊಂಡು ಸಂಜೆ 6 ಗಂಟೆಗೆ ಮಠ ತಲುಪಿದೆವು. ನಮ್ಮ ಅದೃಷ್ಟಕ್ಕೆ ಬೆಳಗ್ಗೆ ಪುಸ್ತಕ ಬಿಡುಗಡೆ ಮಾಡುವ ಅತಿಥಿ ಬಂದಿಲ್ಲವೆಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸಂಜೆಗೆ ಮುಂದೂಡಿದ್ದರು…

ಪುಸ್ತಕ ಬಿಡುಗಡೆಯಾಗಿ ಸ್ವಾಮೀಜಿಯವರು ಬಹಳ ಸಂತೋಷಪಟ್ಟು ಪುಸ್ತಕದ ಮುದ್ರಣದ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಸ್ವಲ್ಪ ಎಚ್ಚರ ತಪ್ಪಿದ್ದರಿಂದ ಸುಮಾರು 2 ಲಕ್ಷ ರೂಪಾಯಿಗಳಷ್ಟು ನಮ್ಮ ಮುದ್ರಣಾಲಯ ನಷ್ಟ ಅನುಭವಿಸಬೇಕಾಯಿತು. ಇದು ದೊಡ್ಡ ಮಟ್ಟದ ಮೊದಲ ನಷ್ಟ. ಚಂದ್ರಯ್ಯ ನಾಯ್ಡು ಅವರು ಮಮ್ಮಲ ಮರುಗಿದರು. “ನೀನು ಹೆದರಬೇಡ. ಈ ನಷ್ಟವನ್ನು ನಾನು ನಿನಗೆ ಸರಿದೂಗಿಸಿಕೊಡುತ್ತೇನೆ” ಎಂದು ಧೈರ್ಯ ತುಂಬಿದರು.

ಚಂದ್ರಯ್ಯ ನಾಯ್ಡು ಅವರು ಯಾರಿಗೇ ನನ್ನನ್ನು ಪರಿಚಯಿಸಿದರೂ “ನನ್ನ ಹಿರಿಯ ಮಗ” ಎನ್ನುತ್ತಿದ್ದರು. ಅವರು ಊರಿಂದ ಬೆಂಗಳೂರಿಗೆ ಬರುವಾಗ ದಾರಿಯಲ್ಲಿ ಕಂಡ ಹಣ್ಣು, ಸಿಹಿತಿನಿಸುಗಳನ್ನು ತಂದು ಇಡೀ ನಮ್ಮ ಮುದ್ರಣಾಲಯದ ಸಿಬ್ಬಂದಿಗೆ ಹಂಚುತ್ತಿದ್ದರು. ಪೂಜ್ಯ ವೀರೇಂದ್ರ ಹೆಗ್ಗಡೆಯವರನ್ನು ಕುರಿತು ನಾಯ್ಡು ಅವರು ಬರೆದ ನಮ್ಮ ಮುದ್ರಣದ ‘ವಚನ ವೀರೇಂದ್ರ’ ಪುಸ್ತಕ ಬಿಡುಗಡೆ ನೆಪದಲ್ಲಿ, ಧರ್ಮಸ್ಥಳ ಮತ್ತು ಸುತ್ತಮುತ್ತ ಪ್ರವಾಸಿ ಸ್ಥಳಗಳಿಗೆ ನಮ್ಮ ಮುದ್ರಣಾಲಯದ ಎಲ್ಲ ಸಿಬ್ಬಂದಿಯನ್ನು ಪ್ರವಾಸ ಕರೆದೊಯ್ದಿದ್ದರು..! ನಾಯ್ಡು ಅವರು ಧರ್ಮಸ್ಥಳದಲ್ಲಿ ನಮಗೆಲ್ಲಾ ನಾವೆಂದೂ ಕಂಡರಿಯದ ರಾಜಾತಿಥ್ಯ ಮಾಡಿಸಿದ್ದರು.

ಸ್ವ್ಯಾನ್‌ಗೆ ನೀರೆರೆದು ಪೋಷಿಸಿದವರು ಹಲವರು. ಅದರಲ್ಲಿ ಚಂದ್ರಯ್ಯ ನಾಯ್ಡು ಅವರು ಪ್ರಮುಖರು.

ಇಂದಿಗೂ ಮುದ್ರಣ ವಿಷಯಕ್ಕೆ ಸಂಬಂಧಿಸಿದ ಏನೇ ಕೆಲಸವಿದ್ದರೂ ನಮ್ಮನ್ನು ನೆನಪಿಸಿಕೊಂಡು ಕರೆಯುವ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಪೂಜ್ಯ ವೀರೇಂದ್ರ ಹೆಗ್ಗಡೆ, ಹಿರಿಯ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡ, ಹಿರಿಯ ಸಾಹಿತಿ ಪ್ರೊ. ಪ್ರಧಾನ್ ಗುರುದತ್- ಹೀಗೆ ಅನೇಕ ಬೆಲೆ ಕಟ್ಟಲಾಗದಂತಹ ಹಿರಿಯರನ್ನು ನಮ್ಮ ಮುದ್ರಣಾಲಯಕ್ಕೆ ಪರಿಚಯಿಸಿದ್ದು ಚಂದ್ರಯ್ಯ ನಾಯ್ಡು ಅವರೇ.

ನಮಗೆ ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ‘ಮುದ್ರಣ ಸೊಗಸು’ ಪ್ರಶಸ್ತಿ ಬಂದಾಗ ಅದನ್ನು ನೋಡಿ ಸಂತೋಷಪಡಲು ನಾಯ್ಡು ಅವರು ನಮ್ಮೊಂದಿಗೆ ಇರಬೇಕಿತ್ತು ಎಂಬ ಕೊರಗು ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ…

ಆದರೆ ನಾಯ್ಡು ಅವರ ಶ್ರೀಮತಿ ವಾಣಿ ಅಮ್ಮ ಅವರು ಈಗಲೂ ನಮ್ಮೊಂದಿಗೆ ಅದೇ ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ…

‍ಲೇಖಕರು avadhi

June 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Dr. S. P. Padma praPra

    ನನ್ನ ಮಿತ್ರ ರಾಗಿದ್ದ ಚಂದ್ರ,ಯ್ಯ ನಾಯ್ಡು ಒಳ್ಳೆಯ ಸಂಘಟಕ. ಅವರ ರುಚಿಗೆ ತುಂಬಾ ‌‌‌‌‌‌‌ಸಹಕಾ‌ರ ನೀಡುತ್ತಿದ್ದ ನೀರು ಪತ್ನಿ ವಾಣಿಯವರು. ನಾವೆಲ್ಲಾ ಹಂಪನಾ ದಂಪತಿಗಳ ಜೊತೆ ಮುಂಬೈ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಹೋದದ್ದು ಒಂದು ಸವಿ ನೆನಪು.
    .ಂ
    ಅವರ ಅನಿರೀಕ್ಷಿತ ಅಗಲಿಕೆ ಕನ್ನಡ ಕಾರ್ಯಕ್ರಮ ಸಂಘಟನೆ ಗೆ ದೊಡ್ಡ ನಷ್ಟ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: