ಎನ್.ಎಸ್. ಶ್ರೀಧರಮೂರ್ತಿಯವರ ಕೃತಿ ‘ಗಾನಕೋಗಿಲೆ ಎಸ್. ಜಾನಕಿ’
ಈ ಕೃತಿಯ ಕುರಿತ
ಮಲ್ಲಿಕಾರ್ಜುನ ಶೆಲ್ಲಿಕೇರಿಅವರ ಬರಹ ಇಲ್ಲಿದೆ.
-ಮಲ್ಲಿಕಾರ್ಜುನ ಶೆಲ್ಲಿಕೇರಿ
ವರ್ತಮಾನದಲ್ಲಿ ಭೌತಿಕವಾಗಿ ನಮ್ಮೊಡನೆ ಇರದ ಆದರೆ, ಮಾನಸಿಕವಾಗಿ ಯಾವತ್ತೂ ಕನ್ನಡ ಚಿತ್ರ ರಸಿಕರ ಮನದಾಳದಲ್ಲಿ ಸದಾ ನೆಲೆಯೂರಿರುವ ಎಸ್. ಜಾನಕಿಯವರ ಗಾನ ಬದುಕಿನ ವಿವಿಧ ಮಜಲುಗಳನ್ನು ಪರಿ ಪರಿಯಾಗಿ ಬಿಡಿಸಿಟ್ಟ ಎನ್.ಎಸ್. ಶ್ರೀಧರಮೂರ್ತಿಯವರ ‘ಗಾನಕೋಗಿಲೆ ಎಸ್. ಜಾನಕಿ’ ಕೃತಿಯನ್ನು ಓದುತ್ತಾ ನಮಗರಿಯದೆ ಆ ಗಾನಸರಸ್ವತಿಗೆ ಕೈ ಮುಗಿಯುತ್ತೇವೆ. ಸಪ್ತಸ್ವರದೊಂದಿಗೆ ಇನ್ನು ಮೂರು ಸೇರಿ ಒಟ್ಟು ಹತ್ತು ಅಧ್ಯಾಯಗಳ ಈ ಕೃತಿಯ ಓದು ಎಲ್ಲಿಯೂ ನಿಲ್ಲದೆ ಹರಿಯುವ ನದಿಯೊಂದು ಕಡಲ ಬಾಹುಗಳಲ್ಲಿ ಹೇಗೆ ಲೀನವಾಗುತ್ತದೆಯೋ ಹಾಗೆಯೆ ಓದುಗ ಓದುತ್ತಾ ಓದುತ್ತಾ ಕೊನೆಯ ಪುಟಕ್ಕೆ ಬಂದು ನಿಂತು ಬಿಡುತ್ತಾನೆ.
ಹರಿಯುವ ಹೊನಲು ಇಷ್ಟು ಬೇಗ ಕಡಲು ಬಂದಿತೆ ಎಂದು ಆಶ್ಚರ್ಯ ಪಡುವಂತೆ ಕೃತಿ ಓದುತ್ತಾ ಎಲ್ಲ ಅಧ್ಯಾಯಗಳು ಮುಗಿದೆ ಹೋದವೆ..? ಎಂದು ಓದುಗ ಪ್ರಶ್ನಿಸುವಂತೆ ಮಾಡುತ್ತದೆ. ಅಷ್ಟರಮಟ್ಟಿಗೆ ಕೃತಿ ಓದಿಸಿಕೊಂಡು ಹೋಗುತ್ತದೆ. ಶ್ರೀಧರಮೂರ್ತಿಯವರು ಜಾನಕಿಯವರ ಜೀವನ ಚರಿತ್ರೆಯನ್ನು ನಿರೂಪಿಸಿದ ರೀತಿ, ಸಾಂದರ್ಭಿಕವಾಗಿ ಹೇಳುವ ಕೆಲವು ಸ್ವಾರಸ್ಯಕರ ಘಟನೆಗಳು, ಕೆಲವು ಗೀತೆಗಳ ಹುಟ್ಟು, ದಕ್ಷಿಣ ಭಾರತದ ವಿವಿಧ ಭಾಷೆಯ ಚಿತ್ರರಂಗದ ಇತಿಹಾಸವನ್ನು ತೆರೆದಿಡುವ ಚೇತೋಹಾರಿ ಬರಹದ ಶೈಲಿ ಓದುಗನಿಗೆ ಪ್ರಿಯವಾಗುತ್ತದೆ. ಆರಂಭದ ಮೊದಲ ಅಧ್ಯಾಯ ಮಲ್ಲಿಗೆ ಸಂಚಿಕೆಯನ್ನು ಜಾನಕಿಯವರ ವಿಶೇಷಾಂಕವನ್ನಾಗಿ ರೂಪಿಸುವ ತಮ್ಮ ಪ್ರಯತ್ನದೊಂದಿಗೆ ಅದು ಇತರರ ಬೆಂಬಲದೊ೦ದಿಗೆ ಈಡೇರಿದ ಬಗ್ಗೆ ಅನಾವರಣಗೊಳಿಸಿದರೆ, ಮುಂದಿನ ಅಧ್ಯಾಯದಲ್ಲಿ ವಿವರಿಸಿರುವ ಅದರಲ್ಲೂ ವಿಶೇಷವಾಗಿ ಜಾನಕಿಯವರ ಗಾಯನದ ಉತ್ಕೃಷ್ಟ ಎನ್ನಬಹುದಾದ ಹಲವು ಗೀತೆಗಳಲ್ಲಿನ ರಾಗ, ಸ್ವರ, ತಾನ, ಶೃತಿಯ ಬಗೆಗಿನ ಲೇಖಕರ ವಿಶ್ಲೇಷಣೆಗಳು ಅವರ ಸ್ವರ ಜ್ಞಾನವನ್ನು ಪರಿಚಯಿಸುತ್ತದೆ. ಅದು ‘ಗಗನವು ಎಲ್ಲೋ’, ‘ಕರೆದರೂ ಕೇಳದೆ’, ‘ಪೂಜಿಸಲೆಂದೆ ಹೂಗಳ ತಂದೆ’, ‘ಸುಖದ ಸ್ವಪ್ನಗಾನ’ ದಂಥ ಮಧುರಾತಿ ಮಧುರ ಕನ್ನಡ ಗೀತೆಗಳೊಂದಿಗೆ ‘ಸಿಂಗಾರವೇಲನೆದೇವ.. ‘ ‘ನೀ ಲೀಲ ಪಾಡೆದ ದೇವ’ ದಂತಹ ತಮಿಳು, ತೆಲುಗು ಗೀತೆಗಳ ಬಗೆಗಿನ ವಿಸ್ತೃತ ಬರಹವು ಸಂಗೀತದ ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯವೆನಿಸುತ್ತದೆ.
ಮಂಗಳದ ಈ ಸುದಿನ ಮಧುರವಾಗಲಿ ಅಧ್ಯಾಯದಲ್ಲಿನ ಜಾನಕಿಯವರ ಹುಟ್ಟು, ಸೋದರಮಾವನ ಮಗನಿಗೆ ಕನ್ಯೆ ನೋಡಲು ತಾವೇ ಎರಡ್ಮೂರು ಬಾರಿ ಹೋಗಿ ಬಂದರೂ ಕೊನೆಗೆ ಅವರನ್ನೆ ಕೈ ಹಿಡಿದಿದ್ದು ಅದೆಂಥ ಯೋಗಾಯೋಗ. ಜೊತೆಗೆ ಜಾನಕಿಯವರು ತಮ್ಮ ಪತಿ ರಾಮಪ್ರಸಾದರ ಬಗ್ಗೆ ಅದೆಂಥ ಗೌರವ ಇಟ್ಟುಕೊಂಡಿದ್ದರೆ೦ದು ಅವರ ಮಾತುಗಳೆ ಜೀವಂತ ಉದಾಹರಣೆಗಳಾಗಿ ಬಿಡುತ್ತವೆ. ಪತ್ನಿಯ ಆರೋಗ್ಯದ ಬಗ್ಗೆ ರಾಮಪ್ರಸಾದರ ಕಾಳಜಿ ಎಂತಹದೆ೦ದು ಹಲವು ಗೀತೆಗಳ ಹಾಡುವ ಸಂದರ್ಭಗಳೊAದಿಗೆ ವಿವರಿಸಿರುವುದು ಆ ದಂಪತಿಗಳ ಅನ್ಯೋನ್ಯತೆಯನ್ನು ತೋರಿಸುವ ಪರಿ ಬರಹದ ಕೌಶಲವನ್ನು ತೋರಿಸುತ್ತದೆ. ಆ ದಂಪತಿಗಳು ಶಿವ-ಪಾರ್ವತಿಯರಂತೆ ಕಾಣುವುದು ಈ ಕಾರಣದಿಂದಲೋ ಏನೋ.
ಮೈಸೂರು ಮಲ್ಲಿಗೆಯ ‘ದೀಪವು ನಿನ್ನದೆ ಗಾಳಿಯೂ ನಿನ್ನದೆ’ ಎಂಬ ಅದ್ಭುತ ಗೀತೆ ಚಲನಚಿತ್ರದಲ್ಲಿ ಹೇಗೆ ಸೃಷ್ಟಿಯಾಯಿತೆಂಬುವುದನ್ನು ಕೃತಿ ಓದಿಯೆ ಅನುಭೂತಿ ಹೊಂದಬೇಕು. ತಾವು ಹಾಡಿದ ಎಲ್ಲಾ ಮೊದಲ ಗೀತೆಗಳು ಶೋಕ ಗೀತೆಗಳೆ ಎನ್ನುವ ಜಾನಕಿಯವರು ಮುಂದೆ ತಮ್ಮ ವೈವಿಧ್ಯಮಯ ಗೀತೆಗಳಿಂದ ಇಡಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲೂ ಹಾಡಿ ರಸಿಕರನ್ನು ರಂಜಿಸಿದರೆ೦ಬುವುದು ಬಹುಶ ಐದಾರು ದಶಕಗಳ ಕೇಳುಗರೆ ಸಾಕ್ಷಿ.
ಭೂಪ್, ಮೋಹನ ರಾಗದ ಹಿನ್ನೆಲೆಯಲ್ಲಿ ಕನ್ನಡದ ಅಸ್ಮಿತೆ ಡಾ. ರಾಜಕುಮಾರ್ ಸಂಗೀತ ಜ್ಞಾನವನ್ನು ಅದೆಷ್ಟು ರಸವತ್ತಾಗಿ ವಿವರಿಸಿದ್ದಾರೆಂದರೆ ಆ ಅಧ್ಯಾಯ ಓದುವುದೆ ಒಂದು ಖುಷಿ. ಜೊತೆಗೆ ಜಾನಕಿಯವರ ಗಾಯನದ ಕುರಿತಾದ ನಟಸಾರ್ವಭೌಮರ ಮಾತುಗಳು ಅವರನ್ನು ಅದೆಷ್ಟು ಎತ್ತರದ ವ್ಯಕ್ತಿ ಎಂಬುವುದನ್ನು ತೋರಿಸುತ್ತದೆ. ಮಯೂರ ಚಿತ್ರದ ‘ಈ ಮೌನವ ತಾಳೇನು’ ಗೀತೆಯ ಸ್ವಾರಸ್ಯಕರ ಪ್ರಸಂಗ, ರಾಜ ನನ್ನ ರಾಜ ಚಿತ್ರದ ‘ತನುವು ಮನವು ಇಂದು ನಿಂದಾಗಿದೆ’ ಗೀತೆಯ ಪ್ರಸಂಗಗಳೊ೦ದಿಗೆ ಇತರ ಗೀತೆಗಳ ಸೃಷ್ಟಿಯ ಹಿನ್ನೆಲೆಯನ್ನು ಅದೆಷ್ಟು ಚೇತೋಹಾರವಾಗಿ ವಿವರಿಸಲ್ಪಟ್ಟಿದೆ. ಕಾದಂಬರಿ ಆಧಾರಿತ ಸನಾದಿ ಅಪ್ಪಣ್ಣ ಚಿತ್ರದ ‘ಕರೆದರೂ ಕೇಳದೆ..’ ಗೀತೆಯ ವೇಳೆಯ ಬಿಸ್ಮಿಲ್ಲಾಖಾನ್, ಜಿ.ಕೆ.ವೆಂಕಟೇಶರ ಆ ಸಂಭಾಷಣೆಗಳು, ಜಾನಕಿಯವರ ಗಾಯನ ಕೇಳುತ್ತಾ ಶಹನಾಯಿಯನ್ನು ನುಡಿಸುವುದನ್ನೆ ಮರೆತಂತೆ ಆ ಗಾಯನವನ್ನು ಆಸ್ವಾದಿಸುವ ಆ ಶಹನಾಯಿ ಸಾಮ್ರಾಟನ ಮಾತುಗಳು ಅಂದಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಸಾಧಕನು ಇತರರ ಸಾಧನೆಯನ್ನು ಹೇಗೆ ಮುಕ್ತಕಂಠದಿ೦ದ ಹೊಗಳುತ್ತಿದ್ದರೆಂಬ ಅವರ ಘನ ವ್ಯಕ್ತಿತ್ವವನ್ನು ಮನದಾಳಕ್ಕೆ ಇಳಿಯುವಂತೆ ಚಿತ್ರಿಸಿದ್ದಾರೆ. ಆ ಕಾಲಘಟ್ಟದಲ್ಲಿ ಒಬ್ಬರ ಮೇಲೊಬ್ಬರು ತೋರಿಸುವ ಆ ಗೌರವ ನಿಜಕ್ಕೂ ಇಂದಿನ ಪೀಳಿಗೆಗೆ ಮಾದರಿ.
‘ಭುವನೇಶ್ವರಿಯ ನೆನೆ ಮಾನಸವೇ’ ಗೀತೆಯ ಹಿನ್ನೆಲೆಯಲ್ಲಿಯೆ ಆಸ್ಥಾನ ವಿದ್ವಾಂಸ ಮುತ್ತಯ್ಯ ಭಾಗವತರ ಕುರಿತಾದ ಮಾಹಿತಿಪೂರ್ಣ ಬರಹ ಸಂಗ್ರಹಯೋಗ್ಯ. ಅಮೇರಿಕೆಯಲ್ಲಿನ ಐ.ಸಿ.ಯುದಲ್ಲಿ ಇದ್ದಾಗಲೂ ಅಲ್ಲಿಯ ಸಿಬ್ಬಂದಿಗಳ ಪ್ರೀತಿಯ ಕೋರಿಕೆಯನ್ನು ಈಡೇರಿಸುವ ಘಟನೆ ಗಾನದೇವತೆಯ ಸ್ವಭಾವದ ಭಿನ್ನ ಆಯಾಮವನ್ನು ಅನಾವರಣಗೊಳಿಸುತ್ತದೆ. ಅಂತಹ ಸಂದರ್ಭದಲ್ಲೂ ಆ ಗಾನ ಸರಸ್ವತಿ ಹಾಡುವುದು, ಆ ಜಾಗವೇ ಸಂಗೀತ ಕಚೇರಿಯಂತಾಗುವುದು ಕೇವಲ ಹೃದಯವಂತೆ ಗಂಧರ್ವ ಗಾಯಕಿಗೆ ಮಾತ್ರ ಸಾಧ್ಯವಾಗಬಹುದಾದ ಕಾರ್ಯ.
ಜಾನಕಿಯವರು ಒಂದೇ ಒಂದು ಚಿತ್ರಕ್ಕೆ ಸಂಗೀತ ನಿರ್ದೇಶಕಿಯಾಗಿ ಕೆಲಸ ಮಾಡಿ ನಂತರ ಆ ಕ್ಷೇತ್ರದ ಬಗ್ಗೆ ಅವರು ಹೇಳುವ ಮಾತುಗಳು ಎಲ್ಲರಿಗೂ ಪಾಠವೇ. ಜೊತೆಗೆ ಅದರೊಂದಿಗೆ ಬೇರೆ ಬೇರೆ ಭಾಷೆಯ ಚಿತ್ರರಂಗದ ಸಂಗೀತ ನಿರ್ದೇಶಕಿಯರ ಸಾಧನೆ, ಹೋರಾಟದ ಇತಿಹಾಸವನ್ನು ತುಂಬಾ ಚೆನ್ನಾಗಿ ಕಂಡರಿಸುವುದು ಮಹಿಳಾ ಸಂಗೀತ ನಿರ್ದೇಶಕಿಯರ ಚರಿತ್ರೆ ಅರಿಯಲು ಪಠ್ಯದಂತಿದೆ ಅಲ್ಲಿ ನಿರೂಪಿಸಿದ ಬಗೆ.
ಆಕಾಶದೀಪವು ನೀವು ನಿಮ್ಮ ಕಂಡಾಗ ಸಂತೋಷವೇನು ಅಧ್ಯಾಯವಂತೂ ಜಾನಕಿಯವರ ಹಾಗೂ ಅಂದಿನ ಸಂಗೀತ ನಿರ್ದೇಶಕರ ಸಂಗೀತದ ಅಭಿರುಚಿ, ಗೀತೆ ಹೇಗಿದ್ದರೆ ಚೆನ್ನ, ಅದನ್ನು ಯಾವ ರೀತಿ ಹಾಡಿದರೆ ಚೆನ್ನ ಎಂಬುವುದು ತುಂಬಾ ಸ್ವಾರಸ್ಯಕರವಾಗಿ ಮೂಡಿ ಬಂದಿದೆ. ಇಂದಿನ ಯುವ ತಲೆಮಾರಿಗೆ ರಾಜನ್ ನಾಗೆಂದ್ರ, ಜಿ.ಕೆ.ವೆಂಕಟೇಶ, ಎಂ.ವೆ೦ಕಟೇಶರಾಜು, ಎಂ.ರAಗರಾವ್, ಉಪೇಂದ್ರಕುಮಾರ, ಟಿ.ಜಿ.ಲಿಂಗಪ್ಪ, ವಿಜಯಭಾಸ್ಕರ್, ಸಿ.ಅಶ್ವಥ್ ಹಾಗೂ ಇತ್ತೀಚಿನ ಹಂಸಲೇಖರ ಕುರಿತಾದ ಮಾಹಿತಿಪೂರ್ಣ ಬರಹವಾಗಿ ಹೊರಹೊಮ್ಮಿದೆ.
ಚಿಕ್ಕ ಮಗುವಿನ ಧ್ವನಿಯಲ್ಲಿನ ‘ಎಲ್ಲೂ ಹೋಗಲ್ಲ ಮಾಮಾ’ ‘ಸಿಹಿ ಮುತ್ತು ಸಿಹಿ ಮುತ್ತು’ ‘ಹೇಳಿದ್ದು ಸುಳ್ಳಾಗಬಹುದು’ ‘ತಾಯಿಯಾ ತಂದೆಯಾ’ ಗೀತೆಗಳು, ಸಿಂಗಾಪೂರನಲ್ಲಿ ರಾಜಾಕುಳ್ಳ ಚಿತ್ರದ ಚೋ ಚೈ ಕ್ವಾಂಚಿನಿ ಲೈ ಲೈ ಗೀತೆ, ವಿಜಯಭಾಸ್ಕರ್ ಸಂಗೀತದ ದ.ರಾ.ಬೇಂದ್ರೆಯವರ ‘ಮೂಡಣ ಮನೆಯ ಮುತ್ತಿನ ನೀರಿನ’ ಗೀತೆಯ ಆಧ್ಯಾತ್ಮ ಗುಣವನ್ನು ಆವಾಹಿಸಿಕೊಂಡು ಹಾಡಿರುವುದು. ರಂಗರಾವ್ರವರ ಎಡಕಲ್ಲು ಗುಡ್ಡದ ಮೇಲೆ ಚಿತ್ರದ ‘ನಿಲ್ಲು ನಿಲ್ಲೆ ಪತಂಗ’ ಗೀತೆಯನ್ನು “ಅದು ಜಾನಕಿಯೊಬ್ಬರು ಮಾತ್ರ ಹಾಡುವಂತಹ ಹಾಡು, ಬೇರೆ ಯಾರೂ ಅನುಕರಿಸಲು ಸಾಧ್ಯವಿಲ್ಲ” ಎಂದು ಸ್ವತಃ ಸಂಗೀತ ನಿರ್ದೇಶಕರೆ ವರ್ಣಿಸಿರುವುದು ಅವರ ಸಂಗೀತ ಪ್ರತಿಭೆಯನ್ನು ತೋರಿಸುವಂತಹದ್ದು.
ಹೀಗೆ ಗೀತೆ ಇರಬೇಕು ಎಂದು ಪಟ್ಟು ಹಿಡಿದು ಹಾಡಿಸುತ್ತಿದ್ದ ಉಪೇಂದ್ರಕುಮಾರ ಸಂಯೋಜನೆಯ ‘ನೀನ್ಯಾರೋ ಏನೋ ಸಖ’ ಗೀತೆ ಜಾನಕಿಯವರಿಗೆ ಚಾಲೆಂಜಿ೦ಗ್ ಎನ್ನಿಸಿಕೊಂಡAತಹ ಗೀತೆಯ ಹಾಡಿನ ಹಿನ್ನೆಲೆ ಮನಸಾರೆ ಕುಳಿತು ಓದುವಂತಹದ್ದು. ಸಿ ಅಶ್ವತ್ ಅವರ ಬಾಡದ ಹೂ ಚಿತ್ರದ ‘ಹೂವು ನೋಡು ಆಹಾ ಎಂಥಾ ಅಂದವಾಗಿದೆ’ ಗೀತೆಯ ರಿಕಾರ್ಡಿಂಗ್ ವೇಳೆಯ ಎಸ್ಪಿಬಿ ಅವರೊಂದಗಿನ ಸ್ವಾರಸ್ಯಕರ ಪ್ರಸಂಗ ಮರೆಯುವಂತಿಲ್ಲ.
ಹ೦ಸಲೇಖ ಅವರು ಪ್ರೇಮಲೋಕ ಚಿತ್ರದ ‘ಯಾರಿವನು ಈ ಮನ್ಮಥನು’ ಗೀತೆಯನ್ನು ಜಾನಕಿ ಅವರಿಂದ ಹಾಡಿಸಲು ಅವರ ಬಳಿ ಹೋದಾಗ ಗೀತೆಯ ಟ್ರ್ಯಾಕ್ ಕೇಳಿ ಜಾನಕಿಯವರು ‘ನೀನು ಟಾಪ್ ಮ್ಯೂಸಿಕ್ ಡೈರೆಕ್ಟರ್ ಅಪ್ಪ’ ಎಂಬ ಹಂಸಲೇಖ ಕುರಿತಾದ ಮಾತುಗಳು ಆ ಕಲಾಸರಸ್ವತಿಯ ವ್ಯಕ್ತಿತ್ವವನ್ನು ತೋರಿಸುವಂತಹದ್ದು ಅಷ್ಟೆ. ಮುಂದೆ ಅವರಿಂದ ರಣಧೀರ, ಯುದ್ಧಕಾಂಡ, ಹಳ್ಳಿಮೇಷ್ಟುç, ಸಿಪಾಯಿಯಂತಹ ಚಿತ್ರಗಳಿಗೆ ಅವರಿಂದ ಹಾಡಿಸಲು ಸಾಧ್ಯವಾಯಿತು ಎನ್ನುವ ಹಂಸಲೇಖರ ಅನುಭವಜನ್ಯ ಮಾತುಗಳು. ಆ ಕಾರಣದಿಂದಲೇ ಹಂಸಲೇಖ ಅವರಿಗೆ ಲೇಖಕರು ಜಾನಕಿಯವರ ಬಗ್ಗೆ ಒಂದೇ ವಾಕ್ಯದಲ್ಲಿ ವಿವರಿಸಿ ಎಂದಾಗ ಅವರ ಮಾತು ‘ಪರಿಪೂರ್ಣ ಜೀವನ ನಡೆಸಿದ ಪರಿಪೂರ್ಣ ಗಾಯಕಿ’ ಎಂಬ ಮಾತು ಅದೆಷ್ಟು ಸತ್ಯ.
ಸುಖದ ಸ್ವಪ್ನಗಾನ ಎದೆಯ ಆಸೆ ತಾಣದ ಬರಹವು ಕನ್ನಡ ಚಿತ್ರರಂಗ ಕಂಡ೦ತಹ ಚಿತ್ರ ಸಾಹಿತಿಗಳು ಹಾಗೂ ಜಾನಕಿಯವರ ಬಗೆಗಿನ ವೃತ್ತಿ ಸಂಬAಧವನ್ನು ಮಾರ್ಮಿಕವಾಗಿ ಚಿತ್ರಿಸಿದೆ. ಆರ್. ಎನ್ ಜಯಗೋಪಾಲ್ ಅವರು ‘ಧೂಮಕೇತು’ ಚಿತ್ರದ ಚಿತ್ರೀಕರಣ ಸಮಯ. ಅದೇ ವೇಳೆಯಲ್ಲಿ ಅವರಿಗೆ ಹುಡುಗಿ ನೋಡುವ ಕಾರ್ಯ, ಅಂಥ ಸಮಯದಲ್ಲಿಯೆ ‘ನಮ್ಮಮಕ್ಕಳು’ ಚಿತ್ರದಲ್ಲಿನ ಗೀತೆಯನ್ನು ಅದರ ಹಿನ್ನೆಲೆಯಲ್ಲಿ ತಾನು ಇನ್ನಷ್ಟು ಖುಷಿಯಾಗಿ ಹಾಡುವೆಯೆಂದು ಜಾನಕಿಯವರು ‘ಮನಸೇ ನೀ ನಗಲೇಕೆ ಹರುಷದಿ ನೀನು ಈ ದಿನ’ ಗೀತೆಯನ್ನು ಇನ್ನೊಬ್ಬರ ಸಂತೋಷವನ್ನು ತಮ್ಮ ಹಾಡುಗಾರಿಕೆಯಲ್ಲಿ ಅಭಿವ್ಯಕ್ತಪಡಿಸಿ ಗೀತೆಯನ್ನು ಇನ್ನಷ್ಟು ಚೇತೋಹಾರಿಯಾಗಿ ಹಾಡುವಂಥ ಸಾಮರ್ಥ್ಯ ಕೇವಲ ಎಸ್.ಜಾನಕಿ ಅವರಿಗೆ ಮಾತ್ರ ಸಾಧ್ಯವೇನೋ..? ಅಲ್ಲದೆ ಅವರ ಇನ್ನೂ ಇತರ ಗೀತೆಗಳ ಹಿನ್ನೆಲೆ ಗಾಯನದ ಘಟನೆಗಳು ಓದುಗನ ಭಾವಕೋಶದಲ್ಲಿ ನೆಲೆಯೂರುತ್ತವೆ.
“ನನ್ನ ಹಾಡನ್ನು ಜಾನಕಿ ಹಾಡುತ್ತಾರೆ ಎನ್ನುವುದೆ ಆ ಕಾಲಕ್ಕೆ ಸಂಭ್ರಮ” ಎನ್ನುವ ಚಿ.ಉದಯಶಂಕರರ ಗೀತ ರಚನೆಯ ಕುರಿತಾದ ಜಾನಕಿಯವರ ಗ್ರಹಿಕೆ ಕೆಲವಷ್ಟು ಕಾಲ ಓದುಗನನ್ನು ಸೆರೆ ಹಿಡಿಯುತ್ತದೆ. ಗೀತೆ ಬೇಕೆಂದಾಗ ಕುಳಿತ ಜಾಗದಲ್ಲಿಯೆ ತಕ್ಷಣವೇ ಬರೆದು ಕೊಡುತ್ತಿದ್ದ ಉದಯಶಂಕರರ ಸೃಜನಶೀಲತೆಗೆ ಮೆಚ್ಚುಗೆ ಮಾತುಗಳು ಜಾನಕಿಯವರ ಮೇರು ವ್ಯಕ್ತಿತ್ವಕ್ಕೆ ನಿದರ್ಶನ. ಗೀತಪ್ರಿಯ, ವಿಜಯನಾರಸಿಂಹ ಕುರಿತಾದ ಅವರ ಮಾತುಗಳು ‘ಒಂದೆ ಬಳ್ಳಿಯ ಹೂಗಳು’ ಚಿತ್ರದ ಶೀರ್ಷಿಕೆ ಆಯ್ಕೆಗೊಂಡಿದ್ದು ಅಂದಿನ ಕಾಲಘಟ್ಟದ ವ್ಯಕ್ತಿಗಳ ಮನಸ್ಥಿತಿಯನ್ನು ಪ್ರತಿಬಿಂಬಿಸುವ೦ತಹದ್ದು. ಮಣಿರತ್ನಂ, ಪಲ್ಲವಿ ಅನುಪಲ್ಲವಿ ಚಿತ್ರದ ಹಿನ್ನೆಲೆ, ಹಾಡುಗಳು ಹೀಗೆ ಒಂದೊ೦ದು ವಿಷಯವು ಜಾನಕಿಯವರ ಜೀವನವನ್ನು ಕಟ್ಟಿಕೊಡುತ್ತಲೇ ಹೇಳುವ ಬರವಣಿಗೆ ಸುಭಗವಾಗಿ ಓದಿಸಿಕೊಂಡು ಹೋಗುತ್ತದೆ.
ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ ಅಧ್ಯಾಯವು ಅಂದಿನ ಗಾಯಕರ ಸಂಬAಧಗಳು ಅದೆಷ್ಟು ಉತ್ಕೃಷ್ಟವಾಗಿತ್ತು ಎಂದು ಹೇಳುತ್ತಲೆ ಜಾನಕಿಯವರು ಪಿ.ಸುಶೀಲ, ವಾಣಿಜಯರಾಮ್, ಕಸ್ತೂರಿಶಂಕರ, ಬಿ.ಕೆ.ಸುಮಿತ್ರ, ಜೊತೆಗೆ ಕಿಶೋರಕುಮಾರ, ಮಹ್ಮದ ರಫಿ ಅವರೊಂದಗಿನ ಭಾವನಾತ್ಮಕ ಸಂಬ೦ಧದ ಎಳೆಯನ್ನು ಪದರು ಪದರಾಗಿ ಬಿಚ್ಚಿ ತೋರಿಸುತ್ತದೆ. ಒಂದು ಗೀತೆ ತಮಗಿಂತ ಇನ್ನೊಬ್ಬರಿಗೆ ಸೂಕ್ತವೆಂದು ಕಂಡುಬ೦ದರೆ ಕೂಡಲೆ ಆ ಗೀತೆಯನ್ನು ಅಂತಹ ಗಾಯಕಿಯರಿಂದಲೆ ಹಾಡಿಸಿ ಎನ್ನುವ ಆ ಸೌಹಾರ್ದತೆಯ ದಿನಗಳು ಅದೆಷ್ಟು ಚಂದ. ಮಹ್ಮದ್ ರಫಿ ಅವರು ಹಾಡುವ ಮುನ್ನ, ನಂತರ ತೋರುತ್ತಿದ್ದ ನಡವಳಿಕೆ ಇಂದಿನ ಪೀಳಿಗೆಗೂ ಪಾಠವೆ. ಕಿಶೋರಕುಮಾರವರ ಆ ಹಾಸ್ಯದ ನಡವಳಿಕೆ ಯಾವತ್ತೂ ಮರೆಯಲಾರದಂತದ್ದು ಎನ್ನುವಂತೆ ಚಿತ್ರಿತವಾಗಿದೆ.
ಅಷ್ಟೊಂದು ಸುಮಧುರವಾಗಿ ಹಾಡಿ ಜನಪ್ರಿಯಗೊಳಿಸುವ ಗಾಯಕರಿಗೆ ಅದರ ಮೇಲೆ ಹಕ್ಕಿಲ್ಲದಿರುವ ಬಗ್ಗೆ ದಕ್ಷಿಣ ಭಾರತದಲ್ಲಿಯೆ ಹೋರಾಡಿದಂತಹ ಎಸ್.ಜಾನಕಿಯವರ ಪ್ರಯತ್ನ ಅದೆಷ್ಟು ದೊಡ್ಡದು. ಚಿತ್ರಗೀತೆಗಳ ವಾಣಿಜ್ಯಿಕ ಬಳಕೆಯಾದಾಗಲೂ ಗಾಯಕರಿಗೆ ಅನ್ಯಾಯವಾದಾಗ ಆ ಹೋರಾಟಕ್ಕೆ ತೀವ್ರ ರೂಪ ಕೊಟ್ಟಿದ್ದೆ ಜಾನಕಿಯವರು. ಆದರೆ ಅದಕ್ಕೆ ದಕ್ಷಿಣದವರ ಬೆಂಬಲ ಸಿಗಲಿಲ್ಲವೆಂಬುವುದು ದುರಂತವೇ ಸರಿ. ಗೀತಗಾಯನಕ್ಕೆ ಪ್ರಶಸ್ತಿ ಇಲ್ಲದಿರುವುದಕ್ಕೂ ಹೋರಾಟ ಮಾಡಿದಂತಹ ಏಕಮಾತ್ರ ಗಾಯಕಿಯೆಂದರೆ ಜಾನಕಿಯವರು ಅನ್ನುವುದು ಅವರ ಹೋರಾಟದ ಭಾವವನ್ನು ತೋರಿಸುತ್ತದೆ. ಕೊನೆಗೆ ಗಾಯಕರಿಗೆ ಪ್ರಶಸ್ತಿ ನೀಡಲು ಪ್ರಾರಂಭಿಸಿದಾಗ ತಮ್ಮನ್ನು ಅದಕ್ಕೆ ಪರಿಗಣಿಸಬಾರದು ಎಂಬ ಅವರ ನಿರ್ಲಿಪ್ತತೆ ಪಾರದರ್ಶಕ ವ್ಯಕ್ತಿತ್ತದ ಧ್ಯೋತಕ.
ಹಾಗೆಯೇ ಅವರು ಹಾಡಿರುವ ಗೀತೆಗಳ ಬಗೆಗಿನ ಅವರಿವರ ಹೇಳಿಕೆಗಳಿಗೆ ಉತ್ತರವಾಗಿ ಅದೆಷ್ಟು ಅಥೆಂಟಿಕ್ ಆಗಿ ವರ್ಷವಾರು, ಚಿತ್ರಗಳ ಸಂಖ್ಯೆ, ಚಿತ್ರಗೀತೆಗಳ ಸಂಖ್ಯೆಯನ್ನು ಲೇಖಕರು ನೀಡಿದ್ದಾರೆಂದರೆ ನಿಜಕ್ಕೂ ಆ ಕರಾರುವಾಕ್ ಮಾಹಿತಿ ನೀಡುವಲ್ಲಿನ ಶ್ರೀಧರಮೂರ್ತಿಯವರ ಶ್ರಮ ಓದುಗನಿಗೆ ಕಾಣುತ್ತದೆ. ಆದರೆ ಇದುವರೆಗೂ ಪಿ.ಸುಶೀಲಾ ಮಾತ್ರ ಅಧಿಕೃತವಾಗಿ ತಮ್ಮ ಹಾಡಿನ ಪಟ್ಟಿ ನೀಡಿ ಗಿನ್ನಿಸ್ ದಾಖಲೆ ಪಡೆದಿದ್ದಾರೆ ಎನ್ನುವುದು ಖುಷಿಯ ಸಂಗತಿ. ಆದಾಗ್ಯೂ ಹಾಡಿನ ಸಂಖ್ಯೆಗಿAತ ಹಾಡುಗಳ ಗುಣಾತ್ಮಕತೆಯೇ ಮಾನದಂಡವೆನ್ನುವ ಲೇಖಕರ ನಂಬಿಕೆ ಅದೆಷ್ಟು ಸತ್ಯ.
ಜೀವನದುದ್ದಕ್ಕೂ ತಮ್ಮ ಗಂಧರ್ವಗಾಯನದಿ೦ದ ಈ ನೆಲವನ್ನು ಗಂಧರ್ವಲೋಕವನ್ನಾಗಿ ಮಾಡಿದ ಜಾನಕಿಯವರು ಕಳೆದ ಕೊನೆಯ ದಿನಗಳ ಬಗ್ಗೆ ನಿಜಕ್ಕೂ ಬೇಸರ ಮೂಡಿಸುತ್ತದೆ. ಮಗ, ಮೊಮ್ಮಗಳ ಅಕಾಲಿಕ ಸಾವು ಅವರನ್ನು ಅದೆಷ್ಟು ಹಣ್ಣು ಮಾಡಿತೆಂಬುವುದು ಅವರಿಬ್ಬರನ್ನೂ ಕಳೆದುಕೊಂಡ ಕೆಲವೇ ತಿಂಗಳಲ್ಲಿ ಅವರು ಕೂಡಾ ನಮ್ಮೆಲ್ಲರನ್ನು ಬಿಟ್ಟು ಗಂಧರ್ವಲೋಕಕ್ಕೆ ಮರಳಿದ್ದು ಅದೆಂಥ ವಿಧಿಲಿಖಿತ ನೋಡಿ. ಅದೆಷ್ಟು ದಶಕಗಳಷ್ಟು ತಮ್ಮ ಇನಿದನಿ, ಜೇನುಕಂಠದಿ೦ದ ನಾವೆಲ್ಲರೂ ಬದುಕನ್ನು ಪ್ರೀತಿಸುವಂತೆ ಮಾಡಿದ ಆ ಮಹಾಗಾಯಕಿಯ ಜೀವನಚಿತ್ರವನ್ನು ಕನ್ನಡಿಗರಿಗೆ ದರ್ಶಸಿದ್ದಾರೆ. ಶ್ರೀಧರಮೂರ್ತಿಯವರ ಅನುಭವ, ಕಲೆ ಹಾಕಿದ ದಾಖಲೆಗಳ ಅನುಸಂಧಾನದ ಫಲದಿಂದ ಈ ಕೃತಿ ಮೂಡಿ ಬಂದಿದೆ ಎಂಬುವುದು ನಿರ್ವಿವಾದ.
ಕೃತಿಯನ್ನು ಓದುತ್ತಾ ಲೇಖಕರ ಸಂಗೀತ ಜ್ಞಾನದ ಬಗ್ಗೆಯೂ ಅಚ್ಚರಿ ಮೂಡುತ್ತದೆ. ಚಿತ್ರಗೀತೆಗಳನ್ನೆ ಹಿನ್ನೆಲೆಯಾಗಿಟ್ಟುಕೊಂಡು ಕರ್ನಾಟಿಕ, ಹಿಂದೂಸ್ತಾನಿ ಸಂಗೀತದ ತಮ್ಮ ಒಳಹೊರಗಿನ ವಿವರವು ಅವರ ಅರಿವನ್ನು ತೋರಿಸುತ್ತದೆ.
ಒಟ್ಟಾರೆ ಶ್ರೀಧರಮೂರ್ತಿಯವರ ಗಾಯಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಚಿತ್ರ ಸಾಹಿತಿಗಳೊಂದಿನ ವಿಪುಲ ಒಡನಾಟದ ಫಲವಾಗಿ ಈ ಕೃತಿಯು ಬಂದಿರುವುದು ವೇದ್ಯವಾಗುತ್ತದೆ. ಎಸ್. ಜಾನಕಿಯವರ ಈ ಜೀವನ ಗಾಥೆ ಕನ್ನಡ ಓದುಗನಿಗೆ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.






0 Comments