’ ವ್ಯವಸ್ಥೆಯೇ ಅಪರಾಧಿ….’ – ನಾ ದಿವಾಕರ್

ವ್ಯವಸ್ಥೆಯೇ ಅಪರಾಧಿ, ಅತ್ಯಾಚಾರಿ ನಿತ್ಯಾಪರಾಧಿ

ನಾ ದಿವಾಕರ್

ಒಂದು ಭ್ರಮೆ ನಮ್ಮೆಲ್ಲರನ್ನು ಕಾಡುತ್ತಿದೆ. ದೇಶದ ಅಥವಾ ಒಂದು ರಾಜ್ಯದ ರಾಜಧಾನಿ ಎಂದರೆ ಎಲ್ಲವೂ ಸುವ್ಯವಸ್ಥಿತವಾಗಿರುತ್ತದೆ. ಅಲ್ಲಿನ ಸನ್ನಿವೇಶ ಇಡೀ ದೇಶಕ್ಕೆ ಅಥವಾ ರಾಜ್ಯಕ್ಕೆ ಮಾದರಿಯಾಗಿರುತ್ತದೆ ಎಂಬ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದೇವೆ. ಹಾಗಾಗಿ ದೆಹಲಿಯಲ್ಲಿ ಯಾವುದೇ ಒಂದು ದುರ್ಘಟನೆ ನಡೆದರೆ ಇಡೀ ದೇಶವೇ ಎಚ್ಚೆತ್ತುಕೊಳ್ಳುತ್ತದೆ. ಮಾಧ್ಯಮಗಳು ಜನಸಾಮಾನ್ಯರ ಭ್ರಮಾಲೋಕಕ್ಕೆ ರೆಕ್ಕೆ ಪುಕ್ಕ ನೀಡುತ್ತವೆ. ರಾಜಧಾನಿಯಲ್ಲಿ ಇಂತಹ ಘಟನೆಯೇ ? ಎಂದು ಹುಬ್ಬೇರಿಸಲಾಗುತ್ತದೆ. ಗ್ರಾಮಗಳಲ್ಲಿ ನಡೆಯುವ ನಿತ್ಯ ಮಾರಣ ಹೋಮ ನಿರ್ಲಕ್ಷ್ಯಕ್ಕೊಳಗಾಗುತ್ತಲೇ ರಾಜಧಾನಿಯ ಕ್ಷುಲ್ಲಕ ಘಟನೆಗಳೂ ಅತ್ಯಧಿಕ ಪ್ರಸಾರ ಪಡೆಯುತ್ತವೆ. ಈ ಮಾತುಗಳನ್ನು ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಹೇಳುತ್ತಿರುವುದರಿಂದ ಚಲಿಸುವ ಬಸ್ ಒಂದರಲ್ಲಿ ಸ್ನೇಹಿತನ ಜೊತೆಯಲ್ಲಿದ್ದ ಮಹಿಳೆಯ ಮೇಲೆ ನಡೆದ ಅತ್ಯಾಚಾರವನ್ನು ಕ್ಷುಲ್ಲಕ ಎಂದು ಭಾವಿಸಬಾರದು. ಇಲ್ಲಿ ಹೇಳಬಯಸುವುದೇನೆಂದರೆ ದೆಹಲಿಯಲ್ಲಿ ನಡೆದಂತಹ ಘಟನೆ ದೇಶದ ಇತರ ಗ್ರಾಮ ನಗರಗಳಲ್ಲಿ, ಪಟ್ಟಣಗಳಲ್ಲಿ, ಕುಟುಂಬದ ಹೊರಗೆ, ಒಳಗೆ, ಶಾಲಾ ಕೊಠಡಿಗಳಲ್ಲಿ, ಕಚೇರಿಯ ಹವಾನಿಯಂತ್ರಿತ ಕೋಣೆಗಳಲ್ಲಿ, ಹೊಟೆಲುಗಳಲ್ಲಿ, ರೆಸಾಟರ್್ಗಳಲ್ಲಿ, ರೈಲುಗಳಲ್ಲಿ ಶೌಚಾಲಯಗಳಲ್ಲಿ, ಹೊಲ ಗದ್ದೆ ತೋಟಗಳಲ್ಲಿ, ಬೆಟ್ಟ ಗುಡ್ಡಗಳಲ್ಲಿ ನಡೆಯುತ್ತಲೇ ಇರುತ್ತವೆ. ಆದರೂ ನಮ್ಮ ದೇಶದ ಸುಪ್ತ ಪ್ರಜ್ಞೆ ಸುಪ್ತವಾಗಿಯೇ ಇದೆ. ದೆಹಲಿಯ ಘಟನೆ ಈ ಪ್ರಜ್ಞೆಗೆ ಬಿಸಿ ಮುಟ್ಟಿಸಿ ಸಿಡಿದೇಳುವಂತೆ ಮಾಡಿದೆ. ಈ ದೃಷ್ಟಿಯಿಂದ ಹೇಳಿದ ಮಾತುಗಳಿವು.

ದೆಹಲಿಯಲ್ಲಿ ನಡೆದ ಘಟನೆ ಒಂದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಲ್ಲ. ಮಹಿಳಾ ಸಂಕುಲದ ಮೇಲೆ, ಮಾನವ ಸಮಾಜದ ಮೇಲೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಡೆದಿರುವ ಅತ್ಯಾಚಾರ. ಈ ಘಟನೆಯಿಂದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಮಹಿಳೆಯರು, ಪ್ರಗತಿಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ. ಸಾಂಸ್ಕೃತಿಕ ಆರಕ್ಷಕರು ಏಕೋ ಮೌನವಾಗಿದ್ದಾರೆ. ಧರ್ಮ ಸಂರಕ್ಷಕರು ದಿವ್ಯ ಮೌನ ವಹಿಸಿದ್ದಾರೆ. ಬಹುಶಃ ಅತ್ಯಾಚಾರಕ್ಕೊಳಗಾದ ಯುವತಿಯ ಉಡುಪು ಪ್ರಚೋದಕವಾಗಿತ್ತೋ ಇಲ್ಲವೋ ಎಂದು ಪರಿಶೀಲಿಸುತ್ತಿರಬಹುದು. ಒಂದು ವೇಳೆ ಪ್ರಚೋದಕವಾಗಿದ್ದರೆ ಅತ್ಯಾಚಾರ ಮತ್ತು ಮಾನಭಂಗ ಸ್ವೀಕೃತವಾಗಿಬಿಡುತ್ತದೆ ಅಲ್ಲವೇ ? ರಾತ್ರಿ 9.30ರ ವೇಳೆಯಲ್ಲಿ ಸ್ನೇಹಿತನೊಡನೆ ಏಕೆ ಹೋಗಬೇಕಿತ್ತು ಎಂಬ ಪ್ರಶ್ನೆ ಈಗಾಗಲೇ ಉದ್ಭವಿಸಿದೆ. ರಾತ್ರಿ ಪಾಳಿಯಲ್ಲಿ ಮನೆಯೊಳಗೇ ಇದ್ದರೆ ಮಹಿಳೆಯರು ಸುರಕ್ಷಿತವಾಗಿರಬಹುದು ಎಂಬ ಸುಪ್ತ ಅಭಿಪ್ರಾಯಗಳೂ ಇದ್ದಿರಬಹುದು. ಈ ಶುಷ್ಕ ವಾದ ವಿವಾದಗಳ ನಡುವೆಯೇ ಭಾರತದಲ್ಲಿ ಮಹಿಳೆಯರು ನಿರಂತರವಾಗಿ ಅತ್ಯಾಚಾರ, ಮಾನಭಂಗ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಎದುರಿಸುತ್ತಿದ್ದಾರೆ.

ದೆಹಲಿ ಘಟನೆಯಲ್ಲಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ತನಿಖೆ, ವಿಚಾರಣೆ, ಮೊಕದ್ದಮೆ, ನ್ಯಾಯಾಲಯದಲ್ಲಿನ ವಾದ ವಿವಾದಗಳ ನಂತರವೇ ಆರೋಪಿ ಅಪರಾಧಿಯಾಗುತ್ತಾನೆ. ಆ ವೇಳೆಗೆ ಅತ್ಯಾಚಾರಕ್ಕೊಳಗಾದ ಮಹಿಳೆ ಬದುಕಿರುವಳೋ ಇಲ್ಲವೋ ಹೇಳಲಾಗದು. ಆದರೆ ಅಪರಾಧ ಜೀವಂತವಾಗಿರುತ್ತದೆ. ಕೇವಲ ಪಶ್ಚಾತ್ತಾಪ ಅಪರಾಧಕ್ಕೆ ಮನ್ನಣೆ ನೀಡುವುದಿಲ್ಲ. ಅಥವಾ ಅಪರಾಧಿಗಳಿಗೆ ನೀಡುವ ಉಗ್ರ ಶಿಕ್ಷೆ ಸಮಸ್ಯೆಯ ಪರಿಹಾರವಾಗುವುದಿಲ್ಲ. ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸಿದ್ದೂ ಆಗಿದೆ. ಆದರೆ ಅತ್ಯಾಚಾರ ಹೆಚ್ಚಾಗುತ್ತಲೇ ಇದೆ. ದೆಹಲಿ ಘಟನೆ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ 70 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಹರಿಯಾಣದ ಗ್ರಾಮಗಳಲ್ಲಿ ಅತ್ಯಾಚಾರ ನಿತ್ಯ ಸುದ್ದಿಯಾಗಿದೆ. ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ಈ ಎಲ್ಲ ಘಟನೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಇನ್ನೂ ಶಿಕ್ಷೆಗೊಳಗಾಗಿಲ್ಲ. ಸಾಕ್ಷಿ ಪುರಾವೆಗಳು ಸರಿಯಾಗಿ ದೊರೆಯದೆ ಹೋದಲ್ಲಿ ಆರೋಪಿಗಳು ಬಂಧಮುಕ್ತರಾಗಲೂ ಬಹುದು. ಆದರೆ ಮಾನಸಿಕ ವೇದನೆ ಎಂಬ ಸರಳುಗಳಲ್ಲಿ ಶಾಶ್ವತವಾಗಿ ಬಂಧಿತಳಾಗುವ ನೊಂದ ಮಹಿಳೆಯ ಅಳಲನ್ನು ಕೇಳುವವರಾರು ?

ಜೀವಾವಧಿ ಶಿಕ್ಷೆ, ಮರಣದಂಡನೆ, ಸಂತಾನ ಹರಣ ಚಿಕಿತ್ಸೆ, ಬಹಿಷ್ಕಾರ ಇತ್ಯಾದಿಯಾಗಿ ಅನೇಕ ರೀತಿಯ ಶಿಕ್ಷೆಯನ್ನು ಅತ್ಯಾಚಾರಿಗಳಿಗೆ ವಿಧಿಸಲು ಆಗ್ರಹಿಸಲಾಗುತ್ತಿದೆ. ಇರಲಿ, ಇದು ಸಹಜವಾಗಿ ಮೂಡಿಬರುವ ಆಕ್ರೋಶದ ಪರಿಣಾಮ. ಶಿಕ್ಷೆಯಾಗಬೇಕಾದ್ದೂ ಸಮಂಜಸ. ಮರಣದಂಡನೆ ಸ್ವೀಕಾರಾರ್ಹವಲ್ಲದಿದ್ದರೂ ಜೀವಾವಧಿ ಶಿಕ್ಷೆ ಸ್ವಾಗತಾರ್ಹ. ಆದರೆ ಅಪರಾಧಿಗಳಿಗೆ ಶಿಕ್ಷೆ ನೀಡುವುದರಿಂದ ಅಪರಾಧ ಕ್ಷೀಣಿಸುವುದೇ ? ಪಾತಕಿಗಳನ್ನು ಗಲ್ಲಿಗೇರಿಸುವುದರಿಂದ ಪಾತಕ ಕೃತ್ಯಗಳು ಇನ್ನಿಲ್ಲವಾಗುವುದೇ ? ಇಲ್ಲಿ ನಾವು ಅಪರಾಧಿಯನ್ನು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲೇ ಶೋಧಿಸುವುದು ಅತ್ಯಗತ್ಯ. ಅತ್ಯಾಚಾರ ಎಸಗುವ ವ್ಯಕ್ತಿಗಳು ಪ್ರತಿನಿಧಿಸುವ ಒಂದು ಪುರುಷ ಪ್ರಧಾನ ವ್ಯವಸ್ಥೆ, ಇದನ್ನು ಪೋಷಿಸುವ ಪಿತೃ ಪ್ರಧಾನ ವ್ಯವಸ್ಥೆ, ಈ ಎರಡೂ ವ್ಯವಸ್ಥೆಗಳಿಗೆ ಸುಭದ್ರ ಬುನಾದಿ ಒದಗಿಸುವ ಪ್ರಭುತ್ವ ಮತ್ತು ಪ್ರಭುತ್ವ ಸೃಷ್ಟಿಸುವ ಒಂದು ಸಾಮಾಜಿಕ-ರಾಜಕೀಯ ವ್ಯವಸ್ಥೆ, ಈ ವ್ಯವಸ್ಥೆಗಳಲ್ಲೇ ಅತ್ಯಾಚಾರದ ಒಂದು ಪ್ರಧಾನ ಅಂಶ ಅಡಕವಾಗಿರುವುದು ಇತಿಹಾಸ ಪುರಾಣಗಳಲ್ಲೂ ಕಾಣಬಹುದು. ಈ ಒಂದು ವ್ಯವಸ್ಥೆಯನ್ನು ಸರಿಪಡಿಸುವುದು ಹೇಗೆ ?

ಮಹಿಳೆ ಎಂದರೆ ಭೋಗದ ವಸ್ತು, ನಿಗ್ರಹಕ್ಕೊಳಪಡಬೇಕಾದ ಜೀವಿ, ನಿರ್ಬಂಧಕ್ಕೊಳಪಡಬೇಕಾದ ಜೀವಿ, ಪುರುಷರ ಅಧೀನದಲ್ಲೇ ಇರಬೇಕಾದ ಜೀವಿ, ಪುರುಷ ಪ್ರಧಾನ ಪ್ರಭುತ್ವ, ಸಮಾಜ ಮತ್ತು ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆ ರೂಪಿಸುವ ಸಾಂಸ್ಕೃತಿಕ ಚೌಕಟ್ಟಿನಲ್ಲೇ ಬಾಳುವ ಅನಿವಾರ್ಯತೆ ಇರುವ ಜೀವಿ, ಸಮಾಜದ ಸ್ವಾಸ್ಥ್ಯವನ್ನು ತನ್ನ ಉಡುಪುಗಳ ಮೂಲಕ, ವರ್ತನೆಯ ಮೂಲಕ, ನಡೆನುಡಿಗಳ ಮೂಲಕ ರಕ್ಷಿಸುವ ಗುರುತರ ಹೊಣೆಗಾರಿಕೆ ಹೊತ್ತ ಜೀವಿ, ಸಮಾಜದ ಸ್ವಾಸ್ಥ್ಯ ಹಾಳಾಗಲು ತನ್ನ ಪ್ರಚೋದಕ ವಸ್ತ್ರಧಾರಣೆ ಮತ್ತು ವರ್ತನೆಯಿಂದ ಹೊಣೆಯಾಗುವ ಜೀವಿ , ಹೀಗೆ ಅನೇಕ ರೀತಿಯ ಅಭಿಪ್ರಾಯಗಳಿಗೆ ಮೂಲವಾಗಿರುವ ಮಹಿಳೆಗೆ ನಮ್ಮ ಸಮಾಜ, ಪ್ರಭುತ್ವ ಮತ್ತು ಪುರುಷ ವರ್ಗ ಯಾವ ಸ್ಥಾನ ನೀಡುತ್ತಿದೆ, ಎಷ್ಟು ಗೌರವ ನೀಡುತ್ತಿದೆ ಎಂಬುದರ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಈ ಚೌಕಟ್ಟನ್ನು ಪ್ರವೇಶಿಸಲೂ ನಿರಾಕರಿಸುವ ಪುರುಷ ವರ್ಗ ಹರಿಯಾಣದ ನಿತ್ಯಕರ್ಮಗಳ ಬಗ್ಗೆ ದಿವ್ಯ ಮೌನ ವಹಿಸಿದರೆ, ದೆಹಲಿಯ ಘಟನೆಯನ್ನು ವೈಭವೀಕರಿಸಲು ಯತ್ನಿಸುತ್ತದೆ. ಮಾಧ್ಯಮಗಳೂ ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ. ಖಾಪ್ ಪಂಚಾಯತ್ಗಳ ಪರಂಪರೆ ಎಲ್ಲೆಡೆ ಪಸರಿಸಿರುವುದಕ್ಕೆ ಇದು ನಿದರ್ಶನವಷ್ಟೆ.

ಮಹಿಳೆಯರು ನಿರಂತರವಾಗಿ ಅತ್ಯಾಚಾರಕ್ಕೊಳಗಾಗುತ್ತಿರಲು ಮೂಲ ಕಾರಣವಾದ ನಮ್ಮ ಸಾಮಾಜಿಕ ವ್ಯವಸ್ಥೆ ಮತ್ತು ಪುರುಷ ವರ್ಗದ ಮನೋಭಾವವನ್ನು ಬದಲಾಯಿಸದ ಹೊರತು, ಎಂತಹ ಕಠಿಣ ಶಿಕ್ಷೆ ನೀಡಿದರೂ ಅಪರಾಧ ಅಂತ್ಯವಾಗದು. ಇಂದು ನಾಗರಿಕ ಸಮಾಜ ಸಹಜವಾಗಿಯೇ ಸಿಡಿದೆದ್ದಿದೆ. ಇದು ಸ್ವಾಗತಾರ್ಹ. ಆದರೆ ಸಿಡಿದೇಳಬೇಕಿರುವುದು ದೆಹಲಿ ಸರ್ಕಾರ, ಶೀಲಾ ದೀಕ್ಷಿತ್ ಅಥವಾ ಯುಪಿಎ ಸರ್ಕಾರದ ವಿರುದ್ಧ ಅಲ್ಲ, ನಮ್ಮ ಸಾಮಾಜಿಕ ವ್ಯವಸ್ಥೆ ಮತ್ತು ಈ ವ್ಯವಸ್ಥೆಯಲ್ಲಿ ಅಡಕವಾಗಿರುವ ಪುರುಷ ಪ್ರಧಾನ ಮೌಲ್ಯಗಳ ವಿರುದ್ಧ. ಈ ಮೌಲ್ಯಗಳೇ ನಿಜವಾದ ಅತ್ಯಾಚಾರದ ಭೂಮಿಕೆಗಳು. ಅತ್ಯಾಚಾರ ಎಸಗುವವರು ಇದರ ಪ್ರತಿನಿಧಿಗಳಷ್ಟೆ. ಪ್ರತಿನಿಧಿಗಳನ್ನು ಶಿಕ್ಷಿಸಿ ಆದರೆ ಇವರಿಗೆ ಪ್ರಾತಿನಿಧ್ಯ ನೀಡುವ ವ್ಯವಸ್ಥೆಯನ್ನು ಅಲಕ್ಷಿಸಬೇಡಿ. ಎರಡೂ ಅಪಾಯಕಾರಿಯೇ.

 

‍ಲೇಖಕರು G

December 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. bharathi

    ಬಹುಶಃ ಅತ್ಯಾಚಾರಕ್ಕೊಳಗಾದ ಯುವತಿಯ ಉಡುಪು ಪ್ರಚೋದಕವಾಗಿತ್ತೋ ಇಲ್ಲವೋ ಎಂದು ಪರಿಶೀಲಿಸುತ್ತಿರಬಹುದು. ಒಂದು ವೇಳೆ ಪ್ರಚೋದಕವಾಗಿದ್ದರೆ ಅತ್ಯಾಚಾರ ಮತ್ತು ಮಾನಭಂಗ ಸ್ವೀಕೃತವಾಗಿಬಿಡುತ್ತದೆ ಅಲ್ಲವೇ ? …ನಿಮ್ಮ ಈ ಎರಡು ಸಾಲುಗಳಲ್ಲಿನ ವ್ಯಂಗ್ಯ ನನಗೆ ತುಂಬ ಇಷ್ಟವಾಯ್ತು. ಆದರೆ ಮರಣದಂಡನೆ ಬದಲು ಜೀವಾವಧಿ ಶಿಕ್ಷೆ ಸರಿ ಅಂದಿದೀರಿ. ಆದರೆ ಅದು ತುಂಬ ಸಾಧುವಾದ ಶಿಕ್ಷೆಯಾಗಲಿಲ್ಲವಾ?

    ಪ್ರತಿಕ್ರಿಯೆ
    • ದಿವಾಕರ ನಾ

      ಭಾರತಿಯವರೇ, ನಿಮ್ಮ ಮೆಚ್ಚುಗೆಗೆ ಧನ್ಯವಾದ. ನಾನು ವ್ಯಕ್ತಿಗತವಾಗಿ ಮರಣದಂಡನೆ ವಿರೋಧಿ. ಒಬ್ಬ ವ್ಯಕ್ತಿಯನ್ನು ಕೊಲ್ಲುವ ಹಕ್ಕು ಪ್ರಭುತ್ವಕ್ಕೆ ಇರುವುದಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ಹಕ್ಕು ತಮಗಿದೆಎಂದು ಪುರುಷರು ಭಾವಿಸುವುದಕ್ಕೂ, ಪ್ರಜೆಗಳ ಜೀವ ತೆಗೆಯಲು ಹಕ್ಕುತಮಗಿದೆ ಎಂದು ಪ್ರಭುತ್ವ ಬಯಸುವುದಕ್ಕೂ ವ್ಯತ್ಯಾಸವೇನಿದೆ ಅಲ್ಲವೇ ? ಎರಡೂ ಪ್ರಾಬಲ್ಯದ ಸಂಕೇತಗಳು. ಶಿಕ್ಷೆಯ ಪ್ರಮಾಣ ಅಪರಾಧವನ್ನು ತಡೆಗಟ್ಟುವುದಿಲ್ಲ. ಇದು ನಿರೂಪಿತ ಸತ್ಯ.

      ಪ್ರತಿಕ್ರಿಯೆ
  2. Shama Nandibetta

    ದೆಹಲಿಯಲ್ಲಿ ನಡೆದ ಘಟನೆ ಒಂದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಲ್ಲ. ಮಹಿಳಾ ಸಂಕುಲದ ಮೇಲೆ, ಮಾನವ ಸಮಾಜದ ಮೇಲೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಡೆದಿರುವ ಅತ್ಯಾಚಾರ.

    ನಿಜ ಸರ್.. ಅಪ್ಪಟ ಮಾನವೀಯತೆಯ ಮೇಲಿನ ಅತ್ಯಾಚಾರ.

    ಪ್ರತಿಕ್ರಿಯೆ
  3. Aparna Rao..

    ವ್ಯವಸ್ಥೆಯ ಬದಲಾವಣೆ ಕೇವಲ ನಾವು ಕಂಪ್ಯೂಟರ್ ಕೀ ಬೋರ್ಡ್ ಕುಟ್ಟುವುದರಿಂದ ಸಾಧ್ಯವಾಗುವುದಿಲ್ಲವಲ್ಲ ಸರ್…ಅಮೂಲಾಗ್ರ ಬದಲಾವಣೆಗಾಗಿ ಅಧಿಕಾರ,ಕಾನೂನಿನ ಕಾಲು ಹಿಡಿಯಲೇ ಬೇಕಲ್ಲ.

    ಪ್ರತಿಕ್ರಿಯೆ
  4. Shama Nandibetta

    ದೆಹಲಿಯಲ್ಲಿ ನಡೆದ ಘಟನೆ ಒಂದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಲ್ಲ. ಮಹಿಳಾ ಸಂಕುಲದ ಮೇಲೆ, ಮಾನವ ಸಮಾಜದ ಮೇಲೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಡೆದಿರುವ ಅತ್ಯಾಚಾರ.

    I have used this sentence on my prof picture sir. Hope u agree that

    ಪ್ರತಿಕ್ರಿಯೆ
    • ದಿವಾಕರ ನಾ

      ಶಮಾ ನಂದಿಬೆಟ್ಟ , ನಿಮ್ಮ ಶ್ಲಾಘನೆಗೆ ಧನ್ಯವಾದ. ನನ್ನ ವಾಕ್ಯವನ್ನು ಬಳಸಿಕೊಂಡಿದ್ದೀರಿ ಹೆಮ್ಮೆ ಪಡುತ್ತೇನೆ. ಅಕ್ಷರಗಳ ಬಳಕೆ ನನ್ನದಷ್ಟೇ ಎಷ್ಟೋ ಜನರ ಮನದಾಳದಲ್ಲಿನ ಈ ಭಾವನೆಗೆ ಒಬ್ಬ ಸಂವೇದನಾಶೀಲ ಲೇಖಕನಾಗಿ ನಾನು ಅಕ್ಷರ ರೂಪ ನೀಡಿದ್ದೇನೆ. ನೀವು ಬಳಸಿರುವುದು ಸಂತೋಷದ ವಿಚಾರ.

      ಪ್ರತಿಕ್ರಿಯೆ
  5. Tejaswini Hegde

    ಸಾಂಸ್ಕೃತಿಕ ಆರಕ್ಷಕರು ಏಕೋ ಮೌನವಾಗಿದ್ದಾರೆ. ಧರ್ಮ ಸಂರಕ್ಷಕರು ದಿವ್ಯ ಮೌನ ವಹಿಸಿದ್ದಾರೆ. ಬಹುಶಃ ಅತ್ಯಾಚಾರಕ್ಕೊಳಗಾದ ಯುವತಿಯ ಉಡುಪು ಪ್ರಚೋದಕವಾಗಿತ್ತೋ ಇಲ್ಲವೋ ಎಂದು ಪರಿಶೀಲಿಸುತ್ತಿರಬಹುದು. ಒಂದು ವೇಳೆ ಪ್ರಚೋದಕವಾಗಿದ್ದರೆ ಅತ್ಯಾಚಾರ ಮತ್ತು ಮಾನಭಂಗ ಸ್ವೀಕೃತವಾಗಿಬಿಡುತ್ತದೆ ಅಲ್ಲವೇ ? >> Well said.. good article Sir!

    ಪ್ರತಿಕ್ರಿಯೆ
  6. Anuradha.rao

    ಮಹಿಳೆಯರು ನಿರಂತರವಾಗಿ ಅತ್ಯಾಚಾರಕ್ಕೆ ಒಳಗಾಗುತ್ತಿರಲು ಮೂಲ ಕಾರಣವಾದ ನಮ್ಮ ಸಾಮಾಜಿಕ ವ್ಯವಸ್ಥೆ ಬದಲಾಯಿಸದ ಹೊರತು ….very well said….

    ಪ್ರತಿಕ್ರಿಯೆ
  7. ಮಂಜುನಾಥ ಕೊಳ್ಳೇಗಾಲ

    “ಪ್ರತಿನಿಧಿಗಳನ್ನು ಶಿಕ್ಷಿಸಿ ಆದರೆ ಇವರಿಗೆ ಪ್ರಾತಿನಿಧ್ಯ ನೀಡುವ ವ್ಯವಸ್ಥೆಯನ್ನು ಅಲಕ್ಷಿಸಬೇಡಿ. ಎರಡೂ ಅಪಾಯಕಾರಿಯೇ.” – ನಿಮ್ಮ ಮಾತು ನೂರಕ್ಕೆ ನೂರು ನಿಜ. ಅತ್ಯಾಚಾರಿ ಪಶುವಿರಬಹುದು. ಅವನನ್ನು ಕೊಂದು ಕೂಗಿದ ಮಾತ್ರಕ್ಕೆ ಸಮಸ್ಯ ನಿವಾರಣೆಯಾಗುವುದಿಲ್ಲ (ಹಾಗಂತ ಮರಣ ದಂಡನೆಯೇ ಬೇಡ ಜೀವಾವಧಿ ಶಿಕ್ಷೆ ಸಾಕು ಎನ್ನುವುದೂ ಕ್ರೂರ – ಜೀವಾವಧಿ ಎಂದರೆ ಕೇವಲ ೧೪ ವರ್ಷಗಳ ಕಾಲದ ಜೈಲು ಶಿಕ್ಷೆಯಲ್ಲವೇ!). ಇಂಥದ್ದೊಂದು ಪಶುವನ್ನು ಸಮಾಜಕ್ಕೆ ಕೊಟ್ಟ ಅಪ್ಪ-ಅಮ್ಮ, ಶಿಕ್ಷಕರು, ಈ ಪಶುವಿಗೆ ಇಷ್ಟವಾಗುವ ಪಾಶವೀ ಮನರಂಜನೆಯನ್ನೊದಗಿಸುವ ಸಿನಿಮಾ ಟಿವಿ ನಿರ್ಮಾತೃಗಳು ಇವರೆಲ್ಲರೂ ತಲೆತಗ್ಗಿಸಬೇಕಲ್ಲವೇ? ಇಲ್ಲಿ ಓದುಗರೊಬ್ಬರು ಕಂಪ್ಯೂಟರು ಕುಟ್ಟುವುದರಿಂದ ಏನೂ ಆಗುವುದಿಲ್ಲ, ಕಾನೂನು ಬದಲಾವಣೆಯಾಗಬೇಕು ಎಂದರು. ಕಾನೂನು ಬದಲಾವಣೆಯಾಗಬೇಕೇನೋ ನಿಜ, ಆದರೆ ಕಂಪ್ಯೂಟರು ಕುಟ್ಟುವುದರಿಂದ ಏನೂ ಆಗದೆಂದು ಹೇಗೆ ಹೇಳೋಣ. ಇದನ್ನು ಓದುವ ಕೆಲವೇ ಜನ ತಂತಮ್ಮ ಮಕ್ಕಳನ್ನು-ವಿದ್ಯಾರ್ಥಿಗಳನ್ನು ಸಂಭಾಳಿಸಿದರೂ ಸಾಕಲ್ಲವೇ? ಕೆಲವೇ ಜನ ಮನರಂಜನೆಯ ಮಂದಿ ತುಸುವೇ ಸಾಮಾಜಿಕ ಜವಾಬ್ದಾರಿ ತೋರಿದರೂ ಸಾಕಲ್ಲವೇ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: