ಜ್ಯೋತಿ ಇರ್ವತ್ತೂರು ಲಹರಿ- ಕೊರೋನಾ ಬಾತ್…

ಜ್ಯೋತಿ ಇರ್ವತ್ತೂರು

 ಬದುಕು ನಿಂತ ನೀರಲ್ಲ ಅದು ಹರಿವ ನದಿ, ಕೆಲವೊಮ್ಮೆ ಭೋರ್ಗೆರೆಯುತ್ತಾ ಮತ್ತೊಮ್ಮೆ ಶಾಂತವಾಗಿ ಹರಿಯುತ್ತಲೇ ಇರುತ್ತದೆ. 

ಇತ್ತೀಚಿನ ವರುಶಗಳಲ್ಲಿ ನಡೆದ ಕೆಲವು ಘಟನೆಗಳು ಕೇವಲ ಬರಹಕ್ಕೆ ಸೀಮಿತವಾಗಿರದೆ ನಿಜವಾಗಿ ನಡೆದು ಕೆಲವು ಘಟನೆಗಳಿಂದ ನನ್ನನ್ನು ಅದು ಜರ್ಜರಿತವಾಗಿ ಮಾಡಿದೆ. ಕೆಲವೊಮ್ಮೆ ಇನ್ನು ಹೆಚ್ಚಾಗಿ ಗಟ್ಟಿಗೊಳಿಸಿದೆ. ಅದು ಕಲಿಸಿದ ದೊಡ್ಡ ಪಾಠ ಎಲ್ಲರನ್ನು ಪ್ರೀತಿಸುಎಂಬುದು. ಹೋದಲ್ಲಿ ಬಂದಲ್ಲಿ ಖುಶಿಯ ವಾತಾವರಣ ನಿರ್ಮಿಸು. ನಿನ್ನ ನೋವ ನ್ನು ನುಂಗಿ ನಗುವ ಕಲೆಯನ್ನು ಕಲಿ. ಇದು ಯಾವಾಗಲು ನನಗೆ ನೆನಪಾಗುತ್ತಲೇ ಇರುತ್ತದೆ. 

ಕೆಲವೇ ತಿಂಗಳುಗಳ ಅಂತರದಲ್ಲಿ  ನನ್ನ ಆತ್ಮದ ಭಾಗವೇ ಆಗಿದ್ದ ಅಪ್ಪನನ್ನು ಕಳೆದುಕೊಂಡೆ. ಆನಂತರ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅತ್ತೆ ನಾನು ಅತ್ತೆ ಎಂದು ಯಾವತ್ತು ಕರೆದೆ ಇಲ್ಲ. ನಾನು ಬಾಯಿ ತುಂಬಾ ಕರೆದಿದ್ದು ಅಮ್ಮಾಎಂದೆ. ಅವರನ್ನು ಕೂಡ ಕಳೆದುಕೊಂಡು ಬಿಟ್ಟೆ. ನನ್ನ ತೋಳು ಹಿಡಿದು ಏನಾಗ್ತಿದೆ ಗೊತ್ತಾಗ್ತಿಲ್ಲ ಮಗ ಎಂದು ಹೇಳಿದ್ದು ಇನ್ನೂ ಕಿವಿಯಲ್ಲಿ ಗುನುಗುಡುತ್ತಲೇ ಇದೆ.

ಇರ್ಲಿ ಇದರ ಮಧ್ಯೆ ನನಗು ಸ್ವಲ್ಪ ಅನಾರೋಗ್ಯ ಕಾಡಿ ಚೇತರಿಸಿಕೊಳ್ಳುತ್ತಿರುವ ಸಮಯ.

ಮೊನ್ನೆ ನನ್ನದು ಯಾವುದೋ ಬ್ಯಾಂಕಿನ ಕೆಲಸಕ್ಕೆಂದು ಮಲ್ಲೇಶ್ವರಂಗೆ ಹೋಗಿದ್ದೆ. ವಾಪಾಸು ಬರುವಾಗ ಓಲಾ ಬುಕ್ ಮಾಡಿದೆ. ಕಾರು ಹತ್ತಿ ಕೂತಾಗ ಮಾತಾಡೋದು ನನ್ನ ಅಭ್ಯಾಸ.  

ಮಧ್ಯೆ ಯಾಕೋ ನಮ್ಮ ಹಳೆಯ ಮನೆಯಲ್ಲಿ  ಕೆಲಸಕ್ಕೆ ಬರುತ್ತಿದ್ದ ಅಕ್ಕಮ್ಮನ ಜೊತೆ ಮಾತಾಡಬೇಕೆಂಬ ಮನಸಾಯಿತು. ಯಾಕೋ ನಮ್ಮಿಬ್ಬರ ನಡುವೆ ಒಂದು ಅವಿನಾಭಾವ ಸಂಬಂಧ. ಪೌರಕಾರ್ಮಿಕಳಾಗಿಯು ಕೆಲಸ ಮಾಡೋ ಆಕೆ ಚಿಕ್ಕ ವಯಸ್ಸಿನಲ್ಲಿಯೇ ಗಂಡನಿಂದ ದೂರವಾಗಿ ಸ್ವಾಭಿಮಾನದ ಜೀವನವನ್ನು ಸಾಗಿಸುತ್ತಿರೋಳು. ತಾನೇ ದುಡಿದು ಮಗಳ ಮದುವೆಯನ್ನು ಮಾಡಿಸಿರುವವಳು. ತನಗಾದ ನೋವು ನಲಿವನ್ನು ಚಹಾ ಕಪ್ ನೊಂದಿಗೆ ಹಂಚಿಕೊಳ್ಳುತ್ತಿದ್ದೆ. ನನಗೆ ಸ್ವಲ್ಪ ಸೆನ್ಸ್ ಆಫ್ ಹ್ಯೂಮರ್ ಜಾಸ್ತಿ ಇರೋದ್ರಿಂದ ಜಾಸ್ತಿ ನಗಿಸ್ತಾ ಇದ್ದೆ.

ಈಗ ಯಲಹಂಕದಿಂದ ಕೆಂಗೇರಿ ಕಡೆ ಬಂದಿರೋದ್ರಿಂದ ಅಕ್ಕಮ್ಮನನ್ನು ತುಂಬಾನೆ ಮಿಸ್ಮಾಡ್ಕೋತ್ತೀನಿ ಹಾಗೆ ಆಕೆಯು ಕೂಡ.

ಹಲೋ ಎಂದೆ.

ಮೇಡಂ ಹೇಗಿದ್ದೀರಾ ಅಂತ ಆ ಕಡೆಯಿಂದ ಧ್ವನಿ ಬಂತು.

ಸ್ವಲ್ಪ ರೇಗಿಸಿ ನಗಿಸಿದ ನಂತರ ಮೇಡಂ ನೀವೀಗ ಆರಾಮ ಆಗ್ತಿದ್ದೀರಾ ನಿಮ್ಮ ಧ್ವನಿಯಲ್ಲೇ ಗೊತ್ತಾಗ್ತಿದೆ. ತುಂಬಾ ತುಂಬಾ ಖುಶಿಯಾಗ್ತಿದೆ ಮೇಡಂ. ನೀವು ಖುಶಿಯಾಗಿದ್ರೆ ಅದೇನೋ ತುಂಬಾ ಸಂತೋಶ ಅಂತ ಅಕ್ಕಮ್ಮ ಮುಗ್ಧ ಧ್ವನಿಯಲ್ಲೆ ಮಾತಾಡುತ್ತಳೇ ಇದ್ದಳು. ನಿಜ ಜೀವನದಲ್ಲಿ ನಾವು ಗಳಿಸೋದು ಇಶ್ಟೆ ಅಲ್ವಾ ಅನಿಸಿತು.

ಬರುವ ವಾರ ಬರ್ತೀನಿ ಮೇಡಂ ಅಂತ ಅಕ್ಕಮ್ಮಹೇಳಿದ್ಲು. ಬಂದಾಗ ಒಂದು ಕಪ್ ಚಹಾ ಅಕ್ಕಮ್ಮನ ಕೈಯಿಂದ ಮಾಡಿಸ್ಕೊಂಡು ಕುಡಿಯೋಕೆ ನಾನಂತು ಕಾಯ್ತಾನೇ ಇದ್ದೀನಿ.

ಹಾ ಈಗ ನಮ್ಮ ಓಲಾ ಚಾಲಕರೊಂದಿಗಿನ ಮಾತಿನ ಸರದಿ. ಅವರು ಮೆಕಾನಿಕಲ್ ಇಂಜಿನಿಯರಿಂಗ್ ಓದಿದ್ದು.. ಕೊರೋನ ಬಂದ ಮೇಲೆಇವರ ಜೀವನದ ಚಿತ್ರಣವೇ ಬದಲಾಗಿದೆ. ಪ್ರೊಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿ ಕೈತುಂಬಾ ಹಣ ಸಂಪಾದಿಸುತ್ತಿದ್ದವರು, ಆದರೀಗ ಎರಡೆರೆಡು ಕಡೆ ಕೆಲಸವನ್ನು ಮಾಡೋ ಅನಿವಾರ್ಯತೆ. ಮಾಡಿದ ಸಾಲ ತೀರಿಸುವುದೇ  ಕಾಂತರಾಜ್ ಅವರಿಗೆ ಈಗ ದೊಡ್ಡ ತಲೆನೋವು. ಏನು ಮಾಡಬೇಕೆಂಬುದೇ ಅವರಿಗೆ ಅರಿವಾಗುತ್ತಿಲ್ಲ. 

ಮೇಡಂ ಕೊರೋನಾ ಬಂದು ರಾತ್ರಿ ಹಗಲೆನ್ನೆದೆ ದುಡಿಯುವಂತಾಗಿದೆ ಮೇಡಂ.. ರಾತ್ರಿ ನಿದ್ದೆ ಬರೋಲ್ಲ. ರಾತ್ರಿ ಹಗಲು ಗಾಡಿ ಓಡಿಸಿದರು ಸಾವಿರ ಸಂಪಾದಿಸಬಹುದು ಇದರಿಂದ ಸಾಲ ತೀರಿಸೋದು ಹೇಗೆ? ಮೇಡಂ ಒಂದು ತಿಳಿಯುತ್ತಿಲ್ಲವೆಂದರು. 

ಯಾವ ಪ್ರೊಜೆಕ್ಟ್ ಬರ್ತಾ ಇಲ್ಲ. ರಿಯಲ್ ಎಸ್ಟೇಟ್ ಬಿದ್ದು ಹೋಗಿದೆ.

ಒಂದು ಟೈಂ ನಲ್ಲಿ ಐವತ್ತು ಜನರಿಗೆ ಉದ್ಯೋಗ ಕೊಡ್ತಾ ಇದ್ದೆ ಈಗ ನನಗೆ ಉದ್ಯೋಗ ಇಲ್ಲದ ಹಾಗಿದೆ.

ಬಿಸಿನೆಸ್ ಚೆನ್ನಾಗಿರುವಾಗ ನೆಲಮಂಗಲದ ಬಳಿ ಸ್ವಂತ ಮನೆ ತಗೊಂಡೆ ಕಾರುಗಳನ್ನು ಖರೀದಿಸಿದೆ ಆದರೆ ಈಗ ಈ ಕೊರೋನಾದಿಂದ ಮಾಡಿದ ಸಾಲ ತೀರಿಸುವ ಬಗೆಯೇ ತಿಳಿಯುತ್ತಿಲ್ಲ. ಕಾಂತರಾಜ್ ಮಾತಾಡುತ್ತಲೇ ಇದ್ರು. 

ಇನ್ನು ನಮ್ಮ ಬಾಸ್ ಪರಿಸ್ಥಿತಿ ಕೇಳೋ ಹಾಗಿಲ್ಲ ನೂರಾರು ಕೋಟಿ ಬಿಸಿನೆಸ್ ಮಾಡುತ್ತಿದ್ದವರ ವ್ಯವಹಾರ 30 ಕೋಟಿಗೆ ಬಂತು. ನಂತರ ಅದು ಇಳೀತಾನೆ ಹೋಯ್ತು. ಸಾಲ ಬೆಳೀತಾನೆ ಹೋಯ್ತು ಅವರು ತಾನೇ ಏನು ಮಾಡಬೇಕು ಅಲ್ವಾ ಮೇಡಂ ಅಂದ್ರು.

ಛೇ ಎಂತ ಸಮಸ್ಯೆ ಅಲ್ವಾ ಎಂದು ನಾನು ಮರುಗಿದೆ. ಏನು ಮಾಡೋದು ಮೇಡಂ ಏನು ಮಾಡೋಕು ಅಗೋಲ್ಲ ನಮ್ಮ ಸಮಸ್ಯೆ ಕೇಳೋರಿಲ್ಲ. ಕೇಳಿದ್ರು ಅತ್ರೂ ಪ್ರಯೋಜನವು ಇಲ್ಲ. ದುಡೀಬೇಕು ದುಡೀಬೇಕು ಬೇರೇನು ಪ್ರಯೋಜನ ಇಲ್ಲ. ಸರ್ಕಾರಿ ಉದ್ಯೋಗ ಇದ್ದವರಿಗೆ ಇನ್ ಕಮ್ ಬಗ್ಗೆ ಗ್ಯಾರಂಟಿ ಆದ್ರು ಇರುತ್ತೆ ನಮ್ಮ ಪಾಡು ಹೀಗೆ ಏನು ಮಾಡೋದು ಅಂದಾಗ ಸುಮ್ಮನಾದೆ.

ನಿಜ ಕೊರೋನಾ ತಂದ ಆವಾಂತರ ಮಾನವನ ಸ್ವಾರ್ಥದ ಪ್ರತೀಕ. ಅದರ ಪರಿಣಾಮ ಮಾತ್ರ ಎಲ್ಲರು ಅನುಭವಿಸುವಂತಾಗಿದೆ. ಅತ್ತ ಕಣ್ಣು ಹಾಯಿಸಿದರೆ ಕಂಡಿದ್ದು ನಮ್ಮ  ವೃಶಭಾವತಿ. ಈಟಿವಿಯಲ್ಲಿದ್ದಾಗ ಅದರ ಬಗ್ಗೆ ಸ್ಟೋರಿ ಮಾಡಲು ಹೋದಾಗ ನದಿಯ ತಪ್ಪಲಲ್ಲಿದ್ದ ರೈತರು  ಕಣ್ಣೀರು ಹಾಕಿದ್ರು. ಹಿಂದೆ ನದಿ ನೀರಲ್ಲಿ ಈಜಾಡಿದ ನಾಣ್ಯ ಬಿದ್ರು ನಿರ್ಮಲ ನೀರಿನಲ್ಲಿ ಕಾಣುತ್ತಿದ್ದ ನೆನಪುಗಳನ್ನು ಮೆಲುಕು ಹಾಕಿದ್ರು.

ನಾನೀ ನೆನಪನ್ನು ಕಾಂತರಾಜ್ ಅವರೊಂದಿಗೆ ಹಂಚಿಕೊಂಡೆ. ನೋಡಿ ಈ ನದಿ, ಭೂಮಿ ತಾಯಿ ಆಕೆಯು ನಮ್ಮ ದೌರ್ಜನ್ಯವನ್ನು ಎಶ್ಟಂತ ಸಹಿಸಿಕೊಳ್ಳಲು ಸಾಧ್ಯ ಅಲ್ವಾ ಅಂದೆ. 

ನಿಜ ಮೇಡಂ ಅಂದ್ರು ಕಾಂತರಾಜ್. 

ಈ ಮಾತುಕತೆಯಲ್ಲಿ ಸಮಯ ಕಳೆದಿದ್ದೇ ತಿಳಿಯಲಿಲ್ಲ. ಮನೆ ಹತ್ತಿರ ಕಾರು ಬಂದಿತ್ತು. 376 ರೂಪಾಯಿ ಚಾರ್ಜ್ ಆಗಿತ್ತು. 500 ರೂಪಾಯಿ ನೋಟು ಕಾಂತರಾಜ್ ಅವರ ಕೈಗಿತ್ತು ಥ್ಯಾಂಕ್ಯೂ ಹೇಳಿ ಮನೆಯತ್ತ ತೆರಳಿದೆ. 

 ಕಾಂತರಾಜ್ ಅವರ ಮುಖದಲ್ಲಿ ಧನ್ಯತಾ ಭಾವವಿತ್ತು. ಕೊರೊನಾದಿಂದ ಕೊರಗುವ ಕುಟುಂಬಗಳ ಮುಖ ಹಾಗೇ ಕಣ್ಣ ಮುಂದೆ ಹಾದು ಮನಸ್ಸಿಗೆ ನೋವಾಯಿತು. ಆದರೆ ನನ್ನನ್ನು ಆವರಿಸಿದ್ದು ಮೌನ.ಕಾಡಿದ್ದು ಅಸಹಾಯಕತೆ. ದೇವರೇ ಎಲ್ಲರ ನೋವ ದೂರ ಮಾಡಪ್ಪ ಎಂಬ ಪ್ರಾರ್ಥನೆ ಹೃದಯದಿಂದ ಹರಿದುಬಂತು.

‍ಲೇಖಕರು Admin

January 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: