ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಶಾ ಜಗದೀಶ್ ಹೊಸ ಕವಿತೆ- ಅವಳು ಮತ್ತು ಬಯಲು

ಆಶಾ ಜಗದೀಶ್

—–

ರಸ್ತೆಯಂಚನ್ನು ಒದ್ದೆಯಾಗಿಸುತ್ತಿವೆ

ಅವಳ ಒದ್ದೆ ಕಣ್ಗಳು

ಯಾವ ಭಾವವನ್ನೂ ಹೊರಚೆಲ್ಲದಂತೆ

ಗಂಭೀರವಾಗಿ ನಡೆಯುತ್ತಿರುವ

ಅವಳ ಮೈಮನಗಳಲ್ಲಿ

ಈ ಕಣ್ಣುಗಳೇ

ಕ್ಲಾಸ್ ಬಂಕ್ ಮಾಡಿದ ಮಕ್ಕಳಂತೆ

ಸರಿಯಾಗಿ ಪಾಠ ಕಲಿತಿಲ್ಲ

ಎಷ್ಟೊಂದು ಜನ

ಆದರೆ ಪುಣ್ಯಕ್ಕೆ ಯಾರಿಗೂ ಅವಳ 

ಕಣ್ಣ ತೇವ ಕಾಣುತ್ತಿಲ್ಲ

ಗಂಭೀರ ವದನದ ಹಿಂದಿನ

ಅಳು ಮೋರೆಯ ಸುಳುಹನ್ನು

ಯಾರೂ ಗುರುತಿಸುತ್ತಿಲ್ಲ

ಈ ಸುಡುಗಾಡು ಊರಿಗೆ

ಹೊತ್ತು ಗೊತ್ತಿಲ್ಲದೆ ಗಂಟುಮೂಟೆ 

ಕಟ್ಟಿಕೊಂಡು

ಬಂದುಬಿಡುವ ಮಳೆಗೆ

ಅವಳ ಅಶ್ರು ಹನಿಗಳಲ್ಲಿ

ಲೀನವಾಗುವ ತವಕ

ಚಂಡ ಮಾರುತಗಳೆಷ್ಟೋ

ಬಂದು ಗದ್ದಲವೆಬ್ಬಿಸಲಿ

ಎಂದೇ ಪ್ರಾರ್ಥಿಸುತ್ತಾಳೆ

ಅವಳು…

ಅವಳ ಬಲಗಿವಿಯ ಓಲೆ ಎಲ್ಲೋ 

ಉದುರಿಹೋಗಿದೆ

ಕೆದರಿದ ಕೂದಲ ನಡುವೆ ಸಿಕ್ಕಿಕೊಂಡ

ಒಂದು ಒಣ ಕೆಂಗುಲಾಬಿ

ಸತ್ತು ಹೆಣವಾಗಿದೆ

ತುಟಿಯ ಎಡಭಾಗ ಹರಿದು

ರಕ್ತ ತೊಟ್ಟಿಕ್ಕುತ್ತಿದೆ

ಮತ್ತದನ್ನು ನೆಕ್ಕಿ ಚಪ್ಪರಿಸುತ್ತಿರುವ

ನಾಲಿಗೆಯೊಂದು ಮಿಡಿನಾಗರವಾಗಿ

ಹೆಡೆ ಎತ್ತಿ ಬುಸುಗುಡುತ್ತಿದೆ

ಅವಳು 

ನೂಲುಗಳ ಹರಿದು

ಹಂಗು ತೊರೆದು

ಗೋಡೆಗಳಿಲ್ಲದ

ಮುಳ್ಳುಕಂಟಿಯ 

ಬೇಲಿಗಳಿಲ್ಲದ 

ಬಯಲಲ್ಲಿ

ಪುಟ್ಟ ನಿವೇಶನ ಕೊಳ್ಳಲು

ತನ್ನಾತ್ಮವನ್ನು ಕಳಿಸಿದ್ದಾಳೆ

‍ಲೇಖಕರು avadhi

6 December, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading