ಸ್ವಪ್ನಕಿಂಡಿ

 

 

 

ಅನೂಪ್ ಗುನಗಾ

 

 

ದಿನವಿಡೀ ಸುರಿದ ಮಳೆ ಸಂಜೆಯ ಹೊತ್ತಿಗೆ ಸ್ವಲ್ಪ ವಿರಾಮ ತೆಗೆದುಕೊಂಡಿತ್ತು. ತಿಳಿಯಾಗಿ ಹರಡಿದ ಸಂಜೆಗೆಂಪು ಪಶ್ಚಿಮ ಅಂಬರದ ಅಂಚಿಗೆ ಚಿನ್ನದ ಲೇಪನವಿತ್ತಂತಿತ್ತು. ರುಕ್ಮಿಣಿ ಮನೆ ಕೆಲಸಗಳನ್ನೆಲ್ಲ ಮುಗಿಸಿ ತನ್ನ ಕೋಣೆಗೆ ಬಂದು ಕಿಟಕಿಗೆ ಆನಿಸಿ ನಿಂತಳು. ನಿಸರ್ಗದ ಹಚ್ಚ ಹಸಿರಿನೊಳಗೆ ಅಡಗಿ ಕುಳಿತಂತಿರುವ ಪುಟ್ಟ ಮನೆ ಅವಳದ್ದು. ಸುತ್ತಲೂ ಮರಗಿಡಗಳ ಸಾಲು ರುಕ್ಮಿಣಿಯ ಕಾವಲಿಗೆ ನಿಂತಂತಿದ್ದವು. ಆ ಕಿಟಕಿ ಅಂದರೆ ಅವಳಿಗದೇನೋ ಒಂದು ರೀತಿಯ ಆತ್ಮೀಯತೆ. ಪಕ್ಕದಲ್ಲೇ ಒಂದು ಚಿಕ್ಕ ತೋಟವಿದೆ. ಅವಳ ಅಮ್ಮ ಬದುಕಿದ್ದಾಗ ಪ್ರೀತಿಯಿಂದ ಮಾಡಿದ ತೋಟವದು. ಅಲ್ಲಿ ಬೆಳೆಸುತ್ತಿದ್ದ ಬಸಳೆ ಬಳ್ಳಿಯ ಆರೈಕೆ ಮಾಡುವಾಗೆಲ್ಲ, ಕಿಟಕಿ ಪಕ್ಕ ಓದುತ್ತ ಕುಳಿತಿರುತ್ತಿದ್ದ ರುಕ್ಮಿಣಿಯ ಬಳಿ ಮಾತಾಡುತ್ತಾ ಕೆಲಸ ಮಾಡುತ್ತಿದ್ದರು. ಹಾಗಾಗಿ ಆ ಕಿಟಕಿ ಅಮ್ಮನ ಜೊತೆ ಮಾತನಾಡಲು ಇರುವ ಸ್ವಪ್ನಕಿಂಡಿಯಂತೆ ಭಾಸವಾಗುತ್ತದೆ ಅವಳಿಗೆ.

“ಶಾರದಮ್ಮನ ಹಿರಿ ಮಗಳಿಗೆ, ಕಾರವಾರದ ಗಂಡಾಯ್ತಂತೆ”, “ಪಾಪ, ಆ ದಿವಾಕರ ಶೆಟ್ರಿಗೆ ಕ್ಯಾನ್ಸರ್ ಅಂತೆ…ಬದುಕುದೇ ಕಷ್ಟ ಅಂದೇಳಿ ಹೇಳ್ತ್ರಪ್ಪ”, “ನಿಮ್ ಅಪ್ಪಯ್ಯನ ಹತ್ರ, ಬಾವಿಗೆ ಒಂದ್ ಪಂಪ್ ಹಾಕ್ಸಿ ಅಂದೆ, ಕಿವಿಗೇ ಹಾಕೊಳ್ಳುದಿಲ್ಲ ಅವರು. ಬಾವಿ ನೀರು ತೆಗ್ದು ತೆಗ್ದು ಸಾಕಾಗೋಯ್ತದೆ” ಅಂತೆಲ್ಲ ಮಗಳ ಬಳಿ ಹೇಳಿಕೊಳ್ಳುತ್ತ ಕೆಲಸ ಮಾಡುತ್ತಿದ್ದರು. “ಅಮ್ಮಾ, ಮೊನ್ನೆ ಆ ಆಚಾರಿ, ನಮ್ಮ ಹಿಂದಿನ ಬಾಗಿಲು ಸರಿ ಮಾಡುಕ್ ಬರ್ತೆ ಅಂದಿದ್ನಲ, ಬರ್ಲಿಲ್ವಾ?”, “ಆ ರಾಧಕ್ಕನ ಮಗಳು ಹೆರಿಗೆ ನೋವು ಶುರು ಆಗಿ ಆಸ್ಪತ್ರೆಗೆ ಸೇರ್ಸಿದ್ರಲಾ, ಹೆರಿಗೆ ಆಯ್ತಾ? ಎಂಥ ಮಗು?” ಅಂತ ರುಕ್ಮಿಣಿಯೂ ಕೆಲವೊಮ್ಮೆ ಕೆಲವೊಂದು ವಿಚಾರಗಳನ್ನು ಕೇಳುತ್ತಿದ್ದಳು. ಆದರೆ ಈಗ…? ಈಗ, ಯಾವ ಸುದ್ದಿಯೂ ರುಕ್ಮಿಣಿಯನ್ನು ತಲುಪುತ್ತಿಲ್ಲ. ತನಗೂ, ಸುತ್ತಲಿನ ಜಗತ್ತಿಗೂ ಸೇತುವಾಗಿದ್ದ ಅಮ್ಮ ತೀರಿಕೊಂಡ ನಂತರ ಸುತ್ತಲಿನ ಆಗು-ಹೋಗುಗಳ ಜೊತೆಯಿದ್ದ ಒಂದು ಆತ್ಮೀಯ ಸಂಬಂಧ ತಪ್ಪಿಹೋದ ಅನುಭವ ಅವಳಿಗೆ. ಕೆಲಸಕ್ಕೆ ಹೋದಾಗ ಒಂದಷ್ಟು ಸುದ್ದಿಗಳು ಗೊತ್ತಾಗುತ್ತವೆ. ಆದರೆ ಅಮ್ಮ ಹೇಳುವಾಗ ಆ ಸುದ್ದಿಯಲ್ಲಿರುತ್ತಿದ್ದ ಕುತೂಹಲ ಈಗಿಲ್ಲ.

ರುಕ್ಮಿಣಿಯ ಅಪ್ಪ ಅದೇ ಊರಿನ ಪೋಸ್ಟ್’ಮ್ಯಾನ್. ಗೋಪಾಲಣ್ಣ ಎಂದರೆ ಊರಿಗೇ ಚಿರಪರಿಚಿತ. ಮೊದಲೆಲ್ಲ ಊರಿನ ಮನೆಗಳ ವರ್ತಮಾನಗಳೆಲ್ಲ ಮೊದಲು ಗೊತ್ತಾಗುವುದೇ ಗೋಪಾಲಣ್ಣನಿಗೆ. “ಗೋಪಾಲಣ್ಣ, ನನ್ನ ಮಗಳ ಪರೀಕ್ಷೆ ಇತ್ತು, ಮುಗಿದ್ ಕೂಡ್ಲೇ ಪತ್ರ ಬರಿತೆ ಅಂದಿದ್ಲು;ಬಂದದ್ಯಾ?” ಎಂದು ಕೇಳುವ ದೊಡ್ಮನೆ ರಂಗಪ್ಪ,”ಗೋಪಾಲ, ನಂದೊಂದು ಟ್ರಾನ್ಸ್’ಫರ್ ಲೆಟರ್ ಬರುದಿತ್ತು, ನಾ ಇಲ್ದಿದ್ದಾಗ ಬಂದ್ರೆ ತೆಗ್ದಿಟ್ಟುಕೋ ಮಾರಾಯಾ” ಎನ್ನುವ ಘೋಕಲೆ ಮೇಷ್ಟ್ರು, “ನನ್ನ ಎಕ್ಸ್ಟರ್ನಲ್ ಎಂ.ಎ. ಪರೀಕ್ಷೆ ಹಾಲ್ ಟಿಕೆಟ್ ಬರುದದೆ, ಬಂದ್ ಕೂಡಲೇ ಆ ಗಣಪತಿ ಅಂಗಡಿ ಹತ್ರ ಕೊಟ್ಟಿಡು ಆಯ್ತಾ, ಅಪ್ಪಯ್ಯ ಬಂದ್ ತಕಂಡ್ ಹೋಗ್ತ್ರು” ಎನ್ನುವ ಮೇಲ್ಮನೆ ನಾಗೇಶನ ಮಗಳು ಶ್ಯಾಮಲಾ. “ಏನಾ ಗೋಪಾಲ, ಪೋಸ್ಟ್ ಜೊತಿಗೆ ಪೇಟೆ ಬದಿಯಿಂದ ಏನಾದ್ರು ಹೊಸ ಸುದ್ದಿ ಬಂದದ್ಯಾ?” ಎಂದು ಊರೇ ತನ್ನ ಹಿಡಿತದಲ್ಲೇ ಇದೆಯೇನೋ ಎಂಬ ಗತ್ತಿನಲ್ಲಿ ಅಶ್ವತ್ಥ ಮರದ ಕಟ್ಟೆಯ ಮೇಲೆ ಕಾಲ ಮೇಲೆ ಕಾಲು ಹಾಕಿ ಕೂತ ಭಗೀರಥ ಜೋಯಿಸರು. ಹೀಗೆ ತನ್ನ ಸುತ್ತಮುತ್ತಲಿನ ಪುಟ್ಟ ಜಗತ್ತಿಗೆ ಗೋಪಾಲಣ್ಣ ಜನಪ್ರಿಯ ವ್ಯಕ್ತಿಯಾಗಿದ್ದ. ಗೋಪಾಲಣ್ಣನನ್ನು ನೋಡಿಯೂ ಮಾತಾಡಿಸದೆ ಹಾಗೇ ಹೋದರೆ, ಅವನು ಊರಿಗೆ ಹೊಸಬ ಎಂದೇ ಪರಿಗಣಿಸಲಾಗುತ್ತಿತ್ತು.

ಈಗಲೂ ಅವನನ್ನು ಮಾತನಾಡಿಸುವುದಿಲ್ಲ ಅಂತಲ್ಲ, ಆದರೆ ಮೊದಲಿನ ಹಾಗೆ ಎಲ್ಲ ವಿಷಯವನ್ನೂ ಗೋಪಾಲಣ್ಣನಿಗೆ ಹೇಳಿದರೆ ‘ರಿನೋವೇಟ್ ಆದ ಹಳೆ ಮನೆಗಳಲ್ಲಿ ಅರಳಿರುವ ಹೊಸ ತಲೆಮಾರಿನವರು ಅದೇನೋ ದೊಡ್ಡ ಗುಟ್ಟೊಂದು ರಟ್ಟಾದಂತೆ ಸಿಡಿಮಿಡಿಗೊಳ್ಳುತ್ತಾರೆ. “ಪೋಸ್ಟ್’ಮ್ಯಾನ್ ಗೆಲ್ಲ ಯಾಕೆ ನನ್ನ ಎಕ್ಸಾಂ ವಿಷಯ ಹೇಳ್ತೆ ನೀನು?” ಎಂದು ರಮೇಶಣ್ಣನ ಮಗಳು ಅಪ್ಪನಿಗೆ ಗದರುತ್ತಾಳೆ. “ನೀನು ಮೇಲ್ ಐಡಿ ಕ್ರಿಯೇಟ್ ಮಾಡು, ಟ್ರಾನ್ಸ್’ಫರ್ ಡಿಟೇಲ್ಸ್ ಎಲ್ಲ ಸೀದಾ ಅಲ್ಲಿಗೆ ಬರ್ತದೆ. ಈ ಪೋಸ್ಟ್’ಮ್ಯಾನ್ ಕಾಯು ಕೆಲಸ ಇಲ್ಲ ಅವಾಗ. ನೀ ಟ್ರಾನ್ಸ್’ಫರ್ ಅಯ್ತಿದ್ದೆ ಅಂತ ಊರಿಗೆಲ್ಲ ಗೊತ್ತಾಗ್ಬೇಕಾ?” ಎಂದು ಪುತ್ರನ್ ಮೇಷ್ಟರ ಮಗ ಒಳಗಿಂದಲೇ ಕೂಗಿದ್ದನ್ನು ಗೋಪಾಲಣ್ಣ ಸ್ವತಃ ಕೇಳಿಸಿಕೊಂಡಿದ್ದಾನೆ. ಮನೆಯವನಂತೆ ಇದ್ದ ಗೋಪಾಲಣ್ಣ ದಿನೇ ದಿನೇ ಹೊರಗಿನವನಾಗುತ್ತಿದ್ದ. ತನ್ನೂರಿನಲ್ಲಿ ತನಗೇ ಗೊತ್ತಾಗಬಾರದ ಒಂದಿಷ್ಟು ಹೊಸ ಹೊಸ ಗುಟ್ಟುಗಳು ಹುಟ್ಟಿಕೊಂಡಿವೆ ಅನಿಸುತ್ತಿದ್ದಂತೆ, ಅದೇನೋ ತಳಮಳ ಗೋಪಾಲಣ್ಣನ ಮನಸಲ್ಲಿ. ಇನ್ನು, ಅಶ್ವತ್ಥ ಕಟ್ಟೆಯ ಭಗೀರಥ ಜೋಯಿಸರ ಬಳಿ “ಜೋಯಿಸರೇ, ಇವತ್ತೊಂದು ತಾಜಾ ಸುದ್ದಿ ಬಂದದೆ. ನಮ್ಮ ಎಂ.ಎಲ್.ಎ. ರಾಜಾರಾಮ್ ಶ್ಯಾನುಭೋಗರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ರಂತೆ” ಅಂತ ಭಾರಿ ಉತ್ಸುಕತೆಯಿಂದ ಹೇಳಿದರೆ, ಅವರು ಯಾವುದೊ ಕಾಲದ ಸುದ್ದಿ ಈಗ ಹೇಳ್ತಿದ್ಯಲ್ಲಾ ಮಾರಾಯಾ ಎನ್ನುವ ತರಹದ ನೋಟವನ್ನು ಗೋಪಾಲಣ್ಣನೆಡೆ ಬೀರುತ್ತಾ, “ಹೌದಂತೆ, ನಿನ್ನೆ ರಾತ್ರಿನೇ ಗೊತ್ತಾಯ್ತು. ವಾಟ್ಸಾಪ್ ಅಲ್ಲಿ ಬಂದಿತ್ತು” ಎಂದು ಉತ್ತರಿಸಿ ಆ ವಿಚಾರವಾಗಿ ಚರ್ಚೆ ಮಾಡುವ ಗೋಪಾಲಣ್ಣನ ಉಮೇದಿಗೆ ತಣ್ಣೀರೆರೆಚಿಬಿಡುತ್ತಾರೆ.

ಅಯ್ಯೋ, ನಿನ್ನೆ ರಾತ್ರಿ ಹನ್ನೆರಡು ಗಂಟೆಗೆ, ಅದೂ ದೂರದ ಪೇಟೆಯಲ್ಲಿ ಆದ ಘಟನೆಯ ಸುದ್ದಿ ಬೆಳಗಾಗುವುದರೊಳಗೆ ಈ ಹಳ್ಳಿಯವರಿಗೂ ಬೇಡದ ರದ್ದಿ ಪೇಪರ್’ನಂತೆ ಆಗಿಹೋಯ್ತಾ ಎಂಬ ಆಶ್ಚರ್ಯ ಗೋಪಾಲಣ್ಣನಿಗೆ. ನೋಡನೋಡುತ್ತಲೇ ತನ್ನ ಹಾಗೂ ತನ್ನವರಂತಿದ್ದ ಊರಿನವರ ನಡುವೆ ಯಾರೋ ರೆಡಿಮೇಡ್ ಪಾಗರ ತಂದಿಟ್ಟಂತೆ ಅನಿಸತೊಡಗಿತ್ತು ಅವನಿಗೆ.

ರುಕ್ಮಿಣಿ ತನ್ನ ಮನೆಯ ಹತ್ತಿರದಲ್ಲೇ ಇರುವ ಶಾಲೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಾಳೆ. ಶಾಲೆಯಿಂದ ಬಂದು ಮನೆಗೆಲಸವಗಳನ್ನೆಲ್ಲ ಮುಗಿಸಿ ಅಪ್ಪನಿಗಾಗಿ ಕಾಯುತ್ತ ಕೂರುವುದು ದಿನದ ಕಾಯಕ. ಶಾಲೆಯ ಪುಸ್ತಕ ಭಂಡಾರದಲ್ಲಿ ಯಾವುದಾದರು ಹೊಸ ಕಾದಂಬರಿ ಬಂದರೆ, ಅದನ್ನು ತಂದು ಓದುತ್ತಾಳೆ. ಇಲ್ಲವಾದರೆ ತನ್ನ ಕೋಣೆಯ ಸ್ವಪ್ನಕಿಂಡಿಯೇ ಅವಳ ಜಗತ್ತು. ಮಳೆ ಸುರಿಯುತ್ತಿದ್ದರಂತೂ ಆ ಸ್ವಪ್ನಕಿಂಡಿಯ ಪಕ್ಕ ಕುಳಿತಾಗೆಲ್ಲ, ಜಯಂತ್ ಕಾಯ್ಕಿಣಿಯವರು ತಮ್ಮ ಒಂದು ಬರಹದಲ್ಲಿ ಹೇಳುವಂತೆ ನೆನಪಿನ ಭಂಡಾರದ ಬೀಗಗಳೆಲ್ಲ ತಂತಾನೇ ಕಳಚಿಬಿದ್ದ ಅನುಭವ ರುಕ್ಮಿಣಿಗಾಗುತ್ತದೆ. ಅವರದ್ದು ಮಧ್ಯಮ ವರ್ಗದ ಕುಟುಂಬ. ಅವಶ್ಯಕತೆಗಳನ್ನಷ್ಟೇ ಪೂರೈಸಲು ಅಲ್ಲಿ ಅವಕಾಶ. ಆದರೂ ತಮಗೇನೋ ಕೊರತೆ ಇದೆ ಎಂದು ಹಣೆಬರಹಕ್ಕೆ ಹಳಿದುಕೊಳ್ಳುತ್ತ ಬದುಕಿದವರಲ್ಲ. ದಿನವೂ ಅಪ್ಪ, ಅಮ್ಮ, ರುಕ್ಮಿಣಿ ಎಲ್ಲರೂ ಜೊತೆ ಕುಳಿತು ಊಟ ಮಾಡುತ್ತಿದ್ದರು. ತಮ್ಮ ದಿನಚರಿಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು.

ಒಂದಷ್ಟು ಹೊತ್ತು ಧಾರಾವಾಹಿಯ ಸುಮತಿಯ ಕಷ್ಟಗಳ ಬಗ್ಗೆ ಕೂಡ ಚರ್ಚೆಗಳಾಗುತ್ತಿತ್ತು. ಸಮಯ ಸಿಕ್ಕಾಗ ಮೂವರು ಕೂಡಿ ತಮ್ಮ ಎರಡು ಕಾಲಿನ ವಾಹನದಲ್ಲಿ ಊರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು. ಒಮ್ಮೆ ಹೀಗೆ ಹೋಗುತ್ತಿದ್ದಾಗ ದಾರಿಯಲ್ಲಿ ಹೊಸದಾಗಿ ನಿರ್ಮಿತವಾದ ಒಬ್ಬ ಶ್ರೀಮಂತರ ಮನೆ ನೋಡಿ ಗೋಪಾಲಣ್ಣ ಹೇಳಿದ “ನೋಡು, ಅವರ ಮನೇಲಿ ಮೂರ್ ಮೂರ್ ಕಾರ್ ಇದೆ. ಅದ್ಹೇಗೆ ಅಷ್ಟು ದುಡ್ಡು ಮಾಡ್ತ್ರೇನಪ್ಪಾ ಅವ್ರೆಲ್ಲ?” ಅಂದ. “ಅಯ್ಯೋ….ಆ ನಮೂನೆ ಶ್ರೀಮಂತಿಕಿ ಬ್ಯಾಡ ನಮಗೆ. ಎಲ್ಲಾದ್ರೂ ಹೋಗ್ಬೇಕಿದ್ರೆ ಅಪ್ಪ ಒಂದ್ ಕಾರಲ್ಲಿ, ಅಮ್ಮ ಒಂದ್ ಕಾರಲ್ಲಿ ,ಮಗ ಒಂದ್ ಕಾರಲ್ಲಿ ಹೋಗ್ತ್ರು. ಮತ್ತೆಂತ ಕರ್ಮಕ್ ಕಾರು?” ಎಂದಿದ್ದಳು ಮಡದಿ ಮೀನಾಕ್ಷಿ. ಎಲ್ಲರೂ ಜೋರಾಗಿ ಒಮ್ಮೆ ನಕ್ಕು ಮುಂದೆ ನಡೆದಿದ್ದರು.

ಹೀಗೆ, ನೆನಪಿನ ಭಂಡಾರದಿಂದ ಹೊರಬಂದ ಕ್ಷಣಗಳು ರುಕ್ಮಿಣಿಯ ತುಟಿಯಂಚಲ್ಲಿ ಮೂಡಿಸಿದ ಕಿರುನಗು ಅದೇಕೋ ಅರೆಕ್ಷಣ ಕೂಡ ನಿಲ್ಲಲಾರದು. ಚಿಕ್ಕ ಮಕ್ಕಳು ಹರಡಿದ ಆಟಿಕೆಗಳನ್ನು “ಯಾರದು? ಈ ನಮೂನೆ ಬಜಾರ ಮಾಡಿದವರು?” ಎಂದು ಎಲ್ಲವನ್ನೂ ಯಾರೋ ಪುನಃ ಪೆಟ್ಟಿಗೆಗೆ ತುಂಬಿದಂತೆ, ಎಲ್ಲ ಕ್ಷಣಗಳು ಮತ್ತೆ ಭಂಡಾರದೊಳಗೆ ಭದ್ರವಾಗುವವು. ಮತ್ತೆ ಉಳಿಯುವುದು ಅದೇ ಪ್ರಸ್ತುತತೆ. ಅದೊಂದು ದಿನ “ನಮ್ ಬಾವಿಗೆ ಈಗಾದ್ರೂ ಪಂಪ್ ಹಾಕ್ಸಿ, ರುಕ್ಕುನೂ ನನ್ ಹಾಂಗೆ ಒದ್ದಾಡುದ್ ಬೇಡ” ಎನ್ನುತ್ತಾ, ಒಂದೆರಡು ದೀರ್ಘವಾದ ಉಸಿರೆಳೆದುಕೊಂಡು ಮುಚ್ಚಿದ ಅವಳ ಅಮ್ಮನ ಕಣ್ಣು ಮತ್ತೆ ತೆರೆಯಲೇ ಇಲ್ಲ. ಅಂದಿನಿಂದ ತೋಟದಲ್ಲಿ ಹರಡಿದ ಬಸಳೆ ಬಳ್ಳಿಗೆ ರುಕ್ಮಿಣಿಯದ್ದೇ ಆರೈಕೆ. ಆದರೆ, ತೋಟಕ್ಕೆ ನೀರು ಹಾಯಿಸಲು ಈಗ ಮೀನಾಕ್ಷಕ್ಕನ ಕೊನೆಯ ಆಸೆಯಂತೆ ಪಂಪ್ ಅಳವಡಿಸಲಾಗಿದೆ. ನೀರು ಹಾಯಿಸುವಾಗೆಲ್ಲ ರುಕ್ಮಿಣಿಯ ಮನದಲ್ಲಿ ಮೂಡುವ ಪೂರ್ತಿಗೊಳಿಸಲಾಗದ ವಾಕ್ಯ ಒಂದೇ “ಅಮ್ಮ ಇದ್ದಿದ್ದರೆ…”. ಈ ಒಂದು ಕಾರಣಕ್ಕೆ ಅಪ್ಪನ ಮೇಲೆ ಇರುವ ಸಣ್ಣದೊಂದು ಮುನಿಸು ಮನೆಯ ಅಟ್ಟದ ಮೇಲೆ ಕಟ್ಟಿ ಇಟ್ಟ ಅಮ್ಮನ ಹಳೆಯ ಸೀರೆಗಳ ಗಂಟಿನ ಜೊತೆಗೆ ಮುದ್ದೆಯಾಗಿ ಕೂತಿದೆ.

ಊರವರಿಗೆಲ್ಲ ಅವರವರ ಸುದ್ದಿಗಳನ್ನು, ಗುಟ್ಟುಗಳನ್ನು, ‘ಡಾಟಾ ಕರಪ್ಟ್’ ಆಗದಂತೆ ಮುಟ್ಟಿಸಿದ ಗೋಪಾಲಣ್ಣ ಮನೆಗೆ ಹಿಂದಿರುಗಿದ. ಅವನ ಸೈಕಲ್ ರಿಂಗಣ ಸ್ವಪ್ನಕಿಂಡಿಯಲ್ಲಿ ಮೂಡಿದ್ದ ಭಾವಲೋಕದಿಂದ ರುಕ್ಮಿಣಿಯನ್ನು ಹೊರಗೆ ಸೆಳೆಯಿತು. ಹೊರಹೋಗಿ ಬಾಗಿಲು ತೆರೆದಳು. “ಒಂಚೂರು ನೀರು ಕೊಡು ಮಗಾ…”ಅಂದ. ರುಕ್ಮಿಣಿ ನೀರು ತಂದು ಕೊಟ್ಟಳು. ನೀರು ಕುಡಿದು ಮುಗಿಸಿದ ಗೋಪಾಲಣ್ಣ ಮಾತು ಶುರುಮಾಡಿದ.

“ನಮ್ ಶಂಕರ ಇದ್ನಲಾ…”

“ಯಾವ್ ಶಂಕರ?”

“ಅದೇ… ಕೂದ್ಲೆಲ್ಲಾ ಉದ್ದುದ್ದ ಬಿಟ್’ಕಂಡ್ ಹೀರೋ ನಮೂನೆ ಮಾಡ್ತ್ನಲ, ನೋಡುಕ್ ಒಳ್ಳೆ ಮಳ್ಳ ಇದ್ದಹಾಂಗ್ ಇದ್ದ”

“ಓ ಅವನಾ? ಅವನಿಗೆಂತ ಆಯ್ತು?”

“ಅವಗೆಂತ ಆಗ್ಲಿಲ್ಲ, ಪೂರ್ತಿ ಕೇಳು. ಅವನ ದೊಡ್ಡಕ್ಕನ ಮಗಳ ಗಂಡನ ತಮ್ಮ ಒಬ್ಬ ಸಾಫ್ಟ್’ವೇರ್ ಇಂಜಿನಿಯರ್ ಅಂತೆ. ಒಳ್ಳೆ ಹುಡುಗ. ಈ ಶಂಕರನ್ ನಮುನೆ ಅಲ್ಲ ಅವ್ರೆಲ್ಲ. ನಿನ್ನ ನೆಂಟಸ್ತಿಕಿ ಮಾಡುಕ್ ಕೇಳ್ತಿದ್ರಂತೆ. ಹುಡ್ಗನ್ ಫೋಟೋ ಕಳ್ಸರೆ. ನೋಡು ಒಂದ್ಸಲ” ಎಂದ ಗೋಪಾಲಣ್ಣ.

ಈ ಮಾತು ಕೇಳಿ ಕೋಪಗೊಂಡ ರುಕ್ಮಿಣಿ “ನಂಗ್ ಮದ್ವಿ ಬೇಡ ಈಗ. ನಾ ಮದ್ವಿ ಆಗಿ ಹೋದ್ರೆ ನೀ ಎಂತ ಇಲ್ಲಿ ಒಬ್ಬನೇ ಇರ್ತ್ಯಾ?” ಎಂದು ಮರುತ್ತರ ನೀಡಿದಳು.

“ಹಾಗಂತ ನೀ ಮದ್ವಿ ಆಗದೇ ಇರ್ತ್ಯಾ? ನಾನೇನ್ ಕಾಡಲ್ಲಿ ಇರತ್ನಾ? ನಮ್ದೇ ಊರಲ್ವ ಇದು? ನಂಗೇನೂ ಆಗುದಿಲ್ಲ. ನಿಂಗೆ ಹುಡ್ಗ ಇಷ್ಟ ಇಲ್ಲಾದ್ರೆ ಹೇಳು. ನಾ ಒತ್ತಾಯ ಮಾಡುದಿಲ್ಲ. ಅದ್ ಬಿಟ್ಟು ನನ್ ವಿಷ್ಯ ತಕಂಡ್ ಕೂತ್ರೆ ಆಗುದಿಲ್ಲ” ಎಂದ ಗೋಪಾಲಣ್ಣ.

“ಅದೆಲ್ಲ ನಂಗೊತ್ತಿಲ್ಲ, ನೀ ಇರುವರೆಗೂ ನಾನು ಇಲ್ಲೇ ನಿನ್ ಜೊತೆಗೇ ಇರುವವಳು”

“ಹಾಂಗಾರೆ, ನೀ ಮದ್ವಿ ಆಗ್ಬೇಕು ಅಂದೇಳಿ ನಾ ಸಾಯುಕಾಯ್ತದ್ಯಾ?” ಎನ್ನುತ್ತಾ ಗೋಪಾಲಣ್ಣ ನಗತೊಡಗಿದ.

ಅಪ್ಪನ ಮಾತಿಗೆ ಸಿಟ್ಟು ಬಂದು ಅಪ್ಪನ ಭುಜಕ್ಕೆ ಗುದ್ದಿ ಮುಖ ತಿರುಗಿಸಿ ಕೋಣೆಗೆ ಓಡಿದಳು.

ಇತ್ತ ಗೋಪಾಲಣ್ಣ ಜಗಲಿಯಲ್ಲಿ ಗೋಡೆಗೆ ಒರಗಿ ಕುಳಿತ. ಮಗಳಿಗೇನೋ ತಾನು ಜೋಕ್ ಮಾಡುವಂತೆ ಆ ಮಾತು ಹೇಳಿದ. ಆದರೆ ವಾಸ್ತವತೆ ಅವನಲ್ಲಿ ಕೂಡ ಸಣ್ಣದೊಂದು ಆತಂಕದ ಅಲೆ ಎಬ್ಬಿಸಿದ್ದಂತೂ ಸುಳ್ಳಲ್ಲ. ರುಕ್ಮಿಣಿಯ ಮದುವೆ ಆದಮೇಲೆ ತಾನು ಅಕ್ಷರಶಃ ಒಂಟಿಯೇ ಅಲ್ಲವೇ? “ಮೀನಾಕ್ಷಿಯಾದರೂ ಇದ್ದಿದ್ದರೆ. ..?” ಎಂಬ ಪೂರ್ತಿಗೊಳಿಸದ ಒಂದು ಮಾತು ಸದ್ದಿಲ್ಲದೇ ಮೂಡಿ ಮರೆಯಾಗಿತ್ತು. ಸಿನಿಮಾಗಳಲ್ಲಿ ಅಗಲಿದ ಜೀವಗಳು ಕಣ್ಣ ಮುಂದೆ ಹಾಗೆ ಸುಮ್ಮನೆ ಒಮ್ಮೆ ಅತ್ತಿಂದಿತ್ತ ತೇಲಿಹೋದಂತೆ ತನ್ನ ಕಣ್ಣ ಮುಂದೆಯೂ ಮಡದಿ ಮೀನಾಕ್ಷಿ ಹಾದುಹೋದಂತ ಅನುಭವವಾಯಿತು ಗೋಪಾಲಣ್ಣನಿಗೆ. ಅವಳು ನಗುತ್ತಲೇ ಇದ್ದಳು. ನಿಜ ಅವಳು ನಗುತ್ತಲೇ ಬದುಕಿದವಳು ಕೂಡ. ಅವಳು ಅಲ್ಪತೃಪ್ತಳು. ಮಡದಿಯಾಗಿ ಅವಳ ಬೇಡಿಕೆಗಳು ತೀರಾ ಕಡಿಮೆ. ಎಂದೋ ಒಮ್ಮೆ ತನ್ನ ಹಳೆಯ ಗೆಳತಿಯೊಬ್ಬಳು ಮದುವೆಯಲ್ಲಿ ಉಟ್ಟಿದ್ದ ಸೀರೆ ನೋಡಿ, “ನನಗೂ ಅಂಥದೇ ಒಂದು ರೇಷ್ಮೆ ಸೀರೆ ತಂದುಕೊಡಿ. ಈಗ್ಲೇ ಅಲ್ಲ, ಅನುಕೂಲ ಆದಾಗ ತಂದ್ರೆ ಸಾಕು.” ಅಂದಿದ್ದಳು. ಅದನ್ನು ಬಿಟ್ಟು ಅವಳ ಇನ್ನೊಂದು ಬೇಡಿಕೆಯೆಂದರೆ “ಬಾವಿಗೊಂದು ಮೋಟರ್ ಹಾಕ್ಸಿ, ನೀರೆತ್ತುಕೆ ಆಗುದಿಲ್ಲ ಇತ್ತಿತ್ಲಾಗೆ. ಭಾಳ ಸುಸ್ತಾಯ್ತದೆ” ಎನ್ನುವುದಾಗಿತ್ತು. ಅದ್ಯಾವ ಮಾಯೆ ಅವಳ ಈ ಎರಡೂ ಬೇಡಿಕೆಗಳನ್ನು ಈಡೇರಿಸದಂತೆ ತಡೆದು ಹಿಡಿದಿತ್ತೋ ಏನೋ? ಹಣ ಹೊಂದಿಸುವುದು ಕಷ್ಟವೇನೋ ಇತ್ತು. ಆದರೆ ಅಸಾಧ್ಯವಾಗಿರಲಿಲ್ಲ. ಮನೆಯಲ್ಲಿ ಬೇಜಾರು ಬರ್ತದೆ ಅಂತ ಸೆಕೆಂಡ್ ಹ್ಯಾಂಡ್ ಟಿ.ವಿ. ತಂದಿದ್ದೆ. ಸ್ವಲ್ಪ ಸಾಲ ಕೂಡ ಮಾಡಿದ್ದೆ ಆಗ. ಹಾಗೇ ಇನ್ನೊಮ್ಮೆ ಸ್ವಲ್ಪ ಮನಸ್ಸು ಮಾಡಿದ್ದರೆ ಈ ಆಸೆಗಳೂ ಪೂರ್ತಿಯಾಗುತ್ತಿದ್ದವು. ಅದ್ಯಾಕೆ ತಾನು ಗಮನವೇ ಇಲ್ಲದವನಂತೆ ಬದುಕಿದೆ? ಎಂದು ತನ್ನನ್ನು ತಾನೇ ಕೇಳಿಕೊಂಡ. ಬಹುಶಃ ಅವಳು ಹಟ ಮಾಡುವುದಿಲ್ಲ ಎಂಬ ನಂಬಿಕೆ ಅವೆರಡನ್ನು ಈಡೇರಿಸದಿದ್ದರೂ ನಡೆಯುತ್ತದೆ ಎಂಬ ಉಡಾಫೆಯ ಮನಸ್ಥಿತಿಗೆ ತನ್ನನ್ನು ತಲುಪಿಸಿತ್ತು ಅನಿಸುತ್ತದೆ.

ಹೀಗೊಂದು ದಿನ ಅವಳು ಇನ್ನಿಲ್ಲದಂತೆ ಮರೆಯಾಗುತ್ತಾಳೆಂಬ ಕಲ್ಪನೆಯ ಸುಳಿವೂ ಇರಲಿಲ್ಲ ಈ ಹುಚ್ಚನಿಗೆ ಎಂದು ಯೋಚಿಸುತ್ತ ತನ್ನಷ್ಟಕ್ಕೆ ತಾನೇ ಒಂದು ವ್ಯಂಗ್ಯ ನಗು ನಕ್ಕ. ತನ್ನ ಉಡಾಫೆ ಮನಸ್ಥಿತಿಗೆ ಈ ಶಿಕ್ಷೆ ಆಗಬೇಕಾದ್ದೇ ಅಂದುಕೊಂಡ. ಅವಳ ಆ ಪುಟ್ಟ ಬೇಡಿಕೆಗಳನ್ನು ಈಡೇರಿಸಿದ್ದರೆ ಅವಳು ಬದುಕುಳಿಯುತ್ತಿದ್ದಳೋ ಇಲ್ಲವೋ ಅರಿಯೆ, ಆದರೆ ನನಗಾದರೂ ಒಂದಷ್ಟು ಆತ್ಮತೃಪ್ತಿ ಇರುತ್ತಿತ್ತು. ಈಗ ಯೋಚಿಸಿ ಏನು ಪ್ರಯೋಜನ ಎನ್ನುತ್ತಾ ಬೇಸಿಗೆಯಲ್ಲಿ ಬತ್ತಿದ ನದಿಯೊಂದು ಅತ್ತಂತೆ ಒಳಗೊಳಗೇ ಕೊರಗುತ್ತ ಅತ್ತ. ಅಲ್ಲೇ ಹಾಗೇ ನಿದ್ದೆಯ ಜೋಂಪು ಹತ್ತಿದಂತಾಗಿ ಕಣ್ಮುಚ್ಚಿದ. ಅದು ಗೋಪಾಲಣ್ಣನ ಕೊನೆಯ ನಿದ್ದೆಯ ಜೋಂಪು ಎಂಬ ಸುಳಿವು ಅವನನ್ನು ಆಧರಿಸಿ ನಿಂತ ಜಗಲಿಯ ಗೋಡೆಗೂ ಇರಲಿಲ್ಲ .

ಸ್ವಲ್ಪ ಹೊತ್ತಿನ ನಂತರ ಅವನನ್ನು ಎಬ್ಬಿಸಲು ರುಕ್ಮಿಣಿ ಬಂದಳು. “ಅಪ್ಪಾ …” ಎಂದು ಭುಜ ಅಲುಗಾಡಿಸುತ್ತಿದ್ದಂತೆ ಗೋಪಾಲಣ್ಣನ ಜೀವ ಮಗಳ ಎದೆಗೊರಗಿತ್ತು. ರುಕ್ಮಿಣಿ ಮೂಕಳಾಗಿದ್ದಳು. ಅವಳ ನೆನಪಿನ ಭಂಡಾರದ ಬೀಗ ಮೆಲ್ಲಗೆ ತೆರೆದುಕೊಂಡು ಅಪ್ಪನ ಅಮೂರ್ತ ರೂಪ ಹೊಸ ನೆನಪಿನ ಕಡತವಾಗಿ ಭಂಡಾರವನ್ನು ಸೇರಿತು. ಅಪ್ಪ ಕೊನೆಯ ಬಾರಿ ಎದೆಗೊರಗಿದ ಆ ಜಗಲಿ ಸಹ ಜೀವದ ಆತ್ಮೀಯ ಭಾಗವಾಗಿ ಹೋಯಿತು. ಆ ಶಂಕರನ ದೊಡ್ಡಕ್ಕನ ಮಗಳ ಗಂಡನ ತಮ್ಮ ಬಂದು ತನ್ನನ್ನು ಅಪ್ಪನಿಂದ ದೂರಮಾಡಿ ಎಳೆದುಕೊಂಡು ಹೋದಂತೆ ಭಾಸವಾಗತೊಡಗಿತ್ತವಳಿಗೆ. “ಹಾಂಗಾರೆ, ನೀ ಮದ್ವಿ ಆಗ್ಬೇಕು ಅಂದೇಳಿ ನಾ ಸಾಯುಕಾಯ್ತದ್ಯಾ?” ಎಂದ ಅಪ್ಪನ ಮಾತನ್ನು ಮನೆಯ ಗೋಡೆ, ಕಿಟಕಿ. ಬಾಗಿಲುಗಳೆಲ್ಲ ಮತ್ತೆ ಮತ್ತೆ ಹೇಳುತ್ತಾ ಗಹಗಹಿಸಿ ನಗುತ್ತಿದ್ದವು! ಅವಳ ಕೋಣೆಯ ಸ್ವಪ್ನಕಿಂಡಿ ಮಾತ್ರ ಅವಳನ್ನು ಸಂತೈಸಲೆಂದೇ ಕಾಯುತ್ತಿತ್ತು.

‍ಲೇಖಕರು avadhi

November 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಬಸವರಾಜ.ಬೂದಿಹಾಳ. ಗೋವಾ.

    ನಿರೀಕ್ಷೆಗಳನ್ನು ಗೊಂದಲುಗೊಳಿಸುವುದೇ ಬದುಕಿನ ತಾತ್ಪರ್ಯವಲ್ಲವೇ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: