ಮಲರ್‌ ವಿಳಿ ಅನುವಾದಿತ ಕವಿತೆ- ಅಮೃತದೊಳಗೆ ವಿಷ…

ಮೂಲ : ಡಾ ವೈರಮುತ್ತು

ಕನ್ನಡಕ್ಕೆ : ಡಾ ಮಲರ್‌ ವಿಳಿ ಕೆ

ಅವಸರವಾಗಿ
ಉಸಿರಾಡಬೇಕು
ಕಾರಿನ ಚಾಲಕ
ಊರಾಚೆ ಹೋಗು

ಕಣ್ಣೆವೆಗಳ ಹಿತವಾಗಿ ಮುಚ್ಚಿ
ನಿರಾಳವಾಗಿ
ಪುಪ್ಪುಸ ಹಿಗ್ಗುವಂದದಿ
ಆಳವಾಗಿ
ಅವಸರವಾಗಿ
ಸ್ವತಂತ್ರವಾಗಿ
ಉಸಿರಾಡಬೇಕು
ಊರಾಚೆ ಹೋಗು

ಈ ನಗರದ ವಾಯುವಿನಲ್ಲಿ ನನಗೆ
ವಿಶ್ವಾಸವಿಲ್ಲ

ವಾಯುವಿನ ಬಣ್ಣ
ಕಪ್ಪಲ್ಲ
ಇದರಲಿ
ಪ್ರಾಣವಾಯು ಪ್ರತ್ಯೇಕಿಸಲು
ನಾಸಿಕಕ್ಕೆ ತ್ರಾಣವಿಲ್ಲ
ಸುತ್ತಲಿರುವುದು ಗಾಳಿಯಲ್ಲ
ಇದು
ಪೆಟ್ರೋಲ್‌ ಡೀಸೆಲ್ಲಿನ
ಮೂಲದಿ ಬಂದುದು

ಇದನ್ನು
ಶ್ವಾಸಿಸುವಲ್ಲಿ
ಯಂತ್ರದ ಮೂಗು
ಬೇಕು ನನಗೆ

ಪಾಪಿಗಳೇ
ಮರಣ ಶಯ್ಯೆಗೆ
ಗಾಳಿಯ ದೂಡಿದ
ಮಹಾ ಪಾಪಿಗಳೇ

ಧೂಮಪಾನ ಮಾಡಿದಿರಿ
ಗಾಳಿವ್ರಣವಾಯಿತು

ಯಂತ್ರದ ಹೊಗೆ ಎದ್ದು
ಗಾಳಿ ಘನವಾಯಿತು

ಮುಗಿಲೆತ್ತರದ ಕಸದಿ
ಗಾಳಿ ಘನೀಭವಿಸಿತು

ಹೇಗೆ ಉಸಿರಾಡಲಿ ?
ಶ್ವಾಸಕೋಶವೀಗ
ಉಕ್ಕಿನದಾಗಿರಬೇಕು ನನಗೆ

ಅವಸರವಾಗಿ
ಉಸಿರಾಡಬೇಕು
ಕಾರಿನ ಚಾಲಕ
ಊರಾಚೆ ಹೋಗು

ಆಹಾರ ಹಳಸಿದರೆ
ತುತ್ತಿನ ಚೀಲವ ಉಪವಾಸವಿರಿಸುವೆ

ನೀರು ಕಲುಷಿತಗೊಂಡರೆ
ದಾಹವ ಮುಂದೂಡುವೆ

ವಾಯು ಮಲಿನಗೊಂಡರೆ
ಪುಪ್ಪುಸ
ಉಪವಾಸವಿರಿಸಲು ಸಾಧ್ಯವೇ ?

ಅಣುಸ್ಥಾವರಗಳ ನಿಟ್ಟುಸಿರು
ಗಿರಣಿಗಳ ಕಪ್ಪುಸಿರು
ಕಾರ್ಖಾನೆಗಳ ಬಿಸಿಯುಸಿರು
ಎಲ್ಲ ಮಿಶ್ರಣಗೊಂಡರೆ
ಮುಂದಿನ ಶತಮಾನದಿ
ಮನುಕುಲಕ್ಕೆ ಉಳಿಗಾಲವೋ?

ಅಥವಾ
ಮುಂದಿನ ಶತಮಾನದಿ
ಗಾಳಿಗೆ ಉಳಿಗಾಲವೋ?

ಬಂಧ ವಿಮುಕ್ತರಾದ
ವಿರಾಗಿಗಳಿಗೂ
ಅರ್ಬುದರೋಗ ಬರುವುದೇತಕ್ಕೆ?

ಅದು
ವಿಷವುಣಿಸಿದ ವಾಯುವಿನ
ಕೊಡುಗೆ ಕಾಣಣ್ಣ

ಪತಿವ್ರತೆಯರು ಪ್ರಾರ್ಥಿಸಿಯೂ
ಮುಂಗಾರುಮಳೆ ಪೊಳ್ಳಾದುದೇಕೆ?
ಮೇಘಗಳಿಂದ ಹಾಲು ಕರೆಯುವ
ಪರಿಶುದ್ಧಗಾಳಿ ಮರಣಹೊಂದಿತಣ್ಣ

ಅಣುಬಾಂಬಿನ ಧೂಳಿಂದ
ಗಾಳಿ ಎಂದೋ
ಶೀಲಹರಣಗೊಂಡಿತಣ್ಣ

ವಾಯುವೇ ಪ್ರಾಣವ ಹೀರಿದಲ್ಲಿ
ಮುಂದೆ
ತೊಟ್ಟಿಲೇ ಸಮಾಧಿ

ಪಾಪಿಗಳೇ
ಪವನಕ್ಕೆ ಪ್ರಾಣವ ನೀಡಿ
ಮನುಜನ ಕೊಂದು
ವಿಜ್ಞಾನ ಬದುಕುವುದೇ?

ಅಥವಾ
ಪುಪ್ಪಸವಿಲ್ಲದ
ಮನುಜನ ಸೃಷ್ಟಿಸುವುದೇ?

ಅವಸರವಾಗಿ ಉಸಿರಾಡಬೇಕು
ಕಾರಿನ ಚಾಲಕ
ಊರಾಚೆ ಹೋಗು

ಅಲ್ಲಿ
ನನಗೂ ಮುಂಚಿತವಾಗಿ
ಸಾಕಷ್ಟು ಕಾರುಗಳು
ಜೇನುಗೂಡಿನ ಜೇನ್ನೊಣಗಳಂತೆ
ಮನುಷ್ಯರು

ಕೇಳಿದೆ
ಉಸಿರಾಡಲು ಬಂದವರಂತೆ
ಮೂರ್ಛಾಗತನಾದೆ

‍ಲೇಖಕರು Admin

January 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: