ಹೊಸ ಗಾಳಿ ಬೀಸುವುದೇ?

ಮ ಶ್ರೀ ಮುರಳಿ ಕೃಷ್ಣ

ಕಳೆದ ಕೆಲವು ವರ್ಷಗಳಿಂದ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಬಲಪಂಥೀಯ ಪಕ್ಷಗಳು ಅಧಿಕಾರದ ಸ್ಥಾನದಲ್ಲಿ ವಿರಾಜಮಾನವಾಗುತ್ತ ಬಂದಿರುವುದನ್ನು ಕಾಣುತ್ತಿದ್ದೇವೆ.  ಅಮೆರಿಕ, ಟರ್ಕಿ, ಭಾರತ ಮುಂತಾದ ಅನೇಕ ದೇಶಗಳಲ್ಲಿ ಅವು ತಮ್ಮ ಅಜೆಂಡಾಗಳನ್ನು ಜಾರಿ ಮಾಡುತ್ತ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ವಿವಿಧ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು, ಜನರನ್ನು ಸೆಳೆಯಲು ಉಗ್ರ ರಾಷ್ಟ್ರೀಯತೆ, ಜನಾಂಗವಾದ, ವಲಸಿಗರು, ಅಲ್ಪಸಂಖ್ಯಾತರ ವಿರುದ್ಧದ ನಿಲುವುಗಳನ್ನು ತಳೆಯುತ್ತ ಬಂದಿವೆ.

ಇತ್ತೀಚೆಗೆ ನ್ಯೂಝಿಲ್ಯಾಂಡ್ ಮತ್ತು ಬೊಲೀವಿಯಾದಲ್ಲಿ ಸಾರ್ವತ್ರಿಕ ಚುನಾವಣೆ ಜರುಗಿತು. ಅವುಗಳ ಫಲಿತಾಂಶಗಳತ್ತ ಒಂದು ಪಕ್ಷಿನೋಟವನ್ನು ಬೀರೋಣ…

2017ರಲ್ಲಿ ಲೇಬರ್ ಪಕ್ಷದ ನಾಯಕಿ ಜಸಿಂದಾ ಆಡ್ರನ್, ಗ್ರೀನ್ ಪಕ್ಷ ಮತ್ತು ರಾಷ್ಟ್ರವಾದಿ ಫಷ್ಟ್ ಪಕ್ಷದ ಜೊತೆ ಸೇರಿ ಸರ್ಕಾರವನ್ನು ರಚಿಸಿದರು. ಕ್ರೈಸ್ಟ್‍ಚರ್ಚ್‍ನಲ್ಲಿ ಮಾರ್ಚಿ 2019ರಲ್ಲಿ ಎರಡು ಮಸೀದಿಗಳ ಮೇಲೆ ಉಗ್ರ ಬಲಪಂಥೀಯ ಭಯೋತ್ಪಾದಕರಿಂದ ಜರುಗಿದ ದಾಳಿಯಲ್ಲಿ 51 ಮಂದಿ ಹತರಾದರು.  ಜಸಿಂದಾ ಮುಸಲ್ಮಾನ ಅಲ್ಪಸಂಖ್ಯಾತರ ಭೀತಿ ಮತ್ತು ಆತಂಕಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದರು.

ಅವರು ತರುವಾಯ ಆಕ್ರಮಣಗಳಿಗೆ ಬಳಸಲ್ಪಡುವ ಆಯುಧಗಳನ್ನು ನಿಷೇಧಿಸುವ ವಿಧೇಯಕಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ವೈಟ್ ಐಲ್ಯಾಂಡ್ ಜ್ವಾಲಾಮುಖಿಯ ಆಸ್ಪೋಟ ಮತ್ತು ಕೋವಿಡ್ ವಿರುದ್ಧದ ಕ್ರಮಗಳನ್ನು ಸಮರ್ಥವಾಗಿ ನಿಭಾಯಿಸಿದರು. ನ್ಯೂಝಿಲ್ಯಾಂಡ್‍ನ  ಜನಸಂಖ್ಯೆ ಸುಮಾರು 50 ಲಕ್ಷ. ಇದುವರೆಗೆ ಅಲ್ಲಿ ಕೇವಲ 50 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆಂದು ವರದಿಯಾಗಿದೆ!

ಈ ಹಿನ್ನೆಲೆಯಲ್ಲಿ ಅವರು ಚುನಾವಣೆಯನ್ನು ಎದುರಿಸಿದರು. ಪ್ರಸ್ತುತ ನ್ಯೂಝಿಲ್ಯಾಂಡ್ ಅನುಪಾತ ಆಧಾರಿತ ಚುನಾವಣಾ ಪದ್ಧತಿಯನ್ನು (ಪ್ರಪೋರ್ಶನೇಟ್ ರೆಪ್ರೆಸಂಟೇಷನ್ ಸಿಸ್ಟಂ – ಅಂದರೆ ಶೇಕಡಾವಾರು ಮತಗಳ ಆಧಾರದ ಮೇಲೆ ಸೀಟುಗಳ ಪರಿಗಣನಾ ವ್ಯವಸ್ಥೆ) ಅನುಸರಿಸುತ್ತಿದೆ. ಅಲ್ಲಿ ಈ ವ್ಯವಸ್ಥೆ 1996ರಲ್ಲಿ ಜಾರಿಯಾಯಿತು. ಎಡಪಂಥದತ್ತ ವಾಲುವ ಆಕೆಯ ನಾಯಕತ್ವದ ಲೇಬರ್ ಪಕ್ಷ ಈ ಚುನಾವಣೆಯಲ್ಲಿ ಸುಮಾರು ಶೇ49.1ರಷ್ಟು ಮತಗಳನ್ನು ಗಳಿಸಿ, 64 ಸೀಟುಗಳನ್ನು ಪಡೆದಿದೆ. 

ಅಲ್ಲಿಯ ಸಂಸತ್‍ನಲ್ಲಿ 120 ಸ್ಥಾನಗಳಿವೆ.  ಕಳೆದ 50 ವರ್ಷಗಳಲ್ಲೇ, ಇದು ಲೇಬರ್ ಪಕ್ಷದ ಅತಿ ದೊಡ್ಡ ಚುನಾವಣೆಯ ಸಾಧನೆ ಎಂದು ರಾಜಕೀಯ ವಿಶ್ಲೇಷಕರು ಗುರುತಿಸುತ್ತಾರೆ.  ಆಕೆಯ ಸಾಮಾಜಿಕ ಉದಾರವಾದಿ, ಆರ್ಥಿಕವಾಗಿ ಎಲ್ಲರನ್ನೂ ಒಳಗೊಳ್ಳುವ ಪ್ರಜಾಸತ್ತಾತ್ಮಕ ನೀತಿಗಳು, ಕ್ಷಿಪ್ರವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಇತ್ಯಾದಿ ಪ್ರಶಂಸೆಗೆ ಪಾತ್ರವಾಗಿವೆ.

ಬಡತನದಿಂದಾಗಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಬವಣೆಗಳು, ಕೋವಿಡ್‍ನ ಕಾರಣದಿಂದ ಘೋಷಿಸಲ್ಪಟ್ಟ ಲಾಕ್ ಡೌನ್‍ಗಳು ಅಲ್ಲಿನ ಆರ್ಥಿಕತೆಯ ಮೇಲೆ ಬೀರಿರುವ ಪ್ರಹಾರಗಳು ಮುಂತಾದ ಸವಾಲುಗಳು ಆಕೆಯ ಎದುರಿಗಿವೆ.

ಲ್ಯಾಟಿನ್ ಅಮೆರಿಕಾದ ಬೊಲಿವಿಯಾದಲ್ಲಿ ಅಕ್ಟೋಬರ್ 18ರಂದು ಅಧ್ಯಕ್ಷೀಯ ಚುನಾವಣೆ ಜರುಗಿತು.  ಇದರಲ್ಲಿ ಮಾಜಿ ಅಧ್ಯಕ್ಷ ಇವೊ ಮೊರಾಲಿಸ್‍ರ ಮೂವ್‍ಮೆಂಟ್ ಟುವರ್ಡ್ಸ್ ಸೊಶಿಯಲಿಸಂ(ಎಂಎಎಸ್) ಅಭ್ಯರ್ಥಿ ಲೂಯಿಸ್ ಅರ್ಸೆ ಶೇ 55.1ರಷ್ಟು ಮತಗಳನ್ನು ಗಳಿಸಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.  ಅವರ ಮುಖ್ಯ ಪ್ರತಿಸ್ಪರ್ಧಿ ಸಿಟಿಝನ್ ಕಮ್ಯುನಿಟಿ ಪಕ್ಷದ ಕಾರ್ಲೋಸ್ ಮೆಸಾ ಶೇ 28.83ರಷ್ಟು ಮತಗಳನ್ನು ಪಡೆದಿದ್ದಾರೆ.  ಅಲ್ಲಿನ ಸಂಸತ್‍ನ ಕೆಳಮನೆಯಲ್ಲಿ ಎಂಎಎಸ್ ಪಕ್ಷಕ್ಕೆ 130 ಸೀಟುಗಳ ಪೈಕಿ 73 ಮತ್ತು ಸೆನೇಟ್‍ನಲ್ಲಿ 36 ಸೀಟುಗಳ ಪೈಕಿ 21 ಸೀಟುಗಳು ಲಭಿಸಿವೆ.  ಒಂದರ್ಥದಲ್ಲಿ, ಇದು ಅಲ್ಲಿನ ಮಾಜಿ ಅಧ್ಯಕ್ಷ ಇವೊ ಮೊರಾಲಿಸ್‍ರ ಜಯವೇ ಆಗಿದೆ.

ಬುಡಕಟ್ಟು ಜನಾಂಗವೊಂದಕ್ಕೆ ಸೇರಿದ ಇವೊ ಮೊರಾಲಿಸ್ 2006ರಿಂದ 2019ರವರೆಗೆ ಬೊಲಿವಿಯಾದ ಅಧ್ಯಕ್ಷರಾಗಿದ್ದರು.  ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸಮಾಜವಾದಿ ನೀತಿಗಳಡಿ  ಸಾರ್ವಜನಿಕ ಹೂಡಿಕೆಯನ್ನು ಅಧಿಕಗೊಳಿಸಿದರು.  ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳು ಮತ್ತು ಆರೋಗ್ಯ ಕೇಂದ್ರಗಳನ್ನು ತೆರೆದರು; ರಸ್ತೆಗಳನ್ನು ನಿರ್ಮಿಸಿದರು. 

ಮುಖ್ಯವಾಗಿ ತೈಲ ಮತ್ತು ಗ್ಯಾಸ್ ಉದ್ಯಮವನ್ನು ರಾಷ್ಟ್ರೀಕರಣದ ಪ್ರಕ್ರಿಯೆಗೆ ಒಳಪಡಿಸಿದರು.  ಈ ಕ್ರಮಗಳಿಂದ ದಕ್ಷಿಣ ಅಮೆರಿಕಾದ ಅತ್ಯಂತ ಬಡ ರಾಷ್ಟ್ರದ ಆರ್ಥಿಕತೆ ಸುಧಾರಿಸಿತು.  2006ರಲ್ಲಿ ಜನಸಂಖ್ಯೆಯ ಶೇ 33ರಷ್ಟು ಮಂದಿ ಅತ್ಯಂತ ಬಡತನದಲ್ಲಿದ್ದರು.  2018ರಲ್ಲಿ ಇಂತಹವರ ಸಂಖ್ಯೆ ಶೇ 15ಕ್ಕೆ ಇಳಿಯಿತು.  ಇವುಗಳೆಲ್ಲದರ ಫಲಶ್ರುತಿ: ಎಂಎಎಸ್ ಬಡವರ ನಡುವೆ ಒಂದು ಬಲವಾದ ನೆಲೆಯ ಸ್ಥಾಪನೆ.

ಕಳೆದ ವರ್ಷ ಇವೊ ಮೊರಾಲಿಸ್ ಅಧ್ಯಕ್ಷರಾಗಿ ಚುನಾಯಿತರಾದರು.  ಆದರೆ ಈ ನಿಟ್ಟಿನಲ್ಲಿ ಅವರು ಸಂವಿಧಾನದಲ್ಲಿ ನಿಗದಿ ಪಡಿಸಿದ ಅವಧಿಗಿಂತಲೂ ಹೆಚ್ಚಿನ ಕಾಲ ಆಧಿಕಾರದಲ್ಲಿರಲು  ಕಾರ್ಯಾಚರಣೆ ಮಾಡಿರುವ ಆಪಾದನೆಯನ್ನು ಎದುರಿಸಬೇಕಾಯಿತು. ಏಕೆಂದರೆ ಜನಾಭಿಪ್ರಾಯ ಪ್ರಕ್ರಿಯೆ(ರೆಫರಾಂಡಮ್) ಈ ತೆರನಾದ ಇವೊ ಮೊರಾಲಿಸ್‍ರ ಪ್ರಯತ್ನಕ್ಕೆ ನಕಾರಾತ್ಮಕ ಫಲಿತಾಂಶವನ್ನು ನೀಡಿತ್ತು. 

ಆದರೆ ಅವರು ಒಂದು ಸಾಂವಿಧಾನಿಕ ನ್ಯಾಯಾಲಯವನ್ನು ರಚಿಸಿದರು.  ಅದು ಇವೊ ಮೊರಾಲಿಸ್‍ರ ಪರ ತೀರ್ಪನ್ನು ನೀಡಿತು. ಈ ಎಲ್ಲ ಕಾರಣಗಳಿಂದ ಬಲಪಂಥೀಯ ವಿರೋಧ ಪಕ್ಷಗಳು ಒಟ್ಟುಗೂಡಿ ಇವೊ ಮೊರಾಲಿಸ್ ವಿರುದ್ಧ ರಣತಂತ್ರವನ್ನು ಹೆಣೆದವು.  ಇದಕ್ಕೆ ಅಮೆರಿಕಾದ ಕುಮ್ಮಕ್ಕು ಇತ್ತು.  ದಕ್ಷಿಣ ಅಮೆರಿಕಾದ ಚರಿತ್ರೆಯಲ್ಲಿ ಇಂತಹ ಅನೇಕ ಸಂದರ್ಭಗಳಲ್ಲಿ, ಅನೇಕ ದೇಶಗಳಲ್ಲಿ ಹಸ್ತಕ್ಷೇಪ ಮಾಡಿದ ಕೀರ್ತಿ ಅಮೆರಿಕಾಗಿದೆ.

ನಂತರ ಬೊಲಿವಿಯಾದ ಮಿಲಿಟರಿ ಆಧಿಕಾರಿಗಳು ಮಧ್ಯಪ್ರವೇಶಿಸಿ ಇವೊ ಮೊರಾಲಿಸ್ ಅಧಿಕಾರದಿಂದ ಕೆಳಗಿಳಿಯಬೇಕೆಂದು ಪಟ್ಟು ಹಿಡಿದರು. ಇದರಿಂದ ಕಳೆದ ವರ್ಷದ ನವೆಂಬರ್‍ನಲ್ಲಿ ಇವೊ ಮೊರಾಲಿಸ್ ತಮ್ಮ ತಾಯ್ನಾಡನ್ನು ತೊರೆದು ಮೊದಲು ಮೆಕ್ಸಿಕೊ, ನಂತರ ಅರ್ಜನ್‍ಟೈನದಲ್ಲಿ ವಾಸ್ತವ್ಯವನ್ನು ಹೂಡಬೇಕಾಯಿತು.

ಪ್ರಸ್ತುತ ಅಧ್ಯಕ್ಷರಾಗಿ ಚುನಾಯಿತರಾಗಿರುವ ಲೂಯಿಸ್ ಅರ್ಸೆ ಮುಂದೆ ದೊಡ್ಡ ಸವಾಲುಗಳಿವೆ.  ಅಲ್ಲಿನ ಬಲಪಂಥೀಯ ವಿರೋಧ ಪಕ್ಷಗಳು, ಬಂಡವಾಳಶಾಹಿ ಶಕ್ತಿಗಳು ಸುಮ್ಮನೆ ಕೂರುವುದಿಲ್ಲ.  ಅಮೆರಿಕಾದ ಚಿತಾವಣೆ ಇದ್ದೇ ಇರುತ್ತದೆ.  ಹೀಗಾಗಿ ಹೊಸ ಸರ್ಕಾರ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. 

ಬೊಲಿವಿಯಾ ಚುನಾವಣೆಯ ಈ ಫಲಿತಾಂಶ ದಕ್ಷಿಣ ಅಮೆರಿಕಾದ ಇತರ ದೇಶಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಿ, ಅಲ್ಲಿ ಪುನಃ ಎಡಪಂಥೀಯ ಶಕ್ತಿಗಳು ಮೇಲ್ಗೈ ಪಡೆಯಬಹುದೇ, ಅಲ್ಲಿ ಹೊಸ ಗಾಳಿ ಬೀಸುವುದೇ ಎಂಬುದನ್ನು ಕಾಲವೇ ತಿಳಿಸುತ್ತದೆ.

‍ಲೇಖಕರು Avadhi

November 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಮ ಶ್ರೀ ಮುರಳಿ ಕೃಷ್ಣ

    ಬರಹವನ್ನು ಪ್ರಕಟಿಸಿದ್ದಕ್ಕೆ ಹಾರ್ದಿಕ ಧನ್ಯವಾದ
    – ಮ ಶ್ರೀ ಮುರಳಿ ಕೃಷ್ಣ-

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: