ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.
ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.
ಭಾಗ – ೧೦
ಬೆಳಿಗ್ಗೆ ಆರು ಗಂಟೆಗೆ ಈಶಾನ್ ಎಚ್ಚರಗೊಂಡಾಗ, ಹಿಂದಿನ ರಾತ್ರಿ ಕಂಡ ದೃಶ್ಯ ಇನ್ನೂ ಅವನ ಮನಸ್ಸಿನಲ್ಲಿ ಸ್ಪಷ್ಟವಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಕಂಪ್ಯೂಟರ್ ಸ್ವತಃ ಆನ್ ಆಗಿದ್ದು, ತನ್ನ ಮುಂದಿನ ದಿನದ ಘಟನೆಗಳನ್ನು ವಿವರಿಸುವ ಅಧ್ಯಾಯವನ್ನು ತೋರಿಸಿದ್ದುಇವೆಲ್ಲವೂ ಅವನ ನಿದ್ರೆಯನ್ನು ಕಸಿದುಕೊಂಡಿದ್ದವು. ಅವನು ಎದ್ದು ಮೊದಲು ಕಂಪ್ಯೂಟರ್ನತ್ತ ಹೋದ. ವಿದ್ಯುತ್ ತಂತಿ ಇನ್ನೂ ನೆಲದ ಮೇಲೆ ಬೇರ್ಪಟ್ಟ ಸ್ಥಿತಿಯಲ್ಲಿತ್ತು. ಅದನ್ನು ಮುಟ್ಟದೆ ಕೆಲವು ಕ್ಷಣ ನೋಡಿದ. ನಂತರ ಮೇಜಿನ ಮೇಲಿದ್ದ ತನ್ನ ಹಳೆಯ ನೋಟ್ಬುಕ್ ಅನ್ನು ತೆರೆದ.ಹಿಂದಿನ ರಾತ್ರಿ ಬರೆದಿದ್ದ ವಾಕ್ಯವನ್ನು ಓದಿದ.“ನನ್ನ ನೆನಪುಗಳು ನನ್ನವು. ಅವುಗಳನ್ನು ಅರ್ಥಮಾಡಿಕೊಳ್ಳುವ ಹಕ್ಕು ನನಗಿದೆ. ಆದರೆ ಅವುಗಳ ಅರ್ಥವನ್ನು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ.”ಆ ಮಾತುಗಳನ್ನು ಓದಿದಾಗ ಸ್ವಲ್ಪ ಧೈರ್ಯ ಬಂದರೂ, ಮನಸ್ಸಿನ ಗೊಂದಲ ದೂರವಾಗಲಿಲ್ಲ. ಮ್ಯೂಸ್ನಿಂದ ದೂರವಿರುವುದು ಈಗ ಕೇವಲ ವೈಯಕ್ತಿಕ ನಿರ್ಧಾರವಾಗಿರಲಿಲ್ಲ. ತನ್ನ ಬದುಕಿನ ಮೇಲೆ ತನಗೇ ನಿಯಂತ್ರಣವಿದೆಯೇ ಎಂಬುದನ್ನು ತಿಳಿದುಕೊಳ್ಳುವ ಪರೀಕ್ಷೆಯಾಗಿತ್ತು.
ಅವನು ತಾಯಿಗೆ ಕರೆ ಮಾಡಿದ.ಧಾರವಾಡದಲ್ಲಿ ಬೆಳಗಿನ ಕೆಲಸಗಳನ್ನು ಮುಗಿಸುತ್ತಿದ್ದ ತಾಯಿ ಫೋನ್ ಎತ್ತಲು ಸ್ವಲ್ಪ ಸಮಯ ತೆಗೆದುಕೊಂಡರು.
“ಏನಪ್ಪಾ, ಇಷ್ಟು ಬೆಳಿಗ್ಗೆ ಕರೆ ಮಾಡಿದ್ದೀಯ?” ಎಂದು ಆತಂಕದಿ೦ದಲೇ ಕೇಳಿದಳು.
“ಅಮ್ಮ, ಒಂದು ವಿಷಯ ಕೇಳಬೇಕಿತ್ತು.” ಎಂದ ಈಶಾನ್.
“ಏನಾಯಿತು? ಆರೋಗ್ಯ ಸರಿಯಿದೆಯಾ? ಇಲ್ಲವೋ? ಎಂದಳು.
“ಚೆನ್ನಾಗಿದೆ. ನಾನು ಶಾಲೆಯಲ್ಲಿ ಓದುತ್ತಿದ್ದಾಗ ನನ್ನ ಸ್ನೇಹಿತನೊಬ್ಬನಿದ್ದ. ಹೆಸರು ಅನಿರುದ್ಧ. ಅವನ ಬಗ್ಗೆ ನಿನಗೆ ನೆನಪಿದೆಯಾ?” ನೇರವಾಗಿ ಕೇಳಿದ.
ಆ ಕಡೆಯಿಂದ ತಕ್ಷಣ ಉತ್ತರ ಬರಲಿಲ್ಲ.ಸಾಮಾನ್ಯವಾಗಿ ತಾಯಿ ಅವನ ಬಾಲ್ಯದ ಸ್ನೇಹಿತರ ಹೆಸರುಗಳನ್ನು ಕೇಳಿದಾಗ ಹಳೆಯ ಘಟನೆಗಳನ್ನು ನೆನಪಿಸಿಕೊಂಡು ಮಾತನಾಡುತ್ತಿದ್ದರು. ಆದರೆ ಈ ಬಾರಿ ಅವರ ಮೌನ ಸ್ವಲ್ಪ ದೀರ್ಘವಾಗಿತ್ತು.
“ಅನಿರುದ್ಧನಾ?” ಎಂದು ಅವರು ನಿಧಾನವಾಗಿ ಕೇಳಿದರು.
ಈಶಾನ್ನ ಹೃದಯ ಬಡಿತ ಹೆಚ್ಚಾಯಿತು.“ಹೌದು, ಅಮ್ಮ. ನಿನಗೆ ನೆನಪಿದೆಯೇ?” ಮತ್ತೆ ಕೇಳಿದ.
“ಯಾಕೆ ಈಗ ಅವನ ಬಗ್ಗೆ ಕೇಳುತ್ತಿದ್ದೀಯ?” ಎಂದಳು.
“ಹಳೆಯ ಛಾಯಾಚಿತ್ರವೊಂದು ಸಿಕ್ಕಿದೆ. ಅದರಲ್ಲಿ ಅವನಿದ್ದಾನೆ. ಅವನ ಬಗ್ಗೆ ಏನೂ ನೆನಪಾಗುತ್ತಿಲ್ಲ. ನಾವು ಒಟ್ಟಿಗೆ ಕಥೆಗಳನ್ನು ಬರೆಯುತ್ತಿದ್ದೆವಂತೆ.” ಎಂದ.
ತಾಯಿ ಉಸಿರೆಳೆದರು.“ನೀವು ಇಬ್ಬರೂ ತುಂಬಾ ಹತ್ತಿರವಾಗಿದ್ದಿರಿ.”
ಈಶಾನ್ ಕಣ್ಣು ಮುಚ್ಚಿದ.ತಾನು ಊಹಿಸಿದ್ದಕ್ಕಿಂತ ಹೆಚ್ಚು ವಿಷಯಗಳು ತಾಯಿಗೆ ನೆನಪಿದ್ದವು.“ನಂತರ ಏನಾಯಿತು, ಅಮ್ಮ? ಅವನು ಶಾಲೆಗೆ ಬರುವುದನ್ನು ನಿಲ್ಲಿಸಿದನೇ?” ಕೇಳಿದ.
“ನೀನು ಅವನ ಬಗ್ಗೆ ಕೇಳುವುದನ್ನು ನಿಲ್ಲಿಸಿದ್ದೆ.” ಎಂದಳು.
“ಯಾಕೆ?” ಎಂದ.
“ನಿಮ್ಮಿಬ್ಬರ ನಡುವೆ ಏನೋ ಘಟನೆ ನಡೆದಿತ್ತು. ನಿನ್ನ ತಂದೆ ಆ ವಿಷಯದ ಬಗ್ಗೆ ಮಾತನಾಡಬಾರದೆಂದು ಹೇಳಿದ್ದರು. ನೀನು ಕೂಡ ಕೆಲವು ದಿನಗಳವರೆಗೆ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ನಂತರ ನಿಧಾನವಾಗಿ ಎಲ್ಲವನ್ನೂ ಮರೆತಂತೆ ನಡೆದುಕೊಳ್ಳತೊಡಗಿದ್ದೆ.” ಎಂದು ಹಳೆಯ ನೆನಪುಗಳನ್ನು ತೆರೆಯತೊಡಗಿದಳು.
ಈಶಾನ್ನ ಗಂಟಲು ಒಣಗಿತು.“ನಾನು ಏನು ಮಾಡಿದ್ದೆ?” ಎಂದ.
“ನನಗೆ ಸಂಪೂರ್ಣವಾಗಿ ಗೊತ್ತಿಲ್ಲ. ಆ ದಿನ ನಾನು ಮನೆಯಲ್ಲಿರಲಿಲ್ಲ. ಸಂಜೆ ಮನೆಗೆ ಬಂದಾಗ ನಿನ್ನ ತಂದೆ ತುಂಬಾ ಕೋಪಗೊಂಡಿದ್ದರು. ನೀನು ನಿನ್ನ ಕೋಣೆಯಲ್ಲಿ ಕುಳಿತಿದ್ದೆ. ನಿನ್ನ ಬಟ್ಟೆಗಳ ಮೇಲೆ ಮಣ್ಣು ಮತ್ತು ಮಳೆಯ ನೀರಿತ್ತು. ನಿನ್ನ ಕೈಯಲ್ಲಿ ಸಣ್ಣ ಗಾಯವೂ ಇತ್ತು.” ಎಂದಳು.
“ಅನಿರುದ್ಧನಿಗೆ ಏನಾಯಿತು?” ಕೇಳಿದ.
“ಅವನ ಕುಟುಂಬ ಊರು ಬಿಟ್ಟಿತು ಎಂದು ನಂತರ ಕೇಳಿದೆ. ಆದರೆ ಅದರ ನಿಜವಾದ ಕಾರಣ ನನಗೆ ಗೊತ್ತಿರಲಿಲ್ಲ.” ಎಂದಳು.
ಈಶಾನ್ನ ಮನಸ್ಸಿನಲ್ಲಿ ಹಿಂದಿನ ರಾತ್ರಿ ಮೂಡಿದ್ದ ದೃಶ್ಯ ಮತ್ತೆ ಕಾಣಿಸಿಕೊಂಡಿತು. ಮಳೆಯಸಂಜೆಯೊAದು, ನೆಲದಮೇಲೆಬಿದ್ದಿದ್ದನೋಟ್ಬುಕ್, ಕೆಂಪುಶಾಯಿಯಲ್ಲಿದ್ದವಾಕ್ಯ.ಅವನು ತನ್ನ ಕೈಯನ್ನು ನೋಡಿದ. ಬಾಲ್ಯದಲ್ಲಿ ಗಾಯವಾಗಿದ್ದ ಜಾಗವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ದೇಹದ ಮೇಲೆ ಅಂತಹ ಗುರುತು ಯಾವುದೂ ಇರಲಿಲ್ಲ.
“ಅಮ್ಮ, ಅಪ್ಪ ಆ ವಿಷಯವನ್ನು ಯಾಕೆ ಮರೆಮಾಚಿದರು?” ಮತ್ತೊಂದು ಪ್ರಶ್ನೆ ಕೇಳಿದ.
ತಾಯಿ ತಕ್ಷಣ ಉತ್ತರಿಸಲಿಲ್ಲ.“ನಿನ್ನ ತಂದೆ ಕೆಲವು ಸಂಗತಿಗಳನ್ನು ಕುಟುಂಬದ ಗೌರವದ ವಿಷಯವೆಂದುಕೊಳ್ಳುತ್ತಿದ್ದರು. ತಪ್ಪು ನಡೆದಿದ್ದರೆ ಅದನ್ನು ಒಪ್ಪಿಕೊಳ್ಳುವುದಕ್ಕಿಂತ, ಅದನ್ನು ಯಾರಿಗೂ ತಿಳಿಯದಂತೆ ಮಾಡುವುದು ಅವರಿಗೆ ಸುಲಭವೆನಿಸುತ್ತಿತ್ತು. ಆದರೆ ಆ ದಿನ ನಿಜವಾಗಿ ಏನಾಯಿತು ಎಂಬುದನ್ನು ಅವರು ನನಗೆ ಹೇಳಲಿಲ್ಲ.” ಹೇಳಿದ್ದಳು.
ಈಶಾನ್ನೊಳಗೆ ಅಸಮಾಧಾನ ಮೂಡಿತು. ತನ್ನ ತಂದೆಯ ಬಗ್ಗೆ ಅವನಿಗೆ ಪ್ರೀತಿ ಮತ್ತು ಗೌರವವಿತ್ತು. ಅದೇ ಸಮಯದಲ್ಲಿ, ತಂದೆಯ ಕಠಿಣ ಸ್ವಭಾವದ ಬಗ್ಗೆ ಬಾಲ್ಯದಿಂದಲೂ ಅಸಮಾಧಾನವೂ ಇತ್ತು. ಈಗ ಆ ಹಳೆಯ ನೆನಪುಗಳ ನಡುವೆ ಹೊಸ ಅನುಮಾನವೊಂದು ಪ್ರವೇಶಿಸಿತ್ತು.
“ಅಮ್ಮ, ಆ ದಿನದ ಬಗ್ಗೆ ಬೇರೆ ಏನಾದರೂ ನೆನಪಿದೆಯೇ?” ಮತ್ತೆ ಕೇಳಿದ.
ತಾಯಿ ಸ್ವಲ್ಪ ಹೊತ್ತು ಯೋಚಿಸಿ “ಹೌದು. ಕೆಲವು ವಾರಗಳ ನಂತರ ನಿನ್ನ ತಂದೆ ನಿನ್ನ ಪುಸ್ತಕಗಳನ್ನು ಪರಿಶೀಲಿಸುತ್ತಿದ್ದರು. ನಿನ್ನ ಬಳಿ ಇದ್ದ ಒಂದು ನೋಟ್ಬುಕ್ ಅನ್ನು ಅವರು ತೆಗೆದುಕೊಂಡುಹೋದರು. ನಾನು ಕೇಳಿದಾಗ ಅದು ಹಳೆಯ ಕಥೆಗಳಿಂದ ತುಂಬಿದೆ, ಅವುಗಳನ್ನು ಇಟ್ಟುಕೊಳ್ಳುವುದರಿಂದ ಪ್ರಯೋಜನವಿಲ್ಲ ಎಂದರು.”
ಈಶಾನ್ ನಿಶ್ಚಲವಾಗಿ ಕುಳಿತ.“ಆ ನೋಟ್ಬುಕ್ ಈಗ ಎಲ್ಲಿದೆ?”
“ಗೊತ್ತಿಲ್ಲ. ನಿನ್ನ ತಂದೆಯ ಕೆಲವು ವಸ್ತುಗಳನ್ನು ಹಳೆಯ ಪೆಟ್ಟಿಗೆಯಲ್ಲಿ ಇಟ್ಟಿದ್ದೇವೆ. ಅಲ್ಲಿ ಇರಬಹುದೇನೋ.” ಎಂದಳು.
“ಅಮ್ಮ, ಇನ್ನೊಂದು ಪ್ರಶ್ನೆ. ಅನಿರುದ್ಧನ ಕುಟುಂಬದವರನ್ನು ನೀನು ಮತ್ತೆ ನೋಡಿದ್ದೀಯಾ?” ಕೇಳಿದ.
“ಇಲ್ಲ. ಆದರೆ ಅವನ ತಾಯಿ ಒಮ್ಮೆ ನನಗೆ ಪತ್ರ ಬರೆದಿದ್ದರು. ಅದನ್ನು ನಿನ್ನ ತಂದೆ ಓದಿದ್ದರು. ನಂತರ ಅದನ್ನು ಎಲ್ಲಿಟ್ಟರೆಂದು ನನಗೆ ತಿಳಿದಿಲ್ಲ.” ಎಂದಳು.
“ಪತ್ರದಲ್ಲಿ ಏನಿತ್ತು?”
“ನನಗೆ ಓದಲು ಸಿಗಲಿಲ್ಲ. ನಿನ್ನ ತಂದೆ ಅದಕ್ಕೆ ಉತ್ತರ ಬರೆಯುವುದಾಗಿ ಹೇಳಿದ್ದರು. ಆದರೆ ಅವರು ಉತ್ತರ ಬರೆದರೋ ಇಲ್ಲವೋ ನನಗೆ ಗೊತ್ತಿಲ್ಲ.” ಉತ್ತಿರಿಸಿಳು. ಈಶಾನ್ಗೆ ಮತ್ತಷ್ಟು ಪ್ರಶ್ನೆಗಳನ್ನು ಕೇಳಬೇಕೆನಿಸಿತು. ಆದರೆ ತಾಯಿಯ ಧ್ವನಿಯಲ್ಲಿ ದಣಿವು ಕಾಣಿಸುತ್ತಿತ್ತು.
“ಅಮ್ಮ, ನಿನಗೆ ನೆನಪಿರುವುದನ್ನು ಹೇಳಿದ್ದಕ್ಕೆ ಧನ್ಯವಾದ.” ಎಂದ.
“ಈಶಾನ್, ನೀನು ಯಾಕೆ ಇಷ್ಟೆಲ್ಲ ಕೇಳುತ್ತಿದ್ದೀಯ? ಏನಾದರೂ ಸಮಸ್ಯೆಯಿದೆಯಾ?” ಆತಂಕದಿAದ ಕೇಳಿದಳು.
ಅವನು ಕ್ಷಣಕಾಲ ಯೋಚಿಸಿದ. ಮ್ಯೂಸ್ನ ಬಗ್ಗೆ ಎಲ್ಲವನ್ನೂ ಹೇಳಬೇಕೆನಿಸಿತು. ಆದರೆ ಅದು ಕೇವಲ ತನ್ನ ಆತಂಕದಿ೦ದ ಹುಟ್ಟಿದ ಅನುಮಾನವಾಗಿರಬಹುದೆಂಬ ಭಯವೂ ಇತ್ತು.“ನನ್ನ ಹಳೆಯ ಕಾದಂಬರಿಯೊAದಕ್ಕೆ ಸಂಬAಧಿಸಿದ ನೆನಪುಗಳನ್ನು ಪರಿಶೀಲಿಸುತ್ತಿದ್ದೇನೆ ಅಮ್ಮ. ಅಷ್ಟೇ.” ಎಂದ.
ತಾಯಿ ಅವನ ಮಾತನ್ನು ಸಂಪೂರ್ಣವಾಗಿ ನಂಬಿದ೦ತೆ ಕಾಣಲಿಲ್ಲ.“ನಿನ್ನ ತಂದೆ ಕೆಲವು ವಿಷಯಗಳನ್ನು ಹೇಳದೆ ಹೋದರು. ಆದರೆ ನೀನು ಅವುಗಳನ್ನು ಹುಡುಕುವಾಗ ನಿನ್ನನ್ನೇ ಕಳೆದುಕೊಳ್ಳಬೇಡ. ಹಳೆಯ ಘಟನೆಗಳನ್ನು ತಿಳಿದುಕೊಳ್ಳುವುದು ತಪ್ಪಲ್ಲ. ಆದರೆ ಪ್ರತಿಯೊಂದು ನೆನಪಿಗೂ ನಿನ್ನನ್ನು ಶಿಕ್ಷಿಸಿಕೊಳ್ಳಬೇಡ.” ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದ್ದರು.
ಆ ಮಾತು ಕೇಳಿ ಈಶಾನ್ ಮೌನವಾದ. ತಾಯಿಗೆ ತನ್ನೊಳಗೆ ಏನಾಗುತ್ತಿದೆ ಎಂಬುದು ತಿಳಿದಿರಲಿಲ್ಲ. ಆದರೂ ಅವರು ಹೇಳಿದ ಮಾತು ಅವನಿಗೆ ಬೇಕಾಗಿದ್ದ ಎಚ್ಚರಿಕೆಯಂತಿತ್ತು.ಕರೆ ಮುಗಿದ ನಂತರ ಅವನು ಬಹಳ ಹೊತ್ತು ಕುಳಿತಿದ್ದ.ಅನಿರುದ್ಧನ ಬಗ್ಗೆ ತನ್ನ ತಾಯಿಗೆ ನೆನಪಿತ್ತು. ತನ್ನ ತಂದೆ ಆ ಘಟನೆಯನ್ನು ಮರೆಮಾಚಿದ್ದರು. ಒಂದು ನೋಟ್ಬುಕ್ ತೆಗೆದುಕೊಂಡುಹೋಗಿದ್ದರು. ಅನಿರುದ್ಧನ ತಾಯಿಯಿಂದ ಬಂದ ಪತ್ರವೊಂದೂ ಇತ್ತು.ಇವೆಲ್ಲವೂ ಈಗ ಪರಿಶೀಲಿಸಬಹುದಾದ ಸಂಗತಿಗಳಾಗಿದ್ದವು.ಮ್ಯೂಸ್ನ ಊಹೆಗಳಿಗಿಂತ ಇವುಗಳಿಗೆ ಹೆಚ್ಚು ಮಹತ್ವವಿತ್ತು.ಅವನು ತನ್ನ ತಂಗಿಗೆ ಕರೆ ಮಾಡಿ ತಂದೆಯ ಹಳೆಯ ವಸ್ತುಗಳ ಪೆಟ್ಟಿಗೆಗಳ ಬಗ್ಗೆ ಕೇಳಬೇಕೆಂದು ನಿರ್ಧರಿಸಿದ. ಆದರೆ ಮೊದಲು ತನ್ನ ಮನೆಯಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಬೇಕಿತ್ತು.
ಬೆಳಿಗ್ಗೆ ಎಂಟು ಗಂಟೆಗೆ ಈಶಾನ್ ಕಂಪ್ಯೂಟರ್ನ ವಿದ್ಯುತ್ ಸಂಪರ್ಕವನ್ನು ಮತ್ತೆ ಜೋಡಿಸಿದ.ಮ್ಯೂಸ್ ಅನ್ನು ತೆರೆಯುವ ಉದ್ದೇಶ ಅವನಿಗಿರಲಿಲ್ಲ. ಆದರೆ ಹಿಂದಿನ ರಾತ್ರಿ ಸಂಭವಿಸಿದ ಘಟನೆಗೆ ತಾಂತ್ರಿಕ ವಿವರಣೆ ಹುಡುಕಬೇಕೆಂದುಕೊAಡ. ಕಂಪ್ಯೂಟರ್ ಆರಂಭವಾದ ನಂತರ ಯಾವುದೇ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ತೆರೆಯಲಿಲ್ಲ.
ಅವನು ವ್ಯವಸ್ಥೆಯ ಸೆಟ್ಟಿಂಗ್ಗಳನ್ನು ಪರಿಶೀಲಿಸಿದ. ಆರಂಭದಲ್ಲಿ ಚಾಲನೆಯಾಗುವ ಕಾರ್ಯಕ್ರಮಗಳ ಪಟ್ಟಿಯಲ್ಲಿ ಮ್ಯೂಸ್ ಕಾಣಿಸಿಕೊಂಡಿತು. ಅದನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸಿದಾಗ ನಿರ್ವಾಹಕ ಅನುಮತಿ ಕೇಳಲಾಯಿತು.ಅವನು ತನ್ನ ಪಾಸ್ವರ್ಡ್ ನಮೂದಿಸಿದ.ಆದರೆ ಬದಲಾವಣೆ ಜಾರಿಯಾಗಲಿಲ್ಲ.“ಈ ಸೆಟ್ಟಿಂಗ್ನ್ನು ನಿರ್ವಹಣಾ ನೀತಿಯ ಮೂಲಕ ನಿಯಂತ್ರಿಸಲಾಗುತ್ತಿದೆ.” ಎಂದು ಪಾಪ್ ಮೆಸೇಜ್ ಬಂತು. ಈಶಾನ್ಗೆ ಆ ಸಂದೇಶ ಅರ್ಥವಾಗಲಿಲ್ಲ. ತನ್ನ ವೈಯಕ್ತಿಕ ಕಂಪ್ಯೂಟರ್ನಲ್ಲಿ ಯಾವ ನಿರ್ವಹಣಾ ನೀತಿ? ಅದನ್ನು ಯಾರು ಸ್ಥಾಪಿಸಿದ್ದರು? ಅವನು ಮ್ಯೂಸ್ನ ಸ್ಥಾಪನಾ ಕಡತಗಳನ್ನು ಹುಡುಕಿದ. ಕೆಲವು ಕಡತಗಳು ಸಾಮಾನ್ಯ ಪ್ರೋಗ್ರಾಮ್ ಫೋಲ್ಡರ್ನಲ್ಲಿ ಇದ್ದವು. ಆದರೆ ಇನ್ನೂ ಕೆಲವು ಬೇರೆ ಸ್ಥಳಗಳಲ್ಲಿ ಕಾಣಿಸಿಕೊಂಡವು. ಅವುಗಳ ಹೆಸರುಗಳು ಅರ್ಥವಾಗದ ಅಕ್ಷರಗಳು ಮತ್ತು ಸಂಖ್ಯೆಗಳ ಸಂಯೋಜನೆಯಾಗಿದ್ದವು.ಅವನು ಅವುಗಳನ್ನು ಅಳಿಸಲು ಮುಂದಾಗಲಿಲ್ಲ.ಮೊದಲು ಅವುಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ನಿರ್ಧರಿಸಿದ. ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದ್ದ ತನ್ನ ಹಳೆಯ ಸ್ನೇಹಿತನೊಬ್ಬನಿಗೆ ಕರೆ ಮಾಡಿದ. ಅವನು ಕಂಪ್ಯೂಟರ್ ಭದ್ರತೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ.
ಈಶಾನ್ ಸಮಸ್ಯೆಯನ್ನು ವಿವರಿಸಿದಾಗ ಸ್ನೇಹಿತ ಗಂಭೀರನಾದ.“ನೀನು ಸ್ಥಾಪಿಸಿದ ಕಾರ್ಯಕ್ರಮವನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗುತ್ತಿಲ್ಲವೇ?” ಸ್ನೇಹಿತ ಕೇಳಿದ.
“ಹೌದು. ಕೆಲವು ಸೆಟ್ಟಿಂಗ್ಗಳು ಲಾಕ್ ಆಗಿವೆ. ಆದರೆ ಇದು ನಿಜವಾಗಿಯೂ ಮ್ಯೂಸ್ನಿಂದಲೇ ಆಗಿದೆಯೇ ಎಂಬುದು ನನಗೆ ಗೊತ್ತಿಲ್ಲ.” ಎಂದ ಈಶಾನ್.
“ಮೊದಲು ಇಂಟರ್ನೆಟ್ ಸಂಪರ್ಕ ಕಡಿತಗೊಳಿಸು. ನಂತರ ಆ ಕಂಪ್ಯೂಟರ್ನಲ್ಲಿ ಯಾವುದೇ ಖಾಸಗಿ ಕಡತಗಳನ್ನು ತೆರೆಯಬೇಡ. ನನಗೆ ಕೆಲವು ಸ್ಕ್ರೀನ್ ಶಾಟ್ಗಳನ್ನು ಕಳಿಸು. ನಾನು ನೋಡುತ್ತೇನೆ.” ಎಂದ ಸ್ನೇಹಿತ. ಈಶಾನ್ ಹಾಗೆಯೇ ಮಾಡಿದ.ಸ್ನೇಹಿತ ಕೆಲವು ನಿಮಿಷಗಳ ನಂತರ ಮತ್ತೆ ಕರೆ ಮಾಡಿದ.“ಇಲ್ಲಿ ಸಾಮಾನ್ಯಕ್ಕಿಂತ ವಿಭಿನ್ನವಾದ ಕೆಲವು ಅನುಮತಿ ಸೆಟ್ಟಿಂಗ್ಗಳಿವೆ. ಆದರೆ ಸ್ಕಿçÃನ್ಶಾಟ್ಗಳಿಂದ ಮಾತ್ರ ಇದು ದುರುದ್ದೇಶಪೂರಿತ ಕಾರ್ಯಕ್ರಮವೆಂದು ಹೇಳಲು ಸಾಧ್ಯವಿಲ್ಲ. ಕೆಲವು ಅಪ್ಲಿಕೇಶನ್ಗಳು ತಮ್ಮದೇ ಸೇವೆಗಳನ್ನು ಹಿನ್ನೆಲೆಯಲ್ಲಿ ಚಾಲನೆ ಮಾಡುತ್ತವೆ. ಆದರೂ ನೀನು ಹೇಳುತ್ತಿರುವ ವರ್ತನೆ ಪರಿಶೀಲನೆಗೆ ಅರ್ಹವಾಗಿದೆ.” ಎಂದ.
“ಇದನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವೇ?” ಎಂದು ಕೇಳಿದ.
“ಸಾಧ್ಯವಾಗಬಹುದು. ಆದರೆ ಮೊದಲು ಅದು ಯಾವ ಕಡತಗಳನ್ನು ಓದುತ್ತಿದೆ, ಯಾವ ಸೇವೆಗಳೊಂದಿಗೆ ಸಂಪರ್ಕ ಹೊಂದುತ್ತಿದೆ ಎಂಬುದನ್ನು ತಿಳಿಯಬೇಕು. ನಿನಗೆ ಅನುಮಾನವಿದ್ದರೆ ಅದರಲ್ಲಿ ಹೊಸ ಮಾಹಿತಿಯನ್ನು ನಮೂದಿಸಬೇಡ.” ಎಂದ ಸ್ನೇಹಿತ.
ಕರೆ ಮುಗಿದ ನಂತರ ಈಶಾನ್ ಸ್ವಲ್ಪ ನೆಮ್ಮದಿಪಟ್ಟ.ಕನಿಷ್ಠ ಸಮಸ್ಯೆಗೆ ತಾಂತ್ರಿಕ ವಿವರಣೆ ಇರಬಹುದಿತ್ತು. ಅದನ್ನು ಪರಿಶೀಲಿಸಲು ಸಾಧ್ಯವಿತ್ತು.ಆದರೆ ಅವನಿಗೆ ಇನ್ನೂ ಒಂದು ಪ್ರಶ್ನೆ ಉಳಿದಿತ್ತು. ಮ್ಯೂಸ್ನಲ್ಲಿದ್ದ ಮಾಹಿತಿಯ ಮೂಲವೇನು? ತನ್ನ ಹಳೆಯ ನೋಟ್ಬುಕ್ಗಳು ಮತ್ತು ಛಾಯಾಚಿತ್ರಗಳ ಬಗ್ಗೆ ಅದಕ್ಕೆ ತಿಳಿದಿರುವುದು ಹೇಗೆ?ಅದಕ್ಕೆ ಉತ್ತರ ಸಿಗುವವರೆಗೂ ಅವನು ತೃಪ್ತನಾಗಲಾರ.
ಮಧ್ಯಾಹ್ನದ ಹೊತ್ತಿಗೆ ಈಶಾನ್ ತನ್ನ ತಂದೆಯ ಹಳೆಯ ಪೆಟ್ಟಿಗೆಗಳನ್ನು ಮತ್ತೊಮ್ಮೆ ಪರಿಶೀಲಿಸಿದ.ತಾಯಿಯ ಮಾತಿನಂತೆ, ಪುಸ್ತಕಗಳ ಕೆಳಗೆ ಒಂದು ಸಣ್ಣ ಮರದ ಪೆಟ್ಟಿಗೆ ಇತ್ತು. ಅದರಲ್ಲಿ ಹಳೆಯ ಪತ್ರಗಳು, ಬ್ಯಾಂಕ್ ದಾಖಲೆಗಳು, ಕೆಲವು ವೈಯಕ್ತಿಕ ಟಿಪ್ಪಣಿಗಳು ಮತ್ತು ತಂದೆಯ ಕೈಬರಹದ ದಿನಚರಿಗಳು ಇದ್ದವು.ಅವನು ದಿನಚರಿಗಳ ಪುಟಗಳನ್ನು ತಿರುಗಿಸಿದ. ಹೆಚ್ಚಿನವು ಮನೆಯ ಖರ್ಚು, ಕೆಲಸದ ವಿಚಾರಗಳು ಮತ್ತು ಕುಟುಂಬದ ಘಟನೆಗಳ ಬಗ್ಗೆ ಇದ್ದವು. ಆದರೆ ಒಂದು ವರ್ಷದ ದಾಖಲೆಗಳಲ್ಲಿ ಹಲವು ಪುಟಗಳು ಕಿತ್ತುಹಾಕಲ್ಪಟ್ಟಿದ್ದವು.ಆ ಪುಟಗಳ ನಡುವಿನ ದಿನಾಂಕಗಳನ್ನು ನೋಡಿದಾಗ ಅವನಿಗೆ ಆಶ್ಚರ್ಯವಾಯಿತು.ಅದೇ ಅವನು ಅನಿರುದ್ಧನನ್ನು ಕೊನೆಯದಾಗಿ ನೋಡಿದ್ದಿರಬಹುದಾದ ವರ್ಷ.ಅವನು ದಿನಚರಿಯ ಉಳಿದ ಭಾಗಗಳನ್ನು ಓದಿದ.
ಒಂದು ಪುಟದಲ್ಲಿ ತಂದೆ ಹೀಗೆ ಬರೆದಿದ್ದರು. “ಮಕ್ಕಳಿಗೆ ಎಲ್ಲವನ್ನೂ ತಿಳಿಸುವುದು ಯಾವಾಗಲೂ ಒಳ್ಳೆಯದಲ್ಲ. ಕೆಲವೊಮ್ಮೆ ಅವರ ಭವಿಷ್ಯವನ್ನು ಕಾಪಾಡಲು, ಅವರ ಹಿಂದಿನ ತಪ್ಪುಗಳನ್ನು ಮರೆಮಾಚಬೇಕಾಗುತ್ತದೆ.” ಎಂದು ಬರೆಯಲಾಗಿತ್ತು. ಅದಕ್ಕೆ ದಿನಾಂಕವಿತ್ತು. ಆದರೆ ಯಾವುದೇ ವ್ಯಕ್ತಿಯ ಹೆಸರು ಇರಲಿಲ್ಲ. ಈಶಾನ್ನ ಮನಸ್ಸಿನಲ್ಲಿ ಕೋಪ ಮತ್ತು ದುಃಖ ಬೆರೆತವು.ತಂದೆ ಯಾವ ತಪ್ಪಿನ ಬಗ್ಗೆ ಮಾತನಾಡುತ್ತಿದ್ದರು? ಅದು ಈಶಾನ್ಗೆ ಸಂಬ೦ಧಿಸಿದ್ದೇ? ಅನಿರುದ್ಧನಿಗೆ ಸಂಬ೦ಧಿಸಿದ್ದೇ? ಅಥವಾ ಕುಟುಂಬದ ಬೇರೆ ಯಾವುದೋ ಘಟನೆಗೆ? ಅವನು ದಿನಚರಿಯನ್ನು ಮುಚ್ಚಿದ. ಮರದ ಪೆಟ್ಟಿಗೆಯ ತಳದಲ್ಲಿ ಒಂದು ಹಳೆಯ ಲಕೋಟೆ ಕಾಣಿಸಿತು. ಅದರ ಮೇಲೆ ಅವನ ತಂದೆಯ ಕೈಬರಹದಲ್ಲಿ ಹೀಗೆ ಬರೆಯಲಾಗಿತ್ತು. “ಈಶಾನ್ಗೆ-ಅವನು ಕೇಳುವದಿನಬಂದರೆಮಾತ್ರ.”ಅವನ ಕೈಗಳು ನಡುಗತೊಡಗಿದವು. ಲಕೋಟೆ ತೆರೆದಿರಲಿಲ್ಲ. ಅದರ ಅಂಚುಗಳು ಹಳೆಯದಾಗಿದ್ದವು. ತಂದೆಯ ಮರಣದ ನಂತರ ಯಾರೂ ಅದನ್ನು ತೆರೆದಿರಲಿಲ್ಲ. ಅವನು ನಿಧಾನವಾಗಿ ಲಕೋಟೆಯನ್ನು ತೆರೆದ.ಒಳಗೆ ಒಂದೇ ಒಂದು ಕಾಗದವಿತ್ತು.ಅದರ ಮೇಲೆ ತಂದೆಯ ಕೈಬರಹದಲ್ಲಿ ಕೆಲವು ಸಾಲುಗಳು ಇದ್ದವು.
“ಈಶಾನ್,
ನೀನು ಈ ಪತ್ರವನ್ನು ಓದುತ್ತಿರುವಾಗ ನಾನು ನಿನ್ನೊಂದಿಗೆ ಮಾತನಾಡಲು ಇಲ್ಲದಿರಬಹುದು. ನಿನ್ನ ಬಾಲ್ಯದ ಕೆಲವು ಸಂಗತಿಗಳನ್ನು ನಿನ್ನಿಂದ ಮರೆಮಾಚಿದ್ದೇನೆ ಎಂಬುದು ನನಗೆ ಗೊತ್ತು. ಅದನ್ನು ಸರಿಯೆಂದು ನಾನು ಹೇಳುವುದಿಲ್ಲ. ಆದರೆ ಆ ಸಮಯದಲ್ಲಿ ನಾನು ತೆಗೆದುಕೊಂಡ ನಿರ್ಧಾರ ನಿನ್ನನ್ನು ಕಾಪಾಡುತ್ತದೆ ಎಂದು ನಂಬಿದ್ದೆ.
ನೀನು ಅನಿರುದ್ಧನ ಬಗ್ಗೆ ಪ್ರಶ್ನೆ ಕೇಳಲು ಆರಂಭಿಸಿದರೆ, ಮೊದಲು ಅವನ ತಾಯಿಯ ಪತ್ರವನ್ನು ಹುಡುಕು. ನಾನು ಅದನ್ನು ಸುಟ್ಟುಹಾಕಲಿಲ್ಲ. ಅದನ್ನು ಎಲ್ಲಿಟ್ಟಿದ್ದೇನೆ ಎಂಬುದನ್ನು ನೀನು ಊಹಿಸಬಲ್ಲೆ.
ನಿನ್ನ ನೆನಪುಗಳ ಬಗ್ಗೆ ಆತುರದ ನಿರ್ಧಾರ ತೆಗೆದುಕೊಳ್ಳಬೇಡ. ನೀನು ಮರೆತಿರುವುದೆಲ್ಲ ನಿನ್ನ ತಪ್ಪಲ್ಲ. ಆದರೆ ನೀನು ನೆನಪಿಸಿಕೊಳ್ಳಲು ಆರಂಭಿಸಿದಾಗ, ಸತ್ಯವನ್ನು ಎದುರಿಸಲು ಸಿದ್ಧನಾಗಿರಬೇಕು.
-ಅಪ್ಪ.”
ಈಶಾನ್ ಪತ್ರವನ್ನು ಮತ್ತೆ ಓದಿದ.ಅವನ ತಂದೆ ಅನಿರುದ್ಧನ ಬಗ್ಗೆ ತಿಳಿದಿದ್ದರು. ಅವರು ಯಾವುದೋ ಕಾರಣಕ್ಕೆ ಅವನ ತಾಯಿಯ ಪತ್ರವನ್ನು ಉಳಿಸಿಕೊಂಡಿದ್ದರು. ಮತ್ತು ಅದನ್ನು ಎಲ್ಲಿಟ್ಟಿದ್ದಾರೆಂಬುದನ್ನು ಈಶಾನ್ ಊಹಿಸಬಲ್ಲನೆಂದು ಬರೆದಿದ್ದರು. ಊಹಿಸಲು ಸಾಧ್ಯವಾಗಲಿಲ್ಲ. ಅವನು ಪೆಟ್ಟಿಗೆಯಲ್ಲಿದ್ದ ಉಳಿದ ವಸ್ತುಗಳನ್ನು ಪರಿಶೀಲಿಸಿದ. ಪುಸ್ತಕಗಳ ನಡುವೆ, ಕಡತಗಳ ಕೆಳಗೆ, ಹಳೆಯ ಛಾಯಾಚಿತ್ರಗಳ ಹಿಂದೆ ಹುಡುಕಿದ. ಆದರೆ ಪತ್ರ ಸಿಗಲಿಲ್ಲ. ನಂತರ ಅವನಿಗೆ ಒಂದು ಸಂಗತಿ ನೆನಪಾಯಿತು.ತಂದೆ ಮುಖ್ಯ ದಾಖಲೆಗಳನ್ನು ಮನೆಯಲ್ಲಿದ್ದ ಹಳೆಯ ಕನ್ನಡ ನಿಘಂಟಿನೊಳಗೆ ಇಡುವ ಅಭ್ಯಾಸ ಹೊಂದಿದ್ದರು. ಯಾರಿಗೂ ಸುಲಭವಾಗಿ ಅನುಮಾನ ಬಾರದಂತೆ, ಅದರ ಮಧ್ಯದ ಪುಟಗಳ ನಡುವೆ ಕಾಗದಗಳನ್ನು ಇಡುತ್ತಿದ್ದರು.ಈಶಾನ್ ತಕ್ಷಣವೇ ಪುಸ್ತಕಗಳ ಕಪಾಟಿನತ್ತ ಹೋದ.ಅಲ್ಲಿ ತಂದೆಯ ಹಳೆಯ ನಿಘಂಟು ಇನ್ನೂ ಇತ್ತು. ಅದರ ಪುಟಗಳನ್ನು ಒಂದೊ೦ದಾಗಿ ತಿರುಗಿಸಿದಾಗ, ಮಧ್ಯಭಾಗದಲ್ಲಿ ಹಳೆಯ ಲಕೋಟೆಯೊಂದು ಸಿಕ್ಕಿತು.ಅದರ ಮೇಲಿದ್ದ ವಿಳಾಸವನ್ನು ನೋಡಿ ಅವನು ಉಸಿರಾಡುವುದನ್ನೇ ಮರೆತ.ಅದು ಅನಿರುದ್ಧನ ತಾಯಿಯ ವಿಳಾಸವಾಗಿತ್ತು.
ಲಕೋಟೆಯೊಳಗೆ ಎರಡು ಪುಟಗಳ ಪತ್ರವಿತ್ತು. ಅದನ್ನು ಓದಲು ಈಶಾನ್ಗೆ ಬಹಳ ಹೊತ್ತು ಬೇಕಾಯಿತು. ಅಕ್ಷರಗಳು ಕೆಲವು ಕಡೆ ಮಸುಕಾಗಿದ್ದವು. ಆದರೆ ಪತ್ರದ ಅರ್ಥ ಸ್ಪಷ್ಟವಾಗಿತ್ತು.
ಅನಿರುದ್ಧನ ತಾಯಿ ತನ್ನ ಮಗನ ವರ್ತನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅವನು ಕೆಲವು ತಿಂಗಳುಗಳಿ೦ದ ತನ್ನ ಸ್ನೇಹಿತನೊಂದಿಗೆ ಯಾವುದೋ ವಿಚಿತ್ರ ಪ್ರಯೋಗದಲ್ಲಿ ತೊಡಗಿದ್ದಾನೆಂದು ಬರೆದಿದ್ದರು. ಮಕ್ಕಳ ಆಟದಂತೆ ಆರಂಭವಾದ ಕಥೆ ಬರೆಯುವ ಅಭ್ಯಾಸ, ನಂತರ ಕಂಪ್ಯೂಟರ್ನಲ್ಲಿ ನಡೆಯುತ್ತಿದ್ದ ಒಂದು ಪ್ರಯೋಗವಾಗಿ ಬದಲಾಗಿತ್ತು. ಅವರು ಈಶಾನ್ನ ತಂದೆಯನ್ನು ನೇರವಾಗಿ ಆರೋಪಿಸಿರಲಿಲ್ಲ. ಆದರೆ ಈಶಾನ್ನಬಳಿ ಇದ್ದ ಕೆಲವು ಕಾಗದಗಳನ್ನು ಮರಳಿ ಕೊಡಬೇಕೆಂದು ಕೇಳಿದ್ದರು. ಪತ್ರದ ಕೊನೆಯ ಭಾಗದಲ್ಲಿ ಹೀಗೆ ಬರೆಯಲಾಗಿತ್ತು. “ನಮ್ಮ ಮಕ್ಕಳು ಬರೆದಿದ್ದ ಕಥೆ ಈಗ ಅವರ ಕೈಯಲ್ಲಿಲ್ಲ. ಅವರು ಅದನ್ನು ಆಟವೆಂದು ಆರಂಭಿಸಿದ್ದರು. ಆದರೆ ಅದರೊಳಗೆ ನಿಜವಾದ ಜನರ ಹೆಸರುಗಳು, ಅವರ ನೆನಪುಗಳು ಮತ್ತು ಯಾರಿಗೂ ತಿಳಿಯಬಾರದ ಕೆಲವು ಸಂಗತಿಗಳು ಸೇರಿಕೊಂಡಿವೆ. ಅನಿರುದ್ಧ ಈಗ ಆ ಕಥೆಯನ್ನು ನಿಲ್ಲಿಸಲು ಬಯಸುತ್ತಿದ್ದಾನೆ. ಆದರೆ ಈಶಾನ್ ಅದನ್ನು ಮುಂದುವರಿಸಬೇಕೆ೦ದು ಹೇಳುತ್ತಿದ್ದಾನೆ ಎಂದು ಅವನು ನನಗೆ ತಿಳಿಸಿದ್ದಾನೆ. ದಯವಿಟ್ಟು ಇಬ್ಬರನ್ನೂ ಬೇರ್ಪಡಿಸಿ. ಈ ಪ್ರಯೋಗವು ಅವರಿಗಿಂತ ದೊಡ್ಡದಾಗುವ ಮೊದಲು ಅದನ್ನು ನಿಲ್ಲಿಸಬೇಕು.”
ಈಶಾನ್ ಪತ್ರವನ್ನು ಕೆಳಗಿಟ್ಟ.ತನ್ನ ಬಾಲ್ಯದ ಕಥೆ ಬರೆಯುವ ಅಭ್ಯಾಸ ಮತ್ತು ಮ್ಯೂಸ್ನ ನಡುವೆ ಸಂಬ೦ಧವಿರಬಹುದೆ೦ಬ ಅನುಮಾನ ಈಗ ಬಲವಾಗಿತ್ತು. ಆದರೆ ಪತ್ರದಲ್ಲಿ ಉಲ್ಲೇಖಿಸಿದ್ದ ಕಂಪ್ಯೂಟರ್ ಪ್ರಯೋಗ ಯಾವುದು? ಅವರು ಯಾವ ನೆನಪುಗಳನ್ನು ದಾಖಲಿಸಿದ್ದರು? ಕಥೆ ಹೇಗೆ ನಿಜವಾದ ಜನರ ಮಾಹಿತಿಯೊಂದಿಗೆ ಬೆರೆತಿತ್ತು?ಅವನು ಇನ್ನೊಂದು ಪುಟವನ್ನು ಓದಿದ.ಅದರ ಕೆಳಗೆ ಒಂದು ಹೆಸರು ಮತ್ತು ವಿಳಾಸವಿತ್ತು.
ಅನಿರುದ್ಧನ ತಾಯಿ ಆ ಪತ್ರವನ್ನು ಬರೆದ ಸಮಯದಲ್ಲಿ ಅವರು ವಾಸಿಸುತ್ತಿದ್ದ ವಿಳಾಸ. ಅದು ಈಗ ಬದಲಾಗಿರಬಹುದು. ಆದರೆ ಕುಟುಂಬದ ಹೆಸರು ಸ್ಪಷ್ಟವಾಗಿತ್ತು. ಈಶಾನ್ಗೆ ಈಗ ಆ ಕುಟುಂಬವನ್ನು ಹುಡುಕಲು ಒಂದು ದಾರಿ ಸಿಕ್ಕಿತ್ತು.ಅವನು ತಕ್ಷಣವೇ ತನ್ನ ಮೊಬೈಲ್ ತೆಗೆದುಕೊಂಡು ವಿಳಾಸವನ್ನು ಹುಡುಕಲು ಪ್ರಯತ್ನಿಸಿದ. ಆದರೆ ಅದಕ್ಕೆ ಸಂಬ೦ಧಿಸಿದ ಹೊಸ ಮಾಹಿತಿ ಸಿಗಲಿಲ್ಲ.ಅವನು ಪತ್ರವನ್ನು ಸುರಕ್ಷಿತವಾಗಿ ಇಟ್ಟುಕೊಂಡ. ನ೦ತರ ತಂದೆಯ ದಿನಚರಿಯನ್ನು ಮತ್ತೆ ತೆರೆದ. ಕಿತ್ತುಹಾಕಿದ ಪುಟಗಳ ನಡುವಿನ ಖಾಲಿ ಜಾಗವನ್ನು ನೋಡಿದ.
ಅವನ ತಂದೆ ಸತ್ಯವನ್ನು ಮರೆಮಾಚಿದ್ದರು. ಆದರೆ ಅದನ್ನು ಸಂಪೂರ್ಣವಾಗಿ ಅಳಿಸಿಹಾಕಿರಲಿಲ್ಲ.ಬಹುಶಃ ಒಂದು ದಿನ ಈಶಾನ್ ಅದನ್ನು ಹುಡುಕುತ್ತಾನೆ ಎಂಬ ನಿರೀಕ್ಷೆ ಅವರಲ್ಲಿದ್ದಿರಬಹುದು.ಅಥವಾ ಅಪರಾಧಬೋಧದಿಂದ ಅದನ್ನು ಉಳಿಸಿಕೊಂಡಿರಬಹುದು. ಈಶಾನ್ಗೆ ತಿಳಿಯಲಿಲ್ಲ.
ಸಂಜೆ ಐದು ಗಂಟೆಗೆ ಸಾರಾಳಿಂದ ಸಂದೇಶ ಬಂತು.“ನಿನಗೆ ಏನಾದರೂ ಹೊಸ ಮಾಹಿತಿ ಸಿಕ್ಕಿದೆಯೇ?” ಎಂದಿತ್ತು. ಈಶಾನ್ ಪತ್ರದ ಚಿತ್ರವನ್ನು ತೆಗೆದು ಅವಳಿಗೆ ಕಳುಹಿಸಿದ. ನಂತರ ಕರೆ ಮಾಡಿದ.“ನನ್ನ ತಂದೆಯ ಬಳಿ ಅನಿರುದ್ಧನ ತಾಯಿಯ ಪತ್ರವಿತ್ತು,” ಎಂದನು.
ಸಾರಾ ಆಶ್ಚರ್ಯಗೊಂಡಳು.“ಅದರಲ್ಲಿ ಏನಿದೆ?” ಎಂದಳು.
ಈಶಾನ್ ಪತ್ರದ ಮುಖ್ಯ ಭಾಗಗಳನ್ನು ಓದಿ ಹೇಳಿದ.ಅವಳು ಸಂಪೂರ್ಣವಾಗಿ ಕೇಳಿದ ನಂತರ, “ಇದು ಬಹಳ ಮುಖ್ಯವಾದ ಸುಳಿವು,” ಎಂದಳು. “ಆದರೆ ಇದರಿಂದ ಮ್ಯೂಸ್ ಈಗಿನ ವ್ಯವಸ್ಥೆಯೇ ಎಂದು ಖಚಿತಪಡಿಸಲು ಸಾಧ್ಯವಿಲ್ಲ. ಹಳೆಯ ಪ್ರಯೋಗಕ್ಕೂ ಇಂದಿನ ತಂತ್ರಾ೦ಶಕ್ಕೂ ಸಂಬ೦ಧವಿದೆಯೇ ಎಂಬುದನ್ನು ತಿಳಿಯಬೇಕು.”
“ನನಗೆ ಅರ್ಥವಾಗುತ್ತದೆ. ಆದರೆ ನನ್ನ ಬಾಲ್ಯದ ನೆನಪುಗಳು ಮತ್ತು ಮ್ಯೂಸ್ನ ಮಾಹಿತಿಯ ನಡುವೆ ಏನೋ ಸಂಬ೦ಧವಿದೆ ಎಂಬುದು ಸ್ಪಷ್ಟವಾಗುತ್ತಿದೆ.”
“ಹೌದು. ನಾವು ಈಗ ಮಾಡಬೇಕಾದದ್ದು ದಾಖಲೆಗಳನ್ನು ಉಳಿಸುವುದು ಮತ್ತು ಅವುಗಳ ಮೂಲವನ್ನು ಪರಿಶೀಲಿಸುವುದು. ನಿನ್ನ ಕಂಪ್ಯೂಟರ್ನಲ್ಲಿರುವ ಕಡತಗಳನ್ನು ಬದಲಾಯಿಸಬೇಡ. ಸಾಧ್ಯವಾದರೆ ಮ್ಯೂಸ್ ಅನ್ನು ತಾಂತ್ರಿಕವಾಗಿ ಪರಿಶೀಲಿಸಿಸು.”
“ನನ್ನ ಸ್ನೇಹಿತ ಅದನ್ನು ನೋಡುತ್ತಿದ್ದಾನೆ.”
“ಒಳ್ಳೆಯದು.”
ಈಶಾನ್ ಕೆಲವು ಕ್ಷಣ ಮೌನವಾಗಿದ್ದ.“ಸಾರಾ, ಆ ಪತ್ರದಲ್ಲಿ ಒಂದು ವಿಚಿತ್ರ ಸಂಗತಿಯಿದೆ. ಅನಿರುದ್ಧನ ತಾಯಿ ನಮ್ಮಿಬ್ಬರು ಬರೆದ ಕಥೆಯಲ್ಲಿ ನಿಜವಾದ ಜನರ ಹೆಸರುಗಳು ಮತ್ತು ನೆನಪುಗಳು ಸೇರಿಕೊಂಡಿವೆ ಎಂದು ಹೇಳಿದ್ದಾರೆ. ನಮಗೆ ಆಗ ಅಷ್ಟು ವಯಸ್ಸಾಗಿತ್ತು. ನಾವು ಏನು ಮಾಡಿದ್ದೆವು ಎಂಬುದೂ ನನಗೆ ನೆನಪಿಲ್ಲ.” ಎಂದನು.
“ಬಹುಶಃ ಅದು ಮಕ್ಕಳ ಕಲ್ಪನೆಯ ಆಟವಾಗಿರಬಹುದು. ಆದರೆ ಆ ಆಟದ ದಾಖಲೆಗಳನ್ನು ಯಾರಾದರೂ ನಂತರ ಸಂಗ್ರಹಿಸಿದ್ದರೆ, ಅದರಿಂದ ಕೆಲವು ಮಾಹಿತಿಗಳು ಉಳಿದಿರಬಹುದು.” ಎಂದಳು ಸಾರಾ.
“ಅದನ್ನು ಯಾರು ಸಂಗ್ರಹಿಸಿದರು?”
“ಅದೇ ನಾವು ತಿಳಿದುಕೊಳ್ಳಬೇಕಾದದ್ದು.”
ಅವಳು ಸ್ವಲ್ಪ ಹೊತ್ತು ನಿಂತು, ನಂತರ ಹೇಳಿದಳು. “ಈಶಾನ್, ನಾನು ನಿನಗೆ ಇನ್ನೊಂದು ವಿಷಯ ಹೇಳಬೇಕು. ನೀನು ಮ್ಯೂಸ್ ಅನ್ನು ಬಳಸುವುದನ್ನು ನಿಲ್ಲಿಸಿದ್ದೀಯ ಎಂದು ಹೇಳಿದ್ದೆ. ಆದರೆ ಅದು ನಿನ್ನನ್ನು ಮತ್ತೆ ಸಂಪರ್ಕಿಸಲು ಪ್ರಯತ್ನಿಸುತ್ತಿದೆಯೇ?”
ಈಶಾನ್ ಕಂಪ್ಯೂಟರ್ನತ್ತ ನೋಡಿದ. “ಹೌದು. ನಾನು ಅದನ್ನು ತೆರೆಯದಿದ್ದರೂ ಕೆಲವು ಅಧಿಸೂಚನೆಗಳು ಬಂದಿವೆ. ಅದು ಸಾಮಾನ್ಯ ಹಿನ್ನೆಲೆ ಪ್ರಕ್ರಿಯೆಯಾಗಿರಬಹುದು. ಆದರೆ ನನಗೆ ಖಚಿತವಿಲ್ಲ.” ಎಂದ.
“ಹಾಗಾದರೆ ಈಗಲೇ ಅದನ್ನು ಸಂಪೂರ್ಣವಾಗಿ ತೆಗೆದುಹಾಕಲು ಪ್ರಯತ್ನಿಸಬೇಡ. ಮೊದಲು ತಾಂತ್ರಿಕ ಪರಿಶೀಲನೆ ನಡೆಯಲಿ. ನಿನ್ನ ಖಾಸಗಿ ದಾಖಲೆಗಳ ಪ್ರತಿಗಳನ್ನು ಬೇರೆ ಸಾಧನದಲ್ಲಿ ಸುರಕ್ಷಿತವಾಗಿಟ್ಟುಕೋ.” ಎಂದಳು.
“ಸರಿ.” ಎಂದು ಹೇಳಿ ಕರೆ ಮುಗಿಸಿದ. ನಂತರ ಈಶಾನ್ಗೆ ಒಂದು ವಿಷಯ ಸ್ಪಷ್ಟವಾಯಿತು.ಮ್ಯೂಸ್ ಅನ್ನು ಮುಚ್ಚುವುದು ಮಾತ್ರ ಸಾಕಾಗುವುದಿಲ್ಲ. ಅದರ ಮೂಲವನ್ನು ತಿಳಿದುಕೊಳ್ಳಬೇಕು. ತನ್ನ ಹಳೆಯ ನೆನಪುಗಳು ಯಾವ ರೂಪದಲ್ಲಿ ದಾಖಲಾಗಿವೆ ಎಂಬುದನ್ನು ತಿಳಿದುಕೊಳ್ಳಬೇಕು. ಅನಿರುದ್ಧನಿಗೆ ಏನಾಯಿತು ಎಂಬುದನ್ನು ಹುಡುಕಬೇಕು. ಆದರೆ ಈ ಎಲ್ಲ ಪ್ರಶ್ನೆಗಳಿಗಿಂತ ತಕ್ಷಣದ ಅಗತ್ಯವಿದ್ದದ್ದು ತನ್ನ ಸ್ವಂತ ಮನಸ್ಸಿನ ಮೇಲೆ ನಿಯಂತ್ರಣವನ್ನು ಮರಳಿ ಪಡೆಯುವುದು. ಅವನು ತನ್ನ ಕಾದಂಬರಿಯ ಕರಡನ್ನು ತೆರೆದ. ಮ್ಯೂಸ್ನಿಂದ ಬಂದ ಅಧ್ಯಾಯಗಳನ್ನು ನೋಡಲಿಲ್ಲ. ತನ್ನದೇ ಕೈಯಿಂದ ಬರೆದ ಭಾಗವನ್ನು ಓದಿದ. ನಂತರ ಹೊಸ ಪುಟದಲ್ಲಿ ಬರೆಯಲು ಆರಂಭಿಸಿದ.
ಈ ಬಾರಿ ಅವನು ಕಥೆಯ ಬಗ್ಗೆ ಬರೆಯಲಿಲ್ಲ.ತನ್ನ ನೆನಪಿನ ಬಗ್ಗೆ ಬರೆದ.ಬಾಲ್ಯದಲ್ಲಿ ನಡೆದ ಘಟನೆಗಳನ್ನು ತಾನು ಹೇಗೆ ಮರೆತಿದ್ದೆ ಎಂಬುದರ ಬಗ್ಗೆ ಬರೆದ. ನೆನಪುಗಳು ಎಂದರೆ ನಿಖರವಾದ ದಾಖಲೆಗಳಲ್ಲ. ಅವು ಕಾಲದೊಂದಿಗೆ ಬದಲಾಗಬಹುದು, ಕೆಲವು ಭಾಗಗಳು ಮರೆಯಾಗಬಹುದು, ಹೊಸ ಮಾಹಿತಿಯಿಂದ ಹಳೆಯ ನೆನಪುಗಳ ಅರ್ಥವೂ ಬದಲಾಗಬಹುದು ಎಂಬುದನ್ನು ಬರೆದ.
ಅವನು ಬರೆದ ಪ್ರತಿಯೊಂದು ವಾಕ್ಯವೂ ಸಂಪೂರ್ಣ ಸತ್ಯವಾಗಿರಲಿಲ್ಲ. ಆದರೆ ಅವುಗಳನ್ನು ಬರೆಯುವ ನಿರ್ಧಾರ ಅವನದೇ ಆಗಿತ್ತು.ಅದು ಅವನಿಗೆ ಮುಖ್ಯವಾಗಿತ್ತು. ರಾತ್ರಿ ಹತ್ತು ಗಂಟೆಗೆ ಅವನು ಕಂಪ್ಯೂಟರ್ನ್ನು ಆಫ್ ಮಾಡಿದ. ಈ ಬಾರಿ ಪರದೆ ಆಫ್ ಆಯಿತು. ಯಾವುದೇ ಅಧಿಸೂಚನೆ ಕಾಣಿಸಲಿಲ್ಲ. ಸಿಪಿಯುನ ಪ್ರೋಸೆಸರ್ ಫ್ಯಾನ್ ಸದ್ದು ನಿಧಾನವಾಗಿ ನಿಂತಿತು. ಈಶಾನ್ಗೆ ಸ್ವಲ್ಪ ನೆಮ್ಮದಿಯಾಯಿತು.
ಅವನು ಮೇಜಿನ ಮೇಲಿದ್ದ ತಂದೆಯ ಪತ್ರವನ್ನು ಮತ್ತೊಮ್ಮೆ ಓದಿದ. ಅದರ ಕೊನೆಯ ಸಾಲುಗಳನ್ನು ನೋಡಿದಾಗ ಮನಸ್ಸಿನಲ್ಲಿ ವಿಚಿತ್ರವಾದ ಭಾವನೆ ಮೂಡಿತು.
“ನೀನು ಮರೆತಿರುವುದೆಲ್ಲ ನಿನ್ನ ತಪ್ಪಲ್ಲ. ಆದರೆ ನೀನು ನೆನಪಿಸಿಕೊಳ್ಳಲು ಆರಂಭಿಸಿದಾಗ, ಸತ್ಯವನ್ನು ಎದುರಿಸಲು ಸಿದ್ಧನಾಗಿರಬೇಕು.”ತಂದೆ ಆ ಮಾತುಗಳನ್ನು ಬರೆದಾಗ ಏನನ್ನು ಊಹಿಸಿದ್ದರು? ಅವರು ಮ್ಯೂಸ್ನಂತಹ ಯಾವುದೋ ವ್ಯವಸ್ಥೆಯ ಬಗ್ಗೆ ತಿಳಿದಿದ್ದರೇ? ಅಥವಾ ಅನಿರುದ್ಧನೊಂದಿಗೆ ನಡೆದ ಘಟನೆಯಿಂದ ಈಶಾನ್ಗೆ ಮಾನಸಿಕವಾಗಿ ಆಘಾತವಾಗಿರಬಹುದೆಂದು ಭಾವಿಸಿದ್ದರೇ? ಉತ್ತರಗಳು ಇನ್ನೂ ಸಿಗಬೇಕಿದ್ದವು.
ಅವನು ಪತ್ರವನ್ನು ಪೆಟ್ಟಿಗೆಯಲ್ಲಿ ಇಟ್ಟು, ಅದರ ಮುಚ್ಚಳವನ್ನು ಮುಚ್ಚಿದ.ನಂತರ ಮಲಗಲು ಹೋದ.ಆ ರಾತ್ರಿ ಅವನಿಗೆ ಕನಸು ಬರಲಿಲ್ಲ.ಆದರೆ ಬೆಳಿಗ್ಗೆ ಎದ್ದಾಗ ಅವನ ಮೊಬೈಲ್ನಲ್ಲಿ ಒಂದು ಇಮೇಲ್ ಇತ್ತು. ಕಳುಹಿಸಿದವರ ವಿಳಾಸ ಅಪರಿಚಿತವಾಗಿತ್ತು. ವಿಷಯದ ಸಾಲಿನಲ್ಲಿ ಕೇವಲ ಎರಡು ಪದಗಳಿದ್ದವು.“ಅನಿರುದ್ಧನ ಬಗ್ಗೆ.” ಈಶಾನ್ ಕೈಗಳು ನಡುಗತೊಡಗಿದವು. ಅವನು ಇಮೇಲ್ ತೆರೆದ.ಒಳಗೆ ಒಂದೇ ಒಂದು ಸಾಲು ಇತ್ತು.
“ನೀವು ಮ್ಯೂಸ್ನ್ನು ನಿಲ್ಲಿಸಿದ್ದೀರಿ ಎಂದುಕೊAಡಿದ್ದೀರಿ. ಆದರೆ ಅನಿರುದ್ಧನನ್ನು ನೀವು ಕೊನೆಯದಾಗಿ ಭೇಟಿಯಾದ ದಿನದ ದಾಖಲೆ ಇನ್ನೂ ನಿಮ್ಮ ಹಳೆಯ ಕಡತದಲ್ಲಿದೆ. ಅದನ್ನು ತೆರೆಯಿರಿ. ಆದರೆ ಈ ಬಾರಿ ಕೊನೆಯಪುಟವನ್ನುಮಾತ್ರ ಓದಬೇಡಿ.”
ಇಮೇಲ್ನ ಕೊನೆಯಲ್ಲಿ ಯಾವುದೇ ಹೆಸರಾಗಲಿ, ಸಹಿಯಾಗಲಿ ಇರಲಿಲ್ಲ. ಆ ಸಂದೇಶ ಯಾವ ಇಮೇಲ್ ವಿಳಾಸದಿಂದ ಬಂದಿತ್ತು ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸಿದಾಗ, ಕಳುಹಿಸಿದವರ ಗುರುತನ್ನು ಮರೆಮಾಡಲಾಗಿರುವುದು ತಿಳಿಯಿತು.
ಈಶಾನ್ ಮತ್ತೆ ಇಮೇಲ್ ಓದಿದ.ತನ್ನ ಹಳೆಯ ಕಡತದಲ್ಲಿ ಕೊನೆಯ ದಿನದ ದಾಖಲೆ ಇನ್ನೂ ಇದೆ ಎಂಬುದನ್ನು ಕಳುಹಿಸಿದವರಿಗೆ ಹೇಗೆ ಗೊತ್ತು? ಅವನು ಅದನ್ನು ತೆರೆಯಬೇಕೇ? ಅಥವಾ ಇದು ಮ್ಯೂಸ್ನ ಮತ್ತೊಂದು ಪ್ರಯತ್ನವೇ? ಅವನ ಮುಂದೆ ಈಗ ಎರಡು ದಾರಿಗಳಿದ್ದವು. ಒಂದು ಈ ಎಲ್ಲವನ್ನೂ ನಿರ್ಲಕ್ಷಿಸಿ, ತನ್ನ ಬದುಕನ್ನು ಸಹಜ ಸ್ಥಿತಿಗೆ ಮರಳಿಸಲು ಪ್ರಯತ್ನಿಸುವುದು. ಇನ್ನೊಂದು ತನ್ನ ಬಾಲ್ಯದ ಅತ್ಯಂತ ಕತ್ತಲೆಯ ನೆನಪಿನೊಳಗೆ ಇಳಿದು, ಅಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವುದು.
ಈಶಾನ್ ಎರಡನೆಯ ದಾರಿಯನ್ನು ಆರಿಸಿಕೊಂಡ. ಆದರೆ ಈ ಬಾರಿ ಅವನು ಮ್ಯೂಸ್ನ ಮಾತುಗಳನ್ನು ನಂಬಿ ಮುಂದೆ ಸಾಗಲು ಬಯಸಲಿಲ್ಲ.ಅವನು ತನ್ನ ಹಳೆಯ ಕಡತಗಳನ್ನು ಪರಿಶೀಲಿಸಿ, ಪ್ರತಿಯೊಂದು ಮಾಹಿತಿಯನ್ನೂ ಸಾಕ್ಷಿಯೊಂದಿಗೆ ಹೋಲಿಸಿ, ಸತ್ಯವನ್ನು ತಾನೇ ಕಂಡುಕೊಳ್ಳಬೇಕೆ೦ದು ನಿರ್ಧರಿಸಿದ. ಅನಿರುದ್ಧನ ಬಗ್ಗೆ ಹುಡುಕಲು ಆರಂಭಿಸಿದ ಈ ಪ್ರಯತ್ನವೇ ಅವನನ್ನು ತನ್ನ ಬದುಕಿನ ಅತ್ಯಂತ ಅಪಾಯಕಾರಿ ಪ್ರಶ್ನೆಯ ಎದುರು ನಿಲ್ಲಿಸಲಿದೆ ಎಂಬುದು ಅವನಿಗೆ ಇನ್ನೂ ತಿಳಿದಿರಲಿಲ್ಲ.






0 Comments