-ಕೆ.ವಿ.ಸುಬ್ರಹ್ಮಣ್ಯಂ
ಐತಿಹಾಸಿಕ ಪ್ರಜ್ಞೆ , ಪ್ರಭಾವದ ಆತಂಕ ಮತ್ತು ಅಪ್ರೋಪ್ರಿಯೇಶನ್ ತಾತ್ವಿಕತೆಯ ಪ್ರಭಾವ. ಪ್ರಸ್ತುತ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಬೃಹತ್ ಗ್ಯಾಲರಿ ಮೂರರಲ್ಲಿ ನಡೆಯುತ್ತಿರುವ ಒಂದು ವಿಶಿಷ್ಟ ಪ್ರದರ್ಶನ “ಸಪ್ತವರ್ಣ”. ಹಲವು ಮಾಧ್ಯಮಗಳ ಚಿತ್ರ, ಶಿಲ್ಪ ಮತ್ತು ಅಪರೂಪಕ್ಕೆ ಇನ್ಸ್ಟಾಲೇಶನಿನ ಬೀಜಸ್ದೃಶ ಕೃತಿಯೊಂದು ಇರುವ ಪ್ರದರ್ಶನ ಇದು. ಅಂದರೆ ಪ್ರದರ್ಶನದಲ್ಲಿ ಚಿತ್ರಕಾರರೇ ಅಲ್ಲದೆ ಶಿಲ್ಪಿಗಳು ಇದ್ದಾರೆ. ನನ್ನಂಥವರು” ವಿಫೋರ್” ಕಾಲದ ಕೊಡುಗೆಗಳು. ಪ್ರಸ್ತುತ ಸಪ್ತವರ್ಣದಲ್ಲಿ ವರ್ಣಗಳಿಗಿಂತಲೂ ಏಳು ಕಲಾವಿದ, ಕಲಾವಿದೆಯರು ಇದ್ದಾರೆ ಎಂಬುದು ಸಾಂಕೇತಿಕವಾಗಿ ಪ್ರಕಟಗೊಂಡಿದೆ. ಬಹುಶಹ ಮುಂದಿನ ಪ್ರದರ್ಶನಗಳಲ್ಲಿ ಕಲಾವಿದ ಕಲಾವಿದರ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಗಳು ಇವೆ.
ಈ ಪುಟ್ಟ ಬರಹದ ಶೀರ್ಷಿಕೆಯೇ ಹೇಳುವಂತೆ ಪ್ರದರ್ಶನದಲ್ಲಿ ಕಲಾ ಕೃತಿಗಳನ್ನು ಪ್ರದರ್ಶಿಸುವ ಎಲ್ಲರಿಗೂ ಐತಿಹಾಸಿಕ ಪ್ರಜ್ಞೆ ಇರುವುದು ಗಣನೀಯ. ಜೊತೆ ಜೊತೆಗೆ ಸಮಕಾಲೀನ ಪ್ರಜ್ಞೆಯೂ ಇರುವುದು ಅತ್ಯುತ್ತಮವೇ ಸರಿ. ಇದು ಈ ಸಂದರ್ಭದಲ್ಲಿ ಬಹುದೊಡ್ಡ ಅಚ್ಚರಿ ಮತ್ತು ಸಂತೋಷದಾಯಕ : ಇರಲಿ. ಪ್ರದರ್ಶನದಲ್ಲಿ ಶ್ರವಣಬೆಳಗೊಳದ ಗೊಮ್ಮಟನನ್ನು ಕೆತ್ತಿದ ಅರಿಷ್ಟನೇಮಿಯ (!) ಮಾನ್ಯಖೇಟದ (ಇಂದಿನ ಮಳಖೇಡ ಪಟ್ಟಣವು ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದಿತ್ತು ಎಂಬುದು ಸಾಮಾನ್ಯವಲ್ಲ.) ಶಿಲ್ಪಿ ಎಮ್. ಬಸವರಾಜರ ಶಿಲ್ಪಗಳು ಸಮಕಾಲೀನವಾಗಿ ಗ್ರಾನೈಟ್ ಮಾಧ್ಯಮದಲ್ಲಿ ರೂಪುಗೊಂಡಿದ್ದರೆ , ಶಂಕರ ಕಡಕುಂಟ್ಲಾ ತಮ್ಮ ಆಕ್ರಿಲಿಕ್ ವರ್ಣಗಳ ಹಲವು ಕಲಾ ಕೃತಿಗಳಲ್ಲಿ ಯುರೋಪಿನ ಪಿಕಾಸೋ,ಡವಿಂಚಿ ಮೊದಲಾದವರೇ ಅಲ್ಲದೆ ,ನಮ್ಮವರೇ ಆದ ಜಾಮಿನಿ ರಾಯ್,ಕೆ ಟಿ ಎಸ್ ಮೊದಲಾದವರ ಕೃತಿಗಳ ಕಾಡುವಿಕೆಯಿಂದ ಪ್ರಭಾವಿತರಾಗಿ, ಅವರ ಕಲಾ ಕೃತಿಗಳನ್ನು ತಮ್ಮ ಕೃತಿಗಳಲ್ಲಿ ಅಪ್ರೋಪ್ರಿಯೇಟ್ ಮಾಡಿಕೊಂಡಿದ್ದಾರೆ. ಅವರ “ಮೋನಲೀಸಾ” ಚಿತ್ರಕೃತಿಯು ಇಲ್ಲಿ ನೆನಪಾಗುತ್ತಿದೆ .ಪ್ರಭಾವದ ಆತಂಕವು ಇದೆ. ಹಾಗಾಗಿಯೇ ಅವರ ಹಲವು ಕೃತಿಗಳು “ವೃತ್ತಿ ಮತ್ತು ಪ್ರವೃತ್ತಿ” ಗಳ ವಿಶಿಷ್ಟ ಕಲಾತ್ಮಕ “ಪರಸ್ಪರ” ದಿಂದಾಗಿ ಅನನ್ಯದೃಶ್ಯವಾಗಿವೆ. ಅಂದರೆ ಇಲ್ಲಿ ಆಧುನಿಕ ದೃಶ್ಯಕಲಾ ಇತಿಹಾಸದ ಪ್ರಜ್ಞೆಯು ಪ್ರಭಾವಿಸಿದೆ.

ವಿಖ್ಯಾತ ಬಾದಾಮಿಯ ಮತ್ತು ಕಲ್ಯಾಣದ ಚಾಲುಕ್ಯರ ಮತ್ತು ರಾಷ್ಟ್ರಕೂಟರ ಕಾಲದ ಶಿಲ್ಪಿಗಳ ಐತಿಹಾಸಿಕ ಉಬ್ಬು ಶಿಲ್ಪಗಳ ಕಲಾತ್ಮಕ ಲೋಕಕ್ಕೆ ಬೆರಗುಗೊಂಡಿರುವವರು ನವೀನ್ ಬಿ ಪತ್ತಾರ್. ತಾವು ಮುಂದೆ ಚಿತ್ರಿಸಲಿರುವ ದೈವಿಕ, ಐತಿಹಾಸಿಕ ಮತ್ತು ಪುರಾಣಗಳ ಸಂದರ್ಭಗಳ ಹಿನ್ನೆಲೆಯಲ್ಲಿ ಈ ಪ್ರದರ್ಶನದ ಕಲಾಕೃತಿಗಳು ಕೀಸ್ಕೆಚ್ ನಂತೆ ಮೂಡಿ ಬಂದಿವೆ. ಹಾಗಾಗಿ ಅವು ಚಾರ್ಕೋಲ್ (ದ್ರಾಕ್ಷಿಬಳ್ಳಿಯ ಇದ್ದಿಲು), ಆಕ್ರಿಲಿಕ್ ಬಣ್ಣಗಳಲ್ಲಿ ಕ್ಯಾನ್ವಾಸ್ ಮೇಲೆ ಕಾಣಿಸಿಕೊಂಡಿವೆ. ಚಾಲುಕ್ಯರ ಶಿಲ್ಪಗಳ ಲಾಸ್ಯ,ಲಾವಣ್ಯ ಕಾವ್ಯಮಯ ರೇಖೆ,ಭಾವಗಳು ಮತ್ತು ರಾಷ್ಟ್ರಕೂಟರ ಶಿಲ್ಪಗಳ ಬೃಹದತೆಯ ಅರಿವು ಈ ಚಿತ್ರಗಳಲ್ಲಿ ಇದೆ. ಪಟ್ಟದಕಲ್ಲು ಬಾದಾಮಿಯ ನಟರಾಜ ಇತ್ಯಾದಿ ಶಿಲ್ಪಗಳು ಇಲ್ಲಿ ರೇಖೆ ಮತ್ತು ವರ್ಣಗಳಲ್ಲಿ ಮೂಡಿಬಂದಿವೆ. ಅಭಿವೃದ್ಧಿಯ ರಾಜಕಾರಣದಲ್ಲಿ ಗ್ರಾಮೀಣ ಬದುಕು ತನ್ನ “ಮಣ್ಣಿನವಾಸನೆ “ಯನ್ನು ಕಳೆದುಕೊಂಡಿರುವ ಹಿಂದಿನ ದಿನಗಳಲ್ಲಿ,ಗ್ರಾಮೀಣ ಜನರ ಬದುಕಿನ ಅಸಾಮಾನ್ಯ ಸುಂದರ ಅನುಭವಗಳ ದೃಶ್ಯ ಲೋಕಗಳನ್ನು ಗ್ರಹಿಸಿ ಬಿ ಎನ್ ಹರಿಪ್ರಸಾದ್ ಚಿತ್ರಿಸಿದ್ದಾರೆ. ಇಲ್ಲಿಯೂ ಸಂಪ್ರದಾಯ, ಪರಂಪರೆಗಳು ಸಮಕಾಲೀನತೆಗಳನ್ನು ಅರಗಿಸಿಕೊಂಡು ಕಾಣಿಸಿಕೊಂಡಿರುವುದು ಗಮನಾರ್ಹ. ಇವರ ಕೆಲವು ಕೃತಿಗಳಲ್ಲಿ ನಮ್ಮ ಚಿತ್ರಕಲೆಯ ಇತಿಹಾಸದ ಪ್ರಜ್ಞೆಯ ಕೆಲವು ಒಳಹುಗಳು ಇವೆ. ಗ್ರಾಮ್ಯತೆಯ ಹಲವು ಒಳನೋಟಗಳು ಇವರ ಕೃತಿಗಳಲ್ಲಿವೆ. ಸುಶೀಲ್ ತರ್ಬಾರ್ ಅವರ ಕೃತಿಗಳು ನೈಜತೆಯನ್ನು ಧಿಕ್ಕರಿಸಿ ಅಮೂರ್ತತೆಯ ವಿಶಿಷ್ಟ ಸುಂದರ ದೃಶ್ಯಗಳತ್ತ ಹೊರಟ ಹೊಳಹುಗಳ ಸುಂದರ.

ತಮ್ಮ ಸುತ್ತಲಿನ ಬದುಕಿನ ವಿಶಿಷ್ಟ ಲೋಕದಿಂದ ಪ್ರಭಾವಿತಗೊಂಡ ವಿಜಯ್ ಏ.ಧೋನ್ಗಡಿ, ಬಾಲ್ಯದಿಂದಲೇ ಪರಂಪರೆಯ ಪ್ರಭಾವಿತರು. ಸವದತ್ತಿಯ ಎಲ್ಲಮ್ಮನ ಗುಡಿಯ ಲಕ್ಷಾಂತರ ಜನರು ದೇವಿಗೆ ಅರ್ಪಿಸುವ ಅರಿಶಿನ ಮತ್ತು ಕುಂಕುಮಗಳ ಬಣ್ಣಗಳಲ್ಲಿ ಮಿಂದೆದ್ದವರು . ಲಕ್ಷಾಂತರ ತಾಯಂದಿರ ಹಣೆಯ ಮೇಲಿನ, ಬೃಹದಾಕಾರದ ಅರಿಶಿಣ ಕುಂಕುಮಗಳ ಬೊಟ್ಟುಗಳು, ಅವುಗಳ ದೈವಿಕ ಅನುಭವ ಲೋಕಗಳು ಹಲವು ರೀತಿಗಳಲ್ಲಿ ಕಾಡಿ ಇವರಿಂದ ಅಪೂರ್ವರೀತಿಯಲ್ಲಿ ಚಿತ್ರಿಸಿಕೊಂಡಿವೆ! ಕೆಲವು ಕೃತಿಗಳು ಕಲಾತ್ಮಕವಾಗಿ ಮೂಡಿಬಂದಿವೆ.
ಪಂಚಭೂತಗಳಲ್ಲಿ ಮಣ್ಣಿನ ಆಕರ್ಷಣೆ ಮನುಷ್ಯರಿಗೆ ಅತಿ ಸಹಜ. ಕೊನೆಗೆ “ಎಲ್ಲವೂ ಮಣ್ಣಾಗುವುದು” ಎಂಬ ತಾತ್ವಿಕತೆಯಲ್ಲಿಯೇ ಸಾಗುವ ಬದುಕು ನಮ್ಮದು. ಹೀಗಾಗಿ ಇಡೀ ವಿಶ್ವದಲ್ಲಿ “ಆದಿಮ ” ಕಾಲದಿಂದ ಇಂದಿನ “ಆಧುನಿಕೋತ್ತರ” ಕಾಲದವರೆಗೆ ಮಣ್ಣನ್ನು ಶಿಲ್ಪಿಗಳು ತಮ್ಮ ಅಭಿವ್ಯಕ್ತಿಗೆ ಪೂರಕವಾಗಿ ಹಲವು ರೀತಿಗಳಲ್ಲಿ ದುಡಿಸಿಕೊಂಡು ಬರುತ್ತಿದ್ದಾರೆ. ಮಣ್ಣನ್ನು ಸುಟ್ಟು / ಟೆರಾಕೋಟ ಮಾಧ್ಯಮದಲ್ಲಿ ಹಲವು ರೀತಿಗಳಲ್ಲಿ ಅಭಿವ್ಯಕ್ತಿಸುತ್ತಿದ್ದಾರೆ. ನಮ್ಮ ನಡುವೆ ಇರುವ ಶಿಲ್ಪಿ ಪ್ರತಿಮಾ ಜಿ. ದೊಡ್ಡಮನಿ. ಅವರು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಈ ಟೆರಕೋಟ ( terracotta ) ಮಾಧ್ಯಮದಲ್ಲಿ ಅಭಿವ್ಯಕ್ತಿಸಿ ಪ್ರದರ್ಶಿಸುತ್ತಿದ್ದಾರೆ. ಮೂಲತಹ ಕುಂಭ ಕಲೆಯ ಆಧಾರಿತ “ಬೀಜ”ರೂಪದ ಅಭಿವ್ಯಕ್ತಿಗಳು ಅವರವು. ಅಂದರೆ ಇವುಗಳನ್ನು ಬೃಹತ್ ಶಿಲ್ಪಗಳಾಗಿ ರೂಪಿಸುವ ಸಾಧ್ಯತೆಗಳು ಅತಿ ಹೆಚ್ಚಾಗಿವೆ. ಪ್ರಸ್ತುತ ಪ್ರದರ್ಶನದಲ್ಲಿ ಅವರ ಇಂತಹ ಹಲವು ಅಭಿವ್ಯಕ್ತಿಗಳು ಇದ್ದವು. Whispers of the Earth ಅಭಿವ್ಯಕ್ತಿಗಳನ್ನು ಇಲ್ಲಿ ಉದಾಹರಿಸಬಹುದು. ಹೀಗೆ ಇಡೀ ಪ್ರದರ್ಶನವು “ಪರಂಪರೆ ಮತ್ತು ಸಮಕಾಲೀನತೆಗಳ” ಪರಸ್ಪರದಂತೆ ನೋಡುಗರಿಗೆ ಕಾಣಬಲ್ಲದು.








0 Comments