ತೆಳು ಅಲೆಗಳ ಪುಳಕ್, ಪುಳಕ್ ನಾದ ಬಿಟ್ಟರೆ ಅಲ್ಲೆಲ್ಲ ಮೌನ..

ಒಂದು ಕ್ಷಣ ಯೋಚಿಸಿದೆ. ಹಿಂದಕ್ಕೆ ಹೋದರೆ ಅಪಮಾನವಲ್ಲ: ಎಲ್ಲೋ ಒಂದು ಕಡೆ ನನ್ನ ವ್ಯಕ್ತಿತ್ವಕ್ಕೆ ನಾನು ಮಾಡಿಕೊಳ್ಳುವ ವಂಚನೆ ಅನ್ನಿಸಿತು.

ಗಟ್ಟಿನೆಲದ ಮೇಲೆ ನಿಂತು ಸಾಹಸಗಳ ಬಗ್ಗೆ ಮಾತನಾಡುವ ನಾನು ಯಾವ ಭದ್ರತೆಯೂ ಇರದ ಇಂಥದೊಂದು ಹೊಸ ಅನುಭವಕ್ಕೆ ಒಡ್ಡಿಕೊಳ್ಳದೇ ಹಿಂಜರಿದು ಹೋದರೆ ನನಗೆ ಉಳಿಯುವ ಕನಿಷ್ಠ ನೈತಿಕತೆಯಾದರೂ ಏನು? ಏನಾದರಾಗಲೀ, ಒಂದು ಹೊಸ ಸವಾಲಿಗೆ ತೆರೆದುಕೊಳ್ಳೋಣ ಎಂದು ಗಟ್ಟಿಧೈರ್ಯ ಮಾಡಿದೆ.

ಆ ಯಾನದಲ್ಲಿ ಪಾಲ್ಗೊಳ್ಳುವವರಲ್ಲಿ ಹತ್ತಾರು ಮಂದಿ ಈ ಮೊದಲು ಸ್ವಾಮಿ ಸಂಯೋಜಿಸಿದ್ದ ಅಷ್ಟೇನೂ ಧೀರ್ಘವಲ್ಲದ ಯಾನಗಳಲ್ಲಿ ಭಾಗವಹಿಸಿದ ಅನುಭವವಿದ್ದವರು. ಎಲ್ಲಾದರೂ ಅಪರೂಪಕ್ಕೆ ಸ್ವಾಮಿಯವರ ಜೊತೆ ಕೊರೆಕಲ್‍ನಲ್ಲಿ ನಾಲ್ಕಾರು ಕಿಮೀ. ದೂರದವರೆಗೂ ಹಿನ್ನೀರಿನಲ್ಲಿ ಹೋಗಿಬಂದವರಾಗಿದ್ದ ಲಕ್ಷ್ಮೀನಾರಾಯಣ ನೀರಲ್ಲೇ ಅಮೇರಿಕಾ ಖಂಡದವರೆಗೂ ಹೋಗಿಬಂದವರಂತೆ ಮಾತನಾಡುತ್ತಿದ್ದರೂ ಆ ಮನುಷ್ಯನಿಗೆ ಒಂದಿಷ್ಟಾದರೂ ಪರಿಚಯವಿತ್ತು.

ಅಲ್ಲಿದ್ದವರಲ್ಲಿ ನಾನು ಮತ್ತು ಓರ್ವ ಹೆಣ್ಣುಮಗಳು ಮಾತ್ರ ಈ ಯಾನಕ್ಕೆ ಅಪರಿಚಿತರಾಗಿದ್ದೆವು. ಹಾಗೇ ಸಾಕಷ್ಟು ಅನುಭವವಿದ್ದವರು ಈ ತಂಡದಲ್ಲಿ ತಮ್ಮನ್ನು ತಾವೇ ಸೀನಿಯರ್‍ಗಳೆಂದು ಭಾವಿಸಿಕೊಳ್ಳುತ್ತಿದ್ದುದು ಅವರ ಮಾತು, ವರ್ತನೆಗಳಿಂದ ತಿಳಿದು ಅದು ಅತಿರೇಕ ಎಂದು ಭಾವಿಸಿಕೊಂಡೆ. ಆದರೆ ಆ ಸೀನಿಯರ್‍ಗಳ ಅನುಭವ ಸತ್ಯವೆಂದು ಮುಂದಿನ ಸಂದರ್ಭಗಳಲ್ಲಿ ಧೃಡವಾಯಿತು.

ವಾಸ್ತವಿಕವಾಗಿ ಈ ಇಡೀ ಯಾನದ ರೂಪುರೇಷೆ ಸಿದ್ಧಪಡಿಸಿದ ಎಸ್.ಎನ್.ಎಲ್.ಸ್ವಾಮಿ ಮತ್ತು ಅವರ ಪತ್ನಿ ನೊಮಿಟಾ ಅವರನ್ನು ಬಿಟ್ಟರೆ ಅವರ ಸಹಾಯಕ ಲಂಬೋದರ ಮಾತ್ರ ಶರಾವತಿ ಹಿನ್ನೀರಿನ ಬಗ್ಗೆ, ಆ ನೀರಯಾನದ ಬಗ್ಗೆ ಸಮಗ್ರವಾದ ಅನುಭವವುಳ್ಳವರಾಗಿದ್ದರು. ಇಡಿಯ ಶರಾವತಿ ಹಿನ್ನೀರಿನ ಕುರಿತಾದ ಸಂಪೂರ್ಣ ಮಾಹಿತಿಯೂ ಸ್ವಾಮಿಯವರಲ್ಲಿದ್ದರೂ ಅದನ್ನು ಹೇಳಹೋದರೆ “ ನಂಗೇನ್ರೀ, ನಿಮ್ಮಷ್ಟೇ ಗೊತ್ತು. ಎಲ್ಲಾನೂ ತಿಳ್ಕೋತಾನೇ ಹೋಗಬೇಕಲ್ರೀ” ಎಂದು ಈಗಲೂ ಗದರಿಸಿಬಿಡುತ್ತಾರೆ.

ನೀರಿನ ಸಮೀಪ ಬಂದನಂತರ ಈ ಮೊದಲು ಚಿಕ್ಕಪುಟ್ಟ ಜಲಯಾನ ಮಾಡಿ ಅನುಭವವಿದ್ದ ತಂಡದ ಕೆಲವರು ಒಂದೊಂದಾಗಿ ಕೊಪ್ಪರಿಗೆ ಆಕೃತಿಯ ಕೊರೆಕಲ್‍ಗಳನ್ನು ಮಗುಚಿ ನೀರಿಗಿಳಿಸತೊಡಗಿದರು.

“ಒಂದು ಕೊರೆಕಲ್‍ನಲ್ಲಿ ನಾಲ್ಕು ಜನರಂತೆ ಕುಳಿತುಕೊಳ್ಳಿ. ಹುಟ್ಟುಹಾಕುವಾಗ ಬ್ಯಾಲೆನ್ಸ್ ಇರಲಿ. ತಟ್ಟನೆ ಯಾರೂ ಏಳ್ಬೇಡಿ. ಆಯ ತಪ್ಪುತ್ತೆ” ಎಂದು ದಡದಲ್ಲಿ ನಿಂತು ಸ್ವಾಮಿ ಮತ್ತು ನೊಮಿಟಾ ಯಾನದಲ್ಲಿ ಪಾಲ್ಗೊಳ್ಳುವವರಿಗೆ ಸೂಚನೆ ಕೊಡತೊಡಗಿದರು. ನಾನು ಲಕ್ಷ್ಮೀನಾರಾಯಣ ಕುಳಿತಿದ್ದ ಕೊರೆಕಲ್ ಹತ್ತಿ ಕೂತೆ. ಪ್ರತಿ ಕೊರೆಕಲ್‍ಗೂ ಎರಡು ಹುಟ್ಟುಗಳಿದ್ದು ಸರದಿ ಪ್ರಕಾರ ಅದರಿಂದ ಕೊರೆಕಲ್‍ನ್ನು ನೂಕಿಕೊಂಡು ಹೋಗಬೇಕಿತ್ತು.

ಆ ಬೆಳಗಿನ ಹನ್ನೊಂದು ಗಂಟೆ ಸುಮಾರಿಗೆ ಒಟ್ಟು ಎಂಟು ಕೊರೆಕಲ್‍ಗಳು ತಮ್ಮ ಯಾನ ಆರಂಭಿಸಿದ್ದವು. ಯಾನದ ಆರಂಭವನ್ನು ನೋಡಲು ಸಾಕಷ್ಟು ಮಂದಿ ದಡದಲ್ಲಿ ಸೇರಿದ್ದವರು ಕೈ ಬೀಸಿ ನಮ್ಮನ್ನು ಬೀಳ್ಕೊಟ್ಟರು. ಒಂದಿಬ್ಬರು ಪತ್ರಿಕಾ ವರದಿಗಾರರೂ ಫೋಟೋ ಕ್ಲಿಕ್ಕಿಸಿ ನಮಗೆ ಶುಭ ಹಾರೈಸಿದರು. ಕೊರೆಕಲ್‍ನಲ್ಲಿ ಕೂತಿದ್ದ ನಮಗೆಲ್ಲ ನಾವೆಲ್ಲೋ ಸಮುದ್ರದಲ್ಲಿ ದೂರದೇಶಕ್ಕೆ ಪ್ರಯಾಣ ಬೆಳೆಸುತ್ತಿದ್ದೇವೆ ಎನ್ನುವ ಭಾವನೆ ಮೂಡಿತ್ತು.

ಮೊಟ್ಟಮೊದಲ ಬಾರಿಗೆ ಮಾರಗಲದ ಪುಟ್ಟ ಕೊರೆಕಲ್‍ನಲ್ಲಿ ಅಷ್ಟು ದೂರದ ಯಾನಕ್ಕೆ ಹೊರಟ ನಮ್ಮಿಂದ ಅದು ಸಾಧ್ಯವಾಗಬಹುದೇ ಎನ್ನುವ ಅಳುಕು ನನ್ನೊಳಗಿತ್ತು. ಅಂತೂ ಹುಮ್ಮಸಿನಲ್ಲಿ ಸರದಿಯಂತೆ ಹುಟ್ಟು ಹಾಕುತ್ತ ನೀರಲ್ಲಿ ತೇಲತೊಡಗಿದೆವು. ನಿಧಾನವಾಗಿ ನಾವು ಬಿಟ್ಟು ಬಂದ ದಡ ದೂರವಾಗುತ್ತಿತ್ತು. ಅಲ್ಲಿದ್ದ ಜನರು ಸಣ್ಣಗೆ ಕಾಣಿಸುತ್ತ ನಂತರ ಮಸುಕಾಗತೊಡಗಿದರು. ನಾವು ನೆಲ ಬಿಟ್ಟು ನೀರನ್ನೇ ನಂಬಿಕೊಂಡು ಮುಂದುವರಿಯುತ್ತಿದ್ದೆವು. ಶರಾವತಿ ಹಿನ್ನೀರಿಗೆ ಸಂಬಂಧಿಸಿದಂತೆ ಒಂದು ಚಾರಿತ್ರಿಕವಾದ ಸಂದರ್ಭಕ್ಕೆ ನಾವೂ ಪಾಲುದಾರರಾಗಿದ್ದೇವೆ ಎನ್ನುವ ಅನಿಸಿಕೆ ಪ್ರಾಯಶ: ಸ್ವಾಮಿ ಮತ್ತು ನೊಮಿಟಾ ಅವರನ್ನು ಬಿಟ್ಟರೆ ಉಳಿದ ಒಬ್ಬರಲ್ಲೂ ಇರಲಿಲ್ಲ.

ನಮಗೆಲ್ಲ ಅಚ್ಚರಿ ತಂದಿದ್ದೆಂದರೆ ನಮ್ಮ ಕೊರೆಕಲ್ ಗಳ ಜೊತೆಯಲ್ಲೇ ಬೆಂಗಳೂರಿನ ರಾಮನಾಥ ಎನ್ನುವವರು ಈಜುತ್ತ ಬರುತ್ತಿದ್ದುದು. ಎರಡೂ ಕಾಲುಗಳು ಸರಿ ಇರುವವರೇ ಅಂಥ ನೀರಲ್ಲಿ ಈಜಲು ಒದ್ದಾಡುವಾಗ ಪೊಲೀಯೋದಿಂದ ಎರಡು ಕಾಲುಗಳೂ ಊನವಾದ ಅವರು ಈಜಿಕೊಂಡೇ ಬರುತ್ತಿದ್ದರು. ಅವರ ಜೊತೆಯಲ್ಲಿ ಸ್ವಾಮಿ ದಂಪತಿಗಳ ಪುಟ್ಟ ಮಗ ಬೇರೆ! ಅಬ್ಬಾ, ಇವರ ಸಾಹಸವೇ ಅನ್ನಿಸಿಬಿಟ್ಟಿತು.

ಶುರುವಿನ ಉಮೇದಿಯಾದ ಕಾರಣ ಎಲ್ಲ ಕೊರೆಕಲ್‍ಗಳಲ್ಲಿದ್ದವರೂ ರಭಸದಿಂದ ಹುಟ್ಟು ಹಾಕುತ್ತಿದ್ದ ಕಾರಣ ತುಸು ವೇಗವಾಗಿಯೇ ಸಾಗುತ್ತಿದ್ದೆವು. ಆ ನೀರಿನಲ್ಲಿ ಸಾಗಿ ಬಂದ ದೂರವನ್ನು ಗಣಿಸುವಂತೆಯೂ ಇರಲಿಲ್ಲ. ಇದ್ದಕ್ಕಿದ್ದಂತೆ ಯಾರೋ ಕೂಗಿದರು. “ಅಲ್ಲಿ ನೋಡಿ, ಲಿಂಗನಮಕ್ಕಿ ಡ್ಯಾಮ್ ”. ಕೆಳಭಾಗದಲ್ಲಿ ಮಸುಕು ಮಸುಕಾಗಿ ಡ್ಯಾಮ್ ಗೋಚರಿಸುತ್ತಿತ್ತು. ಅಷ್ಟು ದೂರದಲ್ಲಿದ್ದರೂ ಬೆಳಗಿನ ಬಿಸಿಲಿಗೆ ಬೆಳ್ಳಿಯಂತೆ ಹೊಳೆಯುತ್ತಿತ್ತು.

ವಾಸ್ತವಿಕವಾಗಿ ಲಿಂಗನಮಕ್ಕಿ ಡ್ಯಾಮ್ ಕೆಳಭಾಗದಿಂದ ಅದನ್ನು ನೋಡಿ, ಅದರ ಬೃಹದಾಕಾರಕ್ಕೆ ವಿಸ್ಮಯಪಟ್ಟವರು ನಾವು. ಆದರೆ ಅದರ ಮೇಲ್ಭಾಗದಲ್ಲಿದ್ದ ನಮಗೆ ನೀರಿನ ಮೇಲಿನ ಭಾಗ ಮಾತ್ರ ಕಾಣುತ್ತಿದ್ದು ಅದು ಡ್ಯಾಮ್ ಹೌದೇ, ಅಲ್ಲವೇ? ಎನ್ನುವ ಪ್ರಶ್ನೆಯನ್ನು ಹುಟ್ಟಿಸಿತು. ನಾವು ಯಾವುದೇ ವಸ್ತುವನ್ನು ನೋಡುವ ಕೋನ ಬದಲಾದರೆ ಎಷ್ಟೊಂದು ವಿಚಿತ್ರ ಬದಲಾವಣೆ ಆಗುತ್ತದೆ ಅನ್ನಿಸಿತು.

ಈಜುತ್ತ ಬರುತ್ತಿದ್ದವರ ವೇಗ ಕಡಿಮೆಯಾಯ್ತೋ, ನಮ್ಮ ಹುರುಪು ಹೆಚ್ಚಾಯ್ತೋ? ನಾವು ಅವರಿಂದ ಮುಂದುವರಿಯುತ್ತ ಸಾಕಷ್ಟು ಅಂತರ ಕ್ರಮಿಸಿದ್ದೆವು. ಅವರು ಬರುವ ತನಕ ಕಾಯೋಣ ಎಂದು ತೀರ್ಮಾನಿಸಿ ಅಲ್ಲೇ ಎದುರಿಗಿದ್ದ ನಡುಗುಡ್ಡದ ಬುಡಕ್ಕೆ ಕೊರೆಕಲ್‍ಗಳನ್ನು ನಿಲ್ಲಿಸಿದಾಗ ನಮ್ಮ ಯಾನದ ಮೊದಲ ಹಂತ ಯಶಸ್ವಿಯಾಗಿತ್ತು. ಅಷ್ಟರಲ್ಲೇ ನಾವು ಸುಮಾರು ಐದು ಮೈಲಿ ಬಂದಿರಬಹುದೆಂದು ಹೊನ್ನೆಮರಡುವಿನಲ್ಲಿ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿರುವ ಲಂಬೋದರ ಹೇಳಿದ. ನಾವು ಅಲ್ಲಿಗೆ ಬರಲು ಹತ್ತಿರ ಹತ್ತಿರ ಎರಡು ತಾಸು ತೆಗೆದುಕೊಂಡಿದ್ದೆವು. ನಡುಗುಡ್ಡೆಯಲ್ಲಿ ನಿಂತು ನೋಡಿದರೆ ದೂರದಲ್ಲಿ ಅತಿ ಸಣ್ಣಗೆ ಹೊನ್ನೆಮರಡು ಪ್ರದೇಶ ಕಾಣುತ್ತಿತ್ತು.

ನಾವು ನಿಂತಿದ್ದ ನಡುಗುಡ್ಡೆ ವಾಸ್ತವಿಕವಾಗಿ ಸುಮಾರು ಇನ್ನೂರಕ್ಕೂ ಹೆಚ್ಚು ಅಡಿ ಎತ್ತರದ್ದೆಂತಲೂ, ನಾವೀಗ ಅದರ ತುತ್ತ ತುದಿಯಲ್ಲಿ ನಿಂತಿದ್ದೇವೆ ಎಂದು ತಂತ್ರಜ್ಞ ಗಜಾನನ ಶರ್ಮಾ ಹೇಳಿದರು. ಇನ್ನೂರು ಅಡಿ ಎತ್ತರವೆಂದರೆ ಹುಡುಗಾಟವೇ! ನಮ್ಮೂರ ಹಿಂದಿದ್ದ ನಾವೆಲ್ಲ ಹಿರೇಗುಡ್ಡ ಎಂದು ಕರೆಯುವ ಬೃಹತ್ ಗುಡ್ಡದಷ್ಟು ಎತ್ತರ! ಅಬ್ಬಬ್ಬಾ ಅನ್ನಿಸಿಬಿಟ್ಟಿತು. ಅದಕ್ಕೆ ಸೂಕ್ತವಾದ ಮಾಹಿತಿಯನ್ನು ಒದಗಿಸಿದ ಗಜಾನನ ಶರ್ಮಾ ಫೆಬ್ರುವರಿ ತಿಂಗಳ ಈ ಸಮಯದಲ್ಲಿ ಡ್ಯಾಮಿನಲ್ಲಿ ಈಗ 200 ಅಡಿಗಳಷ್ಟು ನೀರಿದೆ. ಅದಕ್ಕೂ ಹತ್ತಿಪ್ಪತ್ತು ಅಡಿ ಎತ್ತರಕ್ಕೆ ಗುಡ್ಡವಿದೆ ಅಂದರೆ ನೀವೇ ಊಹಿಸಿಕೊಳ್ಳಿ ಎಂದು ಲೆಕ್ಕಾಚಾರದ ವ್ಯವಹಾರವನ್ನು ನಮಗೇ ಬಿಟ್ಟರು.

ಈಜುತ್ತ ಬಂದವರು ದಡ ಸೇರಿದ ನಂತರ ಅವರ ಜೊತೆಗೇ ತಮ್ಮ ಕೊರೆಕಲ್‍ಗಳನ್ನು ತೇಲಿಸಿಕೊಂಡು ಬಂದ ಸ್ವಾಮಿ, ನೊಮಿಟೊ ನಮ್ಮೆಲ್ಲರನ್ನೂ ತರಾಟೆಗೆ ತೆಗೆದುಕೊಂಡರು.

“ನಿಮಗೆಲ್ಲ ಮೊದ್ಲೇ ಹೇಳಿದ್ವಿ, ಯಾರೂ ಮುಂದೆ ಮುಂದೆ ಹೋಗ್ಬಾರ್ದೂ. ಎಲ್ಲರೂ ಒಟ್ಟಿಗೇ ಹೋಗ್ಬೇಕು ಅಂತ. ಹಿಂದಿದ್ದವರನ್ನು ಬಿಟ್ಟು ಹೋದ್ರೆ ಏನಾದ್ರೂ ಆದ್ರೆ? ಮುಂದೆ ಹಾಗಾಗಬಾರದು” ಎಂದು ಕಠಿಣವಾಗೇ ಹೇಳಿದರು. ಮೊದಲ ಹಂತದಲ್ಲೇ ಏನೋ ಸಾಧಿಸಿಬಿಟ್ಟೆವು ಎನ್ನುವ ಹಮ್ಮಿನಲ್ಲಿ ವಾಸ್ಕೋಡಗಾಮನಂತೇ ನೆಲದ ಮೇಲೆ ಕಾಲಿಟ್ಟಿದ್ದ ನಮಗೆಲ್ಲ ಆ ಹುಮ್ಮಸ್ಸು ಇಳಿದುಹೋಯಿತು. ನನಗಂತೂ ನಾವು ಮಾಡಿದ್ದು ತಪ್ಪೆನ್ನಿಸಿತು.
ಸ್ವಾಮಿ ಸಮಾಧಾನ ಮಾಡಿಕೊಂಡು “ ಈಗಾಗಲೇ ಸಮಯ ಆಗಿರೋದ್ರಿಂದ ಲಂಚ್ ಮುಗಿಸೋಣ. ನಂತರ ಹೊರಟರೆ ಮತ್ತೆ ಸಂಜೆಯವರೆಗೆ ನಿಲುಗಡೆ ಇಲ್ಲ” ಎಂದು ಮುಂಚಿತವಾಗೇ ಖಡಕ್ಕಾದ ಸೂಚನೆ ಕೊಟ್ಟರು.

ಹೊನ್ನೆಮರಡುನಿಂದ ತಂದಿದ್ದ ಪಲಾವ್ ತಿನ್ನುವಾಗ ಸ್ವಾಮಿ ಮುಖ್ಯವಾದ ಎಚ್ಚರಿಕೆಯೊಂದನ್ನು ಕೊಟ್ಟರು. “ನೋಡಿ, ನೀರಿನಲ್ಲಿ ಮುಳುಗಿದ ಒಣಮರಗಳಿರುತ್ತವೆ. ಮೇಲಿನಿಂದ ಅವು ಕಾಣೋದಿಲ್ಲ. ಹೋಗುವಾಗ ಅವನ್ನು ಗುರುತಿಸಿಕೊಂಡು ದಾಟಬೇಕು. ಎಲ್ಲಾದ್ರೂ ತಾಗಿದ್ರೆ ಕೊರೆಕಲ್‍ಗೂ ಅಪಾಯ. ನಿಮಗಂತೂ ಕೇಳೋದೇ ಬೇಡ” ಎಂದು ಗಂಭೀರವಾದ ಸೂಚನೆ ನೀಡಿದರು.

ಆ ನಡುಗುಡ್ಡೆಯನ್ನು ಬಿಟ್ಟು ಹೊರಟಿದ್ದೇ ನಮಗೆ ವಿಶಾಲವಾದ ಸಮುದ್ರ ಎದುರಾದಂತೆ ಭಾಸವಾಯಿತು. ಈವರೆಗೆ ಅಷ್ಟೇನೂ ಅಂತರವಿಲ್ಲದ ಎರಡು ದಂಡೆಗಳ ನಡುವೆ ಸಾಗಿ ಬಂದವರಿಗೆ ಈಗ ವಿಸ್ತಾರವಾದ ಜಲರಾಶಿ ಎದುರಾಗಿತ್ತು. ಅಕ್ಕ ಪಕ್ಕದ ದಡಗಳು ಎಲ್ಲೋ ದೂರ ಸರಿದು ನಾವು ಕಡಲಿನಲ್ಲಿದ್ದಂತೇ ಅನ್ನಿಸಿತು. ನೀರ ನಡುವಿನ ನಡುಗುಡ್ಡೆಗಳ ತುದಿಯಲ್ಲಿ ದಟ್ಟವಾಗಿ ಗಿಡಮರಗಳು ಬೆಳೆದು ತಲೆಯ ನೆತ್ತಿಯಲ್ಲಿ ಜುಟ್ಟು ಬಿಟ್ಟುಕೊಂಡಂತೆ ನಿಂತಿದ್ದವು. ನಡುಗುಡ್ಡೆಗಳ ಸುತ್ತ ನೀರು ಕೊರೆದು ವೃತ್ತಾಕಾರದ ಗೆರೆಗಳು ವಿಚಿತ್ರವಾಗಿ ಕಾಣುತ್ತಿತ್ತು.

ನಾನು ಆ ನಡುಗುಡ್ಡಗಳ ನೆತ್ತಿಯಲ್ಲಿ ಗಿಡಮರಗಳಿಲ್ಲದಿರುವದನ್ನು ಮನಸ್ಸಿನಲ್ಲೇ ಊಹಿಸಿಕೊಂಡು ನೋಡಿದೆ. ಆಗ ಅವು ಪಕ್ಕಾ ಈಜಿಪ್ತಿನ ಪಿರಮಿಡ್‍ಗಳಂತೆ ಅನ್ನಿಸಿ ಗಾಬರಿಯಾಗಿ ನನ್ನ ಮನಸ್ಸಿನ ಆ ಲೆನ್ಸ್ ಕಳಚಿ ಇಟ್ಟೆ.

ಸುತ್ತಲಿನ ನಿಸರ್ಗದ ರಮಣೀಯತೆಯನ್ನು ನೋಡುತ್ತ, ನಮ್ಮೊಳಗೇ ಮಾತನಾಡುತ್ತ ದಕ್ಷಿಣ ದಿಕ್ಕಿನಲ್ಲಿ ಸಾಗುತ್ತಿದ್ದ ನಾವು ಆ ವಿಸ್ತಾರ ಜಲಸಾಗರದ ನಡುವೆ ಅಲ್ಲಲ್ಲಿರುವ ನಡುಗುಡ್ಡೆಗಳ ನಡುವೆ ಅಂದಾಜಿನ ಮೇಲೆ ಹೋಗಬೇಕಾದ ಮಾರ್ಗ ಅರಸಬೇಕಿತ್ತು. ಅಲ್ಲದೇ ಸ್ವಾಮಿ ಕೊಟ್ಟ ಎಚ್ಚರಿಕೆ ಬೇರೆ ಮನಸ್ಸಿನಲ್ಲಿ ಕೊರೆಯುತ್ತಿತ್ತು.

ಅವರು ಹೇಳಿದ್ದು ನಿಜಕ್ಕೂ ಸತ್ಯವಾಗಿತ್ತು. ನಾವು ಸಾಗುತ್ತಿದ್ದ ನೀರಿನ ಮೇಲ್ಗಡೆ ಅಲ್ಲಲ್ಲಿ ಒಣಗಿದ ಮರದ ಕಾಂಡಗಳೂ, ಅವುಗಳ ಒಣ ಕೊಂಬೆಗಳು ಕಾಣುತ್ತಿದ್ದವು. ತೆಳ್ಳಗೇ ಪಾರದರ್ಶಕವಾಗಿದ್ದ ನೀರಿನ ಒಳಗೆ ಕೂಡ ಆ ಥರದ ಒಣಮರಗಳು ಕಂಡು ಬರುತ್ತಿದ್ದವು. ಅದೆಷ್ಟು ವರ್ಷಗಳಿಂದ ನೀರಿನಲ್ಲಿ ಮುಳುಗಿಕೊಂಡಿದ್ದರೂ ಈವರೆಗೂ ಲಡ್ಡಾಗದೇ ಉಳಿದಿರುವ ಆ ಮರಗಳ ತಾಕತ್ತು ಎಷ್ಟಿರಬಹುದು? ಅನ್ನಿಸಿತು.

ನೀರು ಬಂದು ಕೊರೆಕಲ್‍ಗೆ ತಾಕಿದಾಗ ಆಗುವ ಸಣ್ಣ ಸದ್ದು, ತೆಳು ಅಲೆಗಳ ಪುಳಕ್, ಪುಳಕ್ ನಾದ ಬಿಟ್ಟರೆ ಅಲ್ಲೆಲ್ಲ ಮೌನ. ಬೆಳಿಗ್ಗೆ ಎದ್ದಾಗಿನಿಂದ ನಿದ್ದೆ ಬರುವ ಕ್ಷಣದವರೆಗೂ ಗೌಜಿಯಲ್ಲೇ ಬದುಕುತ್ತ ಬಂದ ನಮಗೆಲ್ಲ ಆ ನೀರವತೆ ಇರುವದಕ್ಕಿಂತ ಹೆಚ್ಚಾಗಿಯೇ ಅನಿಸುತ್ತಿತ್ತು. ಆಗಾಗ್ಗೆ ನಾವು ಮಾತನಾಡಿಕೊಳ್ಳುವದು ಬಿಟ್ಟರೆ ಮತ್ತ್ಯಾವುದೇ ಸದ್ದನ್ನು ಅಲ್ಲಿ ಕೇಳಲು ಸಾಧ್ಯವೇ ಇರಲಿಲ್ಲ. ನಾನಂತೂ ಜೀವನದಲ್ಲಿ ಇಷ್ಟೊಂದು ನಿಶಬ್ದವಾಗಿರುವ ವಾತಾವರಣವನ್ನು ಕಂಡೇ ಇರಲಿಲ್ಲ. ತೀರಾ ದಟ್ಟವಾದ ಕಾಡಿನಲ್ಲಿ ಅನೇಕ ಬಾರಿ ತಿರುಗಾಡಿದ್ದರೂ ಯಾವುದೋ ಹಕ್ಕಿಯ ದನಿ, ಯಾವುದೋ ಪ್ರಾಣಿ ನಡೆದಾಡಿದ ಸದ್ದು ಕೊನೆಪಕ್ಷ ಎಲೆ ಉದುರುವ ಸದ್ದು..ಒಟ್ಟಾರೆ ಮೌನವನ್ನು ಕದಡಬಹುದಾದ ಸಣ್ಣ ಸದ್ದುಗಳು ಕೇಳುತ್ತಿದ್ದವು.

ಇಲ್ಲಿ ಹಾಗಲ್ಲ. ಕೇವಲ ವಿಸ್ತಾರವಾದ ನೀರು, ಅಲ್ಲಲ್ಲಿ ನಡುಗುಡ್ಡೆ, ದೂರ, ದೂರವಾಗಿ ತೇಲುತ್ತಿರುವ ಕೊರೆಕಲ್‍ಗಳು. ಒಂದು ಅಪೂರ್ವವಾದ ಅನುಭವ ಅಲ್ಲಿ ಆಗುತ್ತಿತ್ತು.

। ಉಳಿದದ್ದು ನಾಳೆಗೆ ।

‍ಲೇಖಕರು avadhi

November 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vinathe Sharma

    Nimma niroopane aasakti huttisi mundina bhaagakke eduru noduvanthe ide.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: