ಏನಾಗುತ್ತದೆ ಕೆಲವೊಮ್ಮೆ ನಮಗೆ.?

ಜಗದ ತಂದೆತಾಯಿಗಳು ನಾವು
-ನಂದಿನಿ ವಿಶ್ವನಾಥ ಹೆದ್ದುರ್ಗ

ನಾನು ಮಾತ್ರವಲ್ಲ..ಇವನಿಗೂ ಉಪವಾಸ ಹಾಕಿದ್ದೆ ನಿನ್ನೆ ರಾತ್ರಿ..
ಇಡೀ ರಾತ್ರಿ ನನ್ನ ಕೋಣೆ ಕಿಟಿಕಿಯ ಬಳಿ ನಿಂತು,ಕುಂತು ಕುಯ್ಯಂಗುಟ್ಟ..ಯಾಕೋ ಎಲ್ಲವನ್ನೂ ಎಲ್ಲರನ್ನೂ ಪನಿಷ್ ಮಾಡಬೇಕು ಅನಿಸ್ತು..
ನೀನು ನಿರ್ಲಕ್ಷಿಸಿದ ದಿವಸ ನಿನ್ನೆ.
ಎಂದೂ ಆಡದ ಅಸೂಯೆಯ ಮಾತಾಡಿಬಿಟ್ಟೆ.
ಹೇಗೆ ಸಹಿಸಬಹುದು ಹೇಳು ನೀನೇ.?
ನನ್ನ ಪ್ರೀತಿಯನ್ನಷ್ಟೇ ನಂಬಿ ನನ್ನ ಕಾಲಿಗೆ ಅವನ ನಾಲಿಗೆಯ ಅಭಿಷೇಕ ಮಾಡಿ, ನನ್ನೊಂದು ತಲೆಸವರುವಿಕೆಗಾಗಿ ಹಿಂದಿನ ಬಾಗಿಲು ಮುಂದಿನ ಬಾಗಿಲು ಸುತ್ತುವ ಅಕ್ಕರೆಯ ಜೀವ ಇವನು..
ನಾನಿವನನ್ನೂ ಮಾತಾಡಿಸಲಿಲ್ಲ…
ಮಾತು ಬಾರದ ಮೂಕ ಹೃದಯ.. ಹಸಿದರೆ ಕೂಗಿ ಕರೆಯುವುದಿಲ್ಲ ಎಂಬ ಸಣ್ಣ ಅರಿವೂ ಇಲ್ಲದೆ ಅವನ ಉಪವಾಸ ಮಲಗಿಸಿದೆ..

ಎಷ್ಟು ಕ್ರೂರಿ‌ ನೋಡು ನಾನು..
…..
ಕಳೆದ ಹಗಲಿನ ನಮ್ಮ ನಡುವಿನ ಅಹಂಕಾರ, ಅನುಮಾನಕ್ಕೆ ರಾತ್ರಿ ಬಲಿಯಾಯಿತು..
ಹೊಯ್ದಾಟ, ಒದ್ದಾಟ, ಸಂಕಟ…!
ಮೊರೆವ ಮನಸ್ಸಿಂದ ನಿದ್ದೆ ದೂರದೂರ…
ನೀನು ಬಂದಾಗಿನಿಂದ ಎಂದೂ ನೆನೆಯದ ದೈವವನ್ನು ಬೇಡಿಕೊಳ್ಳುವ ಅನಿಸ್ತಿದೆ.. ಮಂಡಿಯೂರುತ್ತೇನೆ.
ಒಮ್ಮೆ ಒಲಿದುಬಿಡಲಿ.. ಮತ್ತೆಂದೂ ನೋಯಿಸಲಾರೆ ಎನ್ನುವ ಸಂಕಲ್ಪಕ್ಕೆ ಮುಡಿ ಕಟ್ಟಿಟ್ಟೆ.

ಇಡೀ ರಾತ್ರಿ ಯಾವುದೋ ಕಂಗಾಲಿನಲಿ ಕಣ್ಣು ಹಚ್ಚಲಾಗದವಳಿಗೆ ಬೆಳಿಗ್ಗೆ ಬಂದ ಹತ್ತು ನಿಮಿಷದ ನಿದ್ದೆ ತಟ್ಟನೆ ಬಿಟ್ಟುಕೊಟ್ಟಿತು.
ಎಚ್ಚರಾದ ಕೂಡಲೇ‌ “ನಾನು” ಎಚ್ಚರಾಗಬೇಕು ತಾನೇ.?
ಆದರೆ..
ನನ್ನೊಳಗಿಂದ ನನಗೂ ಮೊದಲೇ ಎದ್ದೇಳುವವ ನೀನು.
ಮೊದಲಿಗೆ ನನ್ನ ತುಟಿಯ ಬೇಡುತ್ತಿ..
ತಿರುಗಿ ಮಲಗುವ ನನ್ನ ಬದಿಯಿಂದ ತಬ್ಬುತ್ತಿ..
ಏಳು ಚಿನ್ನಾ ಎನ್ನುತ್ತಾ ಏಳದಂತೆ ಬೆನ್ನ ಹರವಿಗೆ ತುಟ್ಟಿಯೊತ್ತುತ್ತಿ..
ಆಹಾ…
ಅರೆನಿದ್ದೆಯ ಈ ಕನಸು ಎಷ್ಟು ಮಧುರ..!!

ತಲೆ ಕೊಡವಿ ವಾಸ್ತವಕ್ಕೆ ಬಂದು
ಸಣ್ಣ ನಡುಕದೊಂದಿಗೇ ಏಳುವೆ.
ಮರೆತ ಕರಾಗ್ರೇವಸತೇಯನ್ನು ನೆನಪಿಸಿಕೊಂಡು ಹೇಳಿಕೊಳ್ಳುವಾಗ ಕಾಡುವ ಅಪರಾಧಿ ಭಾವ.
ಹಾಸಿಗೆಯಿಂದ ಇಳಿಯುವ ಮೊದಲು ಹೇಳುತ್ತಿದ್ದ ಸಮುದ್ರವಸನೇ ಶ್ಲೋಕದ ಆರನೇ ಪದ ನೆನಪಾಗ್ತಿಲ್ಲ..

ಗೋಡೆಗೆ ತಾಗಿ ದೀರ್ಘ ಉಸಿರಾಡುವುದು ಮಾತ್ರ ಬಿಟ್ಟಿಲ್ಲ..
ಇಡೀ ಶರೀರ ಸ್ಟ್ರೆಚ್ ಮಾಡಿ ಹತ್ತು ಸೆಕೆಂಡ್ ನೇರ ನಿಲ್ಲುವುದೂ ಮರೆತಿಲ್ಲ..
ನಿನಗಾಗಿ ಚಲುವೆಯಾಗೇ ಉಳಿಯಬೇಕು ಅನಿಸ್ತದೆ…

ನಿನ್ನೆ ರಾತ್ರಿ ನಮ್ಮ ಅಹಮ್ಮಿನ ಸಂಭಾಷಣೆಯ ನೆನಪಿಗೆ ಕಂದಿಹೋಗಿದೆ ಮೊಗ.
ಕನ್ನಡಿ ನೋಡಿಕೊಂಡೆ..
ಅಲ್ಲಿ ‌ನಾನು ಕಾಣುವುದು ಮರೆತು ಬಹಳ ‌ಕಾಲವಾಗಿದೆ.
ನಿನ್ನ ಬಟ್ಟಲುಗಣ್ಣು, ಪುಟ್ಟ ಬಾಯಿ, ದಟ್ಟ ಹುಬ್ಬು..
ಇವೇ…
ಏನಾಗುತ್ತದೆ ಕೆಲವೊಮ್ಮೆ ನಮಗೆ.?

ಕಾಫಿ ಕುಡಿಯುವಾಗ ನಡುಗುವ ಎದೆಯೊಂದಿಗೆ ಮೊಬೈಲ್ ಓಪನ್ ಮಾಡ್ದೆ…
‘ಚಿನ್ನಾ..ನೋಯಿಸಿದ್ದೀನಿ ನಿನ್ನ ‘
ಎನ್ನುವ ಮೆಸೇಜ್ ನಡುರಾತ್ರಿಯಲ್ಲಿ ಬಂದಿರುತ್ತೆ ಅನ್ನುವ ನಿರೀಕ್ಷೆ..
ಇರಲಿಲ್ಲ…!!
ಬದಲಿಗೆ ನೀನು ಮತ್ತೇನೋ ಹೇಳಿದ್ದೆ..
“ಈ ಅವೇಳೆಯಲ್ಲಿ ಮನದೊಳಗೆ ಇಣುಕಿದರೆ ಮೌನ…ಮೌನ…ಮೌನ..”
“ಇದೆಲ್ಲವೂ ನಿರರ್ಥಕ ಎನಿಸುತ್ತದೆ…ಸಾಲಿಟೇರ್”
ಹೇಗೆ ಅರ್ಥೈಸಿಕೊಳ್ಳಲಿ ಗೆಳೆಯ ನಾನಿದೆಲ್ಲವನ್ನೂ…?
ಏನು ಹೇಳುತ್ತಿದ್ದೀಯಾ ಈ ‌ಮೂಲಕ ನೀನು?
ಹೋಗಲಿ..
ನಾನು ಯಾವ ಕಾರಣಕ್ಕಾಗಿ ನಿನಗೆ ಒಲಿದೆ…?
ಈ ಪ್ರಶ್ನೆಯನ್ನು ‌ಮತ್ತೆ ಮತ್ತೆ ನನ್ನನ್ನೇ ಕೇಳಿಕೊಳ್ತಿದ್ದೇನೆ ಇತ್ತೀಚಿಗೆ..

ನೀನು ಚಲುವ…ಸಂದೇಹವೇ ಇಲ್ಲ…
ಆದರೆ ನಾನು ಬಯಸುವಂಥ ಚಲುವನಲ್ಲ..
ನೀನು ಸಮಾಜದಲ್ಲಿ ಹೆಸರು ಮಾಡಿದವ..
ಆದರೆ ನನಗೆ ಅದರಿಂದೇನೂ ಆಗಬೇಕಿಲ್ಲ..
ನೀನು ಸಿರಿವಂತನೇ ಇರಬಹುದು..
ನನಗೂ ಅದಕ್ಕೂ ಸಂಬಂಧವೂ ಇಲ್ಲ..
ಮತ್ತೇಕೆ ಒಲಿದೆ ನಿನ್ನ ನಾನು…
ನಮ್ಮಿಬ್ಬರ ವಿಷಯ ಗೊತ್ತಿರುವ ಅವಳೂ ಅದೇ ಪ್ರಶ್ನೆ ಕೇಳಿದ್ದಳು ತಿಂಗಳ ಹಿಂದೆ..
‘ಅವನಲ್ಲಿ ಏನು ನೋಡಿದೆ ಗೆಳತಿ?’
ವೆರಿ ಆರ್ಡಿನರಿ…
ಓ ಗಾಡ್..
ನನ್ನ ‌ಮೈ ಉರಿದುಹೋಯಿತು…

ಏನು ಹೇಳಲಿ..?

ಹಗಲು ರಾತ್ರಿ ನಿನ್ನ ನೆನಪಲ್ಲಿ ಯಾವ ಕಾರಣಕ್ಕಾಗಿ ತೋಯುತ್ತಿದ್ದೇನೆ ಎನ್ನುವುದು ನನಗೂ ಗೊತ್ತಿಲ್ಲ..
ಚಿಗುರು, ಮೊಗ್ಗು, ಹೂವು, ಹಣ್ಣೂ ಹೊತ್ತು ಬಯಲಲ್ಲಿ ನಿಂತ ಮರವೊಂದಕ್ಕೆ ಮುಗಿಲು ಒಲಿದಂತೆ ನಾನು ಒಲಿದದ್ದು‌ ನಿನಗೆ.
ಸುರಿದ ‌ಮಳೆಯೆಲ್ಲವೂ ಮರದ ಚರಾಚರವನ್ನೂ ತೊಳೆದು ಬೆಳಗುವುದಷ್ಟೆ ಅಲ್ಲ…
ಮರ ಪ್ರೇಮದಿಂದ ತನ್ನ ರೆಂಬೆಕೊಂಬೆಗಳ ಮೇಲೆ  ಮತ್ತವಾಗಿ, ಉನ್ಮತ್ತವಾಗಿ ಇಳಿದು ಮುತ್ತಿಕ್ಕುತ್ತಿರುವ ಮುಗಿಲನ್ನು ತನ್ನೊಳಗೆ ಇಳಿಸಿಕೊಳ್ಳುತ್ತದೆ…
ಮರದೊಳಗೆ ಮುಗಿಲೂ,ಮುಗಿಲೇ ಮರವೂ ಆಗುವಂಥ ಅಮೃತ ಘಳಿಗೆ.!

ಲೋಕ ಮಳುಗುವಂಥ ಮೋಹ,
ಎದೆ ಬಿರಿಯುವಂಥ ಅಕ್ಕರೆ..!!

ಮುಂದಿನ ಸರ್ತಿ‌ ನೀ ಊರಿಗೆ ಬಂದಾಗ ಈ ಬಯಲ ಬೈರಾಗಿಯನ್ನು ಮಳೆ ಹುಯ್ಯುವಾಗ ಒಮ್ಮೆ ನೋಡು..
ನಿನಗೇ ತಿಳಿಯುತ್ತದೆ.

ನಾನು ‌ಮರ ನೀನು ಮುಗಿಲು…!
ನಾನು ಕರೆಯುವೆ..
ನೀನು ಸುರಿಯುವೆ..
ಕರೆದಾಗಲೆಲ್ಲಾ ಬಾರದೆ ಸೊರಗಿಸುತ್ತಿಯಾ ಅಂತಲೇ ನಿನ್ನ ಹರಿಯಗೊಡದೆ ಹೀರಿಕೊಳುವೆ…

ಇದನ್ನೆಲ್ಲಾ ಅವಳಿಗೆ ಹೇಗೆ ಹೇಳಲಿ…
ಮೊದಲೇ ಪ್ರ್ಯಾಕ್ಟಿಕಲ್ ಹೆಣ್ಣು…
ನನ್ನ ಹುಚ್ಚು ಒಲುಮೆಯ ಕತೆ ಕೇಳಿ ನಕ್ಕುಬಿಟ್ಟರೆ..
ಅವಳಿಗೆ ಹೇಳುವುದ ಬಿಡು..
ನನಗಾದರೂ ತಿಳಿದಿದೆಯೇ..
ನಾನು ನಿನ್ನ ಒಲಿದದ್ದು ಏಕೆ.?
ಊಹೂ…
ಎತ್ತರದ, ಕಪ್ಪಗಿನ ‌ಗಂಡು ನನ್ನ ಕಲ್ಪನೆಯ ಚಲುವ..

ನಾವಿಬ್ಬರು ಮುತ್ತಿಕ್ಕಲನುವಾಗುವಂತೆ ತುಟಿಗಳು ಸರಳರೇಖೆಗೆ ಒದಗುತ್ತವೆ..ಇನ್ನೆಲ್ಲಿಯ ಎತ್ತರ.!
ನಾನು ತುಸು ಗಟ್ಟಿ ಮುತ್ತಿಟ್ಟರೆ‌ ನಿನ್ನ ಮೈಯಲ್ಲೊಂದು ಮಚ್ಚೆ ಎಚ್ಚರಾಗುತ್ತದೆ…
ನನ್ನ ಹಾಲು ಬಿಳುಪಿನ ಗಂಡೇ…
ನಿನ್ನಲ್ಲಿ ಇಲ್ಲದ ಕಪ್ಪು ಬಣ್ಣವನ್ನು ಎಲ್ಲಿ ಹುಡುಕಲಿ..?
ಹೋಗಲಿ..
ಒಲಿದೆವು…
ಕಾರ್ಯಕಾರಣಗಳನ್ನು ಹುಡುಕುವ ಅವಶ್ಯಕತೆಯಾಗಲಿ, ಅನಿವಾರ್ಯತೆ ಯಾಗಲಿ ಇಲ್ಲ ನಮಗೆ..!!
ಆದರೂ‌…
ಹಂಬಲಿಸಿ ಭೇಟಿಯಾದಗಲೆಲ್ಲಾ ಕೂಡಲಿಲ್ಲ .
ನಾವಿಬ್ಬರು ಒಬ್ಬರೊಬ್ಬರ ಸನಿಹವನ್ನು ಆಸ್ವಾದಿಸುವವರು…
ನಿನ್ನ ಎಡತೋಳು, ಅಂಗೈ..
ಸಿಕ್ಕರೆ ತುಟಿ ಹಣೆ…
ಇಷ್ಟು ಸಾಕು ನನಗೆ..
ಇನ್ನೂ ಕೂಡದೆ ನಾವು ಕಳೆದುಕೊಳ್ಳಲಾರೆವು ಎಂದು ತೀವ್ರವಾಗಿ ಅನಿಸಿದಾಗ ಮಾತ್ರ  ಸೇರುತ್ತೇವೆ..
ಲೋಕದ ಕಣ್ಣಿಗೆ ಬಣ್ಣದ ಕೌದಿ ಹೊಚ್ಚುವುದು ಎಷ್ಟು ಕಷ್ಟ ಗೆಳೆಯ..
ಸದಾ ಗೌಜೆಬ್ಬಿಸುವ ಜಗಕೆ ಅಕ್ಕರೆಯ ಜೋಗುಳ ಹಾಡಿ.. ತೂಗಿ…ತೂಗಿ…ತೂಗಿ…
ಮಲಗಿತು ಎಂದ ಮೇಲೆ ನಿನ್ನ ತುಟಿಯನ್ನು ನಾನೂ
ನನ್ನ ನಡುವನ್ನು ನೀನು  ಬೇಡಿಕೊಳ್ಳುತ್ತೇವೆ..

ಜಗದ ತಂದೆ ತಾಯಿಗಳು ನಾವು…
ಒಬ್ಬೊರನ್ನಬ್ಬರು ಒಳಗೊಳ್ಳಬೇಕೆಂದರೆ ಸುಮ್ಮಾನವಲ್ಲ..
ನಿನಗೆ ಗೊತ್ತಾ…?
ಬೆರಳೆಣಿಕೆಯಷ್ಟು ಬಾರಿ‌ ಕೂಡಿದಾಗಲೂ ನಿನ್ನಿಂದ ಸಂಪೂರ್ಣ ತೃಪ್ತಿ ಪಡೆಯಲಿಲ್ಲ ನಾನು..
ನಿನ್ನ ಎದೆಯೊಳಗೆ ಮುಖ ಮರೆಸಿ ನಾನು ಅದನ್ನು ಪಿಸುಗುಟ್ಟುತ್ತೇನೆ…
ಬಹುತೇಕ ಗಂಡಸರು ಹೀಗಂದಾಗ ನೋಯಬಹುದೆನೋ..?
ನೀನು ಹಾಗಲ್ಲ.
ಎಲ್ಲ ಅರಿತಿದ್ದೀಯಾ.
ನನ್ನ ಹಣೆಯ ಮುಂಗುರುಳು ಸರಿಸುತ್ತಾ
ನೀನಿನ್ನೂ ಚಿಕ್ಕವಳು ಚಿನ್ನಾ ಎನ್ನುತ್ತಿ…
ನಿಜ…!
ನಿನ್ನ ಹೊಂದಿದ ಮೇಲೂ ನಾನು ತೃಪ್ತಗೊಳುವುದಿಲ್ಲ…
ಆದರೆ…
ನನ್ನ ಇಡೀ ದೇಹ ಬೆಳಕನ್ನು ಒಳಗೊಂಡಿರುತ್ತದೆ…
ಆನಂದ ನನ್ನೊಳಗನ್ನು ಪ್ರವೇಶಿಸಿರುತ್ತದೆ..
ನಿನ್ನ ಅಂಶ ನನ್ನೊಳಗೆ ಇರುವುದಕ್ಕೋ ಏನೋ..
ನಾನು ಫಳಫಳ ಹೊಳೆಯುತ್ತೇನೆ..
ನನ್ನ ಹೆಣ್ತನ ಸಾರ್ಥಕವೆನಿಸುತ್ತದೆ..ನಿನ್ನ ಗಂಡಾಗಿಸಿದ್ದೇ ನಾನು ಎನಿಸುತ್ತದೆ..
ನಾವಿಬ್ಬರು  ಬಿಚ್ಚಿಟ್ಟ  ಮಾರ್ಯಾದೆಯನ್ನು ಮತ್ತೆ ಉಟ್ಟು ನಿಲುವುಗನ್ನಡಿಯ ಮುಂದೆ ನಿಲ್ಲುತ್ತೇವೆ.
ಎಂದಿನಂತೆ..
ನಾನೇ ಮುಂದೆ…
ನೀನು ನನ್ನ ಬಳಸಿ..
ಅಬ್ಬಾ..!
ನಾನೆಂಥ ಚಲುವೆ..!
ನನ್ನ ಕಣ್ಣುಕೆನ್ನೆ ಗಲ್ಲ ಕತ್ತಿನ ತಿರುವು ಎದೆಯ ಉಬ್ಬು, ನಡುವಿನ ವಾರೆ, ಕುಳಿಸುಳಿಗಳೆಲ್ಲವೂ ಬೆಳಗುತ್ತಿವೆ…
ನೋಡಲಾರದೆ ನಾಚಿ ..
ಬಳಸಿ‌ ನಿಂತಿದ್ದ ನಿನ್ನ ಕಡೆ ಮುಖ ತಿರುಗಿಸಿ ನಿನ್ನ ಎದೆಯ ಹೊಗುತ್ತೇನೆ…
ನನ್ನ ಅಪ್ರತಿಮ ಪ್ರೇಮಿಯೇ..
ಕಡು ಮೋಹಿಯೇ…
ಯಾಕಷ್ಡು ಮುದ್ದಾಗಿ
ಬೆಳಕು ಹೀರಲೇ ಎಂದೆ ನೀನು.
ಸೋನೆಯಾಗಿದ್ದ ಮುಗಿಲು ಮತ್ತೆ ಕೂಡಿ ಭೋರ್ಗರೆಯುತ್ತದೆ..
ನಿನ್ನೊಡನಿರುವಾಗ ನನ್ನ ಪಾಲಿಗೆ ಜಗತ್ತು ಮಲಗಿರುತ್ತದೆ.
ಬಳಲಿಕೆಯಿಲ್ಲ
ಭಯವಿಲ್ಲ,
ಎಷ್ಟು ಲಯ ಲಾಲಿತ್ಯ ನನಗೆ..
ಎಲ್ಲಿಂದ ಕಲಿತೆ ಇದನ್ನೆಲ್ಲಾ ನಾನು.?
ನಿನ್ನ ಮಣಿಸುವುದಕೆ ಏನೆಲ್ಲ ಕಸರತ್ತು ನನ್ನದು..
ನನ್ನ ಹಾಗೆ ಮುಳುಗುವವನಲ್ಲ ನನ್ನ ನಲ್ಲ..
ಎಚ್ಚರಿಸುತ್ತಿ..
ಹೊತ್ತಾಯಿತು ಹುಡುಗಿ..
ಹೌದು.. ಧರ್ಮಕ್ಕೆ ಪತ್ನಿಯಲ್ಲ ನಾನು.
ಲೋಕ ಹಾಗೆಲ್ಲ ಪ್ರೇಮವನ್ನು ಸುಖಾಸುಮ್ಮನೆ ಒಪ್ಪುವುದಿಲ್ಲ..
ತಟ್ಟಿ, ಮುತ್ತಿಟ್ಟು, ಮುದ್ದಿಸಿ ಮೆಲ್ಲಮೆಲ್ಲಗೆ ನನ್ನಿಂದ ಬಿಡಿಸಿಕೊಂಡು
ಹದಬಿಸಿನೀರು ಹಂಡೆಯಲ್ಲಿ  ತುಂಬಿಟ್ಟು ಸುಖದ ಆಯಾಸದಲಿ ಮಲಗಿದ್ದವಳ ಅಕ್ಕರೆಯಲ್ಲಿ ತಬ್ಬಿ ಎಬ್ಬಿಸುವಾಗೆಲ್ಲಾ ಜಗಮೊಂಡಿ ನಾನು…
ಏಳುವ ‌ಮುನ್ನ ರಮಿಸಿ ಮತ್ತೊಂದು ಮುತ್ತಿನ ತುತ್ತು ಪಡೆವಾಗೆಲ್ಲಾ ನೀನು ಕರೆಯುವುದೇ ಸೊಗಸು.
ತಣಿವಿಲ್ಲದ ತನುವಿನವಳೇ..
ತವಕದ ತಂಬೂರಿಯೆ..
ಹಸಿದು ಹಂಬಲಿಸುವವಳೇ..
ಏಳು..ಚಿನ್ನಾ..ಸ್ನಾನ..

ಬಚ್ಚಲಿಗೆ ಕರೆದೊಯ್ಯುವ ಮುನ್ನ ನನ್ನ ಮೈಯೆಲ್ಲಾ ಮುಚ್ಚಿರಬೇಕು.. ಅದು ನಿನ್ನ ಪದ್ದತಿಯಂತೆ..
ಹೇಳು..
ಇದು ಯಾವ ಬಗೆಯ ಹುಚ್ಚು….!!
ಬಿಡುಗಡೆ ಪಡೆಯಬಲ್ಲೆವೆ ನಾವು..?
ಹುಡುಗಾಟಕ್ಕೆ,ಹುಸಿಖುಷಿಗೆ ಒಲುಮೆ ಆರಂಭಿಸಿದವರೆ ನಾವು?

….

ಹೀಗಿದ್ದವರು ನಾವು..
ಈಗ ನೋಡು…
ನಡುರಾತ್ರಿಯ ನಿನ್ನ ಸಂದೇಶ ನನ್ನ ಕಂಗಲಾಗಿಸಿದೆ.
ನಿನ್ನೆ ಮದ್ಯಾಹ್ನ ಉಂಡ ಆ ಮೂಕ ಜೀವ ಬಾಗಿಲ ಬಳಿ‌ಯೇ ಕುಳಿತು ನನಗೇನಾಗಿರಬಹುದೆಂದು ಹಸಿದ ಹೊಟ್ಟೆಯಲ್ಲೇ ಆತಂಕ ತೋರುತ್ತಿದೆ..
ಅದಕ್ಕಾದರೂ ನಾ ಏನು ಹೇಳಬಲ್ಲೆ…?
ಹೇಳು ನೋಡೋಣಾ..

‍ಲೇಖಕರು avadhi

March 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಕುಸುಮ ಎಂ

    ವಾಸ್ತವದ ಮುದ್ದುನಾಯಿ ಮತ್ತು ಭಾವಲೋಕದ ಪ್ರೀತಿ, ಪ್ರೇಮದ ಮುಖಾಮುಖಿ ಚೆನ್ನಾಗಿ ಮೂಡಿಬಂದಿದೆ.

    ಪ್ರತಿಕ್ರಿಯೆ
  2. Sudha Hegde

    ಓದಿದಷ್ಟೂ ಹೊಸ ಅರ್ಥಗಳನ್ನು ತೆರೆದಿಟ್ಟ ಕವಿತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: