ಹಿರಿಯ ಲೇಖಕ ಹರಿಯಪ್ಪ ಪೇಜಾವರ ಅವರ ಆತ್ಮಕಥನ ‘ಇದ್ದದ್ದು ಇದ್ದ ಹಾಗೆ’
ಈ ಕೃತಿಯ ಕುರಿತು ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
–ರಾಜಾರಾಂ ತಲ್ಲೂರು
ಕನ್ನಡದ ನಿರ್ಲಕ್ಷಿತ ಕವಿಗಳಲ್ಲಿ ಒಬ್ಬರು – ಹರಿಯಪ್ಪ ಪೇಜಾವರ.
ಜಾತಿ, ನಿಷ್ಠುರ ನಿಲುವುಗಳ ಕಾರಣಕ್ಕೆ ಹೋರಾಟದ ಮೂಲಕವೇ ಬದುಕು ಕಟ್ಟಿಕೊಂಡ ಹರಿಯಪ್ಪ, ಈಗ ಇಂಗ್ಲೀಷ್ ಪ್ರೊಫೆಸರ್ ಆಗಿ ನಿವೃತ್ತರು. ಅವರ ಬದುಕಿನ ವೃತ್ತಾಂತವನ್ನು ಅವರು 270 ಪುಟಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರದೇ ಶ್ರೇಯಸ್ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದೆ. ಪ್ರೊಡಿಜಿ ಮುದ್ರಣ ಮುದ್ರಿಸಿದೆ.
ಸುಮಾರು 40 ವರ್ಷಗಳಿಂದ ಪರಿಚಿತರೂ, ಆ ಬಳಿಕ ಆತ್ಮೀಯರೂ ಆಗಿರುವ ಹರಿಯಪ್ಪ ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿ ನನ್ನ ಸೀನಿಯರ್; ನನ್ನ ವಿದ್ಯಾರ್ಥಿದೆಸೆಯ ಪರಿಸರದಲ್ಲೇ ಅವರೂ ಇದ್ದು ಬೆಳೆದವರು. ಹಾಗಾಗಿ ಈ ಪುಸ್ತಕದಲ್ಲಿ ಬರುವ ಹಲವು ಪಾತ್ರಗಳು ಪರಿಚಿತರು.
ನನ್ನ ಕಾಲೇಜು ದಿನಗಳಲ್ಲಿ “ಕವಿ” ಎಂಬ ಕಾರಣಕ್ಕೆ ಕುತೂಹಲ ಮೂಡಿಸಿದ್ದ ಹರಿಯಪ್ಪ ಅವರ ಜೊತೆ ನನಗಿದ್ದ ಸಮಾನ ಹುಚ್ಚು ಎಂದರೆ ಓದು. ನಮ್ಮ ಕಾಲೇಜು ಆ ಕಾಲದಲ್ಲೇ ಓಪನ್ ಆಕ್ಸೆಸ್ ಗ್ರಂಥಾಲಯ ಹೊಂದಿತ್ತು. (ಮಂಗಳೂರು ವಿವಿಯ ಅಂತಹ ಮೊದಲ ಕಾಲೇಜು ಅದು). ಜೊತೆಗೆ, ಸಾಹಿತ್ಯಾಸಕ್ತ- ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಾಹಿತ್ಯ ಅಧ್ಯಾಪನ ವರ್ಗ. ಡಾ| ಸೀ ಹೊಸಬೆಟ್ಟು, ಪ್ರೊ| ಶೇಖರ ಇಡ್ಯ, ಪ್ರೊ|ಲೀಲಾವತಿ ಎಸ್. ರಾವ್, ಪ್ರೊ| ದೇವಪ್ಪ ಕುಳಾಯಿ… ಹೀಗೆ. ಗ್ರಂಥಾಲಯದಲ್ಲಿ ಎರವಲು ಪಡೆದ ಪುಸ್ತಕಗಳಲ್ಲಿ ಸಾಹಿತ್ಯ ಸಂಬಂಧಿತ ಪುಸ್ತಕಗಳಲ್ಲಿ ಎರವಲು ಕಾರ್ಡಿನಲ್ಲಿ ನನಗಿಂತ ಐದಾರು ವರ್ಷ ಹಿರಿಯ ವಿದ್ಯಾರ್ಥಿ ಆಗಿದ್ದ ಹರಿಯಪ್ಪರ ಸಹಿಯ ಬಳಿಕ ಎರಡನೇ ಸಹಿ ನನ್ನದು ಎಂಬುದು ನನ್ನೊಳಗೇ ನನಗೆ ಸಂಭ್ರಮದ ಸಂಗತಿ ಆಗಿತ್ತು! ಕೆಲವೊಮ್ಮೆ ಹರಿಯಪ್ಪರ ಸಹಿ ಇದೆ ಎಂಬ ಕಾರಣಕ್ಕೆ ನಾನು ಅಂತಹ ಪುಸ್ತಕಗಳನ್ನು ಎರವಲು ಪಡೆದು ಓದಿದ್ದೂ ಇತ್ತು. ಅವರ “ವ್ಯಕ್ತಿ ಮತ್ತು ವ್ಯಕ್ತ” ಕವನಸಂಕಲನಕ್ಕೆ ಆಗಲೇ ಮನ್ನಣೆ ಬಂದಿತ್ತು.
ತೀರಾ ಬಡ ಕುಟುಂಬದಿಂದ ಬಂದು, ಬದುಕಿಗಾಗಿ ಹೋರಾಡುತ್ತಲೇ ಮುಂಬಯಿ, ರತ್ನಗಿರಿ, ಸುಳ್ಯ, ಮಂಗಳೂರು ಎಂದು ಉದ್ಯೋಗಕ್ಕೆ ತಿರುಗಾಟ ನಡೆಸಿದ ಹರಿಯಪ್ಪ ಈಗ ಮಂಗಳೂರಿನಲ್ಲಿ ವಿಶ್ರಾಂತರು. ಅಕೌಂಟ್ ಅಸಿಸ್ಟಂಟ್, ಪೋಸ್ಟಲ್ ಅಸಿಸ್ಟಂಟ್, ಪೋಸ್ಟ್ ಮಾಸ್ಟರ್, ಉಪನ್ಯಾಸಕ, ಪ್ರೊಫೆಸರ್… ಹೀಗೆ ಅವರ ಪಾತ್ರಗಳೂ ವೈವಿದ್ಯಮಯ. ಜೊತೆಗೆ ತನ್ನ ನಿಷ್ಠುರ ನಿಲುವುಗಳ ಕಾರಣಕ್ಕೆ ಹೋದಲ್ಲೆಲ್ಲ “ಮಾರ್ಕ್” ಇಲ್ಲದೇ ಬಂದದ್ದಿಲ್ಲ. ಅದು ಈ ಪುಸ್ತಕದ ಹೂರಣ.
ಅವರ “ಮಾನ ಮತ್ತು ಇತರ ಕಥೆಗಳು”- ಮೊದಲ ಕಥಾ ಸಂಕಲನ ಹಾಗೂ ಮೂರು-ನಾಲ್ಕು ವರ್ಷ ಹಿಂದೆ ಅವರ ಕವನ ಸಂಕಲನ “ಪಿಲಿಯನ್ ರೈಡರ್” ಪ್ರಕಾಶಕನಾಗುವ ಅವಕಾಶ ನನಗೆ ಸಿಕ್ಕಿತ್ತು. ಹಾಗಾಗಿ, ಈ ಪುಸ್ತಕದಲ್ಲಿ ನಾನು ಕೂಡ ಒಂದು ಪುಟ್ಟ ಪಾತ್ರ!
ಹರಿಯಪ್ಪ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಿಲ್ಲ. ಹಾಗಾಗಿ, ಅವರ ಕೋರಿಕೆಯಂತೆ, ಅವರ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಇಲ್ಲಿ ಕೊಟ್ಟಿದ್ದೇನೆ. ಆಸಕ್ತರು ಅವರಿಂದ ಪುಸ್ತಕ ನೇರವಾಗಿ ತರಿಸಿಕೊಳ್ಳಬಹುದು.






0 Comments