ಛತ್ರಿ, ಟವಲ್ಲು ಮತ್ತು ಹದಿನೇಳು ರೂಪಾಯಿ

೧೯೯೮ ರಿಂದ ೨೦೦೧ ರವರೆಗೆ ಮೂರು ವರ್ಷ ದಂಡಿನಶಿವರ ಪಶುಚಿಕಿತ್ಸಾಲಯದಲ್ಲಿದ್ದೆ. ಅಲ್ಲಿಗೆ ಎರಡು ಕಿ.ಮೀ. ದೂರದಲ್ಲಿ ಅಮ್ಮಸಂದ್ರ ಇದೆ. ಅಮ್ಮಸಂದ್ರದ ಡೈಮಂಡ್ ಸಿಮೆಂಟ್ ಫ್ಯಾಕ್ಟರಿಯ ಒಂದು ಡೈರಿ ಇತ್ತು. ಡೈರಿಯನ್ನು ನೋಡಿಕೊಳ್ಳುತ್ತಿದ್ದುದರಿಂದ ನನಗೆ ಫ್ಯಾಕ್ಟರಿಯ ಒಂದು ಮನೆ ಬಾಡಿಗೆಗೆ ಕೊಟ್ಟಿದ್ದರು. ತಿಂಗಳಿಗೆ ರೂಪಾಯಿ ಮೂವತ್ತೆಂದು ಬಾಡಿಗೆ. ಒಮ್ಮೊಮ್ಮೆ ಬಾಡಿಗೆಗಿಂತ ವಿದ್ಯುತ್ ಬಿಲ್ಲೇ ಹೆಚ್ಚು ಬರುತ್ತಿತ್ತು! ಅಷ್ಟು ಸೋವಿ.

ನಾನು ಪ್ರತಿ ತಿಂಗಳು ಬಾಡಿಗೆ ಕೊಡುವುದರ ಬದಲು ಒಂದು ವರ್ಷದ ಬಾಡಿಗೆಯನ್ನು ಒಮ್ಮೆಗೇ ಕೊಟ್ಟುಬಿಡುತ್ತಿದ್ದೆ! ಇನ್ನೂ ಆಶ್ಚರ್ಯವೆಂದರೆ ನನಗೂ ಮುಂಚೆ ಇದ್ದ ಪಶುವೈದ್ಯರೊಬ್ಬರು ಮನೆ ಬಾಡಿಗೆಯನ್ನೂ ಕೊಡದೆ ಸಿಮೆಂಟ್ ಫ್ಯಾಕ್ಟರಿಗೇ ನಾಮ ಹಾಕಿ ಹೋಗಿದ್ದರು. ಹೀಗಾಗಿ ನಾನು ಮೊದಲ ಸಲ ಕ್ವಾಟ್ರಸ್ ಬೇಕೆಂದು ಕೇಳಲು ಹೋದಾಗ ಫ್ಯಾಕ್ಟರಿಯ ಆಡಳಿತ ವರ್ಗದ ಅಧಿಕಾರಿಗಳು ನನ್ನನ್ನು ಅಲಾಲಟೋಪಿಯಂತೆ ಕಂಡಿದ್ದರು!

ಅದು ಅತಿ ಸಾಧಾರಣವಾದ ಚಿಕ್ಕ ಮನೆಯಾಗಿತ್ತು. ಬಾಗಿಲು ಕಿಟಕಿಗಳು ಒಂದೂ ಭದ್ರವಾಗಿರಲಿಲ್ಲ. ಆದರೆ ಎಲ್ಲ ಅನುಕೂಲಗಳಿದ್ದವು. ಮನೆಯೆದುರೇ ಮಕ್ಕಳ ಶಾಲೆಯಿತ್ತು. ಪಕ್ಕದಲ್ಲಿ ದೊಡ್ಡ ಆಟದ ಮೈದಾನವಿತ್ತು. ಸ್ವಲ್ಪ ದೂರದಲ್ಲಿ ಪಾರ್ಕ್ ಇತ್ತು. ನನ್ನ ಮಕ್ಕಳಿಬ್ಬರೂ ಚಿಕ್ಕವರಿದ್ದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿದ್ದರು. ಮತ್ತೊಂದು ವಿಶೇಷವೆಂದರೆ ಫ್ಯಾಕ್ಟರಿಯದ್ದು ಒಂದು ಆಟದ ಕ್ಲಬ್ ಇತ್ತು.

ಅಲ್ಲಿ ಕೇರಂ, ಚೆಸ್, ಟೇಬಲ್ ಟೆನ್ನಿಸ್, ಶಟಲ್ ಬ್ಯಾಡ್ಮಿಂಟನ್ ಆಡಲು ಅನುಕೂಲವಿತ್ತು. ನಾನಂತೂ ಶಟಲ್ ಬ್ಯಾಡ್ಮಿಂಟನ್ ಹುಚ್ಚ. ದಿನವೂ ಸಾಯಂಕಾಲ ಗಂಟೆಗಟ್ಟಲೆ ಆಡುತ್ತಾ ಬೆವರು ಸುರಿಸುತ್ತಿದ್ದೆ. ಸಿಮೆಂಟ್ ಫ್ಯಾಕ್ಟರಿಯ ನೂರಾರು ಮನೆಗಳಿರುವ ಕ್ಯಾಂಪಸ್‌ನಲ್ಲಿ ರೈತರು ನನ್ನ ಮನೆ ಹುಡುಕಿಕೊಂಡು ಬರಲಾರರು. ಎಂದಿನಂತೆ ದಿನಕ್ಕೆ ಹತ್ತಾರು ರೈತರ ಆಗಮನ, ಮಾತುಕತೆ ಮುಂತಾದವು ನಿಂತುಹೋಗಬಹುದೆಂದುಕೊಂಡಿದ್ದೆ.

ಆದರದು ತಪ್ಪೆಂದು ಬೇಗನೆ ಸಾಬೀತಾಯಿತು. ಅಲ್ಲಿದ್ದ ಫ್ಯಾಕ್ಟರಿಯ ಅನೇಕ ಕೆಲಸಗಾರರು, ಅಧಿಕಾರಿಗಳು ಜಾತಿನಾಯಿಗಳನ್ನು ಸಾಕಿದ್ದರು. ಫ್ಯಾಕ್ಟರಿಯ ಡೈರಿಯಲ್ಲದೆ ಎರಡು ದೊಡ್ಡ ಆಲ್ಸೇಷನ್ ನಾಯಿಗಳಿದ್ದವು. ಫ್ಯಾಕ್ಟರಿಯ ಸುತ್ತಮುತ್ತ ಇದ್ದ ಅನೇಕ ಹಳ್ಳಿಗಳ ಜನ ಸುಲಭವಾಗಿ ನನ್ನ ಮನೆ ಹುಡುಕಿಕೊಂಡು ಬರುತ್ತಿದ್ದರು.

ಆ ಏರಿಯಾದಲ್ಲೊಬ್ಬ ಅಜ್ಜ ಒಂದು ಹಿಂಡು ಮೇಕೆಗಳನ್ನು ಸಾಕಿದ್ದ ಮತ್ತು ಅವನು ನಮ್ಮನೆಗೆ ನಿರಂತರವಾಗಿ ಬರುತ್ತಿದ್ದ. ಹೊಟ್ಟೆ ಉಬ್ರ, ಜಂತು, ಕೆಮ್ಮು, ಗಾಯ, ಬೇಧಿ, ನೆಲ ಹಿಡಿದು ಮೇಯಲ್ಲ, ರಕ್ತ ಪುಷ್ಟಿಯಿಲ್ಲ, ಹೋತ ಮೇಕೆಗಳನ್ನು ಕಂಡರೂ ಸುಮ್ಮನಿರುತ್ತದೆ. ಹಾರುವುದಿಲ್ಲ. ಮೇಕೆ ಈಯುತ್ತಿಲ್ಲ. ಕರುಳು ರೋಗ, ಮೆಟ್ರೆ ರೋಗ, ಕಾಲುಬಾಯಿ ಜ್ವರ ಇತ್ಯಾದಿ ಇಡೀ ವಿಶ್ವದ ಮೇಕೆ ಖಾಯಿಲೆಗಳೆಲ್ಲ ನಮ್ಮ ಚಿಕ್ಕ ಮನೆಯಲ್ಲಿ ಚರ್ಚಿತವಾಗುತ್ತಿದ್ದವು.

ಆ ಅಜ್ಜನಿಗೆ ಸುಮಾರು ಎಪ್ಪತ್ತು ವರ್ಷ ವಯಸ್ಸಾಗಿದ್ದು ಕಲ್ಲು ಇದ್ದಂಗಿದ್ದ. ತನ್ನ ಅದೃಷ್ಟ ಚೆನ್ನಾಗಿಲ್ಲ ಎನ್ನಲು ‘ನನ್ನ ಟಾರ್ (Star) ಚೆನ್ನಾಗಿಲ್ಲ ಸಾʼ ಎಂದು ಪದೇ ಪದೇ ಹೇಳುತ್ತಿದ್ದ. ಅಜ್ಜನಿಗೆ ‘ಟಾರುʼ ಎಂದೇ ಹೆಸರಿಟ್ಟಿದ್ದೆವು. ‘ಟಾರ್ ಸರಿ ಇಲ್ಲದಿದ್ದರೆ ಸತ್ತೋಗಜ್ಜ’ ಎಂದು ನಾನು ರೇಗಿಸಿದರೆ, ಕಿಲಾಡಿ ಟಾರಜ್ಜ ‘ಅದ್ಕೂ ಟಾರ್ ಬೇಕು ಸ್ವಾಮಿ’ಎಂದು ನಮ್ಮನ್ನೆಲ್ಲ ನಗೆಗಡಲಲ್ಲಿ ಕೆಡವುತ್ತಿದ್ದ.

ನಮ್ಮ ಮನೆಯ ಸುತ್ತಲೂ ಫ್ಯಾಕ್ಟರಿಯ ನೌಕರರೇ ಇದ್ದು ಸಂಬಳದ ದಿನ ಸಂಭ್ರಮದಿಂದಿರುತ್ತಿದ್ದರು. ಅಂದು ರೇಷನ್ ಅಂಗಡಿ ಸಾಲ, ಸಾರಾಯಿ ಅಂಗಡಿ ಸಾಲ, ಕೈಗಡ ಮುಂತಾದವನ್ನು ಅಸಲು ಅಥವಾ ಬಡ್ಡಿಗಳನ್ನು ಭಾಗಶಃ ತೀರಿಸಿ ಮತ್ತೆ ಹೊಸ ಸಾಲಕ್ಕೆ ಸಜ್ಜಾಗುತ್ತಿದ್ದರು. ಅಂತೂ ಅವರು ಯಾವಾಗಲೂ ಸಾಲದಲ್ಲಿ ಮುಳುಗಿರುತ್ತಿದ್ದರು.

ಪ್ರತಿ ತಿಂಗಳು ಏಳನೇ ತಾರೀಖು ಸಂಬಳದ ದಿನವಾಗಿದ್ದು, ಸಾಲ ಕೊಟ್ಟ ಕೆಲವರು ಫ್ಯಾಕ್ಟರಿಯ ಗೇಟಲ್ಲೇ ನಿಂತು ಸಾಲ ವಸೂಲು ಮಾಡುತ್ತಿದ್ದ ದೃಶ್ಯ ಅಪರೂಪದ್ದೇನಾಗಿರಲಿಲ್ಲ ಮತ್ತು ಅದೇ ದಿನ ಫ್ಯಾಕ್ಟರಿಯ ಬಾಗಿಲಲ್ಲಿ ಸ್ಪೆಷಲ್ ಸಂತೆ ಸಹ ನೆರೆಯುತ್ತಿತ್ತು. ಫ್ಯಾಕ್ಟರಿಯ ಕಾರ್ಮಿಕರಿಗೆ ಸಾಧಾರಣ ಆರು ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ನನಗೆ ಆ ಸಮಯದಲ್ಲಿ ಹನ್ನೆರಡು ಸಾವಿರ ರೂಪಾಯಿ ಸಂಬಳ ಇತ್ತು. ಹಾಗೆ ಹೇಳಿದ ಕೂಡಲೇ ಅವರೆಲ್ಲ “ಹ್ಞಾಂ! ಇಬ್ಬರ ಸಂಬಳ ಒಬ್ಬರಿಗೇ ಬರುತ್ತೆ!” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು.

ಅಲ್ಲಿಯವರೆಗೂ ನಮ್ಮನೆಯಲ್ಲಿ ಕಪ್ಪು ಬಿಳುಪು ಟಿವಿ ಇತ್ತು. ಫ್ರಿಜ್ ಇರಲಿಲ್ಲ. ಮನೆಯಲ್ಲಿ ಒಮ್ಮೊಮ್ಮೆ ಕೆಲವು ಔಷಧ ಹಾಗೂ ಲಸಿಕೆಗಳನ್ನು ಇಟ್ಟುಕೊಳ್ಳಬೇಕಾಗುತ್ತಿತ್ತು. ಆದ್ದರಿಂದ ನನ್ನಲ್ಲಿ ಇದ್ದಬದ್ದ ಉಳಿಕೆ ದುಡ್ಡನ್ನು ಕೂಡಿಸಿ ಫ್ರಿಜ್, ಬಣ್ಣದ ಟಿವಿಗಳನ್ನು ಖರೀದಿಸಿದೆ. ಮನೆಯಲ್ಲಿ ಚೆಸ್, ಕೇರಂ ಬೋರ್ಡ್, ಕ್ರಿಕೆಟ್ ಸೆಟ್, ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್‌ಗಳಷ್ಟೇ ಅಲ್ಲದೆ ನನ್ನ ಮಗ ಬೇಸ್‌ಬಾಲ್ ಸೆಟ್ಟನ್ನೂ ಸಹ ಕೊಡಿಸಿಕೊಂಡಿದ್ದ.

ಇಷ್ಟು ಸಾಲದೆಂದು ಕಂಪ್ಯೂಟರ್ ಗೇಮ್ಸ್ ಆಡುತ್ತಿದ್ದ. ನನ್ನ ಮಗನ ಜೊತೆ ಯಾವಗಲೂ ಆಟಕ್ಕೆ ಬರುತ್ತಿದ್ದ ಜೊತೆಗಾರರು ಗಿಜಿಗುಡುತ್ತಿದ್ದರು. ಇಷ್ಟರ ಮೇಲೆ ನಾನು ದಿನವಿಡೀ ಮೋಟರ್‌ಸೈಕಲಲ್ಲಿ ಅಡ್ಡಾಡುತ್ತ ಹಳ್ಳಿಗಳ ಮೇಲೆ ತಿರುಗುತ್ತಿದ್ದೆ. ಒಳ್ಳೆಯ ಕಮಾಯಿ ಇದೆ ಎಂದು ಜನರು ಭಾವಿಸಿದ್ದರೆ ಆಶ್ಚರ್ಯವಿಲ್ಲ. ಹೊರಗಡೆ ರೂಮಲ್ಲಿ ಹಳೆಯ ಟಿವಿ, ಹೊಸ ಟಿವಿ ಎರಡನ್ನೂ ಜೋಡಿಸಿಟ್ಟಿದ್ದರಿಂದ ನಮ್ಮನೆ ಅಂಗಡಿ ಥರ ಕಾಣುತ್ತಿತ್ತು. ಇಷ್ಟು ಸಂಗತಿಗಳು ಕಳ್ಳರಿಗೆ ವಿಶೇಷ ಆಕರ್ಷಣೆ ಬೀರುತ್ತಿದ್ದವೆಂದು ಕಾಣುತ್ತದೆ!

ನಾನು ಮುಂಚೆಯೇ ಹೇಳಲು ಮರೆತದ್ದೆಂದರೆ ನಮ್ಮನೆಯ ಸುತ್ತಮುತ್ತ ನಿರಂತರವಾಗಿ ಕಳ್ಳತನಗಳಾಗುತ್ತಿದ್ದವು. ಕಾರ್ಮಿಕರ, ಅಧಿಕಾರಿಗಳ ಮತ್ತು ಉನ್ನತಾಧಿಕಾರಿಗಳ ಮನೆಗಳು ಬೇರೆ ಬೇರೆ ಕಡೆ ಇದ್ದವು. ಕಾರ್ಮಿಕರ ಮನೆಗಳು ಯಾವಾಗಲೂ ಜೀವಚೈತನ್ಯದಿಂದ ಗಿಜಿಗುಟ್ಟುತ್ತಿದ್ದರೆ ಅಧಿಕಾರಿಗಳ ಮನೆಗಳು ನಿಸ್ತೇಜವಾಗಿ ಬಿದ್ದಿರುತ್ತಿದ್ದವು. ಆದರೂ ಬಡವರ ಮನೆಗಳಲ್ಲೇ ಹೆಚ್ಚು ಕಳ್ಳತನಗಳಾಗುತ್ತಿದ್ದವು.

ಯಾರಾದರೂ ಒಂದು ದಿನ ಬಾಗಿಲಿಗೆ ಬೀಗ ಹಾಕಿದರೆ ಆ ಮನೆಯಲ್ಲಿ ಗ್ಯಾರಂಟಿ ಕಳ್ಳತನವಾಗುತ್ತಿತ್ತು. ಆದುದರಿಂದ ನಾವು ಕುಟುಂಬ ಸಮೇತ ಎಲ್ಲಿಗಾದರೂ ಹೋದರೆ ಮನೆಯಲ್ಲಿ ರಾತ್ರಿ ಮಲಗಲು ಯಾರಿಗಾದರೂ ಸ್ನೇಹಿತರಿಗೆ ಹೇಳಿ ಹೋಗುತ್ತಿದ್ದೆವು. ನನ್ನ ಮನೆ ಈ ಕಡಿಮೆ ಸಂಬಳದ ಕಾರ್ಮಿಕರ ಮನೆಗಳ ಸಾಲಿನಲ್ಲಿತ್ತು.

ನನ್ನ ಹೆಂಡತಿಯ ತವರು ತುಮಕೂರು. ಅಮ್ಮಸಂದ್ರದಿಂದ ಒಂದು ಗಂಟೆ ರೈಲು ಪ್ರಯಾಣ. ರೈಲು ಟಿಕೆಟ್ ಕೇವಲ ಹತ್ತು ರೂಪಾಯಿ. ಆಗಾಗ ಹೋಗಿ ಬರುತ್ತಿದ್ದೆವು. ಆಗೆಲ್ಲ ಪರಿಚಯದ ಹಿಂದಿನ ಮನೆಯ ಗುರುವಪ್ಪ ಎಂಬುವವರಿಗೆ ಹೇಳಿ ಮನೆಯ ಚಾವಿ ಕೊಟ್ಟು ಹೋಗುತ್ತಿದ್ದೆವು. ಅವರಿಗೆ ಮನೆ ತುಂಬ ಮಕ್ಕಳಿದ್ದು, ಯಾರಾದರೂ ಒಂದಿಬ್ಬರು ಮಕ್ಕಳು ನಮ್ಮನೆಯಲ್ಲಿ ಬಂದು ಮಲಗುತ್ತಿದ್ದರು.

ಆದರೆ ಒಂದು ಸಲ ನಾವು ಊರಿಗೆ ಹೊರಟಾಗ ಗುರುವಪ್ಪರ ಮಕ್ಕಳೆಲ್ಲ ಊರಿಗೆ ಹೋಗಿದ್ದರಿಂದ ಗಂಡ ಹೆಂಡತಿ ಮಾತ್ರ ಮನೆಯಲ್ಲಿದ್ದರು. ಆದ್ದರಿಂದ ಅವರಿಗೆ ಏನೂ ಹೇಳದೇ ಶಂಕ್ರಪ್ಪ ಎನ್ನುವ ಇನ್ನೊಬ್ಬರ ಮನೆಗೆ ಚಾವಿ ಕೊಟ್ಟು ಊರಿಗೆ ಹೋದೆವು. ಶಂಕ್ರಪ್ಪರ ಮಗ ಗಣೇಶ ನಮ್ಮನೆಯಲ್ಲಿ ಮಲಗಲು ಒಪ್ಪಿದ್ದ. ಅವನ ಕಾಲು ಸಣ್ಣವನಿದ್ದಾಗ ಬಿದ್ದು ಐಬಾಗಿದ್ದರಿಂದ ಕುಂಟುತ್ತಿದ್ದ.

ಎಸ್ಸೆಸ್ಸೆಲ್ಸಿಯಲ್ಲಿ ಐದಾರು ಬಾರಿ ಫೇಲಾಗಿ ವಿದ್ಯಾಭ್ಯಾಸ ಮುಕ್ತಾಯಗೊಳಿಸಿದ್ದ. ಉಂಡು ಆರಾಮಾಗಿ ಅಡ್ಡಾಡಿಕೊಂಡಿದ್ದ. ರಾತ್ರಿ ಹತ್ತರ ನಂತರ ಮಳೆ ಹನಿಯಲು ಪ್ರಾರಂಭವಾಗಿ ಗಣೇಶ ಒಬ್ಬನೇ ಬಂದು ಮಲಗಲು ಹೆದರಿ ತನ್ನ ಮನೆಯಲ್ಲೇ ಮಲಗಿಬಿಟ್ಟಿದ್ದಾನೆ. ನಮ್ಮನೆಗೆ ಹಾಕಿದ್ದ ದಪ್ಪನೆಯ ಬೀಗ ಕಂಡು ಕಳ್ಳರಿಗೆ ತಡೆಯಲಾಗೇ ಇಲ್ಲ!

ಬೀಗ ಹಾಕಿದ ಮನೆ ಕಳ್ಳರಿಗೆ ತೆರೆದಿಟ್ಟ ಖಜಾನೆಯಂತೆ ಕಂಡಿದೆ. ಎರಡೆರಡು ಟಿವಿ ಇರುವ ಡಬ್ಬಲ್ ಸಂಬಳದವನು! ಡಾಕ್ಟ್ರು ಬೇರೆ! ಲಂಚ ಎಷ್ಟೋ ಏನೋ! ಕಳ್ಳರು ಬರಗೆಟ್ಟು ಹನ್ನೆರಡು ಗಂಟೆಗೇ ಮನೆ ಬಾಗಿಲು ನೂಕಿ ಒಳನುಗ್ಗಿದ್ದಾರೆ. ಅವರು ಎಷ್ಟು ಪಳಗಿದ ಕಳ್ಳರೆಂದರೆ ಕಣ್ಣಿಗೆ ಬಟ್ಟೆ ಕಟ್ಟಿದರೂ ಆ ಸಾಲು ಮನೆಗಳಲ್ಲಿ ಕಳ್ಳತನ ಮಾಡಿಕೊಂಡು ಹೋಗಬಲ್ಲವರಾಗಿದ್ದರೆಂದು ತೋರುತ್ತದೆ. ಮನೆಯ ಎಲ್ಲ ಸ್ವಿಚ್‌ಗಳನ್ನು ಹಾಕಿಕೊಂಡು ಬೆಳಕಿನಲ್ಲಿ ಕದಿಯಲು ಪ್ರಾರಂಭಿಸಿದ್ದಾರೆ. ಮನೆಯಲ್ಲಿದ್ದದ್ದು ಹಾಲು, ರೂಮು, ಅಡಿಗೆ ಮನೆ, ಬಚ್ಚಲು ಅಷ್ಟೆ.

ಅಡಿಗೆ ಮನೆಯು ಪಾತ್ರೆ, ಪಡಗಗಳಿಂದ ತುಂಬಿ ಹೋಗಿ ಕೈಕಾಲೇನಾದರೂ ತಾಗಿದರೆ ಪಾತ್ರೆಗಳು ಉರುಳಿ ಬಿದ್ದು ಊರಿಗೇ ಕೇಳಿಸುವಂತೆ ಶಬ್ದವಾಗುತ್ತಿತ್ತು. ಆದ್ದರಿಂದ ಅವರು ಅಡಿಗೆ ಮನೆ ಪ್ರವೇಶಿಸಿಲ್ಲ. ಫ್ರಿಜ್ ತೆಗೆದು ನೋಡಿದ್ದಾರೆ. ಅದರಲ್ಲಿ ಬರೀ ದನದ ಇಂಜೆಕ್ಷನ್‌ಗಳಿದ್ದವು. ಒಂದೆರಡು ಥರ್ಮೋಕೂಲರ್ ಪೆಟ್ಟಿಗೆಗಳನ್ನು ತೆರೆದು ನೋಡಿದ್ದಾರೆ. ಅದರಲ್ಲಿ ದನಗಳ ಕಾಲುಬಾಯಿ ರೋಗದ ಲಸಿಕೆಯ ಖಾಲಿ ಬಾಟಲ್‌ಗಳು ಮತ್ತು ಮುರುಕಲು ಪ್ಲಾಸ್ಟಿಕ್ ಸಿರಿಂಜ್‌ಗಳು ತುಂಬಿದ್ದವು. ರೂಮಿಗೆ ಹೋಗಿ ನೋಡಿದ್ದಾರೆ. ಅಲ್ಲಿ ಎರಡು ಮಂಚಗಳನ್ನು ಒಂದರ ಪಕ್ಕ ಒಂದು ಜೋಡಿಸಿದ್ದೆವು.

ಮಂಚದ ಕೆಳಗೆಲ್ಲ ಬಗ್ಗಿ ಕೂತು ತೆವಳಿ ಕೆಲವು ಡಬ್ಬಗಳನ್ನು ಹೊರಗೆಳೆದು ತೆರೆದು ನೋಡಿದ್ದಾರೆ. ಅದರಲ್ಲೆಲ್ಲ ಬರೀ ಪುಸ್ತಕಗಳಿದ್ದವು. ಕಾದಂಬರಿ, ಕಥೆ, ಕವನ, ವಿಮರ್ಶೆಯ ಪುಸ್ತಕಗಳು! ಮನೆಯಲ್ಲೆಲ್ಲ ಹಲಗೆಯ ಮೇಲೆ ಜೋಡಿಸಿರುವ ಪುಸ್ತಕಗಳ ಸಾಲು! ಕಾರಂತ, ಕುವೆಂಪು, ತೇಜಸ್ವಿ, ಲಂಕೇಶರ ಪುಸ್ತಕಗಳ ಸೆಟ್ಟುಗಳು! ಮತ್ತೆ ಕೆಲವು ಡಬ್ಬಗಳಲ್ಲಿ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ ಚಿತ್ರಗಳಿರುವ ಮಾತ್ರೆ, ಪುಡಿ, ಇಂಜೆಕ್ಷನ್‌ಗಳು! ಕಳ್ಳರಿಗೆ ಸಾಕಾಗಿ ಹೋಗಿದೆ. ನೋಟಿನ ಕಟ್ಟುಗಳಾಗಲೀ, ಒಡವೆಗಳಾಗಲೀ ಎಲ್ಲೂ ಕಂಡಿಲ್ಲ.

ಅಷ್ಟು ಹೊತ್ತಿಗೆ ಮನೆಯ ಹಿತ್ತಲು ಬಾಗಿಲು ಯಾರೋ ತಟ್ಟಿದಂತಾಗಿದೆ. ತಮ್ಮ ಡ್ಯೂಟಿ ನಿಲ್ಲಿಸಿ ಕಳ್ಳರು ಸ್ತಬ್ಧರಾಗಿದ್ದಾರೆ. ಹಿಂದಿನ ಮನೆಯ ಗುರುವಪ್ಪ ಮಧ್ಯರಾತ್ರಿ ಒಂದು ಗಂಟೆಯಾದರೂ ಮಲಗಿಲ್ಲ! ಡಾಕ್ಟ್ರು ಮನೆ (ಅಂದರೆ ನನ್ನ ಮನೆ) ಯ ಎಲ್ಲ ದೀಪಗಳೂ ಉರಿಯುತ್ತಿವೆ! ಆ ತಿಂಗಳು ಗುರುವಪ್ಪನ ಮನೆಯ ವಿದ್ಯುತ್ ಬಿಲ್ಲು ವಿಪರೀತ ಜಾಸ್ತಿ ಬಂದಿತ್ತಂತೆ.

ಅತಿ ಜುಗ್ಗನಾಗಿದ್ದ ಗುರುವಪ್ಪನಿಗೆ ಏನು ಮಾಡಿದರೂ ನಿದ್ದೆ ಬರಲಿಲ್ಲ. ಈ ಡಾಕ್ಟ್ರಿಗೆ ದುಡ್ಡು ಹೆಚ್ಚಾಗಿ ಎಲ್ಲಾ ದೀಪಗಳನ್ನೂ ಉರಿಸಿ ಹಾಗೆಯೇ ಮಲಗಿದ್ದಾರೆ ಎಂದುಕೊಂಡು ಹಿತ್ತಲು ಬಾಗಿಲು ತಟ್ಟಿ “ಡಾಕ್ಟ್ರೇ ದೀಪ ಆರಿಸಿ ಮಲಗಿ. ನಿಮಗೆಲ್ಲೋ ದುಡ್ಡು ಹೆಚ್ಚಾಗಿದೆ!” ಎಂದು ಕೂಗಿ ಹೇಳಿ ಹೋಗಿ ಮಲಗಿದ್ದಾನೆ.

ಗುರುವಪ್ಪನ “ದುಡ್ಡು ಹೆಚ್ಚಾಗಿದೆ” ಎಂಬುವ ಮಾತುಗಳು ಕಳ್ಳರಿಗೆ ಉತ್ತೇಜನಕಾರಿಯಾಗಿ ಕಂಡಿರಬೇಕು. ಸ್ವಲ್ಪ ಹೊತ್ತು ಬಿಟ್ಟು, ಗುರುವಪ್ಪನ ಗದ್ದಲ ನಿಂತ ಮೇಲೆ ಹುಡುಕಾಟ ಮುಂದುವರಿಸಿದ್ದಾರೆ. ಸೂಟ್‌ಕೇಸ್ ಬಿಚ್ಚಿದ್ದಾರೆ. ಅದರಲ್ಲಿ ದಶಕಗಳ ಹಿಂದೆ ಹೊಲಿಸಿದ ನನ್ನ ಮದುವೆಯ ಕೋಟು, ದನದ ಇಂಜೆಕ್ಷನ್‌ಗಳು ಬಿದ್ದು ಕಲೆಯಾಗಿದ್ದ ನನ್ನ ಹಳೆಯ ಬಟ್ಟೆಗಳು, ಮುರುಕಲು ಕತ್ತರಿ, ಚಾಕು, ಇಕ್ಕಳ, ಹಳೆಯ ಪ್ಲಾಸ್ಟಿಕ್ಕಿನ ಸಿರಿಂಜ್‌ಗಳು ಕಂಡಿವೆ. ಕಳ್ಳರು ಮೈಪರಚಿಕೊಂಡಿರಬೇಕು. ಆಮೇಲೆ ಮೂಲೆಯಲ್ಲಿದ್ದ ಗಾಡ್ರೇಜ್ ಬೀರುವಿನ ಬಾಗಿಲು ಎಬ್ಬಲು ಪ್ರಯತ್ನಿಸಿದ್ದಾರೆ. ಆದರೆ ಅದರಲ್ಲಿ ಅಸಫಲರಾಗಿದ್ದಾರೆ.

ಬೀರು ತೆಗೆದಿದ್ದರೂ ಅವರು ನಿರಾಶರಾಗುತ್ತಿದ್ದುದು ಖಂಡಿತ! ನನ್ನ ಹೆಂಡತಿಯ ಬಳಿ ರೇಷ್ಮೆ ಸೀರೆಗಳಾಗಲೀ, ಬಂಗಾರದ ಒಡವೆಗಳಾಗಲೀ ಇರಲಿಲ್ಲ. ಇದ್ದ ಹತ್ತಿಪ್ಪತ್ತು ಗ್ರಾಂ ಬಂಗಾರ ಅವಳ ಮೈಮೇಲಿತ್ತಿತ್ತು. ಇದ್ದ ಬದ್ದ ದುಡ್ಡೆಲ್ಲ ಫ್ರಿಜ್, ಟಿವಿ ಇಂದು ಕೂತಿದ್ದವು. ಉಳಿಕೆ ಬಳಿಕೆ ದುಡ್ಡು ಬ್ಯಾಂಕ್ ಖಾತೆಗಳಲ್ಲಿದ್ದು ಬೀರುವಿನಲ್ಲಿ ಸಾವಿರವೋ, ಎರಡು ಸಾವಿರವೋ ದುಡ್ಡಿತ್ತು.

ಇಷ್ಟೆಲ್ಲ ಆಗುವ ಹೊತ್ತಿಗೆ ಕಳ್ಳರಿಗೆ ಭ್ರಮನಿರಸನವೂ, ತಮ್ಮ ವೃತ್ತಿಯ ಬಗ್ಗೆ ಜಿಗುಪ್ಸೆಯೂ ಆಗಿರಬೇಕು. ಆಗ ಕಳ್ಳರ ಕಣ್ಣಿಗೆ ಬಿದ್ದಿರುವುದೇ ಎರಡು ದೊಡ್ಡ ರೆಕ್ಸಿನ್ ಪರ್ಸುಗಳು. ನೋಡಲು ಆಕರ್ಷಕವಾಗಿದ್ದ ಅವು ಗುಣಮಟ್ಟದಲ್ಲಿ ಕಳಪೆಯಾಗಿದ್ದವು.

ಅವು ಬೀರಿನ ಮೇಲಿದ್ದವು. ಅವುಗಳನ್ನು ಆಸೆಯಿಂದ ಎಳೆದುಕೊಂಡು ಒಂದೊಂದೇ ತೆರೆದಿದ್ದಾರೆ. ಮಿಂಚುತ್ತಿದ್ದ ಆ ಪರ್ಸುಗಳನ್ನು ಬೆಂಗಳೂರಿನ ಫುಟ್‌ಪಾತಿನಲ್ಲಿ ಮಕ್ಕಳು ಜಗಳವಾಡಿ ಕೊಡಿಸಿಕೊಂಡಿದ್ದರು. ಅದರಲ್ಲಿ ಅವರಿಬ್ಬರೂ ಸೇರಿ ದಿನಪತ್ರಿಕೆಗಳ ಕತ್ತರಿಸಿ ವಿಮಾನ, ಹಡಗು ಮತ್ತು ಎಗರುವ ಕಪ್ಪೆಗಳನ್ನು ರಾಶಿ ರಾಶಿ ಮಾಡಿ ತುಂಬಿಸಿದ್ದರು. ಕಳ್ಳರಿಗೆ ಅವನ್ನೆಲ್ಲ ನೋಡಿ ತಾಳ್ಮೆಗೆಟ್ಟು ಮನೆ ತುಂಬೆಲ್ಲ ಬಿಸಾಕಿಬಿಟ್ಟಿದ್ದರು.

ಅಷ್ಟೊತ್ತಿಗೆ ಸರಿಯಾಗಿ ಮುಂಬಾಗಿಲನ್ನು ಯಾರೋ ತಟ್ಟಿದಂತಾಗಿದೆ. ಕಳ್ಳರು ಬೆಚ್ಚಿಬಿದ್ದಿರಬೇಕು. ಮತ್ತೊಮ್ಮೆ ಅದೇ ಗುರುವಪ್ಪ! ಅವನು ಜುಗ್ಗ ಮಾತ್ರವಲ್ಲದೆ ಜಿಗುಟು ಆಸಾಮಿಯಾಗಿದ್ದ. ಹಿಡಿದ ಕೆಲಸವನ್ನು ಪಟ್ಟು ಬಿಡದೆ ಮಾಡುವವನಾಗಿದ್ದ. ಆದರೆ ಅಳತೆ ಮೀರಿದ ಪೆದ್ದನಾಗಿದ್ದ.

“ರೀ ಡಾಕ್ಟ್ರೇ! ಯಾಕ್ರೀ ಲೈಟ್ ಸುಮ್ಮನೆ ಉರಿಸ್ತಿದ್ದೀರಾ? ದುಡ್ಡು ಹೆಚ್ಚಿಗೆ ಇದ್ರೆ ನನಿಕ್ಕೊಡ್ರಿ. ನೀವು ಲೈಟು ಆರಿಸೋ ತನಕ ನಾನು ಹೋಗಲ್ಲ” ಎಂದು ಕೂಗು ಹಾಕಿದ್ದ. ಆಗ ಕೂಡಲೇ ಕಳ್ಳರು ಲೈಟು ಆರಿಸಿ ಗುರುವಪ್ಪನ ಕಾಟದಿಂದ ಬಚಾವಾಗಿದ್ದಾರೆ. ಡಾಕ್ಟ್ರು ದೀಪವಾರಿಸಿ ಮಲಗಿದರೆಂದು ಗುರುವಪ್ಪ ಮನೆಗೆ ಹಿಂತಿರುಗಿದ್ದಾನೆ.

ಮರುದಿನ ಬೆಳಿಗ್ಗೆ ಎಂಟಕ್ಕೆಲ್ಲ ವಾಪಸ್ ಬಂದ ನನಗೆ ಮನೆ ಬಾಗಿಲು ತೆರೆದುಕೊಂಡೇ ಇದ್ದದ್ದು ಆಶ್ಚರ್ಯವಾಯಿತು. ಮನೆಯ ಒಳಗೆಲ್ಲ ಪೇಪರ್ ವಿಮಾನ, ಹಡಗು, ಕಪ್ಪೆಗಳು, ಬಾಯಿ ತೆರೆದ ಸೂಟುಕೇಸು, ಬಟ್ಟೆಬರೆ ಎಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಒಂದು ಕ್ಷಣದಲ್ಲಿ ಸುದ್ದಿ ಹಬ್ಬಿತು. ನಮ್ಮನೆ ಒಳಹೊರಗೆ ಹತ್ತಾರು ಜನ ನೆರೆದರು. ಗಣೇಶ ಕುಂಟುತ್ತಾ ಬಂದು ತಾನು ರಾತ್ರಿ ಮಲಗಲು ‘ಹೆದರಿ ಬರಲಿಲ್ಲʼ ಎಂದು ತಿಳಿಸಿದ.

ಕಳ್ಳರು ಎಲ್ಲಾ ಬಿಟ್ಟು ನನ್ನಂತಹ ಬರಿಗೈ ದಾಸನ ಮನೆಗೆ ಆಸೆಯಿಂದ ಕಳ್ಳತನಕ್ಕೆ ಬಂದಿದ್ದು ಮತ್ತು ಕಳ್ಳರನ್ನು ಅಣಕಿಸಿದಂಥ ಪೇಪರ್ ಹಡಗು, ವಿಮಾನ, ಕಪ್ಪೆಗಳು, ದನದ ಔಷಧಿಗಳ ಖಾಲಿ ಬಾಟಲ್‌ಗಳನ್ನು ನೋಡಿ ನನಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಗತೊಡಗಿದೆ. “ಇದೇನು ಸಾರ್? ಮನೆಯಲ್ಲಿ ಕಳ್ಳತನವಾಗಿದೆ. ನೀವು ನೋಡಿದ್ರೆ ನಕ್ತಿದ್ದೀರಾ?” ಎಂದು ಜನರು ಅಚ್ಚರಿಗೊಂಡರು.

ಮನೆಯೆಲ್ಲ ಮತ್ತೊಮ್ಮೆ ಪರೀಕ್ಷಿಸಿದೆ. ಟಿವಿ, ಟೇಬಲ್ ಮೇಲಿಟ್ಟಿದ್ದ ಹದಿನೇಳು ರೂಪಾಯಿ ನಾಣ್ಯಗಳು ನಾಪತ್ತೆಯಾಗಿದ್ದವು. ಅದು ಕಳ್ಳರಿಗೆ ಸಿಕ್ಕ Hard Cash ಎಂದುಕೊಂಡೆ. ಅದರ ಜೊತೆ ಒಂದು ಟವಲ್ ಮತ್ತು ಒಂದು ಛತ್ರಿ ಕಾಣೆಯಾಗಿದ್ದವು. ಕಳ್ಳತನದ ರಾತ್ರಿ ಮಳೆ ಹನಿಯುತ್ತಿದ್ದುದರಿಂದ ಒಬ್ಬನು ಟವಲನ್ನೂ ಮತ್ತೊಬ್ಬ ಛತ್ರಿಯನ್ನೂ ಹಿಡಿದುಕೊಂಡು ಹೋಗಿರಬೇಕು!

ಇದಾದ ಮೇಲೆ ಒಂದು ದಿನ ಗುರುವಪ್ಪರ ಮನೆಗೆ ಹೋಗಿದ್ದೆ. ಗಂಡ ಹೆಂಡತಿ ಮಾತಾಡುತ್ತ ಕೂತರು. ಗುರುವಪ್ಪ ದಂಪತಿಗಳು “ಪೋಲೀಸ್ ಕಂಪ್ಲೇಂಟ್ ಕೊಡಬೇಕಾಗಿತ್ತು”ಎಂದರು.  ಅದಕ್ಕೆ ನಾನು “ಬ್ಯಾಡ ಬಿಡು. ಕಳ್ರು ಯಾರು ಅಂತ ಗೊತ್ತಾದ್ರೆ ಅವ್ರನ್ನ ಕರ‍್ಕೊಂಡು ಬಾ ಗುರುವಪ್ಪ. ಒಬ್ಬೊಬ್ಬ ಕಳ್ಳನಿಗೆ ನೂರು ರೂಪಾಯಿ ಕೊಡ್ತೀನಿ. ಪಾಪ! ಕಷ್ಟಪಟ್ಟಿದ್ದಕ್ಕೆ ಕೂಲಿಯಾದ್ರೂ ಸಿಗಲಿ” ಎಂದೆ. ಗಂಡ ಹೆಂಡತಿಯರಿಬ್ಬರೂ ಸಿಟ್ಟು ಸಿಟ್ಟಾದರು.

ಗುರುವಪ್ಪನ ಹೆಂಡತಿ ಘಟವಾಣಿ ಹೆಂಗಸು. ಆ ಏರಿಯಾದಲ್ಲಿ ಆಕೆಯೊಡನೆ ಮಾತಾಡಲು ಎಲ್ಲರೂ ಹೆದರುತ್ತಿದ್ದರು. ನಮ್ಮೊಡನೆ ಮಾತ್ರ ಬಹಳ ಸ್ನೇಹದಿಂದ ಇದ್ದಳಾಕೆ. “ಅಂದು ನಮ್ಮ ಮಕ್ಕಳು ಊರಲ್ಲಿರಲ್ಲಿಲ್ಲ. ನಿಜ. ಆದರೆ ನಾವು ಗಂಡ ಹೆಂಡತಿ ಇಬ್ಬರೂ ಇದ್ದೆವಲ್ಲ ಸಾರ್. ನೀವು ಮನೆಯ ಚಾವಿ ಕೊಟ್ಟು ಹೋಗಿದ್ದರೆ, ನಾನು ಗಂಡನನ್ನು ನಿಮ್ಮನೆಗೆ ಮಲಗಲು ಕಳುಹಿಸುತ್ತಿದ್ದೆ. ನಾವೀಗ ಒಬ್ಬರನ್ನು ಬಿಟ್ಟು ಒಬ್ಬರು ಮಲಗಬಲ್ಲೆವು ಸಾರ್”ಎಂದಳು.  ಅದಕ್ಕೆ ಹೇಗೆ ಉತ್ತರಿಸಬೇಕೋ ತಿಳಿಯಲಿಲ್ಲ.

‍ಲೇಖಕರು Avadhi

November 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಅಹ್ಹಹ್ಹಾ ,,,, ಮನೇ ತುಂಬಾ ಪುಸ್ತಕ ಸಿರಿಂಜು ದನ ಕುರಿ ಮೇಕೆ ಔಷಧ,,,, ಅಯ್ಯೋ‌ ಪಾಪ ,, ಕಳ್ಳರ ಹೊಟ್ಟೆ ಮೇಲೆ ಹೊಡೆದ್ದರಲ್ಲ ಸರ್,,

    ಪ್ರತಿಕ್ರಿಯೆ
    • Dr.Rathnakar mallya

      The narration is in such a way so that the whole incidence passed in front of the eye like a suspence movie combined with comedy. SUPEBB

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: