ಹೇಳತೇವ ಕೇಳ…

ಅಂದು ತಡರಾತ್ರಿ, ಫೇಸ್ ಬುಕ್ಕಿನಲ್ಲಿ ಕಿರಿಯ ಗೆಳತಿಯೊಬ್ಬಳು ದೆಹಲಿಯಲ್ಲಿ ನಡೆದ ಸಾಮೂಹಿಕ ಬಲಾತ್ಕಾರದ ಸುದ್ದಿ ಹೇಳಿ ಮನಸ್ಸನ್ನು ಕಲಕಿ ಹಾಕಿದ್ದಳು. ಬೆಳಗ್ಗೆ ಎಲ್ಲಾ ನ್ಯೂಸ್ ಪೇಪರುಗಳಲ್ಲೂ ಅದೇ ’ಸುದ್ದಿ’. ಆದರೆ ಇದು ಕೇವಲ ಸುದ್ದಿಯಾಗಿ ಎರಡು ದಿನಗಳ ಕಾಲ ನ್ಯೂಸ್ ಪೇಪರ್, ಟಿವಿ ಚಾನಲ್ ಗಳಲ್ಲಿ ಚರ್ಚೆಯಾಗಿ, ನೋಡಿ ನೋಡಿ ಮನಸ್ಸು ಜಡ್ಡುಗಟ್ಟಿ, ಚಾನಲ್ ಬದಲಾಯಿಸಿ… ಛೆ ಇದು ಇಷ್ಟೇನಾ? ಇಷ್ಟೇ ಆಗಬಾರದಲ್ಲವಾ…

ಹೀಗೆ ತೊಳಲಾಟದಲ್ಲಿರುವಾಗಲೇ ಫೇಸ್ ಬುಕ್ಕಿನ ಗೆಳತಿ ಜಯಲಕ್ಷ್ಮಿ ಪಾಟೀಲ್ ಏನಾದರೂ ಮಾಡಬೇಕು ಅಂತ ನಿಂತಿದ್ದರು. ಅವರ ಮನಸ್ಸಿನಲ್ಲಿದ್ದಿದ್ದು ಅಪ್ಪಟ ಪ್ರತಿಭಟನೆ.  ಹೀಗೆ ಬಂದದ್ದು ಈ ಸಂಚಿಕೆ.

ಲೇಖನ/ಆಕ್ರೋಶ/ಅನುಭವ/ಅನಿಸಿಕೆ ಬರೆದು ಕಳಿಸಿ ಅಂದಾಗ ನಾವು ಪ್ರತಿಕ್ರಿಯೆಯನ್ನು ನಿರೀಕ್ಷಿದ್ದೆವು ಆದರೆ ಈ ಮಟ್ಟದಲ್ಲಲ್ಲ.. ಎಷ್ಟು ನೋವಿನ ದನಿಗಳು, ಅತ್ಯಾಚಾರಕ್ಕೆ ಎಷ್ಟೆಲ್ಲಾ ವ್ಯಾಖ್ಯೆಗಳು, ವ್ಯಾಖ್ಯಾನಗಳು… ಓದುತ್ತಾ ಓದುತ್ತಾ ಅನ್ನಿಸಿದ್ದು, ’ಅತ್ಯಾಚಾರ ಕೇವಲ ದೈಹಿಕವಲ್ಲ, ಅತ್ಯಾಚಾರ ಕೇವಲ ಲೈಂಗಿಕ ಅತ್ಯಾಚಾರವೂ ಅಲ್ಲ’, ಇಲ್ಲಿರುವುದು ಹೆಣ್ಣು ಅನುಭವಿಸಿದ ಆ ಎಲ್ಲಾ ನೋವಿನ, ಆಕ್ರೋಶದ, ಅಸಹಾಯಕತೆಯ ದನಿ.

ಇಲ್ಲಿ ಈ ದಿನ ಪ್ರಕಟವಾಗಿರುವುದು ೧೨ ಲೇಖನಗಳು ಮಾತ್ರ. ಅದಕ್ಕೆ ಎರಡು ಕಾರಣಗಳಿವೆ, ಒಂದು ಇದು ಒಂದು ದಿನದ ಸುದ್ದಿಯಾಗಬಾರದು, ಈ ದನಿ ಒಂದು ದಿನದ ಕೂಗಾಗಬಾರದು, ಹಾಗಾಗಿ ಇದೇ ಧ್ವನಿಯ ಲೇಖನಗಳನ್ನು ದಿನಕ್ಕೊಂದರಂತೆ ಪ್ರಕಟಿಸಲಾಗುತ್ತದೆ.

ಎರಡನೆಯ ಕಾರಣ ಇವು ಯಾವನ್ನೂ ಕೇವಲ ಲೇಖನಗಳನ್ನಾಗಿ ನೋಡಿ, ಕೆಲವನ್ನು ಆಯ್ದು ಪ್ರಕಟಿಸುವುದು ನಮ್ಮಿಂದ ಸಾಧ್ಯವೇ ಇರಲಿಲ್ಲ. ಇಲ್ಲಿನ ಎಲ್ಲಾ ಧ್ವನಿಗಳೂ ಎಲ್ಲರ ಮನಸ್ಸನ್ನು ಮುಟ್ಟಬೇಕು. ಈಗ ಇದು ನಿಮ್ಮೆಲ್ಲರ ದನಿ.. ಲೇಖನ ಕಳಿಸಿ, ಬೆಂಬಲ ವ್ಯಕ್ತ ಪಡಿಸಿ, ನಮ್ಮ ಧ್ವನಿಗೆ ಧ್ವನಿ ಸೇರಿಸಿದ ಎಲ್ಲರಿಗೂ ನಮ್ಮ ನಮನ.

ಜಯಲಕ್ಷ್ಮೀ ಪಾಟೀಲ್ ಗೆಳತಿ, ಸಖಿ, ಸೋದರಿ. ಆಕೆಯ ವ್ಯಕ್ತಿತ್ವದಲ್ಲೇ ಒಂದು ಸಂವೇದನೆ ಇದೆ, ಮಿಡಿಯುವ ಗುಣ ಇದೆ, ಆಕೆ ಲೇಖಕಿ, ಕವಿ, ರಂಗಭೂಮಿ ಕಲಾವಿದೆ, ಒಂದು ತಂಡ ಕಟ್ಟಿಕೊಂಡು ನಾಟಕ ಮಾಡುತ್ತಾರೆ, ಸದಾ ಜೀವನ್ಮುಖಿ. ಆದರೆ ಆಕೆಯ ವಿಶೇಷತೆ ಇರುವುದು ಆಕೆಯ ಗ್ರಹಿಕೆಯಲ್ಲಿ, ಅದನ್ನು ಮೆಲು ಮಾತಿನಲ್ಲೇ ಮಂಡಿಸಿ ಅದಕ್ಕೊಂದು ತಾರ್ಕಿಕ ನೆಲೆ ಒದಗಿಸಿಕೊಡುವಲ್ಲಿ. ಜಯಲಕ್ಷ್ಮಿ ಪಾಟೀಲ್ ಗೆ ‘ಅವಧಿ’ಯ ಪರವಾಗಿ ಕೃತಜ್ಞತೆಗಳು.

ಎನ್ ಸಂಧ್ಯಾರಾಣಿ

ಸಂಯೋಜಕಿ, ಅವಧಿ

 

ಅತಿಥಿ ಸಂಪಾದಕರ

ಸಂಪಾದಕೀಯ

-ಜಯಲಕ್ಷ್ಮೀ ಪಾಟೀಲ್

ನಾವೆಲ್ಲರೂ ಈಗಾಗಲೇ ಬಣ್ಣ ಬಣ್ಣದ ಕನ್ನಡಕಗಳನ್ನು ಕೊಂಡಾಗಿದೆ. ದೌರ್ಜನ್ಯ, ದುಷ್ಟತನ, ನೋವುಗಳನ್ನಂತೂ ನಾವು ಈ ಬಣ್ಣಬಣ್ಣದ ಕನ್ನಡಕಗಳನ್ನು ಹಾಕಿಕೊಂಡು ನೋಡಿದಾಗಲೇ ನಮಗೆ ಸಮಾಧಾನ. ಆಯಾ ಸಮಯಕ್ಕೆ ತಕ್ಕಂಥ ರಾಜಕೀಯ ಕನ್ನಡಕ, ಜಾತೀಯತೆಯ ಕನ್ನಡಕ,

ಪ್ರಾಂತೀಯ ಕನ್ನಡಕ, ಭಾಷಾ ಕನ್ನಡಕ, ಹೆಣ್ಣು ಕನ್ನಡಕ, ಗಂಡು ಕನ್ನಡಕಗಳಿಲ್ಲದೆ ನಮಗೆ ಒಂದು ವಿಷಯವನ್ನು ಕೇವಲ ವಿಷಯವನ್ನಾಗಿಯಷ್ಟೇ ನೋಡಲು, ಅದಕ್ಕೆ ಸ್ಪಂದಿಸಲು ಸಾಧ್ಯವೇ ಇಲ್ಲ! ಈ ಕನ್ನಡಕಗಳಿಂದಾಗಿ ವಿಷಯ ಮಸುಕಾಗಿ ಉಳಿದೆಲ್ಲವೂ ಢಾಳಾಗಿ ಕಾಣಲು ಆರಂಭಿಸುತ್ತದೆ. ಹಾಗಾಗಬಾರದಲ್ಲವೇ?

ಮತ್ತೊಮ್ಮೆ ದೆಹಲಿಯ ಈ ಸಾಮೂಹಿಕ ಅತ್ಯಾಚಾರದ ಬರ್ಬರ ಘಟನೆ ದೇಶದ ಪ್ರತಿಯೊಬ್ಬ `ಮನುಷ್ಯ’ನನ್ನು ಅಲುಗಾಡಿಸಿಬಿಟ್ಟಿದೆ. ಹೆಣ್ಣುಮಕ್ಕಳೆಲ್ಲ ತಾವು ನಿತ್ಯ ಒಂದು ಆತಂಕ ಹೊತ್ತೇ ಬದುಕುವುದನ್ನು, ಮದ್ದಿಲ್ಲದ ಖಾಯಿಲೆಯೊಂದನ್ನು ವಿಧಿಯಿಲ್ಲದೆ ಅನುಭವಿಸಬೇಕಾದವರಂತೆ ರೂಢಿಸಿಕೊಂಡು, ಮೂರೂ ಹೊತ್ತೂ ಅದನ್ನು ಹೆಗಲೇರಿಸಿಕೊಂಡರೆ ಸಹಜ ಬದುಕು ಬದುಕಲು ಆಗದು ಎಂಬ ಸುಪ್ತಪ್ರಜ್ಞೆಯ ಆಜ್ಞೆಯರಿತು ನಗುನಗುತ್ತ ತಮ್ಮ ದಿನನಿತ್ಯದ ಬದುಕಿನ ಗಾಡಿ ಸಾಗಿಸುತ್ತಿರುವಾಗ, ಆಗಾಗ ಮರುಕಳಿಸುವ ಇಂಥ ಹೀನಕೃತ್ಯಗಳು, ನಮ್ಮ ಮೌನದ ಅಕಾರಣ ಸಕಾರಣಗಳನ್ನು ಏಕಕಾಲಕ್ಕೆ ಹಂಗಿಸುತ್ತವೆ! ರೊಚ್ಚಿಗೆಬ್ಬಿಸುತ್ತವೆ! ರೊಚ್ಚುಗೆದ್ದ ಜನ ಇಂಥವುಗಳ ವಿರುದ್ಧ ದನಿ ಎತ್ತಿದರೋ ಇಲ್ಲವೋ, ಮುಂದೆ ಇಂಥವು ಮರುಕಳಿಸದಂತೆ ಏನ್ನನ್ನಾದರೂ ಕ್ರಮ ಕೈಗೊಳ್ಳಲು ಸರಕಾರವನ್ನು, ಕಾನೂನನ್ನು ಕೋರಿ ನಾಲ್ಕು ಹೆಜ್ಜೆ ಮುಂದಿಟ್ಟರೋ ಇಲ್ಲವೋ ಹಿಂದೆಯೇ ಅಂಥ ದನಿಗಳನ್ನು ಮಟ್ಟ ಹಾಕಲು ಸಕಲ ವ್ಯವಸ್ಥೆಯೂ ಆಗಿಬಿಡುತ್ತದೆ.

ಹೋರಾಟಕ್ಕಿಳಿಯುವವರಿಗಿಂತ ಅದನ್ನು ತಡೆಯುವವರ ಸಂಖ್ಯೆಯೇ ಹೆಚ್ಚು. ಹೀಗಾಗಿ ನಾಲ್ಕಾರು ದಿನಗಳಲ್ಲಿ ಹೆಚ್ಚೆಂದರೆ ತಿಂಗಳೊಪ್ಪತ್ತಿನಲ್ಲಿ ಹೋರಾಟದ ಸದ್ದಡಗಿಬಿಡುತ್ತದೆ. ಮತ್ತೆ ಯಥಾಸ್ಥಿತಿ… ನಮ್ಮ ದೇಶ ಬದಲಾಗದು ಎಂಬ ಸ್ಲೋಗನ್ನಿನೊಡನೆ ಮತ್ತೆ ನಾವಾಗಿಯೇ ಉಳಿಸಿಕೊಂಡ ಕೊಚ್ಚೆ ಬದುಕಲ್ಲಿ ಗಂಧದ ಪರಿಮಳದ ಹುಡುಕಾಟ, ಚೆಂದದ ಬದುಕಿಗಾಗಿ ವೃಥಾ ತಿಣುಕಾಟ.

ಹಳ್ಳಿ ದಿಲ್ಲಿ, ಬಡವ ಬಲ್ಲಿದ ಎನ್ನುವ ಭೇದವಿಲ್ಲದಂತೆ ಎಲ್ಲೆಡೆಯೂ ಇಂಥ ಅನಾಚಾರಗಳು ಅನಾದಿ ಕಾಲದಿಂದಲೂ ನಡೆಯುತ್ತಲೇ ಇವೆ. ಈ ಖಾಯಿಲೆಗೆ ಮದ್ದು ಹುಡುಕುವ ಬದಲು, ಖಾಯಿಲೆಯನ್ನು ಹೊಡೆದೋಡಿಸುವ ಬದಲು ನಾವು ಮಾಡುತ್ತಾ ಬಂದಿರುವುದೇನೆಂದರೆ ಹೆಣ್ಣು ತಾನು ಸುರಕ್ಷಿತಳಾಗಿರಬೇಕೆಂದರೆ ಎಷ್ಟೆಲ್ಲ ಸಾಧ್ಯವೋ ಅಷ್ಟೂ ಬೇಡಿಗಳನ್ನು ತೊಟ್ಟು ಬದುಕುವುದನ್ನು ಹೇಳಿಕೊಡುವುದು ಮತ್ತು ರೂಢಿಸುವುದು. ಅಂಥ ಸುರಕ್ಷಿತ ಬೇಡಿಗಳ ನಡುವೆಯೂ ಅತ್ಯಾಚಾರಗಳಾಗುತ್ತವೆ, ಲೈಂಗಿಕ ಕಿರುಕುಳ ಅನವರತ ಮುಂದುವರೆಯುತ್ತದೆ.

ಯಾಕೆ ಹೀಗಾಗುತ್ತದೆ? ಯಾಕೆ ಗಂಡಸರೇ ಹೆಚ್ಚಾತೀ ಹೆಚ್ಚಿನ ಪ್ರಮಾಣದಲ್ಲಿ ಇಂಥ ವಿಕೃತಿಗಿಳಿಯುತ್ತಾರೆ? ಅವರ ದೇಹದಲ್ಲಿ ಅಂಥ ಯಾವ ಹಾರ್ಮೋನ್ ಈ ಪರಿಯ ವಿಕೃತಿಗಳನ್ನು ಪ್ರಚೋದಿಸುತ್ತಿರುತ್ತದೆ?! ದಡಾರ ಚುಚ್ಚು ಮದ್ದು, ಪೋಲಿಯೊ, ಬಿಸಿಜಿ ಲಸಿಕೆ ಮುಂತಾದವುಗಳನ್ನು ಕಂಡು ಹಿಡಿದು ಮಗು ಹುಟ್ಟುತ್ತಲೇ ಅವೆಲ್ಲವನ್ನೂ ಮಗುವಿನ ದೇಹದೊಳಗಿಳಿಸಿ ಮುಂಬರುವ ಭಯಂಕರ ವ್ಯಾಧಿಗಳನ್ನು ಬರದಂತೆ ತಡೆಯಲು ಸಾಧ್ಯವಿರುವಾಗ, ಗಂಡಿನಲ್ಲಿ ಹುಟ್ಟುವ ಈ ವಿಕಾರವನ್ನು ತಡೆಗಟ್ಟಲು ಯಾಕೆ ವಿಜ್ಞಾನಿಗಳು ಪ್ರಯತ್ನಿಸಿಲ್ಲ? ನನಗ್ಯಾಕೋ ಇದು ಬರೀ ಮಾನಸಿಕ ಸಮಸ್ಯೆ, ಅವರು ಬೆಳೆದ ವಾತಾವರಣದ ಹಿನ್ನೆಲೆ, ಅನುಭವಿಸಿದ ಅವಮಾನಗಳ ಪ್ರತಿಕಾರ ಮುಂತಾಗಿ ಅನಿಸುವುದಿಲ್ಲ. ಬದಲಿಗೆ ಹಾರ್ಮೋನ್ ಗಳ ಏರುಪೇರಿನ ಜೊತೆಗೆ ಮನಸಿನ ವಿಕಾರವೂ ಸೇರಿ ಅವರುಗಳು ಈ ಪರಿಯ ಹೇಸಿಗಳಾಗುತ್ತಾರೆ ಅನ್ನಿಸುತ್ತದೆ. ಇಂಥ ವಿಕೃತರ ದೆಸೆಯಿಂದಾಗಿ ಸಭ್ಯ ಗಂಡಸರನ್ನೂ ಒಂದು ಅನುಮಾನದ ಕಿರುಗಣ್ಣಿನಿಂದ ಹೆಣ್ಣುಮಕ್ಕಳು ನೋಡುವಂತಾಗಿರುವುದು ವಿಪಯರ್ಾಸವಾದರೂ ತನ್ನ ಸುರಕ್ಷೆಗಾಗಿ ಅದು ಅನಿವಾರ್ಯ ಎಂಬಷ್ಟು ಹೆಣ್ಣು ಅದಕ್ಕೆ ಒಗ್ಗಿ ಹೋಗಿದ್ದಾಳೆ!!

ದೆಹಲಿಯ ಈ ಸಾಮೂಹಿಕ ಅತ್ಯಾಚಾರದ ಪ್ರಕರಣ ಕಂಡು, ಗಂಡು ಹೆಣ್ಣೆನ್ನದೇ ತಲ್ಲಣಿಸಿದವರ ಪ್ರತಿಕ್ರಿಯೆಗಳು ಇಂದಿನ `ಅವಧಿ’ಯ ಈ ವಿಶೇಷ ಸಂಚಿಕೆಯಲ್ಲಿವೆ. ಈ ಲೇಖನಗಳನ್ನು ಓದಿದಾಗ ಭಾರತದಲ್ಲಿ ಒಂದಲ್ಲ ಒಂದು ರೀತಿಯಿಂದ ಲೈಂಗಿಕ ಕಿರುಕುಳ ಅನುಭವಿಸದ ಹೆಣ್ಣುಮಕ್ಕಳೇ ಇಲ್ಲವೇನೋ ಎನ್ನುವ ಅನಿಸಿಕೆ ಕೇವಲ ಅನಿಸಿಕೆಯಾಗುಳಿಯುವುದಿಲ್ಲ. ತಮಗಾದ ಕಿರುಕುಳವನ್ನು ಮುಕ್ತವಾಗಿ ಹೇಳಿಕೊಂಡರೆ ಎಲ್ಲಿ ಜಗತ್ತು `ನಿನ್ನದೇ ಏನೋ ತಪ್ಪಿರಬೇಕು, ಅದಕ್ಕೇ ನಿನ್ನ ಜೊತೆ ಹೀಗಾಗಿದೆ ಎಂದುಬಿಡುತ್ತದೋ ಎಂಬ ಭಯದಿಂದ ಇಂಥ ಅಸಹ್ಯಗಳನ್ನು ಹೇಳಿಕೊಳ್ಳಲೂ ಹೆದರುವ ಮನಸ್ಥಿತಿಯಿಂದ ಹೆಣ್ಣುಮಕ್ಕಳು ನಿಧಾನಕ್ಕೆ ಬಿಡುಗಡೆ ಹೊಂದುತ್ತಿದ್ದಾರೆ ಎನ್ನುವುದೊಂದು ಸಮಾಧಾನಕರ ವಿಷಯವಾದರೂ ಒಂದು ಅಳುಕಿನೊಂದಿಗೇ ತಮ್ಮ ಅನುಭವಗಳನ್ನು ನಮ್ಮೆದುರು ಹೇಳಿಕೊಳ್ಳುತ್ತಿದ್ದಾರೆ ಎನ್ನುವ ಸತ್ಯವನ್ನೂ ಅಲ್ಲಗಳೆಯಲಾಗದು.

ಇಲ್ಲ ಅಳುಕಬೇಕಿಲ್ಲ. ಗಾಯದ ಆಳ ಗೊತ್ತಾಗದೆ ಅದಕ್ಕೆ ಚಿಕಿತ್ಸೆ ದೊರಕುವುದಾದರೂ ಹೇಗೆ? ನೋವು, ನೋವಿನಿಂದಾಗಿ ಹುಟ್ಟಿದ ಆಕ್ರೋಶ ಸತ್ವಯುತವಾಗಿ ಇಂಥ ವಿಕೃತಿಗಳನ್ನು ಸದೆಬಡೆಯುವಲ್ಲಿ ಸಫಲವಾಗಲಿ, ಸಫಲವಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗದ ಹೊರತು ಕೇಡಿಗಳ ಮನದಲ್ಲಿ ಭಯ ಹುಟ್ಟದು. ಭಯದಿಂದಲಾದರೂ ಅಪರಾಧಗಳು ಕಡಿಮೆಯಾಗಿ ಮುಂದೊಮ್ಮೆ ಇಲ್ಲವಾಗಬಹುದು. ಇಂಥ ಅಪರಾಧಗಳಿಗೆ ಕಾನೂನಿನಲ್ಲಿ ಶಿಕ್ಷೆ ಇನ್ನೂ ಬಲವಾಗಬೇಕು. ಜನ ಎಚ್ಚೆತ್ತುಕೊಂಡು ಎಲ್ಲೇ ಆಗಲಿ, ಯಾರ ಜೊತೆಯೇ ಆಗಲಿ ಯಾವುದೇ ರೀತಿಯ ಲೈಂಗಿಕ ಕಿರುಕುಳ ಕಂಡು ಬಂದರೂ ಒಟ್ಟಾಗಿ ಅಂಥದ್ದನ್ನು ತಡೆಯಬೇಕು. ಮೊದಲಿಗೆ ಕಿರುಕುಳ ಅನುಭವಿಸುವವರು ತಮ್ಮ ಜೊತೆ ಅನುಚಿತವಾದುದು ನಡೆಯುತ್ತಿರುವಾಗ ಪ್ರತಿಭಟಿಸಬೇಕು, ಸುತ್ತಲಿದ್ದವರ ಗಮನ ಸೆಳೆಯಬೇಕು, ಸಹಾಯ ಕೋರಬೇಕು. ಹಸಿದ ಮಗು ಅಳದೆ ತಾಯಿಯೂ ಹಾಲು ಕೊಡಳಂತೆ. ಅಂಥದ್ದರಲ್ಲಿ ನೊಂದವರೇ ಹಿಂದೆ ಸರಿದು ಕುಳಿತರೆ ಸಮಸ್ಯೆ ಬಗೆ ಹರಿದೀತು ಹೇಗೆ…?

‍ಲೇಖಕರು G

December 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

39 ಪ್ರತಿಕ್ರಿಯೆಗಳು

  1. bharathi

    ಜಯಲಕ್ಷ್ಮಿ ಪಾಟಿಲ್ ಅವರ ಸಂಪಾದಕೀಯ ‘ಅವಧಿ’ ಯ ಪ್ರಯತ್ನಕ್ಕೆ ಕಿರೀಟಪ್ರಾಯವಾಗಿದೆ. ಇಂಥದ್ದೊಂದು ಸಂಚಿಕೆ ಕೊಟ್ಟ ಮತ್ತು ಇದರ ಮೂಲಕ ಇಂತಹ ಘಟನೆಗೆ ಸ್ಪಂದಿಸಿದ ‘ಅವಧಿ’ಗೆ ನನ್ನದೊಂದು ಬೆನ್ನು ತಟ್ಟು ….

    ಪ್ರತಿಕ್ರಿಯೆ
  2. sumathi

    ನಿಮ್ಮ ಅ೦ದೋಲನಕ್ಕೆ ಒಕ್ಕೊರಳಿನ ಬೆ೦ಬಲ ಇದೆ. ಧನ್ಯವಾದಗಳು ಎಲ್ಲರ ಧ್ವನಿ ಕೇಳಿಸುತ್ತಿರುವುದಕ್ಕೆ!

    ಪ್ರತಿಕ್ರಿಯೆ
  3. veena s

    ಅವಧಿ ತಂಡದ ಉತ್ತಮ ಪ್ರಯತ್ನಕ್ಕೆ ಅಭಿನಂದನೆಗಳು .ನಮಗೆ ಯಾವ ವಿಶೇಷ ಸ್ಥಾನ ಮಾನ, ಮೀಸಲಾತಿ , ಮರ್ಯಾದೆ ಯಾವುದೂ ಬೇಡ ,ಮನುಷ್ಯರಂತೆ ಬಾಳಲು ಬಿಡಿ ಸಾಕು. ಹೆಣ್ಣನ್ನು ಮಾತೆ, ದೇವಿ, ನಮ್ಮ ಸಂಸ್ಕೃತಿಯ ರಕ್ಷಕಿ ಹೀಗೆಲ್ಲ ಹೇಳಿ ಮೇಲಿಡಬೇಡಿ ಎಲ್ಲರಂತೆ ಬದುಕಲು ಬಿಡಿ ಪ್ಲೀಸ್!

    ಪ್ರತಿಕ್ರಿಯೆ
  4. Tejaswini Hegde

    ದಡಾರ ಚುಚ್ಚು ಮದ್ದು, ಪೋಲಿಯೊ, ಬಿಸಿಜಿ ಲಸಿಕೆ ಮುಂತಾದವುಗಳನ್ನು ಕಂಡು ಹಿಡಿದು ಮಗು ಹುಟ್ಟುತ್ತಲೇ ಅವೆಲ್ಲವನ್ನೂ ಮಗುವಿನ ದೇಹದೊಳಗಿಳಿಸಿ ಮುಂಬರುವ ಭಯಂಕರ ವ್ಯಾಧಿಗಳನ್ನು ಬರದಂತೆ ತಡೆಯಲು ಸಾಧ್ಯವಿರುವಾಗ, ಗಂಡಿನಲ್ಲಿ ಹುಟ್ಟುವ ಈ ವಿಕಾರವನ್ನು ತಡೆಗಟ್ಟಲು ಯಾಕೆ ವಿಜ್ಞಾನಿಗಳು ಪ್ರಯತ್ನಿಸಿಲ್ಲ?>>>> ನಿಜವಾಗಿಯೂ ಇಂಥದ್ದೊಂದು ಚುಚ್ಚುಮದ್ದನ್ನು ಕಂಡು ಹಿಡಿಯಲೇಬೇಕಾಗಿದೆ… ಹಾಗಾದರೆ ಮಾತ್ರ ಇಂತಹ ಕ್ರಿಮಿಗಳಿಂದ ಹೆಣ್ಮಕ್ಕಳಿಗೆ ಬಿಡುಗಡೆ ದೊರಕೀತು. ಉತ್ತಮ ಲೇಖನ!

    ಪ್ರತಿಕ್ರಿಯೆ
  5. A Ballal

    ಶತಮಾನಗಳ ಮೌನಕ್ಕೆ ನೀವುಗಳು ಮಾತು ಕೊಟ್ಟಿರುವುದೇ ಒಂದು ಹೊಸತನ!

    “ಮೊದಲಿಗೆ ಕಿರುಕುಳ ಅನುಭವಿಸುವವರು ತಮ್ಮ ಜೊತೆ ಅನುಚಿತವಾದುದು ನಡೆಯುತ್ತಿರುವಾಗ ಪ್ರತಿಭಟಿಸಬೇಕು..”. ಹೌದು. ಇನ್ನೊಂದು ಮುಖ್ಯ ವಿಷಯ: ಅನ್ಯಾಯ ಅನುಭವಿಸಿದವರು, ಅನ್ಯಾಯ ಮಾಡುವವರು ಇಬ್ಬರೂ ಬೇರೆ ಬೇರೆ ರೀತಿಯಲ್ಲಿ victims. ಅನೇಕ ಸಲ ನಮಗೆ ಹಾಗನಿಸದು.ಅಲ್ವಾ?

    ಪ್ರತಿಕ್ರಿಯೆ
  6. Anuradha.rao

    ನಮ್ಮೆಲ್ಲರ ಸಹಕಾರವಿದೆ ..ನಿಮ್ಮ ಪ್ರಯತ್ನ ಹಾಗೂ “ಅವಧಿ ” ಯ ಸಹಕಾರ ಮೆಚ್ಚುವಂತದ್ದು .

    ಪ್ರತಿಕ್ರಿಯೆ
  7. K.V.Tirumalesh

    ನಿಮ್ಮ ಈ ವಿಶೇಷ ಸಂಚಿಕೆ ಅತ್ಯಾಚಾರ ವಿರುದ್ಧದ ಜನಾಂದೋಲನಕ್ಕೆ ಒಂದು ಕೊಡುಗೆ. ಈ ಅತ್ಯಾಚಾರವನ್ನು ಮೂಲದಿಂದಲೇ ಕಿತ್ತೊಗೆಯುವುದಕ್ಕೆ ಏನು ಮಾಡಬಹುದು? ನಮಗೆ ಬೇಕಾದ್ದು ಅರಿವು ಮತ್ತು ಕಾರ್ಯಕ್ರಮ.
    ಅತ್ಯಾಚಾರದಲ್ಲಿ ಸಾಮೂಹಿಕ ಘೋರ, ಏಕಾಕಿ ಸಹ್ಯ ಎನ್ನುವ ಮಾತು ಸರಿಯಲ್ಲ. ಹೆಣ್ಣಿನ ಮೇಲೆ ನಡೆಯುವ ಯಾವುದೇ ಲೈಂಗಿಕ ಅತ್ಯಾಚಾರವೂ ಒಂದೇ: ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಮರಣದಂಡನೆಗೆ ನಮ್ಮ ಬುದ್ಧಿಜೀವಿಗಳು ಬಿಡುವುದಿಲ್ಲ!
    ಒಂದೆರಡು ಸೂಚನೆಗಳು:
    ಪೋಲೀಸರಿಗೆ ನಮ್ಮ ಜನತೆ ಸಹಕರಿಸುವುದಿಲ್ಲ; ಪೋಲೀಸರನ್ನು ನಮ್ಮ ವಿರೋಧಿಗಳಂತೆ ತಿಳಿಯುವ ಮನೋವೃತ್ತಿ ಹೋಗಬೇಕು. ಪೋಲೀಸರಿಗೂ ಜನರ ಜತೆ ಸರಿಯಾಗಿ ವರ್ತಿಸುವಂತೆ ತರಬೇತಿ ಸಿಗಬೇಕು.
    ಪ್ರತಿಯೊಬ್ಬ ನಾಗರಿಕನೂ ಪೋಲೀಸ್ ಸ್ಟೇಷನಿನಲ್ಲಿ ರೆಜಿಸ್ಟರ್ಡ್ ಮಾಡಿಕೊಳ್ಳಬೇಕು–Know Your Citizen ಎಂಬ ರೀತಿಯಲ್ಲಿ. ಹೀಗೆ ರೆಜಿಸ್ಟರ್ಡ್ ಅದಾಗ ಒಂದು ನಂಬರ್ ಸಿಗಬೇಕು; ವ್ಯಕ್ತಿ ಕೆಲಸಕ್ಕೆ ಸೇರಿದಾಗ, ಕೆಲಸ ಬದಲಾಯಿಸಿದಾಗ, ಪರವೂರಿಗೆ ಹೋಗಿ ನೆಲಸಿದಾಗ, ಬಾಡಿಗೆ ಮನೆ ಹಿಡಿದಾಗ ಈ ನಂಬರ (ಕಾರ್ಡು) ತೋರಿಸಲೇಬೇಕು. ಹಾಗೂ ಇದು ಅತ್ಯಾಚಾರದ ವಿರುದ್ಧದ ಕಾರ್ಯಕ್ರಮ ಎನ್ನುವುದು ಎಲ್ಲ್ರರಿಗೂ ಗೊತ್ತಿರಬೇಕು. ಇದರಿಂದ ನೇರ ಪರಿಣಾಮ ಇಲ್ಲದೆ ಇದ್ದರೂ ಜನರಲ್ಲಿ ಒಂದು ಅರಿವು ಮೂಡಲು ಸಹಾಯಕವಾದೀತು.
    ಶಾಲೆಯಿಂದ, ಕಾಲೇಜಿನಿಂದ, ಯಾವುದೇ ತರಬೇತಿಯಿಂದ ಹೊರಬರುವ ವಿದ್ಯಾರ್ಥಿಗಳು ಅತ್ಯಾಚಾರ ವಿರುದ್ಧದ ಹಾಗೂ ಮಹಿಳಾ ರಕ್ಷಣೆಯ ಪರವಾದ ಹೇಳಿಕೆಯೊಂದಕ್ಕೆ ಸಹಿ ಮಾಡಿದರೇನೇ ಆತನಿಗೆ ಸರ್ಟಿಫಿಕೇಟು ಸಿಗುವಂತಾಗಬೇಕು.
    ಇಂಥ ಇತರ ಕಾರ್ಯಕ್ರಮಗಳನ್ನು ಎಲ್ಲರೂ ಯೋಚಿಸಬೇಕಾಗಿದೆ.
    ಕೆ.ವಿ.ತಿರುಮಲೇಶ್

    ಪ್ರತಿಕ್ರಿಯೆ
  8. Chinmay Mathapati

    ಮಾನ್ಯ ಅತಿಥಿ ಸಂಪಾದಕರೆ..
    ನಿಮ್ಮ ಸಂಪಾದಕೀಯ ಓದಿ ದಿಗಿಲುಗೊಂಡೆ.ಒಡಲಾಳದ ಮಹಿಳೆಯ ಧ್ವನಿ ತೆರೆದುಕೊಂಡ ರೀತಿ ಅತ್ಯದ್ಭುತ.ಹೌದು, ನೀವ್ಹೇಳಿದ ಹಾಗೆ ಈ ಹೀನ ಮಾನಸಿಕ ಖಾಯಿಲೆಗೊಂದು ಲಸಿಕೆ ಕಂಡುಹಿಡಿಯಬೇಕಾಗಿದೆ. ಮತ್ತು ಕಾನೂನಿನಲಿ ಗಟ್ಟಿಯಾದ ಶಿಕ್ಷೆಗಳನು ಅಳವಡಿಸಬೇಕಾಗಿದೆ ಅಂದಾಗ ಈ ಸಾಮಾಜಿಕ ಪಿಡುಗನ್ನು ನಾವು ನಾಡು,ದೇಶದಾಚೆಗೆ ಹೊಡೆದೋಡಿಸಬಹುದು. ಪೂಜ್ಯನೀಯ ಮಹಿಳೆಗೆ ಪೂಜ್ಯಸ್ಥಾನದ ಜೊತೆಗೆ ನೆಮ್ಮದಿಯ ಬದುಕನ್ನು ನೀಡಬಹುದು. ಅವಧಿಯ ಜೊತೆ ಸದಾ ನಮ್ಮದೊಂದು ದನಿ ಹೀಗೆಯೇ ಇರಲಿ…..

    ಪ್ರತಿಕ್ರಿಯೆ
  9. Rj

    ಇವತ್ತಿನ ‘ಅವಧಿ’ ನೋಡಿ ಗಾಬರಿ ಆಯಿತು.
    ಇದೇನೂ ಕಥಾ ವಿಶೇಷಾಂಕವಲ್ಲ.ದೀಪಾವಳಿ ಅಥವಾ ಯುಗಾದಿ ಸಂಚಿಕೆಯಲ್ಲ.
    ಇಲ್ಲಿದ್ದ ಬರಹಗಳು,ಅಲ್ಲಿನ ಭಾವಗಳು,ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳು..
    ಇದೇನು ತೋರಿಸುತ್ತಿದೆ? ಇಲ್ಲೇನು ಪ್ರತಿಫಲಿಸುತ್ತಿದೆ?
    ಎಷ್ಟು ವಿಚಿತ್ರ ನೋಡಿ: ಅಪರೂಪಕ್ಕೆ ನಾವು ಎಲ್ಲೋ ಒಂದು ಕಡೆ ಮನುಷ್ಯನ ವರ್ತನೆಯಲ್ಲಿ,ಮಾತಿನಲ್ಲಿ ಒಂಚೂರು ಮುಗ್ಧತೆ,ಒಂಚೂರು ಭೋಳೇತನ ಕಂಡುಬಿಟ್ಟರೆ,ಅದನ್ನು ಹತ್ತು ಜನರಿಗೆ ಗ್ರಾಫಿಕ್ ಸ್ಟೈಲ್ ನಲ್ಲಿ ವಿವರಿಸಲು ಮುಂದಾಗುತ್ತೇವೆ.”ಎಷ್ಟು ಮುಗ್ಧ ಮನುಷ್ಯ ನೋಡ್ರೀ..” ಅಂತ ನಮ್ಮ ಸಂತೋಷವನ್ನೂ ವ್ಯಕ್ತಪಡಿಸುತ್ತೇವೆ.ಹಾಗೆ ಒಂದು ಭೋಳೇತನವನ್ನು ಇನ್ನೊಬ್ಬರಿಗೆ ಹಂಚಿಕೊಳ್ಳುವ ಈ ಕ್ರಿಯೆ ಎಷ್ಟರ ಮಟ್ಟಿಗೆ ನಾವು ಅದೆಲ್ಲವನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ತೋರಿಸುತ್ತಿದೆಯೇ?
    ಹೀಗಾಗಿ ಇವತ್ತಿನ ಎಲ್ಲ ಲೇಖನಗಳನ್ನು ಮತ್ತು ಅದಕ್ಕೆ ಬಂದಂಥ ಪ್ರತಿಕ್ರಿಯೆಗಳನ್ನು ನೋಡಿದಾಗ ಖುಷಿಯಾಗಲಿಲ್ಲ;ಗಾಬರಿಯಾಯ್ತು.ಬೇಸರವೆನಿಸಿತು.
    ಇಲ್ಲಿನ ಎಲ್ಲರ ಅನುಭವಗಳೂ,ಎಲ್ಲರ ಧೈರ್ಯವೂ,ಎಲ್ಲರ ದಿಟ್ಟತನವೂ-
    ನಾಳಿನ ಎಳೆಯ ಮನಸ್ಸುಗಳಿಗೆ ಒಂದು ಅಭಯ ನೀಡುವಂತಾಗಲಿ..
    ‘ಅವಧಿ’ಯ ಈ ಪುಟ್ಟ ಹೆಜ್ಜೆಗೆ ಥಂಬ್ಸ್ ಅಪ್!
    -Rj

    ಪ್ರತಿಕ್ರಿಯೆ
  10. Sunanda

    ಅವಧಿ ತಂಡದ ಉತ್ತಮ ಪ್ರಯತ್ನಕ್ಕೆ ತುಂಬು ಹೃದಯದ ಅಭಿನಂದನೆಗಳು. ನಮ್ಮ ಪೂರ್ಣ ಬೆಂಬಲ ಇದೆ ….

    ಪ್ರತಿಕ್ರಿಯೆ
  11. Sindhu

    ಈ ಧಿಕ್ಕಾರ ಈ ಸಮಯದಲ್ಲಿ ಅತ್ಯಂತ ಅವಶ್ಯಕವಾಗಿದ್ದು.
    ಧಿಕ್ಕಾರದ ಹೊಳೆಗೆ ಸೇರುವ ಹನಿ ಹನಿ ಬೆಂಬಲವೂ ಪ್ರವಾಹ ಉಂಟು ಮಾಡುತ್ತದೆ ಎನ್ನುವುದು ನನ್ನ ಅನಿಸಿಕೆ.
    ಇಂದು ಇಲ್ಲಿ ಬಂದ ಎಲ್ಲ ಲೇಖನಗಳಲ್ಲೂ ಹೆಮ್ಮಕ್ಕಳ ಮೇಲೆ ನಡೆಸಿದ ಅನುಚಿತ ವರ್ತನೆಗಳಿಂದ ಹಿಡಿದು ದೌರ್ಜನ್ಯದ ಪರಮಾವಧಿಗಳ ಮುಖವನ್ನು ಕಂಡೆ.
    ಈ ಅಸಹ್ಯಕರವಾದ, ಆಕ್ರೋಶ ಹುಟ್ಟಿಸುವ ಪರಿಸ್ಥಿತಿಯಲ್ಲಿ ಕೂಡಾ ಈ ಎಲ್ಲ ಲೇಖನಗಳಲ್ಲೂ ಪಡಿ ಮೂಡಿರುವ ಜೀವನ ಪ್ರೀತಿ, ಮೆಟ್ಟಿ ನಿಲ್ಲುವ ಛಲ, ಸೇರಿಗೆ ಸವ್ವಾಸೇರಾಗಬಯಸುವ ಉತ್ಸಾಹ, ಎಲ್ಲಕ್ಕಿಂತ ಹೆಚ್ಚಾಗಿ ವಿವೇಕಯುತ ಆಲೋಚನೆಗಳು ಬೆಳ್ಳಿಕಿರಣಗಳ ಹಾಗಿವೆ.
    ನಮ್ಮ ಸುತ್ತಮುತ್ತಲನ್ನು ತೆರೆದಿಡುತ್ತಾ, ತಡವಿಕೊಳ್ಳುವ ಪಿಶಾಚ ಗಣಗಳನ್ನ ಪರಿಚಯಿಸುತ್ತಾ, ಅವನ್ನು ಮೀರುವ ವಿಧಾನವನ್ನು ಇಲ್ಲಿ ಗೆಳತಿಯರು,ಅಕ್ಕ,ತಂಗಿಯರು ಮಾಡಿದ್ದಾರೆ.
    ನಮ್ಮ ಸಂದಿಗ್ಧದಲ್ಲಿ, ಸಂಕಟದಲ್ಲಿ, ತಥ್ ಎನ್ನಿಸಿ ಮೈಯೆಲ್ಲ ಉರಿಯುವಾಗ ಈ ಬರಹಗುಚ್ಚಗಳಿಂದ ಕಲಿತದ್ದು ಸಹಾಯಕ್ಕೆ ಬರುತ್ತದೆ ಎಂಬ ಸಮಾಧಾನಕರ ವಿಷಯ.
    ಈಗಷ್ಟೇ ಹಿರಿಯ ಲೇಖಕ ತಿರುಮಲೇಶರು ಬರೆದ ಕಮೆಂಟ್ ಓದಿದೆ. ನಿಜಕ್ಕೂ ನಮ್ಮ ವ್ಯವಸ್ಥೆಗೆ ಈ ವಿಧಾನಗಳ ಅಗತ್ಯವಿದೆ.
    ಧಿಕ್ಕರಿಸಿದ ವಿಷಕ್ಕೆ ಪ್ರತ್ಯೌಷಧ ಕಂಡು ಹಿಡಿಯುವ ಪ್ರಯತ್ನವನ್ನ, ನಾವು ಮಕ್ಕಳನ್ನು ಬೆಳೆಸುವಾಗ ಅವರ ಮನದಲ್ಲಿ ಎಚ್ಚರ ಮತ್ತು ಗೌರವವನ್ನ ಪ್ರಯತ್ನಪೂರ್ವಕವಾಗಿ ಮೂಡಿಸುವುದನ್ನ ಮಾಡಬೇಕು.

    ಅವಧಿಗೆ, ಬಳಗಕ್ಕೆ, ಪ್ರತಿ-ಧ್ವನಿ ಹುಟ್ಟಿಸುತ್ತಿರುವ ಜಯಲಕ್ಷ್ಮೀ ಪಾಟೀಲರಿಗೆ ವಂದನೆಗಳು. ಇಂತಹ ಪ್ರಯತ್ನದಲ್ಲಿ ಭಾಗಿಯಾಗುತ್ತಿರುವ ನಮ್ಮ ಅರಿವನ್ನ ಹರಳುಗಟ್ಟಿಸುವ ಎಲ್ಲ ಬರಹಗಾರ್ತಿಯರಿಗೂ ವಂದನೆಗಳು.
    ಆ ಕಲ್ಲುಗಳೆಲ್ಲಾ ತಾಗಿದ್ದು ನನಗೇ ಓದಿದಾಗ ಕಲ್ಲು ತಾಗಿದ ನೋವು, ಅವಮಾನ, ಅಸಹಾಯ ಸಿಟ್ಟು ನನಗೂ ಬಂತು.
    ಎಲ್ಲ ಲೇಖನಗಳೂ ನಮ್ಮ ಸಮಾಜದ ಭಂಡತನಕ್ಕೆ, ದಡ್ಡತನಕ್ಕೆ, ದೇವರಾಗಿಸಿ ಪಲ್ಲಕ್ಕಿ ಹತ್ತಿಸಿದ ಹಾಗೆ ಮಾಡಿ- ಮನುಷ್ಯಸಹಜ ಗೌರವವನ್ನ ಕಸಿಯುವ ಕ್ರೌರ್ಯಕ್ಕೆ ಕನ್ನಡಿ ಹಿಡಿದಿವೆ.

    ಸಿಂಧು

    ಪ್ರತಿಕ್ರಿಯೆ
  12. P. Bilimale

    ನನಗೆ ಜನುಮ ನೀಡಿದ ತಾಯಿ, ಕಿಡ್ನಿ ಕೊಟ್ಟು ಪುನರ್ಜನ್ಮ ನೀಡಿದ ಪತ್ನಿ, ವಿನಾಕಾರಣ ಸುಮ್ಮನೆ ಪ್ರೀತಿಸುವ ತಂಗಿಯರು, ಬದುಕಿನಲ್ಲಿ ಉತ್ಸಾಹ ಬತ್ತದಂತೆ ನೋಡಿಕೊಳ್ಳುವ ಗೆಳತಿಯರು–ನೀವೆಲ್ಲ ಬೆಳಕಿನ ಬೀಜಗಳು..

    ಪ್ರತಿಕ್ರಿಯೆ
  13. Aparna Rao..

    ಈ ಅವಧಿ ಬಹಳ ಮಮತೆ ಇಂದ ತನ್ನ ಮಗಳಿಗೆ ಬೆನ್ನು ತಟ್ಟುವಂತೆ , ವಿಶ್ವಾಸದಿಂದ ತಾಯಿಗೆ ಆಶ್ರಯ ನೀಡುವಂತೆ ,ನಿಷ್ಕಲ್ಮಶ ಮನಸ್ಸಿನಿಂದ ಗೆಳತಿಯ ದನಿಗೆ ದನಿಸೇರಿಸುವಂತ ಕೆಲಸ ಮಾಡುತ್ತಿದೆ ಎಂದು ಭಾವಿಸುತ್ತೇನೆ.

    ಪ್ರತಿಕ್ರಿಯೆ
  14. Gopaal Wajapeyi

    ‘ಅವಧಿ’ಯ ಈ ಪ್ರಯತ್ನ ಒಂದು ಜಾಗಟೆ ಆಗಬೇಕು… ಜಾಗೃತೆಯ ಜಾಗಟೆ.
    ಇದು ‘ಅಂಥ’ವರ ಕಣ್ಣಿಗೆ ಬೀಳಬೇಕು… ಆದರೆ ಅವರ ಕಣ್ಣು ಕುರುಡು…
    ಅವು ತೆರೆದರೆ ಒಳಿತು. ತೆರೆಯದಿದ್ದರೆ ಶಾಶ್ವತವಾಗಿ ತೆರೆಯದಂತೆ ಮಾಡಬೇಕು…

    ಪ್ರತಿಕ್ರಿಯೆ
  15. rupa hasana

    ಎಲ್ಲರ ಬರಹಗಳನ್ನು ಓದಿ ಮತ್ತೊಮ್ಮೆ ಕಣ್ಣು ತುಂಬಿ ಬಂತು. ಅಸಹಾಯಕ ಹೆಣ್ಣು ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ ನನ್ನಲ್ಲಿ, ಯಾರೊಂದಿಗೂ ಹೇಳಲಾಗದಂತಹ ಇಂತಹ ಹಲವು ಭೀಕರ ಕಥೆಗಳಿವೆ.ಮತ್ತೆ ಮೇಲೇಳಲೇ ಸಾಧ್ಯವಾಗದೇ ಮುರುಟಿ ಹೋದ ಜೀವಗಳು ಅವೆಷ್ಟೋ.ಆಡಲಾಗದೇ ಅನುಭವಿಸಲಾಗದೇ ಒದ್ದಾಡುತ್ತಿರುವ ಅಪ್ರಾಪ್ತ ಹೆಣ್ಣುಮಕ್ಕಳು ನಿತ್ಯವೂ ಸಾಯುವುದನ್ನು ನೋಡುವಾಗ ಕಣ್ಣಂಚಿನ ಕಂಬನಿ ಆರುವುದೇ ಇಲ್ಲ. ತಮ್ಮದಲ್ಲದ ತಪ್ಪಿಗೆ ಮನೆಯವರಿಂದಲೂ ಹೊರದೂಡಲ್ಪಟ್ಟ ಹೆಣ್ಣುಮಕ್ಕಳು ಅನಾಥರಾಗಿ ಬಾಲಮಂದಿರದಲ್ಲಿ, ಲೈಂಗಿಕ ಕಾಯಱಕತೆಱಯರಾಗಿ ಇರಬೇಕಾದ ಕ್ರೌಯಱಕ್ಕೆ ಯಾರು ಹೊಣೆ? ನಗರದ ಹೆಣ್ಣು ಮಕ್ಕಳು ಅದನ್ನು ಎದುರಿಸಿ ನಿಲ್ಲುವ ಛಾತಿಯನ್ನು ನಿಧಾನವಾಗಿಯಾದರೂ ಬೆಳೆಸಿಕೊಳ್ಳುತ್ತಾರೆ. ಆದರೆ ಹಳ್ಳಿಗಳಲ್ಲಿರುವ ಮೌಢ್ಯ, ಶೀಲದ ಬಗೆಗಿನ ತಪ್ಪು ಕಲ್ಪನೆಗಳು ಅವಳನ್ನು ಬದುಕಲೇ ಬಿಡದಂತೆ ಇಂಚಿಂಚೇ ಸಾಯಿಸಿಬಿಡುತ್ತವೆ.ಸಮಾಜದ ಕಟ್ಟು ಕಟ್ಟಲೆಗಳು ಸತ್ಯವನ್ನು ಬಹಿರಂಗಪಡಿಸದಂತೆ ಹೆದರಿಸುತ್ತವೆ.ಹೀಗಾಗಿ ಇವು ಎಲ್ಲಿಯೂ ಸುದ್ದಿಯೇ ಆಗುವುದಿಲ್ಲ.ಅಪ್ಪಿತಪ್ಪಿ ಅವರು ಕಾನೂನಿನ ಮೊರೆ ಹೋಗಬೇಕೆಂದರೂ ವ್ಯವಸ್ಥೆಯೇ ಹುನ್ನಾರ ನಡೆಸಿ ಇವರ ಬಾಯಿ ಮುಚ್ಚಿಸಿ ಬಿಡುತ್ತದೆ. ಇದನ್ನೂ ಮೀರಿ ಹೋದರೂ ಅಪರಾಧಿ ಸಾಕ್ಷಿ ಸಿಕ್ಕದೇ ಹೊರಗೆ ಆರಾಮವಾಗಿ ಅಲೆಯುತ್ತಿರುತ್ತಾನೆ.ತಳ ಹಂತಗಳಲ್ಲಿರುವ, ಗ್ರಾಮೀಣ ಹೆಣ್ಣು ಮಕ್ಕಳ ಬದುಕಿನೊಂದಿಗೆ ನಡೆಯುವ ಇಂತಹ ಅಮಾನುಷ ಕ್ರಿಯೆ, ಅವಳಿಗೇ ಅರಿವಿಲ್ಲದೇ ಅವಳ ಬದುಕನ್ನೇ ಛಿದ್ರಗೊಳಿಸಿ ಬಿಡುತ್ತದೆ. ಅತ್ಯಾಚಾರವೆನ್ನುವುದು ದೈಹಿಕ ಹಿಂಸೆ ಮಾತ್ರ ಎಂದು ಭಾವಿಸುವುದೇ ಮೊದಲ ತಪ್ಪು. ಅದು ಇಡೀ ಹೆಣ್ಣು ಜೀವದೊಂದಿಗೆ-ಬದುಕಿನೊಂದಿಗೆ ಆಡಿದ ಕ್ರೂರ ಆಟ.ಕಠಿಣ ಶಿಕ್ಷೆ ಆಗಬೇಕೆಂದು ಹೇಳುವುದು ಸುಲಭ ಆದರೆ,ಅಲ್ಲಿಯವರೆಗೆ ಹೋಗುವ ದಾರಿ….. ಬಡ, ಗ್ರಾಮೀಣ ಮುಗ್ಧ ಹೆಣ್ಣುಮಕ್ಕಳಿಗಂತೂ ತುಂಬಾ ತುಂಬಾ ಕಠಿಣ.

    ಪ್ರತಿಕ್ರಿಯೆ
  16. sukhesh

    ತುಂಬಾ ಒಳ್ಳೆ ಪ್ರಯತ್ನ 🙂 ಈ ಬೆಂಕಿಯನ್ನ ಆರದೆ ಇರೋ ಹಾಗೆ ಕಾಪಾಡಬೇಕಾಗಿದೆ…
    ಕನ್ನಡಕಗಳ ಬಗ್ಗೆ ಚೆನ್ನಾಗಿ ಹೇಳಿದ್ದೀರ ಮೇಡಂ. ನಮ್ಮ ಪೂರ್ವಾಗ್ರಹ ಪೀಡಿತ ಮನಸುಗಳು ಯೋಚನೆ ಮಾಡೋ ಪರಿಯನ್ನ ನೋಡಿದರೆ ಆಶ್ಚರ್ಯ ಆಗುತ್ತೆ. ಹೋಂ ಸ್ಟೇ ಧಾಳಿಯ ವಿರುದ್ದ ಮಾತಾಡಿದರೆ ಅಸ್ಸಾಂ ಬಗ್ಗೆ ಯಾಕೆ ಮಾತಾಡೋಲ್ಲ? ನೀನೊಬ್ಬ ಕಾಂಗ್ರೆಸ್ ಏಜೆಂಟ್ ಅಂತಾರೆ. ಡೆಲ್ಲಿ ರೇಪ್ ಬಗ್ಗೆ ಮಾತಾಡಿದ್ರೆ ಆಕೆ ಅಪರಾತ್ರಿಯಲ್ಲಿ ಯಾರೋ ಹುಡುಗನ ಜೊತೆಗೆ ಖಾಲಿ ಖಾಸಗಿ ಬಸ್ಸು ಹತ್ತೋ ದರ್ದೇನಿತ್ತು ಅಂತಾರೆ. ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿದರೆ ಕಾವೇರಿ ಗಲಾಟೆ ಟೈಮಲ್ಲಿ ಆಫೀಸಿಗೆ ಯಾಕಪ್ಪ ಹೋಗಿದ್ದೆ ಅಂತಾರೆ. ಇವರಿಗೆ ತೊಂದ್ರೆ ಅನ್ನೋದು ಮನೆ ಒಳಗೆ ಬರೋ ತನಕ ಇಂತಹ ಮನಸ್ತಿತಿಯೇ ಇರುತ್ತೆ ಅನ್ಸುತ್ತೆ.

    ಪ್ರತಿಕ್ರಿಯೆ
  17. ಸವಿತ ಇನಾಮದಾರ್

    ಅದೆಷ್ಟೋ ಜನರು ತೊಳಲಾಡುತ್ತಿರುವರು ಈ ಪೈಶಾಚಿಕ ಕೃತ್ಯದಿಂದ. ದೆಹಲಿಯಲ್ಲಿರುವ ನನ್ನ ಅನುಭವವನ್ನೂ ಹೇಳ ಬಯಸುವೆ. ಅವಧಿ ತಂಡದ ಉತ್ತಮ ಪ್ರಯತ್ನಕ್ಕೆ ತುಂಬು ಹೃದಯದ ಅಭಿನಂದನೆಗಳು.

    ಪ್ರತಿಕ್ರಿಯೆ
  18. Radhika

    I admire Avadhi for providing a forum to women to express themselves.
    Keep up the good work Avadhi.

    ಪ್ರತಿಕ್ರಿಯೆ
  19. ದಿನೇಶ್ ಕುಕ್ಕುಜಡ್ಕ

    ತಾಯಂದಿರೇ, ಕೊರಳುಬ್ಬುವ ಇಂಥ ವೇಳೆ ನನ್ನಂಥವನ ಒಂದು ತುಂಡು ಮಾತು ಕೇವಲ ಸಾಂತ್ವನಕ್ಕಷ್ಟೇ ಸೀಮಿತವಾಗದಿರಲೆಂದು ಮನಃಪೂರ್ವಕ ಆಶಿಸುವೆ. ಜಗತ್ತಿನ ಯಾವ ನೋವುಗಳಿಗೂ ಎದೆಗೂಡಿನಲ್ಲಿ ಸೂಜಿಮೊನೆಯಷ್ಟೂ ಜಾಗ ಕೊಡಲಾರದ ಮತಿಕೃಪಣ ಖಂಡಿತ ಮನುಷ್ಯನಾಗಲಾರ. ಅಮೂರ್ತವಾದ ಅಂಥದೊಂದು ಜಾಗ ಸಕಾಲಿಕವಾಗೇ ಮೂರ್ತಗೊಂಡಂತಿದೆ ಇಲ್ಲಿ…. ನಿಮ್ಮ ನೋವು- ನಿಟ್ಟುಸಿರುಗಳಿಗೆ ಅವಧಿ ಕೊಟ್ಟಿರುವ ಈ ತಾಣದಲ್ಲಿ. ಅಂತರ್ಜಾಲವೂ ಕರುಳುಬಳ್ಳಿಗಳ ಜಾಲವಾಗಲಿ ಹೀಗೆ. ನಿಮ್ಮ ನೋವು ನನ್ನದೂ ಆಗಲಾರದಿದ್ದರೆ ನಾನೂ ಮನುಷ್ಯನಾಗಲಾರೆ.

    ಪ್ರತಿಕ್ರಿಯೆ
  20. ಅರಕಲಗೂಡು ಜಯಕುಮಾರ್

    ನಾಗರಿಕ ಸಮಾಜ ! ದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಅಂಗೈ ಹುಣ್ಣಿನಂತೆ ಗೋಚರವಾಗುತ್ತಿದೆ. ಇತ್ತೀಚೆಗಷ್ಟೆ ಚಂಡೀಘಡದಲ್ಲಿ ಇಂಥಹ ಘಟನೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆದಾಗ ಅಲ್ಲಿನ ರಾಜಕೀಯ ನಾಯಕನೊಬ್ಬ ಘಟನೆಯ ಕುರಿತು ಅವಹೇಳನಕಾರಿಯಾದ ಹೇಳಿಕೆಯನ್ನು ನೀಡಿದ್ದ. ದೆಹಲಿಯಲ್ಲಿ ಅತ್ಯಾಚಾರ ಹೊಸದೇನಲ್ಲ.. ಆದರೆ ಇಂತಹ ರಾಕ್ಷಸಿ ಕೃತ್ಯ ವಿಜೃಂಭಿಸಿದಾಗ ಅಂತಿಮವಾಗಿ ಸಹನೆಯ ಕಟ್ಟೆಯೊಡೆದು ಪ್ರತಿಭಟನೆಯ ರೂಪದಲ್ಲಿ ವ್ಯಕ್ತವಾಗಿದೆ. ಅವಧಿ ಈ ಸಂಧರ್ಭದಲ್ಲಿ ವಿಸ್ತೃತ ರೂಪದಲ್ಲಿ ಚರ್ಚೆಗೆ ತಂದಿದ್ದು ನಿಜಕ್ಕೂ ಪ್ರಶಂಸನೀಯ, ಜವಾಬ್ದಾರಿಯುತವಾದ ಸ್ಥಾನವನ್ನು ಈ ಮೂಲಕ ನಿರ್ವಹಿಸಿದೆ

    ಪ್ರತಿಕ್ರಿಯೆ
  21. Mahesh Siddalingappa

    ಜಯಕ್ಕ ಅವರ ವಿಶೇಷ ಸಂಪಾದಕೀಯ ‘ಅವಧಿ’ಯ ದಿಕ್ಕಾರ ತುಂಬ ಅವಶ್ಯಕ…..
    ಇಂತಹ ಘಟನೆಗೆ ಸ್ಪಂದಿಸಿದ ಅವಧಿ ತಂಡದ ಉತ್ತಮ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು ….

    ಪ್ರತಿಕ್ರಿಯೆ
  22. ಜಿ.ಎನ್.ನಾಗರಾಜ್

    ” ಹೆಣ್ಣಾಗಿ ಹುಟ್ಟೋಕಿಂತ ಮಣ್ಣಾಗಿ ಹುಟ್ಟಿದರ/ ಮಣ್ಣಿನ ಮೇಲೊಂದು ಮರವಾಗಿ /ಹಾದಿಹೋಕರಿಗೆ ನೆರಳಾಗಿ//”
    ” ಹೆಣ್ಣಿನಾ ಜನುಮ ಸುಣ್ಣಾಗಿ ಕುದಿಯಾಲಿ/ ದೀಪದೆಣ್ಣೆಯಾಗಿ ಉರಿಯಾಲಿ /ಎಲೆ ದೇವ ಹೆಣ್ಣೆಂಬ ಜನುಮ ಕೊಡಬ್ಯಾಡ /” ಇವು ಈ ಸರಿ ಹೊತ್ತಿನಲ್ಲಿ ಅವಧಿ “ಧಿಕ್ಕಾರ”ವನ್ನೋದುತ್ತಾ ನನಗೆ ನೆನಪಿಗೆ ಬರುತ್ತಿರುವ ಸಾವಿರಾರು ವಷ೵ಗಳ ನಮ್ಮ ಹೆಣ್ಣಿನ ಅಸಹಾಯಕ ರೋದನದ ಸಾಲುಗಳು.ಈ ಅಸಹಾಯಕ ಭಾವನೆಗೂ ಇಂದು ಪುಟಿದೇಳುತ್ತಿರುವ ಪ್ರತಿಭಟನೆಗೂ ಎಷ್ಟೊಂದು ಅಜಗಜಾಂತರ. ದಿಲ್ಲಿಯಲ್ಲಿ ನಡೆದ,ನಡೆಯುತ್ತಿರುವ ಪ್ರತಿಭಡನೆಯ ಆಸ್ಫೋಟದ ಬರಹ ರೂಪದ ತುಣುಕಿನಂತಿವೆ ಇಲ್ಲಿಯ ಬರಹಗಳು.ಅದಕ್ಕೆ ಬಂದ ಪ್ರತಿಕ್ರಿಯೆಗಳು.”ಅವಧಿ”ಗೆ.ಇಲ್ಲಿಯ ಎಲ್ಲ ರೀತಿಯ ಬರಹಗಾರರಿಗೆ ವಂದನೆಗಳು.
    .ಬಹು ದೊಡ್ಡ ಪ್ರಮಾಣದ ಉದ್ವೇಗ,ತಕ್ಷಣದ spontaneus ಪ್ರತಿಭಟನೆ,ವಿವಿಧ ರೀತಿಯ ಅಭಿವ್ಯಕ್ತಿ ಸ್ವಾಗತಾಹ೵.ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ.ಎಲ್ಲ ಮನಸ್ಸುಗಳೂ ಭ್ರಷ್ಟವಾಗಿಲ್ಲ ಎಂಬುದರ ಗುರುತು.
    “ಗಾಯದ ಆಳ,ಕಾರಣ ಗೊತ್ತಾಗದೆ ಸರಿಯಾದ ಚಿಕಿತ್ಸೆ ಹೇಗೆ ಸಾಧ್ಯ”.ಇದು ಬಹಳ ಮುಖ್ಯವಾದ ಮಾತು.ಮಹಿಳೆ ಸಾವಿರಾರು ವರುಷಗಳ ಹಿಂದೆಯೇ ‘ಶಸ್ತ್ರ ವಂಚಿತೆ’ (ಚಾಮುಂಡಿಯನ್ನು,ಅವಳಿಗೆ ಎಲ್ಲ ದೇವತೆಗಳೂ ತಮ್ಮ ಶಸ್ತ್ರಗಳನ್ನು ನೀಡಿ ನೀನೇ ಮಹಿಷಾಸುರನ ಸಂಹಾರಕ್ಕೆ ಯೋಗ್ಯಳು ಎಂದು ಕಳುಹಿಸಿಕೊಟ್ಟ ಪ್ರಸಂಗವನ್ನು ನೆನಪಿಸಿಕೊಳ್ಳಿ. ಸೀತೆ, ದ್ರೌಪದಿಯ ಜೊತೆ ಹೋಲಿಸಿ.ಮತ್ತು ಇಲ್ಲಿ ಪ್ರಸ್ತಾಪಿತವಾಗಿರುವ ಪಿನ್ನು,ಸೂಜಿ,ಬ್ಲೇಡು,ಚಾಕು ಗಳೊಡನೆ ಹೋಲಿಸಿ.ಅವರ ಮತ್ತು ಅವರ ತಾಯಂದಿರ ದಿಟ್ಟತನವನ್ನು ಮೆಚ್ಚಬೇಕಾದದ್ದೇ.ಆದರೆ ಅದಕ್ಕಿಂತ ಮುಂದೆ ಸಾಗಬೇಕು.ಆದರೆ ದಿಟ್ಟತನದ್ದೇ ಕೊರತೆ.ನನ್ನ ಅನುಭವದಲ್ಲಿ ಒಗ್ಗಟ್ಟು,ಸಂಘಟನೆ,ಚಳುವಳಿಯೇ ದಿಟ್ಟತನದ ಬೆಳವಣಿಗೆಗೆ ಸೋಪಾನ.ಅಸಮಾನತೆಯ ವಿರುದ್ಧ,ಮಹಿಳೆಯರನ್ನು ಹೀಗಳೆಯುವ ಮನುಸ್ಮ್ರತಿಯ ಪಾಳೆಯಗಾರೀ ಮೌಲ್ಯಗಳ ವಿರುದ್ಧ ಮಹಿಳಾ ಚಳುವಳಿಯ ಬೆಳವಣಿಗೆಯೇ ಬಹಳ ಪ್ರಮುಖ ಅಸ್ತ್ರ.ಅದುವೇ ಪುರುಷರ ಮನಸ್ಸಿನಲ್ಲಿ ಭಯ,ಅರಿವು,ಎಚ್ಚರ ಸಂವೇದನಾ ಶೀಲತೆಯನ್ನು ಉಂಟುಮಾಡುವ ಪರಿಣಾಮಕಾರೀ ಸಾಧನ. ಪುರುಷರ ಮನಸ್ಸಿನಲ್ಲಿ ಮಾತ್ರವಲ್ಲ ಸ್ವತಃ ಸ್ತ್ರೀಯರಲ್ಲಿ ಕೂಡ ಯಥೇಚ್ಛವಾಗಿರುವ’ಸಾಮಾಜಿಕ ರೇಪ್ ‘ನ ಮನೋಭಾವವನ್ನು ಹೋಗಲಾಡಿಸುವ,ಸ್ವ-ಅರಿವನ್ನು ಬೆಳೆಸುವ ದಾರಿ.

    ಪ್ರತಿಕ್ರಿಯೆ
    • ಜಿ.ಎನ್.ನಾಗರಾಜ್

      ರೇಪಿಸ್ಟರಿಗೆ ಕಠಿಣ ಶಿಕ್ಷೆ ವಿಧಿಸಬೇಕಾದದ್ದೇ. ಆದರೆ ಯಾರು ? ಇಂದಿನ ಪೋಲೀಸ್ ಮನಸ್ಸುಗಳೇ? ಇಂದಿನ ನ್ಯಾಯದಾನ ವ್ಯವಸ್ಥೆಯೇ? ಒಟ್ಟು ಪೀಡಿತ ಮಹಿಳೆಯರಲ್ಲಿ ಎಷ್ಟು ಜನ ತಮ್ಮ ನೋವನ್ನು ಬಹಿರಂಗ ಪಡಿಸುತ್ತಾರೆ.ತಮ್ಮ ತಾಯಂದಿರಿಗೂ ಹೇಳಿಕೊಳ್ಳುವ ಸ್ಥಿತಿ ಇಲ್ಲ.ಕೆಲವೊಮ್ಮ ಹೇಳಿದರೂ ಪ್ರಯೋಜನವಿಲ್ಲ.ಇನ್ನು ಪೋಲಿಸ್ ಠಾಣೆಗಳಿಗೆ ಎಷ್ಟು ಜನ ಹೋಗುತ್ತಾರೆ ? ಇಲ್ಲಿಗೇ ಶೇ.90 ಭಾಗ “ನ್ಯಾಯ” ? ಸಿಕ್ಕಿಬಿಡುತ್ತದೆ.ಪೋಲೀಸು ಠಾಣೆಯಲ್ಲಿ ದೂರು ಸ್ವೀಕಾರವಾಗಿ ಎಲ್ಲ ಒತ್ತಡ,ಲಂಚಕೋರತನಗಳನ್ನು ಮೀರಿ ಸರಿಯಾದ ತನಿಖೆ ನಡೆದು ಬೇಗ ನ್ಯಾಯಾಲಯದ ಮಟ್ಟಕ್ಕೆ ಬಂದರೆ ಮುಂದೆ ಪಬ್ಲಿಕ್ ಪ್ರಾಸಿಕ್ಯೂಟರ್ ಎಂಬ ಮಹಾಶಯನ ಕೃಪೆ. ಸವಾಲು,ಪಾಟೀ ಸವಾಲುಗಳ ನಡುವೆ ಇಲ್ಲಿ ಅನೇಕರು ವ್ಯಕ್ತಪಡಿಸಿದಂತೆ ಮತ್ತೊಮ್ಮೆ” ಸಾಮಾಜಿಕ ರೇಪ್ “.ಕೊನೆಗೆ ಯಾವಾಗ ಎಷ್ಟು ಜನಕ್ಕೆ ಎಂತಹ ಶಿಕ್ಷೆ ?
      ಆದ್ದರಿಂದಲೇ ‘prevention is better than any grave punishment ‘.ಮಹಿಳಾ ಚಳುವಳಿಯ ವ್ಯಾಪಕ ಬೆಳವಣಿಗೆ ಬೀದಿ-ಬೀದಿಗಳಲ್ಲಿ.ಬಡಾವಣೆ,ಹಳ್ಳಿಗಳಲ್ಲಿ ಕಾಲೇಜು,ಕೆಲಸ ಮಾಡುವೆಡೆಗಳಲ್ಲಿ ಮಹಿಳಾ ಚಳುವಳಿಯ ಬೆಳವಣಿಗೆ,ಸ್ವ-ರಕ್ಷಣಾ ತರಬೇತಿ,ಅರಿವು,ಎಚ್ಚರ ಅವುಗಳಿಂದ ಪುರುಷರಲ್ಲಿ ಮೂಡುವ ಭಯ ಮತ್ತು ಎಚ್ಚರ. ಇದೇ ಇಂದಿನ ಪರಿಸ್ಥಿತಿಯನ್ನು ಗಣನೀಯವಾಗಿ ಬದಲಿಸಲು ನನಗೆ ತೋಚಿದ ಹಾದಿ.

      ಪ್ರತಿಕ್ರಿಯೆ
  23. akshata deshpande

    nimma sampaadakIya nijavaagiyU manamuttuvantide jayalaxmi. banna bannada kannadaka haakikondiruva saarkaara banna bannada kanasugalannu janarige torisutta samajadalli raajaaroshavaagi kappu kannadaka haakikopndu kappu kappu krutyagalanne madutta oddaaduttiruva janarannu gamanisuttale illa. intaha krutyagala viruddha aandolana maaduva kelavaaru janarondige samaajada rakshakaru yaava riti nadedukolluttaare annuva uttama udaaharane dilliya raasjhtrapati bhavanadeduru nodiyaagide. aadaru e aandolana e pratibhatane nilla baaradu annuva nimma bhaavane shlaaghaniya. naanu nimmondigiddene. nivu kaigonda pratibhataneya intaha olleya prayatna kaigudide endu e lekhanagale saaruttave. ofcourse idondu team work aadaru nivu haagu sandhya raani avaru ondu hejjeyannu mundidadiddiddare intaha ondu pryatna sfalavaaguttiralilla. congratulations and all the best.

    ಪ್ರತಿಕ್ರಿಯೆ
  24. Mohan V Kollegal

    ಅತ್ಯುತ್ತಮ ಸಂಪಾದಕೀಯ… ಯಾವುದೋ ಕಾರ್ಯನಿಮಿತ್ತ ನನ್ನ ಹಳ್ಳಿಗೆ ಹೋಗಿದ್ದು ಈ ಲೇಖನಗಳನ್ನೆಲ್ಲಾ ಮಿಸ್ ಮಾಡಿಕೊಂಡಿದ್ದೆ. ಎಲ್ಲಾ ಲೇಖನಗಳು ಈ ಸ್ಥರದ ಕಿಚ್ಚನ್ನು ಹೊತ್ತಿಸಿವೆ. ಅವಧಿಗೆ ವಂದನೆಗಳು… ಎಲ್ಲಾ ಅಕ್ಕಂದಿರ ಜೊತೆ ನಮ್ಮಂತಹವರು ಇರುತ್ತಾರೆ. ಎಲ್ಲರಿಗೂ ಒಳ್ಳೆಯದಾಗಲಿ… 🙂

    ಪ್ರತಿಕ್ರಿಯೆ
  25. usha

    Avadhi teamge nanna abhinandanegalu..You are providing a great platform for women to express themselves..Hats off to you all..

    ಪ್ರತಿಕ್ರಿಯೆ
  26. Indushekhar Angadi

    ಈ ಅತ್ತ್ಯಾಚಾರದ ವಿಷಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಪಾತ್ರವೂ ಇದೆ.ಬಹಳಷ್ಟು ವರುಷಗಳವರೆಗೆ ಕಾಲಹರಣ ಮಾಡಿ ತೀರ್ಪು ಕೊಡುವದು.
    ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಅಲ್ಲಿಂದಲೂ ತಡವಾದ ನಿರ್ಣಯ.ಮರಣ ದಂಡನೆಯಾದರೆ ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿ.ಅವರೂ ನಿರ್ಣಯ ಕೈಗೊಳ್ಳುವದಕ್ಕೆ ತೆಗೆದುಕೊಳ್ಳುವ ಸುಧೀರ್ಘ ಅವಧಿ.ವ್ಯವಸ್ತೆಯಲ್ಲಿರುವ ಈ ಎಲ್ಲಾ ದೋಷಗಳನ್ನು ನೋಡಿ ರೋಷ ಉಕ್ಕಿ ಬರುತ್ತದೆ.ಅತ್ಯಾಚಾರಿಗಳ ಪುರುಷತ್ವಹರಣ ಮಾಡುವ ಶಿಕ್ಷೆಯನ್ನು ಕೊಡಬೇಕು ಹಾಗೂ ಕೋರ್ಟಿನಲ್ಲಿ ತೀರ್ಪುಗಳು ಬೇಗ ಬರಬೇಕು.ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು.ಹಾಗಾದರೆ ಮಾತ್ರ ಅತ್ಯಾಚಾರದ ಪ್ರಕರಣಗಳು ಕಡಿಮೆಯಾಗಬಹುದು.

    ಪ್ರತಿಕ್ರಿಯೆ
  27. Prasad V Murthy

    ಅತಿಥಿ ಸಂಪಾದಕರಾದ ಜಯಲಕ್ಷ್ಮೀ ಪಾಟೀಲರಿಗೆ ಅನಂತ ವಂದನೆಗಳು, ಹಾಗೆಯೇ ಇಂತಹದ್ದೊಂದು ಸಂಚಿಕೆ ಹೊರತಂದ ‘ಅವಧಿ’ಗೂ ಧನ್ಯವಾದಗಳು. ಇಲ್ಲಿ ಮಿಡಿದಿರುವ ಸಹಸ್ರ ತಾಯಂದಿರ ನೋವುಗಳೂ ನನ್ನ ನೋವುಗಳು. ಇಲ್ಲಿನ ಪ್ರತಿಯೊಂದು ಲೇಖನಗಳನ್ನು ಓದುವಾಗ ನನ್ನ ಸಹೋದರಿಯೋ, ಗೆಳತಿಯೋ, ಸಂಬಂಧಿಯೋ, ಆತ್ಮೀಯಳಿಗೋ ಈ ರೀತಿ ಆಗಿರಬಹುದೆಂದು ಭಯವಾಗುತ್ತಿತ್ತು! ಈಗಲಾದರೂ ಆ ಪೈಶಾಚಿಕ ಮನಸ್ಸುಗಳ ಕಣ್ಣಿಗೆ ಕಟ್ಟಿರುವ ಕಾಮಾಂಧತೆಯ ಪಟ್ಟಿ ತೆರೆಯಲಿ. ನಿಮ್ಮೆಲ್ಲರ ದುಃಖಗಳಿಗೆ ಮಿಡಿಯದಿದ್ದರೆ ನಾನೂ ಮನುಷ್ಯನಾಗಲಾರೆ. ಉಸಿರಾಡಿಕೊಂಡು ನಮ್ಮ ನಿಮ್ಮೆಲ್ಲರ ನಡುವೆ ಓಡಾಡಿಕೊಂಡಿರುವ ರಾಕ್ಷಸರ ಮೃಗೀಯ ವರ್ತನೆಗಳಿಗೆ ನನ್ನ ಧಿಕ್ಕಾರವಿರಲಿ.

    ಪ್ರತಿಕ್ರಿಯೆ
  28. sunil rao

    always there is a dependency of concept called mob psychology
    people require a start for any good cause nor for a revolt…
    due to various inefficiencies they would not make any mark on the pressure of pain they have inside to project out.
    in sucha a way avadhi has done a fabulous job which was needed in deleberation of a good process

    kudos to
    GN Mohan
    jayalakshmi patil
    sandhya Rani
    and writers of this day

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: