Act 1978: ಗೀತ ಪಾತ್ರದ ಅನುಭವ ನನಗೂ ಆಗಿತ್ತು…

ಮಧುಸೂದನ ವೈ ಎನ್

Act 1978 ಸಿನಿಮಾ ನೋಡಿದೆ. ಚಿತ್ರದ ಮೊದಲಾರ್ಧ ತಾಂತ್ರಿಕ ಗುಣಮಟ್ಟ ದೃಷ್ಟಿಯಿಂದ ನೀರಸವೆನಿಸಿದರೂ ದ್ವಿತೀಯಾರ್ಧ ಭಾವನಾತ್ಮವಾಗಿ ಗೆದ್ದು ಕಣ್ಣಲ್ಲಿ ನೀರು ತರಿಸಿತು. ನೋಡಬಹುದಾದ ಒಳ್ಳೆಯ ಸಿನಿಮಾ. ಒಂದಾನೊಂದು ಕಾಲದಲ್ಲಿ ಗೀತ ಪಾತ್ರದ ಅನುಭವ ನನಗೂ ಆಗಿದ್ದು ನೆನಪಿಸಿತು.

ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಸೇರಿದ್ದ ಸಮಯ. ಹೊರಗಿನವ. ವಿದ್ಯಾಭ್ಯಾಸಕ್ಕೆ ಯೋಗ್ಯ ನೆಲೆ ಸಿಕ್ಕಿರಲಿಲ್ಲ.  ವಸಂತ ನಗರದ  ಹಾಸ್ಟೆಲ್; ಮನುವನದ ಮಠ; ನವರಂಗ್ ಬಳಿಯ ಹಾಸ್ಟೆಲ್; ಜೆಪಿನಗರ, ರಾಜಾಜಿ ನಗರ, ರಾಜರಾಜೇಶ್ವರಿ ನಗರ… ಬೆಂಗಳೂರನ್ನು ವಿಪರೀತ ಅಲೆದಿದ್ದೆ. ನನಗೆ ಈ ನಗರದ ಮೂಲೆ ಮೂಲೆ ಪರಿಚಯವಿರುವುದೇ ಹೀಗೆ. ಉಚಿತ ಹಾಸ್ಟೆಲ್ ಹುಡುಕುತ್ತಿದ್ದೆ. ಒಬಿಸಿ ಹಾಸ್ಟೆಲ್ಲಿನ ಮಾಹಿತಿ ಸಿಕ್ಕಿತ್ತು.  ವಿಧಾನಸೌಧದ ಸಮೀಪದಲ್ಲಿರುವ ವಿಶ್ವೇಶ್ವರಯ್ಯ ಕೇಂದ್ರದ ಬಿಲ್ಡಿಂಗ್ ನಲ್ಲಿ ಹಿಂದುಳಿದ ವರ್ಗದ ಕಛೇರಿಯಿತ್ತು. ಜೆಪಿನಗರದಿಂದ ಹೊರಟು ರಾಜರಾಜೇಶ್ವರಿ ನಗರದಲ್ಲಿನ ಕಾಲೇಜು ‌ಮುಗಿಸಿಕೊಂಡು ವಿಧಾನಸೌಧ ತಲುಪಿ ದಿನದ ಕೊನೆಯ ಭಾಗವನ್ನು ಒಬಿಸಿ ಕಛೇರಿಯಲ್ಲಿ ಕಳೆದು ಪುನಃ ಜೆಪಿನಗರಕ್ಕೆ ಹಿಂದಿರುಗುತ್ತಿದೆ.

ಪ್ರತಿನಿತ್ಯ ಅರ್ಧ ಬೆಂಗಳೂರು ಪ್ರದಕ್ಷಿಣೆ. ಅದೆಷ್ಟು ದಿವಸಗಳು ನೆನಪಿಲ್ಲ. ಈವತ್ತು ಬಂದಿಲ್ಲ, ಈ ವಾರ ರಜೆ, ನಾಳೆ ಬರ್ತಾರೆ, ಬರ್ತಾರೆ ಕೂತ್ಕೊಳಿ, ಇವಾಗ ಎಲೆಕ್ಷನ್ನು, ಮೀಟಿಂಗಿಗೆ ಹೋಗಿದ್ದಾರೆ…ಹೀಗೆ. ಹಾಸ್ಟೆಲ್ಲಿನ ಸೀಟು ಪಡೆಯಲು ಇದ್ದ ಪ್ರೊಸೆಸ್‌ ಏನಂದರೆ ವರ್ಷಕ್ಕೊಮ್ಮೆ ಯಾವಾಗಲೋ ಯಾವುದೋ ಪತ್ರಿಕೆಯ ಮೂಲೆಯಲ್ಲಿ ವರದಿ ಪ್ರಕಟಿಸಿ ಕಾಲ್‌ ಮಾಡ್ತಾರೆ, ಜಾತಿ, ಆದಾಯ, ಊರಿಂದ ಎಷ್ಟು ಕಿಲೋಮೀಟರ್‌ ದೂರ ಇತ್ಯಾದಿ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಅರ್ಜಿ ಹಾಕಬೇಕು; ಆಯ್ಕೆಯಾಗಬೇಕು.

ಬನಶಂಕರಿ ಹಾಸ್ಟೆಲ್ಲಿನ ನೋಟಿಸ್‌ ಬೋರ್ಡ್‌ ಮೇಲೆ ಹಿಂದಿನ ವರ್ಷದ ಆಯ್ಕೆ ಪಟ್ಟಿ ಇತ್ತು, ಅದರಲ್ಲಿದ್ದ ಪ್ರತಿಯೊಬ್ಬರನ್ನು ವಿಚಾರಿಸಿದೆ. ಎಲ್ಲರೂ ಬಡವರೇ, ಒಬಿಸಿ ವರ್ಗಕ್ಕೆ ಸೇರಿದವರೇ. ದೂರದಿಂದ ಬಂದವರೇ. ಆದರೆ ಅವರೆಲ್ಲ ಯಾರ ಯಾರದೊ ಕೈಯೋ ಕಾಲೊ ಹಿಡಿದು ತಮ್ಮ ತಮ್ಮ ಕ್ಷೇತ್ರದ ಎಂಪಿ ಎಮ್ಮೆಲ್ಲೆಗಳ ಶಿಫಾರಸ್ಸಿನ ಪತ್ರಗಳನ್ನೂ ಲಗತ್ತಿಸಿ ಸೀಟು ಪಡೆದಿದ್ದರು. ಅಂಥದೇನು ಇಲ್ಲದೆ ಸೀಟು ಸಿಗಲ್ಲವೆಂದು ನನಗೆ ಖಾತ್ರಿಯಾಯಿತು. ಹಾಗೆ ನೋಡಿದರೆ ಅರ್ಜಿ ಪ್ರಮಾಣ ಪತ್ರ ಆಯ್ಕೆ ಇವೆಲ್ಲ ನಾಮಕಾವಸ್ತೆ; ಮಂತ್ರಿ/ಅಧಿಕಾರಿ/ಮಠಾಧಿಪತಿಗಳ ಶಿಫಾರಸ್ಸಿದ್ದರೆ ನೇರ ನುಗ್ಗಬಹುದಿತ್ತು. ಇದು ಬರಿ ಒಬಿಸಿ ಹಾಸ್ಟೆಲ್ಲಿನಲ್ಲಿ ಮಾತ್ರವಲ್ಲ, ಮೇಲ್ಕಂಡ ಖಾಸಗಿ ಹಾಸ್ಟೆಲ್ಲು ಮಠಗಳಲ್ಲೂ ಅದೇ ಕತೆ.  ಇವರ ಜೊತೆಗೆ ಅಲ್ಲಿ ʼಡೋನರ್‌ʼ ಸೇರಿಕೊಂಡಿರುತ್ತಾರೆ. ಎಂಥಾ ವ್ಯರ್ಥ ಪ್ರಯತ್ನಕ್ಕಿಳಿದಿದ್ದೆನಂದರೆ ಒಂದು ವರುಷ ಸುತ್ತಿದ್ದರೂ ನನಗೆ ಸೀಟು ಸಿಗುತ್ತಿರಲಿಲ್ಲ.  ‌

ಸಂಬಂಧಿಕರ ಸಹಾಯದಿಂದ ನಮ್ಮ ಊರಿನ ಕಡೆಯವರೇ ಆದ ಮಾಜಿ ಹಿಂದುಳಿದ ವರ್ಗ ಆಯೋಗದ ಅದ್ಯಕ್ಷರ ಸಂಪರ್ಕ ಸಿಕ್ಕಿ ವಯಾಲಿ ಕಾವಲ್ಲಿನ ಆಫೀಸಿಗೆ ತೆರಳಿ ತನ್ನ ಅಳಲನ್ನು ತೋಡಿಕೊಂಡಿದ್ದಕ್ಕೆ ಅವರು ತಮ್ಮ ವಿಸಿಟಿಂಗ್ ಕಾರ್ಡ್ ಹಿಂದೆ ಇವರಿಗೆ ಸಹಾಯ ಮಾಡಿ ಎಂದು ಬರೆದುಕೊಟ್ಟರು. (ಮುಂದೆ ಇವರು ಓದಲಿಕ್ಕೆ ಅನುಕೂಲವಾಗಲೆಂದು  ಕಂಪ್ಯೂಟರ್‌ ಸಹ ಕೊಡಿಸಿದ್ದರು). ಆ ವಿಸಿಟಿಂಗ್ ಕಾರ್ಡು ಎಷ್ಟು ಮಹತ್ವದ್ದಾಗಿತ್ತೆಂದರೆ ಅಂದಿನ ನನ್ನ ಬಸ್ ಪಾಸಿಗಿಂತ ಅತ್ಯಮೂಲ್ಯವಾಗಿತ್ತು.

ಬಸ್ ಪಾಸೇನು ಮಹಾ ಎಂದು ನಿಮಗೆ ಅನಿಸಬಹುದು. ಪಾಸು ಮರೆತು ಬಸ್‌ ಹತ್ತಿದ ದಿವಸ ನಮ್ಮ ಪಾಡು ಬೇಡ, ಎಲ್ಲಿ ಹಿಡಿಯುತ್ತಾರೊ ಎಂದು ಪುಕ ಪುಕ. ಹಿಡಿದರೆ ತಿಂಗಳ ಅನ್ನದ ಖರ್ಚನ್ನು ಗಳಿಗೆಯಲ್ಲಿ  ದಂಡವಾಗಿ ಕಟ್ಟಿಸಿಕೊಳ್ಳುತ್ತಿದ್ದರು. ದಂಡ ಹೋಗಲಿ ಸಾರ್ವಜನಿಕ ಸ್ಥಳದಲ್ಲಿನ ಮರ್ಯಾದೆ! ಎಲ್ಲರ ಮುಂದೆ ಕಳ್ಳರಂತೆ ಮಾಡಿ ಮರ್ಯಾದೆ ತೆಗೆಯುತ್ತಿದ್ದರು ಖಾಕಿ ಯೂನಿಫಾರಮ್ಮಿನ ಪ್ರೊಮೋಟೆಡ್‌ ಕಂಡಕ್ಟರುಗಳು. ಚೆಕಿಂಗ್‌ ಇನ್ಸ್ಪೆಕ್ಟರ್‌ ಹತ್ತುತ್ತಿದ್ದಾನೆ ಎಂಬುದು ತಿಳಿಯುತ್ತಿದ್ದಂತೆ ಟಿಕೆಟ್‌ ಕೊಳ್ಳದವರು ಬಾಗಿಲ ಬಳಿ ನಿಂತು ಇಳಿದು ಓಡುವ ಹುನ್ನಾರ; ಅಥವಾ ಬಸ್ಸಿನ ಹಿಂಬದಿಯ ಸೀಟಿನ ಅಡಿಯಲ್ಲಿ ತೂರಿಕೊಳ್ಳುವುದು; ಎಷ್ಟೊ ಸಲ ತನಗೂ ದಂಡ ಎಂಬ ಭಯದಿಂದ ಕಂಡಕ್ಟರೇ ಅಂಥವರು ಅಡಗಲು ಸಹಾಯ ಮಾಡುತ್ತಿದ್ದುದುಂಟು. ಅದು ನಿಜಕ್ಕೂ ಕಳ್ಳ ಪೋಲೀಸ್‌ ಆಟ. ಇನ್ಸ್ಪೆಕ್ಟರ್ ಗಳು ಫಕ್ಕನೆ ಕುತ್ತಿಗೆಗೆ ಕೈ ಹಾಕಿ ಎಳೆಯುತ್ತಿದ್ದರು. ಎಲ್ಲರ ಸಮಕ್ಷಮ ಹೀನಾಮಾನ ಬೈಯುತ್ತಿದ್ದರು. ಟಿಕೆಟ್‌ ಕೊಳ್ಳದವರು ಹೆಚ್ಚಾಗಿ ಬಡವರು ವಲಸಿಗರು ಹಳ್ಳಿಗರು, ಅಂಥವರಿಗೆ ಸಣ್ಣ ಪ್ರಮಾಣದ ಅಧಿಕಾರಿಯೂ ಧೂರ್ತನೇ ಆಗಿರುತ್ತಾನೆ. 

ಈ ನಗರದಲ್ಲಿ ಬಸ್ ಪಾಸ್/ಟಿಕೆಟ್ ಅಮಾಯಕ ಪ್ರಯಾಣಿಕರ ಮರ್ಯಾದೆಯ ಕ್ರೆಡಿಟ್‌ ಕಾರ್ಡುಎಂದರೆ ತಪ್ಪಲ್ಲ. ಮತ್ತು ಅದೇನು ಉಚಿತವಲ್ಲ. ಹಣ ಕೊಟ್ಟು ಕೊಂಡದ್ದು. ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಉಚಿವೆಂದಿದ್ದ ನೆನಪು. ಈಗೆಲ್ಲ ಸಾಹಿತ್ಯಿಕ ಸ್ನೇಹಿತರು ಕಾರಿಂದ ಕೆಳಗೆ ಇಳೀರಿ ಬಸ್‌ ಹತ್ತಿರಿ ಟ್ರೈನ್‌ ಹತ್ತಿರಿ ಬರಿಲಿಕ್ಕೆ ಕತೆ ಸಿಗುತ್ತದೆ ಎನ್ನುತ್ತಾರೆ. ಶಾ ಸಿಗ್ತದೆ.

ನನ್ನ ಅಷ್ಟೂ ದಿವಸಗಳ ಕಾಯುವಿಕೆಯಲ್ಲಿ ಆ ಕಛೇರಿಯ ಅಧ್ಯಕ್ಷರು (ಸಿನಿಮಾದಲ್ಲಿ ಬರುವ ಥೇಟ್ ವ್ಯವಸ್ಥಾಪಕನ ಹಾವಭಾವ) ಎರಡು ಮೂರು ಸಲ ಕಾಣಿಸಿ ಮರೆಯಾಗಿದ್ದರು. ಈಗ ನನ್ನ ಬಳಿಯೂ ವಿಸಿಟಿಂಗ್‌ ಕಾರ್ಡಿನ ಶಿಫಾರಸ್ಸಿತ್ತಲ್ಲ, ಕಛೇರಿಯಲ್ಲಿನ ಸಹಾಯಕ ವರ್ಗದವರಿಗೆ ಕಾರ್ಡನ್ನು ತೋರಿಸಿದೆ…ಅವರು ಬಗ್ಗಿದರು, ಸಾಹೇಬರಿಗೋಸ್ಕರ ಒಳಗೆ ಕುಳಿತುಕೊಂಡು ಕಾಯಲು ಜಾಗ ದಯಪಾಲಿಸಿದರು. ಅರ್ಥಾತ್ ಅದಕ್ಕೂ ಮುನ್ನ‌ ಆಫೀಸಿನಿಂದ ಹೊರಗೆ ನಿಂತು ಕಾಯಬೇಕಿತ್ತು. ನಿಲ್ಲಲಾಗದೆ ಅಲ್ಲಿ ಇಲ್ಲಿ ಕೂತ ದಿವಸ  “ಎಲ್ಲೋಗಿದ್ರಿ, ನೀವು ಆ ಕಡೆ ಹೋದಾಗ ಸಾಯೇಬ್ರು ಬಂದು ಹೋದ್ರು” ಎಂದು ಅನಾಯಸವಾಗಿ ಪಾಪಪ್ರಜ್ಞೆಯನ್ನು ನನ್ನ ಮೇಲೆ ಎತ್ತಿಹಾಕುತ್ತಿದ್ದರು.

ಛೇರಿಂದ ಚೂರು ಅಳ್ಳಾಡದೆ ಪಟ್ಟಾಗಿ ಕುಳಿತು ಕೊನೆಗೂ ಒಂದಿನ ಅಧ್ಯಕ್ಷರ ಸಂಪರ್ಕ ಸಾಧಿಸಿದೆ. ಆ ದಿನ ಅವರ ಟೇಬಲ್ಲಿನ ಎದುರು ಕುಳಿತು ಬಹಳ ಆಸೆಯಿಂದ ಕಾರ್ಡನ್ನು ತೋರಿಸಿದೆ. ಅವರು ಅದನ್ನು ಡಿಮೋನೆಟೈಸಾದ ನೋಟಿನ ತರಹ ಹಿಂದೆ ಮುಂದೆ ಮಾಡಿ ಮರಳಿಸಿದರು.  ತಿರುಪತಿ ದರ್ಶನದಷ್ಟು ಸಮಯ. ಕುಸಿದೆ.

ಕೈಯಲ್ಲಿ ಶಿಫಾರಸ್ಸಿದೆ, ಏನೊ ಒಂದು ಮೌಲ್ಯದ್ದು; ಆದರೂ ಸೀಟು ಸಿಗ್ತಿಲ್ಲ. ಬೇರೆ ದಾರಿಯಿಲ್ಲ. ಅಕಸ್ಮಾತ್ ಸಹಾಯಕ ಸಿಬ್ಬಂದಿಗೆ ರಿಜೆಕ್ಟ್‌ ಆಗಿದೆ ಅಂತ ಗೊತ್ತಾದರೆ ಹೊರಗೆ ಸಹ ನಿಲ್ಲಲು ಬಿಡುವುದಿಲ್ಲ! ನೀವು ಈ ಸಹಾಯಕ ವರ್ಗದವರ ಧಿಮಾಕನ್ನು ನೋಡಬೇಕು, ಅಸಹಾಯಕರ ಮೇಲೆ ಅದೆಷ್ಟು ದಬ್ಬಾಳಿಕೆ ಅಧಿಕಾರ ಚಲಾಯಿಸುತ್ತಾರೆಂದರೆ ಹೇಳತೀರದು. ಮತ್ತು ಅಂಥವರ ಹಿನ್ನೆಲೆ ಗಮನಿಸಿದರೆ.. ಏನೇನು ಇಲ್ಲ. ಸರಕಾರಿ ಉದ್ಯೋಗ ಸಿಗುತ್ತಿದ್ದಂತೆ ಅದು ಹೇಗೆ ಅಷ್ಟು ದರ್ಪ ಬರಲು ಕಾರಣ ಎಂದು ಅರ್ಥವಾಗದು. ಮೇಲಿನ ಅಧಿಕಾರಿಗಳಿಗೆ ತಗ್ಗಿ ಬಗ್ಗಿ ನಡೆದು ಟೀ ಕೊಟ್ಟು ಬೂಟು ನೆಕ್ಕಿ ಗುಲಾಮಗಿರಿ ಮಾಡಿ.. ಆ ಸಂಕಟವನ್ನೆಲ್ಲ ಹೀಗೆ ತೀರಿಸಿಕೊಳ್ಳುತ್ತಾರೆ ಅನಿಸುತ್ತದೆ. ಈ ಕಾರಣ ನಾನು ಒಳಗೆ ನಡೆದದ್ದನ್ನು ಹೊರಗೆ ಹೇಳಲಿಲ್ಲ. ನಾಳೆ ಬನ್ನಿ ಎಂದಿದ್ದಾರೆ ಎಂದು ದಿವಸ ದೂಡಿದೆ. ಮತ್ತದೇ, ಅಧ್ಯಕ್ಷರಿಗೋಸ್ಕರ ಕಾಯುವುದು. ಈಗ ಒಳಗೇ ಕುಳಿತುಕೊಳ್ಳುವ ಅವಕಾಶವಿತ್ತಲ್ಲ, ಆಗಾಗ ಅವರ ಕಣ್ಣಿಗೆ ಬೀಳುತ್ತಿದ್ದೆ. ಆ ಕಡೆಯಿಂದ ದಿವ್ಯ ನಿರ್ಲಕ್ಷ್ಯ. 

ಒಂದಿನ ಸಂಜೆ. ನನ್ನ ಸೆಮಿಸ್ಟರ್‌ ಮುಗಿಯುತ್ತ ಬಂದಿತ್ತು. ಮುಂದಿನ ಸೆಮಿಸ್ಟರ್‌ ಎಲ್ಲಿ ಕತೆ ಹಾಕಬೇಕೆಂಬ ಬೆಟ್ಟಕ್ಕಿಂತ ಮಿಗಿಲಾದ ಪ್ರಶ್ನೆ ಎದುರಿತ್ತು. ಏನಾದರೂ ಮಾಡಲೇ ಬೇಕಿತ್ತು.  ಇನ್ನೇನು ಆಫೀಸು ಮುಗಿಯಿತು ಎನ್ನುವ ಸಮಯ, ಅಧ್ಯಕ್ಷರು ಅದಾಗ ತಾನೆ ಬಂದಿದ್ದರು(ಅವರು ಬರುತ್ತಿದ್ದೇ ಸಂಜೆ ನಾಲ್ಕರ ನಂತರ), ರೋಸಿ ಹೇಳದೆ ಕೇಳದೆ ಒಳನುಗ್ಗಿದೆ. ಮನುಷ್ಯನ(ವಿದ್ಯಾರ್ಥಿಯ) ಹಕ್ಕಿನ ವಿಚಾರಗಳನ್ನೆಲ್ಲ ಮಾತಾಡಿದೆ. ಶಿಷ್ಠ ಭಾಷೆಯ ದೊಡ್ಡ ದೊಡ್ಡ ಮಾತುಗಳು. ಅದು ಹೇಗೆ ಬಂತು, ನಾಕಾಣೆ. ಅಫ್‌ ಕೋರ್ಸ್ ಅವರು ನನಗಿಂತ ಹಿರಿಯರು ಹೆಚ್ಚು ತಿಳಿದವರು. ಈ ಹಾಸ್ಟೆಲ್‌ ನಿಮಗೆಲ್ಲ ಬಡವರಿಗೆ ಎಂದು ಕಾನೂನು ಒಪ್ಪಿಸಿದರು. ಇವರು ಕಣ್ಣಲ್ಲಿ ಏನು ಇಟ್ಟುಕೊಂಡಿದ್ದಾರೆ ಎಂದು ನನಗೆ ಸೋಜಿಗವಾಯಿತು. ಇಂತಿಂಥವರಲ್ಲಿ ಬಡವರು ಇರಲಿಕ್ಕೆ ಸಾಧ್ಯವೇ ಇಲ್ಲವಾ ಸರ್‌ ಎಂದು ಕೂಗಾಡಿಬಿಟ್ಟೆ. ಮುಖದಲ್ಲಿ ರೋಷವಿತ್ತು, ಧ್ವನಿಯಲ್ಲಿ ಜೋರಿತ್ತು. ಗಂಟಲು ಕಟ್ಟಿತ್ತು. ಕಣ್ಣಲ್ಲಿ ಧಾರಾಕಾರ ನೀರು ಬಂತು. ಜೀವನದಲ್ಲಿ ಮೊದಲ ಬಾರಿಗೆ ಜಾತಿಯ ಪದದ ಉಚ್ಛಾರಣೆ ಮಾಡಿದ್ದು ನನಗೆ ನೆನಪಿರುವಂತೆ ಅದೇ ಮೊದಲು. ಸಿಇಟಿ ಸೀಟು ಹಂಚಿಕೆ ಸಮಯದಲ್ಲಿನ ಭಾಷೆ  1a 1b,  ಹೀಗೆ. ಮಠದಲ್ಲಿ ಇಪ್ಪತ್ತು ದಿವಸ ಇದ್ದು ಹೇಳದೇ ಕೇಳದೆ ಖಾಲಿ ಮಾಡಿದ್ದೆ.  ದಾನಿಯೆನಿಸಿಕೊಂಡವ ಫೋನ್‌ ಮಾಡಿ ಅರಚಾಡಿದ್ದ. ತಿರುಗಿ ಬೈಯುವ ವಯಸಲ್ಲ. ಅವರ ಹಣ ವೇಸ್ಟ್‌ ಮಾಡಿಸಿದೆ ಎಂಬ ಗಿಲ್ಟ್‌ ಭಾವ.  ಕಟ್‌ ಮಾಡಿದ್ದೆ (ಮೂರು ಸಾವಿರ ರುಪಾಯಿ, ಸ್ವಲ್ಪ ದಿವಸಗಳಲ್ಲಿ ಹಿಂದಿರುಗಿಸಿದ ನೆನಪು).

ಅಧ್ಯಕ್ಷರು ಹಣ ಬಯಸುತ್ತಿರಲಿಲ್ಲವೆನಿಸುತ್ತದೆ, ನಡೆದು ಬಂದಿದ್ದ ವ್ಯವಸ್ಥೆಯನ್ನು ಪಾಲಿಸಿಕೊಂಡು ಬಂದಿದ್ದರು, ರೂಢಿ ತಪ್ಪಿ ಅಧಿಕಾರ ಬಳಸುವುದು ಕಷ್ಟವಾಗಿತ್ತು ಅಷ್ಟೇ. ಅಂದು ಕರಗಿದರು. ಬಹುಶಃ ಅವತ್ತಿನ ದಿನದ ಪ್ರಸಂಗ ಅದು ತಳೆದ ಅವತಾರ ಆ ಏರು ಜೋರು ನಮ್ಮಿಬ್ಬರಿಗೂ ಅನಿವಾರ್ಯವಿತ್ತು; ನಾ ಸೀಟು ಪಡೆಯುವುದಕ್ಕೆ, ಅವರು ಕೊಡುವುದಕ್ಕೆ. ತಮ್ಮ ವಿಸಿಟಿಂಗ್‌ ಕಾರ್ಡ್‌ ಹಿಂದೆ ಇವರಿಗೆ ಜಾಗ ಮಾಡಿ ಕೊಡಿ ಎಂದು ವಾರ್ಡನ್ನಿಗೆ ಸೂಚಿಸಿ ಬರೆದು ನನ್ನ ಕೈಗಿತ್ತರು.

ಹಾಸ್ಟೆಲ್ಲು ಸೇರಿದೆ, ತಿಗಣೆಗಳನ್ನು ಹೊಸಕಿದೆ, ಸುಟ್ಟೆ, ಸೋತು ಸುಮ್ಮನಾದೆ. ಅವು ಮಿನಿಸ್ಟರುಗಳಿಗಿಂತ ಕಡೆ.‌ ರಾತ್ರಿಯಿಡೀ ರಾಜಾರೋಷವಾಗಿ ಮೈಮೇಲೆಲ್ಲ ಹರಿದಾಡುತ್ತಿದ್ದವು. ಅನ್ನ ಮುದ್ದೆಯಾಗಿರುತ್ತಿತ್ತು, ಮುದ್ದೆ ಕಲ್ಲಾಗಿರುತ್ತಿತ್ತು, ಸಾರು ನೀರಿಗಿಂತ ಕಡೆ. ಮಠಕ್ಕಿಂತ ಎಷ್ಟೋ ಪಾಲು ವಾಸಿ. ಶಂಕರ್‌ ನಾಗ್‌ ಸರ್ಕಲ್ಲಿನಲ್ಲಿ ಎಸ್ಸಿ ಎಸ್ಟಿ ಹಾಸ್ಟೆಲಿತ್ತು, ಅಲ್ಲಿ ಸ್ನೇಹಿತನಿದ್ದ. ಅಲ್ಲಿನದು ಸ್ವರ್ಗ ವ್ಯವಸ್ಥೆ. ತಟ್ಟೆ ತುಂಬ ತರಕಾರಿ ಬೀಳುತ್ತಿತ್ತು. ವಾರಾಂತ್ಯಗಳಲ್ಲಿ  ಚಿಕನ್‌ ಕೊಡುತ್ತಿದ್ದರು. ಸ್ನೇಹಿತ ಇಬ್ಬರಿಗಾಗುವಷ್ಟನ್ನು ತಟ್ಟೆಯಲ್ಲಿ ಹಾಕಿಸಿಕೊಂಡು ಕಾಯುತ್ತಿದ್ದ. ತೃಪ್ತಿಯಾಗಿ ಹೊಟ್ಟೆತುಂಬ ಊಟ ಆಗ್ತಿದ್ದು ಅಲ್ಲೇ , ವಾರಕ್ಕೊಮ್ಮೆ!

ಸರ್ಕಾರಿ ಕಛೇರಿಗಳೆಂದರೆ ಅಧಿಕಾರಿಗಳೆಂದರೆ ಹೀಗೆ.

‍ಲೇಖಕರು Avadhi

March 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: