ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂತಿಮವೂ ಇದೇ..

 ಆದಿವಾಲ ಗಂಗಮ್ಮ
ಹುಟ್ಟಿಕೊಂಡಿದ್ದಾರೆ ಆ ಅವರು
ರಕ್ತಬೀಜಾಸುರನ ಸಂತತಿಯವರು
ನಂಬಿಸಿ ಕತ್ತ ಕೊಯ್ಯುವವರೂ
ಬೆನ್ನಲ್ಲೇ ಇರಿಯುವವರು
ವ್ಯವಸ್ಥಿತ ಅಪಪ್ರಚಾರ ಮಾಡುವವರು
ಬೇಳೆ ಬೇಯಿಸಿಕೊಳ್ಳುವವರು
ಗೋಮುಖ ವ್ಯಾಘ್ರರು, ಉಸಿರೆತ್ತಿದವರ
ವಿರುದ್ಧ ಕತ್ತಿ ಮಸೆಯುವವರು, ಕಾಲೆಳೆಯುವವರು
ಬೇರಿನ ಬುಡಹೊಕ್ಕು ಗಿಡಕೇ ಅರಿವಾಗದಂತೆ
ಬೇರ ಕಡಿಯುವವರು, ರೆಂಬೆ ಕೊಂಬೆ ಕತ್ತರಿಸಿ
ಜೀವಂತ ಶವವಾಗಿಸುವವರು
ಅಸಲು ರಾಜಕೀಯವ ಮೀರಿಸಿ, ಸಂಸಾರಗಳಲಿ
ರಾಜಕೀಯ ಮಾಡಿ, ಅದನ್ನೆಕ್ಕಿ ನೀರ ಕುಡಿಯುವವರು
ಅದು ಬಿಡಿ
ಇಲ್ಲಿದ್ದಾರೆ ನೋಡಿ ಈ ಇವರು
ಹುಚ್ಚು ಜಮಾನದ ಪೆದ್ದು ಜನ
ಹಿತ್ತಾಳೆ ಕಿವಿಯವವರು
ಬೆಳ್ಳಗಿದ್ದದ್ದೆಲ್ಲಾ ಹಾಲು ಎನ್ನುವವರು
ಡೌಲು ದವಲತ್ತುಳ್ಳವರಿಗೆ ಮನಸೋತು
ಅವರ ಕೃಪಾದೃಷ್ಟಿಗೆ ಬೀಗಿ ಬಾಗಿ
ಧನ್ಯತಾಭಾವ ಹೊಂದುವವರು
ಚಪಾತಿ, ಪೂರಿ, ಪರೋಟ ಬೇಕಾದ್ದಂತೆ
ಈ ಇವರ ಲಟ್ಟಿಸಿ, ರುಚಿ ರುಚಿಯಾಗಿ ತಿಂದು
ಕೊಬ್ಬಿ, ತೀಟೆ ತೀರಿಸಿಕೊಳ್ಳುವ
ಆ ರಕ್ತಬೀಜಾಸುರನ ಹೇಡಿ ಸಂತತಿಗೆ
ನಾನೊಮ್ಮೆ ಲಟ್ಟಿಣಿಗೆ ಅಡಿ
ಬರುವೆನೆಂಬ ಅರಿವಿಲ್ಲ!
ಈ ಹಿತ್ತಾಳೆ ಕಿವಿಯವರಿಗೋ
ಆ ಅವರೆಲ್ಲರ ಹತ್ತು ಮುಖಗಳ
ಪರಿಚಯವಾಗುವ ಹೊತ್ತಿಗೆ
ಎಲ್ಲ ಸೂರೆಗೊಂಡು
ಕೋಟೆ ಬಾಗಿಲು ಹಾಕಿರುತ್ತದಲ್ಲ
ಎಂಥ ವಿಪರ್ಯಾಸ!!
ಆದರೂ ನಯವಂಚಕತನದ
ಕಣ್ಣುಮುಚ್ಚಾಲೆಗೂ ಒಂದು ಮಿತಿ ಇದೆ
ಸೀಮಾರೇಖೆಯಿದೆ, ಅಂತಿಮವೂ ಇದೆ

‍ಲೇಖಕರು nalike

30 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading