ಅನುಪಮಾ ಪ್ರಸಾದ್ ಕಂಡಂತೆ ‘ನಾಗಂದಿಗೆಯೊಳಗಿಂದ’

ಅನುಪಮಾ ಪ್ರಸಾದ್

ಊರ ಹಕ್ಕಿಯ ಜೀವನಾಡಿ

ನಾಗಂದಿಗೆಯೊಳಗಿಂದ (ಬಿ ಎಮ್ ರೋಹಿಣಿಯವರ ಜೀವನ ಕಥನ)

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ
ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯಾ ಕೂಡಲ ಸಂಗಮ ದೇವ

ಎಂಬಂತೆ ಯಾವುದೇ ಹಿನ್ನೆಲೆ, ಪ್ರಭಾವಳಿಯಿಲ್ಲದೆ, ಶಿರವನ್ನೇ ಹೊನ್ನಕಳಶವಾಗಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡವರು ಬಿ.ಎಮ್.ರೋಹಿಣಿ.

‘ನಾಗಂದಿಗೆಯೊಳಗಿಂದ’ ಇದು ಬಿ.ಎಮ್. ರೋಹಿಣಿಯವರ ಜೀವನ ಕಥನ. ಅಶೋಕ ವರ್ಧನರ ಕಾಳಜಿಯಿಂದಾಗಿ ಅವರ ಬ್ಲಾಗಲ್ಲಿ ಮೊದಲು ಪ್ರಕಟಗೊಂಡು ನಂತರ ಪುಸ್ತಕ ರೂಪದಲ್ಲಿ 2019ರಲ್ಲಿ ಬಂತು. 38 ಅಧ್ಯಾಯಗಳನ್ನೊಳಗೊಂಡು 278 ಪುಟಗಳಿಂದ ಕೂಡಿದೆ. ಹೊಸಿಲು ದಾಟುತ್ತಿರುವ ರೋಹಿಣಿಯವರ ಭಾವಚಿತ್ರವಿರುವ ಮುಖಪುಟವಂತು ಮೌನವಾಗಿ ನೋಟದಿಂದಲೇ ಎಷ್ಟೊ ಸಂಗತಿಗಳನ್ನು ನಮ್ಮೆದೆಗೆ ದಾಟಿಸುತ್ತದೆ.

ನಾಗಂದಿಯೊಳಗೆ ನಾವು ಹೆಣಕ್ಕಳು ಏನೇನನ್ನೋ ಹಾಕಿಡುತ್ತೇವೆ. ಬೇಕಾದಾಗ ಬೇಕಾದಷ್ಟು ತೆಗೆದುಕೊಂಡು ಮತ್ತೆ ಅದನ್ನ ನಾಗಂದಿಗೆ ಮೂಲೆಗೆ ತಳ್ಳುತ್ತೇವೆ. ಹಾಗೆಯೇ ನೆನಪುಗಳೂ ಮರೆಯಾಗಿಯೋ ಮರೆಯಾಗಿಸಿಯೋ ಎಂದು ಹೇಳಿಕೊಳ್ಳುವ ರೋಹಿಣಿಯವರ ಮಾತಿನಲ್ಲೇ ಇದು ಸೂಚ್ಯವಾಗಿದೆ. ಇದು ಕೇವಲ ನಾನು ಕೇಂದ್ರಿತವಲ್ಲದೆಯೇ ತನ್ನನ್ನೂ, ಕುಟುಂಬವನ್ನೂ ಒಳಗೊಂಡು ತಾನು ಬದುಕಿದ ಊರಿನ ವಿವಿಧ ಲಯಗಳನ್ನೂ ಹಿಡಿದಿಟ್ಟುಕೊಂಡು ವ್ಯಕ್ತಿ ಕಥನವಾಗಿಯೂ ಜೊತೆಜೊತೆಗೆ ಊರಿನ ಸಮಾಜೊ ಸಾಂಸ್ಕೃತಿಕ ಕಥನವಾಗಿಯೂ ಗೋಚರಿಸುತ್ತದೆ.

ಒಂದು ಪ್ರದೇಶದ ಸಮಾಜ ಶಾಸ್ತ್ರೀಯ ನೋಟವನ್ನೂ, ಕಟ್ಟಲ್ಪಟ್ಟ ಸಾಮಾಜಿಕ ವ್ಯವಸ್ಥೆಯಲ್ಲಿರುವ ಒಳಿತು ಕೆಡುಕುಗಳನ್ನು ಗುರುತಿಸುತ್ತ, ಒಂದು ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಇದೆಲ್ಲ ಹೇಗೆ ಸಾಧನವಾಗುತ್ತದೆಂಬುದನ್ನೂ ಕಾಣಿಸುತ್ತದೆ. ನಿಜಕ್ಕು ಇದನ್ನು ಜೀವನ ಕಥನವೆಂದು ಕರೆದಿರುವುದು ಸೂಕ್ತವಾಗಿದೆ. 

ಪುಟ ತೆರೆಯುವ ಮುನ್ನ ತನ್ನ ಮಾತಿನಲ್ಲಿ ಬಿ.ಎಮ್.ರೋಹಿಣಿ ಹೇಳುತ್ತಾರೆ, ‘ಸಮಾಜದೊಂದಿಗೆ ಗಟ್ಟಿಯಾದ ಭಾಂದವ್ಯವನ್ನು ಬೆಳೆಸಿಕೊಂಡು ನಾನು ಕಂಡುಕೊಂಡ ಸತ್ಯವೇನೆಂದರೆ ನಮ್ಮ ಸುತ್ತ ಮುತ್ತಲೂ ಸಮಾಜವೇ ಕಟ್ಟಿದ ಗೋಡೆಗಳನ್ನಾದರೂ ಸುಲಭದಲ್ಲಿ ಕೆಡವಬಹುದು. ಆದರೆ, ನಮ್ಮ ಮನಸಿನಲ್ಲಿ ನಾವೇ ಕಟ್ಟಿಕೊಂಡ ಗೋಡೆಗಳನ್ನು ಅಲ್ಲಾಡಿಸುವುದು ಬಿಡಿ, ಮುಟ್ಟುವುದಕ್ಕೂ ಸಾದ್ಯವಿಲ್ಲ. ಅಂತಹ ಭ್ರಮೆಗಳ ಬಂಧನದಲ್ಲಿ ಒಂದು ರೀತಿಯಲ್ಲಿ ಕೈದಿಗಳಾಗಿ ನಾವಿದ್ದೇವೆ.’ ಇದು ಎಲ್ಲರಿಗೂ ಅನ್ವಯಿಸುವ ಮಾತೇ ಆಗಿದ್ದರೂ ಹೆಣ್ಣು ಮಕ್ಕಳ ವಿಷಯದಲ್ಲಿ ಹೆಚ್ಚು ಅನ್ವಯಿಸುವಂತದ್ದು. 

ಕೆಲವು ವಿಚಾರಗಳಲ್ಲಿ ಅದರಲ್ಲೂ ಒಳ ಲೋಕದ ಸೂಕ್ಷ್ಮ ಸನ್ನಿವೇಶಗಳನ್ನು ಹೇಳುವಾಗಲಂತು ಆ ಗೋಡೆ ಅಲ್ಲಾಡಿಸುವ ಗೋಜಿಗೆ ರೋಹಿಣಿಯವರು ಹೋಗಲಿಲ್ಲ. ಅದರ ಸ್ಪಷ್ಟ ಅರಿವಿರುವುದರಿಂದಲೇ ಅವರು ಕೆಲವಷ್ಟನ್ನು ಮರೆಯಾಗಿರಿಸಿದ್ದನ್ನ ಸೂಚ್ಯವಾಗಿಯೇ ಹೇಳಿಕೊಂಡಿರುವುದು. ವಿಶೇಷವೆಂದರೆ ಸಾಮಾನ್ಯವಾಗಿ ಹುಟ್ಟಿನಿಂದಲೇ ಹೆಣ್ಣು ಮಗುವನ್ನು ಹೆಣ್ಣಿನ ನಡವಳಿಕೆ ಹೀಗೆಯೇ ಇರಬೇಕೆಂಬಂತೆ ತರಬೇತುಗೊಳಿಸಲಾಗುತ್ತದೆ. ಆದರೆ, ರೋಹಿಣಿಯವರ ವಿಚಾರದಲ್ಲಿ ಇದು ತದ್ವಿರುದ್ಧ. ಇವರಿಗಿಂತ ಮುಂಚೆ ಹುಟ್ಟಿದ ಮಕ್ಕಳೆಲ್ಲ ಶೈಶವದಲ್ಲೆ ತೀರಿಕೊಂಡಿದ್ದರಿಂದ ತಂದೆ ಇವರನ್ನು ಎಂಟನೆ ವಯಸ್ಸಿನವರೆಗೂ ಹುಡುಗನಂತೆಯೇ ಬೆಳೆಸುತ್ತಾರೆ.

ಚಿಕ್ಕ ಮಗು ರೋಹಿಣಿಯನ್ನು ಕಂಡಾಗ ‘ದೇವರು ನಿನ್ನ ತಲೆಯನ್ನು ಬಿಸಾಡಿ ಹೋಗಲಿ’ ಎಂಬ ಪಕ್ಕದ ಮನೆ ಅಜ್ಜಿಯ ಮಾತು ಸಾಲು ಸಾಲು ಮಕ್ಕಳನ್ನು ಕಳೆದುಕೊಂಡ ಆ ತಂದೆ ತಾಯಿಯ ನೋವಿಗೆ ಧ್ವನಿಯಾಗುತ್ತದೆ. ಆದರೆ, ತಮ್ಮನ ಹುಟ್ಟಿನ ನಂತರ ‘ನನ್ನನ್ನು ಇಂಚು ಇಂಚಾಗಿ ಹೆಣ್ಣಾಗಿಸುವ ಪ್ರಕ್ರಿಯೆ ಆರಂಭವಾಯಿತು’ ಎಂದು ಹೇಳುವ ಲೇಖಕಿ ಇಂತಹ ಲೋಕರೂಢಿಗೆ ಬಾಗಿಯೂ ತನ್ನ ತಂದೆ ತನಗೆ ನೀಡಿದ ಪ್ರೋತ್ಸಾಹ, ಬೆಂಬಲದಿಂದಾಗಿಯೇ ಬಾಲ್ಯದಲ್ಲಿ ತನನ್ನು ಕಾಡಿದ ಚರ್ಮ ರೋಗದಿಂದ ಆರೋಗ್ಯಕ್ಕೆ, ರೂಪಕ್ಕೆ ಕುಂದುಂಟಾಗಿ ಕೀಳರಿಮೆಗೊಳಗಾಗಿಯೂ ಅದನ್ನು ಮೆಟ್ಟಿ ಸ್ವಂತ ಕಾಲ ಮೇಲೆ ನಿಲ್ಲಲು ಸಾಧ್ಯವಾಗಿದ್ದನ್ನು ಹೇಳುತ್ತ ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಬೆಂಬಲ ಎಷ್ಟು ಅವಶ್ಯ ಎಂಬುದನ್ನು ಕಾಣಿಸುತ್ತಾರೆ.

ಅಪ್ಪನಿಗೆ ಮಗಳ ಮೇಲಿನ ಪ್ರೀತಿ ಅಪರಿಮಿತ. ಮಗಳು ಬೀಡಿ ಕಟ್ಟುವಾಗ ಅಸ್ತಮಾ ಇರುವ ಈ ಅಪ್ಪ ಎಲೆಗಳನ್ನು ಕತ್ತರಿಸಿ ಕೊಡುವ, ಇಪ್ಪತೈದರ ಕಟ್ಟು ಕಟ್ಟುವ ಕೆಲಸಗಳಲ್ಲಿ ನೆರವಾಗುತ್ತಿದ್ದ ರೀತಿಯಲ್ಲೆಲ್ಲ ಇದು ವ್ಯಕ್ತವಾಗುತ್ತದೆ. ಬಡತನದ ಬದುಕನ್ನು ಸ್ವಾವಲಂಬಿತನದಿಂದ ನಿಲ್ಲಿಸಲು ಅಪ್ಪನ ಬೆಂಬಲ, ಪ್ರೋತ್ಸಾಹ ಸದಾ ಬೆನ್ನಿಗಿದ್ದಿದ್ದನ್ನು ಹೇಳುತ್ತಲೇ ಲೇಖಕಿ, ‘ಮಾತಿನಲ್ಲೇ ಅರಮನೆ ಕಟ್ಟುವ ನನ್ನ ಅಪ್ಪ ಕ್ರಿಯಾತ್ಮಕವಾಗಿ ಸೋತದ್ದೆಲ್ಲಿ ಎಂದು ಪರಿಶೀಲಿಸಿದಾಗ ಅವರ ಇಚ್ಚಾಶಕ್ತಿಯ ಕೊರೆತೆ ಮತ್ತು ಚಂಚಲ ಪ್ರವೃತ್ತಿಯೇ ಕಾರಣ ಎಂದು ತಿಳಿಯಿತು’ ಎಂದು ವಿಮರ್ಶಿಸುತ್ತಾರೆ. ತನ್ನ ಬಗ್ಗೆಯೂ ಇಂತದೇ ಆತ್ಮ ವಿಮರ್ಶೆಗಿಳಿಯುತ್ತಾರೆ.

ರೋಹಿಣಿಯವರ ಈ ಗುಣ ಅವರ ಅಧ್ಯಾಪನ ವೃತ್ತಿಯ ಅನುಭವಗಳ ಬಗ್ಗೆ ಹೇಳುವಾಗ ಬಹಳಷ್ಟು ಕಡೆ ಕಾಣಸುತ್ತದೆ. ವೃತ್ತಿ ಬದುಕಿನ ಬಗ್ಗೆ ಬರೆಯುವಾಗ ಅಧ್ಯಾಪಿಕೆಯ ಆತ್ಮಶೋಧದ ದಾರಿ ಹಿಡಿಯುತ್ತದೆ ರೋಹಿಣಿಯವರ ಬರವಣಿಗೆ. ನಿಖರ ನಿಷ್ಠುರ ಸ್ವ ಶೋಧವಿದೆ ಈ ಭಾಗದಲ್ಲಿ. ನಡೆದು ಸಾಗಿದ ದಾರಿಯ ನೆನಪನ್ನು ಆ ದಿನಗಳಿಗೇ ಹೋಗಿ ಆ ಸಮಯದಲ್ಲಿ ತನ್ನ ವರ್ತನೆಯನ್ನು ಪುನರ್ ವಿಮರ್ಶೆಗೊಳಪಡಿಸುತ್ತ ಒಳ ಶೋಧಕ್ಕೆ ತೊಡಗುತ್ತಾರೆ. ಎಲ್ಲವನ್ನೂ ಬೆರಗಿನಿಂದ ನೋಡುವ ರೋಹಿಣಿಯವರ ಗುಣ ಹಾಗು ವಿವೇಕದ ಒಳಗೊಳ್ಳುವಿಕೆ ಕೃತಿಯುದ್ದಕ್ಕು ಕಾಣಿಸುತ್ತದೆ.

‘ಈಗ ನಮ್ಮ ಕಣ್ಣ ಮುಂದೆ ಇರುವ ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳು 70-80 ವರ್ಷಗಳ ಹಿಂದೆ ತೀರಾ ದರಿದ್ರ ಸ್ಥಿತಿಯಲ್ಲಿತ್ತು ಎಂಬ ಸತ್ಯ ನನ್ನ ಕಣ್ಣ ಮುಂದಿದೆ. ಆ ದಾರಿದ್ರ್ಯವು ಎಲ್ಲಾ ವರ್ಗ, ಜಾತಿ, ಸಮುದಾಯಗಳಲ್ಲು ವ್ಯಾಪಿಸಿತ್ತು. ಆರ್ಥಿಕ ದಾರಿದ್ರ್ಯದ ಜೊತೆ ಶೈಕ್ಷಣಿಕ ದಾರಿದ್ರ್ಯ, ಸಾಂಸ್ಕೃತಿಕ ದಾರಿದ್ರ್ಯದಿಂದಲೂ ಬಳಲುತ್ತಿದ್ದ ಕುಟುಂಬಗಳೇ ಆಗ ಹೆಚ್ಚಿದ್ದವು. ಅಂತಹ ಒಂದು ಕುಟುಂಬದಲ್ಲಿ ಹುಟ್ಟಿದ ನಾನು..’ ಎಂದು ಮುಂದುವರಿಯುವ ಲೇಖಕಿಯ ಈ ಮಾತುಗಳೇ ಈ ಕೃತಿಯ ಒಳಗೊಳ್ಳುವಿಕೆ ಹೇಗಿದೆಯೆಂಬುದನ್ನು ಸೂಚಿಸುತ್ತದೆ.   

ತಾನು ಒಂದುವರೆ ವರ್ಷದವಳಿದ್ದಾಗ ಒಲೆಯ ಮುಂದೆ ಕುಳಿತು ಕುದಿಯುತ್ತಿರುವ ಕಷಾಯ ಕೆಳಗಿಳಿಸುತ್ತಿರುವ ತಾಯಿಯ ಬೆನ್ನ ಹಿಂದಿನಿಂದ ಮೆಲ್ಲನೆ ಕೈಕೊಟ್ಟು ನಿಲ್ಲಲು ಪ್ರಯತ್ನ ಮಾಡಿ ಬ್ಯಾಲೆನ್ಸ್ ತಪ್ಪಿ ಪಾತ್ರೆಯ ಒಳಗೆ ಕೈ ಮುಳುಗುವಂತಾದ ಸನ್ನಿವೇಶ ತನಗೆ ನೆನಪಿಲ್ಲದಿದ್ದರೂ, ತಾಯಿ ಬದುಕಿರುವವರೆಗೂ ಅದನ್ನು ಆಗಾಗ ಹೇಳಿ ಶಿಶು ಆ ನೋವು ಹೇಗೆ ಸಹಿಸಿರಬಹುದು ಎನ್ನುತ್ತ ಹನಿಗಣ್ಣಾಗುತ್ತಿದ್ದ ಪ್ರಸಂಗವನ್ನು ಹೇಳುವ ರೋಹಿಣಿಯವರು ನೋವು ಸಹಿಸಲು ತನಗದು ಮೊದಲ ತರಬೇತಿ ಇದ್ದಿರಬೇಕು ಎಂದು ಹಾಸ್ಯ ಧಾಟಿಯಲ್ಲಿ ತತ್ವದ ಮೊರೆ ಹೋಗಿ ಸಮಚಿತ್ತ ಕಾಯ್ದುಕೊಳ್ಳುತ್ತಾರೆ.

ಇಡೀ ಕಥನದಲ್ಲಿ ಅಪ್ಪನ ಅಸಡ್ಡಾಳತನವನ್ನೆಲ್ಲ ಸಹಿಸಿಕೊಂಡು ಕುಟುಂಬ ಪೊರೆಯಲು ಟೊಂಕ ಕಟ್ಟಿ ನಿಂತ ಅಮ್ಮನ ಅನಿರೀಕ್ಷಿತ ಧಾರುಣ ಅಂತ್ಯವನ್ನು ದಾಖಲಿಸುವಾಗ ಮಗಳ ತಲ್ಲಣಗಳು ಭೋರ್ಗರೆದಿವೆ. ಸಣ್ಣ ಉಪಕಾರವನ್ನೂ ಸ್ಮರಣೆಯಾಗಿಸುವ ಲೇಖಕಿ ತನಗೆದುರಾದ ಅಸಹನೀಯ ಸಂದರ್ಭಗಳಿಗೆ ವೈಯಕ್ತಿಕ ನೆಲೆಯಲ್ಲಿ ಯಾರನ್ನೂ ದೂರದೆ ಆ ವ್ಯಕ್ತಿಯ ಅಂತಹ ವರ್ತನೆಗೆ ಕಾರಣವಾಗಿರಬಹುದಾದ ಸಾಮಾಜಿಕ ಕಾರಣಗಳನ್ನು ಚರ್ಚಿಸುತ್ತ ನಮ್ಮ ಗಮನವನ್ನು ಅತ್ತ ಸೆಳೆದು ಬದುಕಿನ ತಾತ್ವಿಕ ಜಿಜ್ಞಾಸೆಗಿಳಿಯುತ್ತಾರೆ.

ಪುಟ 47ರಲ್ಲಿ ಬಿ.ಎಮ್. ರೋಹಿಣಿಯವರು ಸಾಂದರ್ಭಿಕವಾಗಿ ‘ತಿಳಿದು ನೋಡಿದರೆ ಬಾಳು ಋಣದ ರತ್ನದ ಗಣಿಯೊ.. ಎನಿತು ಜನಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೊ..’ ಎಂಬ ಕವಿ ಸಾಲನ್ನು ಉಲ್ಲೇಖಿಸುತ್ತಾರೆ. ಈ ಸಾಲು ಸಾಂದರ್ಭಿಕವಾಗಿ ಬಳಸಲ್ಪಟ್ಟಿದ್ದರೂ ಈ ಕೃತಿಯುದ್ದಕ್ಕು ಇರುವ ಇಂತಹ ಒಂದು ವಿನಮ್ರತೆಯ ಹರಿವು ನಮ್ಮ ಅನುಭವಕ್ಕೆ ಬರುತ್ತದೆ.

ಈ ಕಥನದ ಕೊನೆಯ ಸಾಲು ತಲುಪಿದಾಗ, ತನ್ನ ಅತಿ ಖಾಸಗಿಯಾದ ಒಳಲೋಕದ ಬದುಕಿಗೆ ಸ್ಪಂದಿಸಿದ್ದಕ್ಕಿಂತ ಜಾಸ್ತಿ ಕುಟುಂಬ, ತಾನು ಒಡನಾಡಿದ ಲೋಕದ ಬದುಕನ್ನು ತನ್ನದಾಗಿಸಿಕೊಂಡು ಸ್ಪಂದಿಸಿದ್ದಾರೆ ಅನಿಸಿ ಒಂದು ನಿಡುಸುಯಿಲು ಹೊರ ಬೀಳುತ್ತದೆ. ಲೇಖಕಿಯನ್ನು ಸಂತ ತನದ ಮನಸ್ಥಿತಿಗೆ ಅಂಟಿಕೊಳ್ಳುವಂತೆ ಮಾಡಿದ ಸುತ್ತಲಿನ ವ್ಯವಸ್ಥೆಯ ಅಗೋಚರ ಸಂಗತಿಗಳು ಕಾಡಲಾರಂಭಿಸುತ್ತವೆ. 

‍ಲೇಖಕರು Avadhi

March 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: