ಜೋಗಿ ಓದಿದ ‘ಪಸಾ’

ಮಾತಲ್ಲಿ ಕಟ್ಟಿದ ಸಂಗೀತ ಮಹಲು

ಜೋಗಿ

—–

ಸಂಗೀತ ಪ್ರಧಾನವಾದ ಕಾದಂಬರಿ ಕನ್ನಡಕ್ಕೆ ಹೊಸತಲ್ಲ. ಹೇಗೆ ಸಂಗೀತ ನಮ್ಮ ಭಾವವನ್ನು ಅರಳಿಸುತ್ತದೆಯೋ ಹಾಗೆಯೇ ಸಂಗೀತಪ್ರಧಾನ ಕಾದಂಬರಿಗಳು ಕೂಡ ನಮ್ಮನ್ನು ಸಮ್ಮೋಹನಗೊಳಿಸಿವೆ. ಕೃಷ್ಣಮೂರ್ತಿ ಪುರಾಣಿಕರ ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ, ತರಾಸು ಅವರ ಹಂಸಗೀತೆ, ತ.ಪು. ವೆಂಕಟರಾಮ್ ಬರೆದ ‘ಕಲ್ಲುವೀಣೆ ನುಡಿಯಿತು’- ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹತ್ತಾರು ಕಾದಂಬರಿಗಳು ಸಿಗುತ್ತವೆ. ಸಂಗೀತ ಅನೇಕ ಸಿನಿಮಾಗಳ ಕತೆಗೂ ಮೂಲದ್ರವ್ಯವಾಗಿ ಒದಗಿದೆ. ಸಾಗರ ಸಂಗಮಂ, ಶಂಕರಾಭರಣಂ, ಅಭಿಮಾನ್, ಸ್ವಾತಿಮುತ್ಯಂ, ಮಲಯಮಾರುತ, ಪರ್ವ- ಹೀಗೆ ಭಾರತೀಯ ಭಾಷೆಗಳಲ್ಲಿ ನೂರಾರು ಸಂಗೀತಪ್ರಧಾನ ಸಿನಿಮಾಗಳು ಬಂದಿವೆ. ಎಸ್ ಎಲ್ ಭೈರಪ್ಪನವರ ಮಂದ್ರ ಕಾದಂಬರಿಯೂ ಸಂಗೀತಗಾರರ ಕುರಿತಾಗಿಯೇ ಇದೆ.

ರಂಜನೀ ಕೀರ್ತಿ ಅವರ ಕಾದಂಬರಿ ‘ಪಸಾ’ ಇವೆಲ್ಲದರ ನಡುವೆ ವಿಶಿಷ್ಟವಾಗಿ ನಿಲ್ಲುವುದು ಅವರು ಆರಿಸಿಕೊಂಡ ಕಥಾಹಂದರದ ಕಾರಣದಿಂದಾಗಿ. ಈ ಕಾದಂಬರಿ ಸಂಗೀತಪ್ರಧಾನ ಹೌದು. ಆದರೆ ಭಾವಪ್ರಧಾನ ಅಲ್ಲ. ಇದೊಂದು ರೋಚಕವಾದ ಥ್ರಿಲ್ಲರ್. ಕಣ್ಮರೆ, ಹುಡುಕಾಟ, ಸ್ನೇಹ, ನಯವಂಚನೆ, ಪಿತೂರಿ ಮತ್ತು ಹುನ್ನಾರಗಳ ಕತೆಯನ್ನು ಸಂಗೀತದ ಜತೆ ಹೆಣೆಯುತ್ತಾ ಹೋಗಿದ್ದಾರೆ ರಂಜನೀ.

ಇದೊಂದು ಮಾತಿನ ಪಂಚಾಂಗದ ಮೇಲೆ ಕಟ್ಟಿದ ಸಂಗೀತ ಮಹಲು. ಸಂಗೀತವೇ ಕತೆಯನ್ನು ಮುನ್ನಡೆಸುತ್ತಾ ಹೋಗುತ್ತದೆ. ಈ ಕತೆಯಲ್ಲಿ ಬರುವ ಎಲ್ಲಾ ಪಾತ್ರಗಳೂ ಸಂಗೀತದ ತಂತುವಿನಿಂದಲೇ ಬೆಸೆಯಲ್ಪಟ್ಟಿವೆ. ಯಾವ ಸಂಗೀತ ಹಲವರನ್ನು ಬೆಸೆದಿದೆಯೋ ಅದೇ ಅವರನ್ನು ದೂರ ದೂರ ಮಾಡುತ್ತದೆ ಕೂಡ. ಹೀಗೆ ಒಂದು ರಾಗವನ್ನು ವಿಸ್ತರಿಸುವಂತೆ ರಂಜನೀ, ಕತೆಯನ್ನು ಹಲವು ಸ್ತರಗಳಿಗೆ ಏರಿಸುತ್ತಾ ಹೋಗುತ್ತಾರೆ. ಅದು ಅಂತಿಮವಾಗಿ ಸಫಲಗೊಳ್ಳುವುದು ಗುರುಶಿಷ್ಯ ಸಂಬಂಧದ ಪಾವಿತ್ರ್ಯವನ್ನು ಎತ್ತಿಹಿಡಿಯುವಲ್ಲಿ.

ಸಂಗೀತವೇ ಕುರುಹು, ಸಂಗೀತವೇ ಸುಳಿವು, ಸಂಗೀತವೇ ಹಾದಿ, ರಾಗವೇ ಸೂಚನೆ, ರಾಗವೇ ನಿಗೂಢ ತಾಣಗಳಿಗೆ ಕರೆದೊಯ್ಯುವ ಮಾರ್ಗ. ಇಡೀ ಕತೆಯ ಪರಿಸರ ಕೂಡ ಅತ್ಯಂತ ವಿಶಿಷ್ಟವಾಗಿದೆ. ಪ್ರಕೃತಿ, ಪರಿಸರ, ರಾಗ ಮತ್ತು ರಂಜನೆ ಬೆರೆತಿರುವ ಈ ಕಥಾನಕ ಶರವೇಗದಲ್ಲಿ ಸಾಗುತ್ತದೆ. ಕ್ಷಣಕ್ಷಣಕ್ಕೂ ಕತೆ ದಿಕ್ಕು ಮತ್ತು ದೆಸೆ ಬದಲಾಗುತ್ತಾ ಹೋಗುತ್ತದೆ.

ಕಾದಂಬರಿಯ ಜೀವಾಳ ಎಂದರೆ ಸಂಭಾಷಣೆ ಎಂಬುದು ನನ್ನ ನಂಬಿಕೆ. ಕಾದಂಬರಿಯಲ್ಲಿ ಕನಿಷ್ಟ ಅರ್ಧದಷ್ಟಾದರೂ ಮಾತುಕತೆಯಿರಬೇಕು. ಪಸಾ ಕಾದಂಬರಿಯ ಮೈತುಂಬ ಮಾತಿದೆ. ಸಂಗೀತ ಕಲಿಯದವನು ಸಂಗೀತ ಹಾಡುತ್ತಾನೆ, ಸಂಗೀತ ಕಲಿತವರು ಮಾತು ಅರ್ಥವಾಗದವರಿಗೆ ಸಂಗೀತದ ಮೂಲಕವೇ ಅರ್ಥಮಾಡಿಸುತ್ತಾರೆ. ಸಂಗೀತವೇ ರೋಚಕವಾದ ತಿರುವುಗಳನ್ನೂ ನೀಡುತ್ತಾ ಹೋಗುತ್ತದೆ.

ರಂಜನೀ ಕೀರ್ತಿ ಸಂಗೀತದಲ್ಲಿ ಸಾಧನೆ ಮಾಡಿದವರು. ಶಾಸ್ತ್ರೀಯವಾಗಿ ಸಂಗೀತ ಕಲಿಯುವುದರ ಜತೆಗೇ ತಂತ್ರಜ್ಞಾನದ ಹಿನ್ನೆಲೆಯಲ್ಲೂ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಕಾಲದಲ್ಲಿ ಸಂಗೀತ ಹೇಗೆಲ್ಲ ಆಧುನಿಕ ತಾಂತ್ರಿಕತೆಯೊಳಗೆ ಬೆರೆತುಹೋಗಬಹುದು ಮತ್ತು ಅದನ್ನು ಹೇಗೆ ಬಹುರಾಷ್ಟ್ರೀಯ ಸಂಸ್ಥೆಗಳು ಬಳಸಿಕೊಳ್ಳಬಹುದು ಅನ್ನುವುದನ್ನೂ ಅವರಿಲ್ಲಿ ಸೂಚಿಸುತ್ತಾರೆ.

ಹೊಸದರ ಹುಡುಕಾಟ, ಅಪೂರ್ವ ಉತ್ಸಾಹ, ಎಲ್ಲವನ್ನೂ ಬೆರಗಿನಿಂದ ನೋಡುವ ಮನೋಭಾವ ಮತ್ತು ಬಹುಮುಖ ಪ್ರತಿಭೆಯ ರಂಜನೀ ಕೀರ್ತಿ ಬರೆದಿರುವ ಈ ಕಾದಂಬರಿ ಅವರನ್ನು ಈ ಹೊಸ ಜಗತ್ತಿನ ಖಾಯಂ ಪ್ರಜೆಯನ್ನಾಗಿ ಮಾಡಲಿ. ಸಂಗೀತದಂತೆ ಅಕ್ಷರವೂ ಅವರಿಗೆ ಒಲಿಯಲಿ ಎಂದು ಹಾರೈಸುತ್ತೇನೆ.
ಇದು ಮ್ಯೂಸಿಕಲ್ ಥ್ರಿಲ್ಲರ್ ಆಗಿರುವುದರಿಂದ, ನಾನು ಪಾತ್ರಗಳ ಕುರಿತು ಬರೆದಿಲ್ಲ. ಆ ಬೆರಗು ನಿಮಗೆ ಓದುತ್ತಾ ದಕ್ಕಲಿ ಎನ್ನುವುದು ನನ್ನ ಆಶಯ. ಇದು ನನಗೆ ಕೊಟ್ಟ ಸಂತೋಷವನ್ನು ನಿಮಗೂ ಕೊಡುತ್ತದೆ ಎಂದು ನಂಬಿದ್ದೇನೆ.

‍ಲೇಖಕರು avadhi

December 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: