KPME  ಎಂಬ ಕಾರ್ಪೋರೇಟ್ ವಿಜಯವು…!

ಲೋಕಸ್ ಸ್ಟಾಂಡಿ ಹೇಳಿಕೆ:

ನೀವೇನು ಡಾಕ್ಟ್ರಾ… ಇದನ್ನೆಲ್ಲ ಮಾತಾಡ್ಲಿಕ್ಕೆ? ಎಂಬ ಪ್ರಶ್ನೆಗೆ ನಮ್ರ ನಿವೇದನೆ ಎಂದರೆ, ಕಳೆದ 16 ವರ್ಷಗಳಿಂದ ಆರೋಗ್ಯ ಸಂಬಂಧಿ ಸಾಪ್ತಾಹಿಕವೊಂದರ ಸಂಪಾದಕನಾಗಿ ಪ್ರತಿದಿನ ವೈದ್ಯರ, ವೈದ್ಯಕೀಯ ಕಾಲೇಜೊಂದರ ಪ್ರೊಫೆಸರ್ ಗಳ, ವೈದ್ಯಕೀಯ ಲೇಖನಗಳ, ಅಧಿಕ್ರತ ಮಾಹಿತಿ ಒದಗಿಸುವ ವೈದ್ಯಕೀಯ-ಸಂಶೋಧನಾ ಸಂಸ್ಥೆಗಳ, ಓದುಗ ರೋಗಿಗಳ ಸಂಪರ್ಕದಲ್ಲಿ ಇದ್ದವ ನಾನು. ಹಾಗಾಗಿ ಪೂರ್ಣ  ಅಲ್ಲದಿದ್ದರೂ ಸಣ್ಣದೊಂದು ಅರ್ಹತೆ ಇದೆ ಎಂದುಕೊಂಡಿದ್ದೇನೆ.

ಯಾವುದೇ ಕಟ್ಟಡ, ಅದರ ತಳಪಾಯ ಸರಿಯಾಗಿಲ್ಲದಾಗ ಸ್ಥಿರವಾಗಿ ನಿಲ್ಲುವುದು ಸಾಧ್ಯವಿಲ್ಲ. ಭಾರತದಲ್ಲಿ ವೈದ್ಯಕೀಯ ವ್ಯವಸ್ಥೆಯ ತಳಪಾಯದ ಬಗ್ಗೆ ನಾನು ಈ ಮಾತು ಹೇಳುತ್ತಿದ್ದೇನೆ. ಬೇರೇನೂ ಬೇಡ; ಹಿಪೊಕ್ರಾಟಿಕ್ ಪ್ರತಿಜ್ನೆಯೊಂದೇ ಸಾಕಿತ್ತು ವೈದ್ಯನೊಬ್ಬ ಶ್ರದ್ಧೆಯಿಂದ ತನ್ನ ಸೇವೆ ಸಲ್ಲಿಸಲು. ಆದರೆ ಈವತ್ತು ನೂರೈವತ್ತು ಕಾನೂನುಗಳು ವೈದ್ಯಕೀಯ ಸೇವೆಯನ್ನು ನಿಯಂತ್ರಿಸಲು ಹೆಣಗಾಡಿ, ಸೋತು ನೂರೈವತ್ತೊಂದನೆಯದಕ್ಕೆ ದಾರಿ ಮಾಡಿಕೊಟ್ಟಿವೆ. ಈ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ 2007ಕ್ಕೆ ತರಲುದ್ದೇಶಿಸಿರುವ ಹೊಸ ತಿದ್ದುಪಡಿಗಳು ಮತ್ತು ಅದರ ಪರವಾಗಿ ಏಳುತ್ತಿರುವ ಜನರ ಧ್ವನಿ ಹೇಳುತ್ತಿರುವುದೇನು?

ವೈದ್ಯ ವಿಜ್ನಾನ ಯಾಕೆ ‘ ವಿಜ್ನಾನ’ ಎಂದರೆ, ಅದರಲ್ಲಿ ಸಂಶೋಧನೆಗಳಿಂದ ಕಂಡುಕೊಂಡ ಸತ್ಯಗಳಿವೆ, ಈ ಸತ್ಯ ಪ್ರತಿಯೊಂದು ಹೊಸ ಶೋಧದೊಂದಿಗೆ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ.  ವೈದ್ಯ ವಿಜ್ನಾನದ ಪ್ರಾಕ್ಟೀಷನರ್ ಆದ ವೈದ್ಯ ವ್ಯವಹರಿಸುವುದು ಮನುಷ್ಯ ಜೀವದ ಜೊತೆಗಾದ್ದರಿಂದ, ಬೇರೆ ವರ್ಗದ ಶಾಸ್ತ್ರೀಯ ಪ್ರಾಕ್ಟೀಷನರ್ ಗಳಿಗಿಂತ (ಉದಾ: ಎಂಜಿನಿಯರ್, ವಕೀಲ, ಅಕೌಂಟಂಟ್ ಇತ್ಯಾದಿ) ಅವರ ತೊಟ್ಟಿಲು ಒಂದಿಂಚು ಮೇಲೆ ಎಂದು ಸಮಾಜ ಒಪ್ಪಿಕೊಂಡುಬಿಟ್ಟಿದೆ.

ಈ ಒಪ್ಪಿತ ನಿಲುವಿನಲ್ಲಿ ಯಾವತ್ತು ‘ಕಾಸು’ ಕಂಡಿತೋ, ಆವತ್ತಿನಿಂದಲೇ ಎಲ್ಲವೂ ಹಂತಹಂತವಾಗಿ ಹದಗೆಡುತ್ತಾ ಬಂದಿವೆ.  ಇದು ನಮ್ಮ ನಿಮ್ಮೂರಿನ ಕಥೆ ಅಲ್ಲ – ಇಡೀ ಜಗತ್ತಿನ ಕಥೆ. ನಿಜಕ್ಕೆಂದರೆ ಈ ರೀತಿಯಎಲ್ಲ ವರ್ಗದ ವ್ರತ್ತಿಪರರೆಲ್ಲರೂ ತಮ್ಮ ಬುದ್ಧಿ ಉಪಯೋಗಿಸಿಯೇ ಕೆಲಸ ಮಾಡುವವರು ಮತ್ತು ಜನರ ಒಳಿತಿಗಾಗಿಯೇ ಕೆಲಸ ಮಾಡುವವರು. ಇದರಲ್ಲಿ ಮೇಲು – ಕೀಳು ಇವೆಲ್ಲ ಬಂದದ್ದು ಒಣ ಅಹಮಿಕೆಗಳ ಕಾರಣದಿಂದಾಗಿಯೇ ಹೊರತು ಬೇರೇನಲ್ಲ. ‘ಸಂಸ್ಕ್ರತ’ ಹೇಗೆ ಒಂದು ವರ್ಗಕ್ಕೆ ಬದುಕುವ ಭಾಷೆಯೋ ಹಾಗೇ ‘ಗ್ರೀಕ್’,  ‘ಲ್ಯಾಟಿನ್’ ವೈದ್ಯ ವರ್ಗಕ್ಕೆ ಬದುಕುವ ಭಾಷೆ. ಯಾವತ್ತಿಗೆ ವೈದ್ಯಕೀಯ ಶಿಕ್ಷಣ ‘ಕನ್ನಡ’ದಲ್ಲಿ ಆರಂಭವಾಗುತ್ತದೋ, ಆವತ್ತಿಗೆ ಈ ಮ್ಯಾಜಿಕ್ ಉಳಿಯುವುದಿಲ್ಲ. ಜನಸಾಮಾನ್ಯ ಕೂಡ ವೈದ್ಯ ವಿಜ್ನಾನವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲ. ದೀರ್ಘಕಾಲ ಒಬ್ಬ ವೈದ್ಯಕೀಯ ವಿಜ್ನಾನದ ಭಾಷಾಂತರಕಾರನಾಗಿ ನನ್ನ ಅನುಭವ ಇದು. ಆ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುತ್ತೇನೆ.

ಈವತ್ತು ಕೆಪಿಎಂಇ ಕಾಯಿದೆಯ ತಿದ್ದುಪಡಿ ಆಗತ್ತೋ ಬಿಡತ್ತೋ ಎಂಬುದು ಮಹತ್ವದ ಸಂಗತಿಯೇ ಅಲ್ಲ. ಅದು ಬಂದರೂ ರೋಗಿಯ ದ್ರಷ್ಟಿಕೋನದಿಂದ ದೊಡ್ಡ ಬದಲಾವಣೆ ಏನೂ ಆಗುವುದಿಲ್ಲ. ಅದೇನಿದ್ದರೂ ಕಾರ್ಪೋರೇಟ್ ಆಸ್ಪತ್ರೆ ಅಂಗಡಿಗಳ, ಮೆಡಿಕಲ್ ಕಾಲೇಜು ನಡೆಸುವ ರಾಜಕಾರಣಿಗಳ ಪರ ನಿಂತು ಪುಟ್ಟ ವೈದ್ಯಕೀಯ ಪ್ರಾಕ್ಟೀಷನರ್ ಗಳನ್ನು ತಳತಪ್ಪಿಸುವ ಹುನ್ನಾರ ಅಷ್ಟೇ. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ದೇಶದ ಬಹುರೂಪಿ ಸಂಸ್ಕ್ರತಿಯನ್ನು ಪ್ರತಿಪಾದಿಸುವವರೂ ಕೂಡ ಈ ‘ಏಕರೂಪಿ’ ಕಾನೂನನ್ನು ಸಮರ್ಥಿಸಿಕೊಳ್ಳುತ್ತಿರುವುದು ಒಂದು ಕೋನದಿಂದ ತಮಾಷೆಯಾಗಿ ಕಾಣಿಸುತ್ತದಾದರೂ, ಅದರ ಹಿಂದಿರುವ ಸಿಟ್ಟನ್ನು ಅಲ್ಲಗಳೆಯುವಂತಿಲ್ಲ. ಶ್ರದ್ಧಾಪೂರ್ವಕವಾಗಿ, ನೈತಿಕವಾಗಿ ಕೆಲಸ ಮಾಡುವ ಸಾವಿರಾರು ಮಂದಿ ವೈದ್ಯರ ನಡುವೆ ಬೆರಳೆಣಿಕೆಯ ದಂಧೆಕೋರ ವೈದ್ಯರ ಕುಚೋದ್ಯಗಳಿಂದ ಉಂಟಾಗಿರುವ ಸಿಟ್ಟಿದು. ಅದರ ಹಿಂದೆ ಕಾರ್ಪೋರೇಟ್ – ರಾಜಕೀಯ ಅನೈತಿಕ ಸಂಬಂಧದ ನೆರಳೂ ಇದೆ.  ಕಳೆದ ಕೆಲವು ತಿಂಗಳಿನಿಂದ KPME ವಿರುದ್ಧ ಬರುವ ಹೆಚ್ಚಿನ (ಪಕ್ಷ-ಸಿದ್ಧಾಂತಗಳ ಕಾರ್ಯಕರ್ತರದಲ್ಲ -ಜನಸಾಮಾನ್ಯರದು) ಆಕ್ರೋಷಗಳನ್ನು ಗಮನಿಸಿ. ಅವು ವೈಯಕ್ತಿಕವಾಗಿ ಅನುಭವಿಸಿರುವ ಯಾವುದೋ ಒಂದು ಕೆಟ್ಟ ಅನುಭವವನ್ನಾಧರಿಸಿದ ಆಕ್ರೋಷ. ಅವನ್ನು ಸುಲಭವಾಗಿ ಸಾರ್ವತ್ರೀಕರಿಸಲಾಗುತ್ತಿದೆ ಮತ್ತು, ಮಹಾನಗರಗಳು-ನಗರಗಳಲ್ಲಂತೂ ಟರ್ಷರಿ ಕೇರ್ ಹೆಸರಲ್ಲಿ ಲೂಟಿಯಂಗಡಿ ತೆರೆದಿರುವ ದಂಧೆಕೋರರ ದೆಸೆಯಿಂದ  ಈ ಆಕ್ರೋಷಗಳಿಗೆ ಸುಲಭವಾಗಿ ಅರ್ಥ ಮೂಡುತ್ತಿದೆ. ಇದೇ ಸ್ಥಿತಿ ಪುಟ್ಟ ಊರುಗಳಲ್ಲೂ ಇವೆಯೇ? ಇದ್ದರೆ ಅಂತಹ ಆಸ್ಪತ್ರೆ-ನರ್ಸಿಂಗ್ ಹೋಮ್ ಆ ಊರಿನಲ್ಲಿ ಬದುಕೀತೇ?

ಈಗ ಕೆಪಿಎಂಇ ತಿದ್ದುಪಡಿಯಿಂದ ಬ್ರಾಂಡೆಡ್, ಡಿಸೈನರ್ ಆಸ್ಪತ್ರೆಗಳಿಗೆ ಏನೂ ತೊಂದರೆ ಆಗದು. ಅವರ ವ್ಯವಹಾರವೂ ಸಲೀಸು. ಆದರೆ, ಅದೇ ಕಾಯಿದೆಯ ಅಡಿ ಬರುವ, ಮೂಲ ಸೌಕರ್ಯಗಳಿರದ ಪುಟ್ಟ ಊರುಗಳ ಗತಿ ಏನು? ಅವರು ಕಾನೂನು ಪಾಲಿಸುವುದು ಸಾಧ್ಯವಾಗದ, ಉಲ್ಲಂಘಿಸಿದರೆ ಜೇಲುಪಾಲಾಗುವ ಸ್ಥಿತಿಗೆ ಪರಿಹಾರ ಏನು?  ಇದರಿಂದ ಅಂತಿಮವಾಗಿ ನಷ್ಟ ಯಾರಿಗೆ? ಈ ಪ್ರಶ್ನೆಗಳಿಗೆ ಉತ್ತರ ಈಗ ಕಾಯಿದೆಯ ಪರವಾಗಿ ನಿಂತಿರುವವರಲ್ಲಿ ಇದ್ದಂತಿಲ್ಲ. ಅವರದೇನಿದ್ದರೂ ಒಂದುಬಾರಿಗೆ ವೈದ್ಯರನ್ನು ಹದಹಾಕಿಬಿಡುವ ಆತುರ.

ಅಂಕಿಸಂಖ್ಯೆಗಳು ಸರ್ಕಾರದ ಪರ ಇಲ್ಲ!

ನಿಮಗೆ ರೆವೆನ್ಯೂ ಇಲಾಖೆಯ ಉದಾಹರಣೆ ಕೊಡುತ್ತೇನೆ. ಅಲ್ಲಿ ಜಿ.ಪಂ- ತಾ.ಪಂ, ಕೆಡಿಪಿ ಇತ್ಯಾದಿ ಸಭೆಗಳಿಗೆ ಸಾರಾಸಗಟು ಗೈರುಹಾಜರಾಗುವ ಅಧಿಕಾರಿಗಳು ಹೇಗೆ ಬೀಸುವ ಕತ್ತಿ ತಪ್ಪಿಸಿಕೊಳ್ಳುತ್ತಾರೆ? ಹೇಗೆಂದರೆ, ಅವರ ಕಛೇರಿಯಲ್ಲಿ 50 ಜನ ಇರಬೇಕಾದಲ್ಲಿ 10 ಜನ ಕೆಲಸ ಮಾಡುತ್ತಿರುತ್ತಾರೆ. ಎಲ್ಲರಿಗೂ ಓವರ್ ಲೋಡ್ ಇರುತ್ತದೆ. ಸರ್ಕಾರಕ್ಕೆ ಅವರ ಮೇಲೆ  ಜವಾಬ್ದಾರಿ ಹೊರಿಸುವ ಮುಖ ಇರುವುದಿಲ್ಲ. ಹಾಗಾಗಿ ಏನೋ ನಾಟಕ ನಡೆದು ಮುಗಿಯುತ್ತದೆ. ಈ ಪ್ರಹಸನ ಸ್ಥಳೀಯಾಡಳಿತದ ಸಭೆಗಳಲ್ಲಿ ಅನಾದಿಯಿಂದ ಇದೆ!

ವೈದ್ಯರ ಕಥೆಯೂ ಅಷ್ಟೇ. ಈವತ್ತು ಕೆಪಿಎಂಇ ಬಂದು ಖಡಕ್ ಅನುಷ್ಠಾನ ಆಯಿತೆಂದುಕೊಳ್ಳಿ. ವೈದ್ಯರ ಮೇಲೆ ಜವಾಬ್ದಾರಿ ಫಿಕ್ಸ್ ಮಾಡುವ ಸ್ಪಷ್ಟ ಯೋಜನೆಯೇನಾದರೂ ಸರಕಾರದ ಕೈನಲ್ಲಿದೆಯೇ?

ವಾಸ್ತವಗಳನ್ನು ಒಂದೊಂದಾಗಿ ನೋಡಿ.

  1. ದೇಶದಲ್ಲಿಂದು ಅಂದಾಜು 9.29ಲಕ್ಷ ಮಂದಿ ವೈದ್ಯರಿದ್ದಾರೆ; ಅದು 130 ಕೋಟಿ ಜನಸಂಖ್ಯೆಗೆ. ಅಂದರೆ ಅಂದಾಜು 2000 ಮಂದಿಗೆ ಒಬ್ಬರು ವೈದ್ಯರ ಅನುಪಾತ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 1000ಕ್ಕೆ ಒಬ್ಬರು ವೈದ್ಯರಾದರೂ ಇರಬೇಕು.
  2. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಒಬ್ಬರು ವೈದ್ಯರು ಒಬ್ಬ ರೋಗಿಯ ಬಳಿ ಸುಮಾರಿಗೆ 18ನಿಮಿಷಗಳಷ್ಟಾದರೂ ಕಳೆದಲ್ಲಿ ವೈದ್ಯ – ರೋಗಿಯ ನಡುವಿನ ಸಂವಹನ ಸಾಮಾನ್ಯವಾಗಿ ಆರೋಗ್ಯಕರವಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ವೈದ್ಯರು ವಾರಕ್ಕೆ ಅಂದಾಜು 70ರೋಗಿಗಳನ್ನು ಮಾತ್ರ ನೊಡಲು ಸಾಧ್ಯವಾಗುತ್ತದೆ. ಭಾರತದಲ್ಲಿ ಬಹುತೇಕ ಕಾರ್ಯನಿರತ ವೈದ್ಯರು ದಿನಕ್ಕೆ 50-100ರೋಗಿಗಳನ್ನು ನಿಭಾಯಿಸುತ್ತಾರೆ. ಒಬ್ಬ ರೋಗಿಗೆ 3-4ನಿಮಿಷಗಳಾದರೂ ಸಿಕ್ಕರೆ ರೋಗಿಯ ಅದ್ರಷ್ಟ.

 

  1. ವೈದ್ಯಕೀಯ ಶಿಕ್ಷಣವನ್ನು ದುಬಾರಿ ಮಾಡಿದವರು ಯಾರು? ಕರ್ನಾಟಕದ ಸನ್ನಿವೇಶದಲ್ಲಂತೂ ವೈದ್ಯಕೀಯ ಕಾಲೇಜುಗಳ ಮಾಲಕರು ಯಾರ್ಯಾರು ಎಂದು ಪಟ್ಟಿ ತೆಗೆದರೆ ಸಾಕು – ಉತ್ತರ ಸಿಗುತ್ತದೆ. ಇಡಿಯ ವ್ಯವಸ್ಥೆ ಸ್ಕೇಲ್ ಅಪ್ ಆದಾಗ, ಏಕಸ್ವಾಮ್ಯದ ಪರವಾದಾಗ, ಸಹಜವಾಗಿಯೇ ಎಲ್ಲವೂ ದುಬಾರಿ ಆಗುತ್ತದೆ. ಅದು ಇಷ್ಟು ದುಬಾರಿ ಆಗಬೇಕಾದ ಅಗತ್ಯ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಒಂದು ವೇಳೆ ಪರಿಸ್ಥಿತಿ ಬದಲಾಗಿ, ಸ್ಪರ್ಧೆ ಏರ್ಪಟ್ಟಾಗ ಈ ಏಕಸ್ವಾಮ್ಯದ ಕಥೆ ಏನಾಗುತ್ತದೆ ಎಂಬುದನ್ನು ಐಟಿ ಉದ್ಯಮ ಕಳೆದ ಐದಾರು ವರ್ಷಗಳಿಂದ ತೋರಿಸಿಕೊಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಿಜವಾಗಿ ಆಗಬೇಕಾಗಿರುವುದು ಇದು. ಸರ್ಕಾರಕ್ಕೆ ಮನಸ್ಸಿದ್ದರೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಬಲಪಡಿಸಿ, ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವ್ಯವಸ್ಥೆ ಏರ್ಪಡಿಸಿದರೆ ಹಳಿತಪ್ಪಿರುವುದೆಲ್ಲ ಹಳಿ ಏರಲೇ ಬೇಕು. ಬೇರೆ ದಾರಿ ಇಲ್ಲ.
  2. ಮೇಲೆ ಹೇಳಿರುವ ವೈದ್ಯರ ಅನುಪಾತ ಹಳ್ಳಿಗಳಲ್ಲಿ ಇನ್ನೂ ಕರುಣಾಜನಕವಾಗಿದೆ. ಅಲ್ಲಿ 3000-4000ಕ್ಕೆ ಒಬ್ಬ ವೈದ್ಯರಿರುವುದೂ ಇದೆ. ಇಂತಹ ಕಡೆಗಳಲ್ಲಿ ಗ್ರಾಮೀಣ ಭಾಗಕ್ಕೆ ವೈದ್ಯರನ್ನು ಕಳಿಸುವ ಸರ್ಕಾರಿ ಪ್ರಯತ್ನಗಳು ಈವತ್ತು ಎಷ್ಟು ಟೊಳ್ಳು ಎಂಬುದಕ್ಕೆ ಸಾಕ್ಷಿ, ಗ್ರಾಮೀಣ ಪ್ರದೇಶಗಳಲ್ಲಿ ಆಯುಷ್ ವೈದ್ಯರ ಮೇಲೇ ಅವಲಂಬಿಸಿರುವ ಸರ್ಕಾರಿ ಆರೋಗ್ಯ ವ್ಯವಸ್ಥೆ.
  3. ಕಾರ್ಪೋರೇಟ್ ಆಸ್ಪತ್ರೆ ಅಂಗಡಿಗಳಲ್ಲಿ ದುಡಿಯುವ ಬಡಪಾಯಿ ವೈದ್ಯರು ತಮ್ಮ ಮಾಲಕರು ಹೇಳಿದ ಟಾರ್ಜೆಟ್ ಗಳನ್ನು ತಲುಪುವ, ಅದಕ್ಕಾಗಿ ಕಮಿಷನ್ – ಸಂಬಳ ಪಡೆಯುವ ಅನಿವಾರ್ಯತೆಗೆ ಸಿಲುಕಿರುತ್ತಾರೆ. ಇಲ್ಲಿ ಮಾಲಕ ವರ್ಗಕ್ಕಿದು ವಿನ್-ವಿನ್ ಸ್ಥಿತಿಯಾದರೆ ಅಲ್ಲಿ ದುಡಿಯುವ ವೈದ್ಯರಿಗೆ ಲೂಸ್-ಲೂಸ್ ಸ್ಥಿತಿ.
  4. ದೇಶದಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇರುವಾಗ ಸರಕಾರ ಸಲೀಸಾಗಿ ವೈದ್ಯರನ್ನು ದೇಶದಿಂದ ಹೊರಗೆ ಸೇವೆಗಾಗಿ ಬಿಟ್ಟುಕೊಡುತ್ತಿದೆ. ಯಾಕೆಂದರೆ, ಹೀಗೆ ಹೊರಗಿರುವವರು ಬಲಾಢ್ಯರ ಕುಟುಂಬಗಳವರೇ.

ಪರಿಸ್ಥಿತಿ ಹೀಗಿರುವಾಗ ಸರಕಾರ ಯಾರ ಮೇಲೆ ಜವಾಬ್ದಾರಿ ಫಿಕ್ಸ್ ಮಾಡುವುದು ಕಾನೂನುಬದ್ಧವಾಗಿ ಸಾಧ್ಯವಿದೆ? ಹಾಗಿದ್ದರೆ ಈ ನಾಟಕದ ಹಿಂದಿರುವ ಹುನ್ನಾರ ಏನು? ಇದರ ಅಂತಿಮ ಲಾಭ ಪಡೆಯುವವರು ಯಾರು?

ಗೊಂದಲದ ಗೂಡು

ಭಾರತದಲ್ಲಿ ಆರೋಗ್ಯ ಆರೈಕೆ ವ್ಯವಸ್ಥೆ ಎಂಬುದು ತೀರಾ ಹತ್ತಿರದಿಂದ ನೋಡಿದರೆ ಗೊಂದಲದ ಗೂಡು. ಈ ಲೇಖನದ ಗಾತ್ರದ ಮಿತಿಯಲ್ಲಿ ಕೆಲವು ನೋಟಗಳಷ್ಟೇ ಇಲ್ಲಿವೆ. ಅಂತಿಮ ತೀರ್ಮಾನ ನಿಮ್ಮದು.

*  ಮುಂದುವರಿದ  ದೇಶಗಳಲ್ಲಿ ರೋಗಿಯೊಬ್ಬ ವೈದ್ಯರನ್ನು ಕಾಣಲು ಬಂದಾಗ, ಆ ಇಡಿಯ ಪ್ರಕ್ರಿಯೆ (ರೋಗಿಯ ಹಿಸ್ಟರಿ – ಡಯಾಗ್ನೋಸಿಸ್ – ಚಿಕಿತ್ಸೆ- ಪ್ರಾಗ್ನೋಸಿಸ್ – ಫಾಲೋ ಅಪ್) ಡಾಕ್ಯುಮೆಂಟೇಷನ್ ಆಗಿರುತ್ತದೆ. ಮುಂದೆ ಅದೇ ದಾಖಲೀಕರಣ ವೈದ್ಯರಿಗೆ ರೋಗಿಯ ಎದುರು ಸಕಾರಣ ದಾಖಲೆ, ಸಮಜಾಯಿಷಿ/ಆಯುಧ ಎರಡೂ ಹೌದು. ಭಾರತದಲ್ಲಿ  ಎಲ್ಲೋ ಟರ್ಷರಿ ಕೇರ್ ಇರುವ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ  ಪಾಠ-ಪ್ರವಚನದ ಹೆಸರಲ್ಲಿ ಇದು ಅಸ್ಥಿತ್ವದಲ್ಲಿದೆಯೇ ಹೊರತು ಉಳಿದಂತೆ ಬಹುತೇಕ ಎಲ್ಲ ಪ್ರಾಕ್ಟೀಷನರ್ ಗಳೂ ಪೆನ್ನು ಕಾಗದದ ಶತ್ರುಗಳೇ.

*  ವಿಜ್ನಾನ ತೆರೆದುಕೊಂಡಷ್ಟೂ ಅದನ್ನು ಮುಚ್ಚಿಡುವುದು ವೈದ್ಯರಿಗೆ ಲಾಭದಾಯಕವೇ. ಆದರೆ, ಮಾಹಿತಿಗಳ ಮಹಾಪೂರದಲ್ಲಿ ಅದು ಇನ್ನಿನ್ನು ಅಸಾಧ್ಯ. ವೈದ್ಯರು ಅವರ ವಿರುದ್ಧ ಸಾರ್ವಜನಿಕರ ಆಕ್ರೋಷವನ್ನು ಈ ನಿಟ್ಟಿನಿಂದ ಯಾಕೆ ನೋಡಬಾರದು?  ನಾನು ಗಮನಿಸಿದಂತೆ ಇಲ್ಲಿ ಕೆಪಿಎಂಇ ವಿರುದ್ಧ ನಿಂತಿರುವ ಹೆಚ್ಚಿನ ವೈದ್ಯವರ್ಗದವರು ರೋಗಿಗಳ ಕಡೆಯಿಂದ ಲೇಖನಗಳ ಓದುವಿಕೆ, ಗೂಗಲ್ ಸರ್ಚ್ ಇತ್ಯಾದಿಗಳಿಗೆ ತೀವ್ರ ವಿರೋಧ ಸೂಚಿಸುವವರೇ. ಇದು ಬಹಳ ಅಚ್ಚರಿಯ ಸಂಗತಿ. ವೈದ್ಯರಿಗೆ ರೋಗಿ ತನ್ನ/ಕುಟುಂಬದ ಮೇಲಿನ ಕಳಕಳಿಯಿಂದ ಪ್ರಶ್ನೆಗಳನ್ನು ಕೇಳಿದರೆ, ಅದನ್ನು ಉಡಾಫೆಯಿಂದ ತಿರಸ್ಕರಿಸುವ ವೈದ್ಯರೇ ಹೆಚ್ಚು.

ಒಟ್ಟಿನಲ್ಲಿ ಈ ಇಡಿಯ ಅಸಂಗತ ಪ್ರಹಸನದಲ್ಲಿ ಚರ್ಮ ತೆಳು ಉಳಿಸಿಕೊಂಡಿರುವ ಕೆಲವು ವೈದ್ಯರು ಹೈರಾಣಾಗುತ್ತಿದ್ದಾರೆ. ಯಾರು ದಂಧೆಕೋರರೋ ಅವರು ಈ ಕೆಪಿಎಂಇ ಗದ್ದಲದ ಭಾಗವೇ ಅಲ್ಲ. ಅವರಿಗೆ ಕೆಪಿಎಂಇ ಅಲ್ಲ; ಅದರಪ್ಪ ಬಂದರೂ ತಪ್ಪಿಸಿಕೊಳ್ಳುವ ಹಾದಿ ಗೊತ್ತಿದೆ. ಅವರ ವ್ಯವಹಾರ ಇನ್ನಷ್ಟು ಸಲೀಸಾದೀತೇ ಹೊರತು ನಷ್ಟವೇನಿಲ್ಲ. ಆದರೆ ಫಯರಿಂಗ್ ಲೈನಿನಲ್ಲಿ ಎದುರು ನಿಂತಿರುವ ಪುಟ್ಟ ಊರುಗಳ ಪುಟ್ಟ ಆಸ್ಪತ್ರೆಗಳ ಸೇವಾನಿರತ ವೈದ್ಯರು ತಮ್ಮ ಕಳ್ಳಾಟದ ಸಹೋದ್ಯೋಗಿಗಳನ್ನು ಸಮರ್ಥಿಸಿಕೊಳ್ಳಲು ಹೆಣಗಾಡಬೇಕಾಗಿದೆ; ಸಾರ್ವಜನಿಕರ ಸಿಟ್ಟಿಗೆ ಗುರಿಯಾಗಬೇಕಾಗಿದೆ – ಇದು ಇಡಿಯ ಕೆಪಿಎಂಇ ಪ್ರಹಸನದ ದುರಂತ!

‍ಲೇಖಕರು avadhi

November 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Umesh Chandra

    ರಾಜಾರಾಮ್ ಹಾಗೂ ಡಾ. ಶಶಿಕಿರಣ್ ರವರ ಲೇಖನಗಳೆರಡನ್ನೂ ಓದಿದೆ! ಅಬ್ಬರದ ಈ ಸಮಯದಲ್ಲಿ ತೂಕಭರಿತ ತಾತ್ವಿಕ ಲೇಖನಗಳನ್ನು ನೋಡಿ ಸಂತೋಷವಾಯಿತು. ಈ ಮಧ್ಯೆ ಕೆಲವು ಅಸಮತೋಲನಗಳನ್ನು ಪರಿಗಣಿಸುವುದೊಳಿತು:
    ೧. ವೈದ್ಯ ಶಿಕ್ಷಣ:
    1. ಜಾತಿ/ಧರ್ಮ ಆಧಾರಿತ: St.John medical college NEET rank (GM:242; Christian: 92000). But degree didn’t specify the merit
    2. ಅರ್ಹತೆಯ ಇಳಿಕೆ: 50% ಮಾನದಂಡದಿಂದ.50 percentile ಗೆ.ಇಳಿಕೆ – ಸರ್ಕಾರವೇ ಇದಕ್ಕೆ ವಕಾಲತ್ತು ನಡೆಸಿದ್ದು!
    3. ಸೀಟ್ಗಳನ್ನು ಹೆಚ್ಚಿಸಿ ಕಿರಿಯ ವೈದ್ಯರ ಶೋಷಣೆಗೆ ಪಟ್ಟಭದ್ರರ ಹುನ್ನಾರ…
    ೨. ವೈದ್ಯರ ಸಾಮಾಜಿಕ ಸ್ಥಾನ:
    1. ಅತ್ಯಂತ ಗೌರವಾನ್ವಿತವಾಗಿದ್ದ ಈ ಸ್ಥಾನಕ್ಕೆ ಸಹಜವಾಗೇ ಬೇಡಿಕೆ ಹೆಚ್ಚಿತ್ತು. ಅರ್ಹತೆ ಇಲ್ಲದವರೂ ತೂರಿಬರುವಂತೆ ಪರೀಕ್ಷಾ ಪದ್ಧತಿಯನ್ನೇ ಶಿಥಿಲಗೊಳಿಸಲಾಯ್ತು!
    2. ಅನರ್ಹರನ್ನು ಕಡಿವಾಣದಲ್ಲಿಡುವ ವ್ಯವಸ್ಥೆಯಿಲ್ಲದೇ ಇಡೀ ವೈದ್ಯಸಂಕುಲವೇ ಜನರ ಬಾಯಿಗೆ ಬಿತ್ತು
    3. Noble profession ಎಂಬ ಹೆಸರಿನಲ್ಲಿ ಕಾಲಕ್ಕೆ ತಕ್ಕಂತೆ ಅವರ.ಸ್ಥಾನವನ್ನು ಉಳಿಸದೇ ಜೀವನಕ್ಕೆ ಪರದಾಡುವಂತಹ ಪರಿಸ್ಥಿತಿಗೆ ತಳ್ಳಿದ ಪರಿಣಾಮ ಇಂದಿನ ಔದ್ಯೋಗೀಕರಣ… For those of you who do not know, doctors with MD gets lower salary than an ordinary engineer, though he needs to work lot harder…
    ೩. ಸರ್ಕಾರಿ ಆಸ್ಪತ್ರೆಗಳು:
    1. ನಾವೆಲ್ಲ ಹುಟ್ಟಿದ್ದು ಸರ್ಕಾರಿ ಆಸ್ಪತ್ರೆ! ನಮ್ಮ ಮಕ್ಕಳಾರೂ ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಲಿಲ್ಲ: ನಮಗೆ ಹೆಚ್ಚು ಖರ್ಚು ಮಾಡುವ ಚಟವೇ? – 78% ಮೀಸಲಾತಿಯ ಮಧ್ಯೆ ಅರ್ಹತೆಗೇನು ಕೆಲಸ?☺️
    ೨. ರೋಗಿಯೊಬ್ಬನ ಚಿಕೆತ್ಸೆಗೆ ಸರಕಾರಿ ಆಸ್ಪತ್ರೆಯಲ್ಲಿ ತಗಲುವ ವೆಚ್ಚ ಖಾಸಗಿಗಿಂತ ಬಹಳ ಹೆಚ್ಚು – ಅಂಕಿ ಅಂಶಗಳನ್ನು ಪರಿಶೀಲಿಸಬಹುದು! ತೆರಿಗೆದಾರನು ಕೊಡುವ ಹಣವೂ ಹಣವೇ!
    ೩. ವೆಚ್ಚ, ರೋಗಿಯ ಅನುಭವ ಹಾಗೂ ಒಟ್ಟಾರೆ ಫಲಿತಾಂಶ ಕೆಳಮಟ್ಟದ ಖಾಸಗಿ ಆಸ್ಪತ್ರೆಗೂ ಕೆಳಗಿರುವುದು ನಮ್ಮ ಸರ್ಕಾರಿ ಪದ್ಧತಿಗೆ ಹಿಡಿವ ಕನ್ನಡಿ!
    ೪. ವೈದ್ಯ/ಆಸ್ಪತ್ರೆ ವೆಚ್ಚ:
    1. ಕೃಷಿಯ ವೃತ್ತಿಯಲ್ಲಿರುವ.ಕಂಪೆನಿಗಳು ಸಬ್ಸಿಡಿ ಪಡೆಯುವುವು. ಆರೋಗ್ಯದಲ್ಲೂ ಹಾಗಿದೆಯೇ?
    ೨. ಪ್ರತಿಭೆಗಳನ್ನು ವೃತ್ತಿಯೆಡೆಗೆ ಆಕರ್ಷಿಸಲು ಕ್ರಮವೇನು. It is to dangerous to just leave it to its own course now that there are quite a bit of entrenched forces… Doctor can’t get paid like skilled/unskilled/semi skilled professions. This is one of the professions where knowledge, soul technology has to reflect in one person ( not in combination of persons). Unless the profession is in the to percentile in terms of money, prestige…, we can rest assured we will have idiots/quacks treating next generation (a lot more than now…)

    ಲೇಖಕರಿಗೆ ಸೂಚನೆ:
    ೧. ಲ್ಯಾಟಿನ್ ಇಂದ ಕನ್ನಡಕ್ಕೆ ಬಂದರೂ ಪರಿಸ್ಥಿತಿ ಬದಲಾಗದು (ಮೆಡಿಕಲ್ ಸಾಧ್ಯವಾದರೆ ಲ್ಯಾಟಿನ್ ಖಂಡಿತಾ ತೊಂದರೆಯಾಗಲಾರದು)
    ೨. ತರ್ಜುಮೆಗೂ ಜ್ಞಾನಕ್ಕೂ ಇರುವ ಅಂತರವನ್ನು ಗೌರವಿಸುವುದೊಳಿತು…
    ೩. ಯಾವುದೇ professional ಆಗಲಿ ಗೂಗಲ್ ನೋಡಿಕೊಂಡು ಬಂದು ಕೆಲಸಕ್ಕೆ ಅಡ್ಡಿ ಮಾಡುವಾಗ ಕಿರಿಕಿರಿ ಸಹಜ (ಈಗ ನನ್ನಂತ ವೈದ್ಯನೂ ಅಲ್ಲದ ಬರಹಗಾರನೂ ಅಲ್ಲದವನ ಈ ವಾಕ್ಯ ತಮಗೆ ಕಿರಿಕಿರಿ ತಂದರೆ ಆಶ್ಚರ್ಯವಿಲ್ಲ)

    ಪ್ರತಿಕ್ರಿಯೆ

Trackbacks/Pingbacks

  1. ರಾಜಾರಾಂ ಅಂಕಣಕ್ಕೆ ವೈದ್ಯರ ಉತ್ತರ.. – Avadhi/ಅವಧಿ - […] ರಾಜಾರಾಮ್ಡಾ ತಲ್ಲೂರು ಅವರ ನುಣ್ಣನ್ನ ಬೆಟ್ಟ ಅಂಕಣ ಈ ಬಾರಿ  ಕೆಪಿಎಂಇ ಕಾಯ್ದೆ ಬಗ್ಗೆ ಅದು ಇಲ್ಲಿದೆ.  […]
  2. ರಾಜಾರಾಂಗೆ ವೈದ್ಯರಲ್ಲದವರಿಂದ ಪ್ರಶ್ನೆ.. – Avadhi/ಅವಧಿ - […] ರಾಜಾರಾಮ್ ತಲ್ಲೂರು ಅವರ ನುಣ್ಣನ್ನ ಬೆಟ್ಟ ಅಂಕಣ ಈ ಬಾರಿ  ಕೆಪಿಎಂಇ ಕಾಯ್ದೆ ಬಗ್ಗೆ- ಅದು ಇಲ್ಲಿದೆ.  […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: