ಕಾಳಗದ ಪ್ರಸಂಗ

ಪಿ ಬಿ ಪ್ರಸನ್ನ

ಬನ್ನಿರಿ ನೋಡಿರಿ ಆನಂದಿಸಿ
ಭವ್ಯ ರಂಗ ಮಂಟಪದಲ್ಲಿ
ಕಾಳಗದ ಹೊಸ ಪ್ರಸಂಗ
ಕಿವಿಯಿಂದ ಕಿವಿಗೆ ಸುದ್ದಿ

ಮುಸ್ಸಂಜೆ ಮಬ್ಬಲ್ಲಿ
ಕೆಂಪುಗಣ್ಣಿನ ನಟರೆಲ್ಲ ಸಿದ್ಧ
ಮಾತುಗಳ ಉರು ಹಚ್ಚಿ ಹಚ್ಚಿ
ಎಲ್ಲೆಲ್ಲಿ ಎಷ್ಟೆಷ್ಟು ಕಾಕು ಬೇಕೆಂದು ಲೆಕ್ಕ ಹಾಕುತ್ತ

ತಾಕತ್ತು ಇರುವವರದು ಪುಂಡುವೇಷ
ನಡುರಾತ್ರಿಗೇ ಅವರ ಪ್ರವೇಶ
ಬಿಲ್ಲು ಬಾಣ ಮಂತ್ರಾಸ್ತ್ರಗಳ ಹರಿತ ನೋಡಿ
ಚಂದ್ರಾಯುಧ ಖಡ್ಗಗಳ ಮಸೆಯುತ್ತಿದ್ದಾರೆ

ರಕ್ಕಸರಿಗೆ ಬಣ್ಣ- ರೇಖೆ ಹೆಚ್ಚು
ಮುಖ ಮರೆಸಬೇಕಲ್ಲ?
ಕೆಲವೊಮ್ಮೆ ಹೆಣ್ಣು ಬಣ್ಣವೂ
ಸಾಥಿಯಾಗುವುದುಂಟು ಉರಿವ ಅರ್ದಲಕ್ಕೆ

ಸಿಂಹಾಸನ ಕಟ್ಟಿದಾಗಿಂದ ಅಡಿಗಡಿಗೆ
ಗರ್ನಾಲು ಕದಣಿ ಬ್ಯಾಂಡು ವಾದ್ಯಗಳ ದರ್ಬಾರು
ಪಾಪ ಭಾಗವತರದ್ದು ಹೆಸರಿಗಷ್ಟೇ ದೊಡ್ಡ ಮುಂಡಾಸು
ಗಂಟಲು ಸರಿಪಡಿಸಿ ಚೆಂಡೆ ಮದ್ದಲೆಯೊಂದಿಗೆ ಹೊಂದಿಕೊಳ್ಳಬೇಕೆಂದರೆ
ಗದ್ದಲದ್ದೇ ಕಾರುಬಾರು
ಹೀಗಾಗಿ ಅವರದ್ದೇ ಒಂದು ಪಾಡು!

ಇದ್ದಾರೆ ಎಲ್ಲ ಆಟಗಳಂತೆ ಮೀನ ಲೋಚನೆ
ಕಂಬುಕಂಠಿನಿ ವೃತ್ತಕುಚೆಗಳವರು
ಕತೆಯ ಒಂದು ದಾಳವಾಗಿ
ಇನ್ನಾರಿಗೋ ಗಾಳವಾಗಿ
ಅವರಿಗೂ ಮನಸೋಲುವಷ್ಟು ಕುಣಿವ ಬಯಕೆ
ಅವರ ಒಂದು ನಗುವಿಗೆ
ಅವರ ಒಂದು ಬಿಸಿಯುಸಿರಿಗೆ
ಹಾರುವ ಸೆರಗಿಗೆ
ಸಿಂಹಾಸನವೂ ಮುರಿಯುವುದುಂಟು

ಯಜಮಾನ ಅರಿತಿರುವ
ಜನಸೇರಿಸುವ ಲೆಕ್ಕ
ಕತೆಯ ಒಳಗೆ ತಿರುವುಗಳ ಹೆಣೆದಿರುವ
ಕುಣಿವವರಿಗೂ ಅಸ್ಪಷ್ಟ ಕತೆಯ ಜಾಡು!

ಭೂಪಾಳಿ ಏರುವತನಕ
ಕೋಳಿ ಕೂಗುವತನಕ
ನೆಲದವರು ನೆಲದಲ್ಲೇ
ತುಕ್ಕು ಹಿಡಿದ ಕುರ್ಚಿಯವರು ತುಕ್ಕಾಗಿ
ಆರಾಮ ಕುರ್ಚಿಯವರು ತುಂಬ ಆರಾಮವಾಗಿ ಇರುವಂತೆ ಅಲ್ಲಲ್ಲಿ ಹಗ್ಗದ ಬೇಲಿ
ಕಾವಲಿನವರ ನಿಲ್ಲಿಸಿ
`ಇದು ಕಾಳಗದ ಆಟ
ನೆಲದವರು ನಗಬಾರದು
ಸನ್ನೆ ಮಾಡಿದಾಗ ಚಪ್ಪಾಳೆ ಹೊಡೆಯಬಹುದು’
ಎಂಬ ಫಲಕ ಹಾಕಿದ್ದಾನೆ!

ಅವರೋ ಕಾದವರು
ಮಂಗಳದ ಹೊತ್ತಿಗೆ ಧರೆಗಿಳಿವ ದೇವಾದಿ ದೇವರುಗಳಿಗೆ
ಎಲ್ಲಿಂದಲೋ ಮೊಳಗುವ
`ಕದನಬೇಡ ನಿಮ್ಮೀರ್ವರೊಳು
ಘಾಸಿಗೊಂಬುದು ಈರೇಳು ಲೋಕ’ ಎಂಬ ವಾಣಿಗೆ

ಇಲ್ಲ
ಬೆಳಗಾರೂ ಕಾಳಗದ ಪ್ರಸಂಗದಲ್ಲಿ
ಮಂಗಳವಾಗುವುದೇ ಇಲ್ಲ

‍ಲೇಖಕರು Avadhi

November 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: