ಚಂದ್ರಪ್ರಭ ಕಠಾರಿ ನೋಡಿದ ‘ಅ ಹೌಸ್‌ ಇನ್‌ ಜೆರುಸಲೇಮ್’

ಆಲ್‌ ನಖ್ಬದ ಕ್ರೂರ ಪರಿಣಾಮವನ್ನು ತಣ್ಣಗೆ ನಿರೂಪಿಸುವ ಸಿನಿಮಾ – ಅ ಹೌಸ್‌ ಇನ್‌ ಜೆರುಸಲೇಮ್

ಚಂದ್ರಪ್ರಭ ಕಠಾರಿ

—–

ಪ್ರಪಂಚದಾದ್ಯಂತ ಹಂಚಿ ಹೋಗಿದ್ದ ಯಹೂದಿಗಳಿಗೆ  ಪ್ಯಾಲೆಸ್ಟೈನ್‌ ನಲ್ಲಿ ಇಸ್ರೇಲ್‌ ಎಂಬ ಪ್ರತ್ಯೇಕ  ರಾಷ್ಟ್ರ ನಿರ್ಮಾಣವನ್ನು ಯುನೈಡೆಟ್‌ ನೇಷನ್ಸ್‌ ನವೆಂಬರ್‌ 1947ರಲ್ಲಿ ಘೋಷಿಸಿತು.  ಅದರ ಪರಿಣಾಮವಾಗಿ ಮೇ 1948 ರಲ್ಲಿ ಪ್ಯಾಲೆಸ್ಟೈನ್‌ ನಲ್ಲಿ ನಡೆದ ಸ್ಥಳೀಯ ಪ್ಯಾಲೆಸ್ಟೈನಿನ ಅರಬ್ಬರ ಮೇಲೆ  ಯಹೂದಿಗಳ ದಾಳಿಯನ್ನು ನಖ್ಬ (catastrophe – ಮಹಾದುರಂತ, ವಿಪತ್ತು) ಎಂದು ಕರೆಯುತ್ತಾರೆ. ಆ ಹೊತ್ತಲ್ಲಿ ಬಲವಂತವಾಗಿ ಯಹೂದಿಗಳಿಂದ ಅರಬ್ಬರು ಅವರ ಮನೆಮಠಗಳಿಂದ ಹೊರಹಾಕಲ್ಪಟ್ಟರು. ಅರಬ್ಬರು ಅವರ ದೇಶದಲ್ಲೇ ನೆಲೆ ಕಳೆದುಕೊಂಡು ನಿರಾಶ್ರಿತರಾಗುವ ಸನ್ನಿವೇಶ ಉಂಟಾಯಿತು.

ನಖ್ಬದ ಕಾಲದಲ್ಲಿ ಸುಮಾರು 700ಕ್ಕು ಮಿಕ್ಕು ಹಳ್ಳಿ, ಪಟ್ಟಣಗಳನ್ನು ಯಹೂದಿಗಳು ಆಕ್ರಮಿಸಿಕೊಂಡರು. ಸುಮಾರು 500ಕ್ಕು ಮಿಕ್ಕು ಹಳ್ಳಿ, ಪಟ್ಟಣಗಳನ್ನು ನಾಶಮಾಡಿದರು. 15000 ಅರಬ್ಬರ ಮಾರಣಹೋಮವಾಯಿತು. 3 ಲಕ್ಷದಷ್ಟು ಜನರನ್ನು ಅವರ ಮನೆಗಳಿಂದ ಹೊರದಬ್ಬಲಾಯಿತು. ಅವರಲ್ಲಿ ಬಹಳಷ್ಟು ಮಂದಿಯ ತಂದೆತಾಯಿ, ಅಣ್ಣತಮ್ಮ, ಅಕ್ಕತಂಗಿಯರು ಕೊಲ್ಲಲ್ಪಟ್ಟರು ಅಥವಾ ಕಾಣೆಯಾದರು. 

ನಖ್ಬದಂಥ ಅಮಾನುಷ ಘಟನೆಯನ್ನು ಕುರಿತು ಹಲವು ಸಿನಿಮಾಗಳು ತಯಾರಾಗಿದೆ. ಅವುಗಳಲ್ಲಿ ರಾವನ್‌ ದಮೆಮ್‌ ರ ಡಾಕ್ಯುಮೆಂಟರಿ ಸಿನಿಮಾ ಆಲ್‌ ನಖ್ಬ(2008), ಎಲಿಯ ಸುಲೇಮಾನ್‌ ರ ದ ಟೈಮ್‌ ದಟ್‌ ರಿಮೈನ್ಸ್‌ (2009), ಮಹಮ್ಮದ್‌ ಬಕ್ರಿಯ ಡಾಕ್ಯುಮೆಂಟರಿ 1948(1998), ಅಲೊನ್‌ ಸುವರ್ಜ್‌ ರ ಡಾಕ್ಯುಮೆಂಟರಿ ತಂತೂರ (2022) ಮತ್ತು ದರೀನ್‌ ಸಲಾಮ್‌ ರ ಫರ್ಹಾ (2022) ಸಿನಿಮಾಗಳನ್ನು ಉದಾಹರಿಸಬಹುದು.

ಇದೇ ಸಾಲಿಗೆ 2023ರಲ್ಲಿ ತಯಾರಾಗಿ ಗೋವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ, ಮುಯದ್‌ ಅಲಯನ್‌ ನಿರ್ದೇಶನದ ʼಅ ಹೌಸ್‌ ಇನ್‌ ಜೆರುಸಲೇಮ್ʼ ಸಿನಿಮಾವು ಸೇರುತ್ತದೆ. ಮುಯದ್‌ ಅಲಯನ್‌ – ಜೆರುಸಲೆಮ್‌ ನ ನಿರ್ದೇಶಕ. ʼಅ ಹೌಸ್‌ ಇನ್‌ ಜೆರುಸಲೇಮ್ʼ ಸಿನಿಮಾಕ್ಕೆ ಮುಂಚೆ  2018ರಲ್ಲಿ ಈತ ತಯಾರಿಸಿದ್ದ ಸಿನಿಮಾ ʼ ದ ರಿಪೋರ್ಟ್ಸ್‌ ಆಫ್‌ ಸರಾ ಅಂಡ್‌ ಸಲೀಮ್‌ʼ ತನ್ನ ಕಥಾವಸ್ತುವಿನ ಕಾರಣವಾಗಿ ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗೆ ಭಾಜನವಾಗಿತ್ತು.

ಆಲ್‌ ನಖ್ಬ ಎಂಬ ದುರಂತವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಕಟ್ಟಿದ  ಡಾಕ್ಯುಮೆಂಟರಿ ಸಿನಿಮಾಗಳು ತಮ್ಮ ದೇಶದಲ್ಲೇ ಪರದೇಶಿಗಳಾದ ಅರಬ್ಬರ ಅಸಹಾಯಕತೆಯನ್ನು ಸಿನಿಮಾಗಳಲ್ಲಿ ಸೆರೆ ಹಿಡಿದಿದ್ದರೆ, ಎಲಿಯ ಸುಲೇಮಾನ್‌ ತಮ್ಮ ಟೈಮ್‌ ದಟ್‌ ರಿಮೈನ್ಸ್‌ (2009) ಸಿನಿಮಾದಲ್ಲಿ ಅರಬ್ಬರ ಜನಜೀವನದ ಬಗ್ಗೆ,  ಅವರ ಬದುಕಿನ ಗೋಜಲುಗಳ ಬಗ್ಗೆ ದೃಶ್ಯಗಳನ್ನು ಹೆಣೆದಿದ್ದರು.

ʼಅ ಹೌಸ್‌ ಇನ್‌ ಜೆರುಸಲೇಮ್ʼ ಸಿನಿಮಾದಲ್ಲಿ ಮುಯದ್‌ ಅಲಯನ್‌ ಅವೆಲ್ಲ ಸಿನಿಮಾಗಳಿಗಿಂತ ವಿಭಿನ್ನವಾಗಿ, ಪ್ಯಾಲೆಸ್ಟೈನ್ನಿರ ಮೇಲಾದ ಆಕ್ರಮಣ, ಅತಿಕ್ರಮಣದ ಗಂಧಗಾಳಿ ಇಲ್ಲದ ವರ್ತಮಾನದ ಪಾತ್ರಗಳನ್ನು ತಂದು ಅವರ ಕಣ್ಣೋಟದ ಮೂಲಕ ಭೂತಕಾಲದ ನಖ್ಬದ ದುರಂತವನ್ನು ಸಿನಿಮಾದಲ್ಲಿ ಕಟ್ಟಿ ಕೊಡುತ್ತಾರೆ.    

ರಸ್ತೆ ಅಪಘಾತದಲ್ಲಿ ತನ್ನ ಎದುರಿಗೆ ಸತ್ತ ತಾಯಿಯ ದಾರುಣ ಸಾವನ್ನು ಮರೆಯಲಾಗದೆ ಬಾಲಕಿ ರೆಬೆಕ್ಕಾ ಮಾನಸಿಕವಾಗಿ  ತೊಳಲಾಡುತ್ತಿರುತ್ತಾಳೆ. ಸ್ಥಳ ಬದಲಾವಣೆಯಿಂದ ಅವಳ ಮನಸ್ಥಿತಿಯನ್ನು ಸುಧಾರಿಸುವ ಆಸೆ ಹೊತ್ತು ತಂದೆ ಮೈಕೆಲ್‌ ಇಂಗ್ಲೆಂಡಿನಿಂದ ಜೆರುಸಲೆಮ್ ನಲ್ಲಿರುವ ಅವಳ ತಾತನ ಮನೆಗೆ‌ ಕರೆತರುತ್ತಾನೆ. ಆದರೆ, ಸದಾ ಒಬ್ಬಂಟಿಯಾಗಿರಲು ಬಯಸುವ ರೆಬೆಕ್ಕಾಳಿಗೆ ತಾಯಿನ ನೆನಪುಗಳು ದುಃಸ್ವಪ್ನವಾಗಿ ಕಾಡತೊಡಗುತ್ತದೆ. ಆತಂಕಗೊಂಡ ಮೈಕೆಲ್‌ ಮನೋವೈದ್ಯರಲ್ಲಿ ರೆಬೆಕ್ಕಾಳಿಗೆ ಚಿಕಿತ್ಸೆ ಕೊಡಿಸಿದರೂ ಯಾವ ಪ್ರಯೋಜನವಾಗುವುದಿಲ್ಲ.

ಇದರೊಟ್ಟಿಗೆ ರೆಬೆಕ್ಕಾಳಿಗೆ ಮತ್ತೊಂದು ಸಮಸ್ಯೆ ಕಾಡಲು ತಾತನ ಬಂಗಲೆಯೇ ಕಾರಣವಾಗುತ್ತದೆ. ಅಲ್ಲಿ ಆಕೆಗೆ ತನ್ನದೇ ವಯಸ್ಸಿನ ಮತ್ತೊಬ್ಬ ಬಾಲಕಿ ಇರುವುದು, ಆಗಾಗ್ಗೆ ತಂದೆಗೆ ಅಗೋಚರವಾಗಿ  ತನಗೊಬ್ಬಳಿಗೆ ಮಾತ್ರ ಕಂಡು ಬಂದು ಭಯದ ವಾತಾವರಣ ಸೃಷ್ಟಿಯಾಗುತ್ತದೆ. 

ಪೊಲೀಸರಿಗೆ ದೂರು ನೀಡಿದರೂ ಕಂಡು ಕಾಣದ ಬಾಲಕಿಯ ಸುಳಿವು ಸಿಗುವುದಿಲ್ಲ. ಹೆಚ್ಚೆಂದರೆ ಪೊಲೀಸರು ಬಾಲಕಿ ವಾಸವಾಗಿದ್ದಳೆಂದು ರೆಬೆಕ್ಕಾ ಹೇಳುವ ಬಂಗಲೆಯ ಮುಂದಿದ್ದ ನೀರಿನ ಸಂಪನ್ನು (ನೆಲ ಮಟ್ಟದ ನೀರಿನ ತೊಟ್ಟಿ) ಶಾಶ್ವತವಾಗಿ ತೆರೆಯಲಾಗದಂತೆ ಅದರ ಮುಚ್ಚಳವನ್ನು ವೆಲ್ಡಿಂಗ್‌ ಮಾಡುತ್ತಾರೆ.

ರೆಬೆಕ್ಕಾ ನಿಧಾನವಾಗಿ ಭಯ ಕಳೆದುಕೊಂಡು ಆ ಬಾಲಕಿಯ ಸ್ನೇಹ ಸಂಪಾದಿಸುತ್ತಾಳೆ. ಬಂಗಲೆಯಲ್ಲಿ ಅಥವಾ ಸಂಪಿನಲ್ಲಿ ಬಚ್ಚಿಟ್ಟುಕೊಳ್ಳಲು ಕಾರಣ ಕೇಳಲಾಗಿ, ರಶಾ ಹೆಸರಿನ ಆ ಬಾಲಕಿ ಬಂಗಲೆಯು ತಾನಿದ್ದ ಮನೆಯೆಂದು, ಬಂದೂಕಗಳನ್ನು ಹಿಡಿದು ಬಂದವರು ಮನೆ ಮೇಲೆ ದಾಳಿಮಾಡಿದಾಗ ತಾನು ಅವರಿಂದ ತಪ್ಪಿಸಿಕೊಂಡು ಸಂಪಿನಲ್ಲಿ ಅವಿತುಕೊಂಡಿದ್ದಾಗಿ ಹೇಳುತ್ತಾಳೆ. ಆಗ ಕಳೆದು ಹೋದ ತನ್ನ ಅಮ್ಮನ ಬರುವಿಕೆಗಾಗಿ ಕಾಯುತ್ತಿದ್ದೆನೆಂದು ಹೇಳುತ್ತಾಳೆ.

ಗೊಂದಲಗೊಂಡು, ಬಂಗಲೆ ಯಾರಿಗೆ ಸೇರಿದ್ದೆಂದು ತಂದೆ ಮೈಕಲ್‌ ನನ್ನು ಕೇಳಿದರೆ ಅದನ್ನು “ನಿಮ್ಮ ತಾತ ಖರೀದಿಸಿದ್ದು” ಎಂದು  ಹೇಳಿದಾಗ ರೆಬೆಕ್ಕಾಳಿಗೆ ಬಂಗಲೆ ತಮಗೆ ಸೇರಿದ್ದಲ್ಲ, ಅದು ರಶಾಳ ಮನೆಯೆಂದು ಸ್ಪಷ್ಟವಾಗುತ್ತದೆ. ತನ್ನಂತೆ ರಶಾಳು ತಾಯಿಯನ್ನು ಕಳೆದುಕೊಂಡು ಪಡುವ ಸಂಕಟಕ್ಕೆ ಮರುಗಿ ಅವಳ ತಾಯಿಗಾಗಿ  ರೆಬೆಕ್ಕಾಳು ಹುಡುಕಾಟ ನಡೆಸುತ್ತಾಳೆ.

ಸಂಪಿನಲ್ಲಿ ರಶಾಳ ಸುಂದರವಾದ ಗೊಂಬೆಯೊಂದು ಸಿಕ್ಕಿರುತ್ತದೆ. ಶಾಲೆಗೆ ಚಕ್ಕರ್‌ ಹಾಕಿ ಆ ಗೊಂಬೆಯನ್ನು ತಯಾರಿಸಿದವರ ಜಾಡು ಹಿಡಿದು ಹೊರಡುತ್ತಾಳೆ. ಹೋದೆಡೆಯಲೆಲ್ಲ ಭೂಮಿಯಿಂದ ಧಿಗ್ಗನೆದ್ದ ಎತ್ತರದ ಗೋಡೆಗಳು ಅವಳಿಗೆ ಗೋಚರವಾಗುತ್ತದೆ. ಒಮ್ಮೆ ಒಂದು ಪುಟ್ಟಮನೆಯಲ್ಲಿ ಗೊಂಬೆ ಮಾಡುವ ಅಜ್ಜಿಯೊಬ್ಬಳ ಭೇಟಿಯಾಗುತ್ತದೆ. ಆ ಅಜ್ಜಿಯು 1948 ನಡೆದ ಆಲ್‌ ನಬ್ಖದಲ್ಲಿ  ಅಪ್ಪ ಅಮ್ಮನನ್ನು ಕಳೆದುಕೊಂಡ ಸಂತ್ತಸ್ತೆ. ಆಕೆಯ ಮನೆಯಲ್ಲಿ ರೆಬೆಕ್ಕಾಳ ತಾತನ ಬಂಗಲೆಯ ಫೋಟೊ ಇರುತ್ತದೆ. ರಶಾ ಆಕೆಯ ಮೊಮ್ಮಗಳು ಇರಬಹುದು ಎಂದುಕೊಂಡು ವಿಚಾರಿಸಿದರೆ ಅಜ್ಜಿಗೆ ಮದುವೆಯೇ ಆಗಿರುವುದಿಲ್ಲ. ತಂದೆಯೊಂದಿಗೆ ಅಜ್ಜಿಯನ್ನು ಬಂಗಲೆಗೆ ಕರೆತಂದಾಗ, ತನ್ನ ಮನೆಯನ್ನು ನೋಡಿ ಅಜ್ಜಿ ಭಾವುಕಳಾಗುತ್ತಾಳೆ. ಸಂಪಿನಲ್ಲಿ ರಶಾಳ ಹುಡುಕಾಟ ನಡೆಸಿದರೆ ಅವಳು ಅಲ್ಲಿ ಇರುವುದಿಲ್ಲ.

ಅರಬ್ಬಳಾಗಿ ಜೆರುಸಲೆಮ್ಮಿನಲ್ಲಿ ಅಕ್ರಮವಾಗಿ ವಾಸವಿದ್ದದ್ದಕ್ಕೆ ಇಸ್ರೇಲಿ ಪೊಲೀಸರು ಅಜ್ಜಿಯನ್ನು ಬಂಧಿಸುವುದರೊಂದಿಗೆ ಸಿನಿಮಾ ಮುಗಿಯುತ್ತದೆ.  

ಸುಮಾರು ಅರವತ್ತು ವರ್ಷಗಳ ಹಿಂದೆ ಇಸ್ರೇಲಿಗಳು ರಶಾ ಕುಟುಂಬವನ್ನು ಅವರ ಮನೆಯಿಂದ ಹೊರ ದಬ್ಬಿದಾಗ ಪುಟ್ಟ ಹುಡುಗಿಯಾಗಿದ್ದ ಅಜ್ಜಿ ರಶಾ ಸಂಪಿನಲ್ಲಿ ಬಚ್ಚಿಟ್ಟುಕೊಂಡು ಜೀವ ಉಳಿಸಿಕೊಂಡಿರುತ್ತಾಳೆ. ಸಿನಿಮಾದಲ್ಲಿ ಭೂತಕಾಲದ ಅರಬ್ ರಶಾ ಎಂಬ ಬಾಲಕಿಯನ್ನು ಪ್ರತಿಮಾತ್ಮಕವಾಗಿ ತಂದು, ವರ್ತಮಾನದ‌ ಯಹೂದಿ ರೆಬೆಕ್ಕಾಳೊಂದಿಗೆ ಮುಖಾಮುಖಿಯಾಗಿಸುವ ಚಿತ್ರಕತೆ ಗಮನ ಸೆಳೆಯುತ್ತದೆ. ಆ ಮೂಲಕ ಇತಿಹಾಸದಲ್ಲಿ ಅರಬ್ಬರ ಮೇಲೆ ನಡೆದ ಜನಾಂಗೀಯ ದೌರ್ಜನ್ಯವನ್ನು, ಅದರ ಅರಿವೆ ಇಲ್ಲದಂತೆ ಅವರ ಜಾಗದಲ್ಲೇ ಸುಖ ಜೀವನ ನಡೆಸುತ್ತಿರುವ  ವರ್ತಮಾನದ ಯಹೂದಿ ಪಾತ್ರಗಳ ಮುಂದೆ ಸಿನಿಮಾ ತೆರೆದಿಡುತ್ತದೆ.

1948ರಿಂದ ಇಂದಿನವರೆಗೂ ತಮ್ಮದೇ ದೇಶದಲ್ಲಿ ಅಸ್ತಿತ್ವವಿಲ್ಲದೆ ಪರದೇಶಿಗಳಂತೆ ಜೀವನ ಸಾಗಿಸುತ್ತಿರುವ ಅರಬ್ಬರ ದಾರುಣ ಸ್ಥಿತಿಯನ್ನು ಅಜ್ಜಿ ರಶಾಳ ಬಂಧನ ಸೂಚಿಸುತ್ತದೆ. ಪ್ರಾರಂಭದಲ್ಲಿ ಹಾರರ್‌ ಸಿನಿಮಾದಂತೆ ಭಾಸವಾಗುವ ಸನ್ನಿವೇಶಗಳಲ್ಲಿ ರಶಾಳನ್ನು ನಿರ್ದೇಶಕರು ಭೂತದಂತೆ ಚಿತ್ರಿಸಿರುವುದು ಭೂತಕಾಲದ ಸಂಕೇತವೇ ಆಗಿದೆ. ಯಹೂದಿಗಳು ಪ್ಯಾಲೇಸ್ಟೈನನ್ನು ತಮ್ಮದೇ ನೆಲವೆಂದು ದುರಾಕ್ರಮಣದಿಂದ ಅತಿಕ್ರಮಿಸಿದ್ದನ್ನು ಸಂಭ್ರಮಿಸುವ ಕಾಲದಲ್ಲಿ ನಿಷ್ಕಲ್ಮಷ ಮನದ ಮುಗ್ಧ ಬಾಲಕಿ ರೆಬೆಕ್ಕಾಳ ಮಾನವೀಯ ನಡೆ ಅವರನ್ನು ನಾಚಿಸುವಂತಿದೆ.

ಪಾತ್ರವರ್ಗದಲ್ಲಿ ಎಲ್ಲರೂ ಸಹಜವಾಗಿ ನಟಿಸಿದ್ದಾರೆ. ಅದರಲ್ಲೂ ಅಮ್ಮನನ್ನು ಕಳೆದುಕೊಂಡ ಅರಬ್‌ ಬಾಲಕಿಯ ನೋವಿಗೆ ಮಿಡಿಯುವ ರೆಬೆಕ್ಕಾಳಾಗಿ ಮಿಲೆ ಲೊಕೆಯ ಅಭಿನಯ ಗಮನ ಸೆಳೆಯುತ್ತದೆ. ನಿರ್ದೇಶಕ ಮುಯದ್‌ ಅಲಯನ್‌ ಅವರು ರಮಿ ಮುಸಾ ಅಲಯನ್‌ ಜೊತೆಗೆ ಚಿತ್ರಕತೆ ರಚಿಸಿದ್ದಾರೆ. ಸಿನಿಮಾಕ್ಕೆ ಅಲೆಕ್ಸ್‌ ಸಿಮು ಸಂಗೀತವಿದೆ. ಸೆಬಾಸ್ಟಿಯನ್‌ ಬೊಕ್‌ ಡಿಒಪಿಯಾಗಿದ್ದರೆ, ರಚೆಲ್‌ ಎರ್ಕಿನ್‌ ರ ಸಂಕಲನವಿದೆ.

ನಾಗರೀಕ ಮಾನವ ಜನಾಂಗದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದ ಅಮಾನವೀಯ ಆಲ್‌ ನಖ್ಬದ ಇಸ್ರೇಲ್‌ ದಾಳಿಯನ್ನು ಇಬ್ಬರು ಬಾಲಕಿಯರ ಪಾತ್ರಗಳ ಮೂಲಕ ಎದೆಯಾಳಕ್ಕೆ ಇಳಿಯುವಂತೆ ಅಬ್ಬರವಿಲ್ಲದೆ ಸಹನೆಯಿಂದ ಸಿನಿಮಾವನ್ನು ಕಟ್ಟಿರುವ ನಿರ್ದೇಶಕ, ನಿರ್ಮಾಪಕ ಮುಯದ್‌ ಅಲಯನ್ ಅವರು ನಿಜಕ್ಕೂ ಅಭಿನಂದನಾರ್ಹರು.   

‍ಲೇಖಕರು avadhi

December 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: