ನಟ

ಡಾ. ಅಜಿತ್ ಹರೀಶಿ


‘ಅಯ್ಯೋ, ಇಲ್ಬನ್ನಿ ಒಂದು ಸಲ. ನೋಡಿ ಇವನ್ನ ‘ಅಮ್ಮ ಹಾಗೆ ಕೂಗಿಕೊಂಡಿದ್ದು ನಟರಾಜನಿಗೆ ಹೊಸತೇನೂ ಅನ್ನಿಸಲಿಲ್ಲ. ಅಮ್ಮನ ಬಾಯಿಯ ಬಲದ ಮೇಲೆ ಸಂಸಾರ ನಡೆದರೆ, ಅಪ್ಪನ ಮೌನದಲ್ಲಿ ಮನೆಯ ಜೋಕಾಲಿ ತೂಗುತ್ತದೆ ಎಂದು ಯೋಚಿಸುತ್ತಾ ಗಣೆಗೆ ಇಳಿಬಿಟ್ಟ ಟವೆಲನ್ನು ಎಳೆದುಕೊಂಡು ಅವನು ಬಚ್ಚಲು ಮನೆಯತ್ತ ಹೆಜ್ಜೆ ಹಾಕಿದ.

ಹಂಡೆಯಲ್ಲಿ ಕುದಿ ಕುದಿ ನೀರು. ನಲ್ಲಿಯಲ್ಲಿ ಸಣ್ಣ ಧಾರೆಯಾಗಿ ತಣ್ಣೀರು ಬಿಟ್ಟು, ಹದ ಮಾಡಿಕೊಳ್ಳಲು ಹೋದವನಿಗೆ ಏನೋ ಹೊಳೆದಂತಾಗಿ ಹೊರಗೆ ಓಡಿದ. ಪಂಚಮಿಯನ್ನು, ತನ್ನ ನಿಕಾನ್ ಡಿ ಫೈವ್ ಕ್ಯಾಮೆರಾದಲ್ಲಿ ವಿವಿಧ ಭಂಗಿಗಳಲ್ಲಿ ಕ್ಲಿಕ್ಕಿಸಿ, ಉತ್ತಮವಾದ ಫೋಟೋಗಳನ್ನು ಆರಿಸಿ ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ. ಫೇಸ್ಬುಕ್ ನಲ್ಲಿ ಒಂದು ಫೋಟೋ ಮಾತ್ರ ಹಾಕಿ, ಪಂಚಮಿಯ ಕುರಿತು ಚೂರು ಬರೆಯಬೇಕು ಅಂತ ನಟರಾಜನಿಗೆ ಅನ್ನಿಸಿತು. ಹಂಡೆಗೆ ನೀರು ಬಿಟ್ಟಿದ್ದು ನೆನಪಾಗಿ ಮತ್ತೆ ಬಚ್ಚಲಿಗೆ ಓಡಿದ.

ನಲ್ಲಿಯ ನೀರು ನಿಂತಿತ್ತು. ಅಮ್ಮ ನಲ್ಲಿ ಬಂದ್ ಮಾಡಿರಬೇಕು ಅಂದುಕೊಳ್ಳುತ್ತ  ಬಿಸಿನೀರಿಗೆ ಬೆರಳು ಅದ್ದಿದ, ಅದು ಅವನಿಗೆ ಬೇಕಾದ ಹದಕ್ಕೆ ಇತ್ತು. ತಾನು ಮನೆಗೆ ಬಂದಾಗ ಅಮ್ಮ ಹೈ ಅಲರ್ಟ್ ನಲ್ಲಿ ಇರ್ತಾಳೆ ಎಂದು ತನ್ನಷ್ಟಕ್ಕೆ ತಾನೇ ಅಂದುಕೊಂಡ. ನಾಲ್ಕು ತಂಬಿಗೆ ನೀರನ್ನು ತಲೆಯ ಮೇಲೆ ಸುರುವಿಕೊಳ್ಳುವ ಹೊತ್ತಿಗೆ, ಇವಳು ಇರುವುದೇ ಹಾಗೆ! ಇವಳಿಗೆ ಮನೆಯೇ ಪ್ರಪಂಚ. ಇಲ್ಲಿಯ ಸಣ್ಣ ಅಲುಗಾಟವೂ  ಈಕೆಯ ಗಮನಕ್ಕೆ ಬಾರದಿರದು. ಈಕೆಯೇ ಪ್ರಕೃತಿ, ಎರಡು ಪುರುಷರು ಮತ್ತು ಈ ಸುತ್ತಲಿನ ಪರಿಸರ ಇವಳ ಕರುಣೆಯಲ್ಲಿ ಜೋಪಾನವಾಗಿವೆ ಎಂದು ಕೊಳ್ಳುತ್ತಾ ನಟರಾಜ ನೀರು ಹನಿಸಿಕೊಳ್ಳತೊಡಗಿದ.

‘ಕಳಲೆ ಚೊಲೋ ಇದ್ದೋ… ತಮ’ ಮಿಂದು ಬಂದ ನಟರಾಜನಿಗೆ ಕಾವಲಿಯ ಮೇಲೆ ಎಣ್ಣೆ ಹಚ್ಚಿದ ಬಾಳೆಯೆಲೆಯ ಚುಟ್ಟಿಯನ್ನು ಸವರುತ್ತಾ ಅಮ್ಮ ಹೇಳಿದಳು. ಚಹಾವನ್ನು ಸಹ ಮತ್ತೊಂದು ಒಲೆಯ ಮೇಲೆ ಅವಳು ಬಿಸಿ ಮಾಡಲು ಇಟ್ಟಿದ್ದಳು. ನಟರಾಜನ ಮೂಡು ಭಯಂಕರವಾದುದು ಎಂದು ಅಮ್ಮನಿಗೆ ಪಕ್ಕಾ ಗೊತ್ತು. ಹಾಗಂತಲೇ ಹಿತ್ತಂಡೆ ಹಿಡಿಯಲ್ಲಿ ಅಡಿಗೆ ಮನೆಯನ್ನು ಚೊಕ್ಕ ಮಾಡುತ್ತಿದ್ದವಳು ತನ್ನ ಕೆಲಸ ಬಿಟ್ಟು ಬಂದಿದ್ದಳು.

ಡೈನಿಂಗ್ ಟೇಬಲ್ಲಿಗೆ ಬಂದ ಮೇಲೆ ತಿಂಡಿ ತಡವಾಗುವಂತಿಲ್ಲ. ಹಾಗಂತ ಆತ ಏನನ್ನೂ ಬಾಯೊಡೆದು ಹೇಳುವುದಿಲ್ಲ. ಎದ್ದು ಹೋಗಿ ಬಿಡುತ್ತಾನೆ, ನೋವು ಹೆತ್ತ ಕರುಳಿಗೆ. ಹಾಗಾಗಿ ಅಮ್ಮ ಈಗೀಗ ಅದಕ್ಕೆ ಆಸ್ಪದವನ್ನೇ ಕೊಡುವುದಿಲ್ಲ. ಒಳ್ಳೆಯ ಲಹರಿಯಲ್ಲಿದ್ದರೆ ನಾಲ್ಕೈದು ದೋಸೆ ತಿಂದರೂ ತಿಂದನೆ. ಇದೇ ಲೋಕದಲ್ಲಿದ್ದರೆ ಮೂರು ಮಾತ್ರ. ವರ್ಷಕ್ಕೊಮ್ಮೆ ಕಳಲೆಯನ್ನು ತಿನ್ನಬೇಕು ಎಂಬುದು ರೂಢಿ, ಕಳಲೆ ತಿಂದರೆ ಗಳಗಂಡ ರೋಗ ಬರುವುದಿಲ್ಲ ಎಂಬ ನಂಬಿಕೆ ಹಿಂದಿನಿಂದ ಬಂದಿದ್ದು ಮತ್ತು ಅಮ್ಮನ ಆಸೆ. ಹಾಗಾಗಿಯೇ ಬೆಳಿಗ್ಗೆ ಮುಂಚೆ ಎದ್ದು ನಟರಾಜ ಕಳಲೆ ಕೀಳಲು ಗೆಳೆಯನೊಂದಿಗೆ ಹೋಗಿದ್ದ.

ಇದರಿಂದ ಬಿದಿರಿನ ಸಂತತಿಗೆ ಅಪಾಯ ಎಂಬ ಅರಿವು ಆತನಿಗಿದ್ದರೂ, ಅಮ್ಮನ ಇಷ್ಟದ ಸೆಳೆತ ಅದನ್ನು ಮೀರಿಸಿತ್ತು. ಇನ್ನೇನು ಕಳಲೆಯನ್ನು ಚೀಲದಲ್ಲಿ ತುಂಬಿಕೊಂಡು ಹೊರಟ ನಟರಾಜನಿಗೆ ಕಂಡಿದ್ದು, ಋಷಿಪಂಚಮಿ ಹೊಳೆಯಲ್ಲಿ ತೇಲಿ ಬರುತ್ತಿದ್ದ ಮೃಗದ ಮರಿ. ಅದೇನೆಂದು ಮೊದಲಿಗೆ ಸ್ಪಷ್ಟವಾಗಲಿಲ್ಲ. ಆಮೇಲೆ ತಿಳಿಯಿತು, ಅದೊಂದು ಜಿಂಕೆ ಮರಿ.

ಅದನ್ನು ಗೆಳೆಯನಿಗೆ ತೋರಿಸಿದ, ಆತ ಅದನ್ನು ಹೆಚ್ಚು ಲಕ್ಷ್ಯಕ್ಕೆ ತೆಗೆದುಕೊಳ್ಳುವ ಹಾಗೆ ಕಾಣಲಿಲ್ಲ. ಮಳೆ ವಿಪರೀತವಾಗಿ ಸುರಿಯುತ್ತಿತ್ತು. ಸುಳಿ ಇರುವ ಹೊಳೆ ಬೇರೆ ಅದು. ಆದರೂ ದುಡುಮ್ಮನೆ ಹೊಳೆಗೆ ಹಾರಿದ ನಟರಾಜ, ಒಂದೇಟಿಗೇ ಜಿಂಕೆ ಮರಿಯನ್ನು ಅವುಚಿಕೊಂಡು ಹಿಡಿದು ದಡಕ್ಕೆ ತಂದ. ಅದು ನೀರಿನ ಸೆಳೆತಕ್ಕೆ ಸಿಕ್ಕು ಹೋರಾಡಿ ಸುಸ್ತಾಗಿ ಕುಳಿತಿತ್ತು.

‘ಎಷ್ಟು ಚಂದ ಇದೆ ಅಲ್ವಾ? ಸಾಕೋಣ ಅನಿಸ್ತಿದೆ’ ಗೆಳೆಯನನ್ನು ನಟರಾಜ ಕೇಳಿದ. ದೋಸ್ತನಿಗೆ ಮನೆ ಸೇರಿದ್ದರೆ ಸಾಕಾಗಿತ್ತು. ‘ಅರಣ್ಯ ಇಲಾಖೆಯವರು ರಗಳೆ ಕೊಡ್ತಾರೆ ಮಾರಾಯ. ನಡೀ ಮನೆಗೆ ಹೋಗೋಣ’. ಇವರು ಹೊರಟರೂ ಇವರನ್ನೇ ಅದು ಹಿಂಬಾಲಿಸಿ ಬಂತು. ‘ಏನೋ ಋಣಾನುಬಂಧ’ ಎನ್ನುತ್ತಾ ನಟರಾಜ, ಓಮ್ನಿ ಕಾರಿನ ಕೀಯನ್ನು ಗೆಳೆಯನಿಗೆ ಕೊಟ್ಟು, ತಾನು ಜಿಂಕೆ ಮರಿಯನ್ನು ಎತ್ತಿಕೊಂಡು ಹಿಂದಿನ ಸೀಟಿನಲ್ಲಿ ಕುಳಿತ.

ಋಷಿಪಂಚಮಿ ಹೊಳೆಯಲ್ಲಿ ಸಿಕ್ಕ ಈ ಜಿಂಕೆ ಮರಿ ‘ಪಂಚಮಿ’ ಎಂದು ಆ ಕ್ಷಣದಲ್ಲಿ ಅವನಿಂದ ನಾಮಕರಣಗೊಂಡಿತ್ತು. ಫೇಸ್ಬುಕ್ ಓಪನ್ ಮಾಡಿದ ನಟರಾಜ, ಮೊದಲು ನೋಟಿಫಿಕೇಶನ್ ನಲ್ಲಿ ತೋರಿಸುವ ಬರ್ತ್ ಡೇ ವಿಶ್ ಲಿಸ್ಟ್ ಗೆ ಹೋಗಿ ಎಲ್ಲರಿಗೂ ಶುಭಾಶಯಗಳನ್ನು ಹೇಳಿ, ಹಾಗೇ ಒಮ್ಮೆ ಅಲ್ಲಿ ಕಣ್ಣಾಡಿಸಿ, ಪಂಚಮಿ ಕುರಿತು ಒಂದು ಪುಟ್ಟ ಪೋಸ್ಟ್ ಹಾಕಿ, ಇನ್ಸ್ಟಾಗ್ರಾಂನಲ್ಲಿ ಸಿಕ್ಕ ಲೈಕ್ ಗಳನ್ನು ನೋಡಿದ. ಆ ಖ್ಯಾತ ನಟಿ ಎಲ್ಲಾ ಚಿತ್ರಗಳನ್ನು ಇಷ್ಟಪಟ್ಟಿದ್ದು ಕಂಡು ಇವನು ಖುಷಿಯಾದ.

ಅವಳು ತನ್ನ ಟೆಲಿಗ್ರಾಂ ಮತ್ತು ಇನ್ಸ್ಟಾಗ್ರಾಂ ಖಾತೆಯನ್ನು ಮಾತ್ರ ಬಳಸುತ್ತಿದ್ದಳು. ಟ್ವಿಟರ್, ಫೇಸ್ಬುಕ್ ಪೇಜನ್ನು ಆಕೆಯ ಸೆಕ್ರೆಟರಿ ನೋಡಿಕೊಳ್ಳುತ್ತಿದ್ದಳು. ಅಲ್ಲಿ ನಟಿಯ ಹೊಸ ಫೋಟೋ ಹಾಕುವುದು, ಸಿನಿಮಾ ಅನೌನ್ಸ್ ಇತ್ಯಾದಿ ಮಾಡುತ್ತಿದ್ದಳು. ಎತ್ತರದ ನಿಲುವಿನ, ನೀಳ ನಾಸಿಕದ, ಜಿಂಕೆ ಕಂಗಳ ಬೆಡಗಿ ಈ ನಟಿ. ತೂಕದಿಂದ ಹಿಡಿದು ಎಲ್ಲವೂ ಅಗತ್ಯಕ್ಕಿಂತ ಕೊಂಚ ಕಡಿಮೆಯೇ ಆಕೆಗಿದ್ದವು. ಮೇಕಪ್ಪು ತೆಗೆದರೆ ಸ್ವಲ್ಪ ಕಪ್ಪೇ ಆದ ನಟಿ; ಈ ಎಲ್ಲಾ ಕಾರಣಗಳಿಂದಾಗಿಯೇ ನಟರಾಜನಿಗೆ ಇಷ್ಟವಾಗಿದ್ದಿರಬಹುದು.

ಚಿತ್ರಕಥೆಯಲ್ಲಿ ಬಲವಿದ್ದುದರಿಂದಲೋ, ನಿರ್ದೇಶಕನ ಕಾರಣದಿಂದಾಗಿಯೋ ಅಥವಾ ನಟಿಯ ನಟನೆಯಿಂದಲೋ ಆಕೆಯ ಸಿನಿಮಾಗಳು ನಿರಂತರವಾಗಿ ಹಿಟ್ ಆಗಿದ್ದವು. ‘ಕೋತಿಯೊಂದು ತನ್ನ ಜೊತೆ ನಟನೆ ಮಾಡಿದರೂ ಸಾಕು, ಸಿನಿಮಾ ಹಿಟ್ ಆಗುತ್ತದೆ, ಹೀರೋ ಬೇಕೆಂದಿಲ್ಲ ‘ಎಂದು ಆಕೆ ಹೇಳಿದ್ದಾಳೆ ಎನ್ನುವ ಹೇಳಿಕೆ ಒಂದಿಷ್ಟು ಸಂಚಲನ ಮೂಡಿಸಿತ್ತು. ಸಾಮಾನ್ಯವಾಗಿ ಆ ನಟಿಯ ಸಿನಿಮಾವೊಂದನ್ನು ಎರಡೇ ಬಾರಿ ನೋಡುತ್ತಿದ್ದ ನಟರಾಜ, ಒಮ್ಮೆ ಒಂದು ಸಿನಿಮಾ ಬಗ್ಗೆ ತಾನು ಎಂಟು ಸಲ ಈ ಸಿನಿಮಾ ನೋಡಿರುವುದಾಗಿಯೂ,  ಆಕೆಯ ನಟನೆ, ಸೌಂದರ್ಯ ಮತ್ತು ಡೈಲಾಗ್ ಡೆಲಿವರಿ ಕುರಿತು ಆಕೆಯ ಪೇಜ್ ನಲ್ಲಿ ಪುಂಖಾನುಪುಂಖವಾಗಿ ಹೊಗಳಿದ್ದ.

ಅದು ಕಾರ್ಯದರ್ಶಿ ಮೂಲಕ ನಟಿಗೆ ತಲುಪಿತ್ತು. ಆ ನಟಿ ಇವನ ಸೋಷಿಯಲ್ ಮೀಡಿಯಾ ಜಾತಕವನ್ನು ಜಾಲಾಡಿದ್ದಳು. ನಟರಾಜ ಒಬ್ಬ ನಿಷ್ಠುರವಾದಿಯಾಗಿದ್ದ. ವುಮನೈಸರ್ ನ ಲಕ್ಷಣಗಳೇನೂ ಅವಳಿಗೆ ಕಾಣಲಿಲ್ಲ. ಆತನ ಫೋಟೋಗ್ರಫಿ, ಚಾರಣ ಮತ್ತು ಉಗ್ರವಾದಿ ಹೇಳಿಕೆಗಳಿಗೆ ಒಂದಿಷ್ಟು ಫಾಲೋವರ್ಸ್ ಗಳಿದ್ದರು. ಮುಂದೆ ನಟರಾಜನ ಪ್ರಾಮಾಣಿಕ ಅಭಿಮಾನ, ನಟಿಯ ಮನಸ್ಸನ್ನು ಗೆದ್ದಿತ್ತು. ಮೆಸ್ಸೆಂಜರ್ ಮೂಲಕ ಅವನ ಮೊಬೈಲ್ ನಂಬರ್ ಪಡೆದುಕೊಂಡ ನಟಿ ಆರಂಭದಲ್ಲಿ ನಟರಾಜನನ್ನು ಸ್ವಲ್ಪ ಪರೀಕ್ಷಿಸಿದಳು. ಟೆಲಿಗ್ರಾಂ ನಲ್ಲಿ ಮೂವತ್ತು ಸೆಕೆಂಡುಗಳ ಸೆಲ್ಫ್ ಡಿಸ್ಟ್ರಕ್ಟ್ ಟೈಮರ್ ಹಾಕಿ, ಚ್ಯಾಟಿಂಗ್ ನಲ್ಲಿ ಸ್ಕ್ಯಾನಿಂಗ್ ಮಾಡಿ, ನಟರಾಜನಿಂದ ರಿಸ್ಕ್ ಇಲ್ಲ ಅಂತ ಮನದಟ್ಟಾದ ಮೇಲೆ, ವಾಟ್ಸಾಪ್ ಕಾಂಟ್ಯಾಕ್ಟ್ ಶುರು ಮಾಡಿದಳು. 

ಯುವಂತಿಕಾ ಯಾವುದೇ ಗಾಡ್ ಫಾದರ್ ಇಲ್ಲದೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವಳು. ದೊಡ್ಡ ಬ್ಯಾನರ್ ಅಡಿಯಲ್ಲಿ ಆಗಷ್ಟೇ ಹೊಸ ಮುಖವೊಂದನ್ನು ಹುಡುಕುತ್ತಿದ್ದರು. ಯುವಂತಿಕಾ ಇದರ ಫೋಟೋ ಶೂಟ್,  ಡೈಲಾಗ್ ಡೆಲಿವರಿ, ಸ್ಕ್ರೀನ್ ಟೆಸ್ಟುಗಳಲ್ಲಿ ಭಾಗವಹಿಸಿದ್ದಳು. ಅಂತಿಮ ಹತ್ತರಲ್ಲಿ ಇವಳ ಹೆಸರಿತ್ತು. ಹಳ್ಳಿ ಹುಡುಗಿಯ ಪಾತ್ರಕ್ಕೆ ಈಕೆ ಚೆನ್ನಾಗಿ ಒಪ್ಪುತ್ತಿದ್ದಳು. ಆದರೆ ದೊಡ್ಡ ಹೆಸರಿನ ಇನ್ನೊಂದು ಅಭಿನೇತ್ರಿಯ ಹೆಸರನ್ನು, ಆ ಸಿನಿಮಾದ ನಾಯಕನಾಗಿದ್ದ ಖ್ಯಾತ ನಟನು ಪ್ರೊಪೋಸ್ ಮಾಡಿದ್ದಾನೆ ಎಂಬ ಸುದ್ದಿ ಹಬ್ಬಿತ್ತು.

ಇವಳು ಫಿಲಂ ಲ್ಯಾಂಡಿಗೆ ಸಂಬಂಧಿಸಿದ ಎಲ್ಲಾ ಆಫೀಸುಗಳನ್ನು ಎಡತಾಕುತ್ತಿದ್ದ ಸಮಯದಲ್ಲಿ ಸಿಕ್ಕವನು ಅಂಕಲ್. ಯುವಂತಿಕಾಳಿಗೆ  ಅವನ ಮೂಲ ಹೆಸರೂ ಈಗ ಮರೆತು ಹೋಗಿದೆ. ಆದರೆ ತನಗೆ ಈ ಹೆಸರು ಕೊಟ್ಟವನು, ಇಲ್ಲಿ ಹೇಗೆ ಬದುಕಬೇಕೆಂದು ಹೇಳಿಕೊಟ್ಟವನು ಈ ಅಂಕಲ್. ಅವಳಿಗೆ ಚಿತ್ರರಂಗದ ಡಾರ್ಕ್ ಸೈಡ್ ತೋರಿಸಿದ್ದನು. ಯುವಂತಿಕಾಳಿಗೆ ಅವನು ಅಡ್ಜಸ್ಟ್ ಆಗುವುದು ಎಂದರೇನೆಂದು ಖುದ್ದು ಹೇಳಿಕೊಟ್ಟಿದ್ದನು. ಆ ದೊಡ್ಡ ಬ್ಯಾನರಿನವರ ಸಿನಿಮಾ ಸಿಗಬೇಕೆಂದರೆ ಏನು ಮಾಡಬೇಕು ಎಂಬ ಗುಟ್ಟನ್ನು ಅವತ್ತು ರಾತ್ರಿ, ಮಗ್ಗುಲಾಗುವ ವೇಳೆ ಕಿವಿಯಲ್ಲಿ ಉಸುರಿದ್ದನು. ಆ ನಾಯಕ ನಟನನ್ನು ಪೂರ್ವನಿರ್ಧಾರಿತವಾಗಿ ಇಂಪಿರಿಯಾದಲ್ಲಿ ಅಂಕಲ್ ಭೇಟಿ ಮಾಡಿಸಿದ್ದ. ತನ್ನ ಸಂಬಂಧಿಕರ ಮಗಳು ಎಂದು ಬೇರೆ ಹೇಳಿಕೊಂಡಿದ್ದ.

ನಾಯಕ ಎಲ್ಲಿದ್ದರೂ ರಾತ್ರಿ ಒಂಬತ್ತಕ್ಕೆ ಹೆಂಡತಿಯ ಮುಂದೆ ಹಾಜರಿರಬೇಕು. ಹಾಗಾಗಿ ಹಗಲು ಮಾತ್ರ ಅಡ್ಜಸ್ಟ್ ಮಾಡಿಕೋ, ಸರಿ ಹೋಗುತ್ತದೆ ಎಂದು ಅಂಕಲ್ ಹೇಳಿದಾಗ ಆಕೆ ತಲೆಯಲ್ಲಾಡಿಸಿದ್ದಳು. ಅಂದುಕೊಂಡಂತೆ ಪ್ರೊಜೆಕ್ಟ್ ಇವಳ ಪಾಲಾಗಿತ್ತು. ಅದು ಇಡೀ ಚಿತ್ರರಂಗವನ್ನು ಹುಬ್ಬೇರಿಸುವಂತೆ ಮಾಡಿತ್ತು. ಮೊದಲ ಮೂರು ಸಿನಿಮಾಗಳು ಆ ನಾಯಕನ ಜೊತೆಗೆ! ಕೊನೆಗೆ ನಾಯಕನ ಹೆಂಡತಿ ಸೆಟ್ಟಿಗೇ ಬಂದು ಕೂರತೊಡಗಿದಳು. ಒಂದು ದಿನ ಯುವಂತಿಕಾಳ ಕೈಯಲ್ಲಿ ಕಾರ್ಡೊಂದನ್ನು ಇಟ್ಟು ‘ ಇದರಲ್ಲಿರುವ ನಿರ್ದೇಶಕರನ್ನು ಭೇಟಿಯಾಗು. ಎಲ್ಲಾ ವ್ಯವಸ್ಥೆ ಮಾಡಲಾಗಿದೆ, ನನ್ನವನ ಜೊತೆ ಇನ್ನು ಕಾಣಿಸಿಕೊಳ್ಳಬೇಡ’ ಎಂದು ಮತ್ತೊಂದು ಅದೃಷ್ಟದ ಬಾಗಿಲನ್ನು ಆಕೆ ತನಗೆ ಗೊತ್ತಿಲ್ಲದೇ, ಯುವಂತಿಕಾಳಿಗೆ ತೆರೆದಿದ್ದಳು.

ಆ ಪ್ರತಿಭಾನ್ವಿತ ನಿರ್ದೇಶಕ, ಹಳ್ಳಿಯಿಂದ ಬಂದು ಮುಂದೆ ಹೈ ಪ್ರೊಫೈಲ್ ವೇಶ್ಯೆಯಾಗುವ ಹೆಣ್ಣಿನ ಪಾತ್ರದ ಹುಡುಕಾಟದಲ್ಲಿ ತೊಡಗಿದ್ದ. ಪಾತ್ರಕ್ಕೆ ಹೊಂದಿಸಿಕೊಂಡರೆ ನಾಯಕಿಯಾಗಿ ಮಾಡುವುದಾಗಿ ಹೇಳಿದ. ತನ್ನ ಜೊತೆಗೆ ಇಟ್ಟುಕೊಂಡು ಅವಳನ್ನು ತಿದ್ದಿ ತೀಡಿದ. ತಿಕ್ಕಲು ಅನ್ನೋದು ಬಿಟ್ಟರೆ ಅವನಿಂದ ಯುವಂತಿಕಾ ಬಹಳಷ್ಟು ಕಲಿತಳು. ಸಿನಿಮಾ ಜಗತ್ತಿನ ಕೆಲವು ಗಂಡಸರ ಬೇಕು, ಬೇಡಗಳನ್ನು ಬಲುಬೇಗ ಅರಿತಳು. ಅರಿತವರು ಮೇಲೆ ಬರುವುದು ಸುಲಭ, ಒಂದಿಷ್ಟು ಅದೃಷ್ಟವಿದ್ದರೆ ಎಂಬ ಸತ್ಯ ಅರಿತಳು. ಚಿತ್ರರಂಗದ ಕೀ ಜನರ ಸಂಪರ್ಕವನ್ನು ಸದ್ದುಗದ್ದಲವಿಲ್ಲದೆ ಗಳಿಸಿದ್ದಳು. ಯುವಂತಿಕಾ ಅವರೆಲ್ಲರ ಪಾಲಿಗೆ, ‘ಆಕೆ ತಮಗೆ ಮಾತ್ರ ಸಿಕ್ಕ ಮುಗ್ಧೆ!


ಎಲ್ಲಾ ಸಾಧಿಸಿ, ದೊರೆತ ಬಳಿಕ ಒಂದಿಷ್ಟು ವೈರಾಗ್ಯ ಮೂಡುತ್ತದೆಯಂತೆ. ಅಂತಹ ವಾತಾವರಣ ಯುವಂತಿಕಾಳಿಗೆ ಸೃಷ್ಟಿಯಾಗಿತ್ತು. ದೊಡ್ಡ ದೊಡ್ಡವರ ಒಡನಾಟದಲ್ಲಿದ್ದ ಈಕೆಯ ಹತ್ತಿರ ಸುಳಿಯಲು ಹೊಸ ನಟ, ನಿರ್ದೇಶಕರು ಹೆದರುತ್ತಿದ್ದರು. ಕೆಲಸದ ವೇಳೆ ಮಾತ್ರ ಜೊತೆಗೆ ಇರುತ್ತಿದ್ದರು. ಬಹಳ ದಿನಗಳ ನಂತರ ಒಂದು ಶೂನ್ಯ ಸೃಷ್ಟಿಯಾಗುವ ವೇಳೆಗೆ ಸಿಕ್ಕವನು ನಟರಾಜ. ನಟರಾಜ ತನ್ನ ಸಾಹಸಗಳನ್ನೆಲ್ಲಾ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಹೊತ್ತದು. ಒಟ್ಟಿನಲ್ಲಿ ಎಲ್ಲವೂ ಕೂಡಿತ್ತು. 

ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಗಳ ಜೊತೆ ಚ್ಯಾಟ್ ಗೆ ತೊಡಗಿದವರು ಕ್ರಮೇಣ ನಿತ್ಯ ಕೆಲಸಗಳು, ಖಾಸಗಿ ಸಂಗತಿಗಳನ್ನು ಪರಸ್ಪರ ಹಂಚಿಕೊಂಡರು. ಬರುಬರುತ್ತಾ ಚ್ಯಾಟ್ ಮಾಡುವುದು ದಿನಚರಿಯ ಭಾಗವೇ ಆಗಿಹೋಯಿತು. ಮೆಚ್ಚಿಸಬೇಕೆಂದೇ ಹೊರಟವನಿಗೆ ಹೊಗಳಲು ಕಾರಣಗಳು ಸಿಗುವುದು ಕಷ್ಟವಲ್ಲ. ನಟಿಯ ನಟನಾ ಕೌಶಲ್ಯ, ಪ್ರೋಗ್ರಾಮ್ ಗಳಲ್ಲಿ ಸರಳ ಹಾಗೂ ಸಹಜವಾಗಿ ಮಾತನಾಡುವ ರೀತಿ, ಹುಟ್ಟಿದ ದಿನವನ್ನು ಅನಾಥ ಮಕ್ಕಳ ಜೊತೆ ಕಳೆಯುವ ನಟಿಯ ರೂಢಿ ಹೀಗೆ ಪ್ರತಿಯೊಂದನ್ನೂ ನಟರಾಜ ಹೊಗಳುತ್ತಿದ್ದ. ಅವಳ ಸಿನೆಮಾಗಳ ಬಗ್ಗೆ ಓದಲೆಂದೇ ಸಿನೆಮಾ ಪತ್ರಿಕೆ ತರಿಸುತ್ತೇನೆ ಎಂತಲೂ ಹೇಳಿದ್ದ.

‘ನನ್ನಂಥ ಸಾಮಾನ್ಯರ ಜೊತೆಯೂ ಅಹಂಕಾರ ಇಲ್ಲದೇ ಮಾತನಾಡುವ ಸರಳತೆ ಇಷ್ಟವಾಯಿತು. ಯೂ ಆರ್ ರಿಯಲೀ ಟ್ಯಾಲೆಂಟೆಡ್, ಅದರಲ್ಲೂ ಗಾಡ್ ಫಾದರ್ ಇಲ್ಲದೇ ಚಿತ್ರರಂಗದಲ್ಲಿ ಇಷ್ಟು ಎತ್ತರಕ್ಕೆ ಏರಿದ್ದು ನಿಜಕ್ಕೂ ಗ್ರೇಟ್. ನಿಜವಾದ ಪ್ರತಿಭೆ ಎಲ್ಲಿದ್ದರೂ ಪ್ರಕಾಶಿಸುತ್ತದೆ ಎನ್ನುವುದಕ್ಕೆ ನೀವೊಂದು ಉತ್ತಮ ಉದಾಹರಣೆ’ ಎಂದು ಒಮ್ಮೆ ನಟರಾಜ ಹೇಳಿದಾಗ ಅವಳು ‘ಥ್ಯಾಂಕ್ಸ್ ಡಿಯರ್, ಯಾವುದೇ ಅಪೇಕ್ಷೆ ಇಲ್ಲದೇ,  ಪ್ರಾಮಾಣಿಕವಾಗಿ ಕಲೆ ಮತ್ತು ಸರಳತೆಯನ್ನು ಗೌರವಿಸುವ ನಿಮ್ಮಂತ ವ್ಯಕ್ತಿಗಳು ಈ ಕಾಲದಲ್ಲಿ ಬಹಳ ಅಪರೂಪ’ ಎಂದಿದ್ದಳು. ಮೊದಲ ಬಾರಿ ‘ಡಿಯರ್’ ಎಂಬುದನ್ನು ಓದಿದಾಗ ನಟರಾಜನೊಳಗೆ ಒಂದು ಅವ್ಯಕ್ತ ಪುಳಕ ಹಾದುಹೋಯಿತು. 

ಒಮ್ಮೆ ನಟಿಯು, ತಾನು ನಟಿಸುವ ಪಾತ್ರಗಳಲ್ಲಿ ಹೇಗೆ ಜೀವಿಸುತ್ತೇನೆ ಎಂದು ಹೇಳುತ್ತಾ, ಈಗ ಪ್ರೇಮಿಯ ಪಾತ್ರವೊಂದರಲ್ಲಿ ನಟಿಸುತ್ತಿದ್ದೇನೆ ಎಂದು ಕಣ್ಣು ಮಿಟುಕಿಸುವ ಇಮೋಜಿ ಹಾಕಿದ್ದಳು. ನಟರಾಜ ‘ಐ ಆಮ್ ರೆಡಿ’ ಅಂದಿದ್ದ. ಅವಳು ಜೋರಾಗಿ ನಗುವ ಇಮೋಜಿ ಹಾಕಿದ್ದಳು. ಹೀಗೆ ಒಬ್ಬರಿಗೊಬ್ಬರು ಪರಸ್ಪರ ತೆರೆದುಕೊಳ್ಳುತ್ತ ಸಾಗಿದರು. ಬಹುವಚನದಿಂದ ಏಕವಚನಕ್ಕೆ ಶಿಫ್ಟ್ ಆಗಿದ್ದರು. ಒಮ್ಮೆ ಒಂದು ಚಿತ್ರದಲ್ಲಿ ಬರುವ ಅತಿರೇಕ ಎನಿಸುವ ರೊಮ್ಯಾಂಟಿಕ್ ದೃಶ್ಯದಲ್ಲಿ ತಾನು ನಟಿಸುವುದಕ್ಕೆ ನಿರಾಕರಿಸಿದ್ದರ ಬಗ್ಗೆ ನಟಿ ಹೇಳುತ್ತಿದ್ದಾಗ, ಮಾತು ರೊಮ್ಯಾಂಟಿಕ್ ಮತ್ತು ಲೈಂಗಿಕ ವಿಷಯಗಳ ಕಡೆ ಹೊರಳಿತು. ಅಷ್ಟೇ ಅಲ್ಲ, ಅವಳ ಎಂ.ಸಿ ಡೇಟು ಸಹ ಇವನ ಮಸ್ತಿಷ್ಕದ ಕ್ಯಾಲೆಂಡರಿನಲ್ಲಿ ದಾಖಲಾಗಿತ್ತು. ಅಂದಿನಿಂದ ಅವರು ಮತ್ತಷ್ಟು ಆತ್ಮೀಯರಾದರು.

ಅವಳು ‘ಇವತ್ತು ಯಾಕೋ ತಲೆನೋವು’ ಎಂದರೆ ‘ನಾನು ಹೆಡ್ ಮಸಾಜ್ ಮಾಡಿ ಕೊಡಲಾ’ ಅಂತ ಇವನು ಕೇಳುವುದು, ಅವಳು ‘ಗಿವ್ ಮೀ ಎ ವಾರ್ಮ್ ಹಗ್’ ಎಂದಾಗ ಅವನು ‘ಮೊದಲೇ ಒಳ್ಳೆ ಮಳೆ ಇದೆ ಇಲ್ಲಿ’ ಅಂತ ಸಂಭಾಷಣೆಯನ್ನು ಬೇರೆ ಹಂತಕ್ಕೆ ಒಯ್ಯುವುದು, ಹೀಗೆ ಇನ್ನಷ್ಟು ಹತ್ತಿರವಾದರು. ಬೇಬಿ, ಡಾರ್ಲಿಂಗ್, ಹನಿ ಎಲ್ಲ ಶುರುವಾಯಿತು. ವಾಟ್ಸಾಪಿನಲ್ಲಿರುವ ಲಿಪ್ಸ್, ಹಾರ್ಟ್, ಜೋಡಿ ಹೃದಯಗಳ ಇಮೋಜಿಗಳನ್ನೆಲ್ಲ ಪರಸ್ಪರ ಕಳುಹಿಸಿಕೊಂಡರು. ನಟರಾಜ ಆಕೆಯನ್ನು ಆಕೆಗಿಂತ ಹೆಚ್ಚು ಸ್ಟಡಿ ಮಾಡಿದ್ದ. ಆಕೆಗೆ ಸಂಬಂಧಿಸಿದಂತೆ ಪ್ರತಿಯೊಂದನ್ನೂ ಪರಿಶೀಲಿಸಿದ್ದ. ನಟನೆಯ ಹಿಂದಿನ ಮನಸ್ಥಿತಿ, ಸಿನೆಮಾ ರಂಗದ ಬದುಕು ಮತ್ತು ಆಕೆಯ ಹಿನ್ನೆಲೆಯ ಅಜಮಾಸು ಐಡಿಯಾ ಆತನಿಗೆ ಸಿಕ್ಕಿತ್ತು.

ಆಕೆಯ ಕಣ್ಣುಗಳು, ನಗು, ಕುತ್ತಿಗೆಯ ಉಬ್ಬುವ ನರ, ಅದರ ಮೇಲಿನ ಮಚ್ಚೆ, ಹೀಗೆ ಮೆಚ್ಚಿಸಲು ಆತನಿಗೆ ಸಾಕಷ್ಟು ವಿಷಯಗಳಿದ್ದವು. ಆಕೆಯ ಸಿನಿಮಾದ ನಟನೆಯ ಸೂಕ್ಷ್ಮವನ್ನು ಎಳೆಎಳೆಯಾಗಿ ಬಿಡಿಸಿ ಇಡುತ್ತಿದ್ದ. ಆಕೆಯ ಡೈಲಾಗ್ ಡೆಲಿವರಿ, ಟೈಮಿಂಗ್ ಬಗ್ಗೆ ಮಾತನಾಡುತ್ತಿದ್ದ. ಇಡೀ ಅವರ ಟೆಲಿಗ್ರಾಂ ಸಂದೇಶ ಮತ್ತು ಕರೆಗಳಲ್ಲಿ ತೊಂಬತ್ತು ಭಾಗ ಅವಳಿದ್ದರೆ, ಹತ್ತು ಭಾಗ ಮಾತ್ರ ನಟರಾಜನಿದ್ದ. ಪ್ರತಿ ಹಂತದಲ್ಲೂ ಎಲ್ಲರ ಜೊತೆ ‘ಅಡ್ಜಸ್ಟ್’ ಮಾಡಿಕೊಂಡು ಬಂದಿದ್ದ ನಟಿ, ಯಾವುದೇ ವ್ಯವಹಾರ, ಲಾಭ ಲೆಕ್ಕಾಚಾರಗಳಿಲ್ಲದೇ, ಸದಾ ಹೊಗಳುತ್ತಾ ತನ್ನನ್ನು ಬೂಸ್ಟ್ ಮಾಡುತ್ತಿದ್ದ ನಟರಾಜನನ್ನು ಮೆಚ್ಚಿದ್ದರಲ್ಲಿ ಆಶ್ಚರ್ಯವಿರಲಿಲ್ಲ. 

ಹೀಗಿರುವಾಗಲೇ ಪಂಚಮಿ ಇವನ ಗೋಡೌನ್ ನಲ್ಲಿ ವಾಸಕ್ಕೆಂದು ಬಂದಿದ್ದು. ಮನೆಗೆ ತಾಗಿಯೇ ಇದ್ದ ಈ ರೂಮನ್ನು ನಟರಾಜ, ಕೆಲಸಗಾರರಿಂದ ಪೂರ್ತಿ ಖಾಲಿ ಮಾಡಿಸಿ, ಕ್ಲೀನು ಮಾಡಿಸಿ ಅದನ್ನು ಪಂಚಮಿಯ ಆಡಂಬೋಲ ಮಾಡಿಸಿದ್ದ. ಯುವಂತಿಕಾಗೆ ಮಾತಿನ ಖನಿಯಾಗಿದ್ದ ನಟರಾಜ, ಪಂಚಮಿಗೆ ಮೌನ ಮಿತ್ರನಾಗತೊಡಗಿದ್ದನು. ಮೊದಲ ದಿನ ಪಂಚಮಿಗೆ ಏನು ಆಹಾರ ಕೊಡಬೇಕು ಎಂದು ತಿಳಿಯದೇ, ಒಂದಿಷ್ಟು ಹುಲ್ಲು ನೀಡಿದ್ದ. ಗೆಳೆಯನೊಬ್ಬ ಹಾಲು ಕುಡಿಸುವಂತೆ ಸಲಹೆ ನೀಡಿದ್ದ. ಇವನು ಸಂಜೆ ಅದಕ್ಕೆ ಹಾಲು ಕುಡಿಸಿ, ಗೋಡೌನಿನ ಬಾಗಿಲು ಮುಚ್ಚಿ ಹೋಗಿದ್ದ. ರಾತ್ರಿ ಯಾಕೋ ಮಲಗುವ ಮುಂಚೆ ಪಂಚಮಿಯನ್ನು ನೋಡಬೇಕೆನಿಸಿತು. ನಾಲ್ಕು ಗೋಣಿಪಾಟು ಹಾಕಿಟ್ಟ ಜಾಗದಲ್ಲೇ ಮಲಗಿದ್ದ ಆ ಜಿಂಕೆ ಮರಿಯ ಮೂತಿಯನ್ನು ಇರುವೆಗಳು ಮುತ್ತಿದ್ದವು. ಅಕಸ್ಮಾತ್ ಇವನು ಅವತ್ತು ರಾತ್ರಿ ಬರದೇ ಹೋಗಿದ್ದರೆ ಪಂಚಮಿ ಉಳಿಯುತ್ತಿರಲಿಲ್ಲ. ಆಗ ಆತನಿಗೆ ನೆನಪಿಗೆ ಬಂದಿದ್ದು ತಾನು ಸಣ್ಣವನಿದ್ದಾಗ ಪುಟ್ಟ ನಾಯಿ ಮರಿಯೊಂದನ್ನು ಸಾಕಲು ಹೋಗಿ ಅದನ್ನು ಕೊಂದದ್ದು! ಅಚಾನಕ್ಕಾಗಿ ಸಿಕ್ಕಿದ ನಾಯಿ ಮರಿಯನ್ನು ತಂದು ಹಗ್ಗದಲ್ಲಿ ಕಟ್ಟಿ ಹಾಕಿದ್ದ. ಮೊದಲೇ ಹೆದರಿದ್ದ ನಾಯಿಮರಿ ತಿರುತಿರುಗಿ ಓಡಾಡಿ, ಆ ಹಗ್ಗವು ನೇಣಾಗಿ, ಬೆಳಗಾಗುವುದರೊಳಗೆ ಶವವಾಗಿತ್ತು. ಅದು ಅವನ ಜೀವನದಲ್ಲಿ ಮರೆಯಲಾಗದ ಕಹಿ ಅನುಭವವಾಗಿತ್ತು.

ಗಿಡದ ಕುಡಿ, ಹಸಿ ಹುಲ್ಲು, ಕಾಡಿನ ಹಣ್ಣುಗಳು ಪಂಚಮಿಗೆ ಇಷ್ಟವಾದವು. ನಾಯಿಯ ಕೂಗಿಗೆ ಅದು ಹೆದರುತ್ತಿತ್ತು. ಸರ್ಪ ಕಂಡರೆ ಬೆದರುತ್ತಿತ್ತು, ಅದೇ ಕೇರೆ ಹಾವನ್ನು ಕೇರು ಮಾಡುತ್ತಿರಲಿಲ್ಲ. ಹಸುವಿನ ಕರುವಿನ ಜೊತೆ ಚಿನ್ನಾಟ ಆಡುತ್ತಿತ್ತು. ಕ್ರಮೇಣ ಮನೆಯಲ್ಲಿ ಮಾಡಿದ ಸಿಹಿ ತಿನಿಸುಗಳು ಪಂಚಮಿಗೆ ಪ್ರಿಯವಾಗತೊಡಗಿತು. ಮನೆಯ ಸದಸ್ಯನಂತೆ ಇರತೊಡಗಿತು. ಕೂಡಿ ಹಾಕುವ ಅವಶ್ಯಕತೆ ಕಾಣಿಸಲಿಲ್ಲ. ನಟರಾಜ ಬಿಡಲಾರದ ನೆಂಟನಾದ. ಅಂವ ಹೊರಗೆ ತಿರುಗಾಟಕ್ಕೆ ಹೋದವ, ಎದುರಿಗೆ ಬಂದು ನಿಂತರೆ ಪಂಚಮಿ ಖುಷಿಯಿಂದ ಚಿನ್ನಾಟವಾಡುತ್ತಿತ್ತು. ಅವನು ಒಂದು ದಿನ ಕಾಣಿಸದಿದ್ದರೂ ಪಂಚಮಿ ಆಹಾರ ಸೇವಿಸುವುದನ್ನು ನಿಲ್ಲಿಸಿದಾಗ ನಟರಾಜ ಕಂಪಿಸಿದ.

‘ನಾಡಿದ್ದು ನಿಮ್ಮೂರ ಕಡೆ ಶೂಟಿಂಗ್ ಕಣೋ’ ಅಂತ ಯುವಂತಿಕಾ ಮೆಸೇಜ್ ಮಾಡಿದ್ದಳು. ಇವನೇನೋ ಪೋಲಿಯಾಗಿ ತಮಾಶೆಗೆ ಹೇಳಿದ್ದಕ್ಕೆ ‘ ಸಿಗು ಕೈಗೆ’ ಎಂದಿದ್ದಳು. ಪ್ರತಿಷ್ಠಿತ ‘ಕುಟೀರ ರೆಸಾರ್ಟ್’ ನಲ್ಲಿ ಆಕೆಗೆ ರೂಂ ಮಾಡಲಾಗಿತ್ತು. ಮೊದಲ ದಿನ ತನಗೆ ಶೂಟಿಂಗ್ ಇಲ್ಲವಾಗಿಯೂ, ಅವತ್ತು ತಾನು ಬಿಡುವಾಗಿ ಇರುವುದಾಗಿಯೂ ಹೇಳಿದಳು. ಅವತ್ತು ನಟ ತನ್ನ ಡಸ್ಟರ್ ಗಾಡಿಯನ್ನು ಗರಾಜಿನಿಂದ ಹೊರತೆಗೆದು ತೊಳೆದಿದ್ದ. ಬೆಳಿಗ್ಗೆ ಫುಲ್ ಟಿಪ್ ಟಾಪಾಗಿ ತಯಾರಾಗಿ ನಟ, ಕುಟೀರದ ಮುಂದೆ ಹೋಗಿ ನಿಂತು ಫೋನಾಯಿಸಿದ.

ಯುವಂತಿಕಾ ಕರೆ ಸ್ವೀಕರಿಸಿ, ಇಲ್ಲಿ ಒಳಗೆ ಪ್ರವೇಶ ಅನುಮಾನ ಎಂದು ಹೇಳಿದಳು. ತಾನೇ ಕೆಳಗೆ ಬರಲಾ ಎಂದು ಕೇಳಿದಳು. ಆಕೆ ಗೊಂದಲದಲ್ಲಿದ್ದಳು. ಕೂಲ್ವಿನ್ ಕೂಲಿಂಗ್ ಗ್ಲಾಸ್ ಹಾಕಿ ಥೇಟ್ ನಟನಂತೆ ಕಾಣುತ್ತಿದ್ದ ನಟ, ಕೂಲಾಗೇ ಅವಳ ಫ್ಲೋರ್ ಮತ್ತು ರೂಮಿನ ನಂಬರ್ ಕೇಳಿಕೊಂಡ. ಅಕಸ್ಮಾತ್ ಕೌಂಟರಿನಿಂದ ಫೋನ್ ಬಂದರೆ ಒಳಬಿಡುವಂತೆ ಹೇಳು, ಅಂತಹ ಸಾಧ್ಯತೆ ಬರಲಿಕ್ಕಿಲ್ಲ ನೋಡೋಣ ಎಂದ. ಆತ ಕೌಂಟರ್ ನ ಮುಂದೆ ಕ್ಷಣಕಾಲ ನಿಂತಂತೆ ನಟಿಸಿದ. ಅಲ್ಲಿದ್ದ ನೌಕರ ಇವನತ್ತ ನೋಡಿದ. ಆಕೆಯ ಬಳಿಯೇ ತನ್ನ ಐಫೋನ್ ನಿಂದ ಮಾತನಾಡುತ್ತಿರುವಂತೆ ನಟಿಸಿದ ನಟ ‘ ಯುವಂತಿಕಾ, ಫೋರ್ ನಾಟ್ ಒನ್…ಐ ಆಮ್ ನಟ, ವಿದ್ ಅಪಾಯಿಂಟ್ ಮೆಂಟ್’ ಎಂದು ಆ ರಿಸೆಪ್ಷನಿಸ್ಟ್ ಬಳಿ ಹೇಳುತ್ತಾ ಮುಂದೆ ಸಾಗಿದ.

ಇವರ್ಯಾರೋ, ಮತ್ತೊಂದು ಲಾಡ್ಜಿನಲ್ಲಿ ಉಳಿದುಕೊಂಡಿರುವ ಈ ಸಿನಿಮಾದ ಜನರೇ ಇರಬೇಕು ಎಂದು ಕೌಂಟರಿನಲ್ಲಿ ಕುಳಿತವ ಸುಮ್ಮನಾದ. ಮತ್ತೆ ಎಚ್ಚೆತ್ತುಕೊಂಡು, ನಟ ಸ್ವಲ್ಪ ಮುಂದೆ ಹೋದ ಮೇಲೆ ಫೋರ್ ನಾಟ್ ಒನ್ ಗೆ ಕರೆ ಮಾಡಿ ನಟನೊಬ್ಬನ ಆಗಮನವನ್ನು ಆಕೆಗೆ ಖಚಿತ ಪಡಿಸಿದ. ಆಕೆ ‘ ಸರಿ, ಕಳಿಸಿ’ ಎಂದಳು. ಅವಳು ಬಾಗಿಲು ತೆರೆದೇ ಇಟ್ಟಿದ್ದಳು. ನಟರಾಜ ತನ್ನೂರಿನಲ್ಲಿ ಸಿಗುವ ವಿಶೇಷ ತಿಂಡಿ ತಿನಿಸು ಮತ್ತು ಒಂದಿಷ್ಟು ಗಿಫ್ಟ್ ಗಳನ್ನು ಟೇಬಲ್ ಮೇಲಿರಿಸಿ ಕೈಗಳೆರಡನ್ನು ಸೇರಿಸಿ ವಂದಿಸಿದಂತೆ ಮಾಡಿ, ಗೊಂದಲಕ್ಕೆ ಬಿದ್ದವನಂತೆ ಹ್ಯಾಂಡ್ ಶೇಕ್ ಮಾಡಲು ಕೈ ಮುಂದೆ ಮಾಡಿ, ಮತ್ತೆ ಹಿಂದೆಗೆದುಕೊಂಡೆಲ್ಲಾ ಮಾಡಿದನು.

ಯುವಂತಿಕಾ ನಸುನಗುತ್ತಾ ಹಗ್ ಗೆ ಕೈಗಳನ್ನು ಅಗಲಿಸಿ ನಿಂತಳು. ಇವನು ಅಳುಕುತ್ತಲೇ ಅವಳತ್ತ ಜರುಗಿದ. ಅವಳು ಹಿಗ್ಗಿ ಹಿಗ್ಗಿ ನಗುತ್ತಾ ಬಿಗಿಯಾಗಿ ತಬ್ಬಿ ಹಿಡಿದಳು. ಇವನು ಕೈಗಳನ್ನು ಇಳಿಬಿಟ್ಟಿದ್ದ. ದೇಹವನ್ನು ಮಾತ್ರ ಬಾಗಿಸಿದ್ದ. ನಂತರ ಒಂದು ಕೈಯನ್ನು, ಆಮೇಲೆ ಎರಡೂ ಕೈಗಳನ್ನು ಸೇರಿಸಿ ಆಲಂಗಿಸಿದ. ಯುವಂತಿಕಾಗೆ ಎಲ್ಲವೂ ಗಮನಕ್ಕೆ ಬರುತ್ತಲಿತ್ತು. ಅವಳು ಬಂಧನದಲ್ಲಿ ಇರುವಾಗಲೇ ಇವನನ್ನು ತಲೆಯೆತ್ತಿ ನೋಡಲು ಹೋದಾಗ ನಟನ ತುಟಿ ಅವಳ ಹಣೆಯನ್ನು ಚುಂಬಿಸಿತು. ಅದು ಅವಳಿಗೆ ಕಾಕತಾಳೀಯ ಅನ್ನಿಸಿತು. ಆದರೆ ನಟ ಪಳಗಿದ್ದ, ಪರಕಾಯ ಪ್ರವೇಶ ಮಾಡಿದ್ದ. ನಟಿಯು ಪಾತ್ರದಿಂದ ಹೊರಬಂದ ಯುವಂತಿಕಾ ಮಾತ್ರ ಆಗಿದ್ದಳು ಆ ಕ್ಷಣ! ಮುಂದೆ ಯಾವುದೂ ಅವಳ ಹಿಡಿತದಲ್ಲಿ ಘಟಿಸಲೇ ಇಲ್ಲ. ಸಿನೆಮಾದ ಸೀನ್ ತರಹ ಜರುಗುತ್ತ ಹೋಯಿತು. ಆಕ್ಷನ್, ಕಟ್ ಹೇಳಲು ಯಾರಿರಲಿಲ್ಲ. ನಟನ ಪಾದವನ್ನು ಚುಂಬಿಸಿದ ಅವಳು, ಅವನಿಗೆ ಒರಗಿದಳು. ನಂತರ ಯುವಂತಿಕಾಳ ಆಣತಿಯಂತೆ ದೀಪವಾರಿತು.

ಇನ್ನು ನೀನು ಹೋಗು’ ಅಂತ ಯುವಂತಿಕಾ  ನಟನನ್ನು ದೂಡಿ ಎಬ್ಬಿಸಿದಾಗ ಮರುದಿನ ಬೆಳಿಗ್ಗೆಯಾಗಿತ್ತು. ಒಂದಿಡೀ ದಿನ ನಟ ಅವಳ ಜೊತೆ ಕಳೆದಿದ್ದ. ಅವತ್ತಿಡೀ ಮಾತು ಮತ್ತು ಕೃತಿ ವೃತ್ತದಂತೆ ತಿರುಗಿತ್ತು. ನಟ, ಯುವಂತಿಕಾಳನ್ನು ಆಲಂಗಿಸಿ ಹಾಸಿಗೆಗೆ ಎಳೆದುಕೊಳ್ಳಲು ನೋಡಿದ. ‘ ವಾಟ್ ದ ಹೆಲ್ ಆರ್ ಯೂ ಡೂಯಿಂಗ್? ಆಲ್ ರೆಡಿ ಇಟ್ಸ್ ಲೇಟ್’ ಎಂದು ಆಕೆ ಸಣ್ಣಗೆ ಚೀರಿದಳು. ಆಗ ನಟರಾಜನಿಗೆ ಪೂರ್ತಿ ಎಚ್ಚರವಾಯಿತು. ‘ ಓಹ್ ಸ್ಸಾರಿ ಸ್ಸಾರಿ ಡಿಯರ್’ ಎಂದ. ಬಟ್ಟೆ ಧರಿಸಿ ಅಲ್ಲಿಂದ ಹೊರಬಿದ್ದ. 

ಮನೆಗೆ ಬಂದವನು ಮೊದಲು ಸ್ನಾನ ಮುಗಿಸಿಕೊಂಡು ಮುಂದಿನ ಕೆಲಸ ಅಂತ ಹೊರಟವನಿಗೆ ಅಮ್ಮ ದೊಡ್ಡ ಧ್ವನಿಯಲ್ಲಿ ಕೊಂಚ ಕಟುವಾಗಿಯೇ ಹೇಳಿದಳು, ‘ಪಂಚಮಿ ನಿನ್ನೆ ಬೆಳಿಗ್ಗೆಯಿಂದ ಏನೂ ತಿಂದಿಲ್ಲ ಗೊತ್ತಾ? ಹೋಗಬೇಕಾದರೆ ಏನಾದರೂ ತಿನ್ನಿಸಿ ಹೋಗಬೇಕಿತ್ತು. ಜವಾಬ್ದಾರಿಯಿಲ್ಲದೇ ಮೂಕ ಪ್ರಾಣಿಗಳನ್ನು ಸಾಕಬಾರದು. ‘ಟವೆಲ್ ಹಿಡಿದು ಬಚ್ಚಲಿಗೆ ಹೊರಟವನು ಗೋಡೌನಿನತ್ತ ಹೋದ. ಪಂಚಮಿಗೆ ಒಂದಿಷ್ಟು ಹುಲ್ಲು ತಿನ್ನಿಸಿದ. ಪಂಚಮಿ ಇವನ ಪಾದವನ್ನು ನೆಕ್ಕಿತು. ಆಗ ಇವನಿಗೇ ಗೊತ್ತಿಲ್ಲದಂತೆ ತರಂಗವೊಂದು ಪಾದದಿಂದ ಕಾಲಗುಂಟ ಸಾಗಿ, ನೆತ್ತಿಯಿಂದ ಹೊರಚಿಮ್ಮಿದ ಅನುಭವವಾಯಿತು.

ಕುಸಿದು ಕುಳಿತ ನಟರಾಜ, ಗೆಳೆಯನಿಗೆ ಫೋನಾಯಿಸಿದ. ‘ಬೇಗ ಬಾ, ಪಂಚಮಿಯನ್ನು ಋಷಿಪಂಚಮಿ ಹೊಳೆಯ ಬಳಿ ಬಿಟ್ಟು ಬರಬೇಕಿದೆ.’ ಪಂಚಮಿಯು, ನಟರಾಜ ಆಚೆ ಹೋಗದಂತೆ ಮೈ ಹೊಸೆಯುತ್ತ, ನೆಕ್ಕುತ್ತಾ ಬೆನ್ನು ಬಿಡಲಿಲ್ಲ. ಜಿಂಕೆ ಸಾಕಿದ ಅನುಭವವಿದ್ದ ಮತ್ತೊಬ್ಬ ಹಿರಿಯರಿಗೆ ಫೋನಾಯಿಸಿದ.’ ಸಡಿಲವಾಗಿ ಅದರ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿನಲ್ಲಿ ಬಿಟ್ಟು ಬನ್ನಿ. ಕೆಲವು ದಿನಗಳ ಕಾಲ ಜಿಂಕೆಗಳ ಹಿಂಡು ಅದನ್ನು ಸೇರಿಸಿಕೊಳ್ಳುವುದಿಲ್ಲ. ದನಗಳ ಜೊತೆಗೆ ಅದು ಇರುತ್ತದೆ. ಕ್ರಮೇಣ ಜಿಂಕೆ ಹಿಂಡಿನ ಜೊತೆ ಆ ಮರಿ ಸೇರಿ ಹೋಗುತ್ತದೆ.’ ಎಂದರು. ನಟರಾಜನಿಗೆ ಬುದ್ಧಿ ಸ್ವಲ್ಪ ಸ್ಥಿಮಿತಕ್ಕೆ ಬಂತು. ಅಷ್ಟರೊಳಗೆ ಸ್ನೇಹಿತ ಬಂದಿದ್ದ. ‘ಆ ಜಿಂಕೆ ಮರಿಯನ್ನು ಹಿಡಿದುಕೊಂಡು ಹಿಂದೆ ಕುಳಿತುಕೋ’ ಎಂದು ಆಗ್ರಹಪೂರ್ವಕವಾಗಿ ಅವನಿಗೆ ಹೇಳಿದ. ಓಮ್ನಿಯನ್ನು ಚಾಲೂ ಮಾಡಿದ ನಟರಾಜ ಮುಂದೆ ಒಂದೂ ಮಾತನಾಡಲಿಲ್ಲ.

ಋಷಿಪಂಚಮಿ ಹೊಳೆಗಿಂತ ತುಂಬಾ ಹಿಂದೆ ಗಾಡಿ ನಿಲ್ಲಿಸಿದ ನಟರಾಜ ‘ಜಿಂಕೆ ಮರಿಯನ್ನು ಹೊಳೆ ದಾಟಿಸಿ ಬಿಟ್ಟು, ಕಣ್ಣಿಗೆ ಒಂದು ಸಡಿಲವಾದ ಬಟ್ಟೆಯ ಪಟ್ಟಿ ಕಟ್ಟಿ ಬಾ’ ಎಂದು ತನ್ನ ಕರವಸ್ತ್ರವನ್ನು ಕೊಡಲು ಹೊರಟವನು, ಅಡ್ಡ ಬಾಗಿ ಕೆಳಗೆ ಕವರಿನಲ್ಲಿ ಇದ್ದ ಗಾಡಿ ಒರೆಸಲೆಂದು ತಂದ ಹೊಸ ಕೇಸರಿ ಬಣ್ಣದ ಸ್ಪಾಂಜಿನ ಮೃದುವಾದ ಬಟ್ಟೆಯನ್ನು ಸ್ನೇಹಿತನಿಗೆ ಕೊಟ್ಟ. ಗೆಳೆಯ ಹೊಳೆಯ ಕಡೆ ಹೋಗುತ್ತಿದ್ದಂತೆ ಕಾರಿನಿಂದ ಇಳಿದ ನಟರಾಜ, ಪಕ್ಕದಲ್ಲಿದ್ದ ಹೊಳೆಗೆ ಸೇರುವ ಹಳ್ಳದ ಬಳಿ ಕುಳಿತು ಬಿಕ್ಕಿ ಬಿಕ್ಕಿ ಅಳತೊಡಗಿದನು. ಅದೇ ಸಮಯಕ್ಕೆ ಸರಿಯಾಗಿ ಮಳೆ ಕೂಡ ಆರಂಭವಾಯಿತು. ಇವನ ಕಣ್ಣೀರು, ಮಳೆನೀರಿನ ಜೊತೆ ಹಳ್ಳ ಸೇರಿ ಹೊಳೆಯತ್ತ ಹರಿಯತೊಡಗಿತು.

‍ಲೇಖಕರು Avadhi

November 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: