ಜೋಗಿಯವರ 'ವಿರಹ'

 

EXCLUSIVE

cover page 1

 

 

 

ವಿರಹದ ಸಂಕ್ಷಿಪ್ತ ಪದಕೋಶಕ್ಕೆ ಬರೆದ

ಮೊದಲ ಮಾತು

ಅಷ್ಟೇನೂ ಚಟುವಟಿಕೆಯಿಲ್ಲದ ಬೀದಿ. ಒಬ್ಬ ಆಟೋ ಡ್ರೈವರ್, ಒಬ್ಬ ಕಬಾಬ್ ಅಂಕಲ್, ಒಬ್ಬ ಸ್ಟೀಲ್ ಪಾತ್ರೆ ಮಾರುವವನು, ಒಬ್ಬ ಟೈಲರ್, ಒಬ್ಬಳು ತರಕಾರಿ ಮಾರುವ ಹೆಂಗಸು, ಟಾಟಾ ಇಂಡಿಕಾ ಕಾರಿಟ್ಟುಕೊಂಡ ಒಬ್ಬ- ಹೀಗೆ ಅಲ್ಲಿ ತರಹೇವಾರಿ ಮಂದಿ. ಕೊಂಚ ಕಿರಿದಾದ ಆ ರಸ್ತೆಯಲ್ಲೊಂದು ಆರೆಂಟು ಮನೆಗಳ ಅಪಾರ್ಟುಮೆಂಟು. ಆ ಅಪಾರ್ಟುಮೆಂಟು ಕಾವಲಿಗೆ ಒಬ್ಬ ವಾಚ್ಮನ್ನು.

ಅಲ್ಲಿಗೆ ವಿವರ ಮುಗಿಯುತ್ತದೆ. ಬೆಂಗಳೂರಿನ ಟಿಪಿಕಲ್ ಬದುಕು ಇದು. ರಾಮನಗರಕ್ಕೋ ತುರುವೇಕೆರೆಗೋ ಚಿಕ್ಕಮಗಳೂರಿಗೋ ಹಾಸನಕ್ಕೋ ಹೋದರೆ ಅಲ್ಲಿಯ ಚಿತ್ರ ಕೊಂಚ ಬದಲಾಗಬಹುದು. ಬಡಾವಣೆಯಿಂದ ಬಡಾವಣೆಗೆ ಉದ್ಯೋಗಗಳು ಹೊಸದಾಗಬಹುದು. ಆಟೋ ಡ್ರೈವರ್ ಬದಲಿಗೆ ಸರ್ಕಾರಿ ಗುಮಾಸ್ತ, ಬ್ಯಾಂಕ್ ಉದ್ಯೋಗಿ, ಪತ್ರಕರ್ತ, ಕವಿ, ಸ್ಕೂಲ್ ಮೇಷ್ಟ್ರು- ಹೀಗೆ ತರಹೇವಾರಿ ಉದ್ಯೋಗಗಳ ಮಂದಿ ಸಿಗಬಹುದು.

ಇಂಥ ಬೀದಿಗಳಲ್ಲೇ ಪ್ರೀತಿ, ಅಂತಃಕರಣ, ಜಗಳ, ದೊಡ್ಡ ದನಿಯ ಗದ್ದಲ, ಕೂಗಾಟ ಎಲ್ಲವೂ ಇರುತ್ತದೆ. ಯಾರೋ ಚೀಟಿ ಹಾಕಿರುತ್ತಾರೆ. ಮತ್ಯಾರೋ ಸ್ಟೀಲ್ ಪಾತ್ರೆ ಅಂಗಡಿಯವನ ಹತ್ತಿರ ಸಾಲ ಮಾಡಿರುತ್ತಾರೆ. ಕಬಾಬ್ ಅಂಗಡಿಯವನಿಗೆ ಪುಡಿ ರೌಡಿಯೊಬ್ಬ ಕುಡಿದ ಮತ್ತಿನಲ್ಲಿ ಹೊಡೆದಿರುತ್ತಾನೆ, ಕಾರ್ ಡ್ರೈವರ್ ಕುಡಿದು ಬಂದು ಹೆಂಡತಿಗೆ ಚೆನ್ನಾಗಿ ಬಾರಿಸಿರುತ್ತಾನೆ. ಅವಳು ಬೀದಿಗೆ ಬಂದು ಅವನ ಜನ್ಮ ಜಾಲಾಡುತ್ತಾ ಹೆಣ್ಮಕ್ಕಳ ಮೇಲೆ ಕೈ ಮಾಡ್ತೀಯೇನೋ ನಾಮರ್ದ ಎಂದು ಕೂಗಾಡಿರುತ್ತಾಳೆ.

ಅದಾಗಿ ಮಾರನೇ ದಿನವೇ ಅವಳು ಮದುವೆಗೆ ಕೊಂಡ ರೇಷ್ಮೆಯಲ್ಲಿ ಅವನು ತಮ್ಮನ ಮಗ ಫಾರಿನ್ನಿನಿಂದ ತಂದುಕೊಂಡ ಹೊಳೆಹೊಳೆಯುವ ಶರಟಿನಲ್ಲಿ ಕಂಗೊಳಿಸುತ್ತಾ ಕೈ ಕೈ ಹಿಡಕೊಂಡು ವಾಕಿಂಗ್ ಹೊರಟಿರುತ್ತಾರೆ. ಒಂದು ಮಸಾಲೆದೋಸೆಗೋ ಪಾನಿಪೂರಿಗೋ ಚಿಕ್ಕನ್ ಕಬಾಬಿಗೋ ಜಗಳ ಮುಗಿದಿರುತ್ತದೆ.

ಈ ರಸ್ತೆಗಳು ಹೀಗೇ ಇರುತ್ತವೆ. ಇಂಥ ರಸ್ತೆಗಳನ್ನಿಟ್ಟುಕೊಂಡು ಕತೆ ಹೆಣೆಯುವುದರಲ್ಲಿ ತಮಿಳು ಚಿತ್ರಕತೆಗಾರರು ಹೆಸರುವಾಸಿ.  ಇಂಥ ಪುಟ್ಟ ಬೀದಿಯಲ್ಲೇ ಒಂದು ದಿನ ಪವಾಡಸದೃಶವಾಗಿ ಪ್ರೇಮವೊಂದು ಅರಳುತ್ತದೆ. ಯಾರದೋ ಮನೆಯಲ್ಲೊಂದು ಕೊಲೆಯಾಗುತ್ತದೆ, ಒಬ್ಬ ರೌಡಿ  ಇಂಥ ಬೀದಿಯ ಪುಟ್ಟ ಮನೆಯಿಂದ ಹೊರಕ್ಕೆ ಬರುತ್ತಾನೆ.

***

ಇದನ್ನು ಮರೆತು ಮತ್ತೊಂದು ಕಡೆ ಹೊರಳಿದರೆ, ಸ್ವಂತ ಮನೆಗಳ ಅಗಲವಾದ ಬೀದಿ. ನೀಟಾಗಿರುವ ಬಡಾವಣೆ, ಮಧ್ಯಮ ವರ್ಗದ ಮನೆಗಳು. ಆ ಮನೆಗಳ ಒಳಗೆ ಹೆಣ್ಮಕ್ಕಳಿಗೆ ಟೆಲಿವಿಷನ್ನು, ಮಕ್ಕಳಿಗೆ ಕಂಪ್ಯೂಟರ್ ಗೇಮು, ಶೇಕಡಾ ತೊಂಬತ್ತೆಂಟು ಅಂಕ ಪಡೆಯಲು ಹೆಣಗಾಡುತ್ತಿರುವ ಎಂಟನೇಕ್ಲಾಸಿನ ಹುಡುಗಿ, ಪೋಲಿ ಬೀಳಲು ಕಾತರಿಸುತ್ತಿರುವ ಎಸ್ಸೆಸ್ಸೆಲ್ಸಿಗೆ ಬಂದಿರುವ ಮಗ, ಮದುವೆ, ಮುಂಜಿ, ಸಮಾರಾಧನೆ, ಅಷ್ಟೋತ್ತರ ಜಪ, ಸತ್ಯನಾರಾಯಣ ಪೂಜೆ. ಇಲ್ಲಿಯ ಜಗಳ ಕೂಡ ಕೊಂಚ ಕೃತಕ. ಮುನಿಸು ಒಳಗೊಳಗೇ ಧಮುಗುಡುತ್ತಿರುತ್ತದೆ. ಸಿಡಿಯದ ಅಗ್ನಿಪರ್ವತದಂತೆ ಒಬ್ಬೊಬ್ಬರೂ ಬದುಕುತ್ತಿರುತ್ತಾರೆ. ಸಂದರ್ಭ ಸಿಕ್ಕಾಗ ಅದು ಮತ್ತೊಬ್ಬರ ಮೇಲಿನ ಆಕ್ಷೇಪವಾಗಿ ಹೊರಬರುತ್ತದೆ. ಈ ಶೈಲಿಯ ಮನೆಗಳ ನಿಜವಾದ ಕತೆ ಹೊರಗೆ ಬರುವುದೇ ಇಲ್ಲ. ಅದನ್ನು ಕತೆಯಾಗಿಸುವುದೂ ಕಷ್ಟ. ಭೂ, ವರ್ತಮಾನ ಮತ್ತು ಭವಿಷ್ಯ ಇಲ್ಲಿ ಒಂದೇ ಗೆರೆಯಲ್ಲಿರುತ್ತದೆ. ದೊಡ್ಡ ಬದಲಾವಣೆಗಳೇನೂ ಇಲ್ಲಿ ನಡೆಯುವುದಿಲ್ಲ. ಇಂಥ ನೀರಸ ಜಗತ್ತಿನಲ್ಲೂ ಕತೆಗಳನ್ನು ಹುಡುಕುವುದಕ್ಕೆ ಅಪಾರ ಪ್ರತಿಭೆ ಬೇಕು. ಅಂಥ ಕೆಲಸವನ್ನು ಪುಟ್ಟಣ್ಣ ಕಣಗಾಲ್, ಟಿ ಎನ್ ಸೀತಾರಾಮ್, ಕೆ. ಬಾಲಚಂದರ್ ಮುಂತಾದವರು ಮಾಡಿದರು.

***

ಇವೆರಡು ನಮಗೆ ಗೊತ್ತಿರುವ ಜಗತ್ತು. ಇದರಾಚೆಗೆ ಮತ್ತೊಂದು ಪ್ರಪಂಚವಿದೆ. ಅದು ಬೆಂಗಳೂರಿನ ಹೊರವಲಯದಲ್ಲಿರುವ ಅಪಾರ್ಟುಮೆಂಟುಗಳು. ಅಲ್ಲಿ ಎಲ್ಲರೂ ಹೆಚ್ಚು ಕಡಿಮೆ ಒಂದೇ ಉದ್ಯೋಗದಲ್ಲಿ ಇರುವವರು. ಎಲ್ಲರ ಭಾಷೆಯೂ ಒಂದೇ, ಆಲೋಚನೆಯೂ ಒಂದೇ.  ಒಂದರ್ಥದಲ್ಲಿ  ಅನಂತ ಕುಮಾರನ ಬದುಕನ್ನು ಕಾಪಿ ಅಂಡ್ ಪೇಸ್ಟ್ ಮಾಡಿದರೆ ಬಸಂತ್ ಕುಮಾರನ ಬದುಕಾಗುತ್ತದೆ. ಅದನ್ನು ಡೂಪ್ಲಿಕೇಟ್ಮಾಡಿದರೆ ಚಂದ್ರಕುಮಾರನ ಬದುಕಾಗುತ್ತದೆ. ಎಲ್ಲರಿಗೂ ಅದೇ ತರಕಾರಿ ಅಂಗಡಿ, ಅದೇ ಕ್ಲಬ್ ಹೌಸು, ಅದೇ ಎಕ್ಸರ್‌ಸೈಜು, ಅದೇ ಬ್ರಾಂಡಿನ ನಿಕ್ಕರು, ಅದೇ ವೀಕೆಂಡು ಎಂದು ಪದೇ ಪದೇ ಹೇಳುತ್ತಾ, ಕನ್ನಡದ ಹಿರಿಯ ಲೇಖಕರು ಮತ್ತು ವಿಮರ್ಶಕರು ಕೊಂಚ ಅನುಮಾನ ಮತ್ತು ಉಡಾಫೆಯಿಂದ ನೋಡುವ ಈ ಜಗತ್ತಿನೊಳಗೂ ಕತೆಯಿದೆ. ಹಾಗೆ ನೋಡಿದರೆ ಈ ಮೂರೂ ಜಗತ್ತಿನ ಕತೆಗಳಲ್ಲಿ ಅಂಥ ವ್ಯತ್ಯಾಸ ಏನಿಲ್ಲ. ಅಪಾರ್ಟುಮೆಂಟು ಅನ್ನುವುದು ವರ್ಟಿಕಲ್ ವಠಾರವೋ ನಿಂತ ಸ್ಥಿತಿಯಲ್ಲಿರುವ ಅಗ್ರಹಾರವೋ ಆಗಬಹುದು. ವಠಾರದ ಮಂದಿ ಶೆಟ್ಟರ ಅಂಗಡಿಯಿಂದ ಮೆಣಸು, ಜೀರಿಗೆ, ಕೊತ್ತಂಬರಿ ತರುವ ಹಾಗೆ ಇಲ್ಲಿನವರು ಅದನ್ನು ಡಿಪಾರ್ಟಮೆಂಟಲ್ ಸ್ಟೋರಿನಿಂದ ತರುತ್ತಾರೆ ಅನ್ನುವುದನ್ನು ಬಿಟ್ಟರೆ ಅಂಥ ದೊಡ್ಡ ವ್ಯತ್ಯಾಸವೇನೂ ಇರುವುದಿಲ್ಲ.  ಅಲ್ಲೂ ಭಯ, ಅನುಮಾನ, ತಲ್ಲಣಗಳಿರುತ್ತವೆ. ಅವರು ಕೂಡ ಬೇರೆ ವಲಯದಲ್ಲಿ ಕೆಲಸ ಮಾಡುವವರಷ್ಟೇ ತೀವ್ರತೆಯಿಂದ ಬದುಕುತ್ತಿರುತ್ತಾರೆ. ಅವೆಲ್ಲವನ್ನೂ ಮರೆತು ಐಟಿ, ಬಿಟಿ ವಲಯದವರನ್ನು ಸಾಹಿತ್ಯದ ಒಂದು ವರ್ಗ ಭಯಂಕರ ಉಡಾಫೆಯಿಂದಲೂ ಅಸಹನೆಯಿಂದಲೂ ನೋಡುತ್ತದೆ. ಅಲ್ಲಿ ಕತೆಗಳೇ ಹುಟ್ಟುವುದಕ್ಕೆ ಸಾಧ್ಯವಿಲ್ಲ, ಅಲ್ಲಿ ಹುಟ್ಟುವ ಸಾಹಿತ್ಯ ಕುಂಡದಲ್ಲಿ ಬೆಳೆದ ಗಿಡವೇ ಹೊರತು ಕಾಡಿನಲ್ಲಿ ಸ್ವಚ್ಛಂದ ಬೆಳೆದ ಮರವಲ್ಲ ಎಂದು ಹೇಳುವವರಿದ್ದಾರೆ. ಅವೆಲ್ಲ ಕೇವಲ ಅಸೂಯೆಯ ಮಾತು ಅಷ್ಟೇ. ಅಂಥ ಬದುಕಿನ ತಲ್ಲಣಗಳ ಬಗ್ಗೆ ತುಂಬ ಹಿಂದೆಯೇ ಯಶವಂತ ಚಿತ್ತಾಲರು ಬರೆದಿದ್ದರು. ನಾಗರಾಜ ವಸ್ತಾರೆ ಹೊಸ ನುಡಿಗಟ್ಟಿನಲ್ಲಿ ಬರೆಯುತ್ತಿದ್ದಾರೆ. ವಿವೇಕ ಶಾನಭಾಗರ ಕತೆಗಳಲ್ಲಿ ಅಲ್ಲಿಯ ಬದುಕಿನ ಚಿತ್ರ ನಮಗೆ ಸಿಗುತ್ತದೆ.

***

ನಾನು ಕಾದಂಬರಿ ಬರೆಯಲು ಕುಳಿತಾಗ ಇವೆಲ್ಲ ಕಣ್ಮುಂದೆ ಬಂದು ಗೊಂದಲವಾಯಿತು. ಈ ಮೂರು ವರ್ಗಗಳ ಆಚೆಗೆ ನಮ್ಮೂರಿದೆ. ಅಲ್ಲಿಯ ರೈತರಿದ್ದಾರೆ. ಅವರ ಬಡತನ, ಸಿರಿತನವಿದೆ. ಕೂಲಿ ಕಾರ್ಮಿಕರಿದ್ದಾರೆ.  ಹೊಸ ಹೊಸ ವೃತ್ತಿಗಳಲ್ಲಿ ತೊಡಗಿಕೊಂಡವರಿದ್ದಾರೆ. ಒಬ್ಬೊಬ್ಬರೊಳಗೂ ಒಂದೊಂದು ಕತೆಯಿರುತ್ತದೆ. ಒಂದೊಂದು ಕತೆಯೂ ಅವರವರ ಮಟ್ಟಿಗೆ ವಿಶಿಷ್ಟವಾಗಿರುತ್ತದೆ. ಆ ವಿಶಿಷ್ಟತೆಯನ್ನು ಮರೆತು ಸಾಹಿತ್ಯ ಜಗತ್ತು ಎಲ್ಲವನ್ನೂ ಪ್ರಾತಿನಿಧಿಕವಾಗಿಸಲು ಹವಣಿಸುತ್ತದೆ. ಹಾಗೆ ಪ್ರಾತಿನಿಧಿಕ ಪಾತ್ರವೊಂದನ್ನು ಸೃಷ್ಟಿ ಮಾಡುವುದು ಕೂಡ ನಾವು ನಮ್ಮ ಕಾಲಕ್ಕೆ ಮಾಡುವ ದ್ರೋಹ.

ಕಾದಂಬರಿ ಏನನ್ನು ಹೇಳಬೇಕು. ಒಂದು ಆರಂಭ, ಒಂದು ಕಥಾವಸ್ತು, ಚೆಂದದ ನಿರೂಪಣೆ, ಒಂದು ಅನಿರೀಕ್ಷಿತ ಅಂತ್ಯದ ಮೂಲಕ ಒಂದು ಕಾಲಘಟ್ಟದ ಬದುಕನ್ನು ಕಟ್ಟಿಕೊಟ್ಟರೆ ಸಾಕೇ? ಅಂಥ ಪ್ರಯತ್ನಗಳನ್ನು ನನ್ನ ಮಿಕ್ಕ ಕಾದಂಬರಿಗಳಲ್ಲೂ ಮಾಡಿದ್ದೇನಲ್ಲವೇ? ಮತ್ತೆ ಮತ್ತೆ ಅದೇ ಥರದ ಕತೆಯನ್ನು ಅದೇ ಶೈಲಿಯಲ್ಲಿ ಹೇಳುತ್ತಾ ಕೂರಲೇ? ನನ್ನ ಮುಂದಿರುವ ಸಮಯ ಎಷ್ಟು? ಚೆಂದವಾಗಿ ಕತೆ ಹೇಳುವುದೇ ನನ್ನ ಪರಮ ಉದ್ದೇಶ ಆಗಬೇಕೇ?

ಈ ಪ್ರಶ್ನೆಗಳೆಲ್ಲ ಒಮ್ಮೆಗೆ ಮೈ ಮೇಲೆ ಬಿದ್ದು ನಿದ್ದೆಕೆಡಿಸಿದವು. ಉಪ್ಪಿನಂಗಡಿಯ ಕುರಿತೋ ನಮ್ಮೂರಿನ ಕುರಿತೋ ಅಲ್ಲಿ ಯಾವುದೋ ಕಾಲದಲ್ಲಿ ನಾನು ಕಂಡ ಮಂದಿಯ ಬಗ್ಗೆಯೋ ಕಾದಂಬರಿ ಬರೆಯುವುದು ಸ್ವಾರ್ಥ ಅನ್ನಿಸಿತು. ಸುಲಭವಾಗಿ ಬರೆಯಬಲ್ಲೆ ಎಂಬ ಕಾರಣಕ್ಕೆ ಮತ್ತೆ ಮತ್ತೆ ನಾನು ಅಡ್ಡಾಡಿದ ಜಾಗಗಳಿಗೆ ಮರಳುವುದು, ನನ್ನ ಕಣ್ಣಲ್ಲಿ ಸುವರ್ಣಯುಗದಂತೆ ಕಂಡಿದ್ದ ದಿನಗಳಿಗೆ ವಾಪಸ್ಸು ಹೋಗುವುದು ಸುಲಭದ ಮಾರ್ಗ. ಅದನ್ನು ಬೇಕಂತಲೇ ಇಲ್ಲಿ ಧಿಕ್ಕರಿಸಿದ್ದೇನೆ.

ಹೆಣ್ಣು-ಗಂಡು, ಸಂಬಂಧ, ದಾಹ, ಹುಡುಕಾಟ, ಪ್ರೇಮದ ನಿರರ್ಥಕತೆ, ಸಾರ್ಥಕ ದಾಂಪತ್ಯ, ಕಣ್ಮರೆಯ ಕಾಡು, ದಟ್ಟ ವ್ಯಾಮೋಹಗಳ ಸುಳಿಯಲ್ಲಿ ಸಿಲುಕಿದ ಗಂಡು ಹೆಣ್ಣಿನ ಕತೆ ಕೂಡ ಹಳೆಯದಾದಂತೆ ಕಾಣುತ್ತದೆ. ಮೀರಾ, ಅಕ್ಕಮಹಾದೇವಿಯಂಥ ಪಾತ್ರಗಳು ನಮ್ಮ ಮುಂದೆ ಸುಳಿದಿವೆ. ಅನೂಹ್ಯವಾದ ಜಗತ್ತಿನಲ್ಲಿ ಅಜ್ಞಾತ ಜೀವವೊಂದಕ್ಕೆ ಹಂಬಲಿಸುತ್ತಾ ಉರಿದು ಮರೆಯಾದ ಅಂಥವರ ಪ್ರೇಮದ ಉತ್ಕಟತೆಯ ಮುಂದೆ ಏನನ್ನು ಹೇಳಿದರೂ ನಾಟಕೀಯವೂ ಕೃತಕವೂ ಆಗುತ್ತದೆ.

ಜಂಜಾಟಗಳನ್ನು ಹೇಳುವ ಕಾಲ ಇದಲ್ಲ. ಬದುಕಿನ ಜಂಜಡಗಳು ಕತೆಯಾಗುವ ಗುಣವನ್ನು ಕಳಕೊಂಡಿವೆ. ಅವೆಲ್ಲ ಹೋರಾಟದ ನೆಲೆಗೆ ಏರಿವೆ. ರಾಜಕಾರಣಿಯ ಕುರಿತು ಒಂದಕ್ಷರ ಬರೆಯುವುದು ಕೂಡ ಕಷ್ಟವೇ. ಮಠಾಧೀಶರು, ಅಧಿಕಾರಸ್ಥರು, ಹಣವಂತರು ಕತೆಯಾಗುವ ಕಾಲವೂ ಇದಲ್ಲ. ದೃಶ್ಯ ಮಾಧ್ಯಮ ಎಲ್ಲರನ್ನೂ ಫ್ಲಾಷ್ ಲೈಟಲ್ಲಿ ತೋರಿಸುತ್ತಿದೆ. ಮಠಾಧೀಶನ ಪ್ರಣಯ ಪ್ರಸಂಗದಲ್ಲಿ ಒಂದು ಮಾರ್ದವ ಇರಬಹುದೆಂದು ನಂಬಲು ನಾವು ತಯಾರಿಲ್ಲ. ಹಿಂದೆಂದಿಗಿಂತಲೂ ಹೆಚ್ಚು ಹೆಚ್ಚು ಸರಿತಪ್ಪುಗಳ ವಿಮರ್ಶೆಯನ್ನು ನಾವು ಶುರು ಮಾಡಿದ್ದೇವೆ. ನಮ್ಮ ಮುಂದೆ ಒಳ್ಳೆಯವರು ಮತ್ತು ಕೆಟ್ಟವರು ಎಂಬ ಎರಡೇ ಪ್ರಭೇದ ಕಾಣಿಸುತ್ತಿದೆ. ಜಗತ್ತು ಬ್ಲಾಕ್ ಅಂಡ್ ವೈಟ್ ಆಗುತ್ತಿದೆ.

ಇಂದ್ರಾಣಿಯ ಬದುಕಿನ ದುರಂತವನ್ನು ನಾವು ಹಾದರ, ಕೊಲೆ, ರೋಚಕತೆ, ಮತ್ತು ರುಚಿಕಟ್ಟಾದ ಸುದ್ದಿಯ ಮಟ್ಟದಲ್ಲೇ ನೋಡುತ್ತೇವೆ. ಅದರ ಕುರಿತು ತಮಾಷೆ ವಾಟ್ಸಪ್ಪು ಸಂದೇಶಗಳು ಹರಿದಾಡುತ್ತವೆ. ಆಕೆಯ ತೀವ್ರವಾದ ವ್ಯಾಮೋಹ, ಷೇಕ್ಸ್‌ಪಿಯರ್ ಪಾತ್ರಗಳ ಸಂಕೀರ್ಣತೆಯನ್ನು ಹೋಲುವ ಆಕೆಯ ಬದುಕು, ಅವಳ ಬದುಕಿನ ಏರಿಳಿತ ಮತ್ತು ಹಟಮಾರಿತನ ಕೇವಲ ಒಂದು ಅಪರಾಧದಂತೆ ಕಾಣಿಸುತ್ತಿದೆ. ನಮ್ಮ ಗ್ರಹಿಕೆಗಳನ್ನು ತಿದ್ದುವುದಕ್ಕೆ ಇವತ್ತು ಬೇಕಾದಷ್ಟು ಮಾಧ್ಯಮಗಳಿವೆ. ಸ್ವತಂತ್ರವಾಗಿ ಯಾವುದಕ್ಕೂ ಕೂಡ ಸ್ವೀಕರಿಸುವುದಕ್ಕೆ ಇಲ್ಲಿ ಮುಕ್ತ ಅವಕಾಶವೇ ಇಲ್ಲ. ಪ್ರತಿಯೊಂದು ಸುದ್ದಿಯೂ ಸೋಸಲ್ಪಟ್ಟು, ಚದುರಿ, ಮುದುರಿ, ವಿರೂಪಗೊಂಡೇ ನಮ್ಮನ್ನು ತಲುಪುವಂತೆ ಮಾಡುವುದಕ್ಕೆ ದೃಶ್ಯಮಾಧ್ಯಮಗಳ ಶ್ರಮ ಸಾಕಷ್ಟಿದೆ.

***

ಇಂಥ ಹೊತ್ತಲ್ಲಿ ನಿಜಕ್ಕೂ ನಮ್ಮ ತಲ್ಲಣಗಳೇನು. ಯಾವುದು ನಮ್ಮನ್ನು ತುಂಬ ಕಾಡುತ್ತದೆ. ಮನೆಯಲ್ಲಿ ಲೀಟರುಗಟ್ಟಲೆ ನೀರು ತುಂಬಿಸಿಟ್ಟುಕೊಂಡವನಿಗೂ ಬಾಯಾರಿಕೆ ಯಾಕಾಗುತ್ತದೆ. ನೀರಿದ್ದರೂ ಕುಡಿಯಲಾರದ ಸ್ಥಿತಿಯಲ್ಲಿದ್ದೇವಾ ನಾವು? ಅಥವಾ ನೀರಿದೆ ಎಂದು ಬಾಯಾರಿಕೆಯೇ ಆಗುವುದಿಲ್ಲವಾ?

ಪ್ರೇಮದ ಉತ್ಕಟ ಸ್ಥಿತಿಯನ್ನು ನೆನೆಯಿರಿ. ಅದು ಕೂಡ ಕೇವಲ ತೋರಿಕೆಯೇ ಆಗಿರುವುದನ್ನು ನಾವು ನೋಡುತ್ತಿದ್ದೇವೆ. ಎಷ್ಟು ತೀವ್ರವಾಗಿ ಪ್ರೇಮಿಸಬಹುದು ಅನ್ನುವುದು ನಮ್ಮ ಅಂತರಂಗದಲ್ಲಿ ಹುಟ್ಟುವ ಅನುಭೂತಿ ಆಗಿರದೇ, ಅಕ್ಕಪಕ್ಕದವರ ತೀವ್ರತೆಯ ಹೋಲಿಕೆಯಲ್ಲಿ ಜನ್ಮ ತಳೆಯುತ್ತದೆ.

ಹಾಗಿದ್ದರೆ ವಿರಹಕ್ಕಿಲ್ಲಿ ಜಾಗ ಇದೆಯಾ? ಇವತ್ತು ಯಾರೂ ಯಾರನ್ನೂ ಸಂಪರ್ಕಿಸದೇ ಇರುವ ಸ್ಥಿತಿ ಇಲ್ಲವೇ ಇಲ್ಲ. ಎಲ್ಲೋ ಇರುವ ಅವಳು, ಇನ್ನೆಲ್ಲೋ ಇರುವ ಅವನು ನಿರಂತರ ಸಂಪರ್ಕದಲ್ಲಿ ಇರುವುದಕ್ಕೆ ತಂತ್ರಜ್ಞಾನ ವ್ಯವಸ್ಥೆ ಮಾಡಿಕೊಟ್ಟಿದೆ. ಮಾತುಕತೆ, ಸಲ್ಲಾಪ ಸತತವಾಗಿ ಸಾಗುತ್ತಲೇ ಇರುತ್ತದೆ. ಅವನ ಪ್ರತಿಕ್ಷಣದಲ್ಲೂ ಅವಳು ಜೊತೆಗಿರುತ್ತಾಳೆ, ಒಂದಲ್ಲ ಒಂದು ರೂಪದಲ್ಲಿ. ಅವಳ ಅತ್ಯಂತ ಖಾಸಗಿ ಗಳಿಗೆಗಳನ್ನೂ ಅವನು ಹಂಚಿಕೊಳ್ಳುತ್ತಾನೆ, ಡಿಜಿಟಲೀ.

ಹಾಗಿದ್ದರೆ ವಿರಹ.

ವಿರಹ ಮತ್ತಷ್ಟು ಗಾಢವಾಗಿದೆ. ವಿರಹದ ಗೈರುಹಾಜರಿಯೇ ವಿರಹದ ಅತ್ಯುನ್ನತ ಸ್ಥಿತಿ. ಜೊತೆಗಿದ್ದರೂ ಜೊತೆಗಿರಲಾರದ, ಸಮೀಪದಲ್ಲಿದ್ದರೂ ದೂರವಿದ್ದಂತೆ ಭಾಸವಾಗುವ, ನೂರೆಂಟು ಸಂಗತಿಗಳು ನಮ್ಮನ್ನು ಅತ್ತಿತ್ತ ಸೆಳೆಯುತ್ತ ಒಂದು ಕ್ಷಣ ಕೂಡ ಧ್ಯಾನಸ್ಥರಾಗದಂತೆ ತಡೆಯುವ ಕಾಲದಲ್ಲಿ ಸಾಂಗತ್ಯವೇ ವಿರಹ. ಜೊತೆಗಿದ್ದವನು ಜೊತೆಗಿಲ್ಲ ಅನ್ನಿಸುವುದು, ಹತ್ತಿರವಿದ್ದವಳು ದೂರದಲ್ಲಿದ್ದಾಳೆ ಎಂದು ಭಾಸವಾಗುವುದು, ನಮ್ಮವರು ನಮ್ಮವರಲ್ಲ ಎಂದು ತೋರುವುದು- ಇವೆಲ್ಲ ವಿರಹದ ಲಕ್ಷಣಗಳೇ.

ಅಂಥ ವಿರಹವನ್ನು ಈ ಕಾದಂಬರಿಯನ್ನು ಹಿಡಿಯಲು ಯತ್ನಿಸಿದ್ದೇನೆ. ಅದೇ ಕಾರಣಕ್ಕೆ ವರ್ತಮಾನದ ಯಾವ ಭಾರವೂ ಇಲ್ಲದ, ಸುಲಭವಾಗಿ ಎಲ್ಲೂ ನೋಡುವುದಕ್ಕೆ ಸಿಗದ, ಬೇರುಗಳ ಹಂಗೇ ಇಲ್ಲದ ಮೂರು ಪಾತ್ರಗಳನ್ನು ಸೃಷ್ಟಿಸಿದ್ದೇನೆ. ಇಲ್ಲಿ ನಿಮಗೆ ಎದುರಾಗುವ ವಿಶ್ವಾಸ ಕಾರಂತ, ವಂದನಾ ಮತ್ತು ರಾಜೀವ್- ಈ ಮೂವರಿಗೂ ಹಿನ್ನೆಲೆಯಿಲ್ಲ. ಅವರು ಹೇಳಿಕೊಟ್ಟಂತೆ ವರ್ತಿಸುವುದಿಲ್ಲ. ಅವರನ್ನು ಶಿಕ್ಷಣವೋ ಸಾಹಿತ್ಯವೋ ರಾಜಕೀಯವೋ ರೂಪಿಸಿಲ್ಲ. ಅವರು ಪ್ರೋಗ್ರಾಮ್ಡ್ ಅಲ್ಲ.

ಈ ಮೂರು ಪಾತ್ರಗಳ ನಡುವೆ ಸಂಘರ್ಷ ಇಲ್ಲ. ಅನುಸಂಧಾನ ಮಾತ್ರ ಇದೆ. ಅದಕ್ಕೊಂದು ಕೊನೆಯೂ ಇಲ್ಲ. ನೆಲೆಯೂ ಇಲ್ಲ.

ಇದು ನಮ್ಮ ಇಂದಿನ ಸ್ಥಿತಿಗೆ ರೂಪಕ ಆಗಬಹುದು ಎಂಬುದು ನನ್ನ ನಂಬಿಕೆ.

 

-ಜೋಗಿ

‍ಲೇಖಕರು G

October 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. manjula madhav

    Nimma kadambari odalebeku. Sameepaviddu sameepisalagada manasugala naduve kaaduvudu viraharoopad tabbalitana.

    ಪ್ರತಿಕ್ರಿಯೆ
  2. ಭವಾನಿ ಲೋಕೇಶ್

    ಓದಲೇಬೇಕೆಂಬ ಹುಕಿ ಶುರೂ. .! ಯಾವತ್ತಿನಂತೆ ಚಂದ ಚಂದ ನಿಮ್ಮ ಬರಹ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: