ಹೊಳೆವ ಚಿಕ್ಕಿಯ ಕಣ್ಣು..

ಹೊಗೆ

ಯಾವುದೋ ಸಮಾರಂಭ. ಅಂದು ಇಬ್ಬರ ಭೇಟಿಯಾಯಿತು. ಕಣ್ಣಲ್ಲಿ ನೀರು ತುಂಬತೊಡಗಿತ್ತು.

ಬಾಂಧವ್ಯವೆಂಬ ಅಂಟಿನ ನಂಟು, ಮುಚ್ಚಿಡಲಾರದೆ, ಒಳಗೊಳಗೆ ನುಲಿಯುತ್ತಿತ್ತು. ಬಿಟ್ಟುಬಿಡಲಾರದ ಸಖ್ಯ ಏನನ್ನೂ ತೋರಗೊಡದೆ  ಸಣ್ಣ ಮುಗುಳನಗೆಯ ಹಂಚಿಕೆಯಾಯಿತು. ಅದರಲ್ಲಿ ಪ್ರೀತಿಯಿತ್ತೇ? ವಿರಹವಿತ್ತೇ? ಅಗಲಿಕೆಯಿತ್ತೇ? ತಿಳಿಯದಾಗಿತ್ತು. ಹಬ್ಬಿಕೊಂಡ ಘಳಿಗೆಯಲ್ಲಿ ನಲಿಯುತ್ತಿದ್ದ  ಹೊಳಪಿಗೆ ಇಂದು ಮಂಕು ಕವಿದಿತ್ತು… ತೋರಿಕೆಗೆ ಸಮಾಧಾನವಾಗಿದ್ದರೂ ಲವಲವಿಕೆ ನರಳುತ್ತ ಇಬ್ಬರ ನಡುವೆ ತೆವಳುತ್ತಿತ್ತು.

ಬಿಡಬೇಕೆಂಬ ತೋರಿಕೆ, ಬಿಡಬಾರದೆಂಬ ಕನವರಿಕೆ, ಚಪ್ಪಾಳೆ ಹೊಡೆದರೂ ಸದ್ದು ಮಾಡದೆ ಗಾಳಿಯಲ್ಲಿ ಮಾಯವಾಗುತ್ತಿತ್ತು. ಒಬ್ಬರನ್ನೊಬ್ಬರು, ತಾಕದಿದ್ದರೂ ಉಸಿರು ನಿಟ್ಟುಸಿರಾಗುತಿತ್ತು. ಉಸಿರು ತಾಗಿ ಹಸಿರಾಗುವುದೇ ಮೇಲೇನೋ, ಎನ್ನುವಷ್ಟರಮಟ್ಟಿಗೆ ಮೌನ ಒಳಗೊಳಗೆ ಅಳುತಿತ್ತು. ನಗೆಯಿಲ್ಲದ ಭೇಟಿ ಕೈಬೀಸಿ ಬಂದು ಮನೆಯಲ್ಲಿ ಮಲಗಿತು.

ಇರುಳ ಚಂದ್ರನ ನಗೆ

ಹೊಳೆವ ಚಿಕ್ಕಿಯ ಕಣ್ಣು

ನಿದ್ದೆಯಲ್ಲಿ ನರಳಿ ಕಣ್ಣೀರುಗರೆದು

ದಿಂಬಿನ ಮೇಲಿಳಿದಿತ್ತು.

ಬೆಳಗಿನ

ಸೂರ್ಯಕಿರಣದ ಹೊಳಪು

ಝಳದ ಕತ್ತಿ ಝಳಪಿಸುತ್ತ

ಕೆರೆಯ ನೀರ ಒಳಗಿಳಿಯುತ್ತಿತ್ತು .

ಸಣ್ಣಕೆ ಹರಿದಾಡುವ ನೀರಲೆಗಳ ನೆರಳು,

ಕೆರೆದಂಡೆಯ ಮರದೆಲೆಗಳ ಮೇಲೆ

ಮರೀಚಕೆಯಾಗಿ ಸಾಗುತ್ತಿತ್ತು.

ಅದನ್ನೇ ಅನುಸರಿಸಿ ನೋಡುತ್ತಾ ಅವನ ಕಣ್ಣು, ತನ್ನೊಳಗಿನ ಅರ್ಥವನ್ನು ತಡಕುತ್ತಿತ್ತು.

ಇತ್ತ, ತುಳಸಿ ಕಟ್ಟೆಗೆ ಹೊತ್ತಿಸಿದ್ದ ಊದುಬತ್ತಿಯ ಪರಿಮಳ ಗಾಳಿಯಲ್ಲಿ ತೇಲುತಿತ್ತು. ಉರಿವ ಬತ್ತಿಯ ತುದಿಯಿಂದ ಮೇಲೆದ್ದ ಹೊಗೆ ಗಾಳಿದಿಕ್ಕಿಗೆ ಹಬ್ಬುತ್ತಿತ್ತು.

ಅಲ್ಲೇ ಆಟವಾಡುತಿದ್ದ,

ಹೊಳೆಯುವ ಕಂಗಳ ಬಾಲೆ

ಪರಿಮಳದ ಹಿಂದೆ ಓಡುತ್ತ ಸಾಗುತ್ತ

ಪುಟ್ಟಕೈಯಿಂದ ಹೊಗೆಯನ್ನು

ಅಡ್ಡ ಹಾಕುತಿತ್ತು. ಬಿಡುತಿತ್ತು.

ಬಿಟ್ಟುಗುಟ್ಟು, ಗುಟ್ಟುಬಿಟ್ಟು,

ಹಿಡಿದು ಬಿಡುವಾಟದಲ್ಲಿ

ಅತ್ತ ಇತ್ತ ಓಲಾಡುತ್ತಿತ್ತು .

ಇವಳ ಕಣ್ಣಲ್ಲಿ ಆಟವನ್ನೇ ನೋಡುವ ಬೆರಗು. ಅಂಟಿದ ನಂಟಿನ ಗಂಟು. ಮಗುವಿನ ನೆರಳಲ್ಲಿ ಹುಡುಕಾಟ.

‍ಲೇಖಕರು admin

January 8, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: