ಭುವನೇಶ್ವರಿ ಹೆಗಡೆ ಅಂಕಣ ಆರಂಭ: ನಿಮ್ಮ ಭಂಡಾರದ ‘ಅವಧಿ’ ಮುಗಿದಿಲ್ಲ..

ರವಿ ಬೆಳಗೆರೆ ಒದಗಿಸಿದ ನೆನಪಿನ ಭಂಡಾರ

ಎಂಭತ್ತರ ದಶಕದ ಕೊನೆಯ ಭಾಗ. ನಾನಾಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಎಂ ಎ. ಓದಲು ಬಂದವಳು. ಉತ್ತರ ಕನ್ನಡದ ಅನೇಕ ಹುಡುಗಿಯರು ನನ್ನಂತೆ ಹಾಸ್ಟೆಲಿನಲ್ಲಿ ಇದ್ದುದು ನಮ್ಮದೊಂದು ಗುಂಪು ರೆಡಿಯಾಗಿತ್ತು.

ಶಿರಸಿಯ ನಮ್ಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು ಹಾಗೂ ನಾವು ಸೇರಿ ಕಟ್ಟಿದ ಸಾಹಿತ್ಯ ಬಳಗ ನನ್ನಲ್ಲಿ ಒಬ್ಬ ಭಾಷಣಕಾರಳನ್ನು ಹುಟ್ಟುಹಾಕಿತ್ತು. ಧಾರವಾಡದಲ್ಲಿಯೂ ಅದರ ವರಸೆ ಬಿಡದೆ ವಿಶ್ವವಿದ್ಯಾನಿಲಯ ಮಟ್ಟದ ಚರ್ಚಾ ಸ್ಪರ್ಧೆಗಳಿಗೆ ಹೆಸರು ಕೊಡುತ್ತಿದ್ದೆ.

ಒಂದಲ್ಲ ಹಲವು ಚರ್ಚಾಸ್ಪರ್ಧೆಗಳಲ್ಲಿ ನಾನು ಭಾಗವಹಿಸಿದೆ. ಆಗೆಲ್ಲ ರವಿ ಬೆಳೆಗೆರೆ ಎಂಬ ಹುಡುಗ ಪ್ರಥಮ ಪ್ರೈಸ್ ಪಡೆದು ಬಿಡುತ್ತಿದ್ದ. ಹಾಗೂ ನಾನು ಎರಡನೆಯ ಬಹುಮಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ವಿದ್ಯಾರ್ಥಿಗಳ ನಡುವೆ ಇರುವ ಹಿತವಾದ ಸಂಕೋಚ ಭರಿತ ಅಸೂಯೆ ಹಾಗೂ ಮೆಚ್ಚುಗೆಭರಿತ ಮಾತುಕತೆಗಳು ಆಗೀಗ ನಡೆಯುತ್ತಿದ್ದವು. ಹೀಗೆ ಪರಿಚಯವಾದವ ರವಿ ಬೆಳಗೆರೆ ಎಂಬ ದೈತ್ಯ ಪ್ರತಿಭೆ. ಉತ್ತಮ ಮಾತುಗಾರ ಎಷ್ಟೋ ಅಷ್ಟೇ ಉತ್ತಮ ಲೇಖನಿಯೂ ಅವನದಾಗಿತ್ತು ಎಂಬುದು ಕೆಲವೇ ದಿನಗಳಲ್ಲಿ ನಮಗೆ ಅರಿವಾಗಿತ್ತು.

ಮೊದಲನೇ ಸೆಮಿಸ್ಟರ್ ನಲ್ಲಿ ಉತ್ತರ ಕನ್ನಡದಿಂದ ಬಂದ ಅನೇಕ ಹುಡುಗಿಯರಿಗೆ ಇನ್ನು ಧಾರವಾಡದಲ್ಲಿ ವಿದ್ಯಾಭ್ಯಾಸ ಮುಂದುವರಿಸುವುದು ಬೇಡ ಎಂಬಂತಹ ಕಹಿ ಅನುಭವಗಳು ಅವರವರ ಡಿಪಾರ್ಟ್ಮೆಂಟಿನಲ್ಲಿ ಆದ ಪರಿಣಾಮ ಒಂದು ದಿನ ನಾವೆಲ್ಲ ಮರಳಿ ಮನೆಗೆ ಹೊರಟು ಬಿಡೋಣ ಎಂದು ತೀರ್ಮಾನಿಸಿ ಬಿಟ್ಟಿದ್ದೆವು. ಸೂಟ್ ಕೇಸ್ ತುಂಬಿ ಇನ್ನೇನು ಹಾಸ್ಟೆಲ್ ಗೆ ಬೈ ಹೇಳಬೇಕು ಎಂಬಷ್ಟಾದಾಗ ರವಿಬೆಳೆಗೆರೆ ತನ್ನ ಸ್ನೇಹಿತರೊಂದಿಗೆ ಆ ಕಡೆ ಬಂದವನು ನಮ್ಮೆಲ್ಲರನ್ನೂ ಉದ್ದೇಶಿಸಿ ಸೂಟ್ ಕೇಸ್ ಒಳಗೆ ಇಡ್ತೀರೋ ಇಲ್ಲೋ? ನಿಮಗೇನು ತಲೆಕೆಟ್ಟಿದೆಯಾ? ಮೇಷ್ಟ್ರುಗಳು ಮುಖ ಗಂಟಿಕ್ಕಿಕೊಂಡು ಇದ್ದರೇನಾಯಿತು.

ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನ ಈ ಸೌಂದರ್ಯ, ಈ ಹಸಿರು, ಸ್ನೇಹಿತರ ಕಲರವ ಇವನ್ನೆಲ್ಲ ಬಿಟ್ಟು ಮುಂದೆ ಪಶ್ಚಾತ್ತಾಪ ಪಡುವಂತೆ ಮಾಡಿಕೊಳ್ಳಬೇಡಿ. ನಡೀರಿ ಒಳಗೆ ಎಂದು ಸೂಟ್ ಕೇಸ್ ಸಮೇತ ನಮ್ಮನ್ನು ನಮ್ಮ ನಮ್ಮ ರೂಮುಗಳಿಗೆ ಅಟ್ಟಿ ಗಂಟೆಗಟ್ಟಲೆ ಸಮಾಧಾನದ ಮಾತುಗಳನ್ನು ಆಡಿದ್ದ. ಬಡತನದ ಕಷ್ಟ, ಅವಮಾನಗಳನ್ನು ಅನುಭವಿಸಿದವರಿಗೆ ಮಾತ್ರ ಅವಮಾನದ ನೋವು ಅರ್ಥವಾದೀತು ಎಂಬುದು ಆಗ ನಮಗೆ ಅರ್ಥವಾಗಿರಲಿಲ್ಲ.

ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವದ ಗುಣ ಇದ್ದುದರಿಂದಲೋ ಏನೋ ಸದಾ ರವಿಯ ಸುತ್ತ ಮುತ್ತ ಗೆಳೆಯ ಗೆಳತಿಯರ ದಂಡೇ ಇರುತ್ತಿತ್ತು. ಕ್ಯಾಂಪಸ್ಸಿನಲ್ಲಿರುವ ಗಂಡುಮಕ್ಕಳ ಅವನ ಹಾಸ್ಟೆಲ್ ನಲ್ಲಿ ನನ್ನ ಸಹಪಾಠಿಗಳೂ ಇದ್ದರು. ದಿನಕ್ಕೊಂದು ತಮಾಷೆಯ ಸುದ್ದಿಯನ್ನು ತರುತ್ತಿದ್ದರು. ರವೀ, ರವ್ಯಾ, ಬೆಳಗೆರೆ ಹೀಗೆಲ್ಲಾ ಸಂಬೋಧಿಸುವ ಸ್ನೇಹಿತರ ದಂಡು ರವಿ ಬೆಳಗೆರೆಯ ಜತೆಯಲ್ಲಿರುತ್ತಿತ್ತು. ಆಮೇಲೆ ವಿದ್ಯಾಭ್ಯಾಸ ಮುಗಿಸಿ ನಮ್ಮ ನಮ್ಮ ಉದ್ಯೋಗದ ಬೇಟೆ, ಮದುವೆ ಸಂಸಾರ ಮಕ್ಕಳು ಎಂದು ನಮ್ಮ ನಮ್ಮ ದಾರಿಗಳು ಬೇರೆ ಬೇರೆಯಾದವು. ರವಿ ಬೆಳಗೆರೆಯ ಸಂಪರ್ಕ ಕೆಲದಿನಗಳ ಮಟ್ಟಿಗೆ ತಪ್ಪಿಹೋಗಿತ್ತು.

ಅಷ್ಟರಲ್ಲಾಗಲೇ ನನ್ನ ಹಾಸ್ಯ ಲೇಖನಗಳು ಕನ್ನಡದ ಹೆಚ್ಚಿನ ಪತ್ರಿಕೆಗಳಲ್ಲಿ ಬರತೊಡಗಿದ್ದವು. ಒಂದು ದಿನ ಮುದ್ದಾದ ಅಕ್ಷರಗಳಲ್ಲಿ ‘ಕರ್ಮವೀರ’ ಕಚೇರಿಯಿಂದ ರವಿ ಬೆಳಗೆರೆಯ ಪತ್ರ ಬಂದಿತ್ತು. ಕರ್ಮವೀರ ವಿಶೇಷಾಂಕಕ್ಕೆ ಹಾಸ್ಯ ಲೇಖನ ಬರೆದು ಕೊಡು ಎಂದು ಆಗ್ರಹಿಸಿದ್ದನಲ್ಲದೆ ನಮ್ಮ ಕ್ಯಾಂಪಸ್ ವಿಷಯವನ್ನೇ ಬರೆದರಾಯ್ತು ಮಾರಾಯ್ತೀ ಎಂದೂ ಸೇರಿಸಿದ್ದ.

ಆ ಬಳಿಕವೂ ರವಿಬೆಳಗೆರೆ ವೃತ್ತಿಯನ್ನು ಬದಲಾವಣೆ ಮಾಡಿದ್ದು ‘ಹಾಯ್ ಬೆಂಗಳೂರ್’ ಪ್ರಾರಂಭಿಸಿ ತನ್ನದೇ ಆದ ಸಾಮ್ರಾಜ್ಯ ಕಟ್ಟಿ ವಿಸ್ತರಿಸುತ್ತ ಹೋಗಿದ್ದು ಎಲ್ಲವನ್ನೂ ದೂರದಿಂದಲೇ ಕೇಳಿ ತಿಳಿದುಕೊಳ್ಳುತ್ತಿದ್ದೆ. ಮಂಗಳೂರಿನತ್ತ ಬಂದಾಗ ನಮ್ಮಿಬ್ಬರಿಗೂ ಕ್ಲಾಸ್ ಮೇಟ್ ಆಗಿ ಡಿವೈಎಸ್ಪಿ ಆಗಿದ್ದ ಜಯಂತ್ ಶೆಟ್ಟಿ ಅವರನ್ನು ಭೇಟಿಯಾಗಿ ಬಳಿಕ ನನ್ನ ಮನೆಗೆ ಬಂದು ಒಂದರೆಗಳಿಗೆ ಕೂತು ಹೇಗಿದ್ದೀಯ ಭುವನಾ ಎಂದು ಕೇಳಿ ಸುಖದುಃಖದ ನಾಲ್ಕು ಮಾತಾಡಿ ಚಹಾ ಕುಡಿದು ಹೊರಡುತ್ತಿದ್ದ.

ಒಂದು ಬಾರಿ ಬಂದಾಗ ‘ತುಂಬಾ ಕುಡಿಯುತ್ತೀಯಂತೆ ಹೌದೇನೋ? ಕುಡಿದು ಕುಡಿದು ಸಾಯಬೇಡ ಕಣೋ’ ಎಂದು ಬೈದಿದ್ದೆ. ಮರುದಿನವೇ ತನ್ನ ಖಾಸ್ ಬಾತ್ನಲ್ಲಿ ನನ್ನ ಸಹಪಾಠಿ ಭುವನಾ ಹೀಗೆ ಬೈದಳು, ಕುಡಿಯುವುದನ್ನು ಬಿಟ್ಟೆ ಎಂದು ಅದೆಷ್ಟನೇ ಬಾರಿಯೋ ಎಂಬಂತೆ ಬರೆದುಕೊಂಡಿದ್ದ… ಬಹುಶಃ ಕುಡಿತ ಒಂದನ್ನು ಆತ ನಿಗ್ರಹಿಸಿಕೊಂಡಿದ್ದರೆ ಇನ್ನಷ್ಟು ವರ್ಷ ನಮ್ಮ ನಡುವೆ ಖಂಡಿತ ಇರುತ್ತಿದ್ದ. ನೋಡನೋಡುತ್ತಲೇ ಕುಡಿತ ಮತ್ತು ಸಿಗರೇಟ್ ಗಳು ಅವನನ್ನು ಇಂಚಿಂಚು ಕಬಳಿಸುತ್ತಲೇ ಹೋಗಿದ್ದವು. ಇದಾವುದರ ಪರಿವೆಯೆ ಇಲ್ಲದವನಂತೆ ಬರಗೂಳಿ ಎಂದು ಬರೆದುಕೊಂಡ ಪುಣ್ಯಾತ್ಮ ಬರೆಯುತ್ತಲೇ ಹೋದ. ರವಿಯ ವಾಗ್ದಾಳಿಗೆ ತುತ್ತಾಗಿ ಘಾಸಿಗೊಂಡ ಅದೆಷ್ಟೋ ಮನಸ್ಸುಗಳು ಅವನ ಕುರಿತು ದ್ವೇಷದ ಕಿಡಿಯನ್ನು ಹೊತ್ತಿಸಿಕೊಳ್ಳುತ್ತಲೇ ಇದ್ದವು. ಅವೆಲ್ಲವನ್ನೂ ಆತ ಎಂಜಾಯ್ ಮಾಡುತ್ತಿದ್ದನೇನೋ ಎಂಬಂತೆ ಅಂಥ ಉಪದ್ವ್ಯಾಪಗಳಿಗೆ ಕೈ ಹಾಕುತ್ತಲೇ ಇರುತ್ತಿದ್ದ.

ಕಳೆದೆರಡು ವರ್ಷಗಳಿಂದ ನಾನು ಬೆಂಗಳೂರಿಗೆ ಮಗಳ ಉದ್ಯೋಗದ ಸಲುವಾಗಿ ಆಗಾಗ ಹೋಗುತ್ತಿದ್ದಾಗ ಹಾಯ್ ಬೆಂಗಳೂರು ಕಚೇರಿಗೆ ಒಂದೆರಡು ಬಾರಿ ಹೋಗಿದ್ದೆ. ನಿನ್ನ ಶುಗರ್ ಲೆವಲ್ ಹೇಗಿದ್ಯೇ? ಇದೋ ನೋಡು ನನ್ನ ನೇರಳೆ ಹಣ್ಣಿನ ಕಷಾಯ ತೆಗೆದುಕೊಂಡು ಹೋಗಿ ಸೇವಿಸುತ್ತಿರು ಎಂದು ಆಫೀಸಿನಲ್ಲಿಯೇ ಇರಿಸಿಕೊಂಡಿದ್ದ ನೇರಳೆ ಕಷಾಯವನ್ನು ಕೊಟ್ಟಿದ್ದ. ನಾನು ಕಾಲು ಮುರಿದುಕೊಂಡು ಕುಂಟುತ್ತಲೇ ಅವನ ಕಛೇರಿಗೊಮ್ಮೆ ಹೋಗಿದ್ದಾಗ ಇನ್ನಿಲ್ಲದ ಅಕ್ಕರೆಯಿಂದ ಕಚೇರಿಯ ಮೆಟ್ಟಿಲ ತನಕ ಎದ್ದುಬಂದು ಬೀಳ್ಕೊಟ್ಟಿದ್ದ.

ನನ್ನ ಮಗಳು ತನ್ನ ತರಲೆ  ಸಮಸ್ಯೆ ಹೇಳಿ ‘ಅಂಕಲ್ ಅಮ್ಮನಿಗೆ ಸ್ವಲ್ಪ ಬುದ್ಧಿ ಹೇಳಿ’ ಎಂದಾಗೆಲ್ಲಾ ಆಯ್ತು ಮಗಳೇ ನಿನ್ನ ಅಮ್ಮನಿಗೆ ಬುದ್ಧಿ ಹೇಳೋಣ ಎಂದು ನನಗೆ ಚಿಕ್ಕ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೋ. ಅದು ಅರ್ಥಶಾಸ್ತ್ರಕ್ಕೆ ಸೇರಿದ್ದಲ್ಲ ಎಂದು ಬೈದಿದ್ದ. ಮೂಡುಬಿದಿರೆಯ ಕರ್ಣಾಟಕ ಸಂಘದವರು ರವಿ ಬೆಳಗೆರೆಗೆ ಶಿವರಾಮ ಕಾರಂತ ಪ್ರಶಸ್ತಿ ಕೊಟ್ಟಾಗ ದಕ್ಷಿಣ ಕನ್ನಡದಲ್ಲಿದ್ದ ನಮ್ಮ ಬ್ಯಾಚ್ ಮೇಟ್ ಗಳಲ್ಲಿ ಕೆಲವರನ್ನು ಅಲ್ಲಿಗೆ ಕರೆದಿದ್ದರು. ಅದೊಂದು ವಿಶಿಷ್ಟವಾದ ಸಮಾಗಮವಾಗಿತ್ತು. 

ಬೆಳಗೆರೆಗೆ ವೈರಿಗಳನ್ನು ಕಟ್ಟಿಕೊಳ್ಳುವಲ್ಲಿ ಇದ್ದ ಧಾರಾಳಿತನವೇ ಸ್ನೇಹಿತರನ್ನು ಪ್ರೀತಿಪಾತ್ರರನ್ನು ಮುಗ್ಧ ಮಗುವಿನಂತೆ ಪ್ರೀತಿಸುವಲ್ಲಿಯೂ ಇತ್ತು. ಅವನ ಗುಣ ಗೊತ್ತಿದ್ದವರೆಲ್ಲರೂ ಅವನ ದೋಷಗಳ ಸಮೇತ ಅವನನ್ನು ಪ್ರೀತಿಸುತ್ತಿದ್ದರು. ಇದು ರವಿಗೂ ಗೊತ್ತಿತ್ತು. ಎಂದೂ ತನ್ನ ಅಸಹಾಯಕ ತೆಯನ್ನು ಸ್ನೇಹಿತರೆದುರು ತೋಡಿಕೊಂಡವನಲ್ಲ. ಕೊರೋನಾ ಬಂದ ಬಳಿಕವಂತೂ ನಮಗೆಲ್ಲಾ ಎಚ್ಚರಿಕೆಯ ಮಾತುಗಳನ್ನು ಆಗಾಗ ಮೆಸೇಜ್ ಹಾಕುತ್ತಲೇ ಇದ್ದ. ಮನೆಯ ಕೆಳಗೆ ಇಳಿಯಲೇ ಬೇಡ ಎಂದೆಲ್ಲ ಖಡಕ್ ವಾರ್ನಿಂಗ್ ಇರುತ್ತಿತ್ತು.

ನಮ್ಮ ಇನ್ನೋರ್ವ ಸಹಪಾಠಿ ಗೋಕರ್ಣದ ಪ್ರಸಾದ್ ಭಟ್ ಹೃದಯಾಘಾತದಿಂದ ತೀರಿಕೊಂಡಾಗ ನಾನು ‘ರವಿ ಪ್ರಸಾದ್ ಭಟ್ ತೀರಿಕೊಂಡಿದ್ದಾನೆ ನಮ್ಮೆಲ್ಲರ ವ್ಯಾಲಿಡಿಟಿ ಮುಗಿಯುತ್ತಾ ಬಂತೆನೋ?’ ಎಂದೊಂದು ಮೆಸೇಜ್ ಹಾಕಿದ್ದೆ. ‘ಸುಮ್ಮನಿರಮ್ಮ ಚಂಡಾಲ ಸಾಹಿತಿಗಳನ್ನೆಲ್ಲ ಮೇಲಕ್ಕೆ ಅಟ್ಟಿದ ಮೇಲೇ ನಾನು ಮೇಲಕ್ಕೆ ಹೋಗೋದು ತಿಳಿದುಕೋ’ ಎಂದು ತಮಾಷೆ ಮಾಡಿದ್ದ.

ಕೊರೋನಾ ಅವತರಿಸುವ ಕೆಲವೇ ದಿನಗಳ ಮೊದಲು ಒಂದು ದಿನ ಎಲ್ಲರೂ ಹಾಯ್ ಬೆಂಗಳೂರು ಕಚೇರಿಗೆ ಬನ್ನಿ ಎಂದು ನಮಗೆ ಆಹ್ವಾನ  ಬಂತು. ಹಾಯ್ ಬೆಂಗಳೂರ್ ಸಂಸ್ಥೆಯ  ಸಿ.ಇ.ಓ.  ಉಮೇಶ್ ಹೆಗಡೆ  ಅವರ ಸಂಗಾತಿ ಗೆಳತಿ ವಿದ್ಯಾ ಭರತನಳ್ಳಿ ಅವರನ್ನೂ ಕರೆದು ಕೂಡಿಸಿಕೊಂಡಿದ್ದ. ಗಂಟೆಗಟ್ಟಲೆ ಮಾತಾಡಿ ಕಾಫಿ ಕುಡಿಯುತ್ತಾ ಸಿಗರೇಟ್ ಸೇದುತ್ತಾ ಜೀವನದ ತನ್ನೆಲ್ಲಾ ಅನುಭವಗಳನ್ನು ನಮ್ಮೆದುರು ಹಂಚಿಕೊಳ್ಳುತ್ತಾ ಕೆಲವೊಮ್ಮೆ ಭಾವುಕನಾಗಿ ಗದ್ಗದಿತನಾಗಿ ‘ಇನ್ನು ಸಾಕಪ್ಪಾ ನಾವು ನಮ್ಮ ಮನೆಗಳಿಗೆ ಹೋಗಬೇಕು ನೀನೇನೋ ಆಫೀಸಿನಲ್ಲಿಯೇ ಮನೆ ಮಾಡಿದ್ದೀಯಾ’ ಎಂದು ತಮಾಷೆ ಮಾಡುತ್ತಾ ನಾವು ಹೊರಟಿದ್ದೆವು. ಆಫೀಸಿನಲ್ಲಿದ್ದ ದರ್ಶನ್ ಹತ್ತಿರ ಫೋಟೋ ತೆಗೆಯೋ ಮಗೂ ಎಂದವನೇ ‘ನಮ್ಮ ‘ಓ ಮನಸೇ’ ಪತ್ರಿಕೆಗೆ ನಿನ್ನ ಅಂಕಣವನ್ನು ಪ್ರಾರಂಭಿಸು’ ಎಂದು ಒತ್ತಾಯಿಸಿ ಒಪ್ಪಿಸಿದ.

ಅಂಕಣಕ್ಕೆ ಹೆಸರೇನಿಡೋಣ ಎಂದು ಕೇಳಿದೆ. ನೋಡೋಣ ಮೊದಲು ಬರೆದು ಕಳಿಸು ಎನ್ನುತ್ತ ಅದೆಷ್ಟನೆಯದೋ ಸಿಗರೇಟು ತನ್ನ ತುಟಿಗಿಟ್ಟುಕೊಂಡಿದ್ದ. ನಾವೆಲ್ಲರೂ ಎದ್ದು ಮೆಟ್ಟಿಲಿಳಿದಿದ್ದೆವು. ಕಳಿಸಲು ಬಂದ ರವಿ ಮೇಲೇ ನಿಂತು, ‘ಭುವನ ಭಂಡಾರ’ ಎಂದು ಹೆಸರಿಡೋಣ ಕಣೆ ಎಂದೊಂದು ಉತ್ಸಾಹದ ಅರಚು ಹಾಕಿ ಬಿಟ್ಟ !ಸ್ನೇಹದ ದಾಕ್ಷಿಣ್ಯ ನನ್ನ ಕೈಲಿ ಇಪ್ಪತ್ತೈದು ಕಂತುಗಳಲ್ಲಿ ನನ್ನ ನೆನಪುಗಳನ್ನು ದಾಖಲಿಸಿ ಕೊಟ್ಟಿತ್ತು.

ಮಾಲಿಕೆ ಪೂರ್ತಿಗೊಂಡಾಗ ತನ್ನದೇ ಪ್ರಕಾಶನದಿಂದ ಪುಸ್ತಕ ಪ್ರಕಟಿಸೋಣವೆಂದೂ ಹೇಳಿದ್ದ. ಆದರೆ ಸ್ನೇಹಿತರೆಲ್ಲರಿಗೆ ಹಿತವಚನ ಹೇಳುತ್ತಿದ್ದ ತಾನು ಮಾತ್ರ ಅದೇಕೆ ಹೀಗೆ ದಿಢೀರನೆ ಎದ್ದು ಹೊರಟುಬಿಟ್ಟನೋ. ನಾವು ಭೆಟ್ಟಿಯಾದಾಗೆಲ್ಲ ಎಂದೂ ಅವನ ವೈಯಕ್ತಿಕ ವಿಷಯಗಳನ್ನು ಚರ್ಚಿಸಿದ್ದೇ ಇಲ್ಲ. ಅವನ ಭಾವುಕತೆಯ ಅರಿವಿದ್ದ ನಾವು ಆದಷ್ಟು ಧಾರವಾಡದಲ್ಲಿ ಎಂ ಎ. ಓದುತ್ತಾ ಇದ್ದಾಗಿನ ಕ್ಯಾಂಪಸ್ ಜೋಕುಗಳು ಸಾಹಿತಿಗಳ ಹುಚ್ಚಾಟಗಳು ಇತ್ಯಾದಿಗಳನ್ನು ಹೇಳಿಕೊಂಡು ನಗುತ್ತಾ ಕಾಫಿ ಕುಡಿದದ್ದೇ ಹೆಚ್ಚು.

ಉಳಿದವರ ವಿಷಯ ನನಗೆ ಗೊತ್ತಿಲ್ಲ ಅವರವರ ಅನುಭವಕ್ಕೆ ದಕ್ಕಿದ ರವಿ ಬೆಳೆಗೆರೆಯನ್ನು ಅವರವರು ಚಿತ್ರಿಸಿಯಾರು. ಆದರೆ ಸಹಪಾಠಿಯ ಸಲುಗೆಯಿಂದ ನಾನು ಬೈದಾಗೆಲ್ಲಾ ಬೈಸಿಕೊಂಡು ತುಂಟ ಹುಡುಗನಂತೆ ತಾನು ಮಾಡುವುದನ್ನು ಮಾಡುತ್ತಲೇ ಇದ್ದ ಈ ಮಗುವಿನಂಥ ಸ್ನೇಹಿತ ಮಾತ್ರ ಮತ್ತೆ ಸಿಗಲಾರ. ದಣಿವರಿಯದ ದುಡಿತದಿಂದಲೇ ವಿಶ್ರಾಂತಿಗೆ ಗಮನ ಕೊಡದೆ ತನ್ನ ಅಂತ್ಯವನ್ನು ತಾನೇ ಆಹ್ವಾನಿಸಿಕೊಂಡ ಈ ಸ್ನೇಹಿತ ರವಿ ಬೆಳೆಗೆರೆ ಪರ ಲೋಕದಲ್ಲಿಯಾದರೂ ಶಾಂತ ಮನಸ್ಕನಾಗಿ ಅವನಿಷ್ಟದ ಹಳೆ ಹಿಂದಿ ಹಾಡುಗಳನ್ನು ಕೇಳುತ್ತಾ ಪ್ರಕೃತಿ ವೀಕ್ಷಣೆ ಮಾಡುತ್ತಾ ನೆಮ್ಮದಿಯಿಂದಿರಲಿ ಎಂದು ಮನಸ್ಸು ಬಯಸುತ್ತದೆ.

ನವೆಂಬರ್ ಹದಿಮೂರರ ರಾತ್ರಿ ಭಾವನಾ ಬೆಳಗೆರೆ ‘ಅಪ್ಪಾ ನೋ ಮೋರ್ ‘ಎಂದೊಂದು ಮೆಸೇಜ್ ಹಾಕಿ ಜಂಘಾಬಲ ಉಡುಗಿಸಿಬಿಟ್ಟಳು.  ಸ್ನೇಹದ ಒಂದು ಕೊಂಡಿ ಕಳಚಿತ್ತು. ‘ಭುವನ ಭಂಡಾರಕ್ಕೆ ಬೀಗ’ ಬಿತ್ತು. 

ಜಿ.ಎನ್. ಮೋಹನ್ ಸಮಾರಂಭವೊಂದರಲ್ಲಿ ಸಿಕ್ಕವರು ನಿಮ್ಮ ಭಂಡಾರದ ‘ಅವಧಿ’ ಮೀರಿಲ್ಲ ನಮ್ಮಲ್ಲಿ ಮುಂದುವರಿಸೋಣವೇ? ಎಂದು ಕೇಳಿದಾಗ  ಭಂಡಾರದ ಬೀಗಕ್ಕೆ ಮತ್ತೆ ಕೈ ಇಕ್ಕುವ ಧೈರ್ಯ ಮಾಡಿದ್ದೇನೆ. ‘ಅವಧಿ’ಯ ಓದುಗರ ಬಳಗದ ಸ್ನೇಹ ವರ್ತುಲದೊಳಗೆ ‘ಭುವನದ ಭಾಗ್ಯ’ ಅರಳುವ ನಿರೀಕ್ಷೆಯೊಂದಿಗೆ….

| ಇನ್ನೂ ಮುಂದಿನ ವಾರಕ್ಕೆ |

‍ಲೇಖಕರು Admin

July 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಅಳಿದ ಗೆಳೆಯನ ಕುರಿತು ಅಭಿಮಾನದೊಡನೆ ವಾತ್ಸಲ್ಯ ಬೆರೆತ ಆರ್ದ್ರ ಬರಹವಿದು. ” ಭುವನೇಶ್ವರಿ ಭಾಗ್ಯ” ದಲ್ಲಿ ಏನೇನಿದೆಯೋ , ಕುತೂಹಲವಿದೆ.

    ಪ್ರತಿಕ್ರಿಯೆ
    • ರವಿ ಶಿವರಾಯಗೊಳ

      ರವಿ ಬೆಳಗೆರೆಯವರು,ಲಕ್ಷಾಂತರ‌ ಓದುಗರನ್ನು ಹುಟ್ಟು ಹಾಕಿದವರು ‌. ಗೆಳೆಯನ ಬಗ್ಗೆ ಆಪ್ತವಾದ ಲೇಖನ ತುಂಬಾ ಚೆನ್ನಾಗಿದೆ.

      ಪ್ರತಿಕ್ರಿಯೆ
  2. Shyamala Madhav

    ಭುವನದ ಭಾಗ್ಯಕ್ಕೆ ಪ್ರೀತಿಯ ಸ್ವಾಗತ, ಭುವನಾ. ತುಂಬಾ ಖುಶಿಯಾಯ್ತು, ನೀವು ಬಂದಿರೆಂದು. ಮುತ್ತಿನಂತಹ ಅಕ್ಷರಗಳ ಎರಡು ದೀರ್ಘ ಪತ್ರಗಳಿಂದ ನನ್ನ ಗೆಳೆಯನೂ ಆಗಿದ್ದ ರವಿ, ಮತ್ತೆ ಹಾಗೇಕಾದನೆಂದು ಅರಿಯಲಾಗದೆ ನಾನೇ ದೂರವಾಗಿದ್ದೆ. ಭಾಗ್ಯದ ಬಾಗಿಲು ಸದಾ ತೆರೆದಿರಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: