‘ವೀ… ದ ಪೀಪಲ್ ಅಫ್ ಇಂಡಿಯಾ..’

ಎನ್ ರವಿಕುಮಾರ್ ಟೆಲೆಕ್ಸ್

ಸ್ವಾತಂತ್ರ್ಯ ಸಮಾನತೆ ಬಂಧುತ್ವ ವೆಂಬುದು ಸರ್ವ ಜನರ ಮೌಲ್ಯ ನೆನಪಿರಲಿ..
ಸಮಾಜ ಕ್ರಾಂತಿಯೂ ನಮ್ಮೊಳು ಮೂಡಲಿ..
ನುಡಿದಂತೆ ನಡೆಯುವ ಛಲ ಬರಲಿ…..
ಸ್ವಾತಂತ್ರ್ಯ ಸಮಾನತೆ ಬಂಧುತ್ವ ಎಂಬುದು ಈ ಮಣ್ಣ ಮೌಲ್ಯವೂ ನೆನಪಿರಲಿ…
ಬಾಬಾಸಾಹೇಬರ ಈ ಸಂವಿಧಾನವೂ ಎದೆಯ ತಾಯ್ತನ ನೆನಪಿರಲಿ…

ಸಂವಿಧಾನವೆಂದರೇನು ಎಂದು ಅಕ್ಷರಸ್ತನಿಂದ ತಿಳಿದುಕೊಂಡ ಅಲೆಮಾರಿ ಸಮುದಾಯವೊಂದು ನಾಟಕದ ನಡುವಂತರದಲ್ಲಿ ಹೀಗೆ ಪದಕಟ್ಟಿ ಹಾಡುವಾಗ ಇಡೀ ತುಂಬಿದ ರಂಗ ಮಂದಿರ ಆತ್ಮ ಗೌರವದ ಭಾವದಿಂದ ಚಪ್ಪಾಳೆಯೊಂದಿಗೆ ಅಭಿವ್ಯಕ್ತಿಸುತ್ತದೆ.

ಶಿವಮೊಗ್ಗ ರಂಗಾಯಣ ಸರ್ವರಿಗೂ ಸಂವಿಧಾನ ಯೋಜನೆಯಡಿ ಜನವರಿ 26 ರ ಗಣರಾಜ್ಯೋತ್ಸವದಂದು ಪ್ರಸ್ತುತಿ ಪಡಿಸಿದ ‘ವಿ ದ ಪೀಪಲ್ ಆಫ್ ಇಂಡಿಯಾ’ ನಾಟಕ ಗಣರಾಜ್ಯೋತ್ಸವವನ್ನು ಅರ್ಥಪೂರ್ಣಗೊಳಿಸಿತು.

ಜನಪದ ಹಾಡಿನೊಂದಿಗೆ ರಂಗ ಪ್ರವೇಶಿಸುವ ಅಲೆ ಮಾರಿ ಸಮುದಾಯಗಳು ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಕಂಡು ಸಂವಿಧಾನವನ್ನು ಅರಿಯುತ್ತದೆ. ಈ ಅಲೆಮಾರಿ ಸಮುದಾಯ ರಂಗದ ಸೂತ್ರಧಾರಿಯಂತೆ ನಾಟಕವನ್ನು ನಿರೂಪಿಸುತ್ತಾ ಸಾಗಿದಂತೆ ಪಾತ್ರಗಳಾಗಿಯೂ ನಾಟಕವನ್ನು ಮುನ್ನಡೆಸುತ್ತವೆ. ಸಂವಿಧಾನದ ರಚನೆ,ಅದರು ರೂಪುಗೊಂಡ ಪರಿ, ಆಶಯ ಮತ್ತು ಗುರಿಗಳ ಚರ್ಚೆ ಮತ್ತು ಮೌಲ್ಯಗಳನ್ನು ಪ್ರೇಕ್ಷಕರಿಗೆ ಮನನ ಮಾಡಿಕೊಡುತ್ತಲೆ ನಾಟಕ ಅಂತಿವಾಗಿ ಸಂವಿಧಾನದ ವಿಧಿತ ಸ್ತ್ರೀ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಎತ್ತಿ ಹಿಡಿಯು ಮೂಲಕ ಸಂಪನ್ನಗೊಳ್ಳುತ್ತದೆ.

ರಾಜಪ್ಪ ದಳವಾಯಿ ಅವರು ಈ ದೇಶದ ನೆಲಮೂಲದ ಪದ ಮತ್ತು ಪಾತ್ರಗಳೊಂದಿಗೆ ನಾಟಕವನ್ನು ರಚಿಸಿದ್ದು, ಕೆ.ಪಿ ಲಕ್ಷ್ಮಣ್ ನಿರ್ದೇಶನ ಜೀವ ತುಂಬಿದೆ.

ಓದಿನಲ್ಲಿ ಮಗ್ನರಾಗಿದ್ದ ಅಂಬೇಡ್ಕರ್ ಅವರು ಅವರ ಶಿಷ್ಯ ಕೂಗಿದರೂ ಕಿವಿ ಗೊಡುವುದಿಲ್ಲ. ಆದರೆ ಅಲೆಮಾರಿ ನೀಲಕ್ಕ ಕೂಗಿ ಕರೆದಾಗ ಅಂಬೇಡ್ಕರ್ ಎದ್ದು ಬರುತ್ತಾರೆ. ಅದೊಂದು ಭಾವುಕ ಕ್ಷಣ. ಇದು ಈ ದೇಶದ ಬಡವರ, ಅಸಹಾಯಕರ, ದಮನಿತರ ಕೂಗಿ ಅಂಬೇಡ್ಕರ್ ತಾಯಿಯಂತೆ ಓಗೂಡುತ್ತಾರೆ, ಅಂದರೆ ಸಂವಿಧಾನ ಈ ಸಮುದಾಯಗಳ ರಕ್ಷಣೆಗಿದೆ. ಬೆಂಬಲಕ್ಕಿದೆ ಎನ್ನುವುದನ್ನು ಅತ್ಯಂತ ಸೂಚ್ಯವಾಗಿ ನಾಟಕದಲ್ಲಿ ತೋರಲ್ಪುಡುತ್ತದೆ. ವರ್ತಮಾನದಲ್ಲಿ ಸಂವಿಧಾನ ವಿರೋಧಿ ರಾಜಕೀಯವನ್ನು ಸವರಿಕೊಂಡು ಮುಂದೆ ಸಾಗುವ ನಾಟಕ ರಾಜಕಾರಣಿಗಳ, ಧರ್ಮಾಧಿಕಾರಿಗಳ, ಸುದ್ದಿಮಾಧ್ಯಮಗಳ ಬೌದ್ಧಿಕ ದಿವಾಳಿತನವನ್ನೂ‌ ಲೇವಡಿ ಮಾಡುತ್ತದೆ.

ಇದೇ ನೀಲಕ್ಕನಿಗೆ ಕೊನೆಯಲ್ಲಿ ತನ್ನ ಕೋಟು, ಪೆನ್ನು ಕೊಟ್ಟು ನಿರ್ಗಮಿಸುವ ಅಂಬೇಡ್ಕರ್ ಎಲ್ಲರ ರಕ್ಷಣೆ,ಹಕ್ಕು, ನ್ಯಾಯಕ್ಕಾಗಿ ಸಂವಿಧಾನವಿದೆ ಎಂಬ ಭರವಸೆಯನ್ನು, ವಿಶ್ವಾಸವನ್ನು ಬಿಟ್ಟುಹೋಗುವ ಸಂಕೇತದೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

‘ವಿ ದಿ ಪೀಪಲ್ ಆಫ್ ಇಂಡಿಯಾ’ ರಂಗರೂಪಕ ಸಂವಿಧಾನದ ಅರಿವಿನ ಸಮಗ್ರ ನೋಟವಲ್ಲದೆ ಇರಬಹುದು. ಆದರೆ ಸಂವಿಧಾನವನ್ನು ಅರಿಯುವ ದಾಹವನ್ನು, ಜಾಗೃತಿಯನ್ನು ಮತ್ತು ಸಂವಿಧಾನವನ್ನು ಗೌರವಿಸುವ ಹೊಣೆಗಾರಿಕೆಯನ್ನು ಬಿತ್ತುವ ಪ್ರಯತ್ನವಾಗಿದೆ . ಇದು ಸಂವಿಧಾನ ಓದುವಿನ, ಅರಿಯುವ ಪ್ರವೇಶಿಕೆಯಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ದೇಶದಲ್ಲಿ ಸಂವಿಧಾನ, ಅಂಬೇಡ್ಕರ್ ಅವರ ಕುರಿತಾದ ಒಂದು ವಿಕೃತ ಸಹನೆಯನ್ನು ಬಿತ್ತುವ ಹುನ್ನಾರಗಳು ನಡೆಯುತ್ತಲೆ ಇವೆ. ಜಗತ್ತು ಭಾರತದ ಸಂವಿಧಾನವನ್ನು ಸರ್ವ ಶ್ರೇಷ್ಠ ಸಂವಿಧಾನ ಎಂದು ಕೊಂಡಾಡುತ್ತಿರುವಾಗ ಅದೇ ಸಂವಿಧಾನವನ್ನು ಭಾರತೀಯರೇ ಸ್ಥಿತಿಲಗೊಳಿಸುವ, ಅನುಮಾನಗಳಿಗೆ ಈಡು ಮಾಡುವ ರಾಜಕೀಯ ಷಡ್ಯಂತ್ರ ವೂ ನಡೆಯುತ್ತಿರುವುದು ವಿಪರ್ಯಾಸ.

ಈ ನೆಲದ ಎಲ್ಲಾ ಜನರ ಸ್ವಾತಂತ್ರ್ಯ , ಸಮಾನತೆ ಮತ್ತು ಸಹೋದರತ್ವ ದ ಅಂತರ್ ಜಲವಾಗಿರುವ ಸಂವಿಧಾನದ ಬಗೆಗಿನ ಪರಿಪೂರ್ಣ ಅರಿವಿಲ್ಲದಿರುವುದು, ಜಾತಿ ಸೋಂಕಿನಿಂದ ನರಳಾಡುತ್ತಿರುವವರಿಂದ ಇಂತಹ ಅಪಪ್ರಚಾರಗಳಿವೆ. ಅದರಲ್ಲೂ ನಮ್ಮ ಯುವ ಸಮುದಾಯ ಸಂವಿಧಾನದ ಅರಿವಿನಿಂದ ದೂರ ನಿಂತು ಮಾತಾಡುತ್ತಿರುವುದು ಅಪಾಯಕಾರಿ ಸೂಚನೆಯಂತಿದೆ. ಸಂಕೀರ್ಣ ಭಾರತವನ್ನು ಸಮಗ್ರವಾಗಿ ಕಟ್ಟಿಕೊಟ್ಟ ಸಂವಿಧಾನ ನಮ್ಮ ಹೆಗ್ಗಳಿಕೆ ಅದರ ಮೌಲ್ಯಗಳ ಅರಿಯದೆ ನಮಗೆ ಉಳಿಗಾಲವಿಲ್ಲ ಎಂಬುದನ್ನು ಈ ನಾಟಕ ಮತ್ತೆ ಮತ್ತೆ ಪ್ರತಿಪಾದಿಸುತ್ತದೆ. ಸಂವಿಧಾನವನ್ನು ಅಂಬೇಡ್ಕರ್ ಅವರೊಬ್ಬರೆ ಬರೆದಿಲ್ಲ ಎಂಬ ಕೇಡಿನ ಮಾತುಗಳಿಗೂ ಇಲ್ಲಿ ಸ್ಪಷ್ಟ ಉತ್ತರ ಸಿಗುತ್ತದೆ.

ಪ್ರಭುತ್ವಗಳ ಬೆಂಗಾವಲಿನಲ್ಲೆ ಅತ್ಯಂತ ಅಸಹನೆ, ಅಸಮಾನತೆ, ಹಿಂಸೆ, ಸ್ವಾತಂತ್ರ್ಯ ಹರಣ ನಡೆಯುತ್ತಿರುವ ಇಂತಹ‌ ಹೊತ್ತಿನಲ್ಲಿ ‘ವೀ ದ ಪೀಪಲ್ ಆಫ್ ಇಂಡಿಯಾ’ ನಂತಹ ನಾಟಕಗಳ ಜರೂರು ಇದೆ. ಇವು ಸಂವಿಧಾನದ ಬಲದ ನಂಬುಗೆಗಳನ್ನು ನೂರ್ಮಡಿಗೊಳಿಸುತ್ತವೆ.

೧೯೯೭ ರಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ‘ಭಾರತ ಭಾಗ್ಯವಿಧಾತ’ (ಪರಿಕಲ್ಪನೆ: ಎನ್. ಆರ್ ವಿಶುಕುಮಾರ್, ನಿರ್ದೇಶನ – ಸಾಹಿತ್ಯ: ಬಿ.ಎಂ ಗಿರಿರಾಜ್) ಧ್ವನಿಬೆಳಕು ಎಂಬ ಅಭೂತಪೂರ್ವ ರೂಪಕ ರೂಪಿಸಿ ನಾಡಿನಾದ್ಯಂತ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಮಹತ್ತು ಮತ್ತು ಮಹೋನ್ನತಿಯನ್ನು ಸಾರುವ ಕೆಲಸ ಮಾಡಿತ್ತು.

ಇದೀಗ ಶಿವಮೊಗ್ಗ ರಂಗಾಯಣ ‘ವೀ ದಿ ಪೀಪಲ್ ಆಫ್ ಇಂಡಿಯಾ’ ಎಂಬ ರಂಗರೂಪಕವಾಗಿ ಮುಂದುವರೆಸಿದೆ. ಶಿವಮೊಗ್ಗ ರಂಗಾಯಣದ ಪಯಣದಲ್ಲಿ ಇದೊಂದು ಮೈಲಿಗಲ್ಲಾಗಿ ದಾಖಲಾಗುತ್ತದೆ.

ಸಾಂಸ್ಕೃತಿಕ ಮಾಧ್ಯಮವಲಯಗಳು ರಾಜಕೀಯ ಸೈದ್ಧಾಂತಿಕತೆ ಜೋತು ಬೀಳದೆ ಸಂವಿಧಾನಕ್ಕೆ ಬದ್ಧವಾಗಿದ್ದಾಗ ಮಾತ್ರ ಇಂತಹ ಹೊಣೆಗಾರಿಕೆಯನ್ನು ತೋರಲು ಸಾಧ್ಯ. ಶಿವಮೊಗ್ಗ ರಂಗಾಯಣ ಒಂದು ಮಾದರಿ ಎನ್ನಬಹುದು..

ರಂಗಮಂದಿರ ಬಿಟ್ಟು ಹೊರಬಂದಾಗಲೂ… ಅಂಬೇಡ್ಕರ್ ಕೇರಿಯಿಂದ ಊರಿಗೆ ಮದ್ದು ಅರೆದ ಡಾಕ್ಟರು, ಭಾರತಕ್ಕೆ ಅಂಗಿ ಹೊಲಿದ ಟೈಲರು…

‘ವೀ… ದ ಪೀಪಲ್ ಅಫ್ ಇಂಡಿಯಾ..’ ಹಾಡು ಎದೆಯ ಕವಾಟುಗಳನ್ನು ತಟ್ಟುತ್ತಲೆ ಇತ್ತು.

‍ಲೇಖಕರು Admin

January 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: