ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ಹೇಗೆ ಬರೆಯಲಿ ಕವಿತೆ?…

ಎಸ್ ಜಿ ಸಿದ್ದರಾಮಯ್ಯ

ನಾನು ಕವಿತೆ ಬರೆಯುವುದ ಬಿಟ್ಟು ಬಹಳ
ಕಾಲವಾಯಿತು ಗೆಳೆಯ.ರೂಪಕಗಳು ಸತ್ತು
ನುಡಿಗಟ್ಟುಗಳು ಉಸಿರು ಕಳೆದುಕೊಂಡಿವೆ
ಹೇಗೆ ಬರೆಯಲಿ ಕವಿತೆ?

ಭಯ ಆತಂಕ ಅನುಮಾನಗಳು ಅಬ್ಬರಿಸಿವೆ
ಹಾದಿ ಬೀದಿಗಳಲ್ಲಿ ಧರ್ಮಗಳು‌ ಕೇಕೆ ಹಾಕಿವೆ
ಪಡ್ಡೆಗಳು ಕೇಸರಿಯ ಅಡ್ಡದ ದಾಳಗಳಾಗಿವೆ
ಸುಳ್ಳುಗಳು ವೈಹಾಳಿಯಲಿ ಕೆನೆಯುತ್ತಿವೆ

ಕೂಡೊಟ್ಟಿನ ಕುಟುಂಬಗಳೆಲ್ಲ ಜಾಡುತಪ್ಪಿವೆ
ತೋಟತುಡಿಕೆಯ ಕುಡುಗೋಲು ಕೊಡಲಿಗಳು
ನಡುರಸ್ತೆಗೆ ಬಂದು ಗಬ್ಬರಿಸಿ ಠಳಾಯಿಸುತ್ತಿವೆ
ಸಂಬಂಧಗಳು ಸೋತು ಸೊರಗಿವೆ

ಕಲಿವ ಶಾಲೆಗಳಲ್ಲಿ ಕೇಸರಿ ಹಿಜಾಬುಗಳ ದ್ವೇಷ
ನಡೆವ ದಾರಿಗಳಲ್ಲಿ ಅಲ್ಲಾ ರಾಮರ ವಿದ್ವೇಷ
ಮಾತಿನ ಬೆಂಕಿಗೆ ಉರಿಯುತ್ತಿವೆ ಗುಡಿಸಲುಗಳು
ಕಾಣದ ಮುಖಗಳ ಕರಾಳ ನರ್ತನ

ಬರೆದ ಅಕ್ಷರಗಳು ಅರ್ಥವಿಲ್ಲದ ಬಣಗು
ಸೂತ್ರವಿಲ್ಲದ ಮಾತು ಪಾತ್ರವಿಲ್ಲದೆ ಹೋತು
ನೆಲ ಹತ್ತಿ ಉರಿಯುತಿದೆ ಜಲ ಬತ್ತಿ ಹೋಗುತಿದೆ
ಹೇಗೆ ಬರೆಯಲಿ ಕವಿತೆ ಹೇಳು ಗೆಳೆಯಾ?

‍ಲೇಖಕರು Admin

9 March, 2022

1 Comment

  1. T S SHRAVANA KUMARI

    ವಾಸ್ತವವನ್ನು ಬಿಂಬಿಸಿದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading