ತಿನ್ನಬಾರದ್ದನ್ನೇ ತಿನ್ನಬಯಸುವ ಮನ..

 

ಡಾ ಎಚ್ ಎಸ್ ಅನುಪಮಾ ಅವರು ಅದಕ್ಕೆ ಪೂರಕವಾಗಿ ತಾವು ಬರೆದ ಲೇಖನ ಕಳಿಸಿದ್ದಾರೆ.
ಇದು `ಜೀವಕೋಶ’  ಎಂಬ ವೈದ್ಯಲೋಕದ ಅನುಭವ ಕುರಿತ ಅನುಪಮಾ ಅವರ ಕೃತಿಯಲ್ಲಿ ಪ್ರಕಟವಾಗಿದೆ.

ಡಾ. ಎಚ್. ಎಸ್. ಅನುಪಮಾ        

ಹದಿನೆಂಟು ವರ್ಷಕ್ಕೇ ಮದುವೆಯಾಗಿದ್ದ ಗಂಗೆ ವರ್ಷಕ್ಕೊಂದೊಂದರಂತೆ ಎರಡು ಬಾರಿ ಗರ್ಭಿಣಿಯಾಗಿ, ಎರಡು ಬಾರಿಯೂ ಗರ್ಭಪಾತವಾಗಿ ತುಂಬ ನಲುಗಿದ್ದಳು. ಅವಳ ಎಳೇ ಮುಖ ಬಿಳಿಚಿಕೊಂಡು ಕಾಂತಿಹೀನವಾಗಿದ್ದರೂ ಎಳೆತನದ ಕಳೆ ಇನ್ನೂ ಪೂರಾ ಮಾಸಿರಲಿಲ್ಲ. ಸಪುರ ಗರಿಕೆ ಹುಲ್ಲಿನಂತೆ ಕಾಣುತ್ತಿದ್ದ ಅವಳೇ ಮಗುವಿನ ತರಹ ಇದ್ದಾಳೆ, ಇನ್ನು ಮಗುವನ್ನು ಹೇಗೆ ಹೊತ್ತು ಹೆತ್ತಾಳೋ ಎಂದು ಗರ್ಭನಿಂತು ಅವಳು ಬಂದಾಗಲೆಲ್ಲ ಅಂದುಕೊಳ್ಳುತ್ತಿದ್ದೆ. ಗರ್ಭಪಾತದಿಂದ ಅವಳು ದೈಹಿಕವಾಗಿಯೂ, ಮಾನಸಿಕವಾಗಿಯೂ ತುಂಬ ಜರ್ಜರಿತಳಾಗಿ ಹೋಗಿದ್ದಳು.

ಹೀಗಿರುತ್ತ ಒಂದುದಿನ ಅರ್ಧರಾತ್ರಿ ಮೈಯೆಲ್ಲ ಬಾತು ಉಬ್ಬಿಕೊಂಡಿದ್ದ ಗಂಗೆಯನ್ನು ಹೊತ್ತುಕೊಂಡು ಬಂದರು. ನೋಡಿದರೆ ಏಳೆಂಟು ತಿಂಗಳ ಗರ್ಭಿಣಿ! ಆ ಪುಟ್ಟದೇಹಕ್ಕೆ ಗರ್ಭವೇ ಒಂದು ಹೊರೆಯೆನ್ನುವಂತೆ ಕಾಣುತ್ತಿತ್ತು. ಮೈಮೇಲೆ ಪ್ರಜ್ಞೆಯಿರಲಿಲ್ಲ. ಗೊರಕೆ ಹೊಡೆಯುವವರಂತೆ ದೊಡ್ಡ ಶಬ್ದ ತೆಗೆದು ಬಾಯಿಕಳೆದು ಉಸಿರು ಬಿಡುತ್ತಿದ್ದಳು. ರಕ್ತಸ್ರಾವವಾಗಿ ಉಟ್ಟಿದ್ದ ಸೀರೆಯೆಲ್ಲ ಕೆಂಪಾಗಿತ್ತು. ಮೈಯೆಲ್ಲ ಬಿಳಿಚಿಕೊಂಡು ಹಳದಿಯಾಗಿ ತೋರುತ್ತಿತ್ತು. ಒಳಗೆ ಕಳಿಸಿ, ತಪಾಸಣೆ ಮಾಡಿದರೆ ಅವಳ ಬಿಪಿ ಸಿಕ್ಕಾಪಟ್ಟೆ ಏರಿತ್ತು. ಗರ್ಭಸ್ಥ ಶಿಶುವಿನ ಹೃದಯಬಡಿತವೂ ಕೇಳುತ್ತಿರಲಿಲ್ಲ.

ಹಿಂದಿನ ದಿನವಿಡೀ ತಲೆನೋವೆಂದು ವಾಂತಿ ಮಾಡಿದ್ದಳಂತೆ. ಹೊಟ್ಟೆಯಲ್ಲಿ ಸಂಕಟವೆಂದು ಎದ್ದೇ ಇರಲಿಲ್ಲವಂತೆ. ಮೂತ್ರ ಸಂಡಾಸು ಯಾವುದಕ್ಕೂ ಹೋಗಲಿಲ್ಲವಂತೆ. ಇಷ್ಟು ವಿಕೋಪಕ್ಕೆ ಹೋಗುವವರೆಗೂ ಏಕೆ ಆಸ್ಪತ್ರೆಗೆ ಕರೆತರಲಿಲ್ಲವೆಂದು ಕೇಳಿದೆ. ದೊಡ್ಡಬಾಯಿಯ ಅವಳತ್ತೆ ಉತ್ತರ ಹೇಳಿದಳು; `ಎಷ್ಟು ಹೇಳೀರೂ ಆಸ್ಪತ್ರೆಗೆ ಬರಾಕೊಲ್ಲೆ ಅಂತಿತ್ತು ಅಮ್ಮ ಅದು. ಹೆಂಗೆ ಬತ್ತದೆ, ಮರ್ವಾದಿ ಅದ್ಕೆ. ದಿನಬೆಳಗಾದ್ರೆ ಮಣ್ಣು ತಿಂಬೂದು, ಅಕ್ಕಿ ನೆನೆಸ್ಕ ತಿಂಬೂದು, ಇದ್ಲಿ ತಿಂಬೂದು, ಅನ್ನ ಹೊಟ್ಟೀಗೆ ಬಿದ್ದು ಎಷ್ಟು ಕಾಲ ಆತೋ ಏನೋ? ಒಂದ್ ಕೊಳೆ ತಿಂತಿರ್ಲಿಲ್ಲ.

ಹ್ವಾದ ವರ್ಷ ಹಿಂಗೇ ಆಗಿ ನಮ್ಕಡೆ ಬಸರಿ ಒಂದು ತೀರ್ಕಂತು. ಅದು ಇವಳ ಗೆಣೆತೀನೆ ಆಗಿತ್ತು. ಅದುರ್ದೆ ದೆವ್ವ ಇದ್ನ ಹಿಡ್ದದೆ ಅಂತ ಎಲ್ಲೆಲ್ಲ ಹೋಗಿ ನೋಡಿಸ್ಕ ಬಂದ್ರು. ನಿನ್ನೆ ಅಮಾಸಿ ಬೇರೆ, ಬೆಳಗಾಗುದ್ರಾಗೆ ಇದರ ಮ್ಯಾಲೆ ಬಂದ ಭಾರ ಇನ್ನೂವರ್ಗೂ ಇಳೀನೇ ಇಲ್ಲ. ನಡುರಾತ್ರಿ ಐದಾರು ಮೈಲಿ ನಡದು ನೋಟಗಾರ್ನ ಕರಕಂಡು ಬಂದ್ರು. ಏನು ಮಾಡಿದ್ರೂ ಅವ್ನ ಕಟ್ಟು ನಿಲ್ಲಲಿಲ್ಲ. ದೆವ್ವ ಮೈಬಿಟ್ಟು ಹೋಗಲಿಲ್ಲ. ಕಡಿಗೆ ಅವ್ನೆಯ ನಿಮ್ಮಾಸ್ಪತ್ರಿಗೇ ಕರ್ಕಹೋಗಿ, ನಾನು ಮನೆಯಾಗೇ ಕಟ್ಟು ಮಾಡ್ತಿನಿ ಹೆದರದು ಬ್ಯಾಡ ಅಂತ ಹೇಳ್ಕಿ ಮಾಡಿ ಕಳಿಸ್ದ.’
ಓ ದೇವರೇ! ಇವರನ್ನು ನೀನೇ ಕಾಪಾಡಬೇಕು..
*****

ಕೊಳಕಾದ ದೊಗಳೆ ಲಂಗ ಬ್ಲೌಸು ತೊಟ್ಟ ಸರಸೋತಿಯನ್ನು ಒಂದು ದಿನ ಅವಳ ಅಪ್ಪ ಕರೆತಂದರು. ಬಿಳಿಚಿಕೊಂಡ. ಮುಖಮೈಯೆಲ್ಲ ದಷ್ಟಪುಷ್ಟವಾಗಿ ಕಾಣುತ್ತಿದ್ದರೂ ಅದು ಬರಿಯ `ಬೆಂಡು ಮೈ’ ಎಂದು ನೋಡಿದರೆ ತಿಳಿಯುತ್ತಿತ್ತು. ಲಂಗ ಬ್ಲೌಸು ಹಾಕಿದ್ದರೇನಂತೆ? ವಯಸ್ಸು ನಲವತ್ತು ದಾಟಿದ್ದನ್ನು ಕೆದರಿ ಹಾರುತ್ತಿದ್ದ ನರೆಗೂದಲುಗಳೂ, ಮುಖದ ಸುಕ್ಕುಗಳೂ ಹೇಳುತ್ತಿದ್ದವು. ನನ್ನ ಮುಖ ಕಂಡಕೂಡಲೇ ಒಂದು ಪೆದ್ದುನಗೆ ನಕ್ಕಳಾದರೂ ಎದುರು ಕೂಡಲಿಲ್ಲ. ಕಣ್ಣಿಗೆ ಕಣ್ಣು ಕೊಟ್ಟು ಮಾತಾಡಲಿಲ್ಲ.

ಅವಳಪ್ಪ ನನ್ನ ಬಳಿ ಮಾತನಾಡತೊಡಗಿದಂತೆ ಆಚೆ ಬದಿ ತಿರುಗಿದ ಅವಳು ಅವಸರವಸರದಲ್ಲಿ ಉಗುರು ಕಚ್ಚುತ್ತಾ ನಿಂತಳು. ಅದನ್ನೇ ಅಷ್ಟು ಏಕಾಗ್ರತೆಯಿಂದ ಮಾಡುತ್ತಿರುವ ಅವಳು!
ತಾಯಿಯಿಲ್ಲದ ಕೂಸನ್ನು ತಾನು ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಿದ್ದೇನೆಂದು ಹೇಳಿದ ಅವಳಪ್ಪ ಅವಳಿಗಾಗೇ ತಾನು ಮತ್ತೊಂದು ಮದುವೆಯಾಗಲಿಲ್ಲವೆಂದೂ, ಬರಿಯ ದೇವಸ್ಥಾನದ ಪೂಜೆ ಬಿಟ್ಟು ಹೊರಗೆಲ್ಲೂ ಹೋಗುವುದಿಲ್ಲವೆಂದೂ, ಅಷ್ಟರಲ್ಲೇ ಹೇಗೋ ತಮ್ಮಿಬ್ಬರ ಹೊಟ್ಟೆಪಾಡು ನಡೆಯುತ್ತಿದೆಯೆಂದೂ ಹೇಳಿದರು.

ಅವಳಿಗೆ ಏಕೆ ಇಷ್ಟು ವರ್ಷವಾದರೂ ಮದುವೆ ಮಾಡಿಲ್ಲ ಇವರು ಎಂದು ನಾನಂದುಕೊಳ್ಳುತ್ತಿರುವಾಗಲೇ, `ಈ ಮಗು ಅನ್ನ ತಿಂಬುದು ಬಿಟ್ಟು ಹತ್ತಿಪ್ಪತ್ತು ವóರ್ಷವಾಯ್ತು ನೋಡಿ ಡಾಕ್ಟ್ರೇ. ಅದು ತಿಂಬುದೇನಿದ್ರೂ ಅವಲಕ್ಕಿ, ಹಸಿ ಗೋಧಿ, ಅಕ್ಕಿ. ಅದೂ ನೆನಸಿಕೊಂಡು ತಿಂಬೂದು. ಅದುಬಿಟ್ರೆ ಕಣ್ಗೆ ಕಂಡ ಹೊಲ್ಸನೆಲ್ಲ – ಮಣ್ಣು, ಕಲ್ಲು, ಇದ್ದಿಲು, ಉಗುರು – ಹಿಂಗಿದ್ದೇ ತಿಂತದೆ. ನಾನಂತೂ ಈ ಮಗೀನ ಕಾಲದಾಗೆ ಸೋತುಹೋಗಿದೀನಿ. ಎಷ್ಟು ಹರಕೆಯಾಯ್ತೋ, ಜಪತಪ ಆಯ್ತೋ, ಎಂತ ಮಾಡಿರೂ ಮಣ್ಣು ತಿಂಬೂದು ಮಾತ್ರ ಬಿಡ್ತಿಲ್ಲೆ. ಇದರ ಅಬ್ಬೆ ಸತ್ತ ಒಂದೆರೆಡು ವರ್ಷಕ್ಕೇ ಸುರುವಾಗೋಯ್ತು ಆ ಚಾಳಿ. ಇದಕ್ಕೆ ಎಂತ ಪರಿಹಾರ ಇದ್ಯೋ ಇಲ್ವೋ ಹೇಳಿ’ ಎಂದು ಹನಿಗಣ್ಣಾದರು.

ಮೇಲಿನ ಎರಡೂ ಉದಾಹರಣೆಗಳಲ್ಲಿ ನಾವು ನೋಡುವ ಹಾಗೆ, ಕೆಲವರಿಗೆ ತಿನ್ನಬಾರದ್ದನ್ನು ತಿನ್ನುವ ಅಭ್ಯಾಸ – ಪೈಕಾ – ಇರುತ್ತದೆ. ಜೇಡಿಮಣ್ಣು, ನಾಣ್ಯ, ಇದ್ದಿಲು, ಮಣ್ಣು, ಸೀಮೆಸುಣ್ಣ, ಮಲ, ಕಾಗದ, ಸೋಪು, ಸಿಂಬಳ, ಬೂದಿ, ಮರಳು, ಗೋಡೆ ಕೆರೆದ ಪೇಂಟು – ಇಂತಹ ತಿನ್ನದ ವಸ್ತುಗಳು ಹಾಗೂ ತಿನ್ನಬಹುದಾದ ವಸ್ತುಗಳ ಬೇರೆ ರೂಪ – ಅಕ್ಕಿ, ಹಸೀ ಹಿಟ್ಟು, ಹಸಿಯ ಆಲೂಗೆಡ್ಡೆ, ಅವಲಕ್ಕಿ, ಉಪ್ಪು, ಮಂಜುಗಡ್ಡೆ, ಗಸಗಸೆ – ಇಂಥವನ್ನೆಲ್ಲ ತಿನ್ನಬೇಕೆಂದು ಅವರಿಗೆ ಅಪೇಕ್ಷೆಯುಂಟಾಗುತ್ತದೆ. ಈ ಲಕ್ಷಣ ಒಂದು ತಿಂಗಳಿಗಿಂತ ಹೆಚ್ಚು ಅವಧಿಯ ನಂತರವೂ ಇದ್ದರೆ, ರೋಗಿಯ ವಯಸ್ಸಿಗೆ ಅದು ಅಪೇಕ್ಷಾರ್ಹ ನಡವಳಿಕೆಯಲ್ಲದಿದ್ದರೆ ಅದನ್ನು `ಪೈಕಾ’ ಎಂದು ಕರೆಯುತ್ತಾರೆ.

ಜೈಲುವಾಸಿಗಳಲ್ಲಿ, ಮಾನಸಿಕ ಆಸ್ಪತ್ರೆಯ ರೋಗಿಗಳಲ್ಲಿ, ಬುದ್ಧಿಮಾಂದ್ಯರಲ್ಲಿ, ಒಬ್ಬಂಟಿಯಾಗಿರುವ ವ್ಯಕ್ತಿಗಳಲ್ಲಿ, ತನ್ನವರೆನ್ನುವವರಿಲ್ಲದ ಅನಾಥರಲ್ಲಿ ಪೈಕಾದ ಅತಿಯನ್ನು ನೋಡಬಹುದು. 2007ರಲ್ಲಿ ಇಂಗ್ಲೆಂಡಿನಲ್ಲಿ 20 ಪೌಂಡ್ ತೂಕದ ಕೂದಲಿನ ಉಂಡೆಯೊಂದನ್ನು ರೋಗಿಯ ಹೊಟ್ಟೆಯಿಂದ ತೆಗೆಯಲು ಶಸ್ತ್ರಚಿಕಿತ್ಸೆ ಮಾಡಬೇಕಾಯಿತು! ಅಷ್ಟು ಕೂದಲನ್ನು ರೋಗಿ ವರ್ಷಗಟ್ಟಲೆಯಿಂದ ತಿಂದಿದ್ದಳು. ಗಂಟುಕಟ್ಟಿದ ಕೂದಲು ಸಂಪೂರ್ಣ ಜಠರದ ಆಕಾರ ಪಡೆದು (`ಟ್ರೈಕೋಬೆಝೋರ್ ಸ್ಟಮಕ್’) ಮುಂದೆ ಚಲಿಸದೆ ಹೊಟ್ಟೆಯೊಳಗೆ ಭದ್ರವಾಗಿ ಕುಳಿತುಬಿಟ್ಟಿತ್ತು.

`ಪೈಕಾ’ ಎಂಬುದು ಲ್ಯಾಟಿನ್ ಪದವಾಗಿದ್ದು ಇದರ ಅರ್ಥ `ಮ್ಯಾಗ್‍ಪೈ’ ಎಂದಾಗಿದೆ. ಆ ಹೆಸರಿನ ಪಕ್ಷಿಯು ಎದುರು ಸಿಕ್ಕ ಏನನ್ನಾದರೂ ತಿನ್ನುವ ಸ್ವಭಾವ ಹೊಂದಿರುವುದರಿಂದ ಕಾಯಿಲೆಗೆ ಈ ಹೆಸರು ಬಂದಿದೆ. ಇದು ಬರಿಯ ಮನುಷ್ಯರಿಗೆ ಮಾತ್ರ ಬರುವ ಕಾಯಿಲೆಯಲ್ಲ. ಪ್ರಾಣಿಗಳಲ್ಲಿ, ಅದರಲ್ಲೂ ನಾಯಿಗಳಲ್ಲಿ ಹೆಚ್ಚು ಕಂಡುಬರುತ್ತದೆ.

ಬದುಕಿನಲ್ಲಿ ಯಾವುದಾದರೂ ಅತಿ ಆಘಾತಕಾರೀ ಘಟನೆ ನಡೆದ ನಂತರ, ಅಥವಾ ವ್ಯಕ್ತಿತ್ವ ಊನ – ಆಬ್ಸೆಸ್ಸಿವ್ ಡಿಸಾರ್ಡರ್ – ಇರುವವರಲ್ಲಿ, ನಿರ್ಲಕ್ಷಿತರಾಗಿ ಗಮನ ಸೆಳೆಯಬಯಸುವ ಏಕಾಂಗಿಗಳಲ್ಲಿ, ತೀರಾ ಸೂಕ್ಷ್ಮ ಪ್ರವೃತ್ತಿಯವರಲ್ಲಿ, ಗರ್ಭಿಣಿಯರಲ್ಲಿ – ಹೀಗೇ ನಾನಾ ತೆರನ ವ್ಯಕ್ತಿಗಳಲ್ಲಿ ಪೈಕಾ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಇಂಥದ್ದೇ ಎಂದು ನಿರ್ದಿಷ್ಟ ಕಾರಣವನ್ನಿನ್ನೂ ಹುಡುಕಲಾಗಿಲ್ಲ. ಇದೊಂದು ರೀತಿ ಚಟದಂತೆ ಅಂಟಿದರೂ, ಮಾದಕ ವಸ್ತು, ಮದ್ಯ (ಆಲ್ಕೋಹಾಲ್), ತಂಬಾಕು (ನಿಕೋಟಿನ್), ಅಥವಾ ಕಾಫಿ – ಟೀ (ಕೆಫೀನ್) ಗಳಂತೆ ಅಂಟುವ ಚಟವಲ್ಲ. ಕೆಲವು ಸನ್ನಿವೇಶಗಳಿಗೆ ಪ್ರತಿಕ್ರಿಯೆಯಾಗಿ ಮನೋದೈಹಿಕ ಬದಲಾವಣೆಗಳುಂಟಾಗುತ್ತವೆ. ಆಗ ವ್ಯಕ್ತಿಯ ಚರ್ಯೆ ಹಾಗೂ ನಡವಳಿಕೆಯಲ್ಲಿ ಏರುಪೇರುಗಳು ಕಂಡುಬರುತ್ತವೆ. ಇದೂ ಒಂದು ರೀತಿಯಲ್ಲಿ ಸಮಾಜದ, ವ್ಯಕ್ತಿಯ, ಕುಟುಂಬದ ವಿರುದ್ಧ ಬಂಡೇಳುವ ನಡವಳಿಕೆ ಇರಬಹುದಾಗಿದೆ.

ಯಾವುದನ್ನು ತಿನ್ನಬಾರದೆಂದು ಹೇಳುವರೋ, ಯಾವುದು ತಿನ್ನಬಲ್ಲಂಥ ವಸ್ತುವಲ್ಲವೋ, ಅದನ್ನೇ ತಿನ್ನಬೇಕೆನ್ನಿಸತೊಡಗುತ್ತದೆ. ಇದು ಈ ಕಾಯಿಲೆಯ ಒಂದು ಮುಖ.  ಖನಿಜಾಂಶಗಳ ಕೊರತೆಯಿಂದಲೂ ಇದು ಉಂಟಾಗಬಹುದೆಂದು ನಂಬಲಾಗಿದೆ. ರಕ್ತಹೀನತೆಯೂ ಪೈಕಾದ ಪ್ರಮುಖ ಕಾರಣಗಳಲ್ಲೊಂದು. ಯಾವ ಖನಿಜಾಂಶದ ಕೊರತೆಯಿದೆಯೋ, ಅದು ಲಭ್ಯವಿರುವ ವಸ್ತುವನ್ನು ರೋಗಿಯು ತಿನ್ನತೊಡಗುತ್ತಾನೆ ಎಂಬ `ಥಿಯರಿ’ ಚಾಲ್ತಿಯಲ್ಲಿದೆ. ಕಬ್ಬಿಣ ಸತ್ವ ಕೊರತೆಯು ಸಾಮಾನ್ಯವಾಗಿ ಎಲ್ಲ ಪೈಕಾ ರೋಗಿಗಳಲ್ಲಿ ಕಂಡುಬರುತ್ತದೆ. ಇದು ಕಾರಣ ಮತ್ತು ಪರಿಣಾಮ ಎರಡೂ ಆಗಿರಬಹುದಾಗಿದೆ.

ಜೀರ್ಣವಾಗದ ಕಲ್ಲು ಮಣ್ಣಿನಂತಹ ವಸ್ತುಗಳು ಹೊಟ್ಟೆಯಲ್ಲೇ ಉಳಿಯುವುದರಿಂದ, ಅವು ಜಂತುಹುಳಬಾಧೆಗೂ ಕಾರಣವಾಗಿರುವುದರಿಂದ, ರೋಗಿಗೆ ಹಸಿವೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದು ರಕ್ತಹೀನತೆ ಮತ್ತು ನಿಶ್ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಕಾರಣದಿಂದಲೇ ಪೈಕಾ ರೋಗಿಗಳಲ್ಲಿ ರಕ್ತಹೀನತೆಯು ಸಾಮಾನ್ಯವಾಗಿ ಕಂಡುಬರುತ್ತದೆ, ರಕ್ತಹೀನತೆಯನ್ನು, ಏಕಾಂಗಿತನವನ್ನು, ಸಹಿಸಲಾಗದ ಕಷ್ಟವನ್ನು ದೂರಮಾಡಿದರೆ ಎಷ್ಟೋ ರೋಗಿಗಳು ಗುಣಮುಖರಾಗುತ್ತಾರೆ.  ಒಟ್ಟಾರೆ ಪೈಕಾ ಎಂಬುದು ಆಹಾರ, ಚಿಕಿತ್ಸೆ, ಪ್ರೀತಿ, ಸಂಬಂಧಗಳು – ಈ ಎಲ್ಲದರ ಬದಲಾವಣೆ ಮತ್ತು ಸುಧಾರಣೆಯಿಂದ ಗುಣಪಡಿಸಬಲ್ಲ ರೋಗವಲ್ಲದ ರೋಗವಾಗಿದೆ.

‍ಲೇಖಕರು avadhi

September 20, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Prasad

    Very informative… Thanks to Avadhi and Dr. H.S. Anupama ma’am for this…
    – Prasad, Republic of Angola

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: