ಎಚ್ ಆರ್ ರಮೇಶ ಓದಿದ ʼಎದೆ ಹಾಲಿನ ಪಾಳಿʼ

ಭಾಷೆಯ ವಕ್ರತೆ ಮತ್ತು ನೇರ ವ್ಯಂಗ್ಯತೆಗಳ ನಡುವೆ ಕವಿತೆ

ಎಚ್ ಆರ್ ರಮೇಶ

ಇವು ದುಃಖವನ್ನು ಹೇಳಿಕೊಳ್ಳುವ ಕವಿತೆಗಳು. ಹಾಗಂತ ಕವಿ ಈ ಸಂಕಲನದ ಮೊದಲಿಗೆ ಎಪಿಗ್ರಾಫ್ ಥರ ಇರುವ ಕವಿತೆಯಲ್ಲಿ ಘೋಷಿಸುತ್ತಾರೆ. ಕವಿತೆಯೆಂದರೆ ಅದು ದುಃಖಕ್ಕೆ ಮಾತ್ರ ಮೀಸಲು ಎಂದು ಹೇಳಲು ಕವಿತೆಯ ಮೂಲಕವೇ ಸಮರ್ಥಿಸಿಕೊಳ್ಳುತ್ತಾರೆ. ಆ ಕವಿತೆ ಹೀಗಿದೆ: ನನಗಿಂತ ಮೊದಲು ಕತ್ತಲು ಹುಟ್ಟಿತು/ಅದಕ್ಕೆ ಸಾವು ಎಂದು ಕೂಗಲಾಯಿತು/ ನನಗಿಂತ ಮೊದಲು ಬೆಳಕು ಹುಟ್ಟಿತು/ ಅದಕ್ಕೆ ಸೂರ್ಯ ಎಂದು ನಮಿಸಲಾಯಿತು/ ನನಗಿಂತ ಮೊದಲು ಪ್ರೀತಿ ಹುಟ್ಟಿತು/ಅದಕ್ಕೆ ಭೂಮಿ ಎಂದು ಪೂಜಿಸಲಾಯಿತು/ ನನಗಿಂತ ಮೊದಲು ನನ್ನ ಕಣ್ಣೀರು ಹುಟ್ಟಿತು/ಅದಕ್ಕೆ ಕವಿತೆ ಎಂದು ಹೆಸರಿಡಲಾಯಿತು.

ಈ ಕವಿತೆ ತುಸು ರೆಟಾರಿಕ್ ಎಂದು ಎನ್ನಿಸಿದರು ಸೊಗಸಾಗಿದೆ. ಕವಿಯೊಬ್ಬ ಹೇಳಬಹುದಾದ ಪರಿಶುದ್ಧ ಕಾವ್ಯಾತ್ಮಕ ಸಾಲುಗಳು. ಬಳಸಲಾಗಿರುವ ಹೋಲಿಕೆಗಳು ಅಚ್ಚ ಹೊಸಥರ ಅನ್ನಿಸದಿದ್ದರೂ ಟರ‍್ರಿಈಗಲ್ಟನ್ ಹೇಳುತ್ತಾನಲ್ಲ ಕವಿತೆಯೆಂದರೆ ಅಥವಾ ಸಾಹಿತ್ಯವೆಂದರೆ ಅದು ತೀರಾ ಸಾಮಾನ್ಯವಾಗಿರುವುದನ್ನು ಅಸಮಾನ್ಯವಾಗಿ ಹೇಳುವುದು ರೂಪಕಗಳನ್ನು ಬಳಸಿಕೊಂಡು. ತುಂಬಾ ತೀವ್ರವಾದಂತಹ ಓದನ್ನು ಈ ಕವಿತೆಗೆ ಕೊಟ್ಟರೆ ಪ್ರತಿ ದ್ವಿಪದಿಗಳ ನಡುವೆ ತಾರ್ಕಿಕವಾದ ಅಥವಾ ಆರ್ಗ್ಯಾನಿಕ್ ಆದಂತಹ ಬಂಧವಿಲ್ಲ ಎನ್ನುವುದು ಕಂಡು ಬರುತ್ತದೆ. ಆದರೆ ಈ. ಎಂ. ಫಾಸ್ಟರ್ ಹೇಳುವ ರೀತಿ ಕವಿಗಳು ಮಾಡುವುದು ಜಸ್ಟ ಕನೆಕ್ಟಿಂಗ್.

ಬಂಧವನ್ನು ಕಲ್ಪಿಸುವುದಕ್ಕಾಗಿಯೇ ಸಮುದ್ರದ ಉಪ್ಪು ಮತ್ತು ನೆಲ್ಲಿಕಾಯಿಯನ್ನು ಬೆರೆಸಿದಂತೆ ಕವಿ ಆರಿಫ್ ಇಲ್ಲಿ ಸಾವು, ಬೆಳಕು, ಕತ್ತಲು, ಭೂಮಿ, ಸೂರ್ಯ, ಕವಿತೆ, ಕಣ್ಣೀರು, ಪ್ರೀತಿ ಗಳ ನಡುವೆ ಬೆಸುಗೆಯನ್ನು ಮಾಡಿದ್ದಾರೆ. ಬದುಕಿನಲ್ಲಿ ದುಃಖ ಇರುವುದು ಕಟು ಸತ್ಯ. ಆದರೆ ಅದೊಂದೆ ಇಲ್ಲವಲ್ಲ ಇಲ್ಲಿ! ಆದರೆ ಕವಿಯ ಈ ಮೊದಲ ಕವಿತೆ ಹೇಳುವುದು ಕವಿಯ ಅಭಿವ್ಯಕ್ತಿಯ ಧಾತುವನ್ನು. ಆ ಧಾತು ದುಃಖ. ಆ ದುಃಖ ಸಾಂದ್ರವಾಗಿದೆಯಾ, ತುಂಬಾ ಇಂಟೆನ್ಸಿವ್ ಆಗಿ ಭಾಷೆಯಲ್ಲಿ ಮೂಡಿಬಂದಿದೆಯಾ ಎಂದರೆ ಅದು ಖಂಡಿತ ಸಾಧ್ಯವಾಗುತ್ತಿತ್ತೇನೋ ಕವಿ ಭಾಷೆಯ ಲಾಕ್ಷಣಿಕತೆಯನ್ನು ಸ್ವಲ್ಪ ತಡೆಹಿಡಿದು ಕೊಂಡಿದ್ದಿದ್ದರೆ.

ತನ್ನ ಭಾಷಾ ವಾಗ್ಝರಿಯಲ್ಲಿ ವ್ಯಂಗ್ಯವು ಬೆರೆತು ಕವಿಯ ಸಂವೇದನೆಗೆ ಮತ್ತು ಸೂಕ್ಷ್ಮತೆಗೆ ಮಂಕು ಕವಿಯುವಂತೆ ಮಾಡಿದ್ಧಾವೆ. ಇದು ಸಹಜವೇ. ಯಾಕಂದರೆ ಬರಹಗಾರರಿಗೆ ಭಾಷೆಯಷ್ಟು ಯಾವುದೂ ಯಾಮಾರಿಸಲಾರದೇನೋ! ಅದರ ಆಕರ್ಷಣೆಗೆ ಮಾರುಹೋಗದೆ, ಅದು ಕೊಡುವ ತೀವ್ರತೆಗೆ ವಿಚಲಿತರಾಗದಿದ್ದರೆ ಬರಹ ತನ್ನ ಒಡಲಲ್ಲಿ ಅನುಭವದ ಸಾಂದ್ರತೆ ಮತ್ತು ಆರ್ದ್ರತೆಯನ್ನು ಕಾಪಾಡಿಕೊಳ್ಳುತ್ತದೆ ಮತ್ತು ತನ್ನೊಳಗೇ ಎಂತಹ ಟೀಕೆಗಳು ಬಂದರೂ ಅವುಗಳನ್ನು ಎದುರಿಸಿಕೊಂಡು ಕಾಲದ ಜೊತೆ ಸಾಗುವ ಚೈತನ್ಯವನ್ನು ಪಡೆದುಕೊಳ್ಳುತ್ತದೆ.

ಕವಿ ಫಿಲಾಸಪರ್ ಅಲ್ಲ, ಯಾಕೆಂದರೆ ಅವನು/ಳು ಲಾಜಿಕ್ಕಿಗೆ ಗಂಟು ಬೀಳುವುದಿಲ್ಲ. ಅವನ/ಳದು ರೂಪಕಗಳ ಮೂಲಕ ಧ್ವನಿಪೂರ್ಣವಾದ ಅರ್ಥಗಳನ್ನು ಹೊಮ್ಮಿಸುವವನು/ಳು. ಕವಿ ಅಥವಾ ಕಲಾವಿದ ಸತ್ಯದ ಅಸ್ಪಷ್ಟತೆಯನ್ನು ಅರಿಯಲು ವಾಸ್ತವದಲ್ಲಿ ಕಾಲೂರಿ, ಕಲ್ಪನೆಯ ರೆಕ್ಕೆಕಟ್ಟಿಕೊಂಡು ಹಾರುವ ಪ್ರಯತ್ನವಾಗಿದೆ. ಮತ್ತು, ನಿಖರತೆಗಿಂತ ಅಸ್ಪಷ್ಟತೆಯಲ್ಲಿಯೇ ಸತ್ಯದ ರೂಪವನ್ನು ಕಾಣಲು ಇಷ್ಟಪಡುವುದಾಗಿದೆ. ಆರಿಫ್ ಸಂಕಲನದ ಉದ್ದಕ್ಕೂ ಈ ಪ್ರಯತ್ನವನ್ನು ಮಾಡಿದ್ದಾರೆ.

ಒಮ್ಮೊಮ್ಮೊ ಸ್ಪಷ್ಟವಾಗಿ ಹೇಳುತ್ತ ತನ್ನ ಕವಿತೆಯನ್ನು ಇತಿಹಾಸದಂತೆ ಮತ್ತು ಪತ್ರಿಕಾ ವರದಿಯಂತೆ ಮಾಡುತ್ತಾರೆ. ಅದು ಹೇಗೆ ಅಂದರೆ ದೇಶದಲ್ಲಿ ನಡೆಯುತ್ತಿರುವ ದಿನನಿತ್ಯದ ವಿದ್ಯಮಾನಗಳನ್ನು ಒಂದೇ ಗುಟುಕಿನಲ್ಲಿ ಹೀರಿಕೊಂಡು ತನ್ನ ಕವಿತೆಯಲ್ಲಿ ತುಂಬಿಸುವಂತೆ ಮಾಡುತ್ತಾರೆ. ಪಂಚನಾಮೆ ವರದಿ, ರೂಪಕಗಳ ಕೊಲುದಾಣ ಮತ್ತಿತರೆ ಕವಿತೆಗಳು.

ದೇವರಿಗೆ ಬಿದ್ದ ಕನಸು ಎನ್ನುವ ಕವಿತೆ ವಿಲಕ್ಷಣವಾಗಿ ಲಕ್ಷಣವಾಗಿ ಚೆನ್ನಾಗಿದೆ. ಇಡೀ ಕವಿತೆಯ ಉದ್ದಕ್ಕೂ ಕವಿ ಇಲ್ಲಿ ಯಾವುದೂ ಸರಿ ಇಲ್ಲ, ಇಲ್ಲಿ ಅಸಮಾನತೆ ಮತ್ತು ಇನ್ನೇನೇನೋ ಮನುಷ್ಯನ ಬದುಕನ್ನು ಅದ್ವಾನ ಆಗುತ್ತಿದೆ ಎಂದು ಹೇಳುತ್ತ ಸಾವನ್ನು ಮಧ್ಯದಲ್ಲಿ ತರುತ್ತಾನೆ ಇಲ್ಲಿಯ ನಿರೂಪಕ. ಹೋಲಿಕೆ ಅಸಂಮಜಸ ಅನ್ನಿಸುತ್ತದೆ. ಕವಿಯಾದವನು ಅಸಮಂಜಸತೆಯಲ್ಲಿಯೇ ಸಮಂಜಸತೆಯನ್ನು ತರುತ್ತಾನೆ. ಅದು ಬೇರೆ ಮಾತು ಇರಲಿ. ಆದರೆ ಇಲ್ಲಿ ಕವಿಯ ಹೋಲಿಕೆಗಳನ್ನು ಪ್ರಶ್ನಿಸದೆ ಮುಂದಕ್ಕೆ ಹೋಗಲು ಸಾಧ್ಯವೇ ಆಗುವುದಿಲ್ಲ.

ಸಾವು ಮಳೆಯಂತಲ್ಲ/ ಎಲ್ಲರ ಮೇಲೂ ಅದರ ಕರುಣೆ/ಸಮಾನವಲ್ಲ ಎಂದು ಹೇಳುವ ಕವಿ, ಮಳೆ ಬೇಧಭಾವ ಮಾಡುವುದಿಲ್ಲ ಅದು ಎಲ್ಲವನ್ನೂ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ ಎಂದು ಹೇಳುತ್ತಾರೆ. ಅದು ಹೇಗೆ? ಅಲ್ಲದೆ ಸಾವು ರಣಬಿಸಿಲಿನಂತಲ್ಲ, ಕತ್ತಲಿನಂತೆ ಅಲ್ಲ ಬೆಳಕು ಅಲ್ಲ ಎಂದು ಅದಕ್ಕೆ ಒಂದು ವ್ಯಕ್ತಿತ್ವನ್ನು ರೂಪಿಸಿ, ಅದನ್ನು ಮುಂದೆ ಸಾವಿನ ಬಗ್ಗೆ ಹೇಳುವ ಸಂಗತಿಗೆ ಸಮರ್ಥನೆಗೆ ಬಳಸಿಕೊಳ್ಳುತ್ತಾರೆ. ಅಥವಾ ಅದು ಆ ರೀತಿ ಕಾಣುತ್ತದೆ. ಕೊನೆಗೆ ಈ ಕವಿತೆಯಲ್ಲಿ ಕವಿಯ ಸಾವಿನ ಕುರಿತು ಮಾತುಗಳನ್ನೇ ಕೇಳುತ್ತೇವೆಯೇ ಹೊರತು ಕವಿತೆ ಮಾಡಿಸಬಹುದಾದ ದರ್ಶನವನ್ನು ಇದು ಮಾಡಿಸುವುದಿಲ್ಲ. ಆದರೂ ಈ ಕವಿತೆಯಲ್ಲಿ ಕೆಲವು ಆಕರ್ಷಕ ಸಾಲುಗಳೂ ಇದ್ದಾವೆ. ಅವು ಯಾವುವು ಈ ಕವಿತೆಯನ್ನು ಒಂದು ಮಹೋನ್ನತವಾದ ಎತ್ತರಕ್ಕೆ ಒಯ್ಯುವುದಿಲ್ಲ: ಹೌದು /ಸತ್ತಾದ ಮೇಲೆ ನಾವು/ ದೇವರಿಗೆ ಬಿದ್ದ ಕನಸು.

ಕೊನೆಯಲ್ಲಿ ಗಮನಿಸಬಹುದಾದ ಸಂಗತಿ ಎಂದರೆ ಸಾವು ಬೆಳಕಂತೂ ಖಂಡಿತ ಅಲ್ಲ/ ಸಾವು ಸಾವೇ ಎಂದು ಮೊದಲಿಗೆ ಹೇಳಿದ್ದ ಕವಿ ಮತ್ತೇ ಆ ಬೆಳಕಿನ ಬೀಜ ಯಾವುದೋ/ ಹೊಕ್ಕಳು ಬಳ್ಳಿಯ ಹೂವಾಗಿ ಅರಳುವ ತನಕವಷ್ಟೇ/ ಅಲ್ಪವಿರಾಮ ಎಂದು ಏಕದಮ್ಮ್ ಉಲ್ಟಾ ಹೊಡೆಯುತ್ತಾನೆ ತಾತ್ವಿಕವಾದಂತಹ ಸಾಲುಗಳನ್ನು ಬರೆದು. ಹಾಗಾಗಿ ಈ ಕವಿತೆ ಸಾವಿನ ಸಾಂದ್ರವಾದಂಥಹ ಅಭಿವ್ಯಕ್ತಿಯನ್ನು ಒಳಗೊಳ್ಳದೆ ಸಾವನ್ನು ಒಂದು ಚರ್ಚಾ ವಿಷಯವನ್ನಾಗಿ ಮಾಡಿಕೊಂಡು ಮಂಡಿಸಿದಂತಿದೆ.

ನನ್ನ ಹಾಸಿಗೆಯೊಂದು ಕಸಾಯಿಖಾನೆ ಕವಿತೆ ವಿಲಕ್ಷಣ ಸ್ವಗತದಂತಿದೆ. ಈ ಕವಿತೆಯಲ್ಲಿ ಹೆಣ್ಣೊಬ್ಬಳ ಆಕ್ರೋಷ ಸಿಟ್ಟು ಪುರುಷಾಧಿಕಾರದ ಅಹಮ್ಮನ್ನು ತೀವ್ರವಾಗಿ ಟೀಕಿಸಿದೆ. ಇದು ಆರಿಫ್ ರಾಜ ಬರೆದಿರುವ ಭೂಮಿಗೀತ! ಅಲ್ಲಮ ಪ್ರಭುಗಳ ವಚನವನ್ನು ನೆನಪಿಸುವ ಕೆಲವು ಸಾಲುಗಳನ್ನು ಇಲ್ಲಿ ಕಾಣಬಹುದು. ಅಲ್ಲಮರಲ್ಲಿ ಮೆಟಾಫಿಸಿಕಲ್ ಆಯಾಮಗಳಿದ್ದರೆ ಇಲ್ಲಿ ಕೇವಲ ಫಿಸಿಕಲ್ ಆಯಾಮ. ಆದರೂ ಈ ಕವಿತೆಯಲ್ಲಿ ಕೊನೆಯ ಚರಣಕ್ಕಿಂತಲೂ ಮುನ್ನ ಬರುವ ಚರಣ ಇಡೀ ಕವಿತೆಯ ಮುಖ್ಯ ತಿರುವು. ಅದೇ ಚರಣಕ್ಕೆ ಕವಿತೆ ನಿಂತಿದ್ದರೆ, ಧ್ವನಿಪೂರ್ಣವಾಗಿ ಇರುತ್ತಿತ್ತು. ಆದರೆ ಮುಂದಿನ ಚರಣದಲ್ಲಿ ವಾಚ್ಯಗೊಳಿಸಿ ಕವಿಯೇ ಭಾವ ತೀವ್ರತೆಯನ್ನು ಕದಡುತ್ತಾರೆ.

ಪ್ರೀತಿಸುವುದಕ್ಕಿಂತ ಕವಿತೆಯು ಬೇಡ ಎಂದರೆ ಬೇಕು; ಹೋಗು ಎಂದರೆ ಬಾ ಎನ್ನುವುದನ್ನು ತತ್ವವನ್ನಾಗಿಸಿಕೊಂಡು, ದ್ವೇಷಿಸುವುದೆಂದರೆ ಪ್ರೀತಿಸು ಎಂದು ಹೇಳಿದಂತಿದೆ: ಪ್ರೀತಿಸುವುದಕ್ಕಿಂತ ನೀನು/ದ್ವೇಷಿಸುವುದೇ/ಬಲು ಆಪ್ತ ನನಗೆ/ ಏಕೆಂದರೆ ದ್ವೇಷಿಸುವಾಗಲೇ ನೀನು/ ಈಗಿರುವುದಕ್ಕಿಂತ ಒಂದು ಗುಂಜಿ/ ಹೆಚ್ಚು ಪ್ರಾಮಾಣಿಕ. ಈ ಕವಿತೆಯಲ್ಲಿ ಹಠ ಮತ್ತು ಹತಾಶೆ ಎರಡನ್ನೂ ಮಾರ್ಮಿಕವಾಗಿ ಹೇಳಿರುವುದನ್ನು ಕಾಣಬಹುದು. ಕೊನೆಯಲ್ಲಿ ಇದನ್ನು ಕವಿಯೇ ಸ್ಪಷ್ಟಗೊಳಿಸಿ ಹೇಳಿದ್ದಾರೆ: ನಿನ್ನ ವಿಷದ ಹಲ್ಲಿನಿಂದಲೇ/ ಅತ್ತರು ಇಳುಹಿಕೊಂಡು/ಮೈಗೆ ಪೂಸಿಕೊಳ್ಳೂವೆ.

ಒಂದು ಅಪರಿಚಿತ ನಾಯಿಯ ಆಗಂತುಕ ನೋಟ ಕವಿತೆ ಒಂದು ಪೊಲಿಟಿಕಲ್ ಅಲಿಗರಿ ಥರ ಇದೆ. ಮನುಷ್ಯನ ಆಳದಲ್ಲಿರುವ ಕೇಡು, ಹಿಂಸಾ ಪ್ರವೃತ್ತಿಯನ್ನು ಹೇಳುತ್ತಲೇ ಮನುಷ್ಯನ ಆತ್ಮವಂಚಕತನವನ್ನು ತುಂಬಾ ಧ್ವನಿಪೂರ್ಣವಾಗಿ ಮತ್ತು ಇಮೇಜ್ ಗಳಿಂದ ಸಿಂಗರಿಸಿಕೊಂಡು ಹೇಳುತ್ತದೆ; ಒಂದು ಅಪರಿಚಿತ ನಾಯಿಯ/ಆಗಂತುಕ ನೋಟ/ನಮ್ಮ ಕಣ್ಣೊಳಗೆ ಮಲಗಿದ/ಪುರಾತನ ಮೃಗವ ಎಬ್ಬಿಸುವುದು ಮತ್ತು ಕವಿತೆಯ ಕೊನೆಯ ಸಾಲುಗಳು: ಒಂದು ರೊಟ್ಟಿಯ ಎಸೆದು/ನಾಯಿತನವ ಪಳಗಿಸಿದೆವು.

ಲೈವ್ ಷೋ ಕವಿತೆಯು ದಿನ ನಿತ್ಯ ಟಿ.ವಿ ಪರದೆಯ ಮೇಲೆ ಅಥವಾ ದಿನಪತ್ರಿಕೆಯಲ್ಲಿ ಕಾಣುವ ದೃಶ್ಯದಂತೆ ಇದೆ. ಈ ಪದ್ಯಕ್ಕೆ ವ್ಯಂಗ್ಯವೇ ಪ್ರಾಣ. ಕಾಲಜ್ಞಾನಿ ಕಪ್ಪೆ ಓದುವಾಗ ಬಾಷೋನ ಕವಿತೆಗಳು ಮಿಂಚಿನಂತೆ ಕಂಡು, ಅವನ ಕವಿತೆಗಳ ಮುಂದೆ ಈ ಕಾಲಜ್ಞಾನಿ ಕಪ್ಪೆ ಎನ್ನುವ ಕವಿತೆ ತೀರಾ ಪೇಲವವಾಗಿ ಕಾಣುತ್ತದೆ. ಕನ್ನಡಿಯ ಹಾಗೆ ಕವಿತೆಯಲ್ಲಿ ಸೌಂದರ್ಯ, ಗಂಡು, ಹೆಣ್ಣು, ನಶ್ವರತೆ ಇವುಗಳನ್ನು ತುಂಬಾ ವಾಚ್ಯವಾಗಿ ತುಂಬಾ ಸುಂದರವಾಗೆ ಹೇಳಲಾಗಿದೆ.

ಮೊದಲ ಎರಡು ಸಾಲುಗಳು ಯೌವ್ವನಕ್ಕೆ ಕವಿಯೊಬ್ಬನ ವಾಖ್ಯಾನ. ಕವಿ ಹೇಳುತ್ತಾನೆ ಯೌವ್ವನವೆಂದರೆ/ಕನ್ನಡಿಯೊಳಗಿನ ಗಂಟು/ಕಾಲವು/ಕಳುವು ಮಾಡುವುದು. ಅಂದರೆ ಕವಿ ಹೇಳುವ ಪ್ರಕಾರ ಯೌವ್ವನವನ್ನು ಮಾತ್ರ ಕಾಲ ಕಳುವು ಮಾಡುತ್ತದೆಯಾ? ವೃದ್ಧಾಪ್ಯವನ್ನು ಮತ್ತು ಬಾಲ್ಯವನ್ನು ಮತ್ತು ಜೀವವನ್ನು? ಹೀಗೆಲ್ಲ ಅಸಂಬದ್ಧವಾದ ಪ್ರಶ್ನೆಗಳನ್ನು ಕೇಳಬಾರದು, ಯಾಕಂದರೆ ಕವಿಸಮಯಕ್ಕೆ, ಪೊಯಟಿಕಲ್ ಲೈಸನ್ಸ್ ಗೆ ಬೆಲೆನೇ ಇಲ್ಲವಾ? ಇರಲಿ, ಈ ತರದ ಸಾಲುಗಳೂ ಸಹ. ಕವಿಯೂ ಸಹ ಸಾಮಾನ್ಯ ಮನುಷ್ಯನಲ್ಲವೆ, ಅಳಿಸಲಾರದ ಲಿಪಿಯನ್ನು ಅವನು ಬರೆಯುವುದಿಲ್ಲ..

ಈ ಭುಮಿಗೆ ಯಾವಾಗಲೂ ಅರ್ಧ ಬೆಳದಿಂಗಳು ಕವಿತೆ ಕೊನೆಯ ಸಾಲುಗಳಿಗಾಗಿ ಇಷ್ಟವಾಗುತ್ತದೆ. ಅವುಗಳಲ್ಲಿ ಬದುಕಿನ ನಿಗೂಢತೆ, ಸಂಕೀರ್ಣತೆ, ಅರ್ಥ, ಸತ್ಯಗಳನ್ನು ಅರಿಯುವ ಪ್ರಯತ್ನವನ್ನು ಕಾಣಬಹುದು. ಶಾಪ ಎನ್ನುವ ಕವಿತೆ ಗಣಿತದ ಒಂದು ಪ್ರಮೇಯದಂತೆ ಇದೆ. ಆದರೆ ಬದುಕು ಪ್ರಮೇಯವಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ! ಓದುವುದಕ್ಕೆ ತುಂಬಾ ಸ್ವಾರಸ್ಯಕರವಾಗಿದೆ. ಆದರೆ ನಿಜಕವಿತೆಯಲ್ಲಿ ಲಾಜಿಕ್ಕಿಗೂ ಮೀರಿದ ಒಂದು ಲೈಟ್ ಇರುತ್ತಲ್ಲ ಅದು ಇಲ್ಲಿ ಕಾಣದು. ಇದೆ ಥರದ್ದು ಮಂಡಲ ಎನ್ನುವ ಕವಿತೆ! ಅರ್ಧಕ್ಕೇ ನಿಂತ ಕವಿತೆ ಯ ತುಂಬ ಮಾತು, ಹೇಳಿಕೆ, ಎಚ್ಚರಿಕೆ, ಸಂದೇಶ, ತತ್ವ. ಕವಿಗೆ/ಬರಹಗಾರರಿಗೆ ಭಾಷೆಯೇ ಭರವಸೆ, ಮತ್ತು ಶಕ್ತಿ. ಅದನ್ನು ನಂಬಲೇ ಬೇಕು. ಹೇಳುವುದು ವಾಚ್ಯವಾದರೆ ಅದು ಭಾಷೆಯ ಸಮಸ್ಯೆಯಲ್ಲ, ಬದಲಿಗೆ ಕವಿಯ ಸಂವೇದನೆಯದೇ ಸಮಸ್ಯೆ.

ಈ ಕವಿತೆಯ ಆರಂಭದಲ್ಲಿ ಒಂದು ಅಡ್ನಾಡಿ ಶಬ್ದ/ಅರ್ಧಕ್ಕೇ ನಿಂತ ಕವಿತೆಯ/ನಾಡಿ ಹಿಡಿಯಬಹುದೇ? ಎನ್ನುವ ಸಾಲುಗಳಿವೆ. ಶಬ್ದ ಹೇಗೆ ಅಡ್ನಾಡಿ ಯಾದೀತು? ಕಷ್ಟ ಪಟ್ಟು ಪದ ಪದಗಳನ್ನು ಸೋಸಿ ಕವಿತಗೆಳಲ್ಲಿ ಇಟ್ಟರೂ ಆ ಪದಗಳು ಸಹಜವೆಂಬಂತೆ ಇರಬೇಕು. ಇಲ್ಲದಿದ್ದರೆ ಆ ಪದ್ಯ ಮಕಾಡೆ ಮಲಗುವುದು ಗ್ಯಾರಂಟಿ. ದುಃಖಪಡದೆ ಸಂತೋಷವನ್ನು ಹೇಗೆ ಅನುಭವಿಸಲಾಗುವುದು? ಅದೇ ರೀತಿ ಸಾವಿನ ಎಚ್ಚರವಿಲ್ಲದೆ ಬದುಕನ್ನು ಬದುಕುವುದಾದರೂ ಹೇಗೆ? ಅರ್ಥಸಾಧ್ಯತೆಗಳನ್ನು ಹೊರಡಿಸದ ಶಬ್ದ ಶಬ್ದ ಹೇಗಾದೀತು? ಹೀಗಿರುವಾಗ ಕವಿ ಈ ಕವಿತೆಯಲ್ಲಿ ಹೀಗೆ ಕೇಳುತ್ತಾರೆ: ಶೋಕವನ್ನು ಹೃದಯದಿಂದ/ಸಾವನ್ನು ಬದುಕಿನಿಂದ/ಅರ್ಥವನ್ನು ಶಬ್ದಗಳಿಂದ/ ಅಗಲಿಸಿ ಬಿಟ್ಟರೆ? ಎದೆ ಹಾಲಿನ ಪಾಳಿ ಕವಿತೆಯು ಸಂಕಲನದಲ್ಲಿಯೇ ತುಂಬ ಗಹನವಾದ ಮತ್ತು ಪರಿಣಾಮಕಾರಿಯಾದ ಕವಿತೆ. ಇಂತಹ ಕವಿತೆಗಳಲ್ಲಿ ಆರಿಫ್ ಕವಿತೆಯೆಂದರೆ ಏನು, ಅದರ ಎತ್ತರ, ಅಗಲ ಏನು ಎನ್ನುವುದನ್ನು ಕಾಣಿಸುತ್ತಾರೆ.

ಕವಿತೆ ಒಂದು ಆರ್ದ್ರತೆಯಿಂದ ಕೂಡಿರುವ ಜೊತೆಗೆ ಸಾಂದ್ರವಾದ ಅನುಭವವನ್ನು ಕೊಡುವಲ್ಲಿ ಯಶಸ್ವಿಯಾಗುತ್ತದೆ. ಇಲ್ಲೂ ಮಾತನ್ನು ಮುನ್ನಲೆಗೆ ತಂದು ಮೊದಲ ಎರಡು ಸಾಲುಗಳಲ್ಲಿ ಕವಿತೆಯು ಏನನ್ನು ಹೇಳುತ್ತಿದೆಯೋ ಅದಕ್ಕೆ ಸಮಜಾಯಿಷಿಸಿ ಕೊಡಲು ಯತ್ನಿಸಿದ್ದಾರೆ. ಆದರೂ ಕವಿತೆ ಇಷ್ಟವಾಗುತ್ತದೆ. ವಿಕ್ಷಿಪ್ತ ಬದುಕಿನ ವಿಲಕ್ಷಣ ಚಿತ್ರಣ ಈ ಕವಿತೆ.

ರಂಜಾನಿನ ಚಂದ್ರ ಕವಿತೆಯ ಶೀರ್ಷಿಕೆಯು ರೊಮ್ಯಾಂಟಿಕ್ ಆಗಿ ಮೋಹಕವಾಗಿದೆ. ಆದರೆ ಅದು ಒಳಗೊಂಡಿರುವ ಕವಿತೆಯು ತಾನು ಹೇಳಬಹುದಾದ ಸಾಂದ್ರವಾದ ಅನುಭವವನ್ನು ಕೊಡದೆ ಸುಂದರವಾಗ ರೆಟಾರಿಕ್ ಗಳಿಂದ ಅಲಂಕರಿಸಲ್ಪಟ್ಟರುವ ಇಮೇಜುಗಳಿಂದ ಆಕರ್ಷಣೀಯವಾಗಿದ್ದು ತನ್ನನ್ನು ತಾನೇ ಮರೆತಿದೆ: ನಿನ್ನ ಕುತ್ತಿಗೆ ಕೊಯ್ಯುವ/ ಕುಡಗೋಲು/ ರಂಜಾನಿನ ಚಂದ್ರ ಎಂದು ಆರಂಭವಾಗಿ, ಮಧ್ಯದಲ್ಲಿ ನಿನ್ನ ಕೈಜಾರಿ ಬಿದ್ದ/ ಕಾಡಿಗೆ ಡಬ್ಬಿಯಿಂದಲೇ/ ಲೋಕಕ್ಕೆಲ್ಲಾ ಕತ್ತಲಾವರಿಸಿತಂದ ಮೇಲೆ ಎಂದು ಹೇಳುತ್ತಾ ನಿನ್ನ ಕಣ್ಣ ರೆಪ್ಪೆ ಅಲುಗಿ/ ನೆಲಕ್ಕೆ ಬಿದ್ದ ಕಂಬನಿಯ/ ಕತೆ ಏನಾಯಿತು?/ ಎಂದು ಕೇಳುತ್ತ ಫಲವತ್ತಾದ ಕಪ್ಪು ನೆಲದಂತಿರುವ/ ನನ್ನ ಗರ್ಭದ ಗುಹ್ಯಗತ್ತಲು/ ನೀರಿನ ಹುಣ್ಣನು ಸುಡುವ/ಬೆಳಕಿನ ಶಲಾಕೆಯಾಯಿತುಎಂದು ಹೇಳಿ ಕೊನೆಯಾಗುತ್ತದೆ.

ಕವಿತೆ ಹೇಳುವುದು ಅಸ್ಪಷ್ಟತೆಯನ್ನು ಸರಿ. ಅದನ್ನು ಒಪ್ಪೋಣ. ಆದರೆ ಹೇಳುವಾಗಲೇ ಗೊಂದಲ ಗೊಂಡರೆ ಹೇಗೆ? ಆದರೂ ಕವಿತೆ ಏನನ್ನೋ ಹೇಳಬೇಕಿಲ್ಲ. ಇಮೇಜುಗಳೇ ಅವ್ಯಕ್ತವಾದುದನ್ನು ಹೇಳುತ್ತವೆ. ಅದರಲ್ಲೂ ಕವಿತೆಯಲ್ಲಿ ಏನು ಹೇಳಿದರೂ ಅದಕ್ಕೆ ಸ್ಪಿರಿಚುಯಲ್ ಆದಂತಹ ಮೆರಗು ಸಿಗುತ್ತದೆ. ಈ ನೆತ್ತರು ಎಷ್ಟೊಂದು ಹರಾಮಿ ಕವಿತೆಯು ಈ ಕಾಲದ ಕವಿತೆ. ಸದ್ಯವನ್ನು ಎಷ್ಟು ಸಾಧ್ಯವೋ ಅಷ್ಟು ತೀವ್ರವಾಗಿ ಹಿಡಿದಿಡುವ ಪ್ರಯತ್ನ ಇಲ್ಲಿದೆ. ನೀನು ಸತ್ತಾಗ ಹೇಗೆ ಕಾಣುತ್ತೀ? ಕವಿತೆಯೂ ತುಸು ತಮಾ಼ಷೆಯಾಗಿ ಆರಂಭವಾದರೂ ಸಾವಿನ ಬಗ್ಗೆ ಸತ್ಯವನ್ನು ಮಾರ್ಮಿಕವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ: ಬದುಕಿರುವಾಗಲೇ/ ನೀನು ಸತ್ತಾಗ ಹೇಗೆ ಕಾಣುತ್ತೀ?… ಆದರೆ ಗೊತ್ತಾಯ್ತು ಒಂದು ದಿನ/ ನೀನು ಸತ್ತ ದಿನ/ಸಾವನ್ನು ಯಾರೂ ಅಭಿನಯಿಸಲು ಸಾಧ್ಯವಿಲ್ಲ/ಸಾವಿನ ಮುಸುಡಿಯನ್ನೂ ಗೃಹಬಳಕೆಯ ವಸ್ತುಗಳು ಮತ್ತು ಮಗು ಕವಿತೆಯೂ ಮನಸ್ಸಿಗೆ ಮುಟ್ಟುವ ಕವಿತೆ. ವಿಚಾರ ಮಂಡಿಸುವ ರೀತಿ ಕವಿತೆಯ ಸಾಲುಗಳು ಇದ್ದರೂ ಅದು ಸ್ಪರ್ಶಿಸುವ ಅನುಭವ, ಆಭಿವ್ಯಕ್ತಿಸುವ ಕ್ರಮ ಬ್ಯೂಟಿಫುಲ್! ಇಲ್ಲ ಇಲ್ಲ, ಮಗು ಕೇವಲ ಗೃಹಬಳಕೆಯ ವಸುವಲ್ಲ/ನಿಂತ ಮನೆಯೊಳಗೆ ಮುಖದಿಂದ ಮುಖಕ್ಕೆ ಚಲಿಸುವ ಕೈಗನ್ನಡಿಯಲ್ಲ/ದೊಡ್ಡವರ ಆಟ ಪಾಠಕ್ಕೆಂದೇ ಧರೆಗಿಳಿದು ಬಂದ ಸ್ವರ್ಗದ ಹಕ್ಕಿ.

ದುಗುಡವೊಂದು ದ್ರöವ ಬೆಳಕು ಎನ್ನುವ ಈ ಸಾಲೇ ಕೇಳುವುದಕ್ಕೆ ಹಿತ. ದ್ರವ ಬೆಳಕು ಎನ್ನುವ ನುಡಿಗಟ್ಟು ತುಂಬ ಫ್ರೆಶ್ ಆಗಿ ಕೇಳಿಸುತ್ತದೆ ಮತ್ತು ಕಾಣುತ್ತದೆ. ಕವಿತೆಯ ಒಳಗೂ ಸಹ ಇಮೇಜುಗಳ ಒಂದು ಪುಟ್ಟ ರಾಶಿಯೇ ಇದೆ. ಇಮೇಜುಗಳಿದ್ದರೂ ಈ ಪರಿ, ಅವು ಕವಿತೆ ಕೊಡುವ ಅವ್ಯಕ್ತವಾದಂತಹ ಅನುಭವಕಕ್ಕೆ ಧಕ್ಕೆ ಕೊಡುವುದಿಲ್ಲ, ಬದಲಿಗೆ ಅವೂ ಸಹ ಸಾಥ್ ಕೊಡುತ್ತವೆ. ದುಗಡು ಅಥವಾ ದುಃಖವನ್ನು ಈ ಕವಿತೆ ಹೇಳುತ್ತದೆ ಎಂದು ಶೀರ್ಷಿಕೆ ಹೇಳಿಕೊಂಡರೂ ಅದರೊಳಗೆ ಹರಿದಿರುವ ಅಲೌಕಿಕವೆನ್ನಬಹುದಾದ ಸೌಂದರ್ಯ ಆ ದುಃಖ ಅಥವಾ ದುಗುಡವನ್ನುಮರೆಮಾಚುತ್ತದೆ: ಮಳೆಗಾಲದ ರಾತ್ರ/ ಕಾಳಗದ ಅಂಗಳವೇ ಆದ ಬಾಂದಳ ಬೆಳಗಾಗುತ್ತಲೇ ನಿನ್ನ ಮೊಗದ ಹಾಗೆ/ ಸರಳ ಸಂಪನ್ನ. ಇಷ್ಟೇ ಅಲ್ಲ, ಮುಂದೆ ಬರುವ ಎರಡು ಚರಣಗಳು ಸಹ ರಣ ಬಿಸಿಲಲ್ಲಿ ತಣ್ಣೀರ ಕೊಳದಲ್ಲಿ ಮೈಯನ್ನು ಒದ್ದೆ ಮಾಡಿಕೊಂಡ ಅನುಭವವನ್ನು ನೀಡುತ್ತವೆ.

ಕವಿತೆಯಲ್ಲಿನ ಮೊದಲ ಮೂರು ಚರಣಗಳೇ ಸಾಕಾಗಿತ್ತು ಈ ಚಂದದ ಕವಿತೆಯನ್ನು ಮೋಹಕಗೊಳಿಸಲು. ಆದರೆ ಕವಿಯು ದುಗುಡವನ್ನು ಮಾತಿಗೆ ಎಳೆದು ಇದರ ಪಕ್ಕ ಇಡಲು ಪ್ರಯತ್ನಪಡುತ್ತಾರೆ. ಅವರಿಗೆ ದುಃಖವನ್ನು ಹೇಳಲೇಬೇಕಾದ ಹಠವೂ ಇದೆ. ಕವಿತೆ ವಾಚ್ಯವಾದರೂ ಪರವಾಗಿಲ್ಲ ಎನ್ನುವ ಮನೋಭಾವವೂ ಸಹ ಇದ್ದಂತಿದೆ.

ಮುಂದಿನ ಚರಣದಲ್ಲಿನ ಹೇಳಿಕೆಗಳಂತಿನ ಸಾಲುಗಳಲ್ಲಿ ಪೊಯಟಿಕಲ್ ಇಮೇಜುಗಳು ತುಂಬಿ ಕವಿತೆಯನ್ನು ಅದ್ಭುತವಾಗಿಸಿವೆ. ಅದು ಇಮೇಜುಗಳಿಗೆ ಇರುವ ತಾಕತ್ತು. ಭಾಷೆಯದೂ ಸಹ. ವಕ್ರವಾದ, ಒರಟಾದ ನುಡಿಗಟ್ಟುಗಳಲ್ಲಿಯೇ ಆರೀಫರು ಒಂದು ವಿಲಕ್ಷಣ ಸೊಗಸನ್ನು ಸ್ಫುರಿಸುತ್ತಾರೆ. ಅದು ಅವರ ಸಿಗ್ನೇಚರ್ ಸ್ಟೈಲ್ ಥರವೂ ಅಗಿ ಅವರಿಗೆ ಒಲಿದಿದೆ, ಅಥವಾ ಕಷ್ಟಪಟ್ಟು ಪಡೆದುಕೊಂಡು ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ – ನಿನ್ನ ಗಾಜಿನ ಮೈಯ ಸೌಂದರ್ಯ/ ಕೈಯಲ್ಲಿ ಕಲ್ಲು ಹಿಡಿದು ನಿಂತವರಿಗೇನು ಗೊತ್ತು? ಎನ್ನುವ ಸಾಲುಗಳಲ್ಲಿ ಸಡನ್ನಾಗಿ ಶಿಫ್ಟ್ ಪಡೆದು ಕವಿತೆ ಬೇರೆಯದೇ ಆಯಾಮವನ್ನು ಪಡೆಯಲು ಕಾತರಿಸುತ್ತದೆ.

ಈ ಸಾಲುಗಳಲ್ಲಿ ಲೋಕದ ಬಗೆಗೆ ಟೀಕೆಯೂ ಇದೆ, ಸ್ಯಾಡಿಸ್ಟ್ ಮನಸ್ಥಿತಿಗಳ ಅನಾವರಣವೂ ಇದೆ. ಈ ಸಾಲಿನಲ್ಲಿನ ‘ಮೈಯ’ ಎನ್ನುವ ಪದವನ್ನು ಬಳಸಿದಿದ್ದಿದ್ದರೆ ಈ ಸಾಲು ಮತ್ತಷ್ಟು ಅರ್ಥ ಸಾಧ್ಯತೆಯನ್ನು ಪಡೆಯುತ್ತಿತ್ತೇನೋ. ಇರಲಿ ಇದು ಅಂತಹ ದೋಷವೇನೂ ಅಲ್ಲ. ಈ ಸಾಲುಗಳ ನಂತರ ಬರುವ ಕವಿತೆಯಲ್ಲಿನ ಕೊನೆಯ ಎರಡು ಚರಣಗಳು ಕವಿತೆಯ ಜೊತೆಗೆ ಸಾವಯವ ಬಂಧವನ್ನು ಪಡೆದುಕೊಳ್ಳದೆ ಪ್ರತ್ಯೇಕವಾಗಿಯೇ ನಿಲ್ಲುತ್ತವೆ. ಅಥವಾ ಈಗಾಗಲೇ ಪ್ರಸ್ತಾಪಿಸಿದಂತೆ ಕನೆಕ್ಟ್ ಮಾಡಿಕೊಂಡರೆ ಕವಿತೆಯ ಬಂಧಕ್ಕೆ ಹೊಂದಿಕೊಂಡು ಕವಿತೆಯ ಆಶಯವನ್ನು ಹೇಳಲು ಹೆಚ್ಚಿನ ಒತ್ತನ್ನು ಕೊಡುತ್ತವೆ ಎಂದು ಕೊಳ್ಳಬಹುದು.

ಮುರಿದ ಆಟಿಕೆಯೊಂದಿಗೆ ಮಗು ಕವಿತೆಯಲ್ಲಿ ಕವಿಯೊಬ್ಬನ ಪರಿಶುದ್ಧ ಸಾಲುಗಳನ್ನು ಕಾಣಬಹುದು. ಇಲ್ಲೂ ಸಹ ಹೇಳಿಕೆ ಅಥವಾ ಮಾತೇ ಕಾವ್ಯದಂತೆ ತೋರುತ್ತದೆ. ಆದರೆ ಈ ಕವಿತೆಯನ್ನು ಓದುವ ಸುಖ ಹಾಲುಗಲ್ಲದ ಕಂದನನ್ನು ಹೂವಿನಂತೆ ಬಾಚಿ ತಬ್ಬಿಕೊಂಡಾಗ ಆಗುವ ಖುಷಿಯಂತೆ. ಕವಿತೆಯ ಕೊನೆಯ ಸಾಲುಗಳು ಕಾವ್ಯ ತತ್ವ: ಮುರಿಯುವುದು ಮಾತ್ರ ಮನುಷ್ಯನ ಕೆಲಸ/ ಜೋಡಿಸುವುದಲ್ಲ ಮಗನೇ.
ಈ ಶಹರಕ್ಕೆ ಬಂದಿಳಿದ ಮತ್ತೊಬ್ಬ ಹುಚ್ಚ ಕವಿತೆಯು ಈ ಸಂಕಲನದಲ್ಲಿನ ಕೆಲವೇ ಕೆಲವು ಪರಿಣಾಮಕಾರಿಯಾದ ರಚನೆಗಳಲ್ಲಿ ಒಂದು.

ಯಾವ ಪೂರ್ವಾಗ್ರಹಗಳಿಂದ ಕೂಡಿರದ ಅಪ್ಪಟ ಕವಿತೆ. ಒಂಥರ ರ‍್ರಿಲಿಯಸ್ಟಿಕ್. ಗಾಢವಾದ, ರೂಪಕಗಳನ್ನು ಚಿಮ್ಮುವ ಒಂದು ದೃಶ್ಯ ಕಾವ್ಯ. ಶಹರದ ಅನಿವಾರ್ಯವಾದ ಯಾಂತ್ರಿಕ ಬದುಕನ್ನು, ನಿರ್ಭಾವುಕತೆನ್ನು, ಅನಾಮಿಕತೆಯನ್ನು ತೋರಿಸುತ್ತದೆ. ಇಲ್ಲಿಯ ಹುಚ್ಚ ಒಂದು ರೂಪಕವಾಗಿ, ಮನಸ್ಥಿತಿಯಾಗಿ ಅಭಿವ್ಯಕ್ತಗೊಂಡಿದೆ. ಮತ್ತು ಈ ಕವಿತೆಯಲ್ಲಿ ನಡೆಯುವ ದೃಶ್ಯಗಳು ನಮ್ಮೊಳಗೆ ಇಳಿದು ನಮ್ಮನ್ನು ಹೆಚ್ಚುಕಾಲ ಕಾಡುತ್ತವೆ. ಮತ್ತೊಬ್ಬ ಸರ್ವಾಧಿಕಾರಿಯೂ ಸಹ ಅತ್ಯುತ್ತಮವಾದ ರಚನೆ. ಇಲ್ಲಿ ಸದ್ಯದ ರಾಜಕೀಯ ಪ್ರಕ್ಷಬ್ಧತೆಯನ್ನು ಕಾಣುತ್ತೇವೆ. ಇಂತಹ ಅತ್ಯುತ್ತಮವಾದ ಕವಿತೆಗಳ ಜೊತೆಯಲ್ಲಿ ಅಮೇರಿಕಾದಲ್ಲಿ ಆಯುರ್ವೇದ ಎನ್ನುವ ಬಾಲಿಶ ಕವಿತಯಂತವುಗಳೂ ಇವೆ.

ಕೆಲವು ಜೆಂಡರ್ ಇನ್‌ಸೆನ್ಸಿಟಿವ್ ಆದಂತಹ ಪದಗಳಾದ ಬೀದಿ ಬಸವಿ, ಸೂಳೆ ಯಂತಹವುಗಳನ್ನು ಕವಿ ಯಾವ ಹೆಗ್ಗಿಲ್ಲದೆ ಬಳಸಿರುವುದು ಓದುವಾಗ ಇರುಸುಮುರುಸು ಅನ್ನಿಸುತ್ತದೆ. ಇಂತಹ ಕೆಲವು ಅಲ್ಪ ದೋಷಗಳನ್ನು ಹೊರತುಪಡಸಿದರೆ ಈ ಸಂಕಲನದಲ್ಲಿ ಕೆಲವು ಸುಂದರವಾದ ಕವಿತೆಗಳನ್ನು ಕಾಣಬಹುದು. ರಾಜಕೀಯ, ಧರ್ಮ, ಮತೀಯತೆ, ಕಾಮ, ಹೆಣ್ಣು ಇವುಗಳು ಆರೀಫ್ ರಾಜ ಅವರ ಕವಿತೆಗಳ ಮೂಲ ಭಿತ್ತಿ. ಅವುಗಳನ್ನು ಭಿನ್ನವಾಗಿಯೇ ಕವಿತೆಯಲ್ಲಿ ತೋರಿಸಬೇಕು ಎಂದು ಪ್ರಜ್ಞಾಪೂರ್ವಕವಾಗಿ ಪ್ರಯತ್ನಪಟ್ಟಿರುವುದನ್ನು ಇಡೀ ಸಂಕಲನದ ಉದ್ದಕ್ಕೂ ಗಮನಸಿಬಹುದು.

ರಾಜಕಾರಣ ಮತ್ತು ಸಮಾಜ ಇವೆರಡನ್ನೂ ಒಳಗೊಂಡೂ ಮತ್ತು ಮೀರಿ ಕವಿತೆಯ ಸಾಧ್ಯತೆಗಳನ್ನು ತೋರಿಸಿದಾಗ ಆರೀಫ್ ರಾಜರ ಕವಿತೆಗಳಿಗೆ ಹೊಸ ಆಯಾಮ ಸಿಕ್ಕುವುದು. ಯಾಕೆಂದರೆ ಈ ಸಂಕಲನವೂ ಅವರ ಈ ಹಿಂದಿನ ಕವಿತೆಗಳ ನೆರಳಿನಲ್ಲಿಯೇ ಇವೆ ಇನ್ನೂ. ಭಾಷೆಯಲ್ಲಿ ಹಿಡಿತ ಸಿಕ್ಕರೆ ಸಂವೇದನೆ ಸೂಕ್ಷ್ಮವಾಗಿ ಅಭಿವ್ಯಕ್ತಿ ಸಾಂದ್ರವಾಗುತ್ತದೆ. ಇವರು ಕನ್ನಡ ಕಾವ್ಯದ ಭವಿಷ್ಯವಲ್ಲ, ಬದಲಿಗೆ ಈಗಾಗಲೇ ವರ್ತಮಾನದಲ್ಲೇ ತಮ್ಮ ನೆಲೆಯನ್ನು ಪಡೆದುಕೊಂಡಿರುವ ಕವಿ. ಟೀಕೆಗಳು ಅವರನ್ನು ಇನ್ನಷ್ಟು ಬೆಳೆಸುತ್ತವೆ ಎಂಬುದು ಅಚಲವಾದ ನಂಬಿಕೆ. ಅವುಗಳಿಂದ ಬೆಳೆದರೆ ಬಹುಕಾಲ ಕನ್ನಡ ಕಾವ್ಯದಲ್ಲಿ ತಮ್ಮ ಅಸ್ತಿತ್ವವನ್ನು ಬಲವಾಗಿ ಉಳಿಸಿಕೊಳ್ಳುತ್ತಾರೆ. ನಿಜವಾದ ಕವಿತೆ ಉಳಿದೇ ಉಳಿಯುತ್ತದೆ. ಭಾಷೆ ಅದನ್ನು ನೇಪಥ್ಯಕ್ಕೆ ಸೇರಿಸದು.

‍ಲೇಖಕರು Admin

January 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. ಅರುಣ್ ಜೋಳದಕೂಡ್ಲಿಗಿ

  ರಮೇಶ್ ವಿಮರ್ಶೆ ಓದಿ ಮೊದಲಿಗೆ ಅನ್ನಿಸಿದ್ದು, ರಮೇಶ್ ಮತ್ತು ಆರೀಫ್ ವಯೋಮಾನದ ಕವಿ/ವಿಮರ್ಶಕರಲ್ಲಿ ಕಾವ್ಯದ ಬಗೆಗೆ ಇಷ್ಟು ಪ್ರಖರವಾದ ವಿಮರ್ಶೆ ಬರೆಯುವವರು ಬೇರೆ ಇಲ್ಲ ಅನ್ನಿಸಿತು. ಕವಿತೆಯನ್ನೆ ಧ್ಯಾನಿಸುವ ಇಬ್ಬರು ಕವಿಗಳ‌ ಮುಖಾಮುಖಿಯಂತೆ ಕಾಣಿಸಿತು. ಕವಿತೆಯನ್ನು ತುಂಬಾ ಸೂಕ್ಷ್ಮವಾಗಿ ವಿಶ್ಲೇಷಣೆಗೆ ಒಳಗು ಮಾಡಿದ್ದಾರೆ. ಆರೀಫ್ ಕಾವ್ಯದ ಮಿತಿಗಳನ್ನು ಶಕ್ತಿಯನ್ನೂ ಯಾವ ರಿಯಾಯಿತಿ ಕೊಡದೆ ಹೇಳಲು ಸಾಧ್ಯವಾಗಿದೆ. ನಾನಿನ್ನೂ ಸಂಕಲನವನ್ನು ಓದಲಾಗಿಲ್ಲ. ಓದಿದ ನಂತರ
  ಈ ವಿಮರ್ಶೆಯ‌ ಕಣ್ಣೋಟದ ಸೂಕ್ಷ್ಮತೆ ಇನ್ನಷ್ಟು ಸ್ಪಷ್ಟವಾಗಿ ಅರ್ಥವಾಗಬಹುದು ಅನ್ನಿಸುತ್ತೆ. ನಾನು ಓದಿದ ರಮೇಶರ ಕಾವ್ಯ ವಿಮರ್ಶೆಯ ಬರಹಗಳಲ್ಲಿ ಇದು ಹೆಚ್ಚು ಇಷ್ಟವಾಯಿತು.

  ಅರುಣ್ ಜೋಳದಕೂಡ್ಲಿಗಿ

  ಪ್ರತಿಕ್ರಿಯೆ
 2. ನೂತನ

  ನನ್ನ ಅಭಿಪ್ರಾಯ ಬಹುತೇಕ ಹೀಗೆ ಇದೆ. ವೈರುಧ್ಯಗಳು ಇವೆ. ಒಳ್ಳೆಯ ಸಾಲುಗಳು ಸರಕ್ಕನೇ ವಾಚ್ಯವಾಗುವುದು ಅಥವಾ ಹಗುರವಾಗುವುದು ಅವರ ತಂತ್ರವೂ ಇರಬಹುದೇನೊ.
  ಸಾವು, ಬಡತನ, ಮಮತೆ ಮೊದಲಾದವು ಬಹಳ ಕಾಡಿದ್ದರೂ ಅವರ ಅಮ್ಮನ ಕೌದಿ ಕವಿತೆಯಂಥ ಸೂಫಿ ಮಾಂತ್ರಿಕ ಇಲ್ಲಿ ಮರೆಯಾಗಿದ್ದಾನೆ.
  ರಮೇಶ್ ಅವರೆ ಬಹಳ ಚೆನ್ನಾಗಿ ಬರೆದಿದ್ದೀರಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: