‘ಆ ಕಲ್ಲುಗಳೆಲ್ಲಾ ತಾಗಿದ್ದು ನನಗೇ….’

ಬದುಕ ಪ್ರೀತಿಸುವುದೆಂತು?!

(ಲೇಖಕಿಯ ಇಚ್ಚೆಯಂತೆ ಆಕೆಯ ಹೆಸರನ್ನು ಇಲ್ಲಿ ಪ್ರಕಟಿಸುತ್ತಿಲ್ಲ)

ಸಾಗರ ತೀರ, ಹಸಿರು, ನದಿ, ನಕ್ಷತ್ರಚ್ಛಾದಿತ ಆಕಾಶ, ತಿಂಗಳ ಬೆಳಕು, ಬಾಲ್ಯ, ಸ್ವಾತಂತ್ರ್ಯ… ಈ ಪದಗಳು ಕಿವಿಗೆ ಬಿದ್ದಾಗಲೆಲ್ಲ ಮೊದಲ ಕ್ಷಣಕೆ ನಮಗೆಲ್ಲ ಆಗುವುದು ನವಿರು ಅನುಭೂತಿ. ನಿಸರ್ಗದ ಮಡಿಲಲ್ಲಿ ಮಗುವಾಗಲು ಹಾತೊರೆಯದ ಮನವೇ ಇಲ್ಲ! ಇವೆಲ್ಲವನ್ನು ಆಸ್ವಾದಿಸುವ ಹಕ್ಕು ನಿಸರ್ಗ ಎಲ್ಲರಿಗೂ ನೀಡಿದೆ. ಹೆಣ್ಣು-ಗಂಡುಗಳೆಂಬ ಬೇಧ-ಭಾವವಿಲ್ಲದೇ!

ಆದರೆ…! ವಾಸ್ತವದ ಕರಿ ನೆರಳ ಭೂತಗಳು ಹೆಣ್ಣಿಗೆ ನೀಡಿರುವ ಏಕಮಾತ್ರ ಉಡುಗೊರೆ… ಭೀತಿ! ಯಾವುದನ್ನೂ ಮನಃಪೂರ್ತಿ ಆನಂದಿಸಲು ಸಾಧ್ಯವಾಗದಂಥ ಭೀತಿ… ಯಾವುದನ್ನೂ ಧೃಢವಾಗಿ ನಂಬದಿರುವಂಥ ಭೀತಿ! ಹೀಗಾದರೆ, ಹೆಣ್ಣು ತನಗೆ ದೊರೆತಿರುವ ಒಂದೇ ಒಂದು ಅಪರೂಪದ ಬದುಕನ್ನು ಪ್ರೀತಿಸುವುದೆಂತು?

ಕಹಿ ನೆನಪುಗಳು…

’ಬಾರ್ ಬಾರ್ ಆತಿ ಹೈ ಮುಝ್ಕೊ ಮಧುರ್ ಯಾದ್ ಬಚ್ಪನ್ ತೇರಿ..’ ಹೀಗೊಂದು ಕವಿತೆಯಿತ್ತು ನಮಗೆ, ನಮ್ಮ ಪ್ರೌಢಶಾಲಾ ದಿನಗಳಲ್ಲಿ. ಅದನ್ನು ಓದಿದಾಗಲೆಲ್ಲ ನನಗನಿಸೋದು, ಮಧುರ ನೆನಪುಗಳು ನೆನಪಾಗ್ತಾ ಇಲ್ವಲ್ಲ? ಅದೇ! ಅದೇ ಒಂದು ಕಹಿ ನೆನಪು, ಮತ್ತೆ-ಮತ್ತೆ ನೆನಪಾಗಿ ಅಸಹ್ಯ ಹುಟ್ಟಿಸತ್ತೆ…

ಮೊದಲ ಸಲ ಭಾರತ ಕ್ರಿಕೆಟ್ ವಿಶ್ವ ಕಪ್ ಗೆದ್ದ ಪಂದ್ಯಗಳು ನಡೆಯುತ್ತಿದ್ದ ದಿನಗಳವು… ನಮ್ಮ ಮನೆಯಲ್ಲಿ ಸ್ವಲ್ಪ ದಿನಗಳ ಮೊದಲಷ್ಟೇ ಬಂದ ಬಣ್ಣದ ಟಿ.ವಿ. ಕ್ರಿಕೆಟ್ ನೋಡಲು ನಮ್ಮ ಮನೆಯಲ್ಲಿ ಜನ-ಜಾತ್ರೆ. ನಾನಿನ್ನೂ ಆಗ ಎತ್ತಿ ಆಡಿಸುವ, 4-5 ವರ್ಷ ವಯಸ್ಸಿನ ಪುಟ್ಟ ಮಗು.. ಆದರೂ ತಿಳುವಳಿಕೆ ಇರದ ವಯಸ್ಸಲ್ಲ. ಅಪ್ಪನ ಗೆಳೆಯ, ಸಹೋದ್ಯೋಗಿ, ತುಂಬಾ ಸ್ನೇಹಮಯಿ..(?!) ಲುಂಗಿ ಉಟ್ಟು ಬರುತ್ತಿದ್ದ ಮ್ಯಾಚ್ ನೋಡಲು. ಬಂದನೆಂದರೆ, ನನ್ನ ಮುದ್ದುಗರೆದು ತೊಡೆ ಮೇಲೆ ಮಲಗಿಸಿಕೊಳ್ಳೋದು.. ಎಲ್ಲರೂ ಮ್ಯಾಚ್ ಅಲ್ಲಿ ಮಗ್ನರಾಗಿದ್ದರೆ, ಈ ಮನುಷ್ಯ ಬಲವಂತವಾಗಿ ನನ್ನ ಪುಟ್ಟ ಕೈಗಳನ್ನು ತನ್ನ ಲುಂಗಿಯೊಳಗಿಳಿಸುತ್ತಿದ್ದ! ನನಗೇನೂ ಅರ್ಥವಾಗುತ್ತಿರಲಿಲ್ಲ… ಆದರೆ ಏನೋ ಅರಿಯಲಾಗದ ಕಸಿವಿಸಿ, ಆ ವಯಸ್ಸಿಗೆ ಅಸ್ವಾಭಾವಿಕ ಅನಿಸುವಷ್ಟು ಯಾತನೆ. ಈ ಕುರಿತು ಯಾರ ಬಳಿ ಏನು ಹೇಳಬೇಕೆಂದೂ ತಿಳಿಯದ ವಯಸ್ಸು, ಮನಸ್ಸು! ಆದರೆ ಸಾಧ್ಯವಾದಷ್ಟೂ ಅವನಿಂದ ದೂರ ಇರುತ್ತಿದ್ದೆ.

ದೊಡ್ಡವರ ಚಾಲಾಕುತನದ ಮುಂದೆ ಮಕ್ಕಳ ಮುಗ್ಧತೆ ಎಷ್ಟು ಕೆಲಸ ಮಾಡೀತು? ಅದೊಂದು ಭಾನುವಾರ ತನ್ನ ಕೋಣೆಗೆ ಕರೆದೊಯ್ದ. ತನ್ನ ಹುಟ್ಟುಡುಗೆಯಲ್ಲಿನಿಂತಅವನದು, ಮತ್ತದೇ ಪ್ರಯತ್ನ!ನನ್ನ ಅಪ್ಪನ ವಯಸ್ಸಿನ ಮನುಷ್ಯನನ್ನು ಆ ರೀತಿ ಮೊದಲ ಬಾರಿಗೆ ನೋಡಿದ ನನಗೆ ಏನೆನಿಸಿತ್ತು ಅಂತ ವಿವರಿಸುವುದು ಕಷ್ಟಸಾಧ್ಯ!ವಿಪರೀತ ಭಯವಾಗಿ ಅವನ ಕೋಣೆಯ ಬಾಗಿಲು ತೆಗೆದು ನಾ ಮನೆ ಕಡೆಗೆ ಓಡಿ ಬಿಟ್ಟಿದ್ದೆ… ಅದು ವಿಕೃತ ಮನಸಿನ ಮೊದಲ ಅನಾವರಣ ನನಗೆ! ಈ ನೆನಪು, ಈ ಕಹಿ ಅನುಭವ, ಅದನ್ನು ಯಾರಿಗೂ ಹೇಳಲಾಗದ ಮನಸ್ಥಿತಿ, ನನ್ನ ಬಾಲ್ಯದ ಎಲ್ಲ ಸವಿ ನೆನಪುಗಳನ್ನೂ ಮೀರಿ ಇಂದಿಗೂ ಮನಸ್ಸಿಗೆ ಕಿರಿ-ಕಿರಿ ತರುತ್ತದೆ. ಅಂದು ಏನು ನಡೆದಿತ್ತು ಎಂದು ಅರ್ಥವಾಗುವ ವಯಸಿನಲ್ಲಿ, ಆ ಬಗ್ಗೆ ನೆನಪಾದರೆ, ಹೇಸಿಗೆ, ನೋವು! ನನ್ನ ಬಾಲ್ಯದ ಮುಗ್ಧತೆಯ ಕೊಲೆಯಾದ ನೋವು! ಮಾಸಲಾಗದ ಗಾಯ… ಹೇಗೆ ಹೇಳಲಿ ನಾ? ’ಬಾರ್ ಬಾರ್ ಆತಿ ಹೈ ಮುಝ್ಕೊ ಮಧುರ್ ಯಾದ್ ಬಚ್ಪನ್ ತೇರಿ..’ಅಂತ!

ಚಿತ್ರ : ಸೌಮ್ಯ ಕಲ್ಯಾಣ್ ಕರ್

ಕಾರುಬಾರು!

ಇದು ನಾನು ಮಾಡಿದ ಹುಂಬತನ. ಪಿ.ಯು. ದಿನಗಳಲ್ಲಿ ಅಮ್ಮನ ಗೆಳೆಯರೊಬ್ಬ ಮನೆಗೆ ಬರುತ್ತಿದ್ದರು. ಅವರ ಬಳಿ ಕಾರ್ ಇತ್ತು. ಹಾಗೇ ಮಾತಿಗೆ ಕಾರ್ ಓಡಿಸಲು ಕಲಿಯೋಕೆ ನನಗೆ ಬಹಳ ಆಸಕ್ತಿಯಿದೆ ಅಂತ ನಾನವರಿಗೆ ಹೇಳಿದ್ದೆ. ಆ ಮನುಷ್ಯ ನನ್ನ ಆಸಕ್ತಿ ಮತ್ತು ತನ್ನ ಆಸಕ್ತಿಗಳನ್ನು ಲೆಕ್ಕ ಹಾಕಿಕೊಂಡು ಒಂದು ದಿನ ನಮ್ಮ ಅಮ್ಮನ ಒಪ್ಪಿಗೆ ಪಡೆದು(!) ನನಗೆ ಕಾರ್ ಕಲಿಸಲು ಕರೆದುಕೊಂಡು ಹೋದ. ಹೋದವನಿಗೆ ನನ್ನ ಆಸಕ್ತಿಗಿಂತ ತನ್ನ ಆಸಕ್ತಿ ತಲೆ ಕೆಡಿಸತೊಡಗಿತ್ತು! ಕೆನ್ನೆಗೆ ಮುತ್ತಿಡಲು ಬಂದ.. (ನಾವು ಆಗ ಇದ್ದದ್ದು ಚಿಕ್ಕ ಪಟ್ಟಣ) ನಾನು ಅದನ್ನು ವಿರೋಧಿಸಿದೆ, ಈ ಉದ್ದೇಶ ನಿಮಗಿತ್ತೆಂದು ಗೊತ್ತಿರಲಿಲ್ಲ, ನನಗೆ ಕಾರ್ ಕಲಿಯೋದು ಬೇಕಿಲ್ಲ, ಮನೆ ತಲುಪಿಸಿ ಸಾಕು ಎಂದೆ. ಪುಣ್ಯಾತ್ಮ, ಮನೆ ತಲುಪಿಸಿದ! (ಅಮ್ಮನಿಗೆ ತಿಳಿಸಿ ಬಂದಿದ್ದರ ಪ್ರಭಾವವಿರಬೇಕು! ಆದರೆ ನಾ ನಡೆದ ಘಟನೆಯನ್ನು ಅಮ್ಮನಿಗೆ ಹೇಳಲೇ ಇಲ್ಲ!). ಈ ಬಾರಿ ತಪ್ಪು ನನ್ನದಿತ್ತು… ಮೊದಲ ಬಾರಿಗೆ, ಹುಡುಗಿಯಾಗಿ, ಹೆಣ್ಣಾಗಿ ನಾನು ಸಮಾಜದ ಕುರಿತು, ಅದರ ಕೆಟ್ಟ ದೃಷ್ಟಿಯ ಕುರಿತು ಜಾಗೃತಳಾಗಿದ್ದೆ…!

ಜಾಯ್ ರೈಡ್

ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಸೈಕಲ್ ಓಡಿಸಲು ಕಲಿತದ್ದು. ಆಗಿನಿಂದ ದ್ವಿಚಕ್ರ ವಾಹನ ಓಡಿಸುವುದು, ಮತ್ತು ಅದು ನೀಡುವ ಸ್ವಾತಂತ್ರ್ಯದ ಮುದವೆಂದರೆನನಗಿಷ್ಟ. ಈ ಘಟನೆ ನಡೆದದ್ದು ಇತ್ತೀಚೆಗಷ್ಟೇ… ಸಮಯ ಸಂಜೆ 4:00 ರ ಆಸು-ಪಾಸಿನಲ್ಲಿರಬಹುದು. ನಾನು ಆಫೀಸ್ನಿಂದ ಯಾವುದೋ ಕಾರಣದ ಮೇಲೆ ಮನೆಗೆ ಬೇಗ ಬರುತ್ತಿದ್ದೆ. ಮನೆ ಹತ್ತಿರದ ತಿರುವಿನಲ್ಲಿ ಗಾಡಿ ತಿರುಸಿಗಿದಾಗ, ಪಕ್ಕದಲ್ಲಿ ಒಂದು ಬೈಕ್ನಲ್ಲಿ ಇಬ್ಬರು ಯುವಕರು. ಹಿಂದೆ ಕೂತಿದ್ದ ಯುವಕ ನನ್ನ ಬೆನ್ನಿನಿಂದ ಕೆಳಗಿನವರೆಗೆ ಕೈಯಾಡಿಸಿದ. ಬೈಕ್ ಮುಂದೆ ಹೋಯಿತು. ನನಗೆ ಕೆಂಡಾಮಂಡಲ ಕೋಪ ಬಂದು ನಾನು ಬೈಕ್ ಹಿಂಬಾಲಿಸಿದೆ.. ವೇಗ ಹೆಚ್ಚಿತ್ತು.. ಆ ನಾಚಿಕೆಗೆಟ್ಟ ಯುವಕರು ಮುಂದೆ ಅದೆಲ್ಲೋ ಯೂ ಟರ್ನ್ ಸಿಕ್ಕು, ಮತ್ತೆ ತಿರುಗಿ ನನ್ನ ಮುಂದೆಯೇ ಹಾದು ಹೋದರು, ಗಹ-ಗಹಿಸಿ ನಗುತ್ತಿದರು, ನಾನು ಅವರ ಮೂತಿಗೆ ಉಗಿದೆ… ಆದರೆ ಅದು ಅವರಿಗೆ ತಾಗಲೇ ಇಲ್ಲ!

ಸಂಜೆಯಾದಾಗ…

ಇದೂ ಇತ್ತೀಚಿನ ಘಟನೆ. ನಾನವತ್ತು ಅಪ್ಪಿ-ತಪ್ಪಿ ಸಂಜೆ ವಾಯು-ವಿಹಾರಕ್ಕೆಂದು ಹೋಗಿದ್ದೆ. ಇಳಿ ಸಂಜೆಯಾಗಿತ್ತು, ಸ್ವಲ್ಪ ಕತ್ತಲು, ಸ್ವಲ್ಪ ಬೆಳಕು… ನಿಸರ್ಗದಲ್ಲಿ ಕಳೆದುಹೋಗುವುದು ನನಗೆ ಸ್ವಾಭಾವಿಕ. ಆ ಸಂಜೆ ನನ್ನ ಕಣ್ಣಿಗೆ ಬಿದ್ದದ್ದು ಮಿಂಚುಹುಳ. ಆ ಮಬ್ಬುಗತ್ತಲಲ್ಲಿ, ಅದರ ಬೆಳಕನ್ನು ನೋಡುತ್ತ, ವಾಕಿಂಗ್ಗೆ ಬ್ರೇಕ್ ಹಾಕಿ ಹಲವಾರು ನಿಮಿಷ ಅಲ್ಲೇ ನಿಂತುಬಿಟ್ಟೆ. ನಂತರ ಮತ್ತೆ ವಾಕಿಂಗ್ ಮುಂದುವರೆಸಿ ಅರ್ಧ ನಿಮಿಷವಾಗಿರಬಹುದು, ಹಿಂದಿನಿಂದ ಯಾರೋ ಬಂದು ನನ್ನ ತುಟಿಗಳ ಮೇಲೆ ಮುತ್ತಿಟ್ಟುಬಿಟ್ಟರು..ಮತ್ತು ಅದರ ಹಿಡಿತ ಕೆಲವು ಕ್ಷಣಗಳ ಮಟ್ಟಿಗೆ, ನನ್ನ ಶತ ಪ್ರಯತ್ನದ ನಂತರವೂ ಹಾಗೇ ಇತ್ತು. ಆ ಕ್ಷಣಗಳಲ್ಲಿನನಗಾದ ಮಾನಸಿಕ ಕಿರಿ-ಕಿರಿಯನ್ನು ವಿವರಿಸಲು ಶಬ್ದಗಳಿಲ್ಲ ನನ್ನ ಬಳಿ! ನಾನು ಪ್ರತಿರೋಧಿಸಿ, ಅವನನ್ನು ದೂರ ತಳ್ಳಿ, ಜೋರಾಗಿ ಕಿರುಚಿದೆ… ಅಕ್ಕ-ಪಕ್ಕದವರೆಲ್ಲ ವಿಚಾರಿಸಲು ಬಂದಾಗ ಆ ಮನುಷ್ಯ ಓಟ ಕಿತ್ತ. ವಿಚಾರಿಸಿದ ಜನರಿಗೆ ಘಟನೆ ವಿವರಿಸಲೂ ಅಸಹ್ಯವಾಗಿತ್ತು ನನಗೆ ಆಗ, ಅವನತ್ತ ಎತ್ತಿ ಒಂದು ಕಲ್ಲೆಸೆದೆ.. ಮತ್ತದೇ! ಅದು ಅವನಿಗೆ ತಾಗಲೇ ಇಲ್ಲ..

ತಾಗಿದ್ದೆಲ್ಲ ನನಗೇ! ಹೆಣ್ಣಿಗೇ ಈ ಥರದ ಮರೆಯದ ಗಾಯಗಳು…! ಯಾಕೆ? ನಮ್ಮದೇನು ತಪ್ಪು..? ಇಂಥ ಕಹಿ ಅನುಭವಗಳನ್ನು ದಾಟಿಯೂ ನಾವು ಮನುಷ್ಯರನ್ನು ಪ್ರೀತಿಸುತ್ತೇವೆ! ನಮಗೆ ಬದುಕು ಬದುಕುವ, ಅದನ್ನು ಪ್ರೀತಿಸುವ, ನಿರಮ್ಮಳವಾಗಿ ಅದನ್ನಪ್ಪುವ ಸ್ವಾತಂತ್ರ್ಯವಿಲ್ಲವೇ? ಇಂತಹ ಸಮಾಜದಲ್ಲಿ ನಮಗೆ ನಿಜವಾಗಿಯೂ ಗೌರವವಿದೆಯೇ? ರಕ್ಷಣೆಯಿದೆಯೇ?ಉತ್ತರಿಸುವವರು ಯಾರು??

 

‍ಲೇಖಕರು G

December 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

31 ಪ್ರತಿಕ್ರಿಯೆಗಳು

 1. bharathi

  ಅಬ್ಬಾ! ನೀವು ಬರೆದಿದ್ದನ್ನು ಓದುವಾಗಲೇ ಮೈಮೇಲೆಲ್ಲ ಕಂಬಳಿ ಹುಳು ಹರಿದಾಡಿದ ಹಾಗೆ ಆಯ್ತು … ಅನುಭವಿಸಿದ ನಿಮಗೆ ಆ ಘಳಿಗೆಗಳಲ್ಲಿ ಎಂಥ ಆಘಾತವಾಗಿರಬಹುದು ಅಂತ ನಾನು ಲೆಕ್ಕ ಹಾಕಿದೆ … ಮನಸ್ಸು ತುಂಬ ಕಸಿವಿಸಿ …

  ಪ್ರತಿಕ್ರಿಯೆ
 2. ಪು .ಸೂ.ಲಕ್ಷ್ಮೀನಾರಾಯಣ ರಾವ್

  ಸೋದರಿ ,
  ನಿಮ್ಮ ಸಂಕಟದ ಕ್ಷಣಗಳನ್ನು ಓದಿ ತಲ್ಲಣಗೊಂಡು ಮೂಕನಾದೆ .ಇಡೀ ಸಮಾಜವೇ ನಿಮ್ಮ ಮುಂದೆ ತಲೆ ತಗ್ಗಿಸಿ ನಿಂತಿದೆ .ದಯವಿಟ್ಟು ಕ್ಷಮಿಸಬೇಡಿ .” ಪ್ರಕೃತಿ ಸಹಜವಾಗಿ ಕ್ರೂರರವಾದುದು ಮಾನವೀಯತೆ ನಾವು ರೂಪಿಸಿಕೊಂಡುದು ” –
  ಎಂಬ ಮಾತನ್ನು ಎಲ್ಲೋ ಓದಿದ ನೆನಪು . ನಿಮ್ಮಲ್ಲಿ ನನ್ನದೊಂದು ವಿನಂತಿ : ನಿಮ್ಮ ಆ ನೋವಿನಿಂದ ಈಚೆಗೆ ಬನ್ನಿ .ಕಾಲಿಗೆ ಮೆತ್ತಿದ ಹೊಲಸನ್ನು ತೊಳೆದುಕೊಳ್ಳಬೇಕೆ ಹೊರತು ಕಾಲನ್ನೇ ಕತ್ತರಿಸಿಕೊಳ್ಳುತ್ತಾರೆಯೇ ? ನಿಮ್ಮದಾದ ಜೀವನವನ್ನು
  ನಿಮ್ಮದೇ ಆದ ರೀತಿಯಲ್ಲಿ ಬಲಗೊಳಿಸಿಕೊಳ್ಳಿ .

  ಪ್ರತಿಕ್ರಿಯೆ
 3. veena s

  ಈ ತರಹದ ಘಟನೆಗಳು ನಿಲ್ಲುವುದು ಯಾವಾಗ? 95% ಮಹಿಳೆಯರು / ಹುಡುಗಿಯರು ಇಂಥಹ ಬೇಡದ ಕಷ್ಟಗಳನ್ನು ಅನುಭವಿಸಿರುತ್ತಾರೆ. ಅದನ್ನೆಲ್ಲ ಬದಿಗಿಟ್ಟು ಈ ಜೀವನವನ್ನು ಪ್ರೀತಿಸಿ ಮುನ್ನಡೆಯುತ್ತಿದ್ದೆವಲ್ಲ ,ನಮ್ಮ ಬೆನ್ನು ನಾವೇ ತಟ್ಟಿಕೊಳ್ಳಬೇಕು

  ಪ್ರತಿಕ್ರಿಯೆ
 4. Roopa

  ನಿಮ್ಮ ನೋವು ತಳಮಳ ನಮಗೂ ತರ್ತಿದೆ. ಏನು ಹೇಳಲೂ ತೋಚುತ್ತಿಲ್ಲ

  ಪ್ರತಿಕ್ರಿಯೆ
 5. Shama Nandibetta

  ಮನ ಏನೂ ಹೇಳಲಾರದಂತೆ ಮೂಕವಾಗಿದೆ…

  ಪ್ರತಿಕ್ರಿಯೆ
 6. hema

  prathi hudugiya manasina diaryolagu intha kahi anubhavagalu dhakalagirthave… asahayakathe biitu bere enu saadyavilla

  ಪ್ರತಿಕ್ರಿಯೆ
 7. usha

  Mai kudiyuttade.. entha ghatanegallnnu odidaga… Then I feel.. mayabe arab countries law is fit for these men.

  ಪ್ರತಿಕ್ರಿಯೆ
 8. Indushekhar Angadi

  ಮೇಡಂ,
  ಮನ ಕಲುಕುವ ಬರಹ..ನಿಮ್ಮ ಅನುಭವ ಓದಿದ ಮೇಲೆ, ನಾನೊಬ್ಬ ಪುರುಷ ಜಾತಿಗೆ ಸೇರಿದವ ಎಂದು ಹೇಳಿಕೊಳ್ಳಲು ಕೂಡ ನಾಚಿಕೆಯಾಗುತ್ತದೆ

  ಪ್ರತಿಕ್ರಿಯೆ
 9. Chinmay Mathapati

  ಇಂಥ ಪಾಪ ಎಸಗುವ ಪಾಪಿಗಳನು ಶಪಿಸಲು ನನ್ನಲಿ ಕೆಟ್ಟ ಪದಗಳಿಲ್ಲ…ಒಂದೇ ಒಂದು ಮಾತು ಮಹಿಳೆಯರು ಎಲ್ಲ ಸಮಯದಲ್ಲೂ ಜಾಗೃತರಾಗಿರಬೇಕು ಎನ್ನುವುದೇ ನನ್ನ ವಿನಮ್ರ ಕಳಕಳಿ…….

  ಪ್ರತಿಕ್ರಿಯೆ
 10. hi

  rape agide andre jana gala comment heegide “ಹಾಯ್ ಯಾಮ್ R R K ಅವಳು ೧೭ ತುಂಬಿದ ಅರೆಯದ ಹುಡುಗಿ ಅವಳಿಗೂ ಅಧೆ ಬೇಕು ಅನ್ಸುಥೆ ಅದಕ್ಕೆ ೧೧ ಗಂಟೆ ಸಮಯದಲ್ಲಿ ಹೊರಗಡೆ ಹೋಗಿದಾಳೆ ೧೫ ವರ್ಷದ ಹೊಳಗಿನ ಹೆಣ್ಣು ಮಕ್ಕಳ ಮಾನ ಬಂಗ ಮಾಡಿದವರನ್ನು ಪಬ್ಲಿಕ್ ರೋಡ್ ನಲ್ಲಿ ಶೂಟ್ ಔಟ್ ಮಾಡಬೇಕು ಆಷ್ಟೇ ಪ್ಲೀಸ್ ಮೈ ಸ್ಟೇಟ್ C M & ನನ್ನ ” evar madya baduku yest kasta

  ಪ್ರತಿಕ್ರಿಯೆ
 11. umesh desai

  ತೀರ ಇತ್ತೀಚೆಗೆ ಅಮೀರ್ ಖಾನ್ ನ “ಸತ್ಯಮೇವ ಜಯತೇ” ದಲ್ಲೂ ಇಂಥಾ
  ಪ್ರಕರಣ ಇದ್ವು..ಓದಿ ಮನಸ್ಸಿಗೆ ನೋವಾತು
  ಮೊದಲ ವಿಶ್ವಕಪ್ ಆಗಿದ್ದು ೧೯೭೫ ರಲ್ಲಿ ಅವಾಗ ಭಾರತದಲ್ಲಿ ಕಲರ್ ಟಿವಿ ಬಂದಿರಲಿಲ್ಲ…!!

  ಪ್ರತಿಕ್ರಿಯೆ
  • G

   ಲೇಖಕಿ ನಮ್ಮನ್ನು ಸಂಪರ್ಕಿಸಿದ್ದರು, ಅದು ಮೊದಲ ವಿಶ್ವ ಕಪ್ ದಿನಗಳಲ್ಲ, ಭಾರತ ಮೊದಲ ಬಾರಿ ವಿಶ್ವ ಕಪ್ ಗೆದ್ದ ದಿನಗಳು ಅಂತ ಹೇಳಿದರು. ತಿದ್ದುಪಡಿ ಮಾಡಲಾಗಿದೆ.

   ಪ್ರತಿಕ್ರಿಯೆ
 12. halemanerajashekhar

  hennumakkalnnu atmaviswasdinda belesbeku. dehada moulyda bagge tilisbeku. nimgada anubhav mundin mundin janangda mhiliyrige agabardu. gandsu alada vikrutiyind ennu hora baralilla. atyacharkke olgadavar manstitiynnu smaj artamadikondu santvan nidabeku. kanunu bhay huttisuv hage irbeku.

  ಪ್ರತಿಕ್ರಿಯೆ
 13. Sindhu

  ಈ ಧಿಕ್ಕಾರ ಈ ಸಮಯದಲ್ಲಿ ಅತ್ಯಂತ ಅವಶ್ಯಕವಾಗಿದ್ದು.
  ಧಿಕ್ಕಾರದ ಹೊಳೆಗೆ ಸೇರುವ ಹನಿ ಹನಿ ಬೆಂಬಲವೂ ಪ್ರವಾಹ ಉಂಟು ಮಾಡುತ್ತದೆ ಎನ್ನುವುದು ನನ್ನ ಅನಿಸಿಕೆ.
  ಇಂದು ಇಲ್ಲಿ ಬಂದ ಎಲ್ಲ ಲೇಖನಗಳಲ್ಲೂ ಹೆಮ್ಮಕ್ಕಳ ಮೇಲೆ ನಡೆಸಿದ ಅನುಚಿತ ವರ್ತನೆಗಳಿಂದ ಹಿಡಿದು ದೌರ್ಜನ್ಯದ ಪರಮಾವಧಿಗಳ ಮುಖವನ್ನು ಕಂಡೆ.
  ಈ ಅಸಹ್ಯಕರವಾದ, ಆಕ್ರೋಶ ಹುಟ್ಟಿಸುವ ಪರಿಸ್ಥಿತಿಯಲ್ಲಿ ಕೂಡಾ ಈ ಎಲ್ಲ ಲೇಖನಗಳಲ್ಲೂ ಪಡಿ ಮೂಡಿರುವ ಜೀವನ ಪ್ರೀತಿ, ಮೆಟ್ಟಿ ನಿಲ್ಲುವ ಛಲ, ಸೇರಿಗೆ ಸವ್ವಾಸೇರಾಗಬಯಸುವ ಉತ್ಸಾಹ, ಎಲ್ಲಕ್ಕಿಂತ ಹೆಚ್ಚಾಗಿ ವಿವೇಕಯುತ ಆಲೋಚನೆಗಳು ಬೆಳ್ಳಿಕಿರಣಗಳ ಹಾಗಿವೆ.
  ನಮ್ಮ ಸುತ್ತಮುತ್ತಲನ್ನು ತೆರೆದಿಡುತ್ತಾ, ತಡವಿಕೊಳ್ಳುವ ಪಿಶಾಚ ಗಣಗಳನ್ನ ಪರಿಚಯಿಸುತ್ತಾ, ಅವನ್ನು ಮೀರುವ ವಿಧಾನವನ್ನು ಇಲ್ಲಿ ಗೆಳತಿಯರು,ಅಕ್ಕ,ತಂಗಿಯರು ಮಾಡಿದ್ದಾರೆ.
  ನಮ್ಮ ಸಂದಿಗ್ಧದಲ್ಲಿ, ಸಂಕಟದಲ್ಲಿ, ತಥ್ ಎನ್ನಿಸಿ ಮೈಯೆಲ್ಲ ಉರಿಯುವಾಗ ಈ ಬರಹಗುಚ್ಚಗಳಿಂದ ಕಲಿತದ್ದು ಸಹಾಯಕ್ಕೆ ಬರುತ್ತದೆ ಎಂಬ ಸಮಾಧಾನಕರ ವಿಷಯ.
  ಈಗಷ್ಟೇ ಹಿರಿಯ ಲೇಖಕ ತಿರುಮಲೇಶರು ಬರೆದ ಕಮೆಂಟ್ ಓದಿದೆ. ನಿಜಕ್ಕೂ ನಮ್ಮ ವ್ಯವಸ್ಥೆಗೆ ಈ ವಿಧಾನಗಳ ಅಗತ್ಯವಿದೆ.
  ಧಿಕ್ಕರಿಸಿದ ವಿಷಕ್ಕೆ ಪ್ರತ್ಯೌಷಧ ಕಂಡು ಹಿಡಿಯುವ ಪ್ರಯತ್ನವನ್ನ, ನಾವು ಮಕ್ಕಳನ್ನು ಬೆಳೆಸುವಾಗ ಅವರ ಮನದಲ್ಲಿ ಎಚ್ಚರ ಮತ್ತು ಗೌರವವನ್ನ ಪ್ರಯತ್ನಪೂರ್ವಕವಾಗಿ ಮೂಡಿಸುವುದನ್ನ ಮಾಡಬೇಕು.

  ಅವಧಿಗೆ, ಬಳಗಕ್ಕೆ, ಪ್ರತಿ-ಧ್ವನಿ ಹುಟ್ಟಿಸುತ್ತಿರುವ ಜಯಲಕ್ಷ್ಮೀ ಪಾಟೀಲರಿಗೆ ವಂದನೆಗಳು. ಇಂತಹ ಪ್ರಯತ್ನದಲ್ಲಿ ಭಾಗಿಯಾಗುತ್ತಿರುವ ನಮ್ಮ ಅರಿವನ್ನ ಹರಳುಗಟ್ಟಿಸುವ ಎಲ್ಲ ಬರಹಗಾರ್ತಿಯರಿಗೂ ವಂದನೆಗಳು.
  ಆ ಕಲ್ಲುಗಳೆಲ್ಲಾ ತಾಗಿದ್ದು ನನಗೇ ಓದಿದಾಗ ಕಲ್ಲು ತಾಗಿದ ನೋವು, ಅವಮಾನ, ಅಸಹಾಯ ಸಿಟ್ಟು ನನಗೂ ಬಂತು.
  ಎಲ್ಲ ಲೇಖನಗಳೂ ನಮ್ಮ ಸಮಾಜದ ಭಂಡತನಕ್ಕೆ, ದಡ್ಡತನಕ್ಕೆ, ದೇವರಾಗಿಸಿ ಪಲ್ಲಕ್ಕಿ ಹತ್ತಿಸಿದ ಹಾಗೆ ಮಾಡಿ- ಮನುಷ್ಯಸಹಜ ಗೌರವವನ್ನ ಕಸಿಯುವ ಕ್ರೌರ್ಯಕ್ಕೆ ಕನ್ನಡಿ ಹಿಡಿದಿವೆ.

  ಸಿಂಧು

  ಪ್ರತಿಕ್ರಿಯೆ
 14. sahana prasad

  cheche!! i can understand ur frustration, anger n helplessness..just hope they’ve got back wat they gave, in more measure!

  ಪ್ರತಿಕ್ರಿಯೆ
 15. Rj

  ಹ್ಮಮ್.. ಏನಂತ,ಹ್ಯಾಗೇಂತ ಹೇಳುವದು ಗೊತ್ತಿಲ್ಲ.
  ಏನು ಹೇಳಿದರೂ ಅದು ತನ್ನ ಅರ್ಥ ಕಳೆದುಕೊಳ್ಳುತ್ತದೆ.
  ಇಂಥದ್ದನೆಲ್ಲ ಅನುಭವಿಸಿದವರ ಬದುಕಿನ ಸಂತೋಷದ ಕ್ಷಣಗಳೇ ಒಂಚೂರು ನೆಮ್ಮದಿ ನೀಡಬಲ್ಲವೇನೋ…
  -Rj

  ಪ್ರತಿಕ್ರಿಯೆ
 16. Aparna Rao..

  ಬಹಳ ಸಭ್ಯ ಮುಖವಾಡ ಹಾಕಿ ನಮಗೇ ತಿಳಿಯದಂತೆ ಸುತ್ತ ಮುತ್ತ ಸಾಮಾನ್ಯವಾಗಿ ಓಡಾಡಿಕೊಂಡಿರುವ ಗೋಮುಖ ವ್ಯಾಘ್ರ ಜೀವಿಗಳಿಗೆ ಲೇಖನ ಕನ್ನಡಿ ಹಿಡಿದಂತಿದೆ. ಅಂತವರು ಓದಿ ಒಳಗೇ ಹಿಂಸೆ ಅನುಭವಿಸುತ್ತಿರಬಹುದು.
  ತಪ್ಪು ಮಾಡದವರು ಕೀಳರಿಮೆ ಅನುಭವಿಸಬೇಕಾಗಿಲ್ಲ.ಯಾರಿಗೆ ಚುಚ್ಚಬೇಕೋ ಅವರಿಗೆ ಚುಚ್ಚಿದರೆ ಸಾಕು.

  ಪ್ರತಿಕ್ರಿಯೆ
 17. ಅಜಯ್ ಜೆ

  ನಿಮ್ಮ ನೋವು, ಅನುಭವಿಸಿದ ಮಾನಸಿಕ ವೇದನೆ ನಮಗೆ ತಾಕಿತು, ಮನ ಕಲಕಿತು..

  ಪ್ರತಿಕ್ರಿಯೆ
 18. akshata deshpande

  gelati, nivu anubhavisiruva novu nanage manassinaaladalli takitu. tamma maneyavarante nadedukondu benna hinde churi haakuva intaha janarannu devaru yaavattu kshamisuvudilla.

  ಪ್ರತಿಕ್ರಿಯೆ
 19. ದಿನೇಶ್ ಕುಕ್ಕುಜಡ್ಕ

  ತಾಯೀ, ಕೊರಳುಬ್ಬುವ ಇಂಥ ವೇಳೆ ನನ್ನಂಥವನ ಒಂದು ತುಂಡು ಮಾತು ಕೇವಲ ಸಾಂತ್ವನಕ್ಕಷ್ಟೇ ಸೀಮಿತವಾಗದಿರಲೆಂದು ಮನಃಪೂರ್ವಕ ಆಶಿಸುವೆ. ಜಗತ್ತಿನ ಯಾವ ನೋವುಗಳಿಗೂ ಎದೆಗೂಡಿನಲ್ಲಿ ಸೂಜಿಮೊನೆಯಷ್ಟೂ ಜಾಗ ಕೊಡಲಾರದ ಮತಿಕೃಪಣ ಖಂಡಿತ ಮನುಷ್ಯನಾಗಲಾರ. ಅಮೂರ್ತವಾದ ಅಂಥದೊಂದು ಜಾಗ ಅವಶ್ಯ ಮೂರ್ತಗೊಂಡಂತಿದೆ ಇಲ್ಲಿ; ನಿಮ್ಮ ನೋವು- ನಿಟ್ಟುಸಿರುಗಳಿಗೆ ಅವಧಿ ಕೊಟ್ಟಿರುವ ಈ ತಾಣದಲ್ಲಿ. ಅಂತರ್ಜಾಲವೂ ಕರುಳುಬಳ್ಳಿಗಳ ಜಾಲವಾಗಲಿ ಹೀಗೆ. ನಿಮ್ಮ ನೋವು ನನ್ನದೂ ಆಗಲಾರದಿದ್ದರೆ ನಾನೂ ಮನುಷ್ಯನಾಗಲಾರೆ. ಈ ನಿಟ್ಟುಸಿರು,ನನ್ನನ್ನೂ ಸೇರಿದಂತೆ ಎಲ್ಲರನ್ನೂ ಹೆಚ್ಚು ಹೆಚ್ಚು ಮನುಷ್ಯನನ್ನಾಗಿರಿಸಲಿ…..

  ಪ್ರತಿಕ್ರಿಯೆ
 20. Mohan V Kollegal

  ಚೆ! ಯಾಕೆ ಕೆಲವು ಗಂಡಸರು ಗಂಡಸರಾಗಿರುವುದಿಲ್ಲವೋ ಎಂಬುದೇ ನೋವಿನ ವಿಚಾರ… ಆ ಸಮಯದಲ್ಲಿ ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳಲು ಜೋರಾಗಿ ಚೀರುವುದಲ್ಲದೇ, ಸಾರ್ವಜನಿಕರ ಸಹಾಯ ಪಡೆದುಕೊಳ್ಳುವುದೇ ಒಳಿತು…

  ಪ್ರತಿಕ್ರಿಯೆ
 21. Prasad V Murthy

  ಸಹೋದರಿ, ನಿಮ್ಮ ಅನುಭವಗಳನ್ನು ಓದಿ ಈ ಗಂಡು ಜನ್ಮದ ಬಗ್ಗೆಯೇ ಅಸಹ್ಯ ಹುಟ್ಟಿತು! ಆದರೆ ನಿಮ್ಮ ಮಾತುಗಳಲ್ಲೇ ವಾಸ್ತವ ವ್ಯಕ್ತವಾಗಿದೆ, ಎಲ್ಲಾ ಗಂಡಸರೂ ಹೀಗೇ ಇರುವುದಿಲ್ಲ. ಈ ರೀತಿ ಮೃಗೀಯ ವರ್ತನೆ ತೋರುವವರು ಮನುಷ್ಯರೇ ಅಲ್ಲ, ರಾಕ್ಷಸರು, ಪಿಶಾಚಿಗಳು! ಇಷ್ಟೆಲ್ಲಾ ಅನುಭವಿಸಿದ ಮೇಲೂ ಜೀವನವನ್ನು ಪ್ರೀತಿಸುತ್ತಿದ್ದೀರಲ್ಲಾ, ನಿಮ್ಮ ಅಂತಃ ಸತ್ವಕ್ಕೆ ನನ್ನದೊಂದು ಸಲಾಂ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: