ʼಸಿಮೊನ್ ದ ಬೋವಾʼ ಕೇವಲ ಸ್ತ್ರೀವಾದಿ ಚಿಂತಕಿಯಲ್ಲ…

ವಿಕ್ರಮ್‌ ವಿಸಾಜಿ ಅವರ ಹೊಸ ಪುಸ್ತಕ- ಸಿಮೊನ್‌ ದ ಬೋವಾ-ಮಾತು ಕಥನ

ಜ ನಾ ತೇಜಶ್ರೀ

ನನಗಾಗ ೧೫-೧೬ ವರ್ಷವಿರಬೇಕು. ನನ್ನ ತಂದೆಯ ಸ್ನೇಹಿತರು (ಯಾರೆಂದು ನೆನಪಾಗುತ್ತಿಲ್ಲ) ನಮ್ಮ ಮನೆಗೆ ಬಂದಾಗ ತಮ್ಮೊಡನೆ ಸಿಮೊನ್ ದ ಬೋವಾಳ ‘ದ ಸೆಕೆಂಡ್ ಸೆಕ್ಸ್’ ಪುಸ್ತಕವನ್ನು ತಂದಿದ್ದರು. ಆಕೆಯ ಬೇರೊಂದು ಲೇಖನದ ಜೆರಾಕ್ಸ್ ಪ್ರತಿ ಕೂಡ ಆ ಪುಸ್ತಕದ ಒಳಗಿತ್ತು. ಅವರಿಂದ ಆ ಪುಸ್ತಕವನ್ನು ತೆಗೆದುಕೊಂಡ ನಾನು ಓದಲು ಯತ್ನಿಸಿದೆ. ಹೆಚ್ಚೇನೂ ಅರ್ಥವಾಗಲಿಲ್ಲ. ಆದರೆ ಆ ಕಾಲದಲ್ಲಿ, ನನ್ನೊಳಗೆ ಇಂಗ್ಲಿಷ್ ಬಗೆಗಿದ್ದ ವಿಚಿತ್ರ ಕುತೂಹಲ ಮತ್ತು ಕೀಳರಿಮೆಯನ್ನು ನಿವಾರಿಸಿಕೊಳ್ಳುವ ಸಲುವಾಗಿ ನಾನು ಯಾವಾಗಲೂ ಮಾಡುತ್ತಿದ್ದ ಹಾಗೆ ಸಿಮೊನ್‌ಳ ಆ ಪುಸ್ತಕದ ಪದಗಳನ್ನು ಅನುವಾದಿಸುತ್ತ ಒಂದೆರಡು ಪುಟಗಳನ್ನು ನನ್ನ ಯದ್ವಾತದ್ವ ಬಗೆಯಲ್ಲಿ ಕನ್ನಡಕ್ಕಿಳಿಸಿದ್ದೆ!

ಈಗ, ವಿಕ್ರಮ್ ವಿಸಾಜಿ ಅವರು ಪ್ರಕಟಣೆಗೆ ಸಿದ್ಧಪಡಿಸಿರುವ ‘ಸಿಮೊನ್ ದ ಬೋವಾ: ಮಾತು ಕಥನ’ ಕೃತಿಯನ್ನು ಓದಲು ಕೈಗೆತ್ತಿಕೊಂಡಾಗ ನನ್ನ ಎಳೆವಯಸ್ಸಿನ ಆ ಹುಚ್ಚಾಟಗಳು ಮನಸ್ಸಿನಲ್ಲಿ ಹಾದು ಹೋದವು. ಆ ದಿನಗಳ ನಂತರ ನಾನು ಸಿಮೊನ್‌ಳನ್ನು ಮತ್ತೆ ಭೇಟಿಯಾದದ್ದು ಎಂ.ಎ. ಓದುತ್ತಿರುವಾಗ. ಆಕೆಯನ್ನು ಓದುತ್ತ ಹೋದಂತೆ ನನ್ನೆದುರು ಹೊಸ ಆಲೋಚನಾ ಮಾರ್ಗವು ತೆರೆದುಕೊಂಡದ್ದು ಕೂಡ ನೆನಪಿದೆ. ಮನಸ್ಸಿನ ಮೂಲೆಯಲ್ಲೆಲ್ಲೋ ಹೂತಿದ್ದ ‘ದ ಸೆಕೆಂಡ್ ಸೆಕ್ಸ್’ ಕೃತಿಯನ್ನು ಅನುವಾದಿಸಬೇಕೆಂಬ ಆಸೆ ಆಗ ಮತ್ತೊಮ್ಮೆ ಪುಟಿದೆದ್ದಿತ್ತಾದರೂ ಅದೇಕೋ ಆಗಲೂ ಅದು ಸಾಧ್ಯವಾಗಲಿಲ್ಲ. ನಂತರ, ಎಚ್.ಎಸ್.ಶ್ರೀಮತಿಯವರು ಅದನ್ನು ಕನ್ನಡಕ್ಕೆ ತಂದ ಮೇಲೆ ನನ್ನ ಮನಸ್ಸು ಸ್ವಲ್ಪ ನಿರಾಳಗೊಂಡಿದ್ದೂ ಈಗ ನೆನಪಾಗುತ್ತಿದೆ…

ಸಿಮೊನ್‌ಳ ಆತ್ಮಕಥೆಯ ಭಾಗಗಳು, ಸಂದರ್ಶನ, ಲೇಖನ, ಪತ್ರಗಳು, ಭಾಷಣಗಳನ್ನು ಒಂದೆಡೆ ಸಂಕಲಿಸಿ, ಅವನ್ನು ಅನುವಾದಿಸಿ, ಪ್ರತಿ ಅಧ್ಯಾಯಕ್ಕೂ ಪುಟ್ಟ ಟಿಪ್ಪಣಿ ಮಾಡಿ, ಅನುಬಂಧ ನೀಡಿ- ಇವೆಲ್ಲವುಗಳ ಮೂಲಕ ಪುಸ್ತಕಕ್ಕೆ ಭಿನ್ನ ಚೌಕಟ್ಟು ನೀಡಿರುವ ವಿಕ್ರಮ್ ಅವರ ಕೆಲಸ ಅಭಿನಂದನಾರ್ಹವಾದುದು. ಸಿಮೊನ್‌ಳ ಲೋಕದೃಷ್ಟಿ, ಚಿಂತನಾಕ್ರಮ, ಬದುಕಿನ ಬಗೆಗಿನ ಆಳ ದೃಷ್ಟಿಕೋನ; ಸಾಹಿತ್ಯ ಪ್ರಕಾರಗಳ, ಮನುಷ್ಯ ಸಂಬಂಧಗಳ ಕುರಿತಾದ ಒಳನೋಟಗಳು; ಹೆಣ್ಣಿನ, ಮನುಷ್ಯ ಬದುಕಿನ ಚೈತನ್ಯದ ಹುಡುಕಾಟಗಳು ಎಲ್ಲ ಚೌಕಟ್ಟನ್ನೂ ಭೇದಿಸುವ ಶಕ್ತಿಯುಳ್ಳದ್ದು ಎಂಬುದೇ ಈ ಕೃತಿಯ ಶಕ್ತಿ.

ಈ ‘ಮಾತು-ಕಥನ’ದ ವಿವರಗಳ ಆಯ್ಕೆಯಲ್ಲಿ ಕೆಲಸ ಮಾಡಿರುವ ತಿಳಿವಳಿಕೆ ಮತ್ತು ದೃಷ್ಟಿಕೋನಗಳನ್ನು ಕಂಡುಕೊಳ್ಳುವುದೂ ಮುಖ್ಯ. ಬೇರೆ ಯಾರೋ ಇದನ್ನು ಸಂಪಾದಿಸಿದ್ದರೆ ಇದರ ಸ್ವರೂಪವೂ ಬದಲಾಗುತ್ತಿತ್ತು. ಇಲ್ಲಿನ ಸೃಜನಶೀಲ ಅನುವಾದಗಳು ಮತ್ತು ವೈಚಾರಿಕ ಬರಹಗಳನ್ನು ಓದುವ ವಿಭಿನ್ನ ವಿಧಾನಗಳನ್ನು ಕೂಡ ಓದುಗರು ರೂಪಿಸಿಕೊಳ್ಳಬೇಕು. ಯಾಕೆಂದರೆ ಒಬ್ಬ ಲೇಖಕಿಯ ಕಥೆ-ಆತ್ಮಕಥೆ ಮತ್ತು ವಿಚಾರಗಳ ನಡುವೆ ಸಹಯೋಗ, ವಾಗ್ವಾದ, ಭಿನ್ನಮತ ಎಲ್ಲವೂ ಇರುತ್ತವೆ. ಅವನ್ನು ಒಟ್ಟಂದದಲ್ಲಿ ನೋಡಿದಾಗ ಮಾತ್ರ ನಮಗೆ ಸಂಕೀರ್ಣ ಗ್ರಹಿಕೆಯು ದಕ್ಕಬಲ್ಲದು.

ಸಿಮೊನ್ ದ ಬೋವಾ ಕೇವಲ ಸ್ತ್ರೀವಾದಿ ಚಿಂತಕಿಯಲ್ಲ. ಆಕೆ ಮಹಾನ್ ಮಾನವತಾವಾದಿ. ತತ್ವಶಾಸ್ತ್ರಕ್ಕೂ ಮಹತ್ವದ ಕಾಣಿಕೆ ನೀಡಿದವಳು. ಸ್ತ್ರೀವಾದದ ಹಲವು ಕವಲುಗಳಲ್ಲಿ ಆವಳದೂ ಒಂದು. ‘ಅಸ್ತಿತ್ವವಾದ’ ಮತ್ತು ಸ್ತ್ರೀವಾದ’ಗಳ ವಿಶಿಷ್ಟ ಸಂಯೋಜನೆಯಾಗಿ ಆಕೆಯ ಬದುಕು ಬರಹವನ್ನು ನೋಡಲಾಗಿದೆ. ಆಕೆಯ ಹುಡುಕಾಟ, ಆಲೋಚನಾ ಹಾದಿಯಲ್ಲಿ ಕಾಣುವಂತಹದ್ದು ಪಿತೃಪ್ರಧಾನ ಸಮಾಜದ ವಿಶ್ಲೇಷಣೆ ಮಾತ್ರವಲ್ಲ, ಅಲ್ಲಿ ಮನುಷ್ಯನ ಅಸ್ತಿತ್ವಕ್ಕೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳ ಅರಸುವಿಕೆಯೂ ಇದೆ. ಸ್ತ್ರೀವಾದದ ವಿಭಿನ್ನ ನೆಲೆಗಳಾದ ಫ್ರೆಂಚ್, ಬ್ರಿಟಿಷ್ ಮತ್ತು ಅಮೆರಿಕನ್ ಚಿಂತನೆಗಳ ಚಲನಶೀಲ ಚೌಕಟ್ಟಿನಲ್ಲಿ ಆಕೆಯ ಚಿಂತನೆಗಳ ಅನನ್ಯತೆಯನ್ನು ಪರಿಶೀಲಿಸುವ ಅಗತ್ಯವಿದೆ.

ನಮ್ಮ ದೇಶದಲ್ಲಿ ಕೂಡಾ ಬಿ.ಜೆ.ಪಿ.ಯಿಂದ ಮಾರ್ಕ್ಸಿಸ್ಟ್ ಚಿಂತಕರವರೆಗೆ, ಗಾಂಧೀವಾದಿಗಳಿಂದ ಮೊದಲಾಗಿ ಅಂಬೇಡ್ಕರ್ ವಾದಿಗಳವರೆಗೆ ಎಲ್ಲರೂ ಸ್ತ್ರೀವಾದದ ವಿವಿಧ ಆವೃತ್ತಿಗಳನ್ನು ಮಂಡಿಸುತ್ತಾರೆ. ಇಂತಹ ಆಲೋಚನೆಗಳ ನಡುವೆ ಇರುವ ಪರಸ್ಪರ ವಿರೋಧಗಳ ನಡುವೆಯೂ ಹೆಣ್ಣಿನ ಕುರಿತಾಗಿ ಸಮಾನ ನೆಲೆಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಕ್ರಿಯಾಶೀಲ ಹೋರಾಟಗಾರರ ಮೂಸೆಯಲ್ಲಿ ಮೈಪಡೆಯುವ ಸ್ತ್ರೀವಾದಕ್ಕೂ, ಸೃಜನಶೀಲ ಲೇಖಕಿಯರ ಬರವಣಿಗೆಯಲ್ಲಿ ಕಾಣುವ ಸೂಕ್ಷ್ಮ ಸಂವೇದನೆಗಳಿಗೂ ಇರುವ ವ್ಯತ್ಯಾಸಗಳೂ ಮುಖ್ಯವೇ ಎಂಬುದು ಸಿಮೊನ್‌ಳ ಕ್ರಿಯಾಶೀಲ ಮನಸ್ಸನ್ನು ನೋಡಿದಾಗ ಮನದಟ್ಟಾಗುತ್ತದೆ. ಇವೆಲ್ಲವನ್ನೂ ಕಂಡುಕೊಳ್ಳುವ ಮತ್ತು ಬಿಡಿಸಿಕೊಳ್ಳುವ ಕೈಗನ್ನಡಿಯಾಗಿ ವಿಕ್ರಮ್ ಅವರ ಪುಸ್ತಕವನ್ನು ನಾವು ಬಳಸಿಕೊಳ್ಳಬಹುದು.

ಸಿಮೊನ್ ಅವರ ಬರವಣಿಗೆಯ ಜೊತೆಗೆ ಆಕೆಯ ಬದುಕಿನ ಪುಟಗಳನ್ನು ಕೂಡ ಇಲ್ಲಿ ದಾಖಲಿಸಿರುವುದು ಭಿನ್ನ ನೆಲೆಯಲ್ಲಿ ಆಕೆಯನ್ನು ಗ್ರಹಿಸಲು ನೆರವಾಗಿದೆ. ಸಿಮೊನ್ ಕಳೆದ ಶತಮಾನದ ಮೊದಲ ದಶಕದಲ್ಲಿ ಹುಟ್ಟಿದವಳು. ತನ್ನ ಇಂದ್ರಿಯಲೋಕ, ಭಾವಲೋಕ ಮತ್ತು ವಿಚಾರಲೋಕಗಳು ‘ಸ್ವತಃ ತನ್ನದು’ ಎಂದು ಹೇಳಿದ್ದಕ್ಕೆ, ಹಾಗೆ ಬದುಕಿದ್ದಕ್ಕೆ ಆಕೆ ಪಡಿಪಾಟಲುಗಳನ್ನು ಪಡಬೇಕಾಯಿತು. ಈ ಕಾರಣಕ್ಕಾಗಿ, ಇಂದಿನ ಇಂಡಿಯಾದಷ್ಟೇ ಸಂಪ್ರದಾಯಬದ್ಧವಾಗಿದ್ದ ಅಂದಿನ ಯೂರೋಪಿನಲ್ಲಿ ಆಕೆ ಉದ್ಯೋಗವನ್ನೂ ಕಳೆದುಕೊಂಡಳು. ಅವಳನ್ನು ‘ಮಾತೃತ್ವದ ವಿರೋಧಿ’, ‘ಕುಟುಂಬವೆಂಬ ಸಂಸ್ಥೆ’ಯ ವಿರೋಧಿ ಮುಂತಾಗಿ ಬಣ್ಣಿಸಲಾಯಿತು.

ಇಂತಹ ಸಾಮಾಜಿಕ ಬಹಿಷ್ಕಾರದ ನಡುವೆಯೂ ಅವಳು ತನ್ನ ನಂಬಿಕೆಗಳಿಗೆ ಅನುಗುಣವಾಗಿಯೇ ಬದುಕಿದಳು, ಅದರ ಪರಿಣಾಮಗಳ ‘ಶಿಲುಬೆ-ಕಿರೀಟ’ವನ್ನು ಹೊತ್ತಳು. ಅವಳದು ಸ್ವಾತಂತ್ರ‍್ಯವೇ ಹೊರತು ಸ್ವಚ್ಛಂದತೆಯಲ್ಲ. ಕೊನೆಗೂ ‘ಸ್ವಚ್ಛಂದತೆ’ಯ ರೂಪುರೇಷೆಗಳನ್ನು ತೀರ್ಮಾನಿಸುವವರು ಯಾರು? ಈ ಹಿನ್ನೆಲೆಯಲ್ಲಿ, ಅವಳ ಬದುಕು ಬರಹಗಳಲ್ಲಿ ಈ ಕಾಲದ ನಮಗೂ ಕೆಲವು ಅನುಕರಣೀಯ ಪಾಠಗಳಿವೆ. ಕೇವಲ ಸ್ತ್ರೀವಾದಿಗಳಿಗೆ ಮಾತ್ರವಲ್ಲ, ಎಲ್ಲ ಸಂವೇದನಶೀಲರಿಗೂ ಮುಖ್ಯವೆನಿಸುವ ಈ ಬರಹಗಳ ಉಪಯುಕ್ತತೆ ಎಲ್ಲ ಕಾಲಕ್ಕೂ ಇರುತ್ತದೆ.

ನಾನು ನನ್ನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಭಾಷಿಕ ಸಂದರ್ಭದ ಫಲವಾದ ಸಂವೇದನೆಯ ಮೂಲಕವೇ ಮತ್ತೊಂದು ಬರಹ, ಕೃತಿಯನ್ನು ಓದುವುದು. ಆದರೆ ಅನುವಾದವು ನಾನು ಬರಿದೇ ಕನ್ನಡಿಗಳು ಅಥವಾ ಭಾರತೀಯಳು ಎನ್ನುವ ಪರಿಧಿಯ ಆಚೆ ನಿಂತು ಅನ್ಯಭಾಷಿಕ, ಅನ್ಯಸಾಂಸ್ಕೃತಿಕ ಸನ್ನಿವೇಶದ ಎದುರಿನಲ್ಲಿ ನಿರಪೇಕ್ಷ ಸ್ಥಿತಿಯಿಂದ ನನ್ನನ್ನು ನಾನು ನೋಡುವಂತೆ ಒತ್ತಾಯಿಸುವ ಕೆಲಸ. ಭಾಷೆಯ ಅಂತರದಿಂದ ಆರಂಭವಾಗುವ ಈ ಪ್ರಕ್ರಿಯೆಯು ಕ್ರಮೇಣ ಭಾವ, ವಿಚಾರ, ನಾಗರೀಕತೆ, ಸಂಸ್ಕೃತಿ ಮತ್ತು ಪ್ರಜ್ಞೆಯ ವಲಯಗಳಿಗೆ ವಿಸ್ತರಿಸಿಕೊಳ್ಳುವುದನ್ನು ಗಮನಿಸುವುದು ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಕುತೂಹಲಕರ ಸಂಗತಿ.

ಒಂದರ ಮುಖಾಂತರ ಮತ್ತೊಂದು ತೆರೆದುಕೊಳ್ಳುವ, ಒಂದಕ್ಕೆ ಮತ್ತೊಂದು ಅನುವಾಗುವ ಕ್ರಿಯೆ ಇದು. ಮೂಲದ ಸೃಷ್ಟಿಯನ್ನು ‘ಅನುಸರಿಸಿ’ ನಡೆಯುವ ಈ ಪ್ರಕ್ರಿಯೆಯು ‘ಅನುಸೃಷ್ಟಿ’ ಆಗಿದ್ದರೂ, ಮೂಲ ಪಠ್ಯವನ್ನು ‘ಅನುಸರಿಸಿ’ ಹೇಳುವುದರ ಜೊತೆಗೆ ಒಂದು ‘ಪಠ್ಯದ ಒಳಗಿರುವ ಹಲವು ಪದರಗಳ ಅರ್ಥವಿನ್ಯಾಸಗಳನ್ನು ಹುಡುಕುವುದಕ್ಕೆ ಭಾಷಾಂತರಕಾರ ‘ಅನು’ವಾಗುವ ಕ್ರಿಯೆಯೂ ಹೌದು. ಎಂದರೆ ಭಾಷಾಂತರಕಾರನು ಮೂಲದ ನೆರವಿನಿಂದ ಹೊಸದೊಂದು ‘ಪಠ್ಯ’ವನ್ನು ನಿರ್ಮಿಸುತ್ತಿರುತ್ತಾನೆ; ಅದು ಮೂಲದ ಸಾಧ್ಯತೆಗಳನ್ನು ವಿಸ್ತರಿಸುತ್ತದೆ, ಕೆಲವೊಮ್ಮೆ ಬದಲಿಸುತ್ತದೆ. ಸಂಪೂರ್ಣವಾಗಿ ನೇರ ಭಾಷಾಂತರಕ್ಕೆ ಹೋಗದೆ ಸೃಜನಶೀಲ ರೂಪಾಂತರವನ್ನೇ ನೆಚ್ಚಿ ಮಾಡಿರುವ ವಿಕ್ರಮ್ ಅವರ ಅನುವಾದದ ಬಹುಪಾಲು ಭಾಗವು ಸಹಜವಾಗಿ ಕನ್ನಡಕ್ಕೆ ಒಗ್ಗಿದೆ. ಅಲ್ಲಿಲ್ಲಿ ಕೊಂಚ ಪೆಡಸಾಗಿರುವ ಮತ್ತು ಈ ಕಾರಣಕ್ಕಾಗಿಯೇ ಪೇಲವ ಅನ್ನಿಸುವ ಕೆಲವು ಭಾಗಗಳು ವಿಕ್ರಮ್ ಅವರ ಮುಂದಿನ ಅನುವಾದ ಕೃತಿಯಲ್ಲಿ ‘ಭಾವ’ವಾಗಿ ಒಡಮೂಡಲಿ ಎಂದು ಹಾರೈಸುತ್ತೇನೆ.

ಪ್ರಸ್ತುತ ಕೃತಿಯಲ್ಲಿ ಒಂದು ಅಧ್ಯಾಯವು ಮತ್ತೊಂದಕ್ಕೆ ತೆಕ್ಕೆ ಹಾಕಿಕೊಂಡು ಬೆಳೆದಿದೆ, ಅದರೊಳಗಿನ ವಿಚಾರಗಳೂ ಒಂದಕ್ಕೊಂದು ಹೆಣೆದುಕೊಂಡು ನಮ್ಮ ‘ನೋಟ’ವನ್ನು ‘ಕಾಣ್ಕೆ’ಯಾಗಿ ಬದಲಾಯಿಸುತ್ತ ಸಾಗುತ್ತದೆ. ವ್ಯಕ್ತಿಯ ಅಂತರಂಗ, ಕಟ್ಟಿಕೊಂಡಿರುವ ಸಂಬಂಧಗಳು, ಆವರಿಸಿರುವ ಜೀವನ, ಇತಿಹಾಸ, ಸಮಾಜ ಇವೆಲ್ಲವೂ ಯಾವುದೋ ಸಂಕೀರ್ಣ ಬಗೆಯಲ್ಲಿ ಬೆರೆತು ಬಾಳುತ್ತಿರುತ್ತವೆ. ಸಾಹಿತ್ಯವು ಇಂಥ ಹದವನ್ನು ಕಂಡುಕೊಳ್ಳುವ ಹುಡುಕಾಟ. ಸಿಮೊನ್‌ಳ ಹುಡುಕಾಟವನ್ನು ಹದಗೆಡಿಸದ ಬಗೆಯಲ್ಲಿ ಪೋಣಿಸಿರುವ ಈ ಪ್ರಯತ್ನವು ಸ್ವತಃ ವಿಕ್ರಮ್ ಅವರ ಬದುಕು ಮತ್ತು ಸಾಹಿತ್ಯದ ಹುಡುಕಾಟವನ್ನೂ ದಾಖಲಿಸುತ್ತಿದೆ.

ಸಾಹಿತ್ಯ ಮತ್ತು ಅನುವಾದ ಅಧ್ಯಯನವು ‘ಸಾಂಸ್ಕೃತಿಕ ಅಧ್ಯಯನ’ಗಳಾಗಿ ಬೆಳೆಯುತ್ತಿರುವ ಇತಿಹಾಸದ ಈ ಹಂತದಲ್ಲಿ ಯಾವ ಅನುವಾದದಿಂದ ಎಷ್ಟು ಪ್ರಯೋಜನ ಎನ್ನುವುದು ಮುಖ್ಯ. ಇಲ್ಲಿ ‘ಪ್ರಯೋಜನ’ ಎನ್ನುವುದನ್ನು ಲೋಕರೂಢಿಯ ಅರ್ಥದಲ್ಲಿ ಹೇಳುತ್ತಿಲ್ಲ, ಬದಲಾಗಿ ನನ್ನ ಕಾಲದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾಷಿಕ ಪ್ರಪಂಚಕ್ಕೆ ನಾನು ಮಾಡುವ ಅನುವಾದದಿಂದ ಯಾವ ಪ್ರಯೋಜನ ಎನ್ನುವ ದೃಷ್ಟಿಯಿಂದ ಹೇಳುತ್ತಿದ್ದೇನೆ. ಅನುವಾದವು ಆಳವಾದ ಸಮುದಾಯ ಪ್ರಜ್ಞೆಯಿಂದ ಉಂಟಾಗಬೇಕಾದ ಕೆಲಸ. ಅನುವಾದಕ್ಕೆ ಅನುವಾದಕನು ಆರಿಸಿಕೊಳ್ಳುವ ಕೃತಿಯ ಹಿಂದೆ ಅನುವಾದಕನ ಆಲೋಚನಾ ಕ್ರಮ ಮತ್ತು ಅವನ ಕಾಲದ ಸಾಂಸ್ಕೃತಿಕ ಅಗತ್ಯಗಳೂ ಸೇರಿಕೊಂಡಿರುತ್ತವೆ ಎನ್ನುವ ಅರಿವೂ ಮುಖ್ಯ. ‘ಕನ್ನಡದಲ್ಲೀಗ ಸ್ತ್ರೀವಾದದ ಕುರಿತು ಅನೇಕ ಕೃತಿ ಹಾಗು ಲೇಖನಗಳು ಪ್ರಕಟಗೊಂಡಿವೆ. ಇದೆಲ್ಲದರ ಮುಂದುವರಿಕೆ ಎಂಬಂತೆ ಇದು ಕೂಡ ಪ್ರಸಿದ್ಧ ಸ್ತ್ರೀವಾದಿ ಸಿಮೊನ್ ದ ಬೋವಾ ಅವರ ಬರಹಗಳ ಕನ್ನಡಾನುವಾದ’ ಎಂದು ಹೇಳಿಕೊಂಡಿರುವ ವಿಕ್ರಮ ವಿಸಾಜಿ ಅವರ ಈ ಅನುವಾದ ಕೃತಿಯು ಕನ್ನಡದ ಚಿಂತನಾ ಕ್ರಮಕ್ಕೆ ಮತ್ತು ಅನುವಾದ ಕ್ಷೇತ್ರಕ್ಕೆ ಹೊಸ ಮಾತು ಸೇರಿಸುತ್ತದೆ ಎಂದು ನಂಬಿದ್ದೇನೆ.

‍ಲೇಖಕರು Admin

October 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: