‘ಇದನ್ನು ಬರೆದೇ ಸಿದ್ಧ…’- ಅಮಿತಾ ರವಿಕಿರಣ್

ಅಮಿತಾ ರವಿಕಿರಣ

ಈ ಲೇಖನವನ್ನು ಅರ್ಧಕ್ಕೆ ಬಿಟ್ಟು ಡ್ರಾಫ್ಟ್ ಗೆ ತಳ್ಳಿ ಸುಮ್ಮನಾಗಲ್ಲ ಅನ್ನೋ ಘಟ್ಟಿ ನಿರ್ಧಾರದೊಂದಿಗೆ ಬರೆಯುತ್ತಿದ್ದೇನೆ . ಈ ಬರಹದ ಒಂದೊಂದು ಪದವು ನನ್ನ ಅನುಭವ. ನನ್ನ ಅಕ್ಕ ಪಕ್ಕ ಅಕ್ಕತಂಗಿಯರೊಂದಿಗೆ ನಡೆದದ್ದು, ಈ ಬರಹದ ಜಗತ್ತಿನಲ್ಲಿ ನಾ ಪುಟ್ಟ ಮಗುವೇ , ಅಸಹ್ಯ ಎನಿಸಿದ ಈ ಕೃತ್ಯಗಳನ್ನು ಸಹ್ಯ ಕನ್ನಡದಲ್ಲಿ ಹಿಡಿದಿಡಬೇಕೆ ? ಅಥವಾ ಯಥಾವತ್ ನಿರೂಪಿಸಬೇಕೆ ತಿಳಿಯುತ್ತಿಲ್ಲ. ನನ್ನಲ್ಲಿನ ಆ ಹೇವರಿಕೆ ಈ ಒಂದು ಕೆಟಗರಿಗೆ ಸೇರಿದ ಗಂಡಸರ ಬಗ್ಗೆ ನನಗಿರುವ ಅಕ್ರೋಶ ನನ್ನ ಪದಗಳಲ್ಲಿ ಕಂಡು ಬಂದರೆ ಅದರಲ್ಲಿ ಆಶ್ಚರ್ಯವಿಲ್ಲ. ಹಾಗೆ ಆ ಕೃತ್ಯ ಗಳನ್ನು ವಿವರಿಸಲು ನನಗೆ ಸಾಧ್ಯವಾಗದೆಯು ಇರಬಹುದು.

ಆಗ ನಾನು ಐದನೇ ಕ್ಲಾಸಿನಲ್ಲಿದ್ದೆ ಪರಿಚಿತರೊಬ್ಬರ ಮದುವೆಗೆ ನಾನು, ಪಪ್ಪಾ ಮತ್ತು ತಂಗಿ ಹೊರಟಿದ್ದೆವು.  ಟೆಂಪೋ ತಪ್ಪಿಸಿಕೊಂಡ ಕಾರಣ ಜೀಪಿನಲ್ಲಿ ಪ್ರಯಾಣಿಸಬೇಕಿತ್ತು.  ಪಪ್ಪಾ ತಂಗಿ ಒಂದೆಡೆ ನಾನು ಮತ್ತೊಂದೆಡೆ ಕುಳಿತೆವು. ನನ್ನ ಪಕ್ಕ ಒಬ್ಬ ಮನುಷ್ಯ ಕುಳಿತ ಜೀಪು ಚಲಿಸುತ್ತಲೇ ಆತ ಮೆತ್ತಗೆ ತನ್ನ ಕೈ ಸೀಟ ಮೇಲೆ ಹಾಕಿ ನಿದ್ದೆ ಬರುತ್ತಿದ್ದಂತೆ ವರ್ತಿಸುತ್ತಿದ್ದ ಅಷ್ಟೇ ಮೆತ್ತಗೆ ಅವನ ಕೈ ನನ್ನ ಎದೆಮೇಲೆ ಬಂದಿತ್ತು ಚಿವುಟಲು ಶುರು ಮಾಡಿದ್ದ ೯ ವರ್ಷ ನನಗಾಗ. ಏನೇನೂ ದೈಹಿಕ ಬದಲಾವಣೆಗಳು ಆಗದ ನನ್ನ ದೇಹ, ಮನಸ್ಸು ಎರಡು ನಲುಗಿ ಹೋಗಿತ್ತು.  ಆ ದಿನ ಸುಮಾರು ಒಂದೂವರೆ ಘಂಟೆ ನಾ ಅನುಭವಿಸಿದ ನೋವು ಹಿಂಸೆ ಹೇವರಿಕೆ ಅದನ್ನು ಹೇಗೆ ವಿವರಿಸಲಿ??? ಅವ ನನ್ನ ಜೊತೆ ಹೀಗ್ಯಾಕೆ ವರ್ತಿಸ್ತಿದಾನೆ ?? ಯಾರನ್ನ ಕೇಳಲಿ?? ಏನು ಮಾಡಿದ ಅಂತ ಹೇಗೆ ಹೇಳಲಿ ? ಆಗ ಯಾರಾದರು ಇವನನ್ನು ಗಮನಿಸಿ ಕಪಾಳಕ್ಕೆ ನಾಲ್ಕು ಬಾರಿಸಲಿ ಅನಿಸಿದ್ದು ಎಷ್ಟು ಬಾರಿಯೋ, ನಡು ನಡುವೆ ದೀನವಾಗಿ ಅವನ ಮುಖ ನೋಡ್ತಿದ್ದೆ.  ಆವಾ ಧೀರ್ಘ ನಿದ್ದೆ ನಟಿಸುತ್ತ ಕುಂತಿದ್ದ. ಅವನನ್ನು ಇಂದಿಗೂ ಅಷ್ಟೇ ತೀವ್ರವಾಗಿ ದ್ವೇಷಿಸುವ ನನ್ನ ಒಳಮನಸ್ಸು ಮೊನ್ನೆ ಊರಿಗೆ ಹೋದಾಗ ಆವಾ ಸತ್ತು ಹೋದ ಅಂತ ಕೇಳಿದಾಗಲು, ಆವಾ ನರಕಕ್ಕೆ ಹೋಗಬೇಕು ಅಂತ ಮನಸು ಪುಟ್ಟ ಮಗುವಿನಂತೆ ಅತ್ತಿತ್ತು.

ಈ ಘಟನೆಯ ನಂತರ ನನ್ನ ಕಣ್ಣಿಗೆ ಎಲ್ಲ ಗಂಡಸರು ಒಂದೇ ಅನ್ನೋ ಭಾವ ಘಟ್ಟಿ ಆಗಿತ್ತು. ಯಾರೇ ಸಹಜವಾಗಿ ಮೈ ಮುಟ್ಟಿದರೂ ಆ ಸ್ಪರ್ಶದ ಹಿಂದಿನ ಭಾವ ಗುರುತಿಸುವ ಶಕ್ತಿ ದೇವರೇ ನಮಗೆ ಕೊಟ್ಟಿದ್ದನಲ್ಲ ? ಮೇಲಿನ ಘಟನೆ ನನಗೆ ಹೇಳಿಕೊಟ್ಟ ಒಂದೇ ಒಂದು ಪಾಠ ಎಂದರೆ ತಿರುಗಿ ಬೀಳದಿದ್ದರೆ ನಾವು ಕೆಳಗೆ ಬಿದ್ದು ಹೋಗುತ್ತೇವೆ. ಅವರು ಆ ಪೈಶಾಚಿಕ ಆನಂದ ಅನುಭವಿಸಿ ಏನು ಆಗಲೇ ಇಲ್ಲ ಎನ್ನುವಂತೆ ನಡೆದು ಹೋಗುತ್ತಾರೆ. ಅಲ್ಲಿಂದ ಶುರು ಆಯ್ತು ನನ್ನ ಪ್ರತಿಭಟನೆ .

ನಾನು ಹಾಸ್ಟೆಲ್ ಗಳಲ್ಲಿ ಉಳಿದೆ. ದಿನವು ೧೪೦ ಕಿಲೋಮಿಟರ ಪ್ರಯಾಣ ಮಾಡಿ ನಾನು ನನ್ನ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ಮುಗಿಸಿದ್ದು. ಬಸ್ಸು ಎಂದಮೇಲೆ ಕೇಳಬೇಕಾ? ಕೀಚಕರ ಸಂತೆ, ಮೊದಲ ಅನುಭವ ಅದೆಷ್ಟು ಗಾಢ ಪರಿಣಾಮ ಬೀರಿತ್ತೆಂದರೆ ಸದಾ ಒಂದು ದುಗುಡ ಮತ್ತು ಆತಂಕ ತುಂಬಿರುತ್ತಿತ್ತು. ಬಸ್ಸಿನಲ್ಲಿ ತಪ್ಪಿಯೂ ತೂಕಡಿಕೆ ಬರುತ್ತಿರಲಿಲ್ಲ.

ಆ ದಿನ ಬಸ್ಸು ಹತ್ತಿದ ಕೂಡಲೇ ಕಾಣ ಸಿಗುವ ಸೀಟಿನಲ್ಲಿ ನಾ ಕುಳಿತಿದ್ದೆ, ಕಿಟಕಿ ಪಕ್ಕದ ಸೀಟಿಗೆ ಆತುಕೊಂಡ ನನಗೆ ಕಂಕುಳದ ಹತ್ತಿರ ಏನೋ ತಾಗಿದಂತಾಗಿ ನೋಡಿದ್ರೆ, ಹಿಂದಿನ ಸೀಟಿನಲ್ಲಿ ಕೂತ ಸಭ್ಯ ನಂತೆ ಕಾಣುತಿದ್ದ ಆತನು ಕಿಟಕಿಯಿಂದ ರಮ್ಯ ಪ್ರಕೃತಿಯನ್ನು ನೋಡುತ್ತಿರುವಂತೆ ನಟಿಸುತ್ತಿದ್ದ ಕೈ ಮಾತ್ರ ಕಾಮ ದೇವನ ಆಶಿರ್ವಾದ ಪಡೆದಂತೆ ಕೆಲಸ ಮಾಡಲು ರೆಡಿ ಆಗಿತ್ತು. ಅಲ್ಲಿ ತನಕ ಆದ ಹಲವು ಚಿಕ್ಕ ಪುಟ್ಟ ಕಿರುಕುಳಗಳು ನನ್ನ ಕಾಲೇಜ್ ಬ್ಯಾಗ್ ನಲ್ಲಿ ಸುವಾರು ವೆಪನ್ ಗಳನ್ನೂ ಪೇರಿಸಿಬಿಟ್ಟಿದ್ದವು . ಪುಟ್ಟ ಬ್ಲೇಡು ಪಿನ್ನು, ಶಾಯಿ ಪೆನ್ನು, ಶಾರ್ಪ್ ಮಾಡಿದ ಪೆನ್ಸಿಲ್ ಇವೆಲ್ಲ ನನ್ನ ಬ್ಯಾಗಿನಲ್ಲಿ ಯಾವಾಗಲು ರೆಡಿ ನನ್ನ ರಕ್ಷಣೆಗಾಗಿ. ನಾನು ಏನು ಗೊತ್ತಿಲ್ಲದಂತೆ ನಟಿಸಿ ಮೆತ್ತಗೆ ಬ್ಲೆಡ್ ತೆಗೆದೆ ಮತ್ತು ನನ್ನ ಕಂಕುಳ ಹತ್ತಿರ ಬಂದ ಬೆರಳುಗಳಿಗೆ ಗೀರಿ ಬಿಟ್ಟೆ . ಆತ ಕೂಗಲು ಇಲ್ಲ ಜಗಳವು ಮಾಡಲಿಲ್ಲ..ಸಗಣಿ ತಿಂದ ಬಾಯಿ ಮಾತಾದರು ಹೇಗೆ ಆಡಿಯಾನು..??

ಇನ್ನೊಬ್ಬನಿದ್ದ ಮುದುಕ. ಧಾರವಾಡ್ ಸಿಬಿಟಿ ಯಿಂದ ಕೆಸಿಡಿ ಹೋಗೋತನಕ ಅದೆಷ್ಟು ಲೀಲೆ ತೋರಿಸ್ತಿದ್ದನೋ… ನಾಲ್ಕು ಅಡಿಯೂ ಇರಲಿಕ್ಕಿಲ್ಲ.   ಹೆಣ್ಣು ಮಕ್ಕಳ ಮಧ್ಯ ಸೇರಿಕೊಂಡು ಸಿಕ್ಕ ಸಿಕ್ಕವರಿಗೆ ತನ್ನ ಮರ್ಮಾಂಗ ತಾಗಿಸುತ್ತಾ ನಿಲ್ಲುತ್ತಿದ್ದ ..ಎಲ್ಲರಿಗು ಕಿರಿ ಕಿರಿ..ಯಾರು ಮಾತಾಡಲ್ಲ ..ಪ್ರತಿಭಟಿಸಿದರು ಏನು ಮಾಡಿದ ಅಂತ ಹೇಳೋದು ??? ಆ ದಿನ ನನ್ನ ಗೆಳತಿ ಧೈರ್ಯ ಮಾಡಿಯೇ ಬಿಟ್ಟಳು ಆತ ನಮ್ಮ ನಡುವೆ ಸೇರಿಕೊಂಡ, ಅವನಿಗೆ ಎದುರುಬದುರಾಗಿ ನಿಂತು ಕೊಂಡಳು ಜುಬಲಿ ಸರ್ಕಲ್ ಸಿಗಲ್ ಬ್ರೇಕ್ ಹಾಕಿದಾಗ ಅವಳೆಲ್ಲ ಬಲ ಸೇರಿಸಿ ಮಂಡಿಯಿಂದ ಆತನ ಆ ವಿಕೃತ ಅಂಗಕ್ಕೆ ಒದ್ದು ಬಿಟ್ಟಿದ್ದಳು.. ಆತ ಅಯ್ಯೋ ಅಂದು ಅಲ್ಲೇ ಕುಳಿತು ಬಿಟ್ಟಿದ್ದ. ಸಾರೀ ನೀರ್ ಬೇಕಾ ಅಂತ ಕೇಳಿದ್ದೆವು..ಕಂಡೆಕ್ಟರ್ ಏನಾಯಿತು ಅಂತ ಕೇಳಿದ್ರೆ ಅವನಿಗಾದ್ರು ಎಲ್ಲಿತ್ತು ಬಾಯಿ ???? ಇದು ನಾವು ನಾವು ಆ ದಿನ ಕಂಡುಕೊಂಡ ಗೆಲುವು.

ಇನ್ನೊಂದು ಅತಿ ಕೆಟ್ಟ ಸುಧಾರಿಸಲಾಗದ ಅನುಭವ ನನ್ನ ತಂಗಿಯಂತಿದ್ದ ಗೆಳತಿಯದು ,ಕಾಲೇಜಿನಿಂದ ಯಾವುದೊ ಕ್ಯಾಂಪ್ ಗೆ ಹೋದ ಹುಡುಗಿ ಬರುವಾಗ ಸ್ವಲ್ಪ ಮಂದ ಮಂದ ,ನಮ್ಮ ಕಲಾ ತಂಡದ ಲೀಡ್ ಡ್ಯಾನ್ಸರ್ ಅವಳು ಒಮ್ಮೆಲೇ ಆಕೆ ಎಲ್ಲದರಿಂದ ದೂರ ಆಗಿ ಬಿಟ್ಟಳು. ಮೂತ್ರಕೋಶದ ಕಲ್ಲು, ಅವಳಿಗೆ ಶತ್ರಚಿಕಿತ್ಸೆ ಮಾಡಬೇಕಾಗಿದೆ ಅದಕ್ಕೆ ಅವಳು ಇನ್ನು ಮುಂದೆ ಎಲ್ಲೂ ಬರಲ್ಲ ಅಂತ ಅವರಮ್ಮ ನಮ್ಮ ಮುಖಕ್ಕೆ ಬಾಗಿಲು ಹಾಕಿದ್ದರು. ಅಪ್ಪನಿಲ್ಲದ ಹುಡುಗಿ, ನನ್ನ ಮನಸಿಗೆ ಸಿಕ್ಕಾ ಪಟ್ಟೆ ಹತ್ತಿರ ಬೇರೆ ..ನನ್ನ ಮದುವೆಗೂ ಬರಲಿಲ್ಲ ಅವಳು. ಆಮೇಲೆ ಅವರಿವರಿಂದ ಕೇಳಿ ಬಂದಿದ್ದು ಕ್ಯಾಂಪಿನಲ್ಲಿ ಸಾಫ್ಟ್ ಡ್ರಿಂಕ್ಸ್ ನಲ್ಲಿ ಏನೋ ಹಾಕಿ ಅವಳ ಬಲಾತ್ಕಾರ ಆಗಿತ್ತು, ಮತ್ತು ಆ ಹುಡುಗನ ಮನೆಯವರೇ ಆಕೆಯ ವಿದ್ಯಾಭ್ಯಾಸದ ಸಕಲ ಖರ್ಚನ್ನು ಭರಿಸಿ ಮದುವೆಯು ಆಗುವುದು ಅನ್ನೋದು ತೀರ್ಮಾನ ಆಗಿತ್ತಂತೆ . ಒಲ್ಲದ ಹುಡುಗನೊಂದಿಗೆ ಸಂಸಾರ ಮಾಡುವ ಅವಳನ್ನು ನೋಡಿ ಬೇಸರ ಆಗಿದ್ದು ಒಂದೆಡೆ, ಪಾದರಸದ ಚುರುಕು ಹುಡುಗಿ ಏನು ಇಲ್ಲದೆ ಪರದೆಯ ಹಿಂದೆ ಉಳಿಯಬೇಕಾಯಿತಲ್ಲ ಅನ್ನೋದು ಇನ್ನೊಂದು ನೋವು …

ಇನ್ನು ಬೈಕ್ ಸವಾರಿಗರ ಚೇಷ್ಟೆ ಒಂದೆರಡಲ್ಲ , ನಡು ದಾರೀಲಿ ಹೋಗೋವಾಗ ಬರ್ತೀಯ ? ಅನ್ನೋದು ನಂಬರು ಕೊಡು ಅನ್ನೋದು ಆಗ ನಮ್ಮದು ಸಿದ್ಧ ಉತ್ತರ ಚಪ್ಪಲಿದ?? ಅಂತ… ಆ ಕೀಚಕರು ಅದಕ್ಕೂ ಉತ್ತರ ರೆಡಿ ಮಾಡಿಕೊಂಡಿದಾರೆ ಅರೆ !!! ಚಪ್ಪಲಿದಲ್ಲ ಬ್ರಾ ನಂಬರ್ ಹೇಳು ಸಾಕು!!! . ಕೆಲವೊಂದೆಡೆ ನಿರ್ಜನ ಪ್ರದೇಶದಲ್ಲಿ ತಮ್ಮ ಜನನಾಂಗವನ್ನು ತೋರಿಸುತ್ತ ಏನೋ ಸಾಧನೆ ಮಾಡಿದವರಂತೆ ಪೋಸ್ ಕೊಡುವುದು. ನಮ್ಮ ಮುಖದ ಮೇಲೆ ಕಸಿವಿಸಿ ಕಾಣಿಸಿತೋ ನಾವು ತಲೆ ಕೆಳಗೆ ಹಾಕಿದ್ವೋ ಅಷ್ಟರಮಟ್ಟಿಗೆ ಅವನ ಅತೃಪ್ತ ಆತ್ಮ ತೃಪ್ತ (ಈ ಥರದ ಘಟನೆಯನ್ನು ನಾನು -ನನ್ನಂತ ಹಲವಾರು ವಿದ್ಯಾರ್ಥಿನಿಯರು ಅನುಭವಿಸಿದ್ದು ಧಾರವಾಡ ವಿಶ್ವವಿದ್ಯಾಲಯದ ಲೈಬ್ರರಿ ಗೆ ಹೋಗುವ ದಾರಿಯಲ್ಲಿ ಅಕ್ಕ ಪಕ್ಕ ಕಾಡಿರುವುದರಿಂದ ಇಂಥ ಚೇಷ್ಟೆಗಳು ಆರಾಮಾಗಿ ನಡೆಸಬಹುದು ಅವರು.)ವಿಶ್ವ ವಿದ್ಯಾಲಯದ ವರ್ಕಿಂಗ್ ವುಮೆನ್ ಹಾಸ್ಟೆಲ್ , ಮತ್ತಿತರ ಮಹಿಳಾ ವಸತಿ ನಿಲಯದ ಬಾತ್ ರೂಂ ಗಳ ಕಿಡಕಿಯಲ್ಲಿ ಹಣಕುವುದು ಇನ್ನು ಜಾರಿಯಲ್ಲಿದೆ ಅನ್ನುವುದು ನನ್ನ ಹಲವು ಸ್ನೇಹಿತೆಯರ ದೂರು. ಆದರೆ ಅದನ್ನು ಕೇಳುವರ್ಯಾರು???

ಇಂಥಹುದೇ ಇನ್ನೊಂದು ಘಟನೆ ನಾನು ಯುವಜನ ಮೇಳ ಕ್ಕೆ ಹೋದಾಗ ನಡೆದಿತ್ತು, ಕಾರ್ಯಕ್ರಮದ ಮಧ್ಯ ನಮ್ಮ ಧಿರಿಸು ಬದಲಾವಣೆ ಗೆ ಶಾಲೆಯ ಕೊಠಡಿ ನೀಡಲಾಗಿತ್ತು.   ಅದರ ಕಿಡಕಿ ಸಂದಿಯಿಂದ ಬಟ್ಟೆ ಬದಲಾಯಿಸುವುದನ್ನು ನೋಡುತ್ತಿದ್ದ ಇಬ್ಬರು ಯುವಕರು ಸಿಕ್ಕಿ ಬಿಳೋ ಸಮಯದಲ್ಲಿ ಅದೆಂಥ ಮಾಯಕದಲ್ಲಿ ಮಾಯವಾಗಿದ್ದರು .

ಆ ದಿನ ಸಂಜೆ ಕಾಲೇಜ್ ನಿಂದ ವಾಪಾಸ್ ಅಗೋ ಹೊತ್ತಿಗೆ ಕತ್ತಲಾಗಿತ್ತು, ಬಸ್ಸು ಅಷ್ಟೊಂದು ರಶ್ ಕೂಡ ಇರಲಿಲ್ಲ. ರೂಡಿ ಯಂತೆ ನಾನು ಕಿಡಕಿಯ ಪಕ್ಕ ಕುಳಿತೆ ಅಲ್ಲೆಲ್ಲೋ ಹಿಂದಿನ ಸೀಟಿನಲ್ಲಿ ಕೂತಿದ್ದ ಒಬ್ಬ ಐನಾತಿ ಬಂದು ನನ್ನ ಪಕ್ಕ ಕುಳಿತ, ಅಷ್ಟಲ್ಲದೇ ಮಾತಾಡಲು ಪ್ರಯತ್ನಿಸುತ್ತಿದ್ದ , ತಿನ್ನಲು ಖರ್ಜೂರ ಕೊಟ್ಟ ಅದೆಷ್ಟು ಬೇಡ ಅಂದರು ತಗೋಳಿ ತಗೋಳಿ ಅಂದು ಒತ್ತಾಯ ಮಾಡಿದ. ಅವನ ಕೈಯ್ಯಿಂದ ತಗೊಂಡು ಅವನೆದುರಿಗೆ ಹೊರಗೆ ಎಸೆದೆ, ಬಸ್ಸು ಚಲಿಸತೊಡಗಿತು ಮತ್ತೆ ಅದೇ ನಿದ್ದೆಯ ನಾಟಕ . ಅವನ ಕೈ ಬಳವಡಿ ಮಕ್ಕಳು ಒಂದೋ ಎರಡೋ ಹೇಳುವಾಗ ಕೈ ಕಟ್ಟುವಂತೆ ಮಾಡಿ ಕುಳಿತ ,ಅವನ ಎಡಗೈ ನನ್ನ ಮೈ ಮುಟ್ಟುತಿತ್ತು ಎರಡು ಬಾರಿ ಎಚ್ಚರಿಸಿದೆ, ಇಲ್ಲ ಅವ ನಿದ್ದೆಯಲ್ಲಿ ಇದ್ದ..ಅವನನ್ನು ಎಬ್ಬಿಸಲು ಉಳಿದದ್ದು ಒಂದೇ ದಾರೀ ಅವನ ಕೈಯನ್ನು ಹಿಡಿದೆ ಮತ್ತು ಎಡಗೈಯ್ಯಿಂದ ಅವನ ಕೆನ್ನೆಗೆ ಬಾರಿಸಿದೆ,  ನಂತರ ಅಷ್ಟು ಓವರ್ ರಿಯಾಕ್ಟ್ ಮಾಡಬಾರದಿತ್ತು ಅನಿಸಿತಾರು ನನಗೆ ಇಂಥವರ ಮೇಲಿದ್ದ ಆ ಅಸಹನೆ ಸಿಟ್ಟು ಎಲ್ಲ ಒಮ್ಮೆಲೇ ಹೊರ ಬಂದಿತ್ತು.ಇವು ಕೆಲವು ಕಹಿ ನೆನಪು ಗಳು , ಇವನ್ನು ನಾವು ಇಗ್ನೋರ್ ಮಾಡಿಬಿಡುತ್ತೇವೆ. ಒಂದು ತಾಸಿನ ಪ್ರಯಾಣದಲ್ಲಿ ಅನುಭವಿಸಿದ ಆ ಅಸಹನೀಯ ಅನುಭವವನ್ನು ಮರೆತು ನಮ್ಮ ದಿನಚರಿಯಲ್ಲಿ ಮಗ್ನರಾಗುತ್ತೇವೆ. ಆದರೆ ಆ ಹಿಂಸೆಯ ಎಳೆ ಅದೆಲ್ಲೋ ಉಳಿದುಬಿಡುತ್ತದೆ, ಇಚ್ಚೆ ಇಲ್ಲದೆ ಕೈಹಿಡಿದ ಪತಿಗೆ ನಮ್ಮ ಮೈ ಮುಟ್ಟುವ ಹಕ್ಕು ಇಲ್ಲದಾಗ , ಯಾರೋ ಬೇವರ್ಸಿಗಳು ನಮ್ಮನ್ನು ಕಾಲೋರಸಿನಂತೆ ಬಳಸಿದರೆ ಅದನ್ನು ಸಹಿಸಿಕೊಳ್ಳಲು ನಾವು ಅವರ ಅಮ್ಮ ಅಕ್ಕತಂಗಿಯರಲ್ಲ.ಇಷ್ಟಕ್ಕೂ ಅವರ ಅಕ್ಕ ತಂಗಿ ,ತಾಯಿಯೊಂದಿಗೆ ಹಿಂಗೆ ಘಟಿಸಿದರೆ ಅವ್ರು ಅದನ್ನು ಎಂಜಾಯ್ ಮಾಡ್ತಾರೋ ಅಥವಾ ಪ್ರತಿಭಟಿಸುತ್ತರೋ ??

ಈ ಲೇಖನಕ್ಕೆ ಅಂತ್ಯ , ಉಪಸಂಹಾರ ಇಲ್ಲ ಏಕೆಂದರೆ ಈ ಅನುಭವುಗಳು ದಿನನಿತ್ಯ ನಡೆಯುತ್ತಲೇ ಇವೆ.ದಿಲ್ಲಿಯಲ್ಲಿ ನಡೆದ ಆ ಘಟನೆಗೆ ಇದು ನನ್ನ ಪುಟ್ಟ ಪ್ರತಿಭಟನೆ , ಅಂತಹ ಗಂಡಸರ ಮುಖಕ್ಕೆ ಚೀಮಾರಿ …..

‍ಲೇಖಕರು G

December 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

32 ಪ್ರತಿಕ್ರಿಯೆಗಳು

 1. bharathi

  ನಿಮ್ಮ ಬರಹದಲ್ಲಿರೋ ಆಕ್ರೋಶದಿಂದಲೇ ನಿಮ್ಮ ನೋವು ಅರ್ಥವಾಯ್ತು ಅಮಿತಾ … ಪ್ರತಿಭಟಿಸುತ್ತ ಬಂದಿದ್ದಕ್ಕೆ ನನ್ನದೊಂದು ಬೆನ್ನು ತಟ್ಟು ನಿಮಗೆ ….

  ಪ್ರತಿಕ್ರಿಯೆ
 2. SrinidhiRao

  ಈ ಲೇಖನಕ್ಕೆ ಅಂತ್ಯ , ಉಪಸಂಹಾರ ಇಲ್ಲ …. koneillada vishaya.

  ಪ್ರತಿಕ್ರಿಯೆ
 3. veena s

  ನನ್ನ ಗೆಳತಿಯೋಬ್ಬರು ಮಕ್ಕಳಿಗೆ ಕ್ಲಾಸ್ ಮಾಡುತ್ತಿರುತ್ತಾರೆ .ಹೆಣ್ಣು ಮಕ್ಕಳು ಯಾವಾಗಲೂ ತಮ್ಮ ಬಳಿ ದೊಡ್ಡ ಸೇಫ್ಟಿ ಪಿನ್ ಇಟ್ಟುಕೊಂಡಿರಲು ಸಲಹೆ ಕೊಡುತ್ತಾರೆ. I support and congratulate you, Anitha.

  ಪ್ರತಿಕ್ರಿಯೆ
 4. Aparna Rao..

  ಈ ತರಹದ ಘಟನೆಗಳನ್ನು ಅನುಭವಿಸಿದ ಪುಟ್ಟ ಮನಸ್ಸುಗಳು ಮುಂದೊಂದುದಿನ ತಮ್ಮ ವೈವಾಹಿಕ ಜೀವನಕ್ಕೆ ಹೊದಿಕೊಳ್ಳಲು ಅದೆಷ್ಟು ಕಷ್ಟ ಅನುಭವಿಸಬೇಕಾಗುವುದು…. ಪ್ರತಿಭಟಿಸುವ ಧೈರ್ಯ ಪ್ರತಿಯೊಂದು ಹೆಣ್ಣು ಮಗುವಿಗೆ ಕಲಿಸಿದಾಗ ಮಾತ್ರ ತನ್ನ ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯ.. ನಿಮ್ಮ ಲೇಖನ ಅಂತಹವರಿಗೆ ಪ್ರೇರಣೆ ನೀಡಲಿ.

  ಪ್ರತಿಕ್ರಿಯೆ
 5. Sumathi Deepa Hegde

  ಅಮಿತ….ಈಗಲೂ ಜನರ ಮಧ್ಯೆ ಹೋಗುವುದೆಂದರೆ ಈ ಕೆಟ್ಟ ಕಲ್ಪನೆಗಳೇ ನೆನಪಾಗುತ್ತೆ…ಸಂತೆ ಇರಲಿ, ಜಾತ್ರೆ ಇರಲಿ ಎಲ್ಲಾ ಕಡೆ ಈ ಅಸಹ್ಯ ಹುಟ್ಟಿಸುವ ಕೆಟ್ಟ ನರಹುಳುಗಳೇ ತುಂಬಿರುತ್ತಾರೆ ….

  ಪ್ರತಿಕ್ರಿಯೆ
  • Amita Ravikirana

   ಜಾತ್ರೆ ಮಾತ್ರ ನೆನಪಿಸ ಬೇಡಿ ದೀಪ ….ಅಲ್ಲಿನ ಜನಕ್ಕೆ ಮರುಳೋ ಮರೆಯೋ ಗೊತ್ತಿಲ್ಲ..ತಮ್ಮ ಹೆಂಡತಿ ಅಂದು ಬೇರೆ ಹುದುಗಿರ ಹೆಗಲಿಗೆ ಕೈ ಹಕುವರನ್ನು ಕಂಡಿದ್ದೇನೆ ..

   ಪ್ರತಿಕ್ರಿಯೆ
 6. Dr. Azad Ismail Saheb

  ಅಮಿತಾವ್ರೇ, ಅರ್ಧಕ್ಕೇ ಕರಡು ನಿಲ್ಲಿಸದೇ ಪೂರ್ಣ…ಯಾತಕ್ಕೆ ಎನ್ನುವ ಕುತೂಹಲ ನನಗೆ..?? ಈಗ ಅರ್ಥವಾಗುತ್ತಿದೆ…. ನಿಮ್ಮ ಮನದ ಕಸಿವಿಸಿ ಮತ್ತು ನನಗೂ ಹೇಸಿಗೆ, ನಾಚಿಕೆ ತರುವ ಆ ಘಟನೆಗಳು… ಭಾವನೆಗಳಿಗೆ ಕಡಿವಾಣ ಹಾಕದೇ ಇರಲಾಗದ ಮೇಲೆ ಪಶುವಿಗೂ ನಮಗೂ ವ್ಯತ್ಯಾಸವಿರದು… ಹೆಣ್ಣಿಗೆ ಮೊದಲಿಗಿಂತಾ ಹೆಚ್ಚು ಧೈರ್ಯ ಅವಶ್ಯಕ ಎನ್ನುವುದು ಇತ್ತೀಚಿನ ಘಟನೆಗಳನ್ನು ನೋಡಿ-ಕೇಳಿ ತಿಳಿದಿರುವ ಅಂಶ…
  ಹೆಣ್ಣಿನ ಮನಸ್ಸಿನ ಅಕ್ರೋಶ ಮತ್ತು ನೋವನ್ನು ಹಂಚಿಕೊಂಡು ಒಂದು ರೀತಿ ದಾರಿ ತೋರಿದ್ದೀರಿ ಹೆಣ್ಣಿಗೆ…ಹಾಗೆಯೇ ಕನ್ನಡಿ ತೋರಿದ್ದೀರಿ ಗಂಡಿಗೆ.

  ಪ್ರತಿಕ್ರಿಯೆ
  • Amita Ravikirana

   ನಿಜ ಆಜಾದ್ ಸರ್ ಸುಮಾರು ಕಡೆ ಕಾಗುಣಿತ ತಪ್ಪು ,ರುಸ್ವ ಧೀರ್ಘ ಎಲ್ಲ ಹಾರಿ ಹೋಗಿವೆ ..ಸಿಟ್ಟಿನ ಕೈಲಿ ಬುದ್ಧಿ ಕೊಟ್ಟರೆ ಏನಾಗುತ್ತೆ ಹೇಳಿ ಮತ್ತೆ??? ಇನ್ನು ಬರೀಬೇಕು ಅಯ್ಯೋ ಆ ಘಟನೆ ಬಿಟ್ಟೆನಲ್ಲ ಅವಳೊಂದಿಗೆ ಆಗಿದ್ದು , ಮತ್ತೊಬ್ಬಳು ಹೇಳಿದ್ದು ..ಅಂತ ಈಗ ಅನಿಸಿದ್ದು ನಿಜ..

   ಪ್ರತಿಕ್ರಿಯೆ
 7. Suma sudhakiran

  ಇಂತಹ ಘಟನೆಗಳನ್ನು ಬಸ್ಸಿನಲ್ಲಿ ಸ್ಕೂಲಿಗೆ ಕಾಲೇಜಿಗೆ ಹೋಗುವ ನಾನೂ ಅನುಭವಿಸಿದ್ದೇನೆ . ಇದಕ್ಕೆ ನಾನು ಕಂಡುಕೊಂಡ ಉಪಾಯ ಬಸ್ ಹತ್ತುವಾಗ ಕೈಯಲ್ಲೊಂದು ಪಿನ್ ಇಟ್ಟುಕೊಂಡಿರುವುದು.ಬೇಡದ ಸ್ಪರ್ಶ ಆಯಿತೆಂದರೆ ಚುಚ್ಚಿ ಬಿಡುವುದು….ಹೆಣ್ಣುಮಕ್ಕಳು ಧೈರ್ಯ ತಾಳುವುದೊಂದೇ ಇಂತವುದಕ್ಕಿರುವ ಉಪಾಯ .

  ಪ್ರತಿಕ್ರಿಯೆ
  • Amita Ravikirana

   ಸುಮಾ ತಮಾಷೆ ಗೊತ್ತ ? ನನ್ನ ನಿಶ್ಚಿತಾರ್ಥ ಮುಗಿಸಿ ರಾತ್ರಿ ಬಸ್ಸಿನಲ್ಲಿ ವಾಪಸಾಗುತ್ತಿದ್ದೆವು ಜೊತೆಗೆ ನನ್ನ ಅಪ್ಪ ಅಮ್ಮ ನನ್ನ ಅತ್ತೆ ಮಗಳು ,ಅವಳ ಪಕ್ಕ ವನು ಅವಳ ಸೊಂಟ ಜಿಗುತಳು ಅರಮ್ಬಿಸಿದ್ದಾನೆ ಅಂತ ಅಳುದನಿಯಲ್ಲಿ ಹೇಳಿದಳು , ಪರ್ಸ್ ನಲ್ಲಿದ್ದ ಪಿನ್ ತೆಗೆದು ಕೊಟ್ಟೆ ಇವಳು ಮೆತ್ತಗೆ ಚುಚ್ಚಿದ್ದಾಳೆ ,ಅವ ಪಿನ್ ಕಸಿದುಕೊಂಡು ಅದನ್ನು ಕಿತ್ತುಕೊಂಡು ಎಸೆದು ಬಿಟ್ಟ .ಇವಳು ಮತ್ತೆ ಅಳುತ್ತ ಕೂತಳು .ಇದು ಕುಂದಾಪುರದಿಂದ ಹೊನ್ನಾವರದ ತನಕ ಮುಂದುವರೆದಿದೆ.ನಂತರ ದೇವಿಮನೆ ಘಟ್ಟ ಇವಳಿಗೆ ಬಸ್ಸಿನಲ್ಲಿ ವಾಂತಿ .. ಸೊಂಟ ಚೂತಿದ್ದಕ್ಕೆ ಅವನು ವಾಂತಿ ಗಿಫ್ಟ್ ಪಡೆದ …. ಶಿಕ್ಷೆ ಹೆಂಗಿದೆ ???

   ಪ್ರತಿಕ್ರಿಯೆ
 8. Anuradha.rao

  ನಮ್ಮ ಹುಡುಗಿ ಬಗ್ಗೆ ಹೆಮ್ಮೆ ಅನ್ನಿಸುತ್ತಿದೆ ….ಎಲ್ಲಾ ಹೆಣ್ಣುಮಕ್ಕಳಿಗೂ ಧೈರ್ಯ ಬರಬೇಕು …

  ಪ್ರತಿಕ್ರಿಯೆ
 9. Vinuta More

  Dear Amita….. Great One…. I am with u….I appreciate u from bottom of my heart…Yes… we will not bare any more…. I request every women go ahead and conquer….

  ಪ್ರತಿಕ್ರಿಯೆ
  • Amita Ravikirana

   ಧನ್ಯವಾದ ವಿನುತಕ್ಕ, ನಾವಿಬ್ಬರು ಒಂದೇ ರೂಟಿನಲ್ಲಿ ಓಡಾಡುವುದರಿಂದ ನನ್ನ ಈ ಲೇಖನ ನಿನಗೆ ಇನ್ನು ಹೆಚ್ಚು ಹತ್ತಿರ ಅನೀಸೀತು ಅಲ್ಲವೇ??ನಿಜ ಯಾರನ್ನು ಬಿಡಬೇಡಿ..

   ಪ್ರತಿಕ್ರಿಯೆ
 10. Sunanda

  ಈ ಅನುಭವಗಳನ್ನು ಹೆಚ್ಹಾಗಿ ಎಲ್ಲ ಹೆಣ್ಣು ಜೀವವು ಎದುರಿಸಲು ಧೈರ್ಯ ಇಲ್ಲದೆ ಸಹಿಸಿಕೊಂದಿರುತ್ತೆ 🙁 .ನಿಮ್ಮ ಧೈರ್ಯಕ್ಕೆ ಮೆಚ್ಚಿದೆ. ಈ ಧೈರ್ಯ ಎಲ್ಲರಲ್ಲೂ ಇರೋಲ್ಲ ಎಲ್ಲಾ ಹುಡುಗಿಯರಿಗೂ ನಿಮ್ಮಂತೆ ಎದುರಿಸುವ ಧೈರ್ಯ ಬರಲೆಂದು ಬೇಡುವೆ ದೇವರಲ್ಲಿ..

  ಪ್ರತಿಕ್ರಿಯೆ
  • Amita Ravikirana

   ನನ್ನ ಅಕ್ಕ ಪಕ್ಕದವರಿಗೂ ನಾನು ಇದೆ ಬೊದನೆ ಮಾಡೋದು. ಈ ಸಂದರ್ಭದಲ್ಲಿ ನನ್ನ ತಂದೆಯವರನ್ನು ನಾನು ನೆನೆಸಿಕೊಂಡು ಅವರಿಗೆ ಧನ್ಯವಾದ ಹೇಳಲೇ ಬೇಕು ..ಅವರ ಒತ್ತಾಸೆ ಇಲ್ಲದಿದ್ದರೆ ನಾನ್ಯಾವತ್ತು ಅನ್ಯಾಯಕ್ಕೆ ಸಿಡಿದೇಳುವ ಶಕ್ತಿಯನ್ನೂ ಪಡೆಯುತ್ತಿದ್ದೇನೋ ಇಲ್ವೋ.ಏನಾದರು ಮೊದಲು ಅವರಲ್ಲೇ ಹೇಳಿಕೊಳ್ಳುತ್ತಿದ್ದೆ ಅವರ ಸಲಹೆ ಸೂಚನೆಗಳು ನನ್ನ ಮುನ್ನದೆಸಿವೆ ಮುನ್ನದೆಸುತ್ತಲೇ ಇವೆ.

   ಪ್ರತಿಕ್ರಿಯೆ
 11. Vinod Kumar

  ಸಗಣಿ ತಿಂದ ಬಾಯಿ ಮಾತಾದರು ಹೇಗೆ ಆಡಿಯಾನು..??…. ತೀಕ್ಷ್ಣವಾದ ಬರಹ

  ಪ್ರತಿಕ್ರಿಯೆ
  • Amita Ravikirana

   ಏನು ಮಾಡೋದು ಆ ಸಿಟ್ಟು ಹೇಗಾದರೂ ಹೊರ ಬರಬೇಕು..ಮನೆಮಂದಿ ಮತ್ತು ಚಿರ ಪರಿಚಿತರು ನನ್ನ ಚನ್ನಮ್ಮ ಝಾನ್ಚಿರಾಣಿ ಅಂತ ತಮಾಷೆ ಮಾಡ್ತಿದ್ದರು.ಕೊನೆ ಕೊನೇಲಿ ಬಸ್ಸಿನಲ್ಲಿ ನನ್ನ ಪಕ್ಕ ಕುತುಕೊಲ್ಲೋಕು ಕೆಲವರು ಅನುಮಾನ ಮಾಡೋರು..ಆ ಖರ್ಜೂರ ಕೊಟ್ಟ ಆಸಾಮಿ ನನ್ನ ನೋಡಿದ ಕೂಡಲೇ ತುಂಬಿದ ಬಸ್ಸಲ್ಲೂ ಸೀಟು ಬಿಟ್ಟುಕೊಟ್ಟು ಮುಖ ಮರೆಸಿಕೊಂಡಿದ್ದು ನೆನೆಸಿ ಕೊಂಡರೆ ಇನ್ನು ನಗು ಉಕ್ಕುತ್ತೆ

   ಪ್ರತಿಕ್ರಿಯೆ
 12. triveni tc

  ide tarahada experience bahalashtu nangu kooda aagiddavu, nija travelling andare hevarike aagata ittu namma college days nalli.

  ಪ್ರತಿಕ್ರಿಯೆ
 13. Santhosh

  ನಿಮ್ಮ ಈ ಲೇಖನ ನನ್ನ ಮಗಳನ್ನು ಹೇಗೆ ಬೆಳೆಸಬೇಕು ಎಂಬ ಮಾಹಿತಿ ನೀಡಿದೆ.
  ಧನ್ಯವಾದಗಳು.

  ಪ್ರತಿಕ್ರಿಯೆ
  • Amita Ravikirana

   ಧನ್ಯವಾದ ಮತ್ತೊಮ್ಮೆ ನನ್ನ ಪಪ್ಪನಿಗೆ ಈ ಕ್ರೆಡಿಟ್ ಸಲ್ಲುತ್ತದೆ ,ಮೊದಲ ಬಾರಿ ರಸ್ತೆಯಲ್ಲಿ ಯಾರೋ ಹುಡುಗ ಛೇಡಿಸಿದ ಎಂದು ಹೇಳಿದ ದಿನದಿಂದ ನಾನು ಭಾರತ ಬಿಟ್ಟು ಬರುವ ತನಕ ನನ್ನ ಪಪ್ಪಾ ನನ್ನ ಸಪ್ಪೋರ್ಟ್ ಮಾಡಿದ ರೀತಿಯೇ ಅಭಿನಂದನಾರ್ಹ ..ನೀ ಹೆದರಬೇಡ ನಾನಿದ್ದೇನೆ ಅನ್ನುವ ಆ ಮತ್ತೆ ಸಾವಿರ ವೋಲ್ಟ್ ಕರೆಂಟ್ ಥರ …

   ಪ್ರತಿಕ್ರಿಯೆ
 14. lalitha

  Amita hats off. ella hudgeeru ninna haage aadre Eee dEsha raama raajya aagatte. Kaama pishaachigalinda mukti sigattes.please continue your war against this type of STUPID MEN..DHRMA SAMSTHAPANAARTHAAYA SAMBHAVAAMI YUGE YUGE. GOD BLESS YOU.

  ಪ್ರತಿಕ್ರಿಯೆ
 15. ಮಂಜುಳಾ ಬಬಲಾದಿ

  ನಮ್ಮ ಸುರಕ್ಷತೆಯಲ್ಲಿ ನಾವಿರಬೇಕು.. ಖಂಡಿತ ನಿಜ! ನೀವು ವಿವರಿಸಿದ ಘಟನೆಗಳು ನಮ್ಮೆಲ್ಲರಲ್ಲಿ ಧೈರ್ಯ ತುಂಬುವಂತಿವೆ. ಸ್ವ-ರಕ್ಷಣೆ ಕುರಿತು, ಇನ್ನಷ್ಟು ಆಲೋಚನಗೆ ಹಚ್ಚುತ್ತವೆ. ಧನ್ಯವಾದ, ಒಂದು ಉತ್ತಮ ಬರಹಕ್ಕೆ..!

  ಪ್ರತಿಕ್ರಿಯೆ
 16. Prasad V Murthy

  ನಾವು ನಾಗರೀಕ ಸಮಾಜದಲ್ಲಿ ಬದುಕುತ್ತಿದ್ದೇವೆಯೇ ಎಂದು ಅನುಮಾನ ಹುಟ್ಟಿ, ನಮ್ಮ ಸಮಾಜದ ಬಗ್ಗೆಯೇ ಹೇಸಿಗೆ ಎನಿಸಿತು. ತೀಕ್ಷ್ಣವಾದ ಬರಹ ಅಮಿತಕ್ಕಾ, ನೀವು ಈ ಬರಹವನ್ನು ಡ್ರಾಫ್ಟ್ ಗಷ್ಟೇ ಸೀಮಿತಗೊಳಿಸದಿದ್ದುದು ಈ ರೀತಿಯ ಯಾತನೆ ಅನುಭವಿಸುವ ಹೆಣ್ಣುಮಕ್ಕಳಿಗೆ ಇಂತಹ ಹೇಹ್ಯ ಕೃತ್ಯಗಳನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತದೆ. You are a bravo, I appreciate the dareness in you.

  ಪ್ರತಿಕ್ರಿಯೆ
 17. Anupama Gowda

  ಇತ್ತೀಚೆಗೆ ಗಂಡಸರನ್ನ ತುಂಬಾ ದ್ವೇಶಿಸ್ತ್ಹೀನಿ, ಒಳ್ಳೆ ಗಂಡಸರನ್ನು ಅನುಮಾನದಿಂದ ನೋಡೋ ಹಾಗೆ ಹಾಗಿದೆ, ತುಂಬಾ ಬೇಜಾರು ಅಸಹ್ಯ ಆಗತ್ತೆ…………..ದಿನಾ ಒಂದಲ್ಲ ಒಂದು ಇಂಥಾದ್ದೇ ನ್ಯೂಸ್ಗಳು..,ಕೇಳಿ ಕೇಳಿ ಸಾಕಾಗಿದೆ, ಮನುಷ್ಯನ ಜೀವನಕ್ಕಿಂತ ಪ್ರಾಣಿ ಜನ್ಮಾನೆ ಬೆಟರ್ ಅನ್ನಿಸ್ತಿದೆ, anyway keep it up Amitha…..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: