ಸಂಯುಕ್ತಾ ಪುಲಿಗಲ್‌ ಅನುವಾದಿತ ʼಗೂಡಿನಿಂದ ಬಾನಿಗೆʼ

ಸಂಯುಕ್ತಾ ಪುಲಿಗಲ್

ಹೇಮಾ ಹಟ್ಟಂಗಡಿ

ಹರವಿ ಹಾರಲೇಬೇಕಾದ ರೆಕ್ಕೆಗಳನ್ನು ಕಟ್ಟಿ ಕೂತಿದ್ದ ನನಗೆ ಒಳಗೊಳಗೇ ಒಂದು ಬಹುದೊಡ್ಡ ಮಹತ್ವಾಕಾಂಕ್ಷೆಗೆ ನೀರೆರೆದು ಪೋಷಿಸುತ್ತಿದ್ದೆ ಎಂಬುದು ತಿಳಿದಿತ್ತು. ನನ್ನ ಬದುಕಿನ ನಿಜಾರ್ಥವನ್ನು ಜಗತ್ತಿಗೆ ತೋರಬೇಕೆಂಬುದೇ ಆ ಮಹತ್ವಾಕಾಂಕ್ಷೆಯಾಗಿತ್ತು. 

ನಮ್ಮ ಮನೆಯಲ್ಲಿದ್ದ ನಾಲ್ಕು ಹೆಣ್ಣು ಮಕ್ಕಳಲ್ಲಿ ನಾನು ಚಿಕ್ಕವಳು. ನಮ್ಮ ತಂದೆ ಕೇಂದ್ರ ಸರ್ಕಾರಿ ಕೆಲಸದಲ್ಲಿದ್ದವರು. ನಮ್ಮ ಪೋಷಕರಿಂದ ನಾವು ಕಲಿತ ಪಾಠವೆಂದರೆ ಕಡಿಮೆಯಿಂದ ಹೆಚ್ಚನ್ನು ನೆರವೇರಿಸುವುದು. ವರ್ಷಗಳ ನಂತರ ನನ್ನ ಸಂಸ್ಥೆಯನ್ನು ಮಾರಾಟ ಮಾಡಿದ ಶ್ನೇಡರ್ ಸಂಸ್ಥೆಯ ಗುರಿಯೂ ಸಹ ಅಲ್ಪದ್ದರಿಂದ ಅಗಾಧವಾದದ್ದನ್ನು ಸಾಧಿಸುವುದೇ ಆಗಿತ್ತು.

ಕನ್ಸರ್ವ್ ನನ್ನು ಕಟ್ಟಿ ಬೆಳೆಸಿದ್ದ ಕುಟುಂಬದಲ್ಲಿ ನನ್ನ ವಿವಾಹವಾಯಿತು. ಹಿಂದೂಸ್ಥಾನ್ ಲೀವರ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಟಿ.ಥಾಮಸ್ ಅವರು ತಮ್ಮ ಇಂಡಸ್ ಬಂಡವಾಳ ನಿಧಿ ಸಂಸ್ಥೆಯ ಮೂಲಕ ಕನ್ಸರ್ವ್ ನಲ್ಲಿ ಹೂಡಿಕೆ ಮಾಡಿದ್ದರು. ಅವರು ‘ನಮ್ಮಲ್ಲಿ 32 ವರ್ಷದವರು ಅತ್ಯಂತ ಕಿರಿಯ ಸಿಇಒ ಆಗಿ ಬೆಳೆದಿದ್ದ ಉದಾಹರಣೆಗಳಿವೆ. ನಿಮಗೆ 33 ವರ್ಷಗಳು. ಹಾಗಾಗಿ ನೀವು ಖಂಡಿತ ಈ ಕೆಲಸವನ್ನು ನಿಭಾಯಿಸಬಲ್ಲಿರಿ. ವೃತ್ತಿಪರತೆ ಮತ್ತು ಲಾಭಾಂಶದ ಹೊಣೆ ನಿಮ್ಮ ಮೇಲಿದೆ’ ಎಂದು ಹೇಳಿದ್ದರು. 

ಹಾಂ! ಆ ದಿನಗಳು ಸುಲಭವಾದವೇನಾಗಿರಲಿಲ್ಲ. ನನ್ನ ಮಾವ, ನನ್ನ ಮೈದುನ ಮತ್ತು ನನ್ನ ಪತಿಯೂ ನನಗೆ ಕೆಲಸ ಒಪ್ಪಿಸಬೇಕಾಗಿತ್ತು. ನಿವ್ವಳ ಮೊತ್ತವು ಸಂಪೂರ್ಣ ನಶಿಸಿಹೋಗುತ್ತಿದ್ದಂತಹ ಸಂಸ್ಥೆಯ ಕೈಹಿಡಿದು ನಾನು ವ್ಯವಹಾರ ಕುದುರಿಸಬೇಕಾಗಿತ್ತು. ಪುರುಷನಲ್ಲದ, ತಾಂತ್ರಿಕ ವಿದ್ಯೆಯಿಲ್ಲದ ಹೆಣ್ಣಾಗಿದ್ದ ನನಗೆ, ಒಂದು ಸೋತ ಸಂಸ್ಥೆಯನ್ನು ರೂಪಾಂತರಗೊಳಿಸುವ ಸೂಚನೆ ದೊರೆತಿತ್ತು. ನಾವು ಹತ್ತೇ ವರ್ಷಗಳಲ್ಲಿ ನೂರು ಸಾವಿರ ಡಾಲರುಗಳ ಬಂಡವಾಳವಾಗಿದ್ದ ಸಣ್ಣ ಸಂಸ್ಥೆಯನ್ನು 25 ಮಿಲಿಯನ್ ಡಾಲರ್ ಗಳ ಮೌಲ್ಯಕ್ಕೆ ಏರುವಂತೆ ಬೆಳೆದೆವು.

ಈ ಎಲ್ಲವನ್ನೂ ಅತ್ಯಂತ ಸ್ವಸ್ಥ, ಶುದ್ಧ ವ್ಯಾಪಾರದ ಮೂಲಕವೇ ಸಾಧಿಸಿದ್ದೆವು. ನನ್ನ ಪುಸ್ತಕದಲ್ಲಿ ಮೌಲ್ಯಯುಕ್ತ ವ್ಯಾಪಾರಕ್ಕಾಗಿ ಒಂದು ಸಂಪೂರ್ಣ ಅಧ್ಯಾಯವನ್ನು ಮುಡಿಪಾಗಿಸಿದ್ದೇನೆ. ಕೆಲವೊಮ್ಮೆ ಗ್ರಾಹಕರಿಗೆ ’ಇಲ್ಲ’ವೆಂದು ಹೇಳುವ ಸಂದರ್ಭ ಬಂದರೂ, ನಮ್ಮ ಗುರಿಗಳನ್ನು ಸೇರಲು ಸಾಧ್ಯವಾಗದೇ ಹೋದರೂ ಅಡ್ಡಿಯಿಲ್ಲ. ಆದರೆ ನಮ್ಮ ಕೈ ಪರಿಶುದ್ಧವಾಗಿರಬೇಕೆಂದು ನಾವು ನಿರ್ಧರಿಸಿದ್ದೆವು. 

ಈ ಎಲ್ಲ ಸವಾಲುಗಳ ನಡುವೆ ಕೆಲವೊಮ್ಮೆ ನಿತ್ರಾಣಗೊಂಡು ಮಂಕಡರುವುದು ನಿಜ. ಬೆಳ್ಳನೆಯ ಮುಂಜಾನೆಯ ಸಮಯ ನಿದ್ದೆಯಿಂದೆದ್ದರೆ ಎಲ್ಲವೂ ಕಗ್ಗತ್ತಲಾಗಿದ್ದ ಅನುಭವವಾಗುತ್ತಿತ್ತು. ಅಂಥಹ ಸಂದರ್ಭ ಎದುರಾದರೆ ಅದಕ್ಕೆ ನನ್ನ ಸಲಹೆ –  ನಂಬಿಕೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟು, ಮಾಡುವ ಕೆಲಸ ದೀರ್ಘಾಯುವಾಗಿರುವಂತೆ, ಗುಣಮಟ್ಟದ್ದಾಗಿರುವಂತೆ ಮಾಡಿ.  ಒಬ್ಬ ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ, ಸೊಸೆಯಾಗಿ ಒಂದು ಯಶಸ್ವಿ ಸಂಸ್ಥೆಯನ್ನು ಬೆಳೆಸಿದ್ದೇನೆ. ಈಗ ಆ ಸಂಸ್ಥೆ ಒಂದು ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಯ ಭಾಗವಾಗಿದೆ.

ನೈಜ ವ್ಯಕ್ತಿತ್ವದ ನಾನು ಗೂಡಿನಿಂದ ಬಾನಿಗೆ ಪುಸ್ತಕದ ಮೂಲಕ ನನ್ನ ನಿಜವಾದ ಕಥೆಯನ್ನು ಹೇಳಹೊರಟಿದ್ದೇನೆ.    

ಕಲೆ, ಸಾಹಿತ್ಯ, ಇತಿಹಾಸ ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ನಾನು, Lift Off ನಂತಹ ತಾಂತ್ರಿಕ ಉದ್ಯಮಶೀಲತೆಯ ಕುರಿತಾದ ಪುಸ್ತಕವನ್ನು ಅನುವಾದಗೊಳಿಸುವ ಅವಕಾಶ ಒದಗಿಬಂದಾಗ ಮೊದಲಿಗೆ ಹಿಂಜರಿದಿದ್ದೆ. ನನ್ನದೇ ವೈಯಕ್ತಿಕ ಕಾರಣಗಳನ್ನು ಒಡ್ಡಿಕೊಂಡು ಆ ಆಲೋಚನೆಯನ್ನೇ ಮುಂದೂಡಿದ್ದೆ.

ವಸಂತ್ ಶೆಟ್ಟಿ ಅವರು, ಇದು ವಿದ್ಯುತ್ ಉದ್ದಿಮೆಯಲ್ಲಿ ಸೆಣೆಸಿ ಗೆದ್ದ ಹೆಣ್ಣೊಬ್ಬಳ ಸಾಹಸದ ಕತೆ ಎಂದು ವಿವರಿಸಿದಾಗ, ಒಬ್ಬ ಹೆಣ್ಣಾಗಿ, ಉದ್ಯೋಗಿಯಾಗಿ, ತಾಯಿಯಾಗಿ ನನಗೆ ಆ ಉದ್ಯಮಿಯ ಕತೆ ಬಹುಬೇಗ ಹತ್ತಿರವಾಗಿಹೋಯಿತು. ಯಾವುದೇ ರೀತಿಯ ಹಿನ್ನೆಲೆಯಿರದೆ ವಿದ್ಯುಚ್ಛಕ್ತಿ ನಿಯಂತ್ರಣದಂತಹ ಸಂಪೂರ್ಣ ತಾಂತ್ರಿಕ ವಿಷಯವನ್ನು ನಾನು ಮತ್ತೊಂದು ಭಾಷೆಗೆ ತರ್ಜುಮೆ ಮಾಡುವುದಾದರೂ ಹೇಗೆ ಎಂದು ಮನಸ್ಸು ಸ್ವಲ್ಪ ಅಧೀರಗೊಂಡಿದ್ದರೂ ಆ ಪುಸ್ತಕವನ್ನು ಒಮ್ಮೆ ಓದುವ ಧೈರ್ಯ ಮಾಡೋಣವೆನಿಸಿತ್ತು.

ಪುಸ್ತಕದ ಓದಿನ ನಡುವೆಯೇ ನಾನು ಆ ಕತೆಗೆ ಶರಣಾಗಿಹೋದೆ. ಹೇಮಾ ಹಟ್ಟಂಗಡಿಯವರು ನನ್ನಲ್ಲಿ ಮತ್ತು ನನ್ನಂತಹ ಎಲ್ಲ ಮಹಿಳೆಯರಲ್ಲಿ ಅವಿತಿರಬಹುದಾದ, ಬದುಕನ್ನು ಸೆಣಸುವ ಛಲವನ್ನು ತಮ್ಮ ಸರಳ ನಿರೂಪಣೆಯ ಮೂಲಕವೇ ಬಡಿದೆಬ್ಬಿಸುವ ಅನುಭವವನ್ನು ಪುಟಪುಟದಲ್ಲಿಯೂ ನೀಡಿದ್ದಾರೆ. ಈ ಪುಸ್ತಕದಲ್ಲಿ ಒಬ್ಬ ಹಟವಾದಿ-ಛಲವಾದಿ ಹುಡುಗಿ, ಒಲುಮೆಯನ್ನು ಒಸರುವ ಪ್ರೇಮಿ, ಗಂಭೀರ-ಜವಾಬ್ದಾರಿಯುತ ಹೆಣ್ಣು, ಪ್ರೇಮ-ವಾತ್ಸಲ್ಯಭರಿತ ತಾಯಿ, ಗಂಡುನೆಲದಲ್ಲಿ ಸ್ಥಿರವಾಗಿ, ಎತ್ತರವಾಗಿ ನಿಲ್ಲಬಲ್ಲ ಸ್ತ್ರೀಶಕ್ತಿ ಎಲ್ಲವೂ ಆಗಿ ಹೇಮಾ ನಿಲ್ಲುತ್ತಾರೆ.

ಒಂದು ಸಂಸ್ಥೆಯನ್ನು ನಡೆಸುವ ಯಾವ ಹಿನ್ನೆಲೆ-ಅನುಭವಗಳೂ ಇರದ ಸಾಧಾರಣ ಮಹಿಳೆಯೊಬ್ಬಳು ಮನಸ್ಸು ಮಾಡಿದರೆ ಪುರುಷ ಪಾರಮ್ಯದ ಉದ್ಯಮದಲ್ಲೂ ಕೋಟಿಗಟ್ಟಲೆ ಬೆಲೆಬಾಳುವ ಸಂಸ್ಥೆಯನ್ನು ಮೌಲ್ಯಯುತವಾಗಿ, ಪ್ರಾಮಾಣಿಕವಾಗಿ ಆತ್ಮವಿಶ್ವಾಸದಿಂದ ಕಟ್ಟಿ ಬೆಳೆಸಬಲ್ಲಳು ಎಂಬುದಕ್ಕೆ ಹೇಮಾ ಅವರ ಈ ಕಥೆ ಉತ್ತಮ ನಿದರ್ಶನವಾಗಿದೆ. ತೀವ್ರತರವಾದ ನಷ್ಟಗಳನ್ನು ಅನುಭವಿಸಿ ಮುಳುಗಿಹೋಗುತ್ತಿರುವ ಸಣ್ಣ ಕೌಟುಂಬಿಕ ಸಂಸ್ಥೆಯೊಂದು ಹೇಮಾ ಅವರ ಆರೈಕೆಯ ನೆರಳಿನಲ್ಲಿ ಪಳಗಿ ಜಾಗತಿಕ ಮಟ್ಟಕ್ಕೇರಿ ಶ್ನೇಡರ್ ಎಲೆಕ್ಟ್ರಿಕ್ ನಂತಹ ಬಹುರಾಷ್ಟ್ರೀಯ ದೈತ್ಯದ ಗಮನಸೆಳೆಯುವ ಅದ್ಭುತವು ಈ ಪುಸ್ತಕದ ಮೂಲಕ ನಮಗೆ ಅನುಭವವಾಗುತ್ತದೆ. ಅಂತಹ ಅನುಭವವನ್ನೂ ಮೀರಿಸಿ ಕಾಡಿದ ಮತ್ತೊಂದು ಅಂಶವೆಂದರೆ ಹೇಮಾ ಅವರ ಸಂಸ್ಥೆ (ಈಗ ಶ್ನೇಡರ್ ಎಲೆಕ್ಟ್ರಿಕ್ ನೊಂದಿಗೆ ವಿಲೀನಗೊಂಡಿದೆ) ಇಂದು ಪ್ರತ್ಯೇಕ ಅಸ್ತಿತ್ವದಲ್ಲಿಲ್ಲದೇ ಹೋದರೂ ತನ್ನ ಯಾವುದೇ ಉದ್ಯೋಗಿಗಳನ್ನು ಕಳೆದುಕೊಂಡಿಲ್ಲ.

ಈ ಪುಸ್ತಕಕ್ಕಾಗಿ ನಡೆಸಿದ ಮಾಜಿ ಉದ್ಯೋಗಿಗಳ ಸಂದರ್ಶನಗಳನ್ನು ಕೇಳಿದರೆ ಇಂದಿಗೂ ಆ ಎಲ್ಲರಲ್ಲಿ ರೋಮಾಂಚನವಾಗುವಂತಹ ಆತ್ಮೀಯತೆ ಪುಟಿದೇಳುತ್ತದೆ. ಅಂತಹ ಸಪ್ರೇಮ, ಕಾಳಜಿಭರಿತ ವಾತಾವರಣವನ್ನು ನಿರ್ಮಿಸಿ, ಕಾರ್ಯನಿರ್ವಹಿಸಿ, ಯಶಸ್ವಿಯಾದದ್ದಕ್ಕೆ ಹೇಮಾ ಅವರಿಗೆ ನನ್ನ ಕಡೆಯಿಂದ ವಿಶೇಷ ಅಭಿನಂದನೆಗಳು. ಸಂಸ್ಥೆಯ ಜನತೆ ತೃಪ್ತರಾದರೆ ಆ ತೃಪ್ತಿ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರತಿಫಲಿಸುತ್ತದೆ ಎಂಬುದನ್ನು ಹೇಮಾ ನಿರೂಪಿಸಿದ್ದಾರೆ. ಹೇಮಾ ಅವರ ಸಹ ಲೇಖಕರಾದ ಆಶಿಶ್ ಸೇನ್ ಅವರೂ ಸಹ ಉತ್ತಮ ನಿರೂಪಕರು ಎಂಬುದು ಕಂಡುಬರುತ್ತದೆ.

ಸಮಾಜದ ಎಲ್ಲ ಸ್ಥರದ ಜನತೆಗೂ (ಪುರುಷರನ್ನೂ ಸೇರಿಸಿ) ಈ ಪುಸ್ತಕದಲ್ಲಿ ಹಲವಾರು ಒಳನೋಟಗಳು, ಪಾಠಗಳು ಇವೆ. ಈ ಪುಸ್ತಕದ ಅನುವಾದ ನನಗೆ ಅಗಾಧ ಪ್ರಯೋಜನದ ಜೊತೆಗೆ ಆನಂದವನ್ನೂ ಉಂಟುಮಾಡಿದೆ. ಓದುಗರಾದ ನಿಮಗೂ ಅದೇ ಅನುಭವವನ್ನು ನೀಡುತ್ತದೆ ಎಂದು ನಾನು ನಂಬಿದ್ದೇನೆ. ಈ ಅನುವಾದದ ಅವಕಾಶ ಕಲ್ಪಿಸಿದ ಪುಸ್ತಕದ ಲೇಖಕಿ ಹೇಮಾ ಹಟ್ಟಂಗಡಿ ಅವರು, ಮೈಲ್ಯಾಂಗ್ ಬುಕ್ಸ್ ಪವಮಾನ್ ಅಥಣಿ ಹಾಗೂ ವಸಂತ್ ಶೆಟ್ಟಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

‍ಲೇಖಕರು Admin

October 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: