ಏನಿದು ದೇಶ?

3

“ಏನಿದು ದೇಶ?”
“ಇಲ್ಲಿ ನೋಡೋದಕ್ಕೇನೇನಿದೆ?”
“ಇತರ ದೇಶಗಳಿಗಿಂತ ಸ್ಪೆಶಲ್ ಅನ್ನಿಸುವಂಥದ್ದೇನಾದರೂ ಇದೆಯೇ ಇಲ್ಲಿ?”
“ಜನಜೀವನ ಹೇಗಿದೆ? ನೈಟ್ ಲೈಫ್ ಹೇಗಿದೆ?”

ಹೀಗೆ ಸರ್ವವನ್ನೂ ಬಲ್ಲ ಗೂಗಲ್ ಮಹಾಶಯನ ಸಹಾಯದಿಂದ ಇವೆಲ್ಲಾ ಪ್ರಶ್ನೆಗಳಿಗೆ ಒಂದೊಂದಾಗಿಯೇ ಉತ್ತರವನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೆ. ಅಂಗೋಲಾಕ್ಕೆ ತೆರಳುವ ಮುನ್ನ ಕೆಲ ದಿನಗಳ ಕಾಲ ಮಂಗಳೂರಿನ ನಿವಾಸದಲ್ಲಿದ್ದ ನನಗೆ ಇದೊಂದೇ ಕೆಲಸ. ಇದು ಅಂಗೋಲಾ ಅಂತಲ್ಲ, ಎತ್ತ ಹೋಗುವುದಿದ್ದರೂ ಇಂಥದ್ದೊಂದು ಪ್ರಾಥಮಿಕ ಹಂತದ ಸಂಶೋಧನೆ ನಡೆಯಲೇಬೇಕು.

ಉದ್ಯೋಗನಿಮಿತ್ತ ಉತ್ತರ ಭಾರತದ ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದ ನಾನು ಇಂಥಾ ‘ಮೋಡಸ್ ಅಪೆರಾಂಡಿ’ಗಳ್ನನಿಟ್ಟುಕೊಂಡೇ ಮುನ್ನಡೆಯುತ್ತಿದ್ದೆ. ಆದಷ್ಟು ಬೇಗ ಮಾಡಬೇಕಾಗಿದ್ದ ಕೆಲಸಗಳನ್ನು ಮುಗಿಸಿ ನಂತರ ಅಲ್ಲಿಯ ವಿಶೇಷ ತಾಣಗಳನ್ನು ನೋಡುವ ಕಾರ್ಯಕ್ರಮಗಳು.

ಇಂಥದ್ದೇ ಒಂದು ಪ್ರವಾಸದ ನಿಮಿತ್ತ ನಾಗಾಲ್ಯಾಂಡಿನ ಎನ್.ಐ.ಟಿ ವಿದ್ಯಾಸಂಸ್ಥೆಗೆ ಭೇಟಿ ಕೊಟ್ಟಿದ್ದ ನಾನು ಸಂಜೆ ಐದಕ್ಕೇ ಕತ್ತಲಾಗಿಬಿಟ್ಟಾಗ ಅಯ್ಯೋ ತಿರುಗಾಟದ ಕೆಲವು ಗಂಟೆಗಳು ವ್ಯರ್ಥವಾಯಿತು ಎಂದು ತಲೆಕೆಡಿಸಿಕೊಂಡಿದ್ದೆ. ನಾಗಾಲ್ಯಾಂಡಿನ ಕೆಲ ಪ್ರದೇಶಗಳಲ್ಲಿ ಕತ್ತಲು ಕವಿದ ನಂತರ ತಿರುಗಾಡುವುದು ಅಪಾಯಕಾರಿ ಎಂದು ವಿಶೇಷ ಸೂಚನೆಯನ್ನು ಬೇರೆ ಸ್ಥಳೀಯರು ನನಗೆ ಕೊಟ್ಟಿದ್ದರು. ಹೀಗೆ ಪ್ರವಾಸಗಳೆಂದರೆ ಅಲ್ಲಿಯ ಒಂದೊಂದು ನಿಮಿಷವೂ ಕೂಡ ಅಮೂಲ್ಯ ಎಂಬ ಹುರುಪಿನಲ್ಲಿ ತಿರುಗಾಡುವವನು ನಾನು.

ಆದರೆ ಈ ಬಾರಿ ನನ್ನ ಪ್ರಾಥಮಿಕ ಹಂತದ ಸಂಶೋಧನೆಯು ಅದ್ಯಾಕೋ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿರುವಂತೆ ಕಾಣಲಿಲ್ಲ. ಅಂಗೋಲಾದ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲದಿರುವುದು ಒಂದು ಕಾರಣವಾದರೆ, ನಮ್ಮ ಸಂಸ್ಥೆಯಿಂದ ಈವರೆಗೆ ಯಾರೂ ಅಂಗೋಲಾ ಕಡೆಗೆ ಹೋಗಿಲ್ಲದಿದ್ದಿದ್ದು ಮತ್ತೊಂದು ಕಾರಣವಾಗಿತ್ತು. ಇಲ್ಲಿ ನೋಡಲು ಬೆರಳೆಣಿಕೆಯ ತಾಣಗಳಿದ್ದರೂ ಕೂಡ ಅಂಗೋಲಾವನ್ನು ಪ್ರವಾಸಿ ತಾಣವೆಂದು ಯಾರೂ ಪರಿಗಣಿಸುವುದಿಲ್ಲ. ಒಟ್ಟಾರೆಯಾಗಿ ಆಫ್ರಿಕಾ ಖಂಡವನ್ನು ನೋಡಿದರೂ ಪ್ರವಾಸಕ್ಕೆಂದು ಈಜಿಪ್ಟ್, ದಕ್ಷಿಣ ಆಫ್ರಿಕಾ, ಕೀನ್ಯಾದಂತಹ ದೇಶಗಳತ್ತ ಜನರು ಹೋಗುತ್ತಾರೆಯೇ ಹೊರತು ಅಂಗೋಲಾಕ್ಕೆಂದು ಟೂರ್ ಪ್ಯಾಕೇಜ್ ಗಳನ್ನು ಮಾಡಿಕೊಂಡು ಯಾರೂ ಹೋಗುವುದಿಲ್ಲ. ಹೀಗೆ ತೆರಳುವುದು ನಿಶ್ಚಿತವಾಗಿದ್ದರೂ ಕೂಡ ರಿಪಬ್ಲಿಕ್ ಆಫ್ ಅಂಗೋಲಾ ತನ್ನ ನಿಗೂಢತೆಯನ್ನು ಇನ್ನೂ ಉಳಿಸಿಕೊಂಡೇ ಇತ್ತು.

ಇನ್ನು ಅಂತರ್ಜಾಲದಲ್ಲಿ ಅಂಗೋಲಾದ ಬಗ್ಗೆ ದೊರೆತ ಮಾಹಿತಿಗಳು ನನ್ನನ್ನು ಮತ್ತಷ್ಟು ಗೊಂದಲಕ್ಕೆ ದೂಡಿದವು ಎಂದೇ ಹೇಳಬೇಕು. ಹಲವು ಅಂತರ್ಜಾಲ ತಾಣಗಳಲ್ಲಿ ಯಾವುದೋ ಯುದ್ಧದ ಕತೆಗಳಿದ್ದರೆ, ಇನ್ನುಳಿದವುಗಳಲ್ಲಿ ನೆಲಬಾಂಬುಗಳು, ಮಿಲಿಟರಿ ಕಾರ್ಯಾಚಾರಣೆಗಳ ಬಗೆಗಿನ ಮಾಹಿತಿಗಳಿದ್ದವು. ಒಂದೆರಡು ಪಾಶ್ಚಾತ್ಯ ರಾಷ್ಟ್ರಗಳ ವೆಬ್ ಸೈಟ್ ಗಳಂತೂ ಅಂಗೋಲಾದಲ್ಲಿ ಮಾಡಬೇಕಾದ ಮತ್ತು ಮಾಡಬಾರದಾದ ಸಂಗತಿಗಳ ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದವು. ಜೊತೆಗೇ ಎಚ್ಚರಿಕೆಗಳು, ವಿಶೇಷ ಸೂಚನೆಗಳು, ಸಹಾಯದ ಹೆಲ್ಪ್ ಲೈನ್ ನಂಬರ್ ಗಳು ಇತ್ಯಾದಿ ಮಾಹಿತಿಗಳಿದ್ದವು.

ಇವುಗಳನ್ನೆಲ್ಲಾ ಓದುತ್ತಿದ್ದರೆ ಇನ್ನೇನು ನಾನು ಯುದ್ಧಭೂಮಿಗೆ ಕಾಲಿಡುತ್ತಿದ್ದೇನೆ, ಏರ್ ಪೋರ್ಟ್ ಬಿಟ್ಟು ಹೊರಬಂದರೆ ಎಲ್ಲೆಲ್ಲೂ ಯುದ್ಧ ಟ್ಯಾಂಕರುಗಳೇ ನನ್ನನ್ನು ಸ್ವಾಗತಿಸಲಿವೆಯೇನೋ ಎಂದು ಲೆಕ್ಕ ಹಾಕಿದೆ. ಈ ಬಗ್ಗೆ ಭಯವೇನೂ ಇರಲಿಲ್ಲವಾದರೂ ಆ ಸಂದರ್ಭಕ್ಕೆ ಮಾನಸಿಕವಾಗಿ ಸಂಪೂರ್ಣವಾಗಿ ತಯಾರಾಗಬೇಕಾದ ಅವಶ್ಯಕತೆಯ ಬಗ್ಗೆ ನನಗೆ ಸಂಪೂರ್ಣವಾಗಿ ಅರಿವಿತ್ತು. ಏಕೆಂದರೆ ತೀರಾ ಅಫಘಾನಿಸ್ತಾನದಂತಹ ಅಫಘಾನಿಸ್ತಾನದಲ್ಲೂ ನಮ್ಮ ಕೆಲವು ಸಹೋದ್ಯೋಗಿಗಳು ನಿರಂತರ ಐದು ವರ್ಷಗಳ ಕಾಲ ಯಶಸ್ವಿಯಾಗಿ ಕೆಲಸ ಮಾಡಿ ಬಂದ ಉದಾಹರಣೆಗಳಿದ್ದವು. ಮೇಲಾಗಿ ಅಂಗೋಲಾಕ್ಕೆ ತೆರಳುವ ಬಗೆಗಿನ ನಿರ್ಧಾರವು ನನ್ನ ಸ್ವಂತದ್ದಾಗಿತ್ತು. ಹೀಗಾಗಿ ಆಫ್ರಿಕಾ ಬಗೆಗಿನ ಕೆಟ್ಟ ಕುತೂಹಲ ಠುಸ್ ಆಯಿತೆಂದೋ ಅಥವಾ ಕರ್ತವ್ಯಕ್ಕೆಂದು ನಿಯುಕ್ತಿಗೊಂಡ ಕರ್ಮವೆಂದೋ ಹೇಳಿ ಹಿಂದೇಟು ಹಾಕುವ ಪ್ರಶ್ನೆಯೇ ಇರಲಿಲ್ಲ.

ಅಂಗೋಲಾ ಬಗ್ಗೆ ದೊರಕಿದ ಅರೆಬೆಂದ ಮಾಹಿತಿಗಳು ನನ್ನನ್ನು ದಂಗುಬಡಿಸಲು ಕಾರಣವೂ ಇದೆ ಅನ್ನಿ. ಐದಾರು ತಿಂಗಳ ಹಿಂದಷ್ಟೇ ನನ್ನ ಕಿರಿಯ ಸಹೋದ್ಯೋಗಿಯೊಬ್ಬ ದಕ್ಷಿಣ ಸುಡಾನ್ ಗೆ ಹೋಗಿಬಂದಿದ್ದ. ಪಂಜಾಬಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಮುಗಿಸಿ ನೇರವಾಗಿ ನಮ್ಮದೇ ಸಂಸ್ಥೆಗೆ ಬಂದಿದ್ದ ಆತನ ಬಳಿ ಆಗ ಪಾಸ್ ಪೋರ್ಟ್ ಕೂಡ ಇದ್ದಿರಲಿಲ್ಲ. ನಂತರ ಲಗುಬಗೆಯಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ನಿಟ್ಟುಸಿರು ಬಿಡುವಷ್ಟರಲ್ಲೇ ದಕ್ಷಿಣ ಸುಡಾನ್ ಪ್ರಯಾಣ ಅವನಿಗಾಗಿ ಮದುವಣಗಿತ್ತಿಯಂತೆ ತಯಾರಾಗಿ ನಿಂತಿತ್ತು. “ಛೇ… ಹೊಸ ಪಾಸ್ ಪೋರ್ಟಿನ ಮೊದಲ ಪುಟದಲ್ಲೇ ದಕ್ಷಿಣ ಸುಡಾನ್ ನಂತಹ ದೇಶದ ಹೆಸರೇ?”, ಎಂದು ಗೊಣಗಿದ್ದ ಆತ. “ಹೋಗಿ ಬಾ ವತ್ಸ… ಒಳ್ಳೆಯದಾಗಲಿ”, ಎಂದು ನಾವೆಲ್ಲರೂ ಅವನನ್ನು ಹರಸಿದ್ದೆವು.

ಹೀಗೆ ಮೊಟ್ಟಮೊದಲ ಬಾರಿ ವಿದೇಶಕ್ಕೆ, ಅದರಲ್ಲೂ ಹದಿನೈದು ದಿನಗಳ ಮಟ್ಟಿಗೆ ಆಫ್ರಿಕಾದ ದಕ್ಷಿಣ ಸುಡಾನಿಗೆ ತೆರಳಿದ್ದ ಆ ತರುಣ ಮರಳಿ ಬಂದಿದ್ದು ಅಚ್ಚರಿ, ಹತಾಶೆ ಮತ್ತು ಆಘಾತಗಳೊಂದಿಗೆ. ತಾನು ಕೊಂಡೊಯ್ದ ಕ್ಯಾಮೆರಾದಲ್ಲಿ ಆತ ಸೆರೆಹಿಡಿದಿದ್ದ ಚಿತ್ರಗಳು ಅಕ್ಷರಶಃ ನಂಬಲಸಾಧ್ಯವಾಗಿದ್ದವು. ಅಲ್ಲಿಯ ಏರ್ ಪೋರ್ಟಿನ ರನ್ ವೇಯಲ್ಲಿ ನಾಯಿಯೊಂದು ಅಡ್ಡಾಡುತ್ತಿತ್ತು. ಅಂಥದ್ದೇ ಮತ್ತೊಂದು ಚಿತ್ರದಲ್ಲಿ ರನ್ ವೇ ಆಸುಪಾಸಿನಲ್ಲಿ ವ್ಯಕ್ತಿಯೊಬ್ಬ ಸೈಕಲ್ ಓಡಿಸುತ್ತಿದ್ದ. ಏನಿದು ಅವಸ್ಥೆ ಎಂದು ನಾವು ಒಬ್ಬರನ್ನೊಬ್ಬರು ನೋಡಿದೆವು.

ಆತ ತನ್ನ ಪ್ರಯಾಣದ ಅನುಭವಗಳನ್ನು ನಮ್ಮ ತಂಡದ ಸದಸ್ಯರಿಗೆ ಹೇಳುತ್ತಲೇ ಇದ್ದರೆ ನಾನು ಮಾತ್ರ ಆ ಚಿತ್ರಗಳಲ್ಲೇ ಕಳೆದುಹೋಗಿದ್ದೆ. ಅಲ್ಲಿಯ ಚಿತ್ರಗಳನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿದ್ದ ಆತನನ್ನು ಸ್ಥಳೀಯರು ತಡೆದಿದ್ದರಂತೆ. ಯಾಕೆಂದು ಕೇಳಿದರೆ “ನೀವು ಫೋಟೋ ತೆಗೆಯುವುದು ಬೇಡ. ನೀವು ಮರಳಿ ನಿಮ್ಮ ದೇಶಕ್ಕೆ ಹೋದ ನಂತರ ಇವುಗಳನ್ನು ನಿಮ್ಮವರಿಗೆಲ್ಲಾ ತೋರಿಸಿ ವ್ಯಂಗ್ಯವಾಡುತ್ತೀರಿ ಎಂದು ನಮಗೆ ಗೊತ್ತು” ಅಂದರಂತೆ. ಆ ಮಾತುಗಳನ್ನು ಕೇಳಿ ನಮಗಾದ ಸಂಕಟ ಅಷ್ಟಿಷ್ಟಲ್ಲ. ವೈಮಾನಿಕ ಪ್ರಯಾಣದ ಮಾತೊಂದು ಬಂದಾಗ ಸೀಟ್ ಲಭ್ಯವಿಲ್ಲದ ನಿಟ್ಟಿನಲ್ಲಿ ನಾವು ಒಂದಿಬ್ಬರು ನಿಂತುಕೊಂಡು ಹೋಗುವುದಕ್ಕೂ ತಯಾರು ಎಂದು ಅವರಲ್ಲಿ ಕೆಲವರು ಹೇಳಿದರಂತೆ.

ಇಂಥವುಗಳನ್ನೆಂದೂ ಕೇಳಿಯೇ ಇಲ್ಲದಿದ್ದ ನಮಗೆ ಆತ ತಮಾಷೆ ಮಾಡುತ್ತಿಲ್ಲವೆಂಬುದನ್ನು ತಿಳಿಯಲು ನಮಗೆ ಕೊಂಚ ಹೆಚ್ಚು ಸಮಯವೇ ಹಿಡಿಯಿತು. ಕೊನೆಗೂ “ದಕ್ಷಿಣ ಸುಡಾನ್ ಜನ್ಮ ತಾಳಿದ್ದೇ ಇತ್ತೀಚೆಗೆ. ಹೀಗಾಗಿ ಕೊಂಚ ಸುಧಾರಿಸಲು ಅರ್ಧ ಶತಮಾನವಾದರೂ ಬೇಕಾಗಬಹುದು”, ಎಂದು ನಾವು ನಮ್ಮನಮ್ಮಲ್ಲೇ ಮಾತಾಡಿಕೊಂಡೆವು.

ಅಂಕಣದ ಓದುಗರಿಗೂ ಕೂಡ ದಕ್ಷಿಣ ಸುಡಾನ್ ಬಗೆಗಿನ ಇಂತಹ ವಿವರಣೆಗಳು ತೀರಾ ಉತ್ಪ್ರೇಕ್ಷಿತ ಅಂತನ್ನಿಸಿದರೆ ಅಚ್ಚರಿಯಿಲ್ಲ. ಏಕೆಂದರೆ ನಾನೂ ಆ ದಿನ ಇಂಥದ್ದೊಂದು ಸ್ಥಿತಿಯಲ್ಲೇ ತೊಳಲಾಡಿದ್ದೆ. ಆದರೆ ಆ ಛಾಯಾಚಿತ್ರಗಳು ಬೇರೆಯದನ್ನೇ ಹೇಳುತ್ತಿದ್ದವು. ದಕ್ಷಿಣ ಸುಡಾನ್ ನಲ್ಲಿ ನೋಡತಕ್ಕ ಒಳ್ಳೆಯ ಸ್ಥಳಗಳೂ ಇರಬಹುದು ಎಂಬುದನ್ನು ನಾನಿಲ್ಲಿ ತಳ್ಳಿಹಾಕುತ್ತಿಲ್ಲ. ಆಫ್ರಿಕಾದ ಬಡತನವನ್ನೋ, ಆರ್ಥಿಕತೆಯನ್ನೋ ವ್ಯಂಗ್ಯಕ್ಕೀಡು ಮಾಡುವ ಯಾವ ಆಸಕ್ತಿಯೂ ನನಗಿಲ್ಲ. ದಕ್ಷಿಣ ಸುಡಾನ್ ಗೆ ಹೋಗಿ ಚಿತ್ರಗಳನ್ನು ಕ್ಲಿಕ್ಕಿಸಿದಾತ ಅಚ್ಚರಿಯಿಂದ ಆ ದೃಶ್ಯಗಳನ್ನು ಸೆರೆಹಿಡಿದಿದ್ದನೇ ಹೊರತು ಅವುಗಳನ್ನಿಟ್ಟುಕೊಂಡು ಆಫ್ರಿಕನ್ನರ ಮರ್ಯಾದೆ ಹರಾಜು ಹಾಕುತ್ತೇನೆಂಬ ಯಾವ ಉದ್ದೇಶಗಳೂ ಆತನಿಗಿರಲಿಲ್ಲ. ಆಫ್ರಿಕಾದಲ್ಲೇ ಹಲವು ವರ್ಷಗಳ ಕಾಲ ಇದ್ದವರಿಗೆ ಇವೆಲ್ಲವೂ ಕೂಡ ಒಂದು ಸಂಗತಿಯೇ ಅಲ್ಲ ಎಂದೆನಿಸಬಹುದು. ಆದರೆ ಇತ್ತೀಚೆಗಷ್ಟೇ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಿಂದ ಪದವೀಧರನಾಗಿ ಹೊರಬಿದ್ದ, ಆಫ್ರಿಕಾವನ್ನು ಪಠ್ಯಪುಸ್ತಕ ಅಥವಾ ಜಾಗತಿಕ ಮಾಧ್ಯಮಗಳಲ್ಲಷ್ಟೇ ಒಂದಿಷ್ಟು ಕಂಡು ಅರ್ಥೈಸಿಕೊಂಡಿದ್ದ ತರುಣನೊಬ್ಬನಿಗೆ ಇವೆಲ್ಲಾ ಅಚ್ಚರಿಯ ಸಂಗತಿಗಳೇ.

“ಮೊಟ್ಟಮೊದಲು ನಾನು ನ್ಯೂಯಾರ್ಕ್ ಗೆ ಹೋಗಿದ್ದಾಗ ಅಲ್ಲಿಯ ಅಗಾಧತೆಯನ್ನು ಕಂಡು ಬೆಚ್ಚಿಬಿದ್ದಿದ್ದೆ. ನ್ಯೂಯಾರ್ಕಿನಲ್ಲಿ ಎಲ್ಲವೂ ನಿಜಕ್ಕೂ ರಾಕ್ಷಸ ಗಾತ್ರದಲ್ಲಿದ್ದವು. ದೈತ್ಯ ಗಗನಚುಂಬಿ ಕಟ್ಟಡಗಳು, ವಿಶಾಲವಾದ ರಸ್ತೆಗಳು, ಅಪಾರ ಜನಸಂದಣಿ… ಹೀಗೆ ನ್ಯೂಯಾರ್ಕಿನ ಮೊದಲ ಪ್ರಯಾಣದ ಆ ಅನುಭವವು ನನ್ನಲ್ಲಿ ಅಚ್ಚರಿಯನ್ನೂ, ಸಣ್ಣ ಭಯವನ್ನೂ ಒಟ್ಟೊಟ್ಟಿಗೆ ಮೂಡಿಸಿದ್ದವು”, ಎಂದು ನಟ ಶಾರೂಖ್ ಖಾನ್ ತಮ್ಮ ಸಾಕ್ಷ್ಯಚಿತ್ರದ ಸಂದರ್ಶನವೊಂದರಲ್ಲಿ ಹೇಳುತ್ತಾರೆ. ಅಚ್ಚರಿಗಳೆಂದರೆ ಹಾಗೆಯೇ. ಅದು ಯಾವ ರೂಪದಲ್ಲೂ ಪ್ರತ್ಯಕ್ಷವಾಗಬಹುದು. ಲಾಸ್ ವೇಗಾಸ್ ನ ಐಷಾರಾಮಿ ಕಸಿನೋಗಳಲ್ಲಾದರೂ ಸರಿ. ಸೊಮಾಲಿಯನ್ ಕುಗ್ರಾಮವೊಂದರ ಗುಡಿಸಲಿನಲ್ಲಾದರೂ ಸರಿ!

ಒಂದು ಪ್ರವಾಸವೆಂದರೆ ಇಷ್ಟೆಲ್ಲಾ ತಯಾರಿಗಳನ್ನು ಮಾಡುವ ಅವಶ್ಯಕತೆಯಿದೆಯೇ ಎಂಬುದು ಹಲವರ ಪ್ರಶ್ನೆಯಾಗಿರಬಹುದು. ಒಂದಿಷ್ಟು ತಯಾರಿಗಳಾದರೂ ಇರಲೇಬೇಕು ಎಂಬುದು ನನ್ನ ಅನಿಸಿಕೆ. ನಾನು ಈವರೆಗೆ ಕೈಗೊಂಡ ಬೆರಳೆಣಿಕೆಯ ಪ್ರವಾಸಗಳಲ್ಲಿ ತೊಂಭತ್ತೊಂಭತ್ತು ಪ್ರತಿಶತ ಪ್ರವಾಸಗಳನ್ನು ಏಕಾಂಗಿಯಾಗಿಯೇ ಹೊರಟಿದ್ದರಿಂದಲೇ ಏನೋ ಇಂತಹ ತಯಾರಿಗಳು ವೈಯಕ್ತಿಕ ನೆಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದ್ದವು. ಏಕೆಂದರೆ ನೀವು ಏಕಾಂಗಿಯಾಗಿ ಪ್ರವಾಸ ಮಾಡುವವರಾದರೆ ನಿಮಗೆ ಮೈಮರೆಯುವ ವಿಲಾಸಗಳಿರುವುದಿಲ್ಲ. ಮೈಯೆಲ್ಲಾ ಕಣ್ಣಾಗಿ ಸದಾ `ಹೈ ಅಲರ್ಟ್’ ಸ್ಥಿತಿಯಲ್ಲಿರಬೇಕಾಗಿರುತ್ತದೆ. ಮೇಲಾಗಿ ಆಡಳಿತ ಭಾಷೆ, ಆಡು ಭಾಷೆ, ಸಂಸ್ಕøತಿ… ಹೀಗೆ ಬಹಳಷ್ಟು ಅಂಶಗಳು ವಿಭಿನ್ನವಾಗಿರುವ ದೇಶಕ್ಕೆ ದೀರ್ಘಾವಧಿಗೆ ಹೋಗುವುದೆಂದರೆ ತಕ್ಕಮಟ್ಟಿನ ತಯಾರಿಯನ್ನಾದರೂ ಪ್ರಯಾಣವು ಬೇಡುತ್ತದೆ. ರೋಮ್ ಗೆ ಹೋದಾಗ ರೋಮನ್ನರಂತಿರಬೇಕು ಎಂಬ ಸೂಕ್ತಿಯು ಇರುವಾಗ ಅಂಗೋಲಾಕ್ಕೆ ಹೋದಾಗ ಅಂಗೋಲನ್ನರಂತಿರಬೇಕು ಎಂಬ ವಾದದಲ್ಲೂ ಹುರುಳಿದೆಯಲ್ಲವೇ?

2011 ರಲ್ಲಿ ನಡೆದ ಬ್ರಿಟಿಷ್ ರಾಜಕುಮಾರ ವಿಲಿಯಮ್ ಮತ್ತು ಕೇಟ್ ಜೋಡಿಯ ವಿವಾಹ ಸಮಾರಂಭದಲ್ಲಿ ಬಂದಿದ್ದ ಅತಿಥಿಗಳೆಲ್ಲರಿಗೂ (ಸೆಲೆಬ್ರಿಟಿ ಅತಿಥಿಗಳನ್ನು ಸೇರಿಸಿ) ಒಂದು ಗೈಡ್ ಪುಸ್ತಕವನ್ನು ಕೊಡಲಾಗಿತ್ತು. ಇಡೀ ಜಗತ್ತೇ ಎದುರು ನೋಡುತ್ತಿರುವ ವಿವಾಹ ಸಮಾರಂಭದಲ್ಲಿ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬಾರದು ಎಂಬುದರಿಂದ ಟೀ ಕಪ್ಪನ್ನು ಹೇಗೆ ಹಿಡಿದುಕೊಳ್ಳಬೇಕು ಎಂಬುದರವರೆಗೂ ಅದರಲ್ಲಿ ನಿಯಮಗಳ ಪಟ್ಟಿಯೇ ಇದ್ದವಂತೆ. ಬ್ರಿಟಿಷ್ ರಾಜಮನೆತನದ ಸಮಾರಂಭವೊಂದರಲ್ಲಿ ನೀವು ಭಾಗವಹಿಸುವುದಾದರೆ ಅಲ್ಲಿಯ ಸಂಸ್ಕøತಿಯನ್ನೂ ಕೂಡ ಮೊದಲು ಅರ್ಥಮಾಡಿಕೊಳ್ಳುವುದು ಮತ್ತು ಪಾಲಿಸುವುದು ಕಡ್ಡಾಯ. ನನ್ನ ಅಂಗೋಲಾ ಪ್ರವಾಸದಲ್ಲಿ ಅಷ್ಟೆಲ್ಲಾ ಡ್ರಾಮಾಗಳು ಇರದಿದ್ದರೂ ದೀರ್ಘಾವಧಿಯ ಪ್ರಯಾಣವಾಗಿರುವುದರಿಂದ ತಕ್ಕಮಟ್ಟಿನ ತಯಾರಿಯನ್ನಂತೂ ಮಾಡಿಕೊಂಡೆವು ಎಂದು ಹೇಳಲೇಬೇಕು. ಆದರೆ ನನ್ನ ತಯಾರಿಗಳು ಮುಂದೆ ಯಾವುದಕ್ಕೂ ಸಾಲಲಿಲ್ಲ ಅನ್ನುವುದು ಮಾತ್ರ ಬೇರೆ ಮಾತು. ಅದು ಅರಿವಾಗುವ ಹೊತ್ತಿಗೆ ಮಾತ್ರ ನಾನು ಅಂಗೋಲಾದ ನೆಲದಲ್ಲಿದ್ದೆ.

ವೈಮಾನಿಕ ಪ್ರಯಾಣಗಳನ್ನು ಈ ಮೊದಲು ಕೈಗೊಂಡಿದ್ದರೂ ಮೊದಲ ವಿದೇಶ ಪ್ರಯಾಣವಾದ ಪರಿಣಾಮವಾಗಿ ಉತ್ಸಾಹವೂ, ನಿರೀಕ್ಷೆಗಳೂ ಹೆಚ್ಚೇ ಇದ್ದವು ಎಂಬುದನ್ನು ಹೇಳಲೇಬೇಕು. ಆದರೆ ಈ ಪ್ರಯಾಣದಲ್ಲಿ ನನ್ನೊಂದಿಗೆ ಚಂಡೀಗಢ ಮೂಲದ ಹಿರಿಯ ಸಹೋದ್ಯೋಗಿಯೊಬ್ಬರೂ ಇದ್ದುದರಿಂದಾಗಿ ಕೊಂಚ ನಿರಾಳತೆಯೂ ಇತ್ತು. ಚಂಡೀಗಢದ ಇಲಾಖೆಯೊಂದರಲ್ಲಿ ಮುಖ್ಯಸ್ಥರಾಗಿ ಸುಮಾರು ಮೂವತ್ತು ಚಿಲ್ಲರೆ ವರ್ಷಗಳಷ್ಟು ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಸದ್ಯ ಅಂಗೋಲಾ ಪ್ರಾಜೆಕ್ಟ್ ಗೆಂದು ನನ್ನೊಂದಿಗೆ ನಿಯುಕ್ತಿಗೊಂಡ ಹಿರಿಯ ಅಧಿಕಾರಿಗಳು ಅವರು.

ನಾನು ಮನೆಯಿಂದ ಬ್ಯಾಗಿನ ತುಂಬಾ ಪುಸ್ತಕಗಳನ್ನು ಹೊತ್ತುಕೊಂಡು ಬಂದಿದ್ದರೆ ಇವರು ಬ್ಯಾಗಿನ ತುಂಬಾ ವಿವಿಧ ಬಗೆಯ ಬೇಳೆಗಳನ್ನು ಹೊತ್ತುಕೊಂಡು ಬಂದಿದ್ದರು. ನಂತರ “ಏನ್ರೀ ಇದು ನಿಮ್ಮದು ಇಷ್ಟೊಂದು ಗಂಟುಮೂಟೆ”, ಎಂದು ಅವರ ಗೊಣಗುವಿಕೆಯಿಂದಾಗಿ ಆಯ್ದ ಪುಸ್ತಕಗಳನ್ನಷ್ಟೇ ಜೊತೆಯಲ್ಲಿಟ್ಟುಕೊಂಡು ಉಳಿದ ಪುಸ್ತಕಗಳನ್ನು ದೆಹಲಿಯಲ್ಲೇ ಬಿಟ್ಟುಬರಬೇಕಾಯಿತು. ಇರಲಿ, ಅಂಗೋಲಾದಲ್ಲೇ ಪುಸ್ತಕಗಳನ್ನು ಖರೀದಿಸೋಣವಂತೆ ಎಂದು ಲೆಕ್ಕಹಾಕಿದ ನಾನು ಒಲ್ಲದ ಮನಸ್ಸಿನಿಂದಲೇ ಪುಸ್ತಕಗಳನ್ನು ದೆಹಲಿಯ ಮಿತ್ರನೊಬ್ಬನ ಕೈಗಿಟ್ಟು “ಜೋಪಾನ ಮಾರಾಯ, ನನ್ನ ಫಿಕ್ಸೆಡ್ ಡಿಪಾಸಿಟ್ ಇದು” ಎನ್ನುತ್ತಾ ಹಸ್ತಾಂತರಿಸಿದ್ದೆ.

ನಮ್ಮ ಇಡೀ ಆಫೀಸಿನಲ್ಲಿ ಆಫೀಸಿನ ವಿಳಾಸಕ್ಕೆ ಕೊರಿಯರ್ ಮುಖಾಂತರವಾಗಿ ಪುಸ್ತಕಗಳು ಬರುತ್ತಿದ್ದರೆ ಅದು ನನಗೆ ಮಾತ್ರ. ಈ ಬಗ್ಗೆ ಎಲ್ಲರೂ ನನ್ನ ಕಾಲೆಳೆಯುವುದೂ ಕೂಡ ಸಾಮಾನ್ಯವಾಗಿತ್ತು. ಒಬ್ಬರಂತೂ “ಈತ ನಿವೃತ್ತಿಯ ದಿನಗಳ ಟೈಂಪಾಸ್ ಗಾಗಿ ಇಂದಿನಿಂದಲೇ ಇನ್ವೆಸ್ಟ್ ಮಾಡತೊಡಗಿದ್ದಾನೆ” ಎಂದು ಹೇಳುತ್ತಾ ಎಲ್ಲರನ್ನೂ ನಗಿಸುತ್ತಿದ್ದರು. ಇನ್ನು ದೇಶ ಬಿಟ್ಟು ಹೊರಡುವ ದಿನದ `ಪುಸ್ತಕ ಹಸ್ತಾಂತರ’ ಪ್ರಹಸನವಂತೂ ಇದನ್ನು ಮತ್ತೊಮ್ಮೆ ಟಾಂಟಾಂ ಮಾಡಿತು.

ಅಂತೂ ನಮ್ಮಿಬ್ಬರ `ಬಡೇ ಮಿಯಾ ಛೋಟೇ ಮಿಯಾ’ ಜೋಡಿಯು ಅಂಗೋಲಾಕ್ಕೆ ತೆರಳುವ ದಿನವು ಬಂದೇಬಿಟ್ಟಿತ್ತು.

‍ಲೇಖಕರು avadhi

September 20, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

8 ಪ್ರತಿಕ್ರಿಯೆಗಳು

  1. Rekha M S

    ಕುತೂಹಲಕಾರಿ ಹಾಗೂ ಆಸಕ್ತಿಯ ಲೇಖನ ….ಬೇಗನೆ ಬರೆಯಿರಿ ..ಕಾಯಿಸಬೇಡಿ

    ಪ್ರತಿಕ್ರಿಯೆ
    • Prasad

      ಧನ್ಯವಾದಗಳು ರೇಖಾರವರೇ… ಪ್ರತೀ ವಾರ ಲೇಖನದ ರೂಪದಲ್ಲಿ ನಿಮ್ಮ ಮುಂದೆ… 🙂

      ಪ್ರತಿಕ್ರಿಯೆ
  2. ಕೆ.ಗಣೇಶಕೋಡೂರು

    ಎಂದಿನಂತೆ ಪ್ರಸಾದ್ ಅವರ ಆತ್ಮೀಯ ಶೈಲಿಯ ಚೆಂದದ ಬರಹ… ಮುಂದಿನ ಭಾಗವನ್ನು ಓದುವ ಕುತೂಹಲ ಹೆಚ್ಚಿಸುವಂತಿದೆ

    ಪ್ರತಿಕ್ರಿಯೆ
    • Prasad

      ನಿಮ್ಮ ಪ್ರೋತ್ಸಾಹದ ಮಾತಿಗೆ ಧನ್ಯವಾದಗಳು ಆತ್ಮೀಯರಾದ ಗಣೇಶ್ ಸರ್…

      ಪ್ರತಿಕ್ರಿಯೆ
  3. ಭಾರತಿ ಬಿ ವಿ

    ತುಂಬ ಚೆನ್ನಾಗಿದೆ ಪ್ರಸಾದ್
    ಮುಂದಿನ ಕಂತುಗಳಿಗೆ ಕಾಯುತ್ತಿರುವೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: