ಪಾರ್ವತಿ ಜಿ ಐತಾಳ್ ಓದಿದ ‘ಸೂರ್ಯಮುಖಿ’

ಡಾ. ಪಾರ್ವತಿ ಜಿ ಐತಾಳ್ 

—-

ಕನ್ನಡದ ಹಿರಿಯ ವಿಮರ್ಶಕರೂ ಅನುವಾದಕರೂ ಚಿಂತಕರೂ ಆಗಿರುವ  ಎಲ್.ವಿ.ಶಾಂತಕುಮಾರಿಯವರು ಇತ್ತಿಚೆಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಪ್ರಕಟಿಸಿದ ‘ಸೂರ್ಯಮುಖಿ’ ಎಂಬ ಕವನ ಸಂಕಲನದ ಮೂಲಕ ಓರ್ವ ಅತ್ಯುತ್ತಮ ಕವಯಿತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ೪೦ ವರ್ಷಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ‘ತೋಚಿದಂತೆ ಗೀಚಿದ ಕವನಗಳು’ ಎಂದು ಎಲ್ಲೋ ಮೂಲೆಯಲ್ಲಿ ಅಡಗಿಸಿಟ್ಟ ಇನ್ನೂರಕ್ಕೂ ಮಿಕ್ಕಿದ ಕವನಗಳನ್ನು ಹೊರಗೆಳೆದು ಅವುಗಳ ಅದ್ಭುತ ಆಶಯಗಳಿಗೆ ಮಾರುಹೋಗಿ ಅವುಗಳನ್ನು ಬೆಳಕಿಗೆ ತರುವ ಯೋಜನೆ ಹಾಕಿದ್ದು ಮುಂಬಯಿ ಕನ್ನಡ ಲೇಖಕಿ ಉಮಾ ರಾಮರಾವ್.‌ಅವರ ಜೊತೆಗೆ ಕೈಜೋಡಿಸಿದ್ದು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು. 

ಈ ಸಂಕಲನದಲ್ಲಿ ದೊಡ್ಡ -ಸಣ್ಣವೆಲ್ಲ ಸೇರಿ ಒಟ್ಟು ೨೫೬ ಕವನಗಳಿವೆ. ಸೂರ್ಯಮುಖಿ,  ಪ್ರಕೃತಿ, ಒಲುಮೆ, ಅನುಭಾವ, ಚಿತ್ತ ಹರಿದತ್ತ ಎಂದು ಹೀಗೆ ವಸ್ತುಗಳಿಗನುಗುಣವಾಗಿ ಐದು ವಿಭಾಗಗಳಿವೆ.  ಇಡೀ ಜಗತ್ತನ್ನು ಸದಾ ಜೀವಂತವಾಗಿಡುವ ಸೂರ್ಯನ ಗುಣಗಳನ್ನೂ ಶಕ್ತಿ ಸಾಮರ್ಥ್ಯಗಳನ್ನೂ  ಕವಯಿತ್ರಿ ‘ಸೂರ್ಯಮುಖಿ ‘ ಭಾಗದಲ್ಲಿ ಚಿತ್ರಿಸುತ್ತಾರೆ. ಆಕೆ ಸೂರ್ಯನ ಗುಣಗಳಿಗೆ ಮಾರುಹೋಗಿದ್ದಾಳೆ. ಮೋಡಗಳ ಮರೆಯಲ್ಲಿ ಅಡಗಿಯೂ ಅಸದಳ ಪ್ರಭೆ ಹೊಮ್ಮಿಸುವ ಸೂರ್ಯನನ್ನು ಮರೆಯಿಂದಾಚೆ ಬಂದು ದರ್ಶನ ನೀಡು’ ಎಂದು ಪ್ರಾರ್ಥಿಸುತ್ತಾಳೆ..ಸೂರ್ಯನ ಬಗೆಗಿರುವ ಮೆಚ್ಚುಗೆ, ಅಭಿಮಾನ, ಭಕ್ತಿ ಭಾವ, ಅವನೊಂದಿಗೆ ಒಂದಾಗುವ ಆಸೆಗಳು ಮನಸ್ಸನ್ನು ತುಂಬಿದ್ದರೂ ಇಡೀ ಜಗತ್ತಿಗೆ ಸೇರಿದ ಸೂರ್ಯನನ್ನು ಜಗತ್ತಿಗೇ ಬಿಟ್ಟುಕೊಡುವ ತ್ಯಾಗ ಮನೋಭಾವ ಆಕೆಯದು. ಬೆಳಕಿನ ಆಕರ ಸೂರ್ಯ ಮತ್ತು ಕತ್ತಲೆಯಲ್ಲಿರುವ ನಿರೂಪಕಿಯ ನಡುವಿನ ಕಾಲ್ಪನಿಕ ಸಂಭಾಷಣೆಯಲ್ಲಿ ‘ನಾನು ಬೆಳಕಾಗಿ ನಿನ್ನೊಳಗೇ ಇರುವೆನಲ್ಲಾ ‘ ಎನ್ನುತ್ತಾನೆ ಸೂರ್ಯ. ನಿಜವಾದ ಪ್ರೀತಿಯ ಹುಡುಕಾಟದಲ್ಲಿರುವ ಕವಯಿತ್ರಿ ಚಳಿಗಾಲದ ಇರುಳು, ಸೂರ್ಯನ ಬಿಸುಪು ಇಲ್ಲದ ರಾತ್ರಿ ಶೈತ್ಯದಲ್ಲಿ ಅವನು ಬರುವ ತನಕ ತನ್ನ ಪ್ರಾಣ ಉಳಿಯಬಹುದೇ  ಎಂದು ಶಂಕೆ ವ್ಯಕ್ತ ಪಡಿಸುತ್ತಾಳೆ. ಸೂರ್ಯ ಮತ್ತು ಕವಯಿತ್ರಿಯರ ನಡುವೆ ಸಂಭಾಷಣೆ ನಡೆದು ಸೂರ್ಯನು ನೀಡುವ ಭರವಸೆಗಳು ಆಕೆಗೆ ಸಾಂತ್ವನ ನೀಡುತ್ತವೆ. ಗ್ರಹಣದ ಕಂದು ಸೂರ್ಯನಿಗೆ  ರಾಹು-ಕೇತುಗಳು ಕಪ್ಪು ಚಾದರ ಹೊದೆಸಿ ದರೂ  ಚಂದ್ರನ ತಂಪು ನೆರಳು ಮತ್ತು ಸೂರ್ಯ -ಚಂದ್ರರ ಮಿಲನವು ಸುಂದರ ಕ್ಷಣಗಳನ್ನು ಸೃಷ್ಟಿಸುತ್ತವೆ. ಸೂರ್ಯ ಹೊರಬಂದು ಪುನಃ ಥಳಥಳಿಸಿದಾಗ ಕವಯಿತ್ರಿ ಹೇಳುತ್ತಾಳೆ :  ‘ ಇದು ಗ್ರಹಣವಲ್ಲ. ಸೂರ್ಯ ಸೌಂದರ್ಯ ರಸಗ್ರಹಣ’ ಎಂದು. ಈ ಕವಿತೆಯು ಕವಯಿತ್ರಿಯ ಖಗೋಳ ಜ್ಞಾನ ಮಾತ್ರವಲ್ಲದೆ ಕಲ್ಪನಾ ವಿಲಾಸಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

ಎರಡನೆಯ ಭಾಗವಾದ ‘ಪ್ರಕೃತಿ’ಯಲ್ಲಿ  ನಿಸರ್ಗದಲ್ಲಿ ಆಗುವ ಒಂದೊಂದು ಬದಲಾವಣೆಗಳೂ ಜೀವಂತವಾಗಿ ನಮ್ಮ ಮುಂದೆ ಬಂದು ನಿಲ್ಲುತ್ತವೆ.  ಹೊಂಗೆ ಮರ ಕುಡಿಯೊಡೆಯುವ ಮಾಂತ್ರಿಕತೆ,  ಎಲೆ, ಮೊಗ್ಗು, ಹೂವು, ಹಣ್ಣು ಕಾಂಡಗಳು ಅನುಭವಿ‌ಸುವ ತೃಪ್ತಿ, ಬೇಸಿಗೆಯ ಉರಿಯನ್ನು ತಣಿಸಿ ತಂಪಾಗಿಸುವ ಮಳೆ,  ಜೇಡನ ನೇಯ್ಗೆ ಮತ್ತು ಮನುಷ್ಯ ಸಂಬಂಧಗಳ ಎಳೆ, ಮುಗಿಲುಗಳ ವರ್ಣನೆ  ಮತ್ತು ಆ ಸೌಂದರ್ಯವನ್ನು ಕಣ್ಣೊಳಗೆ ಹಿಡಿದಿಟ್ಟುಕೊಳ್ಳುವ ಕವಯಿತ್ರಿ, , ಮು‌ಸ್ಸಂಜೆಯಾದರೆ ಕತ್ತಲ ಲೋಕಕ್ಕೆ ಹಾರಿ ಮರೆಯಾಗುವ ಹಕ್ಕಿಗಳು, …ಹೀಗೆ.

‘ಮಳೆಯ ಸ್ವಗತ’ದ ನೆಪದಲ್ಲಿ ಪರಿಸರ ನಾಶದ ಚಿತ್ರಣವಿದೆ. ಮೈಯನ್ನು ಎಲ್ಲೆಡೆ ರಾಡಿ ಮಾಡಿಕೊಂಡ ಇಳೆಯ ಕೊಳೆಯ ದರ್ಶನ ಹಾಗೂ ಇಳೆಯ ಮಕ್ಕಳು ಮಾಡುವ ತಿಳಿಗೇಡಿ ಕೃತ್ಯಗಳ ಚಿತ್ರಣ,  ಪರಿಣಾಮವಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿ, ‘ಹೇಗೆ ತೊಳೆಯಲಿ ನಿನ್ನ’ ಎಂದು ಅಲವತ್ತುಗೊಳ್ಳುವ ಮಳೆ- ಈ ಕವಿತೆಯ ಪ್ರತಿಮೆ-ರೂಪಕಗಳು ಅನ್ಯಾದೃಶ: 

ಎಷ್ಟೆಷ್ಟು ತಿಳಿಹೇಳಿದರೂ ಕೇಳದೆ

ರಾಡಿ ಮಾಡಿಕೊಳ್ಳುವ ಇವಳ ಮೈ ತೊಳೆತೊಳೆದು

ಸೋತು ಬೇಸರಿಸದೆ ನನ್ನ ಪಾಡಿಗೆ ನಾನಿದ್ದರೆ

ಉಕ್ಕಿ ಬರುವುವು ಮೇಲಿಂದ ಮೇಲೆ ಬಿಕ್ಕುಗಳು

ಬೇಡಿಕೆಗಳು ಶಾಪ , ಬಿಸಿಯುಸಿರು , ಅಹವಾಲು ಪ್ರಾರ್ಥನೆಗಳು, 

‘ಇಳಿದು ಬಾ ಪರ್ಜನ್ಯ’

ಹೋಮ  ಹವನ ಆಹ್ವಾನ (  ಮಳೆಯ ಸ್ವಗತ.ಪು.೪೪)

‘ಮರದ ಅನಿಸಿಕೆ ‘ಯೂ ಅಷ್ಟೆ. ಕಾಲ ಕಾಲಕ್ಕೆ ಚಿಗುರಿ, ಕಾಯಾಗಿ, ಹಣ್ಣಾಗಿ  ಬೋಳಾಗಿ ಮತ್ತೆ ಕುಡಿಯೊಡೆದು ಚಿಗುರುವ ಮರದ ಭಾವ ಮನುಷ್ಯನಲ್ಲೂ ಬರಬಹುದು. ಒಮ್ಮೆ ಬದುಕೇ ಬೇಡವೆಂಬ ಶೂನ್ಯ ಆವರಿಸಿ,  ಮತ್ತೆ ಆಸೆಗಳು ಮೊಳಕೆಯೊಡೆದಾವು ಎಂಬ ಮಾತನ್ನು ಕವಿತೆ ಸೂಚ್ಯವಾಗಿ ಹೇಳುತ್ತದೆ.  ವರ್ಷ ವರ್ಷ ಚಕ್ರ ಉರುಳಿಸಿ ಕೊಂಡು ಬರುವ  ಚೈತ್ರವು ಬದುಕಿನ ಬೇವು-ಬೆಲ್ಲಗಳನ್ನು ನೆನಪಿಸುವ ಪರಿಯೂ ಹೃದ್ಯವಾಗಿದೆ. ವಿಧವಿಧದ ಸುಂದರ ಹೂಗಳನ್ನು ಹೊತ್ತು ಮೆರೆಯುವ ವೃಕ್ಷವು ಸಂಜೆಯಾದಾಗ ಅವುಗಳನ್ನು ಕೆಳಗೆ ಬೀಳಿಸಿ ಧೂಳಿನ ಪಾಲು ಮಾಡಿದರೂ ಮತ್ತೆ ಮತ್ತೆ ಹೂಗಳನ್ನು ಅರಳಿಸುತ್ತ ಪ್ರಕೃತಿಗೆ ಆರತಿ ಬೆಳಗುವ ದೃಶ್ಯ ಕಣ್ಣಿಗೆ ಕಟ್ಟುವಂತಿದೆ. ವಸುಂಧರೆಯು ರತ್ನಗರ್ಭೆಯಾಗಿದ್ದು  ಸೌಂದರ್ಯದ ಖನಿಯಾಗಿದ್ದರೂ, ಮನುಷ್ಯ ಕೆಣಕಿದರೆ ಮುನಿದು ಕಂಪಿಸಿ ಸರ್ವನಾಶ ಕೂಡಾ ಮಾಡಬಲ್ಲಳು ಅನ್ನುವುದು ಒಂದು ಎಚ್ಚರಿಕೆಯ ಮಾತು. 

‘ಲೀಲೆ ಅನವರತ’ ಕವಿತೆಯಲ್ಲಿ ಪ್ರಕೃತಿಯ ಲೀಲೆ ಬೆರಗು ಹುಟ್ಟಿಸುತ್ತದೆ :

ಕಾರ್ಗಲ್ಲಿನೆದೆಯಿಂದ ಸೆಳೆ ಸೆಳೆದು ನೀರ ಹನಿಗಳ

ಸಾಗರ ನದಿಗಳ ಅರೆನಿಮಿಷದಲ್ಲಿ ನಿರ್ಮಿಸುವಂತೆ

ಸಾವಿರದ ಗಿರಿ ಗಂಹ್ವರ ಲೆಕ್ಕವಿರದ ತರುಮರಗಳ

ಬೆಳೆಸಿ ಶೋಭಿಸುವೆ ಸಸ್ಯಶ್ಯಾಮಲೆಯಾಗಿ

ಎಲೆ ಎಲೆಗು ಗಿಡ ಗಿಡಕು

ಹೂ ಹೂವಿಗು ಹಣ್ಣು ಹಣ್ಣಿಗು

ಭಿನ್ನ ಭಿನ್ನ ರೂಪ ರಸ ಗಂಧ ಬಣ್ಣ

ಹೇಗೆ ಸೃಷ್ಟಿಸುವೆ  ತಾಯೆ ನಿನ್ನ ಭಿನ್ನತೆಯಲಿಂಥ  ಭಿನ್ನತೆಯ? (.  ಲೀಲೆ ಅನವರತ. ಪು.೫೬)

ಮೂರನೆಯ ಭಾಗದಲ್ಲಿ ಒಲುಮೆಯ ಕುರಿತಾದ ಕವನಗಳಿವೆ.  ಯೌವನ ಕಾಲದಲ್ಲಿ ಒಲುಮೆ ನೀಡುವ ಆನಂದ ಒಂದು ರೀತಿಯದ್ದಾದರೆ  ‘ ನೂರು ಕವಲು ನೂರು ಹಾದಿಗಳ ‘ಮುಂದೆ ನಿಂತಿರುವ ಈ ವೃದ್ಧಾಪ್ಯ ಕಾಲದಲ್ಲಿ ಆ ಅನುಭವದ ನೆನಪುಗಳ ಸುಗಂಧ ಇನ್ನೊಂದು ರೀತಿಯದ್ದು. ನೆನಪುಗಳು ಉರಿಯಾಗಿ ಕಾಡದೆ ಸುಗಂಧವಾಗಿ ಮೈಮನಗಳನ್ನು ಪುಳಕಿಸುತ್ತದೆ. ‘ನಿನಗೆ ನೀನೇ ಗೆಳೆಯ’ ಎಂಬ ವಾಸ್ತವದ ಅರಿವು ಇದ್ದರೂ ಕತ್ತಲು-ಬೆಳಕುಗಳ ದ್ವಂದ್ವದ ನಡುವೆಯೂ  ‘ ನಾ ನಿನಗೆ ನೀನೆನಗೆ ಜೇನಾಗುವಾ’ ಎಂಬ ಆರ್ತ ಹಂಬಲವು ‘ನನಗೂ ನಿನಗೂ ಅಂತರವಿಲ್ಲ’ ಎಂಬ ಅದ್ವೈತ ಭಾವವನ್ನು ಹುಟ್ಟಿಸುತ್ತದೆ.

ಸಂಕಲನದ  ನಾಲ್ಕನೆಯ ಭಾಗ ‘ಅನುಭಾವ’ದಲ್ಲಿ ಕವಿತೆಗಳು ಆಧ್ಯಾತ್ಮಿಕತೆಯ ಔನ್ನತ್ಯಕ್ಕೇರುತ್ತವೆ. ಬೇರೆ ಬೇರೆ ಕವಿತೆಗಳಲ್ಲಿ ಕವಯಿತ್ರಿ ಮತ್ತು ಆಕೆಯ ಆಧ್ಯಾತ್ಮಿಕ ಸುಖಿನೋ ನಡುವಣ ಸಂಬಂಧ ಗಾಢವಾಗಿತ್ತು ಬರುವುದು ಸ್ಪಷ್ಟವಾಗಿ ಕಾಣುತ್ತದೆ.  ಬೆಳದಿಂಗಳ ಮಳಲ ಹಾಸಿನಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಾಗ ಮಹಾಬೆಳಕು ಮಂದಹಾಸ ಸೂಸುವ ಕ್ಷಣಗಳು ಕವಯಿತ್ರಿಯ ಕಣ್ಣುಗಳನ್ನು ಕುರುಡಾಗಿಸುತ್ತವೆ. ಪ್ರಕೃತಿಯಿಂದಾಗಲಿ ಸೂರ್ಯನಿಂದಾಗಲಿ ಪಡೆದಷ್ಟು ನಾವು ಕೊಡುತ್ತೇವೆಯೇ ಅನ್ನುವ ಜಿಜ್ಞಾಸೆ ಆಕೆಯನ್ನು ಕಾಡುತ್ತದೆ. ಬದುಕುವ ಇಚ್ಛೆಯನ್ನು ಮೆಟ್ಟಿ ನಿಲ್ಲುವ ಶಕ್ತಿ ಪಡೆಯುವುದು ಸುಲಭವಲ್ಲ. ಪ್ರಭುವನ್ನು ಮುಟ್ಟುವಲ್ಲಿ ಅವು ಅಡ್ಡಿಯಾಗುತ್ತವೆ.‌

 ಒಂಟಿತನವೆಂಬುದು ಕರಗದ ಹೆಬ್ಬಂಡೆ ಅನ್ನಿಸಿದಾಗ ‘ನಾನು ಇಲ್ಲವಾಗಬೇಕು’ ಎಂಬ ಪ್ರಾರ್ಥನೆ ಹೊರಹೊಮ್ಮುತ್ತದೆ. ಆದರೆ ಆತ್ಮಸಖನ ದರ್ಶನವಾದ ಅರೆಕ್ಷಣದಲ್ಲಿ ಭಯದ ಹಿಮ ಕರಗಿ ಅವನಲ್ಲಿ ಲೀನವಾಗುವ ಆನಂದ ಮನಸ್ಸನ್ನು ತುಂಬಿ ಬಿಡುತ್ತದೆ.

 ಬಾನ ಚಂದಿರನನ್ನು ನೋಡಿದಾಗ ಅವನು ಬಳಿ ಬರಲಿ ಎಂಬ ಆಸೆ. ಬಂದ ನಂತರ ಅವನು ತಿರುಗಿ  ಹೋದಾಗ ಮತ್ತೆ ಬರಲಿ ಎಂದು ಆಗ್ರಹಿಸುವ ಹುಚ್ಚು ಮನಸ್ಸು.. ಪ್ರಭುವನ್ನು ಸೇರಲು ಕಾತರದಿಂದ ಕಾಯುವಾಗ ಅವಳಿಗೆ ‘ಭೂಮಿ-ಗಗನಗಳ ನಡುವಣ ಶೂನ್ಯದಲ್ಲಿ ‘ತ್ರಿಶಂಕು ಸ್ಥಿತಿಯಲ್ಲಿ ತಾನು ಇದ್ದೇನೆಂದು ಅನ್ನಿಸುತ್ತದೆ. ಆಗಸವನ್ನು ಆವರಿಸಿದೆ ಮೋಡಗಳನ್ನು ಉದ್ದೇಶಿಸಿ ಭೂಮಿಯು ಗೆಳೆತನದ ಹಸ್ತ ಚಾಚಿ ತನಗೆ ಬೇಕಾದ ಎಲ್ಲಾ ಸುಂದರ ಒಲವಿನ ಉಡುಗೊರೆಗಳನ್ನು ಹೊತ್ತು ತನ್ನಿ ಎಂದು ಆಕೆ ಹೇಳುತ್ತಾಳೆ. 

ಕವಯಿತ್ರಿ ಯಾವಾಗಲೂ ಇರುವುದು ಕತ್ತಲೆಯ ಗವಿಯೊಳಗೆ. ಬೆಳಕು ಪ್ರಭುವಿನ ಮೂಲಕವಷ್ಟೇ ಬರಬೇಕು.  ನಿನ್ನ ‘ಕುರುಹ ತೋರೋ ಪ್ರಭು ‘ಎಂದು ಆಕೆ ಅಂಗಲಾಚುತ್ತಾಳೆ. ‘ಬೆಳಕು ಕತ್ತಲೆಯೇ ಇರಬಹುದು ‘ ಎಂಬ ಉತ್ತರ ಅವಳಿಗೆ ಸಿಗುತ್ತದೆ. ತನ್ನ ಚೆನ್ನನ ಶೋಧದಲ್ಲಿ ಅಸಹಾಯಕಳಾದ ಪ್ರಿಯತಮೆ ಪ್ರಕೃತಿಯ ಅಂಗಾಂಗಗಳನ್ನು ವರ್ಣಿಸುತ್ತಾ ಹುಡುಕಾಟ ಮುಂದುವರೆಸುತ್ತಾಳೆ. ಅವನು ಹೊರಗಿರುವನೋ ಒಳಗಿರುವ ನೋ ಎಂಬ ಜಿಜ್ಞಾಸೆ ಅವಳನ್ನು ಕಾಡುತ್ತದೆ. ‘ಬೈರಾಗಿ’ ಕವನದಲ್ಲಿ ಶಿವನು ಕನಸಿನಲ್ಲೆಂಬಂತೆ ಬಂದು ಹೋದಾಗ  ಅವಳು ಸ್ವರ್ಗೀಯ ಆನಂದವನ್ನು ಅನುಭವಿಸುತ್ತಾಳೆ.

ಪ್ರಿಯತಮನನ್ನು ಮಹತ್ತಿಗೆ ಹೋಲಿಸಿ ತಾನೊಂದು ಯಕಶ್ಚಿತ್ ಅಣು ಎಂದು ಕರೆದುಕೊಳ್ಳುವಲ್ಲಿ ಕವಯಿತ್ರಿಯ ದೈನ್ಯಭಾವವುತನ್ನ ಪರಾಕಾಷ್ಠೆ ತಲುಪುತ್ತದೆ. 

ಗಗನ ವಿಸ್ತಾರದ, ಭೂಮಿ ಬಿತ್ತರದ

ಕತ್ತೆತ್ತಿ ನೋಡಲಾಗದೆ

ಉತ್ತುಂಗ ಶಿಖರದಲಿ

ವೈನತೇಯ ರೆಕ್ಕೆಗಳ ಕಾಂತಶಕ್ತಿಯಲ್ಲಿ

ಜಗವು ಬೆಳೆದಿರುವುದು

ತೊಡರು ಹೆಜ್ಜೆಗಳಿಟ್ಟು ನಿನ್ನ ಬಳಿ

ಹೇಗೆ ಬರಲೋ ದೊರೆಯೇ? ‘ (ಅಣು-ಪರಮಾಣು. ಪು.೧೦೮) 

‘ನಿನ್ನಲ್ಲಿ ಲೀನವಾದರೆ ಸಾಕು’ (ಲೀನ ಪು.೧೨೦)ಎಂದು ಕವಯಿತ್ರಿ ತನ್ನ ಮರಣೇಚ್ಛೆಯನ್ನು ವ್ಯಕ್ತ ಪಡಿಸುವಾಗ  ,  ‘ಶಬರಿ ‘(೧೨೭) ಕವಿತೆಯಲ್ಲಿ ಅದ್ವೈತ ಭಾವ ಪ್ರಕಟಿಸುವಾಗ ಅಕ್ಕ ಮಹಾದೇವಿ ನೆನಪಾಗುತ್ತಾಳೆ.

ಕೊನೆಯ ಭಾಗ ‘ಚಿತ್ತ ಸುಳಿದತ್ತ’ದಲ್ಲಿ ವೈವಿಧ್ಯಮಯ ವಸ್ತುಗಳ ಮೇಲೆ ಕವನಗಳಿವೆ.  ಕತ್ತಲು ಎಂದರೆ ಅವಳಿಗೆ ಅಸಹನೆಯೂ ಇದೆ.ಆಕರ್ಷಣೆಯೂ ಇದೆ. (ಕತ್ತಲು ಪು. ೧೪೩).  ‘ಗೋಡೆ ‘ಕವನದಲ್ಲಿ ಮನುಷ್ಯ ಮನುಷ್ಯರ ನಡುವೆ ಗೋಡೆಗಳು ಇಲ್ಲವಾಗಲಿ(ಪು.೧೪೫) ಎಂಬ ಆಶಯವಿದೆ. ‘ವಾಸ್ತವ’ದಲ್ಲಿ ‘ಎಲ್ಲರೂ ನನ್ನವರೇ’ಎಂದು ತಿಳಿದುಕೊಳ್ಳುವುದು ಬರೇ ಆದರ್ಶ ಮಾತ್ರ. ತೀರಾ ಅಸಹಾಯಕ ಸ್ಥಿತಿ ಬಂದಾಗ ನಮ್ಮ ಹತ್ತಿರದವರು ಮಾತ್ರವೇ ನಮ್ಮ ಸಹಾಯಕ್ಕೆ ಬರುತ್ತಾರೆ ಅನ್ನುವ ಸತ್ಯ ನಮಗೆ ತಿಳಿದಿರಬೇಕು ಅನ್ನುತ್ತಾರೆ(ಪು.೧೪೮). ‘ನೀವು ವೃದ್ಧರಾದಿರಾ?’ ಕವಿತೆಯಲ್ಲಿ  ವೃದ್ಧಾಪ್ಯವನ್ನು ಎದೆಗುಂದದೆ ಹೇಗೆ   ಲಘುವಾಗಿ ಸ್ವೀಕರಿಸಬೇಕು ಎಂಬ ಕಿವಿಮಾತು ಇದೆ.(ಪು.೧೫೭)_’ಹರಿದ ಚಾಪೆ’ಯು ನಮಗೆ ಇಂದು ಬೇಡವಾದರೂ ಅದರ ಹಿಂದೆ ನಮ್ಮ ಹಿರಿಯರು ಕಳೆದ ದಿನಗಳ ಸುಂದರ ಇತಿಹಾಸದ ಅಂಟು ಇದೆ ಅನ್ನುತ್ತಾರೆ .(ಪು.೧೫೪).  ‘ಏನನ್ನೂ ನಿರಾಕರಿಸ ಬೇಡ. ಬಂದದ್ದೆ ಲ್ಲವನ್ನೂ ನಗುನಗುತ್ತಾ ಸ್ವೀಕರಿಸು’ ಅನ್ನುತ್ತಾರೆ. (ಏನನೂ ಬಿಡಬೇಡ.ಪು.೧೯೬)   ಎಲ್ಲವೂ ಮೈಗಂಟಿ ನಿಂತಿರುವಾಗ ಅರಿಷಡ್ವೈರಿಗಳನ್ನು ಗೆದ್ದು ತ್ಯಾಗ ಮಾಡುವುದು ಕಠಿಣ ಕಾಯಕ.ಆದ್ದರಿಂದ ‘ಏನು ಕೊಡಲಿ?’ಎಂದು ಕೇಳುತ್ತಾರೆ. (ಕಠಿಣ ಕಾಯಕ. ಪು.೧೯೮).  ಡಾಂಬರು  ಕವಿತೆಯಲ್ಲಿ ರಸ್ತೆಯ ಸ್ವಗತದ ಮೂಲಕ  ಎಷ್ಟು ಕಾಲವಾದರೂ ಡಾಂಬರು ಬಾರದ ಬಗ್ಗೆ ಹಾಸ್ಯ ಮಿಶ್ರಿತ ವ್ಯಂಗ್ಯವಿದೆ. (ಡಾಂಬರು.ಪು.೨೦೯) ಕಾಡು ಕಡಿದು ಮಾಡಿದ ನಗರದಲ್ಲಿ ಕಾಲ ದೇಶಗಳ ಪರಿವೆ ಇಲ್ಲದೆ ಕೂಗುವ ಕೋಗಿಲೆಯ ಚಿತ್ರದಲ್ಲಿ ಪರಿಸರ ಕಾಳಜಿಯಿದೆ.( ಬೆಂಗಳೂರಿನ ಕೋಗಿಲೆ.ಪು.೨೧೧) .  ಚುನಾವಣೆಗಳು, ಮತದಾರನಿಗೆ, ಓಟು ಹಾಕುವುದಿಲ್ಲ,  ಚುನಾವಣಾ ಫಲಿತಾಂಶ, ಪಕ್ಷ, ಮರುಚುನಾವಣೆ, ಮೀಸಲಾತಿ- ಮೊದಲಾದ ಕವನಗಳಲ್ಲಿ ಇಂದಿನ ರಾಜಕೀಯ ಕ್ಷೇತ್ರದಲ್ಲಿ ನಡೆಯುವ ನಾಟಕಗಳ ಕುರಿತಾದ ವ್ಯಂಗ್ಯ -ವಿಡಂಬನೆಗಳಿವೆ. ‘ಮಿಲೇನಿಯಂ’ ಹೊಸ ಕಾಲಕ್ಕೆ ಒಂದು ಪ್ರತಿಕ್ರಿಯೆ. ‘ಕಾರ್ಗಿಲ್ ಬಂಧುಗಳಿಗೆ’. ದೇಶಕ್ಕಾಗಿ ತ್ಯಾಗ ಮಾಡುವ ಯೋಧರು ಅನುಭವಿಸುವ ಕಷ್ಟ-ಕಾರ್ಪಣ್ಯಗಳು, ಎದುರಿಸುವ ಅಪಾಯಗಳನ್ನು ವರ್ಣಿಸಿ ಅವರಿಗೆ ಕೃತಜ್ಞತಾರ್ಪಣೆ ಇದೆ.. ದೇಶದ ಒಳಗಿನ ರಾಜಕೀಯದಿಂದಾಗಿ ಅಂತರ್ಯುದ್ಧವು ಉಂಟುಮಾಡಿದ ನಾಶದಿಂದ ಬಡತನದಲ್ಲಿ ಸಿಲುಕಿ ನರಳುವ ಸೊಮಾಲಿಯಾದ ಮಕ್ಕಳ ದಯನೀಯ ಸ್ಥಿತಿ ‘ಸೋಮಾಲಿಯಾ’ ಕವನದಲ್ಲಿದೆ. ಮಾರ್ಕಸ್ ಔರೀಲಿಯಸ್ , ಸಾಕ್ರೆಟಿಸ್, ವಿವೇಕಾನಂದ,ಮೊದಲಾದ ಮಹಾನ್ ವ್ಯಕ್ತಿಗಳ ಉನ್ನತ ವ್ಯಕ್ತಿತ್ವಗಳ ಕುರಿತಾದ ಕವನಗಳೂ ಇವೆ.

 ಸಂಕಲನದ ಅಷ್ಟೂ ಕವಿತೆಗಳಲ್ಲಿ ಪ್ರಕಟವಾಗುವ ಕವಯಿತ್ರಿಯ ದರ್ಶನ ಮತ್ತು ಜೀವನ ದೃಷ್ಟಿ ಗಳು ವಿಶಾಲವಾಗಿದ್ದು ಮೌಲಿಕತೆಯಿಂದ ಕೂಡಿವೆ.  ಸೂರ್ಯನ ಕುರಿತಾದ ಕವಿತೆಗಳಲ್ಲಿ ವಿಶ್ವ ಪ್ರಜ್ಞೆ ಇದೆ.‌ ಉತ್ತಮ ಪುರುಷ ನಿರೂಪಣೆ ಇರುವ ಕೆಲವು ಕವಿತೆಗಳಲ್ಲಿರುವ ಸ್ವಗತ ಸಂಭಾಷಣೆಗಳಲ್ಲಿ ಅವರು ಅಮೆರಿಕನ್ ಕವಯಿತ್ರಿ ಎಮಿಲಿ ಡಿಕೆನ್ಸನ್ ನಿಂದ ಪ್ರಭಾವಿತರಾದಂತೆ ಕಾಣುತ್ತಾರೆ. ಅವರ ಅನನ್ಯ ಚಿಂತನೆಗಳು,  ಮನುಷ್ಯನ ಬದುಕಿನ ಕುರಿತಾದ ತಾತ್ವಿಕ ಗ್ರಹಿಕೆಗಳು,  ಅವರು ಓದಿಕೊಂಡ ಪಾಶ್ಚಾತ್ಯ ಮತ್ತು ಪೌರಾತ್ಯ ಸಾಹಿತ್ಯಗಳ ಅಪಾರ ಜ್ಞಾನ ಮತ್ತು ಅನುಭವಗಳು ಸಮಗ್ರ ಸಂಕಲನದಲ್ಲಿ ಇಡಿಕಿರಿದಿವೆ.  ಛಂದಸ್ಸು ಇಲ್ಲದಿದ್ದರೂ ಅವರು ಬಳಸುವ ಪದ ಹಾಗೂ ಪದೇ ಪುಂಜಗಳು  ಶಕ್ತಿ-ಸೌಂದರ್ಯಗಳು ಕವಿತೆಗಳಿಗೆ ಘನತೆಯನ್ನಿತ್ತಿವೆ.

‍ಲೇಖಕರು avadhi

December 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: