ಸುಗತ ಬರೆದ ‘ಪ್ರೀತಿ’ ಪದ್ಯಗಳು

ಕನ್ನಡ ಪುಸ್ತಕ ಪ್ರಾಧಿಕಾರದ ಮನ್ನಣೆಗೆ ಒಳಗಾದ ರಾಮಕೃಷ್ಣ ಸುಗತರ ಮೊದಲ ಕವನ ಸಂಕಲನ

‘ಉರಿಯ ಪೇಟೆಯಲಿ ಪತಂಗ ಮಾರಾಟ’ ಕುರಿತು

ಶರಣಬಸವ ಕೆ ಗುಡದಿನ್ನಿ
ರಾಮಕೃಷ್ಣ ಸುಗತ ಅಂತಹದೊಂದು ಹೆಸರನ್ನು ನಾ ಮುಂಚೆ ಕೇಳಿರಲಿಲ್ಲ. ಇವತ್ತಿಗೂ ಅಂತಹದೊಂದು ಹೆಸರಿನ ಹುಡುಗನ್ನ ನಾನು ನೋಡಿಯೇ ಇಲ್ಲ!
ಒಂದು ದಿನ ವಿನಾಕಾರಣ ಕೈಗೆ ಸಿಕ್ಕ “ಉರಿಯ ಪೇಟೆಯಲಿ ಪತಂಗ ಮಾರಾಟ” ವೆಂಬ ಉದ್ದ ಹೆಸರಿನ ಪುಸ್ತಕ ನೋಡಿ ಅಚ್ಚರಿಗೊಂಡೆ. ಅದು ನಾ ಮೆಚ್ಚುವ ಕುಮಾರವ್ಯಾಸನ ಸಾಲುಗಳಲ್ಲೊಂದು! ಆಡಂಬರವಿಲ್ಲದ ಮುಖಪುಟದ ಒಳ ಹೊಕ್ಕರೆ ಕಾಣಿಸುವ ಅರ್ಪಣೆ ಆಪ್ತವೆನಿಸಿ ಓದುವ ಮನಸು ಮಾಡಿ ಕೊಂಡು ಕಂಕುಳಲ್ಲಿಟ್ಟುಕೊಂಡು ಬಂದವನು ಇವತ್ಯಾಕೊ ನೆನಪಾಗಿ ಪುಟ ತಿರುವಿ ಹಾಕಿದೆ.

“ಇಲ್ಲಿಯ ಯಾವ ಸಾಲುಗಳಲ್ಲೂ
ಪ್ರೀತಿಯ ಹೊರತಾಗಿ ಬೇರಾವುದು ಇಲ್ಲವಾಗಿ
ಪ್ರೀತಿಸುವುದನ್ನು ಕಲಿಸಿದ
ನನ್ನಪ್ಪ ಅಮ್ಮನಿಗೆ
ಮತ್ತು ಅಗಲಿದ ಅವ್ವನಿಗೆ...

ಎಷ್ಟು ಚಂದನೆಯ ಅರ್ಪಣೆ ಅದು!
ಅಪ್ಪ,ಅಮ್ಮನ ಜೊತೆಗೊಂದು ಜೀವ ಅದು ‘ಅವ್ವ’
ನಮ್ ಕಡೆ ತಾಯಿಯ ತಾಯಿಯನ್ನ ಅಥವಾ ತಂದೆಯ ತಾಯಿಯನ್ನ ಅವ್ವ, ಆಯಿ ಎಂಬುದಾಗಿಯೂ ಕರೆಯುತ್ತಾರೆ. ಬಿಸಿಲೂರಿನ ಹಲವು ಹುಡುಗರ ಬಾಲ್ಯ ಅರಳುವುದೇ ಈ ಮುದುಕಿಯ ಮಡಚಿದ ತೊಗಲಿನ ತೊಡೆಯ ಮೇಲೆ. ಅತ್ತರೆ ಆ ಇಳಿಬಿದ್ದ ಬೊಚ್ಚು ಮೊಲೆಯನ್ನೆ ನಮ್ಮ ಬಾಯಿಗಿಟ್ಟು ಸುಮ್ಮನಾಗಿಸುವದು ನಮಗೆ ವಿಶೇಷವೇ ಅಲ್ಲ.

ಮೊದಲ ಪುಸ್ತಕವೆಂಬ ಕಾರಣಕ್ಕೆ ಸುಗತ ಆರಂಭದಲ್ಲೇ ಆತಂಕಪಡುವದನ್ನ ನೋಡಿದಾಗ ಥೇಟ್ ಮೊದಲ ಹೆರಿಗೆಯ ಭಯದಲ್ಲಿರುವ ಅತ್ತೆ ಮನೆಯ ಸೊಸೆಯಂತೆಯೇ ಕಾಣಿಸಿಬಿಡುತ್ತಾನೆ. ಅದು ಸಹಜ ಆತಂಕವಾದರೂ ಕ್ಷಣ, ಕ್ಷಣವೂ ಆ ಕೂಸು ಕೈಲಿಡಿದ ಗಂಡನ ಮನೆಯವರು (ವಿಮರ್ಶಕರು ಅನಕೊಬೌದು) ಏನೆನ್ನುವರೋ ಅದರ ಮೂಗು, ಕಿರಿದಾದ ಗದ್ದ, ತುಟಿಯ ತಿರುವಿನಲಿ ಅಪರೂಪಕ್ಕೆ ಮೂಡಿಸುವ ನಗುವಿಗೆ ಏನೂ ಕೊಂಕು ತೆಗೆದಾರೂ ಎಂದು ಕೂಸು ಪರರ ಕೈಲಿದ್ದ ಪ್ರತೀ ಕ್ಷಣವೂ ಕಾತರಿಸುವಂತೆ ಪುಸ್ತಕ ಮಾಡಿದಾಗಿನಿಂದ ‘ಒಲೆಯ’ ಮೇಲೆ ಕುಂತಂತೆ ಒದ್ದಾಡಿರಬಹುದು.ಇಲ್ಲವೇ ಅಂತದೇನು ಇಲ್ಲ ಬಿಡೋ ಮಾರಾಯ ಅಂತ ನನ್ನ ಸ್ವಾಟೆಗೆ ತಿವಿದೂ ನಗಲೂಬಹುದು!

ಹಾಸ್ಟಲ್ ನ ಅಂಗಳದಲ್ಲಿ ಬರೆದುಕೊಂಡ ಕವಿತೆಗಳಿಂದ ಹಿಡಿದ ಸಂಕಲನಕ್ಕೊಂದು ಹೆಸರು ಸಿಕ್ಕ ಕ್ಷಣದವರೆಗಿನ ಭಾವನೆಗಳನ್ನ ಆರಂಭದಲ್ಲೇ ಆಪ್ತವಾಗಿ ಚಂದ ಹಂಚಿಕೊಂಡಿದಾನೆ.

ಮೊದಲ ಕವಿತೆ  ‘ಇಲ್ಲಿ ಯಾವುದಕ್ಕೂ ಕಾಲ ಮೀರುವುದಿಲ್ಲ’ ದಲ್ಲಿ..

‘ಹುಲಿಯ ಬೆನ್ನತ್ತಿದ ಬಂದೂಕುಗಳೆಲ್ಲವಕ್ಕೂ
ರಕ್ತ ಅಂಟಬೇಕಿಲ್ಲ..

ಇದ್ದಿಲಿಗೆ ಚಿಗುರುವ ಹಕ್ಕಿಲ್ಲವೆಂದಲ್ಲ..

ಹಳೆಯ ಗೆಲುವಿಗೆ ಮುಪ್ಪು ಸಮೀಪಿಸಿದಾಗ
ದಾಳಿಗೊಳಗಾದ ಸೇನೆಯನ್ನ ಮತ್ತೆ ಸಿದ್ಧಗೊಳಿಸಬೇಕಿಲ್ಲ..

ಇಂಗುವಿಕೆ ಸಾವಾದರೆ
ಅಂತರ್ಜಲ ಕೊಳೆತ ಹೆಣ..

ಎಂದು ಅದ್ಭುತವಾಗಿ ಬೇರೆಯದೇ ದಾಟಿಯಲಿ ಬೆಚ್ಚಿಬೀಳುವಂತೆ ಬರೆಯುತ್ತಾನೆ. ಇದ್ದಿಲಿಗೆ ಚಿಗುರುವ ಹಕ್ಕಿಲ್ಲವೆಂಬುದು ನನ್ನೆದೆಗೆ ತಾಕಿದ,ಕಾಡಿದ ಸಾಲು. ಯಾಕೆಂದರೆ ‘ನಮ್ಮಲ್ಲೆ’ ನಾವು ಅದೆಷ್ಟು ಸುಟ್ಟುಕೊಂಡು ಇದ್ದಿಲುಗಳಾಗಿದ್ದೇವೆ! ಅಬ್ಬಾ ನೆನೆಸಿಕೊಂಡರೆ ಭಯವಾಗುತ್ತದೆ.

“ದೇವರು ನಿನಗೆ ಬದುಕಲಿಕ್ಕೆ ಏನನ್ನು ಕೊಡುವದಿಲ್ಲ
ಕಮಲದಂತೆ ಕಪ್ಪುಕೆಸರಿನಿಂದ
ಬೇಕಾದ ಬಣ್ಣವನ್ನು ನೀನೇ ಹೀರಬೇಕು”

ಎನ್ನುತ್ತಾನೆ ಮತ್ತೊಂದು ಕಡೆ
(ಕವಿತೆ:ದೇವರು ಹುಚ್ಚನಲ್ಲ)

ಅದ್ಯಾಕೆ ಸುಗತ ದೇವರ ಅಸ್ತಿತ್ವವನ್ನೇ ನಂಬುವುದಿಲ್ಲ ಎಂಬುದು ಅರ್ಥವಾಗುವದಿಲ್ಲ! ದೇವರನ್ನೇ ನಂಬದಾತ ‘ದೇವರು ಹುಚ್ಚನಲ್ಲ’ ಎಂದೇಕೆ ಉದ್ಘಾರ ತೆಗೆಯುತ್ತಾನೆ.  ‘ಅಡಾಲಸೆಂಟ್ ಏಜಿನ’ ಗೊಂದಲವೇ ಇರಬೇಕು ಮುಖಪುಟದ ಕೆನ್ನೆಗೆ ಬರೆದುಕೊಂಡಂತೆ

‘ಪ್ರೇಮ ಇಲ್ಲವೇ ದೇವರು
ಒಂದು ಆರಿಸಬಹುದಿತ್ತು ನಾನು
ಸುಗತನ ಬಗ್ಗೆ ಹೇಳುವುದೇನಿದೆ
ಅವನು ದೇವರ ಅಸ್ತಿತ್ವ ಒಪ್ಪುವುದಿಲ್ಲ” ಎನ್ನುತ್ತಾನೆ!

“ನಾನು ಯಾರಿಂದ ಪ್ರೀತಿಯನ್ನ ನಿರೀಕ್ಷಿಸುತ್ತಿದ್ದೇನೋ
ಆಕೆಗೆ ಪ್ರೀತಿಯೆಂದರೆ ಏನೆಂದು ತಿಳಿದಿಲ್ಲ”
-ಗಾಲಿಬ್ 

ಇದೊಂದೆ ಸಾಲನ್ನಿಡಿದು ಅದೆಷ್ಟು ಸಿನೀಮಾಗಳು ಬಂದಿಲ್ಲ ಅದೆಷ್ಟು ಹುಡುಗರು ಹುಡುಗಿಯರಿಗೆ “ನನ್ ಪ್ರೀತಿ ನಿಂಗೆ ಈ ಜನ್ಮಕ್ ಅರ್ಥಾಗಲ್ಲ ತಗೋ” ಅಂತ ನಿಟ್ಟುಸಿರಾಗಿ ನಡೆದುಹೋಗಿಲ್ಲ! ಈ ಗಾಲಿಬ್ ನೇ ಹಾಗೇ ನಮ್ಮಂತಹ ಪ್ರೀತಿಯ ನಶೆಗೆ ಬಿದ್ದ ಹುಡುಗರಿಂದ ಹಿಡಿದು ಪ್ರೀತಿಯೆಂಬ ಗರಗಸಕೆ ಮನಸು, ಹೃದಯ ಕೊಟ್ಟು ಅಬ್ಬೇಪಾರಿಯಾದ ಆಧುನಿಕ ದೇವದಾಸನವರೆಗೂ, ಪ್ರತೀ ಹುಡುಗಿ ಸಿಕ್ಕಾಗಲೂ ‘ನೀನೇ ಬದುಕು’ ಎಂದು ಭ್ರಮೆ ಹುಟ್ಟಿಸುವ ಫ್ಲರ್ಟ್ ಗಳವರೆಗೆ ಎಲ್ಲರ ಪ್ರೀತಿಯ ಹಣೆಬರಹವನ್ನ ಉದುರಿ ಹೋದ ಕಣ್ಣೀರು ಮತ್ತೊಂದನ್ನ ಎರಡೇ ಎರಡು ಸಾಲುಗಳಲಿ ಬರೆದು ಬಿಸಾಕುವ ಖಾಯಂ ಲವ್ ಗುರುವಾತ ಗಾಲಿಬ್! ಆತನ ಪ್ರೇರಣೆಗೊಳಪಟ್ಟ ಸುಗತ

“ನಿನ್ನ ವಿಧವೆ ಕೂದಲು
ಬಾಡಿದ ಹೂಗಳಿಗೆ ನನ್ನಿಂದ ನೀರು ಹಾಕಿಸುತ್ತವೆ” ಎಂದು ಆರ್ದ್ರವಾಗಿ ಬರೆಯುತ್ತಾನೆ.

ನಮ್ಮಿಡೀ ಬಾಲ್ಯವನ್ನ ಒಂದು ಕ್ಷಣ ಕಣ್ ಮುಂದೆ ತಂದುಕೊಂಡರೆ ಕಾಣುವ ಕಪ್ಪುಬಿಳುಪಿನ ಚಿತ್ರಗಳ ಬ್ಯಾಕ್ ಗ್ರೌಂಡ್ ಸೀನರೀ ಅಂತ ಕಾಣೋದು ಬರೀ ಜಾಲಿಯೇ! ಬಿಸಿಲೆಂಬುದು ನಮಗೆ ಬೆಳದಿಂಗಳಾದರೆ ಈ ಜಾಲಿಯೆಂಬುದು ಅಕ್ಷರಷಃ ಹೊಂಗೆಯೇ! ಇದು ಅತಿಶಯೋಕ್ತಿಯಲ್ಲ ನಿಜವೆಂದರೆ ಇವುಗಳಷ್ಟು ನಮ್ಮ ಬದುಕನ್ನ ಮತ್ಯಾವು  ಆವರಿಸಿಕೊಂಡಿಲ್ಲ. ಒಲೆಯ ಕಟ್ಟಿಗೆಯಿಂದಿಡಿದು ಸಜ್ಜಿ-ಜ್ವಾಳ ಕಾಯಲು ಮಾಡಿಕೊಂಡ ‘ಮೆಟ್ಟು’ ಮದ್ಯಾಹ್ನ ಬುತ್ತಿ ಬಿಚ್ಚಿ ಉಣ್ಣಲು ಕುಳಿತ ನೆರಳು, ಮಕ್ಕಳಾಟಕ್ಕೆ ಆಟಿಕೆಗಳಾದ ಕಾಯಿ, ಎಲೆ ಮತ್ತು ಜೀರಿಗೆಯಂತಹ ಹೂಗಳು ಎಲ್ಲವೂ ಜಾಲಿಮಯವೇ!

“ನನ್ನ ನೆರಳಲ್ಲಿ ಮುಳ್ಳುಗಳಿಲ್ಲ
ಚದುರಿದ ನನ್ನ ಕಪ್ಪು ಕೊಂಬೆಗಳು
ದೇವರು ಭೂಮಿಗೆ ಹೊದಿಸಿದ ಚಾದರಗಳು” 
(ಕವಿತೆ:ನಾನೊಂದು ಜಾಲಿಯ ಹೂ)
ಅಂತ ಬರೆದು ಜಾಲಿಯ ಮರಕ್ಕೊಂದು ಶಾಶ್ವತ ಮರಿಯಾದೆ ಕಲ್ಪಿಸಿಬಿಟ್ಟದ್ದಾನೆ ಮಾರಾಯ.

“ಅಮ್ಮನ ಹಾಲಿಗೆ
ಈಗೇನಿದ್ದರೂ ಪೌಂಡಗಳ ಲೆಕ್ಕ
ಡಾಲರ್ ಆದರೂ ನಡೆದೀತು
ಮೋಸಕ್ಕೆ ತೂಕ ಸರಿಯಿರಬೇಕಷ್ಟೇ

ಹುಟ್ಟಿದ ದಾಖಲಾತಿಗೆ
ಸಾಯುವವರೆಗೂ ಸಹಿ
ಆಗಾಗೊಂದೆರಡು ದಿನ
ಕುರಾನ್ ಗೆ ಬೈಬಲ್ ನ ಹೆಸರು
ನಿಮಗಿಷ್ಟವಿದ್ದರೆ ಭಗವದ್ಗೀತೆ
ನೆನಪಿರಲಿ ಮಾರಾಟಕ್ಕಲ್ಲ ಆಗಲೇ ಮಾರಿಯಾಗಿದೆ..
(ಕವಿತೆ: ಹರಾಜಾಗದೆ ಉಳಿದದ್ದು)

ತುಂಬಾ ಕಠೋರವಾಗಿ ವಾಸ್ತವವನ್ನು ಕಟ್ಟಿಕೊಡುತ್ತಾರೆ ಧರ್ಮದ ಮುಸುಕಿನಲಿ ಗೀತೆ, ಬೈಬಲ್ ಗಳನ್ನ ಕೈಲಿಡಿದು ಮುಗ್ದ ಮನಸುಗಳಿಗೆ ಮೋಡಿ ಮಾಡಿ ಮಜಾ ನೋಡುತ್ತಿರುವ ಹೊಲಸು ವ್ಯವಸ್ಥೆಗೆ ಮುಖಾಮುಖಿಯಾಗಿದ್ದಾರೆ. ಕವಿತೆಯ ಮುಖ್ಯ ದ್ಯೇಯವೇ ಇದು. ವರ್ತಮಾನಕ್ಕೆ ಮುಖಾಮುಖಿಯಾಗದ, ನೊಂದ ಜೀವಿಗಳಿಗೆ ನೆರವಿಗೆ ಬಾರದ,ಶೋಷಿತರ ತುಳಿತಕ್ಕೊಳಗಾಗದವರಿಗೆ ದ್ವನಿಯಾಗದ ಕವಿತೆ ಎಷ್ಟಿದ್ದರೇನು? ಬರೆದ ಕವಿತೆ ಬದುಕನ್ನ ಕಾಲಡಿಗೆ ಹಾಕಿ ತುಳಿದ ದೂರ್ತನ ಎದೆಯಲ್ಲಿ ನಡುಕ ಹುಟ್ಟಿಸಬೇಕು ‘ಅದನ್ನ’ ಸುಗತ ಅಲ್ಲಲ್ಲಿ ಮಾಡುತ್ತಾರೆ.

“ಹಣೆಬರಹದಿಂದ ನೋವನ್ನು ಅಳಿಸಿಕೊಂಡಾಗಲೂ
ನಿನ್ನನ್ನು ಪ್ರೀತಿಸಲೇಬೇಕಾದ ಅನಿವಾರ್ಯ ಆಯ್ಕೆಯೊಂದು
ಹಾಗೆಯೇ ಉಳಿದುಬಿಡುತ್ತದೆ”
( ಕವಿತೆ:ಆ ರಾತ್ರಿ ಮತ್ತೆ ಬಂದಿದೆ)

ಹೌದು ಪ್ರೀತಿಸುವ ಪ್ರತೀ ಜೀವಕ್ಕೂ ಅಂತಹದೊಂದು ಅನಿವಾರ್ಯ ಆಯ್ಕೆಯೊಂದಿರುತ್ತದೆ! ಅವಳು ಹಾಗೆ ಬದುಕಿನ ವ್ಯಾಕರಣಕೆ ಬಲಿಯಾಗಿ ತನ್ನದೇ ಬದುಕಿನ ‘ಸೇಫ್ಟೀ’ ಅಪ್ಪನ ಮುಖ,ಮುಲಾಜು ಮತ್ತೊಂದರ ನೆಪವೊಡ್ಡಿ ಹೊರಟು ಬಿಡುವ ಹುಡುಗಿಯ ಕೈಯ ಕಿರುಬೆರಳು ಹಿಡಿದು “ಬಿಟ್ಟೊಗ್ಬ್ಯಾಡ್ವೇ.. ಅಂತ ಗಂಡಸೂ ಅನ್ನೋದನ್ನೂ ಮರೆತು ಕಣ್ಣೀರು ಕಪಾಳಕ್ಕೆ ಇಳಿಯುತ್ತಿದ್ದಾಗ್ಯೂ ಸಾವರಿಸಿಕೊಂಡು ಗೋಗರೆಯುವ ಹುಡುಗನಿಗೆ ಇಂತಹದೊಂದು ‘ಅನಿವಾರ್ಯ ಆಯ್ಕೆ’ ಹಾಗೆ ಉಳಿದುಬಿಡುತ್ತದೆ. ಈ ತರಹದ ಸಾಲುಗಳು ಆಗತಾನೆ ಪ್ರೀತಿಗೆ ಬಿದ್ದ ಎಳೆ ಮನಸುಗಳಿಗೆ ಮುದ ನೀಡಿ ಕೆಲವೊಮ್ಮೆ ಮತ್ತೇನನ್ನೋ ನೆನಪಿಸಿ ಕಣ್ಣೀರಾಗಿಸೋ ತಾಕತ್ತನ್ನಂತೂ ಹೊಂದಿವೆ.

“ನನ್ನ ನೋವಿಗೆ ಅಫೀಮು ತಿನ್ನಿಸುವ ಏಕಾಂತವೇ
ನಾನು ಕತ್ತಲಿಗಾಗಿ ಕಾಯುವದು ಯಾಕೆಂದು ಒಮ್ಮೆಯೂ ಕೇಳೆಯೇಕೆ” ಎಂದು ಪ್ರಶ್ನಿಸುವ ಕವಿ
“ಬೆಳಕಿಗೆ ನೋವು ಅಳುಕುವಾಗ
ಕಳ್ಳಗರ್ಭವೂ ನೋವನ್ನೇ ಹೆರುವಾಗ
ಹೃದಯವಿಲ್ಲದ ಪುನರ್ಜನ್ಮದ ಕನಸಿಗೆ
ರಾತ್ರಿಗಳಲ್ಲದೆ ಇನ್ಯಾವ ಸಂಗ ನನಗೆ ಸಿಕ್ಕೀತು” ಅಂತ ತಾವೇ ಉತ್ತರವಾಗುತ್ತಾರೆ.
(ಕವಿತೆ:ನಾನೀಗ ಬದಲಾಗಿದ್ದೇನೆ)

“ನೀನು ಹಸಿದಿರುವೆನೆಂದು ದೇವರಿಗೆ ಹೇಳು
ಹಸಿಕಾಣದ ಪಲವತ್ತು ನೆಲವು ಬಂಜರಲ್ಲವೆಂದು ಹೇಳು
ಉತ್ತಿನ ಕೃಪೆಯಿಲ್ಲದ ಬೀಜವು ಯಾವ ಬೆಲೆಗೆ ಹರಾಜಾದೀತು
ಚಿಗುರುವ ಇಚ್ಛೆಯೊಂದೆ ಫಲಕ್ಕೆ ನೆಲೆಯಲ್ಲವೆಂದು ಹೇಳು
ಒಟ್ಟಿನಲ್ಲಿ ನೀನು ಹಸಿದಿರುವೆಯೆಂದು ದೇವರಿಗೆ ಹೇಳು”
(ಕವಿತೆ: ಹಸಿವು ಸಾಯುವದಿಲ್ಲ)

ಹಸಿವೆಂಬುದು ಈ ಜಗತ್ತಿನ ಪ್ರತೀ ಅಕ್ಷರದ ತಾಯಿ, ಅದು ನುಡಿಸದೇ ಯಾವ ತಂತಿಯೂ ಚೂರು ಮಿಡಿಯದು.ಆ ಹಸಿವು ಯಾವ ಕಾಲಕ್ಕೂ ಸಾಯುವದಿಲ್ಲ. ಆ ಹಸಿವೆಯ ಕಾರಣಕ್ಕೆ ಬೆನ್ನಗಂಟಿದ ಹೊಟ್ಟೆ ಅದೇಕೆ ಆ ದಯಾಮಯನಾದ ದೇವರಿಗೆ ಕಾಣಿಸುವದಿಲ್ಲವೋ ನಾ ಕಾಣೆ.!ಉತ್ತಿನ ಕೃಪೆಯಿಲ್ಲದ ಬೀಜವು ಯಾವ ಬೆಲೆಗೆ ಹರಾಜಾದೀತು? ಎಂಬುದೊಂದು ಪ್ರಶ್ನೆಯೇ ಸಾಕು ಸುಗತನು ಹಸಿದೊಡಲ ಕವಿತೆಯ ಆಳ ಅರಿಯಲು.

ಸುಮಾರು ನಲವತ್ತು ಮೂರು ಕವಿತೆಗಳ ಪುಟ್ಟ ಸಂಕಲನವಿದು ಕೈಲಿಡಿದರೆ ಕಕ್ಕುಲಾತಿ ಹುಟ್ಟಿಸುವಂತಹ ಸಾಲುಗಳಿವೆ. ಇತ್ತೀಚಿಗೆ ಬಿಸಿಲ ನಾಡ ಹುಡುಗರು ಹೀಗೆ ಎದೆಯ ಭಾವಗಳಿಗೆ ಚಂದನೆಯ ಅಕ್ಷರಗಳ ರೂಪ ಕೊಟ್ಟು  ಪುಸ್ತಕವಾಗಿಸುತ್ತಿರುವದು ಖುಷಿಯ ವಿಚಾರವೇ. ನನಗೆ ತಿಳಿದಂತೆ ಇನ್ನೂ ಓದುವ ಕಾಲೇಜೊಂದರ ಪಡಸಾಲೆಯಲ್ಲಿರುವ ರಾಮಕೃಷ್ಣ ಸುಗತರಿಗೆ ಇನ್ನೂ ಹೆಚ್ಚೆಚ್ಚು ಓದುವ ಆ ಮೂಲಕ ಬರಹಕೆ ಹೆಪ್ಪಾಗುವ ವಿಫುಲ ಅವಕಾಶಗಳಿವೆ. ಆತ ಮುಂದೆಯೂ ಓದಿ ಇನ್ನಷ್ಟು ಚೆಂದಗೆ ಬರೆಯಲಿ. ಕುಮಾರವ್ಯಾಸನಿಂದ ಮೊದಲ ಪುಸ್ತಕದ ಮುಖಕ್ಕೆ ಶೀರ್ಷಿಕೆ ತೆಗೆದುಕೊಂಡ ಹುಡುಗ ಆತನಂತೆಯೇ ಸಾಹಿತ್ಯ ಲೋಕವ ಬೆಳಗಲಿ. ಈಗೀಗ ಯಾವದೂ ಭ್ರಮೆಯಲ್ಲ. ಬದುಕಿಡೀ ಅದೇ ‘ಧ್ಯಾನಸ್ಥ’ ಭಾವದಲಿ ಆತ ಬದುಕಬೇಕಷ್ಟೇ..

‍ಲೇಖಕರು avadhi

March 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: