ಕಾರ್ತಿಕ್ ಆರ್ ಓದಿದ ‘ದೀಪವಿರದ ದಾರಿಯಲ್ಲಿ’

ದೀಪವಿರದ ದಾರಿಯಲ್ಲೊಂದು ಚೆಂದದ ಹಣತೆ

ಕಾರ್ತಿಕ್ ಆರ್

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕುರಿತು, ಸಮುದಾಯದ ಹೊರಗಿನವರು (ಅದು ಯಾವುದೇ ಭಾಷೆ/ಪ್ರಕಾರವಿರಲಿ) ಏನನ್ನೂ ಬರೆದರೂ/ ರಚಿಸಿದರೂ, ಅದನ್ನು ಸಮುದಾಯದವರು ಒಂದು ರೀತಿಯ ಆತಂಕ ಮತ್ತು ಅನುಮಾನದಿಂದಲೇ ನೋಡುವುದು ಸಾಮಾನ್ಯ, ಮತ್ತು ಅದಕ್ಕೆ ಕಾರಣಗಳು ಹಲವು. ಭಿನ್ನ ಲೈಂಗಿಕತೆಯ ಕುರಿತಾದ ಪೂರ್ವಾಗ್ರಹ ಪೀಡಿತ ಗ್ರಹಿಕೆ ಒಂದು ಕಾರಣವಾದರೆ, ಅಂತಹ ವ್ಯಕ್ತಿಗಳ ಕುರಿತಾದ ಅಜ್ಞಾನ ಮತ್ತೊಂದು ಕಾರಣ.

ಇಂತಹದ್ದೇ ಆತಂಕ ಮತ್ತು ಅನುಮಾನದಿಂದಲೇ ನಾನು ಸುಶಾಂತ್ ಕೋಟ್ಯಾನ್‌ರವರ ‘ದೀಪವಿರದ ದಾರಿಯಲ್ಲಿ’ ಕಾದಂಬರಿಯನ್ನು ಕೈಗೆತ್ತಿಕೊಂಡೆ. ಆದರೆ ಅಲ್ಲಿ ನನಗೊಂದು ಹಿತವಾದ ಅಚ್ಚರಿ ಕಾದಿತ್ತು. ನೂರಾ ಅರವತ್ತ ನಾಲ್ಕು ಪುಟಗಳ ಈ ಕಾದಂಬರಿಯು, ಕನ್ನಡ ಸಾಹಿತ್ಯದಲ್ಲಿ ಈಗಿನ್ನೂ ಅಂಬೆಗಾಲಿಡುತ್ತಿರುವ ‘ಕ್ವೀರ್’ ಕಥನಗಳಿಗೆ ಹೊಸ ಹುರುಪನ್ನು ತಂದುಕೊಟ್ಟಿದೆ ಎಂದೇ ನನಗನಿಸುತ್ತದೆ.

ಸುಕೇಶ ಎಂಬ, ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳನ್ನು ನಿಭಾಯಿಸುವ, ದೈಹಿಕವಾಗಿ ಗಂಡಾದರೂ ಅಂತರಂಗದಲ್ಲಿ ಹೆಣ್ಣಾಗಿರುವ ವ್ಯಕ್ತಿಯ ಬದುಕಿನಲ್ಲಿ ನಡೆಯುವ ಎರಡು ಪ್ರಮುಖ ಘಟನೆಗಳ ಸುತ್ತ ಹೆಣೆಯಲಾಗಿರುವ ಈ ಕತೆಯನ್ನು ಸುಶಾಂತ್ ಯಾವುದೇ ಆತುರವಿಲ್ಲದೇ ಹೇಳಿಕೊಂಡು ಹೋಗಿದ್ದಾರೆ.

ಇಲ್ಲಿ ನಾವು ಎರಡು ಪ್ರಮುಖ ಮತ್ತು ಪರಸ್ಪರ ಸಮಾನಾಂತರವಾಗಿ ಸಾಗುವ ಥೀಮ್‌ಗಳನ್ನು ಗಮನಿಸಬಹುದು, ಒಂದು, ಗಂಡುಕಲೆ ಎಂದೇ ಹೆಸರಾದ ಕಲಾ ಪ್ರಕಾರವೊಂದರಲ್ಲಿ, ಹೆಣ್ಣಿನ ಪಾತ್ರವನ್ನು ನಿಭಾಯಿಸುವ ಪುರುಷನ ಪ್ರಜ್ಞೆ, ಮತ್ತೊಂದು, ಮಾನಸಿಕವಾಗಿ ತಾನೊಬ್ಬ ಹೆಣ್ಣೆಂಬುದು ಅದೆಷ್ಟೇ ಸ್ಪಷ್ಟವಾಗಿ ತಿಳಿದಿದ್ದರೂ, ಲೋಕದೆದುರು, ಹುಟ್ಟಿನಿಂದ ದೊರೆತ ಶರೀರದ ದೆಸೆಯಿಂದಾಗಿ, ಗಂಡಿನ ಪಾತ್ರವನ್ನು ನಿಭಾಯಿಸಬೇಕಾದ ವ್ಯಕ್ತಿಯ ಅಸಹಾಯಕತೆ, ಮತ್ತು ಗೊಂದಲ.

ಸ್ತ್ರೀವೇಷ ತೊಟ್ಟ ಪುರುಷನೇನೋ ಪಾತ್ರ ಮುಗಿದ ನಂತರ ತನ್ನ ಹೆಣ್ಣು ವೇಷವನ್ನು ಸಲೀಸಾಗಿ ಕಳಚಿ ಸರಾಗವಾಗಿ ಬದುಕಿಬಿಡಬಹುದು, ಅದೇ ಗಂಡಿನ ವೇಷದಲ್ಲಿ ಬಲವಂತವಾಗಿ ಬಂಧಿಯಾಗಿರುವ ಹೆಣ್ಣು ಅಷ್ಟೇ ಸಲೀಸಾಗಿ ತನ್ನ ಪುರುಷವೇಷವನ್ನು ಕಳಚಬಹುದೇ? ಮತ್ತು ಕಳಚಿದಾಗ ಏನಾಗುತ್ತದೆ? ಎಂಬುದೇ ಈ ಕಾದಂಬರಿಯ ಹೂರಣ. ಈ ಆಶಯಕ್ಕೆ ತಕ್ಕಂತೆ ಕಥೆ ಸುಕೇಶ ಪಾತ್ರಕ್ಕಾಗಿ ಸ್ತ್ರೀವೇಷ ತೊಟ್ಟುಕೊಳ್ಳುತ್ತಿರುವ ಸನ್ನಿವೇಶದಿಂದ ಆರಂಭವಾಗಿ, ಅವನು ವೇಷಗಳನ್ನೆಲ್ಲ ಬಿಸುಟು ತನ್ನ ಸ್ವಭಾವಿಕ ಸ್ವರೂಪಕ್ಕೆ ಮರಳುವುದರೊಂದಿಗೆ ಮತ್ತು ಅದರಿಂದ ಉಂಟಾಗುವ ವಿಪ್ಲವದೊಂದಿಗೆ ಕೊನೆಗೊಳ್ಳುತ್ತದೆ.    

ಈ ಕಾದಂಬರಿಯ ಕಥನ ಅದೆಷ್ಟು ಯಶಸ್ವಿಯಾಗಿದೆ ಎಂಬುದನ್ನಾಗಲೀ ಇದರಲ್ಲಿ ಬಳಸಿರಬಹುದಾದ ತಂತ್ರ, ರೂಪಕಗಳ ಬಗೆಗಾಗಲೀ ಚರ್ಚಿಸುವುದಕ್ಕಿಂತಲೂ, ಕ್ವೀರ್ ಸಮುದಾಯದ ಸದಸ್ಯನಾಗಿ ಈ ಕಾದಂಬರಿಯಲ್ಲಿ ನನಗೆ ಕಂಡ, ಹಿಡಿಸಿದ, ಹಿಡಿಸದ ವಿಚಾರಗಳನ್ನು ವಿವರಿಸುವುದೇ ಸೂಕ್ತವೆಂದು ನನ್ನ ಭಾವನೆ.

ಈ ಕೃತಿಯನ್ನು ರಚಿಸಿದವರು ಸಮುದಾಯದವರಲ್ಲ ಎಂಬುದು ತಿಳಿದುಬಂದಾಗ ನನಗಿದ್ದ ಅತೀ ದೊಡ್ಡ ಆತಂಕವೆಂದರೆ, ಪೂರ್ವಾಗ್ರಹದ್ದು, ಹಾಗೇ ಬೆಣ್ಣೆಯಿಂದ ಕೂದಲು ಬಿಡಿಸಿದಷ್ಟು ಸೂಕ್ಷ್ಮವಾದ ಭಿನ್ನತೆಯಿರುವ ಭಿನ್ನ ಲೈಂಗಿಕ ಗುರುತುಗಳನ್ನು ಸರಿಯಾಗಿ ನಿಭಾಯಿಸುತ್ತಾರೋ ಇಲ್ಲವೋ ಎಂಬ ಅನುಮಾನವೂ ಇತ್ತು. ಆದರೆ ಯಾವುದೇ ಬಗೆಯ ಪೂರ್ವಾಗ್ರಹಕ್ಕೆ ಆಸ್ಪದವಿಲ್ಲದಂತೆ, ಇದ್ದದ್ದನ್ನು ಇದ್ದ ಹಾಗೆಯೇ ಹೇಳುತ್ತಾ, ಕಥೆಯ ವೇಗಕ್ಕೆ ತೊಡಕಾದರೂ ಲೆಕ್ಕಿಸದೇ ವಿಭಿನ್ನ ಪ್ರಕಾರದ ಕ್ವೀರ್ ವ್ಯಕ್ತಿಗಳ ಬಗೆಗೆ ಸಾಧ್ಯವಾದಷ್ಟೂ ಜವಾಬ್ದಾರಿಯಿಂದ ತಿಳಿಸಿ ಹೇಳುತ್ತಾ ಸಾಗುವ ಕಥೆಯ ಬಗೆಗೆ ನಂಬಿಕೆ ಮೂಡಲಾರಂಭಿಸಿತು. 

ಸುಕೇಶನ ಕಥೆಯು ಧಾವಂತವಿಲ್ಲದ ಸಣ್ಣ ಊರೊಂದರಲ್ಲಿ, ಯಕ್ಷಗಾನದ ಹಿನ್ನೆಲೆಯಲ್ಲಿ ಬಿಚ್ಚಿಕೊಳ್ಳುತ್ತದೆ. ಇದು ಸುಕೇಶನೆಂಬ ಒಬ್ಬ ವ್ಯಕ್ತಿಯ ಕತೆಯಷ್ಟೇ ಆಗಿದ್ದರೂ, ಕಾದಂಬರಿಕಾರ ಕಟ್ಟಿರುವ ಪಾತ್ರ ಪ್ರಪಂಚದಿಂದಾಗಿ ಇದು ಇಡೀ ಭಿನ್ನ ಲೈಂಗಿಕ ಸಮಾಜದ ಕತೆಯಂತೆಯೇ ಹಲವು ಬಾರಿ ಅನಿಸುತ್ತದೆ. ಸುಕೇಶನಂತೆಯೇ ಸ್ತ್ರೀವೇಷ ತೊಡುವ, ಮನಸ್ಸಿನಿಂದ ಹೆಣ್ಣಾಗಿರುವ ರಘುಪತಿ ಮತ್ತು ಸಂಜೀವ, ಹಿಂದೊಮ್ಮೆ ಇವರಂತೆಯೇ ಇದ್ದು ಈಗ “ನಿರ್ವಾಣ” ಮಾಡಿಸಿಕೊಂಡು ಲಿಂಗಪರಿವರ್ತಿತರಾಗಿರುವ ಮಂದಾಕಿನಿ, ಸುನಂದ ಮೊದಲಾದ ಪಾತ್ರಗಳು, ಮತ್ತು ಅವರುಗಳ ನಡುವಿನ ಸಂವಾದ, ಸನ್ನಿವೇಶಗಳು ಬಹಳವೇ ಸಹಜವಾಗಿ ಮೂಡಿಬಂದಿವೆ.

ದೇಹ ಸುಖಕ್ಕಿಂತ, ನಿಷ್ಕಳಂಕ ಪ್ರೇಮಕ್ಕಾಗಿ ಹಪಹಪಿಸುವ ಸುಕೇಶವನ್ನು ಎಷ್ಟು ಸಹಜವಾಗಿ ಚಿತ್ರಿಸಲಾಗಿದೆಯೋ, ಕುಟುಂಬಕ್ಕಾಗಿ ಮದುವೆಯಾಗಿ, ಸಾಧ್ಯವಾದಾಗಲೆಲ್ಲ ಗಂಡಸರನ್ನು ಸೇರಲು ಬಯಸುವ ರಘುಪತಿ, ಯಕ್ಷಗಾನದ ಜೊತೆ ಬೇರೆ ಕೆಲಸವನ್ನೂ ಮಾಡಿಕೊಂಡು, ತನ್ನನ್ನು ಮೋಹಿಸಿ ಬರುವ ಪುರುಷರ ಜೊತೆ ಸುಖಿಸಿ ಬರುವ ಸಂಜೀವರ ಪಾತ್ರಗಳೂ ಅಷ್ಟೇ ಸ್ವಭಾವಿಕವಾಗಿ ಮೂಡಿಬಂದಿದ್ದು, ಕಾದಂಬರಿಕಾರ ಎಲ್ಲೂ ತನ್ನ ಚಿಕಿತ್ಸಕ ದೃಷ್ಟಿಯನ್ನಾಗಲೀ, ಇದು ಸರಿ, ಇದು ತಪ್ಪು, ಎಂಬ ಕಪ್ಪು ಬಿಳುಪಿನ ನಿರೂಪಣೆಯನ್ನಾಗಲೀ ಬಳಸದಿರುವುದು ಹೊಸತೆನಿಸಿತು.

ಕೇವಲ ನಗರ ಕೇಂದ್ರಿತ ಕ್ವೀರ್ ಕಥನಗಳನ್ನೇ ಕೇಳಿದ್ದವರಿಗೆ, ಸಂಪೂರ್ಣವಾಗಿ ಹಳ್ಳಿಗಾಡಿನ ಪರಿಸರದಲ್ಲೇ ನಡೆಯುವ ಈ ಕಥೆ ಒಂದು ರೀತಿ ವೆಲ್‌ಕಮ್ ಚೇಂಜ್ ಎಂದರೆ ತಪ್ಪಾಗಲಾರದು. ಹೊರಗೆ ಎಲ್ಲ ಗಂಡಸರಂತೆಯೇ ನಡೆದುಕೊಳ್ಳುತ್ತಾ, ತಾವು ತಾವೇ ಕಲೆತಾಗ ಮಾತ್ರ ಬೇರೆಯದೇ ರೀತಿಯಲ್ಲಿ ಮಾತನಾಡುತ್ತಾ, ಒಬ್ಬರನ್ನೊಬ್ಬರು ‘ಅವಳು’, ‘ಇವಳು’, ಎಂದೇ ಕರೆದುಕೊಳ್ಳುತ್ತಾ ಒಬ್ಬರಿಗೊಬ್ಬರು ಒತ್ತಾಸೆಯಾಗಿ ನಿಲ್ಲುವ ಸುಕೇಶ, ಸಂಜೀವ, ರಘುಪತಿಯನ್ನು ಒಳಗೊಂಡ ಸನ್ನಿವೇಶಗಳು, ಸಹಜ ಮತ್ತು ಆಪ್ತವೆನ್ನಿಸುತ್ತವೆ.

ಕ್ವೀರ್ ಚಳವಳಿಯ ಚಟುವಟಿಕೆಗಳೆಲ್ಲ ನಗರದಲ್ಲಷ್ಟೇ ಸಕ್ರಿಯವಾಗಿರುವ ಈಗಿನ ಸಂದರ್ಭದಲ್ಲಿ ಗ್ರಾಮದಲ್ಲಿರದ್ದರೂ ಒಬ್ಬರಿಗೊಬ್ಬರು ಆಗಿ ಬರುವ, ಒಂದು ರೀತಿಯಲ್ಲಿ ಒಂದು ಸಣ್ಣ ಸಮುದಾಯವೇ ಆಗಿರುವ ಈ ಮೂರು ಪಾತ್ರಗಳು ಕಥೆಗೆ ಹೊಸತನವನ್ನು ತಂದುಕೊಟ್ಟಿವೆ.

ಸುಶಾಂತ್‌ರವರು ಕಾದಂಬರಿಗಾಗಿ ಸಾಕಷ್ಟು ಪರಿಶ್ರಮ ಹಾಕಿರುವುದು ಸ್ಪಷ್ಟವಿದೆ. ಅವರ ಗಮನ ಕಥೆ ಹೇಳುವುದರ ಮೇಲಷ್ಟೇ ಇರದೇ, ಓದುಗರ ಕೆಲ ಗೊಂದಲಗಳನ್ನು ಬಗೆಹರಿಸುವ, ಹೊಸ ವಿಚಾರಗಳನ್ನು ತಿಳಿಸುವ ದಿಸೆಯಲ್ಲೂ ಇರುವುದರಿಂದ, ಕತೆ ಕೆಲವು ಕಡೆಗಳಲ್ಲಿ ವಾಚ್ಯವಾಗುತ್ತದೆ. ಉದಾಹರಣೆಗೆ, ತನ್ನ ಮನಸ್ಸಿನ ಭಾವನೆಗಳನ್ನು ಸುಕೇಶ ರವೀಂದ್ರನಿಗೆ ತಿಳಿಸುವ ಸನ್ನಿವೇಶದಲ್ಲಿ, ಸುಕೇಶ ತನ್ನ ಮನದ ಮಾತುಗಳ ಜೊತೆಗೆ, ಹುಟ್ಟಿನಿಂದಲೇ ಗಂಡೂ ಹೆಣ್ಣೂ ಎರಡೂ ಆಗಿರುವ ವ್ಯಕ್ತಿಗಳು, ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾಗುವ ವ್ಯಕ್ತಿಗಳ ಬಗೆಗೆ ವಿವರಿಸುವುದು, ಇನ್ನು ಮಂದಾಕಿನಿಯನ್ನು ಭೇಟಿಯಾಗಲು ಹೋದಾಗ ಅಲ್ಲಿ ಸುನಂದಾ ಸುಕೇಶನಿಗೆ ಭಿನ್ನ ಲೈಂಗಿಕತೆಯ ಅನೇಕ ಬಗೆಗಳ ಕುರಿತು ತಿಳಿಸುವುದು, ಮೊದಲಾದ ಕಡೆಗಳಲ್ಲಿ ಸಹಜ ಸಂಭಾಷಣೆಗಳ ಜೊತೆ ಪಾಠವನ್ನೂ ಮಾಡುವ ಕೆಲಸ ನಡೆದಿದೆ.

ಇದು ಒಂದಷ್ಟು ವಾಚ್ಯವೆನಿಸಿದರೂ, ಅದರ ಅಗತ್ಯವೂ ಇತ್ತೆಂದು ನನಗೆ ಅನಿಸುತ್ತದೆ. ಇಲ್ಲದಿದ್ದರೆ ಭಿನ್ನ ಲೈಂಗಿಕತೆ ಎಂದರೆ ಸುಕೇಶನಂತೆ ಗಂಡಾಗಿ ಹುಟ್ಟಿದರೂ ಹೆಣ್ಣೆಂದು ಭಾವಿಸಿಕೊಳ್ಳುವುದು ಎಂಬ ತಪ್ಪು ತಿಳುವಳಿಕೆ ಉಂಟಾಗುವ ಅಪಾಯವಿತ್ತು. ತಮ್ಮ ಕೃತಿಗೆ ತೊಡಕಾದೀತೆಂಬ ಧಾವಂತವಿಲ್ಲದೇ, ಇದು ಹೀಗೆ, ಇದು ಹೀಗಲ್ಲ ಎಂದು ಬಹಳ ಸ್ಪಷ್ಟವಾಗಿ ವಿವರಿಸಿರುವುದು ವಿಶೇಷ.

ಇನ್ನು ಹೆಣ್ಣಿನ ವೇಷ ತೊಡುವ ಗಂಡಸರ ಜೊತೆ, ಅಥವಾ ಹೆಣ್ಣಿನ ಸ್ವಭಾವದ ಪುರುಷರ ಜೊತೆ ಸುಖಿಸಲು ಬಯಸುವ, ಉಳಿದಂತೆ ಸ್ಟ್ರೈಟ್ ಎನಿಸುವ ಪಾತ್ರಗಳು, ಮನುಷ್ಯರಲ್ಲಿರ ಲೈಂಗಿಕ ನಡವಳಿಕೆಯಲ್ಲಿನ ಭಿನ್ನತೆಯತ್ತ ಬೆಳಕು ಚೆಲ್ಲುತ್ತವೆ. ಸುಕೇಶ ಹುಡುಗಿಯಂತೆ ನಾಜೂಕು ಎಂಬ ಕಾರಣಕ್ಕೆ ಅವನನ್ನು ಸೇರುತ್ತಿದ್ದ ರವೀಂದ್ರನಿಗೆ ಹೆಣ್ಣಿನ ಜೊತೆ ಮದುವೆಯಾದ ನಂತರವೂ ಸುಕೇಶನ ಮೇಲಿನ ದೈಹಿಕ ಸೆಳೆತ ಇದ್ದೇ ಇರುತ್ತದೆ.

ಹಾಗೇ, ತನ್ನ ಮಗನ ವಯಸ್ಸಿನ ಸ್ತ್ರೀವೇಷಧಾರಿ ಹುಡುಗನ ಮೇಲೆ ಆಸೆಪಡುವ ಸುದರ್ಶನ, ಆಟ ನೋಡಲು ಕುಳಿತಿರುವ (ಪುರುಷರ ಉಡುಪಿನಲ್ಲೇ) ಸಂಜೀವನನ್ನು ‘ಕರೆದೊಯ್ಯುವ’ ಪುರುಷರ ಪಾತ್ರಗಳು, ಮತ್ತು ಬಹು ಮುಖ್ಯವಾಗಿ ಸುಕೇಶನನ್ನು ದೈಹಿಕವಾಗಿ ಮಾತ್ರವಲ್ಲದೇ, ಭಾವನಾತ್ಮಕವಾಗಿಯೂ ಪ್ರೇಮಿಸುವ, ಅವನ ಇರವಿನಲ್ಲಿ ನೆಮ್ಮದಿ ಕಾಣುವ ಒಂದು ಮಗುವಿನ ತಂದೆ ಆಕಾಶನ ಪಾತ್ರಗಳ ಮೂಲಕ, ಹಲಬಗೆಯ ಲೈಂಗಿಕ ಪ್ರವೃತ್ತಿಗಳು ಸ್ವಾಭಾವಿಕವಾಗಿಯೇ ಚಾಲ್ತಿಯಲ್ಲಿರುವುದನ್ನು ಎತ್ತಿ ತೋರಿಸಲಾಗಿದೆ.

ಇನ್ನು, ತಮ್ಮ ಲೈಂಗಿಕ ಪ್ರವೃತ್ತಿಗೆ ವ್ಯತ್ತಿರಿಕ್ತವಾಗಿ, ಮನೆಯವರ ಬಲವಂತಕ್ಕೆಂದು ಹೆಣ್ಣನ್ನು ಮದುವೆಯಾದಾಗ ನಡೆಯುವ ದುರಂತಗಳು, ಮದುವೆಗಾಗಿ ಕುಟುಂಬ, ಸಮಾಜ ಉಂಟುಮಾಡುವ ಒತ್ತಡ, ಭಿನ್ನ ಲೈಂಗಿಕ ಪ್ರವೃತ್ತಿಯ ವ್ಯಕ್ತಿಗಳ ಕುಟುಂಬಗಳಲ್ಲಿ ಅವರಿಗೆ ಸಿಗದೇ ಹೋಗುವ ಮಾನಸಿಕ ಒತ್ತಾಸೆ, ಜೀವಕ್ಕೆ ಹಾನಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದರೂ ಅದನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ, ಮೊದಲಾದ ಸಂಗತಿಗಳೆಲ್ಲ ಬಹಳವೇ ಸ್ಪಷ್ಟವಾಗಿ ಮೂಡಿಬಂದಿವೆ.

ಮೇಲ್ನೋಟಕ್ಕೆ ತೀರಾ ಸಾದಾ ಸರಳ ಶೈಲಿಯ ಕಾದಂಬರಿ ಎನಿಸಿದರೂ, ಅತ್ಯಂತ ಸಂಕೀರ್ಣ ಸಂಗತಿಯೊಂದರ ವೈಯಕ್ತಿಕ ಮತ್ತು ಸಾಮಾಜಿಕ ಆಯಾಮಗಳನ್ನು ಚೆನ್ನಾಗಿಯೇ ಕಟ್ಟಿಕೊಟ್ಟಿದ್ದಾರೆ ಸುಶಾಂತ್ ಕೋಟ್ಯಾನ್. ಹಾಗೆಂದು ಕಾದಂಬರಿಯಲ್ಲಿ ತೊಡಕುಗಳು ಇಲ್ಲವೆಂದೇನಿಲ್ಲ, ಮೊದಲೇ ಹೇಳಿದಂತೆ ಕೆಲವು ಕಡೆ ಸಾಕಷ್ಟು ವಾಚ್ಯವೆನಿಸುವ ಸಂದರ್ಭಗಳಿವೆ, ಹಾಗೆ ಇಡೀ ಕಥೆ ಸುಖೇಶನ ಸುತ್ತವೇ ಸುತ್ತುವುದರಿಂದ, ಇತರ ಇಂಟರೆಸ್ಟಿಂಗ್ ಆಗಿರಬಹುದಾದ ಪಾತ್ರಗಳ ಪರಿಚಯ ಸರಿಯಾಗಿ ಆಗುವುದಿಲ್ಲ, ಉದಾಹರಣೆಗೆ ಸಂಜೀವನ ಪಾತ್ರ, ಎಲ್ಲರ ಕಷ್ಟ ಸುಖಗಳಿಗೆ ಆಗಿಬರುವ, ಕಾಲಕಾಲಕ್ಕೆ ಸುಕೇಶ, ರಘುಪತಿ, ರವೀಂದ್ರ, ಸುಕೇಶನ ಮನೆಯವರಿಗೆಲ್ಲ ಸಾಂತ್ವನ, ಬೆಂಬಲ ಒದಗಿಸುವ, ಅಷ್ಟೇ ಏಕೆ, ಸುಕೇಶನ ಬದುಕು ಮಗ್ಗುಲು ಬದಲಾಯಿಸುವ ಘಟನೆಗೆ ನಿಮಿತ್ತನೂ ಆಗುವ ಈ ವ್ಯಕ್ತಿಯ ಬಗ್ಗೆ ಮೆಚ್ಚುಗೆ ಮೂಡುತ್ತದೆಯಾದರೂ, ಕೊನೆಗೂ ಅವನ ಪರಿಚಯ ಅಷ್ಟಾಗುವುದಿಲ್ಲ.

ಇದೇ ನೆಲೆಯಲ್ಲಿ ರಘುಪತಿಯ ಕಥನವೂ ಕುತೂಹಲಕರವೇ, ಮದುವೆಯ ಬಂಧನಕ್ಕೆ ಸಿಲುಕುವ, ದುರಂತವೊಂದಕ್ಕೆ ಮೈಯೊಡ್ಡುವ, ಕೊನೆಗೆ ಬದುಕೇ ಬದಲಾಗಿ ಹೋಗುವ ಈ ವ್ಯಕ್ತಿಯೂ ಕೇವಲ ಸುಕೇಶನ ಸ್ನೇಹಿತನಾಗಿಯಷ್ಟೇ ಪರಿಚಿತನಾಗುತ್ತಾನೆ. ಹಾಗೇ, ಸುಕೇಶ ಬೆಂಗಳೂರಿಗೆ ಹೊರಡುವಾಗಿನಿಂದ, ಕಥೆ ಕೊನೆಗೊಳ್ಳುವವರೆಗಿನ ಭಾಗ ಏಕೋ ಸ್ವಲ್ಪ ಅವಸರವಸರವಾಗಿ ಸಾಗಿ ಲಯ ಒಂಚೂರು ಹೆಚ್ಚು ಕಡಿಮೆಯಾಗುತ್ತದೆ, ಈ ಭಾಗ, ಎಂದರೆ ಸುಕೇಶನ ನಿರ್ವಾಣ, ನಂತರದ ಜಲ್ಸಾ, ಬೆಂಗಳೂರಿನಲ್ಲಿ ಅವನಿಗೆ ಒದಗಿಬಂದಿರಬಹುದಾದ ಅನುಭವಗಳು ಇವೆಲ್ಲ ಸ್ಪಷ್ಟವಾಗಿ ತಿಳಿಯುವುದಿಲ್ಲ. ಹೀಗೆಲ್ಲ ಇದ್ದಿದ್ದರೆ ಕಥೆ ಇನ್ನಷ್ಟು ಕಳೆಗಟ್ಟುತ್ತಿತ್ತು ಎಂಬುದು ನಿಜ, ಆದರೆ ಹೀಗೆ ಇಲ್ಲದಿರುವುದರಿಂದ ಕಥೆಗೆ ಹೆಚ್ಚಿನ ಹಾನಿಯೇನೂ ಆಗಿಲ್ಲ ಎಂಬುದೂ ಅಷ್ಟೇ ನಿಜ.

‘ದೀಪವಿರದ ದಾರಿಯಲ್ಲಿ’ ಕಾದಂಬರಿಯುದ್ದಕ್ಕೂ ಗಾಢ ವಿಷಾದದ ಭಾವವೊಂದು ನಿಮ್ಮನ್ನು ಕಾಡದೇ ಇರಲಾರದು. ಎಷ್ಟೋ ಕಡೆಗಳಲ್ಲಿ, ಮುಖ್ಯವಾಗಿ ರವೀಂದ್ರ ಮತ್ತು ಆಕಾಶನ ಜೊತೆಗಿನ ಸನ್ನಿವೇಶದಲ್ಲಿ, ಒಂದು ವೇಳೆ ಸುಕೇಶ ದೈಹಿವಾಗಿಯೂ ಹೆಣ್ಣಾಗಿದ್ದರೆ ಬಹುಶಃ ಅವನ ಬದುಕಿನಲ್ಲಿ ಇಷ್ಟೆಲ್ಲ ದುರಂತಗಳು ಘಟಿಸುತ್ತಿರಲಿಲ್ಲವೇನೋ ಎಂಬ ಹಳಹಳಿಕೆಯಾಗುತ್ತದೆ.

ಪ್ರೇಮವೆಂಬ ಭಾವ ಅದೆಷ್ಟೇ ಸಹಜ ಸುಂದರ ಎಂದುಕೊಂಡರೂ, ಅದೇ ಸಹಜ ಸಂಗತಿಯನ್ನು ದಕ್ಕಿಸಿಕೊಳ್ಳಲು ಹೊರಡುವ ಸುಕೇಶ ಮತ್ತು ಅವನಂತಹ ಅದೆಷ್ಟೋ ಜನರು ಅನುಭವಿಸುವ ಯಾತನೆ, ಭರಿಸುವ ಅವಮಾನಗಳು ಅದೆಷ್ಟು ‘ಅನ್‌ಫೇರ್’ ಎನಿಸದೇ ಇರಲಾರದು. ನಾವು ನಾವೇ ಕಟ್ಟಿಕೊಂಡ, ಸಹಜ-ಅಸಹಜ, ಸ್ವಾಭಾವಿಕ-ಅಸ್ವಾಭಾವಿಕ ಎಂಬ ಕಟ್ಟಳೆಗಳನ್ನೂ, ಅದರಿಂದಾಗಿ ಕೆಲವರಿಗೆ ಸರಾಗವಾಗಿ ದೊರೆಯುವ ಪ್ರೀತಿಸುವ-ಪ್ರೀತಿಸಿಕೊಳ್ಳುವ ಸ್ವಾತಂತ್ರ್ಯ ಕೆಲವರ ಬದುಕೇ ನಾಶವಾದರೂ ಸಿಗದೇ ಹೋಗುವ ಅಸಮಂಜಸ ಪರಿಸ್ಥಿತಿಯನ್ನು ಸುಶಾಂತ್ ಸಮರ್ಥವಾಗಿ ಧ್ವನಿಸಿದ್ದಾರೆ.

ಕಾದಂಬರಿಯ ಕೊನೆಯ ಭಾಗದಲ್ಲಿ ಸುಕೇಶನಿಗೆ ಬಂದೊದಗಿದ ಅವಸ್ಥೆಯ ಕುರಿತು ಅವನ ತಂದೆ ತಾಯಿಗೆ ತಿಳಿಸುವ ಬಗ್ಗೆ ಸಂಜೀವ ಮತ್ತು ಮಂದಾಕಿನಿಯ ನಡುವಿನ ಸನ್ನಿವೇಶ ನನಗೆ ಬಹಳ ಹಿಡಿಸಿತು. ಮಗನ ವಿಚಾರವನ್ನು ಅವನ ಪೋಷಕರು ಹೇಗೆ ಸಹಿಸಿಕೊಂಡಾರು ಎಂದು ಸಂಜೀವ ಚಿಂತಿಸಿದಾಗ, ಮಂದಾಕಿನಿ, ಚುಕ್ಕಿಯ ಈಗಿನ ಪರಿಸ್ಥಿತಿಗೆ ಅವನ ತಂದೆ ತಾಯಿಯನ್ನೇ ನೇರವಾಗಿ ಹೊಣೆಯಾಗಿಸುತ್ತಾಳೆ, ‘ಮದುವೆಗೆ ಒತ್ತಾಯ ಹೇರುವುದಿಲ್ಲವಾಗಿದ್ದರೆ… ಅವನಿಂಥ ನಿರ್ಧಾರಕ್ಕೆ ಬರುತ್ತಲೇ ಇರಲಿಲ್ಲ’, ‘ಅವನ ಮನಸ್ಥಿತಿಯನ್ನು ಅರಿತು ಅವನನ್ನು ಒಪ್ಪಿಕೊಂಡಿದ್ದರೆ ಏನಾಗಿ ಹೋಗ್ತಾಯಿತ್ತು’ ಎಂಬ ಮಾತುಗಳು ಈ ಸಮಸ್ಯೆಗೆ ನಮ್ಮ ನಮ್ಮ ಮನೆ-ಮನಗಳನ್ನು ಇನ್ನೊಂದಷ್ಟು ಹಿಗ್ಗಿಸಿಕೊಳ್ಳುವುದರಲ್ಲಿಯೇ ಪರಿಹಾರವಿದೆ ಎಂಬ ಮಾತನ್ನು ಸೂಕ್ಷ್ಮವಾಗಿ ದಾಟಿಸಲಾಗಿದೆ.

ಕಾದಂಬರಿಯ ಕೊನೆಗೆ ‘ದೀಪವಿರದ ಕತ್ತಲ ದಾರಿಯಲ್ಲಿ ನಿಂತ’ ಸುಕೇಶನ ಚಿತ್ರವೊಂದು ಮನಸ್ಸಿನಲ್ಲಿ ಮೂಡುತ್ತದೆ. ಕೊಟ್ಟ ಕೊನೆಯಲ್ಲಿ ಬರುವ ‘ಅಂತ್ಯವಿರದ ಕಥೆಯ ಆರಂಭ’ ಎಂಬ ಮಾತನ್ನು ನಾನಂತೂ, ‘ಇದು ಖಂಡಿತಾ ಅಂತ್ಯವಲ್ಲ, ಇದೊಂದು ಆರಂಭ’ ಎಂದೇ ಓದಿಕೊಳ್ಳಲು ಬಯಸುತ್ತೇನೆ. ಕಥೆ ಮುಗಿದಾಗ ಮೂಡುವ ಗಾಢ ವಿಷಾದದ ನಡುವಿನಲ್ಲೂ, ಇಂಥಹದ್ದೊಂದು ವಿಷಯದ ಮೇಲೆ ಬಹಳವೇ ವಸ್ತುನಿಷ್ಠವಾಗಿ, ಮತ್ತು ಅಷ್ಟೇ ಜವಾಬ್ದಾರಿಯಿಂದ ಕಥೆ ಕಟ್ಟಿದ ಕಾದಂಬರಿಕಾರು, ಮತ್ತು ಅವರಿಗೆ ವೇದಿಕೆ ಒದಗಿಸಿದ ಪ್ರಕಾಶಕರು, ಆಶಾಭಾವದ ಒಂದು ಪುಟ್ಟ ಹಣತೆಯನ್ನಂತೂ ಹಚ್ಚಿದ್ದಾರೆ ಎನಿಸುತ್ತದೆ.

‍ಲೇಖಕರು Admin

July 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: