ಹೋಗುವೆನು ನಾ.. ಹೋಗುವೆನು ನಾ..: ಜಾಲಮಂಗಲದ ಬಂಡೆ ಹತ್ತಿ…

ಹೋಗುವೆನು ನಾ.. ಹೋಗುವೆನು ನಾ..

ಎನ್ನುವ ಕವಿತೆಯ ಸಾಲುಗಳನ್ನೇ ಹಿಡಿದು ಇತ್ತೀಚೆಗೆ ಕವಯತ್ರಿ ಎಂ ಆರ್ ಕಮಲ ತಮ್ಮ ಊರಿಗೆ ಹೋಗಿಬಂದರು.

ತಾವು ಬೆಳೆದ ಮನೆ, ಆಟ ಆಡಿದ ಬೀದಿ, ಓದಿದ ಶಾಲೆ, ಸೈಕಲ್ ಕಲಿಸಿದ ಗುರು, ನೀರು ಸೇದಿದ ಭಾವಿ ಎಲ್ಲವನ್ನೂ ಮಾತಾಡಿಸಿಕೊಂಡೇ ಬಂದಿದ್ದರು.

ಅದು ಇಲ್ಲಿದೆ.

ಯಾವುದೇ ಸಾಹಿತಿಯ ಒಳಗಿರುವ ಈ ಊರ ವಾಸನೆ ಅವರ ಸೃಜನಶೀಲತೆಯ ಬಹುಮುಖ್ಯ ಆಸ್ತಿ

ಹಾಗಾಗಿ ನೀವು ನಿಮ್ಮ ಊರಿನ ನೆನಪುಗಳಿದ್ದರೆ ‘ಅವಧಿ’ಗೆ ಕಳಿಸಿಕೊಡಿ.. ಎಂದು ಕೇಳಿದ್ದೆವು.

ಈಗ ಎಸ್ ಪಿ ವಿಜಯಲಕ್ಷ್ಮಿ ತಮ್ಮ ಊರಿನ ನೆನಪುಗಳನ್ನು ಕಟ್ಟಿಕೊಟ್ಟಿದ್ದಾರೆ.

ಅದು ಇಲ್ಲಿದೆ 

ಇದಕ್ಕೆ ಕರಾವಳಿಯ ನೆನಪುಗಳನ್ನು ಸೇರಿಸಿದವರು ಮುಂಬೈನ ಸಾಹಿತಿ, ಅನುವಾದಕಿ ಶ್ಯಾಮಲಾ ಮಾಧವ

ಅದು ಇಲ್ಲಿದೆ 

ಈ ಅನುಭವವನ್ನು ಓದಿದ ಹರಿಹರದ ಲಲಿತಮ್ಮ ಚಂದ್ರಶೇಖರ್ ಅವರು ತಮ್ಮ ಜಾಲಮಂಗಲದ ನೆನಪುಗಳನ್ನು ಹೊತ್ತು ತಂದಿದ್ದಾರೆ.

ನೀವೂ ನಿಮ್ಮ ಅನುಭವಗಳನ್ನು ಕಳಿಸಿಕೊಡಿ 

[email protected]

ಜಾಲಮಂಗಲದ ಪ್ರಕೃತಿಯ ಮಡಿಲಲ್ಲಿ
ಲಲಿತಮ್ಮ ಡಾ. ಚಂದ್ರಶೇಖರ್

ನನಗೆ ಅತ್ಯಂತ ಆಪ್ತರೂ ಗೌರವಾನ್ವಿತರೂ ಆದ ಹರಿಹರದ ಲಲಿತಮ್ಮ ಡಾ.ಚಂದ್ರಶೇಖರ್, ಒಂಬತ್ತರಿಂದ ಹದಿನೆಂಟು ವಯಸ್ಸಿನವರೆಗಿನ ತನ್ನ ಬಾಲ್ಯ, ಯೌವ್ವನವನ್ನು ಕಳೆದ ತಮ್ಮೂರಾದ ಜಾಲಮಂಗಲವೆಂಬ ಗ್ರಾಮದ ಚಿತ್ರಣವನ್ನು ಅಷ್ಟೊಂದು ಸೊಗಸಾಗಿ ತಮ್ಮ ಪತ್ರದಲ್ಲಿ ಬರೆದು ನನಗಿತ್ತಿದ್ದಾರೆ. ಅದಿಲ್ಲಿ ನಮ್ಮ ಓದುಗರಿಗಾಗಿ –

ಲಲಿತಮ್ಮ ಹರಿಹರದಲ್ಲಿ ಬಡವರ ಬಂಧು ಎಂದೇ ಹೆಸರಾಗಿದ್ದ ಡಾ. ಚಂದ್ರಶೇಖರ್ ಅವರ ಪತ್ನಿ. ಸಾಹಿತ್ಯ ಸರಸ್ವತಿಯ ಆರಾಧಕಿ! ತಮ್ಮ ಜಿಲ್ಲೆಯಲ್ಲಿ ಮಹಿಳಾ ಸಮಾಜ, ಲಯನೆಸ್ ಸಂಸ್ಥಾಪಕಿ. ಸ್ಕೌಟ್ಸ್, ಗೈಡ್ಸ್ ಕಮಿಶನರ್ ಆಗಿದ್ದವರು. ಇನ್ನೂ ಓದುವುದು ಬಹಳ ಇದೆ; ಅದಕ್ಕಾಗಿ ನೂರು ವರ್ಷಗಳವರೆಗಾದರೂ ಬದುಕಿರಬೇಕು ಎನ್ನುವವರು. ರಾಜ್ಯೋತ್ಸವ ಪ್ರಶಸ್ತಿಯಿಂದ ಸಮ್ಮಾನಿತರಾದವರು. ಬಾಳಿನಲ್ಲಿ ಶಿಸ್ತು, ಸಂಸ್ಕಾರ, ಮಾನವೀಯತೆಯ ಸಾಕಾರ!
ಅಂದ ಹಾಗೆ ಲಲಿತಮ್ಮ ಡಾ. ಚಂದ್ರಶೇಖರ್ ಎಂಬತ್ತೆಂಟರ ಪ್ರಾಯದ ಚೈತನ್ಯದ ಬುಗ್ಗೆ!

-ಶ್ಯಾಮಲಾ ಮಾಧವ 

ಜಾಲಮಂಗಲ ಎಂದು ನನ್ನೂರಿನ ಹೆಸರು. ಅಲ್ಲಿ ಅತ್ಯಂತ ಎತ್ತರದ ಕಪ್ಪಗೆ ಮಿರಿಮಿರಿ ಮಿಂಚುವ ಲಕ್ಷ್ಮೀನಾರಾಯಣಸ್ವಾಮಿ ಬೆಟ್ಟ. ಬೆಟ್ಟದ ಮೇಲೆ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ. ಬೆಟ್ಟದ ಬುಡದಲ್ಲಿ ಕೆರೆ. ಕೆರೆಯಲ್ಲಿ ಕೆಂದಾವರೆ ಹೂಗಳು ಅರಳಿ
ನಲಿಯುತ್ತಿದ್ದುವು. ನೀರಹಕ್ಕಿಗಳು ಕೆರೆಯಲ್ಲಿ ಈಜುತ್ತಿದ್ದುವು. ಅತಿಸುಂದರವಾದ ಪ್ರಕೃತಿಯ ದೃಶ್ಯ ರಮಣೀಯ.

ಕೆರೆಯ ಏರಿಯ ಮೇಲೆ ಹಸುರು ಎಲೆಗಳಿಂದ ಕಂಗೊಳಿಸುವ ಹೊಂಗೆಮರ. ಗಾಳಿ ಬೀಸಿದಾಗ ಹೊಂಗೆ ಎಲೆಗಳು ಬಿಸಿಲಿಗೆ ಬಂಗಾರಬಣ್ಣದಿಂದ ಓಲಾಡುತ್ತಿದ್ದುವು. ಕೆರೆಯ ಏರಿಯ ಪಕ್ಕಕ್ಕೆ ಭತ್ತದ ಗದ್ದೆಗಳು. ಅಲ್ಲಿ ನನ್ನ ತಾತನವರ ಗದ್ದೆ ಇತ್ತು. ಭತ್ತದ ಬಂಗಾರದ ಬಣ್ಣದ ತೆನೆಗಳು ಓಲಾಡುತ್ತಿದ್ದುವು. ಹಕ್ಕಿಗಳು ರೆಕ್ಕೆ ಕೆದರಿ ಹಾರುತ್ತಾ ಭತ್ತದ ತೆನೆಯಿಂದ ಭತ್ತವನ್ನು ಹೆಕ್ಕಿ ತಿನ್ನಲು ಹಾರಾಡುತ್ತಿದ್ದುವು. ಬಣ್ಣದ ಹಕ್ಕಿಗಳು ಕೆರೆಯ ಪಕ್ಕದಲ್ಲಿ ನಮ್ಮ ಮಾವಿನ ತೋಟ, ತೆಂಗಿನ ತೋಟದಲ್ಲಿ ಹಾರಾಡುತ್ತಿದ್ದುವು. ಮಾವಿನ ಮರದಲ್ಲಿ ಹಸಿರು
ದೀಪಗಳಂತೆ ಮಾವಿನಕಾಯಿಗಳು ಜೋತಾಡುತ್ತಿದ್ದುವು. ಹಲಸಿನ ಮರದ ತುಂಬಾ ಹಲಸಿನ ಕಾಯಿಗಳು ಕಟ್ಟಿರುತ್ತಿದ್ದುವು.

ಊರ ಪಕ್ಕಕ್ಕೆ ನಮ್ಮ ಮೂರು ತೋಟಗಳು. ಹೂವಿಗಾಗಿ ಒಂದು ತೋಟ. ಅಲ್ಲಿ ಗುಲಾಬಿ, ಮಲ್ಲಿಗೆ, ಸಂಪಿಗೆ, ಜಾಜಿ, ಇರುವಂತಿಗೆ, ಡೇಲಿಯಾ, ಮರುಗ, ದವನ, ಪಚ್ಚೆ ತೆನೆ, ವೆನಿಲ್ಲಾದ ಎಲೆ, ನೀಮ್, ಬಿಲ್ವಪತ್ರೆ – ಎಲ್ಲ ಗಿಡಗಳನ್ನು ಬೆಳೆಸಲೆಂದೇ ಸಾಕ್ಷ್ಟು ಕೆಲಸದವರನ್ನು ತಮ್ಮ ತಂದೆ ನೇಮಿಸಿದ್ದರು. ತೋಟದಲ್ಲಿ ಕಪಿಲೆ ಬಾವಿ ಇತ್ತು. ಕಪಿಲೆ ಬಾವಿಯಿಂದ ಬಾನಿಯಲ್ಲಿ ನೀರೆತ್ತಿ ಗಿಡಗಳಿಗೆ ಹಾಯಿಸುವುದು ನನಗೆ ಅತ್ಯಂತ ಪ್ರಿಯವಾಗಿತ್ತು.

ಇನ್ನೊಂದು ತೋಟದಲ್ಲಿ ರೇಷ್ಮೆಹುಳುಗಳಿಗಾಗಿ ಹಿಪ್ಪುನೇರಳೆ ಬೆಳೆಸಿದ್ದರು. ಆ ತೋಟದ ಪಕ್ಕಕ್ಕೆ ಒಂದು ಕಲ್ಯಾಣಿ. ಅದರ ಸುತ್ತ ಮರಗಳು. ಬಿಲ್ವಪತ್ರೆಮರದ ತೋಟ. ಆ ತೋಟದಲ್ಲಿ ಮೂರು ಬಿಲ್ವಪತ್ರೆ ಮರಗಳು ಇದ್ದವು. ಬೆಂಡೆ, ಬದನೆ, ಹಸಿ ಮೆಣಸಿನ ಕಾಯಿ, ಬೇಲಿಯ ಮೇಲೆ ಸೌತೆ, ಪಡುವಲ, ಹೀರೆ, ಸೌತೆ, ಕುಂಬಳ ಬಳ್ಳಿಗಳು ಹಬ್ಬಿದ್ದವು. ಬಳ್ಳಿಗಳಲ್ಲಿ ಅರಳಿದ ಹಳದಿ, ಬಿಳಿ ಹೂಗಳು ನನಗೆ ನಕ್ಷತ್ರಗಳಂತೆ ಕಾಣುತ್ತಿದ್ದುವು. ಗಿಡ ಬಳ್ಳಿಗಳು, ಅದರಲ್ಲಿ ಕಾಯಿ, ಹೂಗಳು ಅದೆಷ್ಟು ಸುಂದರ!

ಆ ತೋಟದ ಪಕ್ಕಕ್ಕೆ ಮಾದೇಗೌಡನಕಟ್ಟೆ ಎಂಬ ಪುಟ್ಟ ಕೆರೆ. ಅಲ್ಲೊಂದು ಅರಳೀ ಮರ. ಗಾಳಿಗೆ ಅಶ್ವತ್ಥ ಮರದ ಎಲೆಗಳು ಓಲಾಡುತ್ತಾ ಮಿರ ಮಿರ ಮಾಡುವ ಶಬ್ದ ಕಿವಿಗಳಿಗೆ ಸಂಗೀತದಂತೆ ಕೇಳಿಸುತ್ತಿತ್ತು. ಮಾದೇಗೌಡನ ಕಟ್ಟೆಯ ಸುತ್ತ ಹಸಿರು ಗಿಡ, ಮರ, ಬಳ್ಳಿಗಳು. ಅವುಗಳಲ್ಲಿ ಅರಳಿದ ಕಾಡುಹೂಗಳು ಮಾದೇಗೌಡನ ಕಟ್ಟೆಯ ನೀರಿನ ಮೇಲೆ ಗಾಳಿಯಲ್ಲಿ ತೇಲಿ ಹೋಗುತ್ತಿದ್ದಾಗ ಅವು ನನಗೆ ಹೂವಿನ ದೋಣಿಯಂತೆ ಕಾಣಿಸುತ್ತಿದ್ದುವು. ೧೯೮೧ರಲ್ಲಿ ನಾನು ನನ್ನ ಡಾ. ಚಂದ್ರಶೇಖರ್ ಅವರ ಜೊತೆ ಕಾಶ್ಮೀರಕ್ಕೆ ಹೋಗಿದ್ದೆ. ಆಗ್ಗೆ
ಹೂವಿನಿಂದ ಅಲಂಕರಿಸಿದ ದೋಣಿಯಲ್ಲಿ ಕುಳಿತಾಗ ನನಗೆ ನನ್ನ ಬಾಲ್ಯಕಾಲದ ಮಾದೇಗೌಡನ ಕಟ್ಟೆಯಲ್ಲಿ ನೀರ ಮೇಲೆ ತೇಲುತ್ತಿದ್ದ ಹೂಗಳ ನೆನಪು ಬಂತು. ಮಾದೇಗೌಡನ ಕಟ್ಟೆಯ ಏರಿಯ ಮೇಲೆ ಎತ್ತರದ ಎರಡು ನೇರಿಳೆ ಮರಗಳು ಇದ್ದವು. ಆ ಮರಗಳಲ್ಲಿ ಕಪ್ಪಗೆ ನೇರಿಳೆ ಹಣ್ಣುಗಳು ಹಸಿರು ಎಲೆಗಳ ನಡುವೆ ಗೊಂಚಲು ಗೊಂಚಲಾಗಿ ಓಲಾಡುವುದನ್ನು ಕಂಡಾಗ ನನಗೆ ಶಿವಲಿಂಗಗಳು ಓಲಾಡಿದಂತೆ ಅನಿಸುತ್ತಿತ್ತು. ಒಂದುಕಡೆ ದೊಡ್ಡ ಹುತ್ತ ಇದ್ದು, ಅಲ್ಲಿ ಕಪ್ಪು ಬಣ್ಣದ ಕಾಳಿಂಗಸರ್ಪ ಇತ್ತು. ಒಂದೊಂದು ಸಲ ಕಾಳಿಂಗಸರ್ಪ ಹೆಡೆ ಎತ್ತಿ
ಓಲಾಡುತ್ತಿದ್ದುದನ್ನು ಕಂಡಿದ್ದೆ.

ಅಲ್ಲಿಂದ ಮುಂದೆ ವಟದ ಕಟ್ಟೆಯ ಸುತ್ತ ಮರಗಿಡ ಬಳ್ಳಿಗಳು, ಆ ಮರಗಳಲ್ಲಿ ಹಕ್ಕಿಗಳು ಗೂಡುಕಟ್ಟಿದ್ದುವು. ಗೂಡಿನಲ್ಲಿ ಬಣ್ಣ ಬಣ್ಣದ ಹಕ್ಕಿಗಳು ಇದ್ದುವು. ಆ ಹಕ್ಕಿಗಳು ಹಾಡುತ್ತಿದ್ದವು. ನನಗೆ ಹಕ್ಕಿಯ ಗೂಡನ್ನು ಮುಟ್ಟಬೇಕೆಂಬ ಆಸೆ. ಆದರೆ ನೀರಿನಲ್ಲಿ ಹೇಗೆ ಹೋಗಲಿ?!
ಅಲ್ಲಿಂದ ಮುಂದಕ್ಕೆ ನಮ್ಮ ಹೊಲ. ಅಲ್ಲಿ ಎತ್ತರದ ಎರಡು ಬೇವಿನ ಮರಗಳು, ಒಂದು ಮಾವಿನ ಮರ ಇತ್ತು. ನಮ್ಮ ಹೊಲದ ಹಿಂದೆ ಒಂದು ಪುಟ್ಟ ಗುಡ್ಡ ಇತ್ತು. ಅಲ್ಲಿ ನವಿಲುಗಳು ಗರಿಬಿಚ್ಚಿ ಕುಣಿಯುತ್ತಿದ್ದುವು. ನಮ್ಮ ಹೊಲದಲ್ಲಿ ರಾಗಿ, ಅವರೆ, ತೊಗರಿ, ಹರಳು, ಹುಚ್ಚೆಳ್ಳು ಬೆಳೆಯುತ್ತಿದ್ದರು. ಹೊಲದ ಹಿಂದೆ ಒಂದು ದೊಡ್ಡ ಎತ್ತರದ ಕಲ್ಲುಬಂಡೆ. ಆ ಬಂಡೆಯ ನಡುವೆ ಒಂದು ನೀರಿನ ಕೊಳ ಇತ್ತು. ಅಲ್ಲಿ ಬಟ್ಟೆ ಒಗೆದರೆ ಬೆಳ್ಳಗಾಗುತ್ತಾರೆ, ಎಂದನ್ನುತ್ತಿದ್ದರು. ಆ ಕಲ್ಲಿಗೆ ಹಂದಿಕಲ್ಲು ಎನ್ನುತ್ತಿದ್ದರು. ಅಲ್ಲಿ ಮುಳ್ಳುಹಂದಿಗಳು ಇದ್ದುವು.

ನಮ್ಮ ಹೊಲದಿಂದ ಸ್ವಲ್ಪ ದೂರದಲ್ಲಿ ದೊಡ್ಡ ಅರೆ ಎಂಬ ಬಂಡೆ. ಅದರ ಪಕ್ಕದಲ್ಲಿ ಒಂದು ಎತ್ತರದ ಬೂರುಗದ ಮರ. ಅದರಲ್ಲಿ ದೊಡ್ಡ ದೊಡ್ಡ ಹಸಿರು ಎಲೆಗಳ ನಡುವೆ ದೊಡ್ಡದಾಗಿ ಕೆಂಪಗೆ ಅರಳಿದ ಹೂಗಳು ನೆಲದ ಮೇಲೆ ಉದುರಿ ಹೂವಿನ ಹಾಸಿಗೆಯಂತೆ ಇದ್ದುವು. ಸುತ್ತಲೂ ಹೊಲಗಳು. ಎಷ್ಟು ದೂರಕ್ಕೆ ಕಣ್ಣು ಹಾಯಿಸಿದರೂ ಹಸಿರೇ ಹಸಿರು. ದೂರದಲ್ಲಿ ಕಾಣುವ ಸೋಮೇಶ್ವರ ದೇವಾಲಯ. ಅದರಾಚೆಗೆ ಕಣಿವೆ.

ದೊಡ್ಡ ಅರೆಯ ಮೇಲೆ ಗುಲಗಂಜಿ ಗಿಡಗಳು ಇದ್ದವು. ನಾನು ಗುಲಗುಂಜಿ ಕಾಯಿಗಳನ್ನಾರಿಸಿ ತರುತ್ತಿದ್ದೆ. ಕೆಂಪುಬಣ್ಣದ ಗುಲಗುಂಜಿ ಕಾಯಿಗಳನ್ನು ಕಂಡಾಗ ಸಂತೋಷವಾಗುತ್ತಿತ್ತು.
ವ್ಯವಸಾಯ ನೋಡಿಕೊಳ್ಳಲು ನಮ್ಮ ಮನೆಯಲ್ಲಿ ನಾಲ್ಕುಜನ ಆಳುಗಳು ಇದ್ದರು. ನನಗೆ ವ್ಯವಸಾಯದ ಎಲ್ಲಾ ವಿಷಯಗಳು ಗೊತ್ತಿತ್ತು. ಹೊಲಗಳಿಗೆ ಹೋಗಿ ಕೆಲಸವನ್ನೂ ಮಾಡುತ್ತಿದ್ದೆ.


.

‍ಲೇಖಕರು avadhi

March 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಲಲಿತಮ್ಮ ಡಾ ಚಂದ್ರಶೇಖರ್ ತಮ್ಮ ಪ್ರತಿಸ್ಪಂದನದಲ್ಲಿ ತೆರೆದಿಟ್ಟ ತನ್ನೂರ ಚಿತ್ರಣವನ್ನು ಪ್ರಕಟಿಸಿದ ಅವಧಿಗೆ ಕೃತಜ್ನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: