ಜೋಗಿ ಕೇಳ್ತಾರೆ: ಸಿಟಿಲೈಫಿಗಿಂತ ದೊಡ್ಡ ಬ್ಲೂವೇಲ್ ಆಟ ಮತ್ತೊಂದಿದೆಯಾ!

ಜೋಗಿ ಅವರ ‘ಉಳಿದ ವಿವರಗಳು ಲಭ್ಯವಿಲ್ಲ’ ಕಥಾ ಸಂಕಲನ ಸಧ್ಯದಲ್ಲೇ ಬಿಡುಗಡೆಯಾಗಲಿದೆ.

ಈ ಕೃತಿಗೆ ಮುನ್ನುಡಿಯಾಗಿ ಜೋಗಿ ಆಡಿರುವ ಮಾತು ಇಲ್ಲಿದೆ-

ಬೆಂಗಳೂರು ಕಥಾ ಸರಣಿಯ ಸ್ವತಂತ್ರ ಕೃತಿಗಳ ಪೈಕಿ ಇದು ಮೂರನೆಯದು. ಮೊದಲನೆಯದು ಬೆಂಗಳೂರು ಕಾದಂಬರಿ, ಎರಡನೆಯದು ಅನುಭವ ಕಥನ- ಬಿ ಕ್ಯಾಪಿಟಲ್. ಈಗ ಈ ಮೂರನೆಯ ನಗರ ಕಥನ, ‘ಉಳಿದ ವಿವರಗಳು ಲಭ್ಯವಿಲ್ಲ’

ಬೆಂಗಳೂರು ಹೇಗಿದೆ ಅಂತ ಮೂವತ್ತು ವರ್ಷಗಳಿಂದ ಬೆಂಗಳೂರಲ್ಲಿಯೇ ಇರುವ ಮಿತ್ರರೊಬ್ಬರ ಹತ್ತಿರ ಕೇಳಿದೆ. ಅವರು ಥಟ್ಟನೆ ಈ ಲೈಫಿನ ಹಾಗೆಯೇ ಇದೆ ಅಂದರು. ಈ ಲೈಫು ನನ್ನ ಆಯ್ಕೆಯಾಗಿರಲಿಲ್ಲ. ನಮ್ಮಪ್ಪ ಅಮ್ಮ ಹುಟ್ಟಿಸಿದರು. ನಾನಿದನ್ನು ಬಯಸಿರಲಿಲ್ಲ. ಆದರೆ ಒಮ್ಮೆ ಇದು ನನ್ನದಾದ ಮೇಲೆ. ಇದು ನನ್ನದು ಅನ್ನುವ ಹೆಮ್ಮೆ, ಹಮ್ಮು ಎರಡೂ ನನ್ನನ್ನು ಸುತ್ತಿಕೊಂಡಿದೆ. ನಾನಿದನ್ನು ಈಗ ನಿರಾಕರಿಸಲಾರೆ. ಈಗಿದನ್ನು ನಾನು ತೊರೆಯಲಾರೆ. ಬೆಂಗಳೂರು ಕೂಡ ಹಾಗೆಯೇ ಅಂತ ಕೊಂಚ ರೂಪಕದಲ್ಲಿ ಮಾತಾಡಿದರು.

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಅನ್ನುವ ಭಾವನೆಯನ್ನು ಬೆಂಗಳೂರಿನ ಬಗ್ಗೆ ಅನೇಕರು ವ್ಯಕ್ತಪಡಿಸುತ್ತಾರೆ. ಬೆಂಗಳೂರಲ್ಲಿ ಏನು ಮಾಡುತ್ತೀರಿ ಅಂತ ಯಾರನ್ನಾದರೂ ಕೇಳಿದರೆ ಅವರು ಗಲಿಬಿಲಿಗೊಳ್ಳುತ್ತಾರೆ. ಇಲ್ಲಿ ನಾವೇನು ಮಾಡುತ್ತಿದ್ದೇವೆ ಎಂದು ಯೋಚಿಸಲು ಶುರುಮಾಡಿದರೆ ತಲೆಕೆಡುತ್ತದೆ. ನಾವು ದುಡಿಯುತ್ತೇವೆ. ತಿನ್ನುತ್ತೇವೆ. ಖರ್ಚು ಮಾಡುತ್ತೇವೆ, ಮತ್ತೆ ದುಡಿಯುತ್ತೇವೆ, ಖರ್ಚು ಮಾಡಲಾಗದಷ್ಟನ್ನು ದುಡಿಯಲು ನೋಡುತ್ತೇವೆ. ಇದನ್ನೇ ಜೀವನ ಅಂದುಕೊಳ್ಳುತ್ತೇವೆ.

ಮಹಾನಗರಗಳಿಗೆ ಒಂದು ವಿಚಿತ್ರವಾದ ಚಾಳಿಯಿದೆ. ಅದು ಮನುಷ್ಯನನ್ನು ದುಡಿಯಲು ಹಚ್ಚುತ್ತದೆ. ಹೆಚ್ಚು ಹೆಚ್ಚು ದುಡಿಯಲು ಪ್ರೇರೇಪಿಸುತ್ತದೆ. ಹೆಚ್ಚು ಹೆಚ್ಚು ದುಡಿಮೆ ಮಾಡಿದವನಿಗೆ ಹೆಚ್ಚು ಹೆಚ್ಚು ದುಡ್ಡು ಕೊಡುತ್ತದೆ. ಹಾಗೆ ಕೊಟ್ಟ ಹೆಚ್ಚುವರಿ ದುಡ್ಡನ್ನು ಅದು ಅತಿ ವಿನಯದಿಂದ ವಾಪಸ್ಸು ತೆಗೆದುಕೊಳ್ಳುತ್ತದೆ.

ನಾನು ಬೆಂಗಳೂರಿಗೆ ಇಪ್ಪತ್ತೆಂಟು ವರ್ಷಗಳ ಹಿಂದೆ ಕಾಲಿಟ್ಟಾಗ ಒಂದು ಮಧ್ಯಮ ವರ್ಗದ ಕುಟುಂಬದ ಸರಾಸರಿ ಆದಾಯ ತಿಂಗಳಿಗೆ ಏಳು ಸಾವಿರ ಇತ್ತು. ಆಗ ಎಪ್ಪತ್ತು ಸಾವಿರಕ್ಕೆ ಒಂದು ಸೈಟು ಸಿಗುತ್ತಿತ್ತು. ಮತ್ತೊಂದು ಎಪ್ಪತ್ತು ಸಾವಿರ ಖರ್ಚು ಮಾಡಿದರೆ ಒಂದು ಮನೆ ಕಟ್ಟಿಸಿಕೊಳ್ಳಬಹುದಿತ್ತು. ಏಳು ಸಾವಿರ ಸಂಬಳ ಇದ್ದರೆ ಮಗಳ ಮದುವೆ ಮಾಡಲು, ಬಂಗಾರ ಕೊಳ್ಳಲು ಹಣ ಉಳಿಸಬಹುದಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರಿಗೂ ಪ್ರತಿಯೊಂದು ವಸ್ತುವಿನ ಬೆಲೆ ಮತ್ತು ಮೌಲ್ಯ ಗೊತ್ತಿತ್ತು. ಯಾರೂ ಕೂಡ ಒಂದು ಶರಟಿಗೆ ಐದು ಸಾವಿರ ಕೊಡುತ್ತಿರಲಿಲ್ಲ. ಒಂದು ಕಾರಿಗೆ ಎಪ್ಪತ್ತು ಲಕ್ಷ ಖರ್ಚು ಮಾಡುತ್ತಿರಲಿಲ್ಲ. ಒಂದು ಮನೆಗೆ ಒಂದು ಕೋಟಿ ವೆಚ್ಚ ಮಾಡುತ್ತಿರಲಿಲ್ಲ. ಅಷ್ಟೊಂದು ಖರ್ಚು ಮಾಡುವ ಬೆರಳೆಣಿಕೆಯ ಕೆಲವರು ಸೂಪರ್ ರಿಚ್ ಅನ್ನಿಸಿಕೊಳ್ಳುತ್ತಿದ್ದರು. ಅವರನ್ನು ಮಿಕ್ಕವರು ಅಸೂಯೆಯಿಂದ ನೋಡುತ್ತಿರಲಿಲ್ಲ. ಅವರಂತಾಗಬೇಕು ಎಂದು ಯಾವತ್ತೂ ಬಯಸುತ್ತಿರಲಿಲ್ಲ.

ಆದರೆ ಇವತ್ತು ಒಂದು ಅಪಾರ್ಟ್ ಮೆಂಟಿನ ಬೆಲೆ ನಾಲ್ಕು ಕೋಟಿ ಅಂದರೆ ಯಾರಿಗೂ ಆಶ್ಚರ್ಯವಾಗುವುದಿಲ್ಲ.  ಆ ನಾಲ್ಕುಕೋಟಿಯನ್ನು ಹೇಗೆ ಹೊಂದಿಸುವುದು ಎಂದು ಲೆಕ್ಕಾಚಾರ ಶುರುಮಾಡುತ್ತೇವೆ. ಎಪ್ಪತ್ತು ಲಕ್ಷ ರುಪಾಯಿಯ ಕಾರು ಬಂದಿದೆ ಅಂದಾಗ ತಿಂಗಳ ಕಂತು ಎಷ್ಟು ಬರುತ್ತದೆ ಅಂತ ಲೆಕ್ಕಾಚಾರ ಹಾಕುತ್ತೇವೆ. ಮನೆಯ ತಿಂಗಳ ರೇಷನ್ ಬಿಲ್ಲನ್ನು ಹೊಟೇಲಿನ ಒಂದು ಊಟಕ್ಕೆ ಖರ್ಚು ಮಾಡುತ್ತೇವೆ. ಸಾವಿರ ರುಪಾಯಿಯಲ್ಲಿ ಮುಗಿಯುತ್ತಿದ್ದ ಎಲ್ಕೇಜಿ ಮಗುವಿನ ಶಿಕ್ಷಣಕ್ಕೆ ಒಂದು ಲಕ್ಷ ಫೀಸು ಕೊಡುತ್ತೇವೆ. ಚಿಕ್ಕನಾಯಕನ ಹಳ್ಳಿಯಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗಲು ಪುರುಸೊತ್ತಿಲ್ಲ ಅಂತ ಹೇಳುವವರು, ಆರು ಲಕ್ಷ ರುಪಾಯಿ, ಏಳು ಹಗಲು ಏಳು ರಾತ್ರಿ ಖರ್ಚು ಮಾಡಿ Schengen visa ಕೈಲಿ ಹಿಡಕೊಂಡು ಅರ್ಧ ಯುರೋಪು ಸುತ್ತಿ ಬರುತ್ತೇವೆ. ರಸ್ತೆಯಲ್ಲಿ ಸೀಮೆಬದನೆ ಮಾರಿಕೊಂಡು ಬರುವ ಹೆಂಗಸಿನ ಹತ್ತಿರ ಅರ್ಧಗಂಟೆ ಚೌಕಾಸಿ ಮಾಡುತ್ತೇವೆ, ಐಬ್ಯಾಕೋ ಐಸ್ಕ್ರೀಮಿಗೆ ಇನ್ನೂರು ರುಪಾಯಿ ಕೊಡುತ್ತೇವೆ. ಮಕ್ಕಳಿಗೆ ಪಾಠ ಹೇಳಿಕೊಡಲು ಪುರುಸೊತ್ತಿಲ್ಲ ಅಂತ ಗೊಣಗಾಡಿ, ಅವರನ್ನು ಟ್ಯೂಷನ್ನಿಗೆ ಕಳಿಸುತ್ತೇವೆ. ಟ್ಯೂಷನ್ ಮನೆಯ ಹೊರಗಡೆ ಕಾರಲ್ಲಿ ನಾವು ಫೇಸ್ ಬುಕ್ ನೋಡುತ್ತಾ, ವಾಟ್ಸ್ಯಾಪ್ ಮಾಡುತ್ತಾ ಕೂತಿರುತ್ತೇವೆ.

ಈ ಹೆಚ್ಚು ದುಡಿಯುವ ಹೆಚ್ಚು ಖರ್ಚು ಮಾಡುವ ಆಧುನಿಕ ಜೀವನ ವಿನ್ಯಾಸದಲ್ಲಿ ನಾವು ನಮ್ಮನ್ನೇ ಬಲಿಕೊಟ್ಟುಕೊಳ್ಳುತ್ತಿದ್ದೇವೆ  ಅನ್ನಿಸುತ್ತದೆ. ಈ ನಗರದ ಜೀವನದೇ ಒಂದು ಅರ್ಥದಲ್ಲಿ ಬ್ಲೂವೇಲ್ ಆಟದಂತೆ ರೂಪಿತವಾದಂತಿದೆ. ಇಲ್ಲಿ ಯಾರೋ ಟಾಸ್ಕ್ ಕೊಡುತ್ತಾರೆ. ಅವರು ಕೊಡುವ ಟಾಸ್ಕುಗಳನ್ನು ಪೂರ್ತಿಮಾಡಲು ನಾವು ಹೆಣಗಾಡುತ್ತೇವೆ. ಇಪ್ಪತ್ತು ನಿಮಿಷದಲ್ಲಿ ಎಂಟು ಕಿಲೋಮೀಟರ್ ದೂರದಲ್ಲಿರುವ ಮನೆಗೆ ಫಿಜ್ಜಾ ಕೊಟ್ಟು ಬರುವ ಟಾಸ್ಕು, ಎರಡೇ ವಾರದಲ್ಲಿ ಚಾನಲ್ಲಿನ ಟಿಆರ್‌ಪಿಯನ್ನು ಎರಡರಷ್ಟು ಮಾಡುವ ಟಾಸ್ಕು, ರಾತ್ರಿ ಸಂದಿಗೊಂದಿಗಳಲ್ಲಿ ಅಡಗಿ ನಿಂತು ಕುಡುಕರನ್ನು ಹಿಡಿದು ಸರ್ಕಾರದ ಆದಾಯ ಹೆಚ್ಚಿಸುವ ಟಾಸ್ಕು, ಮಕ್ಕಳನ್ನು ನಂಬರ್ ವನ್ ಮಾಡುವ ಟಾಸ್ಕು, ಹಗಲಿಡೀ ದುಡಿದು, ರಾತ್ರಿ ಕುಡಿದು, ಮನೆಗೆ ಬಂದು ಆಮೇಲೊಂದು ಸಿನಿಮಾ ನೋಡಿ, ನಿದ್ದೆಗಣ್ಣಲ್ಲಿ ಪ್ರವಾಸ ಮಾಡಿ- ತುಂಬು ಜೀವನ ಜೀವಿಸುತ್ತಿದ್ದೇನೆ ಎಂದು ಸಾಬೀತು ಮಾಡುವ ಟಾಸ್ಕು, ಕೊನೆಗೆ ನಮ್ಮನ್ನು ನಾವೇ ನಮಗೇ ಗೊತ್ತಿಲ್ಲದ ಹಾಗೆ ಕೊಂದುಕೊಳ್ಳುವ ಕೊನೆಯ ಟಾಸ್ಕು.

ಇಂಥದ್ದರ ನಡುವೆಯೇ ಒಂದು ಪವಾಡದಂತೆ ಇನ್ನೊಂದೇನೋ ನಡೆಯುತ್ತದೆ. ಯಾರೋ ಬರೆದ ಕತೆಯನ್ನು ಮತ್ಯಾರೋ ಓದಿ ಕಣ್ಣೊದ್ದೆ ಮಾಡಿಕೊಳ್ಳುತ್ತಾರೆ. ಈ ಧಾವಂತದಲ್ಲಿ ನಾನಿಲ್ಲ ಅಂತ ಒಂದಷ್ಟು ಮಂದಿ ತಮ್ಮ ಪಾಡಿಗೆ ಸುಖವಾಗಿದ್ದಾರೆ. ದೇವಸ್ಥಾನದ ಕಟ್ಟೆಗಳು, ಜಯನಗರದ ಪಾರ್ಕುಗಳು, ಟೀ ಅಂಗಡಿಯ ಜಗಲಿಗಳು, ಸೋಮಾರಿತನದ ಅಡ್ಡೆಗಳು ಜೀವಂತವಾಗಿವೆ. ಯಾರೋ ಎಲ್ಲೋ ಕೂತುಕೊಂಡು ಈ ದಾಂಗುಡಿಯಿಡುವ ಜಗತ್ತಿನ ಹುಚ್ಚು ಹಂಬಲದಿಂದ ದೂರವಿದ್ದುಕೊಂಡು ಕುಮಾರವ್ಯಾಸನನ್ನು ಓದಿ ಸುಖವಾಗಿರುತ್ತಾರೆ.

ಆಲ್ಬರ್ಟ್ ಕಮೂ ಬರೆದ ಮಿಥ್ ಆಫ್ ಸಿಸಿಫಸ್ ಎಂಬ ಪ್ರಬಂಧ ನೆನಪಾಗುತ್ತಿದೆ.  ದೇವರುಗಳ ಶಾಪಕ್ಕೆ ಒಳಗಾದ ಸಿಸಿಫಸ್ ಎಂಬಾತನಿಗೆ ಕೊಟ್ಟ ಶಿಕ್ಷೆ ಸ ತುಂಬ ಸರಳವಾಗಿತ್ತು. ಆತ ಒಂದು ಉರುಟಾದ ಕಲ್ಲನ್ನು ಉರುಳಿಸಿಕೊಂಡು ಹೋಗಿ ಬೆಟ್ಟದ ತುದಿಯೊಂದರಲ್ಲಿ ಇಟ್ಟುಬರಬೇಕಾಗಿತ್ತು. ಯಾವಾಗ ಆತ ಆ ಕಲ್ಲನ್ನು ಬೆಟ್ಟದ ತುದಿಯಲ್ಲಿಟ್ಟು ಬರುತ್ತಾನೋ ಅಲ್ಲಿಗೆ ಅವನ ಶಿಕ್ಷೆ ಮುಗಿದಂತೆ. ಆತ ಆ ಕಲ್ಲನ್ನು ಕಷ್ಟಪಟ್ಟು ಉರುಳಿಸಿಕೊಂಡು ಹೋಗಿ ಬೆಟ್ಟದ ತುದಿಯಲ್ಲಿಟ್ಟು ಕೈ ಬಿಡುತ್ತಿದ್ದಂತೆ ಆ ಕಲ್ಲು ಮತ್ತೆ ಉರುಳಿಕೊಂಡು ಬೆಟ್ಟದ ಬುಡಕ್ಕೆ ಬಂದುಬಿಡುತ್ತಿತ್ತು. ಸಿಸಿಫಸ್ ಮತ್ತೆ ಅದನ್ನು ಬೆಟ್ಟದ ತುದಿಗೆ ಉರುಳಿಸಿಕೊಂಡು ಹೋಗುತಿದ್ದ. ಇದು ಕೊನೆಯೇ ಇಲ್ಲದ ಶಿಕ್ಷೆ.

ನಾವು ಕೂಡ ಸಿಸಿಫಸ್ ಆಗಿದ್ದೇವಾ? ಬೆಟ್ಟದ ತುದಿಗೆ ಕಲ್ಲೊಂದನ್ನು ಉರುಳಿಸಿಕೊಂಡು ಹೋಗುತ್ತಲೇ ಇದ್ದೇವಾ?

ಗೊತ್ತಿಲ್ಲ.

-2-

ಇಲ್ಲಿರುವ ಕತೆಗಳನ್ನು ಎರಡು ಭಾಗ ಮಾಡಿದ್ದೇನೆ. ಮೊದಲನೆಯದು ಒಂದು ನೀಳ್ಗತೆಯೋ ಕಿರುಕಾದಂಬರಿಯೋ ದೊಡ್ಡ ಕತೆಯೋ- ಹೇಗೆ ಬೇಕಿದ್ದರೂ ಕರೆಯಬಹುದು . ಎರಡನೆಯ ಭಾಗದಲ್ಲಿ ಸಣ್ಣ ಕತೆಗಳಿವೆ.

ಈ ಕತೆಗಳನ್ನು ಪ್ರಕಟಿಸುತ್ತಿರುವ ಮಿತ್ರರಾದ ಪ್ರಕಾಶ್ ಕಂಬತ್ತಳಿ, ಪ್ರಭಾ ಕಂಬತ್ತಳ್ಳಿಯವರಿಗೆ ಕೃತಜ್ಞತೆ. ನನ್ನ ಅವರ ಸ್ನೇಹ ಸುದೀರ್ಘವಾದದ್ದು. ಅವರ ಪ್ರೀತಿಯೇ ಹಲವು ಪುಸ್ತಕಗಳ ಪ್ರಕಟಣೆಗೂ ಕಾರಣ. ಮುಖಪುಟ ರಚಿಸಿದ ಪ್ರದೀಪ್ ಬತ್ತೇರಿ, ನನ್ನ ಕತೆಗೆ ಸೂಕ್ತವಾದ ವರ್ಣರಂಜಿತ ಅಭಿವ್ಯಕ್ತಿಯನ್ನು ಕೊಟ್ಟಿದ್ದಾರೆ. ಇಲ್ಲಿಯ ಕತೆಗಳನ್ನು ಮೊದಲು ಓದಿದ ಜ್ಯೋತಿ, ಕೆಲವು ಭಾಗಗಳನ್ನು ಓದಿದ ನಾನೂ ಸದಸ್ಯನಾಗಿರುವ ಕಥಾಕೂಟದ ಸದಸ್ಯರು , ಈಗ ಓದುತ್ತಿರುವ ನೀವು, ಬೆನ್ನುಡಿ ಬರೆದು ಹಾರೈಸಿದ ಗೆಳೆಯ ಹರೀಶ್ ಕೇರ – ಎಲ್ಲರಿಗೂ ಪ್ರೀತಿ.

‍ಲೇಖಕರು avadhi

September 19, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Manjula.Y

    ಬೆಂಗಳೂರೆಂಬ ಮರೀಚೀಕೆಯ ಬೆನ್ನು ಹತ್ತಿರುವವರಿಗೆ ಗೊತ್ತಿಲ್ಲ,ಬೆಂಗಳೂರಿನಲ್ಲೇ ಹುಟ್ಟಿಬೆಳೆದವರಿಗೂ ಅದು ಪೂರ್ಣವಾಗಿ ಸಿಕ್ಕಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: