‘ಅಕ್ಕಯ್’ ಎಂಬ ಅದ್ಭುತ…

‘ಬಹುರೂಪಿ’ ಪ್ರಕಾಶನದ ‘ಅಕ್ಕಯ್’ ಪುಸ್ತಕದ ನಾಟಕ ರೂಪ

ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರದರ್ಶನ ಕುರಿತು ದಯಾ ಗಂಗನಗಟ್ಟ ಬರೆದಿರುವ ಲೇಖನ ಇಲ್ಲಿದೆ.

ದಯಾ ಗಂಗನಗಟ್ಟ

ಇದೊಂದು ಪ್ರಶ್ನೆ : ವಾಟ್ ಡು ಯು ಹ್ಯಾವ್ ? ಬಾಲ್ಸ್ ಆರ್ ಬ್ರೆಸ್ಟ್ ?
ಇದಕ್ಕೆ ಉತ್ತರ : ಎ ಹಾರ್ಟ್ …….
ಮೊನ್ನೆ ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಪ್ರಸಿದ್ಧ ನಟಿ ದೀಪಿಕಾ ಪಡುಕೋಣೆ “ನನ್ನ ಹದಿನೆಂಟನೇ ವಯಸ್ಸಿನಲ್ಲಿ ಓರ್ವ ವ್ಯಕ್ತಿ ನನಗೆ ಬ್ರೆಸ್ಟ್ ಸರ್ಜರಿ ಮಾಡಿಸಿಕೊಳ್ಳಲು ಹೇಳಿದ್ದ, ಅದು ನನ್ನನ್ನು ಖಿನ್ನತೆಗೆ ದೂಡಿತ್ತು” ಎಂದು ಕಣ್ಣೀರಾಗಿದ್ದಳು. ಹೌದು ಹೆಣ್ಣೊಬ್ಬಳಿಗೆ ಇಂತದ್ದೊಂದು ಸಲಹೆ ನಿಜಕ್ಕೂ ಹಿಂಸೆಯೆ, ಆಗ ನನಗೆ ಬಂದ ಒಂದೇ ಯೋಚನೆ, ಪ್ರತೀ ದಿನ ಪ್ರತೀ ಕ್ಷಣ ಇಂತಹ ಅಥವಾ ಇದಕ್ಕಿಂತಾ ಕ್ರೂರವಾದ ಪ್ರಶ್ನೆಗಳಿಗೆ ಎದೆಯೊಡ್ಡಿ ಜೀವತೇಯುವ ಭಿನ್ನಲಿಂಗಿಗಳ ಬದುಕು ಹೇಗಿರಬೇಡ?

“ನಾ ವೊ ಏಕ್ ಔರತ್ ಹೆ, ನ ಮರ್ದ್ ಹೆ!
ಅಪನೀ ಹಿ ಜಿಸ್ಮ್ ಮೆ ಕೈದ್ ಏಕ್ ದರ್ದ್ ಹೆ.”

ಮಾನವ ವಿಕಾಸದಲ್ಲಿ ಶತಮಾನಗಳು ಉರುಳಿದರೂ, ಸಮಾನತೆ, ಹಕ್ಕು, ಮಾನವೀಯ ಬದುಕು ಇತ್ಯಾದಿಗಳ ನೆಲೆಯಲ್ಲಿ ಇವತ್ತಿಗೂ ಹೆಣ್ಣು ತನ್ನ ಅಸ್ಮಿತೆಗಾಗಿ ಹೋರಾಡುತ್ತಲೇ ಇದ್ದಾಳೆ, ಪ್ರಕೃತಿ ಸಹಜವಾಗಿ ಹೆಣ್ಣಾಗಿ ಹುಟ್ಟಿದವರ ಹೋರಾಟವೇ ಇನ್ನೂ ತೆವಳುತ್ತಾ ಸಾಗುತ್ತಿದೆ, ಅಂತದ್ದರಲ್ಲಿ ಓರ್ವ ಗಂಡಾಗಿ ಹುಟ್ಟಿದ ಜೀವವೊಂದು ತನ್ನ ಅಂತರಂಗದ ತುಡಿತದ ದೆಸೆಯಿಂದ ಹೆಣ್ಣಾಗಿ ಬದಲಾಗಿ ತನ್ನ ಅಸ್ತಿತ್ವಕ್ಕಾಗಿ ಮತ್ತು ತನ್ನಂತವರ ಏಳ್ಗೆಗಾಗಿ ಹೋರಾಟ ನಡೆಸುವುದು ಇದೆಯಲ್ಲಾ ಈ ಹಾದಿ ಹೇಗಿರಬಹುದು!? ಸುಮ್ಮನೇ ಯೋಚಿಸಿದರೂ ಮೈ ಜುಮ್ಮೆನ್ನುತ್ತದೆ. ಇಂತಹಾ ಒಂದು ಮುಳ್ಳಿನ ಹಾದಿಯಲ್ಲಿ ದಿಟ್ಟ ಹೆಜ್ಜೆಗಳನ್ನು ಇಡುತ್ತಾ ಅದನ್ನು ಹೂಹಾದಿಯಾಗಿಸುವ ಪ್ರಯತ್ನ ಮಾಡಿದಾಕೆ‌ “ಅಕ್ಕಯ್ ಪದ್ಮಸಾಲಿ”.

ಭಾನುವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಶಿಳ್ಳೆ, ಚಪ್ಪಾಳೆ ಮತ್ತು ಒನ್ಸ್ಮೋರ್ ಎಂಬ ಸದ್ದಿನಿಂದ ತುಂಬಿಹೋದ ಮಾಂತ್ರಿಕ ವಾತಾವರಣ, ನೆರೆದಿದ್ದ ಅಷ್ಟೂ ಸಭಿಕರು ಕಣ್ಣೀರಾಗಿ ನಿಂತಿದ್ದರು, ನನ್ನ ಪಕ್ಕ ಕುಳಿತಿದ್ದ ಗೆಳೆಯನ ಹೃದಯದ ಬಡಿತ ನನಗೆ ಕೇಳುವಷ್ಟು ಜೋರಾಗಿತ್ತು, ಆ ಸಂಜೆ ತಮ್ಮ ಮೊದಲ ಸೋಲೋ ನಟನೆಯಲ್ಲಿ ನಾಟಕದ ಅಂತ್ಯದ ವರೆಗೂ ಮಿಂಚಿಗಿಂತಲೂ ಹೆಚ್ಚಾದ ಎನರ್ಜಿಯಲ್ಲಿ ಅಕ್ಕಯ್ ಎಂಬ ಅದ್ಭುತ ಜೀವದ ಬದುಕನ್ನ ತಾನೂ ಬದುಕಿ, ಎಲ್ಲರ ಎದೆಯಲ್ಲೂ ನೆಟ್ಟುಬಿಟ್ಟರು ನಯನಾ ಸೂಡ, ಅಲ್ಲಿ ಸಂಚರಿಸಿದ ಅಷ್ಟೂ ನೋವಿನ, ಆಶಾವಾದದ, ಗೆಲುವಿನ ಗಾಳಿಯ ಮೂಲ ಸೂತ್ರಧಾರಿ ಬೇಲೂರು ರಘುನಂದನ್.

“ನೋ, ನಾನು ಒಪ್ಪುವುದಿಲ್ಲ, ಇದು ಅನ್ಯಾಯ, ನಮಗೆ ನ್ಯಾಯ ಬೇಕು,” ಇಂತಹ ಯಾವ ಪದಗಳೂ ಬಹಳ ತೂಕವಾದವು ಮತ್ತು ಅಷ್ಟೇ ಶಕ್ತಿಯುತವಾದವು. ಆದರೆ ಬರೆದಷ್ಟು ಸುಲಭವಾಗಿ ಆಡಲಾಗದವು. ಅಂತಹ ಮಾತುಗಳನ್ನೇ ಜೀವನದುದ್ದಕ್ಕೂ ಆಡಲೇ ಬೇಕಾದ ಅನಿವಾರ್ಯತೆ ಅಕ್ಕಯ್  ಅವರದ್ದು. ಬದುಕು ತಾನಾಗೇ ನೀಡಿರುವ ಎಲ್ಲ ಸವಲತ್ತುಗಳ ನಡುವೆಯೂ ಇನ್ನೇನೋ ದಕ್ಕಲಿಲ್ಲ ಎಂದು ಅಲವತ್ತುಕೊಳ್ಳುವ ನಾನು ಮತ್ತು ನನ್ನಂತವರು ಅವತ್ತು ನಾಚಿಕೆಯಿಂದ ತಲೆ ತಗ್ಗಿಸಿದ್ದು ಸುಳ್ಳಲ್ಲ.

ಹಾಲು ಕುಡಿವ ಪುಟ್ಟ ಮಗುವನ್ನು ಇಟ್ಟುಕೊಂಡು, ಇನ್ನೂ ಸೂಕ್ಷ್ಮವಾಗಿರುವ ದೇಹದಲ್ಲೇ ಮೂರೇ ಮೂರು ತಿಂಗಳ ತಾಲೀನಿನಲ್ಲಿ ಅಕ್ಕಯ್ ಆಗಿ ಪರಕಾಯ ಪ್ರವೇಶ ಮಾಡಿದ ನಯನಾ ಸ್ಟೇಜಿನ ತುಂಬಾ ಅಷ್ಟೇ ಏಕೆ ಇಡೀ ಹಾಲಿನ ತುಂಬಾ‌ ಅಕ್ಕಯ್ ಎಂಬ ಪರಿಮಳವನ್ನು ಹರಡಿಬಿಟ್ಟರು, ಬಣ್ಣ ಬಣ್ಣದ ಬಟ್ಟೆಯ ನೂಲುಗಳಿಂದ ಹೆಣೆದ ಹಗ್ಗದಂತಹ ಚಂದದ ಪರಿಕರ ವೊಂದನ್ನು ಹಲವು ರೂಪಕವಾಗಿ ಬಳಸಿಕೊಂಡು, ಜಿಂಕೆಯಂತೆ ಓಡಾಡಿ, ಗಾಯಗೊಂಡ ಆಕಳಂತೆ ತೆವಳಿ, ಸಿಂಹಿಣಿಯಂತೆ ಗುಡುಗಿ, ಆನೆಯಂತೆ ಗಂಭೀರವಾಗಿ ನಡೆದು, ಕೊನೆಗೆ ಅಂಬೇಡ್ಕರ್ ರಂತೆ ಎತ್ತರದಲ್ಲಿ ನಿಂತ ನಯನಾ ಎಲ್ಲರ ಎದೆಯಲ್ಲೂ ಬಹಳಾ ಎತ್ತರದ ಜಾಗವನ್ನ ಗಿಟ್ಟಿಸಿಕೊಂಡು ಬಿಟ್ಟರು.

ನಾಟಕ ನೋಡುತ್ತಾ ನೋಡುತ್ತಾ ನನ್ನೊಳಗೆ ಅರ್ಧನಾರೀಶ್ವರ, ಮೋಹಿನಿ, ಬಾರ್ಬರೀಕ,ಇರಾವಣಾ,ಶಿಕಂಡಿ,ಬೃಹನ್ನಳೆ ಎಲ್ಲರೂ ನಯನಾಳ ಆಕಾರದಲ್ಲಿ ಸುಳಿಯುತ್ತಾ ಹೋದರು. ರಘುನಂದನ್ ರವರು ಇಡೀ ಸಮುದಾಯದ ಪರವಾಗಿ ಏನೆಲ್ಲಾ ಹೇಳಬೇಕಾಗಿತ್ತೋ ಅಷ್ಟನ್ನೂ ತಮ್ಮ ನಾಟಕದ ಸಾಲುಗಳಲ್ಲಿ ತಂದಿರುವ ರೀತಿ ಹೆಮ್ಮೆ ಪಡುವಂತದ್ದು, ಅವರ ಸತ್ವಯುತ ಸಾಲುಗಳಲ್ಲಿ “ಜೆಫ್ರಿ ಯುಜೆನೈಡ್ಸ್” ಅವರ ಪುಲಿಟ್ಜೆರ್ ಪ್ರಶಸ್ತಿ ವಿಜೇತ ಕಾದಂಬರಿ “ಮಿಡಲ್ಸೆಕ್ಸ್” ನ ಸಾಲುಗಳಿಗಿಂತಲೂ ಹೆಚ್ಚಿನ ಶಕ್ತಿ ಇತ್ತು. ನಾನು ಯಾವಾಗಲೋ ನೋಡಿದ್ದ ಸ್ಪ್ಯಾನಿಷ್ ಭಾಷೆಯ ಚಲನಚಿತ್ರ XXY 2007 ನೆನಪಾಯ್ತು. ಈ ಮೂವರು ಮತ್ತು ಸಂಗೀತ ನಿರ್ದೇಶಕ ರಾಜು ಅವರು ಕೊಟ್ಟ ಸಂಗೀತ ದ ಕೆಮೆಸ್ಟ್ರಿ ಇಡೀ ನಾಟಕವನ್ನು ಅವತ್ತು ಗೆಲ್ಲಿಸಿ ಬಿಟ್ಟಿತು.

ಸೌತ್ ಏಷಿಯಾದ ಭಾಗದಲ್ಲಿ ತಮ್ಮ ಉಡುಪು ಹಾಗೂ ಜೀವಿನ ಶೈಲಿಯ ದೆಸೆಯಿಂದ ಭಿನ್ನ ಲಿಂಗಿಗಳ ಬದುಕು ದುಸ್ತರ, ಇಲ್ಲಿ ಉಡುಪಿನ ಆದಾರದ ಮೇಲೆ ಇವರು ಬಹಳ ಬೇಗ ಗುರುತಿಸಲ್ಪಡುತ್ತಾರೆ. ಗಂಡು ಅಥವಾ ಹೆಣ್ಣು ಹೀಗೇ ಬದುಕಬೇಕು ಎಂಬ ದೋರಣೆಯ ಕಾರಣದಿಂದ ಶೋಷಣೆಗೆ ತುತ್ತಾಗುತ್ತಾರೆ. ಪ್ರತಿಯೊಬ್ಬ ಪುರುಷನಲ್ಲೂ ಮಹಿಳೆಯ ವರ್ಣತಂತುಗಳು (chromosome) ಇದ್ದೇ ಇರುತ್ತದೆ, ಅದೇ ರೀತಿ ಮಹಿಳೆಯರಲ್ಲೂ ಪುರುಷನ ವರ್ಣತಂತುಗಳು ಇರುತ್ತವೆ.

ಯಾವುದು ಮೇಲುಗೈ ಸಾದಿಸುವುದೋ ಅದು ಆಯಾ ವ್ಯಕ್ತಿಯ ಗುಣದೋಷಗಳಾಗಿ ನಮಗೆ ಯಾಕಾದರೂ ತೋರಬೇಕು ಎಂಬಂತ ಹಲವು ಪ್ರಶ್ನೆಗಳಿಂದ ಕೂಡಿದ ಈ ನಾಟಕವು ಸಂವಿಧಾನ ಮತ್ತು ನ್ಯಾಯಾಲಯದ ನಿರ್ಧಾರಗಳು ಇವರಿಗೆ ತಂದು ಕೊಟ್ಟ ಧೈರ್ಯವನ್ನ ವ್ಯಕ್ತಪಡಿಸುವಾಗ ಮತ್ತು ಹೋರಾಟದ ಕತೆಯನ್ನು ಕಟ್ಟಿಕೊಡುವಾಗ ಸ್ವಲ್ಪ ವಾಚ್ಯ ಅನಿಸಿತು ಆದರೆ ಮೊದಲ ಪ್ರಯತ್ನಕ್ಕೆ ಅದೇನೂ ಅಂತಾ ಮುಖ್ಯವಲ್ಲ.

ಮುಂದಿನ ಪ್ರಸ್ತುತಿಗಳಲ್ಲಿ ಮಾಗಿಸುವ ಶಕ್ತಿ ನಮ್ಮ ರಘುನಂದನ್ ರವರಿಗೆ ಇದ್ದೇ ಇದೆ. ಒಂದಂತು ಸ್ಪಷ್ಟ, ಈ ಸಮುದಾಯಕ್ಕಾಗಿ ದನಿಯೆತ್ತುವ ಅಕ್ಕಯ್ ಅಂತವರು ಮುನ್ನೆಲೆಗೆ ನುಗ್ಗಿ ಬರಬೇಕಿದೆ, ಇಂತಹ ನಾಟಕದ ಪ್ರದರ್ಶನ ಹೆಚ್ಚು ಹೆಚ್ಚು ಆಗಬೇಕಿದೆ, ಆ ಮೂಲಕವಾದರೂ ನಮ್ಮ ಇದುವರೆಗಿನ ತಪ್ಪು ನಡವಳಿಕೆಗೆ ಗಿಲ್ಟ್ ಒಂದು ಎದೆಯಲ್ಲಿ ಮೂಡಲೇಬೇಕಿದೆ, ಎಲ್ಲಕ್ಕೂ ಮುಖ್ಯವಾಗಿ ಅವರೂ ನಮ್ಮಂತೆ ಬದುಕಬೇಕಿದೆ. ಅಕ್ಕಯ್ ಎಂಬ ಪುಸ್ತಕ ಬರದೇ ಹೋಗಿದ್ದರೆ ಈ ನಾಟಕ ಇಷ್ಟು ಸುಲಭಕ್ಕೆ ಸಿಕ್ಕುತ್ತಿರಲಿಲ್ಲವೇನೋ… ಬಹುರೂಪಿ ಪ್ರಕಾಶನ ಇಂತಹದೊಂದು ಪುಸ್ತಕ ಮಾಡಿದಾಗಲೇ ಇದಕ್ಕೊಂದು ಈ ರೀತಿಯ ಚಾಲನೆ ಸಿಕ್ಕಿಬಿಟ್ಟಿತ್ತು.

ಅದರ ಜೊತೆಗೆ ಅಕ್ಕಯ್ ಟ್ರಾನ್ಸ್ ಲೋಕದ ಹೋರಾಟಗಾರ್ತಿ. ಆಕೆಗೆ ಈ ಸಮಾಜದ ಬಗ್ಗೆ ಮಾತನಾಡಲಿಕ್ಕಿದೆ ಎಂಬ ಅಂಶ ಕೂಡ ಈ ವಸ್ತುವನ್ನು ಮುನ್ನೆಲೆಗೆ ತರಲು ಸಾಕಷ್ಟು ಶ್ರಮ ವಹಿಸಿದೆ. 

‍ಲೇಖಕರು Admin

March 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: