ಗೋಪಾಲ ತ್ರಾಸಿ ಹೊಸ ಕವಿತೆ – ನೆಲದೆದೆಯ ಹಾಡು ಪಾಡೂ…

ಗೋಪಾಲ ತ್ರಾಸಿ

ಅತ್ತ ಪಶ್ಚಿರ್ವೋತ್ತರದ
ರಮ್ಯ ಪರ್ವತ ಶ್ರೇಣಿ ಏರಿಳಿದು
ಸುತ್ತಲ ಸುಳಿಗಾಳಿ ಗಂಧ ಹೊತ್ತು ತಂದವರೇ
ಇತ್ತ ಫಲವತ್ತಾದ ಕಾಡು ನೆಲ ಜಲದ
ಜೊತೆ ನೆಲೆ ನಿಂತವರ ಮನದಲಿ
ಕರ್ಮಠ ಫಸಲು ಮೊಳಕೆಯೊಡೆಸಿದ್ದು;
ಮಹಿಮಾವಂತ ದೇವಾದಿ ದೇವತೆಗಳು
ಜೊತೆಗೆ ಕಾಳಗಕ್ಕೆ ಕ್ಷುದ್ರ ರಾಕ್ಷಸರ ಆವಾಹನಿಸಿದ್ದೂ…

ಬಲ್ಲಿರೇನಯ್ಯಾ ?
ರಾಜಾಧಿರಾಜರೂ ‘ದೇವ’ರಂತೆಯೇ !
ಬಹು ಪರಾಕು ಒಡ್ಡೋಲಗ ಅರಮನೆ
ಹೊರಗೆ ತುಚ್ಛ ನೀಚ ಮುಟ್ಟಿದರೆ ಮೈಲಿಗೆ
ಒಳಗೆ ಏಕ ಕಾಲದಲಿ ಹೆಣ್ಣು
ಶಕ್ತಿ ದೇವತೆಯೂ ಅಬಲಳೂ ಆದದ್ದು..

‘ಇಲ್ಲಿ ಎಲ್ಲವೂ ಸರಿ ಇಲ್ಲ….’
ಮನುಜ ಪ್ರೇಮ ಬೆಳದಿಂಗಳಲಿ ಮಿಂದೆದ್ದ ಬುದ್ಧ ಬಸವವಾದಿ
ಸರಿಸಮ ಕಲ್ಯಾಣಕೆ ಕರೆ ನೀಡಿದ್ದು
ಮನುಜ ಮತವೇ ಸಕಲ ಹಿತವೆಂದು
ಕವಿ ಸಂತ ಗುರುಜನ ಸತ್ ಸಂಕಲ್ಪ ಮಾಡಿದ್ದೂ ಇಲ್ಲೇ….

ಪಶ್ಚಿರ್ವೋತ್ತರದಿಂದಲೇ ಮತ್ತೆ
ಕುದುರೆಯೇರಿ ಹಲ್ಲು ಕಡಿದು ಕತ್ತಿ ಝಳಪಿಸುತ್ತ
ಯುದ್ಧ ದಾಹಿಗಳು ಬಂದು ಗೆದ್ದ ನೆಪದಲಿ
ಇದ್ದದ್ದನೆಲ್ಲ ಕೆಡವಿ ಗೋರಿ ಕಟ್ಟಿ ರಾಜಂಹಕಾರ ಮೆರೆದದ್ದು
ಸಾಮ್ರಾಜ್ಯದ ಜೊತೆ ಹೊಸತೇ ಧರ್ಮ ಸಂತಾನಕೆ
ಹಸಿರು ನಿಶಾನೆ ತೋರಿದ್ದು…

ಅತ್ತಲಿಂದಲೇ ಸುತ್ತು ಬಳಸಿ ಬಂದು
ವ್ಯಾಪಾರಕ್ಕಿಳಿದ ಬುದ್ಧಿವಂತ ಬಿಳಿ ಜನ
ಉಂಡಷ್ಟು ಉಂಡು ತೇಗಿ ಬಗೆ ಬಗೆದು ಕೊಂಡು ಹೋದುದಲ್ಲದೆ
ನಾಡಿನ ಎದೆ ಸೀಳಿ ಮನ ಮನೆಗಳ ಒಡೆದೂ ಹೋದದ್ದು
ತೀರಾ ಅಂದರೆ ತೀರಾ ಈಚೆಗಿನ ಕಥೆ..

ಹೀಗೆ ಬಂದ ಬಂದವರೆಲ್ಲರ ಗೌಜು ಗದ್ದಲದಲಿ
ಇದ್ದವರು ದೈವ ಗಣಗಳಿಂದ ಮುನಿಸಿಕೊಂಡವರಂತೆ ತೆಪ್ಪಗೆ
ಕಾಂಕ್ರೇಟ್ ಕಾಡ ಕತ್ತಲಲಿ ಕರಗಿ ಹೋದದ್ದು….

ಪ್ರಜೆಗಳ ಪ್ರಭುತ್ವ ಆಹಾ!
ಎನಿತು ಉಮೇದು ಉನ್ಮಾದ !
ತಕತಕ ಥೈಥೈ ಕುಣಿದು ಕುಪ್ಪಳಿಸಿದ್ದು;

ಅರರೇ ಇದೇನು ಅವ್ಯವಸ್ಥೆ ?!
ನಾಡಿನುದ್ದಗಲ ಲಂಗು ಲಗಾಮಿಲ್ಲದ
ಭ್ರಷ್ಟಾಚಾರ ಕುದುರೆಯ ನಾಗಾಲೋಟ!!
ಪುರ ಜನರ ಸಕಲ ಸಂಭ್ರಮಗಳ ಬಲೂನು
ಕ್ರಮೇಣ ಠುಸ್ಸೆಂದುದು…

ಕಿಡಿ ಗೀರಿ ಪರಸ್ಪರ ಉರಿದು ಬೀಳಿಸುವ ತಂತ್ರ ನಿಸ್ಸೀಮ ರಾಜಕಾರಣಿ
ಗಳೆಂಬೋ ವಿನೂತನ ಸಂತಾನ ಅವತಾರವಾದದ್ದು;

ಇಂತಹ ನೆಲದ ಘಮಲಿಗೆ ಪರವಶರಾಗಿ
ಅವರವರ ಭಾವ ಭಕುತಿಗೆಂಬಂತೆ
ಹಾಡಿದ್ದು ಹೊಗಳಿದ್ದು ಉರಿದದ್ದು ಕೆರಳಿದ್ದು
ಪ್ರೇಮಿಸಿದ್ದು ಕಾಮಿಸಿದ್ದು ಯತೇಶ್ಚ ಭೋಗಿಸಿದ್ದು
ಕೊನೆಗೆ ಮಣ್ಣು ಸೇರಿದ್ದೂ ಇಲ್ಲೇ….

ಈ ಇಂತಹ ಮಣ್ಣ ಮಡಿಲಲ್ಲೇ
‘ಎಲ್ಲರೂ ಎಲ್ಲವೂ ಆ ಕರುಣಾಮಯಿಯ ಮಕ್ಕಳು’
ಬಾಹು ಚಾಚಿದ ಬಡಕಲು ಬಾಪೂಜಿಯ ಎದೆ
ಗುಂಡಿಗೆ ಗುರಿಯಿಟ್ಟವ ಮಹಾ ದೇಶಭಕ್ತನೂ ಅಹುದಂತೆ
ಹಾಗಂತ ಬಹುಮತದ ಫರಮಾನು

ಇಂತು ಗೆದ್ದ ಕುರುಹುವಿಗೆ ಕೆಡುವುದು ಕಟ್ಟುವುದು ಇದ್ದೇ ಇದೆಯಲ್ಲ
ಈಗ ಆ ಅದೇ ಬರಿ ಮೈ ಪಕೀರನ ಪ್ರತಿಮೆಗಳ ಸರದಿ
ಕೊಂದೂ ದಾಹ ತೀರದವರು
ಸಾಲು ಸಾಲಾಗಿ ಕಾಯುತ್ತಿರುವುದೂ…

‍ಲೇಖಕರು Admin

January 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: