ಅಟ್ಯಾಕ್..

 

 

 

 

 

 

********
ಡಾ.ಲಕ್ಷ್ಮಣ ವಿ ಎ

ದೊಂಬಿ, ಗಲಾಟೆ,ಅಪಘಾತ,ಸಾಮೂಹಿಕ ಹಿಂಸಾಚಾರದಂತಹ ಅತಿ ಸೂಕ್ಷ್ಮ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವಾಗ ರೋಗಿಯವರ ಕಡೆಯವರ ಕೋಪಕ್ಕೆ ಸುಲಭವಾಗಿ ತುತ್ತಾಗುವವರು ವೈದ್ಯರು ಹಾಗು ವೈದ್ಯಕೀಯ ಸಿಬ್ಬಂದಿ ವರ್ಗದವರು.

ತುರ್ತು ವೈದ್ಯಕೀಯ ವಿಭಾಗ ಹಾಗು ಐ ಸಿ ಯು ಗಳಲ್ಲಿ ಈ ತರಹದ ಹಲ್ಲೆಗಳ ಪ್ರಮಾಣ ಅತಿ ಹೆಚ್ಚು. ಹೀಗಾಗಿ ಇಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ತಮ್ಮ ಜೀವ ಪಣಕ್ಕಿಟ್ಟುಕೊಂಡೆ ಇನ್ನೊಂದು ಜೀವ ಉಳಿಸುವ ಸವಾಲಿನ ಕರ್ತವ್ಯ ನಿರ್ವಹಿಸುವಂತಹ ಪರಿಸ್ಥಿತಿ ಭಾರತದಲ್ಲಿದೆ.ಪ್ರತಿ ನಾಲ್ವರ ಪೈಕಿ ಮೂವರು ವೈದ್ಯರು ಇಂತಹ ಒಂದಿಲ್ಲೊಂದು ದೈಹಿಕ ಹಿಂಸೆಗೆ ಗುರಿಯಾಗಿರುವದನ್ನು ಭಾರತೀಯ ವೈದ್ಯಕೀಯ ಸಂಸ್ಥೆ ಗುರುತಿಸಿದೆ.

ಕಳೆದ ವರ್ಷದ ಅಕ್ಟೋಬರ್ ಹದಿನಾರರಂದು ಮುಂಬಯಿಯ ಸಸೂನ್ ಆಸ್ಪತ್ರೆಯಲ್ಲಿ ಮೂಳೆ ತಜ್ಞರ ಮೇಲೆ ಪೋಲೀಸ್ ನೊಬ್ವ ತಾನು ಕರೆತಂದ ರೋಗಿಯನ್ನು ಸರಿಯಾಗಿ ಉಪಚರಿಸಲಿಲ್ಲ ವೆಂಬ ಕಾರಣವೊಡ್ಡಿ ಮನಬಂದಂತೆ ಥಳಿಸುತ್ತಾನೆ.

ಸಪ್ಟೆಂಬರ್ ಇಪ್ಪತ್ತೈದು ರಂದು ಇದೇ ನಗರದ ಕೆ ಇ ಎಮ್ ಆಸ್ಪತ್ರೆಯಲ್ಲಿ ಅಬೂ ಸಾಫಿಯಾನ್ ಎಂಬ ಮೂರು ವರ್ಷದ ಮಗು ಡೆಂಗ್ಯೂ ಜ್ವರದಿಂದ ಮರಣಹೊಂದಿದಾಗ ಈ ಮಗುವನ್ನು ಉಪಚರಿಸಿದ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ಯಾಗುತ್ತದೆ.

ಲೈಫ್ ಲೈನ್ ಆಸ್ಪತ್ರೆಯಲ್ಲಿ ಬಹು ಅಂಗಾಂಗಗಳ ವಿಫಲತೆಯಿಂದಾಗಿ ಮರಣಹೊಂದಿದ ಎಪ್ಪತ್ತೈದು ವರ್ಷದ ಮಹಿಳೆಯ ಸಾವಿಗೆಡಾ.ಕಿರಣ್ ಎಂಬ ವೈದ್ಯರೇ ಕಾರಣರೆಂಬ ನೆಪವೊಡ್ಡಿ ಅವರ ಮೂಗಿನ ಮೂಳೆಮುರಿಯುವಂತೆ ಹಲ್ಲೆ ಮಾಡಿ ಆಸ್ಪತ್ರೆಯನ್ನು ಪುಡಿಗಟ್ಟಿದರು.ತಕ್ಷಣ ಇದೇ ಆಸ್ಪತ್ರೆಯ ಐ ಸಿ ಯು ನಲ್ಲಿ ಇವರಿಗೆ ಚಿಕಿತ್ಸೆ
ನೀಡಿ ಉಪಚರಿಸಲಾಗುತ್ತದೆ.

ಮೇಲಿನ ಮೂರೂ ಘಟನೆಗಳು ನಡೆದಿದ್ದು ಮುಂಬಯಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ.ಇಲ್ಲಿಯ ಬಹುಪಾಲು ರೋಗಿಗಳು ಸಮಾಜದ ಮೇಲ್ಪದರಿನವರು.ಅವರಿಗೆ ರೋಗದ ನಿದಾನ,ಮತ್ತು ಚಿಕಿತ್ಸೆ, ಅದರ ಅಡ್ಡ ಪರಿಣಾಮಗಳ ಬಗ್ಗೆ ಸ್ಪಷ್ಟ ಅರಿವಿದ್ದವರು ಮತ್ತು ವೈದ್ಯಕೀಯ ಮಿತಿ,ಮತ್ತು ಸಾಧ್ಯ ತೆಗಳ ಬಗಗೆ ಅಲ್ಪಸ್ವಲ್ಪಾದರೂ ಜ್ಞಾನ ವುಳ್ಳವರು.ಒಂದು ವೇಳೆ ರೋಗಿ ಸಾವಿಗೀಡಾದರೂ ಇದರಲ್ಲಿ ವೈದ್ಯರ ಪಾತ್ರ ಗಳ ಮಿತಿಯನ್ನು ಬಲ್ಲವರು. ಇದನ್ನು ಮೀರಿ ವೈದ್ಯರ ಮೇಲೆ ಕೈ ಮಾಡಿದರೆ ಆಗುವ ಪರಿಣಾಮಗಳ ಕಾನೂನು ಬಲ್ಲವರು.

ಇದು ಶಹರದ ಕತೆಯಾದರೆ,ಬಡಭಾರತದ ಹಳ್ಳಿಗಳ ಕಥೆಯೇ ಬೇರೆ. ಇಲ್ಲಿ ಆರೋಗ್ಯದ ತುರ್ತುಪರಿಸ್ಥಿತಿಗಳಲ್ಲಿ ಉಪಚರಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿರುವುದಿಲ್ಲ. ಅಂಥವರು ನೇರವಾಗಿ ಅವಲಂಬನೆಯಾಗಬೇಕಾಗಿರುವುದು ತಾಲೂಕು ಮಟ್ಟದ ಅಥವ ಜಿಲ್ಲಾ ಕೇಂದ್ರ ಗಳಲ್ಲಿ. ಇಲ್ಲಿ ಮತ್ತದೆ ಪ್ರಶ್ನೆ ರೋಗಿ ಗಳ ಮತ್ತು ವೈದ್ಯರ ಅನುಪಾತದ ಸಂಖ್ಯೆ. ಖಾಸಗೀ ಆಸ್ಪತ್ರೆಗಳಲ್ಲಿ ವೈದ್ಯರಿದ್ದರೂ ಅದನ್ನು ಹೊರುವ ಭಾರ ಅವರಿಗಿರುವುದಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಸರದಿ ಸರಿಯುವುದಿಲ್ಲ.ಮೇಲಿನ ಘಟನೆಗಳು ಬೇರೆ ಬೇರೆ ಕಾರಣಗಳಿಂದ ಮಾಧ್ಯಮದ ಗಮನಕ್ಕೆ ಬಂದಂತಹವು .ಇನ್ನು ದಿನ ನಿತ್ಯ ಎಷ್ಟೋ ಪ್ರಕರಣಗಳು ಬೇರೆ ಬೇರೆ ಕಾರಣಕ್ಕಾಗಿ ಬೆಳಕಿಗೆ ಬರುವುದಿಲ್ಲ.

ವ್ಯಂಗ್ಯವೆಂದರೆ ಮೇಲಿನ ಮೂರೂ ಆಸ್ಪತ್ರೆಗಳಲ್ಲಿ ವೈದ್ಯರ ಕಾವಲಿಗೆ ಹೆಚ್ಚಿನ ಭದ್ರತೆಯನ್ನು ನಿಯೋಜಿಸಿ ತುರ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕಳೆದ ವರ್ಷ ಧಾರವಾಡದ ಶಾಸಕರೊಬ್ಬರು ಹುಬ್ಬಳ್ಳಿಯ ಕಿಮ್ಸನಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದರು. ಈಗ ಉತ್ತರ ಕನ್ನಡದ ಬೆಂಕಿಯ ಚೆಂಡಿನಂತ ಸಂಸದರೊಬ್ವರು ಇದೇ ಸಾಲಿಗೆ ಸೇರ್ಪಡೆಯಾಗಿ ತಮ್ಮ ಕ್ಷೇತ್ರದ ಸರಕಾರಿ ವೈದ್ಯಕೀಯ ಸೌಲಭ್ಯದ ಕೊರತೆಯನ್ನು ಈ ಮೂಲಕ ಸಾಬೀತುಪಡಿಸುವಲ್ಲಿ ಸಫಲರಾಗಿದ್ದಾರೆ. ಮತ್ತು ಅವರು ಹೇಳಿ ಕೇಳಿ ಸಂಸದರು ಸರಕಾರಿ ಆಸ್ಪತ್ರೆಗೆ ತಮ್ಮವರನ್ನು ಕರೆದುಕೊಂಡು ಹೋಗಲಾದೀತೆ .? ಸರಕಾರದ ಆಸ್ಪತ್ರೆಗಳೇನಿದ್ದರೂ ಜನಸಾಮಾನ್ಯರಿಗೆ .

ಗಮನಿಸಬೇಕಾದ ಅಂಶವೇನೆಂದರೆ ದೇಶದಲ್ಲಿ ಇಷ್ಟೆಲ್ಲ ವೈದ್ಯಕೀಯ ಪದವೀಧರರು ಪ್ರತಿ ವರ್ಷಪಾಸಾಗಿ ಬಂದರೂ ಪ್ರತಿ ಸಾವಿರ ರೋಗಿಗೆ ಒಬ್ಬ ವೈದ್ಯರು ಮಾತ್ರ ಲಭ್ಯವಿರುವ ಅನುಪಾತವಿದೆ. ಹಾಗಿದ್ದರೆ ಪದವಿ ಪಡೆದ ವೈದ್ಯರೆಲ್ಲೂ ಹೋಗುತ್ತಿರುವುದಾದರೂ ಎಲ್ಲಿಗೆ?

ಸಾಕಷ್ಟು ಸಂಬಳ ಸೌಲಭ್ಯಗಳನ್ನೂ ಸರಕಾರ ಕೊಡುತಿದ್ದರೂ ಹಳ್ಳಿಗಳಲ್ಲಿ ಯಾಕೆ ವೈದ್ಯರು ಹೋಗಲು ಮನಸು ಮಾಡುತಿಲ್ಲ? ಒಬ್ಬ ವೈದ್ಯಕೀಯ ವಿದ್ಯಾರ್ಥಿಗೆ ಸರಕಾರ ಖರ್ಚು ಮಾಡಿ ಕಲಿಸಿದರೂ ಅದೇ ವೈದ್ಯರನ್ನು ಹಳ್ಳಿಗಳ ಸೇವೆಗೆ ಅಣಿ ಮಾಡಲು ಕಾನೂನು ಮಾಡುವಂತಹ ಅನಿವಾರ್ಯತೆ ಯಾಕೆ ಸೃಷ್ಟಿಯಾಯಿತು?ದಂಡ ಕಟ್ಟಿ ಕೆಲವೊಬ್ಬ ವೈದ್ಯರು ಹಳ್ಳಿಗಳ ಸೇವೆಯಿಂದ ತಪ್ಪಿಸಿಕೊಂಡಂತಹ ದಯನೀಯ ಸ್ಥಿತಿ ನಿರ್ಮಾಣಮಾಡುವಲ್ಲಿ ವ್ಯವಸ್ಥೆಯ ಹೊಣೆ ಎಷ್ಟು?
ಈ ಪ್ರಶ್ನೆಗಳೂ ಇಲ್ಲಿ ಪ್ರಸ್ತುತವಾಗುತ್ತವೆ.

ಒಂದು ಕಾಲವಿತ್ತು ವೈದ್ಯರನ್ನು ಸ್ವತಃ ನಾರಾಯಣನಿಗೆ ಹೋಲಿಸಲಾಗುತಿತ್ತು. ಬದಲಾದ ಕಾಲಘಟ್ಟದಲ್ಲಿ ಎಲ್ಲವನ್ನೂ ದುಡ್ಟಿನಿಂದ ಕೊಂಡುಕೊಂಡೇನೆಂಬ ಅವಿವೇಕತನವೂ ಇಲ್ಲಿದೆ. ಅದಕ್ಕೆ ಸರಿಯಾಗಿ ಆಸ್ಪತ್ರೆಗಳ ಕಾರ್ಪೋರೇಟೀಕರಣ ಕೂಡ ಸಾಥ ನೀಡಿದೆ. ದುಡ್ಡು ಕೊಟ್ಟು ಹೆಚ್ಚಿನ ಆರೋಗ್ಯನಿರೀಕ್ಷಿಸುವುದು ತಪ್ಪೇನೂ ಆಗಲಾರದು .ಆದರೆ ಹೋಗುತ್ತಿರುವ ಜೀವ ಉಳಿಸಲು ವೈದ್ಯರು ದೇವರಲ್ಲವಲ್ಲ!? ಪವಾಡಗಳನ್ನು ಹುಲುಮಾನವರಾದ ವೈದ್ಯರಿಂದ ನಿರೀಕ್ಷಿಸಲಾದೀತೆ?

ವೈದ್ಯರ ಮೇಲಿನ ಹಲ್ಲೆಗಳು ಭಾರತದಲ್ಲಿ ಅಷ್ಟೇ ಅಲ್ಲ ಮುಂದುವರೆದ ರಾಷ್ಟಗಳಲ್ಲಿಯೂ ಇದೆ. ಆದರೆ ಪ್ರಶ್ನೆ ಇರುವುದು ಭಾರತದಲ್ಲಿ ಸಾವಿರಕೊಬ್ಬ ವೈದ್ಯರ ಮೇಲಿನ ಕೆಲಸದ ಒತ್ತಡಗಳ ಬಗ್ಗೆ. ಹಲ್ಲೆಗೆ ಜಾಮೀನು ರಹಿತ ಬಂಧನದಂತಹ ಕಠಿಣ ಕಾನೂನುಗಳು ಕಾಗದದ ಮೇಲೆ ಇದೆ.ಆದರೆ ಕಾನೂನನ್ನು ಮೀರಿದ ಈ ರೋಗಿ ವೈದ್ಯರ ಸಂಬಂಧ ಬಹು ವಿಶ್ವಾಸಾರ್ಹವಾದ ಮಾನವೀಯ ಅಂತ ಃಕರಣದ ಮಾನವ ಸಹಜ ಸಂಬಂಧ ಆಪೇಕ್ಷಿಸುತ್ತದೆ.ಅಷ್ಟಕ್ಕೂ ವೈದ್ಯರೂ ಕೂಡ ಮನುಷ್ಯ ರಲ್ಲವೆ? ಇದನ್ನೆಲ್ಲ ಮೀರಿಯೂ ಅವರಿಗೆ ಅವರದೇ ಆದ ಆರೋಗ್ಯಸಮಸ್ಯೆಗಳಿವೆ ,ಕುಟುಂಬವಿದೆ ತಮ್ಮದೇ ಆದ ವೈಯುಕ್ತಿಕ ಬದುಕನ್ನು ಬದಕುವ ಹಕ್ಕಿದೆ .

ಈ ಘಟನೆಯೊಂದು ತಮ್ಮ ಆತ್ಮವಿಮರ್ಶೆಗೆ ಈ ಸಂಸದರಿಗೆ ಮನವರಿಕೆಯಾಗಿ ಈ ಮೂಲಕ ಆರೋಗ್ಯದ ಸೇವೆಯು ಉತ್ತಮ ಗೊಂಡರೆ ಯಾವ ತಾಯಿಯೂ ಆಸ್ಪತ್ರೆಯ ಕಾರಿಡಾರಿನಲ್ಲಿ
ನರಳಲಾರಳು. ಇಲ್ಲವಾದಲ್ಲಿ, ಭಾರತದಲ್ಲಿ ಇಂತಹ ಘಟನೆಗಳು ಮೊದಲನೆಯ ದೂ ಅಲ್ಲ ಕೊನೆಯದೂ ಆಗಲಾರದು.

‍ಲೇಖಕರು admin

January 8, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sarojini Padasalagi

    ಡಾ.ಲಕ್ಷ್ಮಣ್ ಅವರ ಲೇಖನ ತುಂಬಾ ಸಕಾಲಿಕ . ರೋಗಿ ಗುಣವಾದರೆ ಡಾಕ್ಟರ್ ದೇವರು ಇಲ್ಲ ಅವರೇ .ಯಮ ಎಂಬಂತಾಡುವ ಸಮಾಜದ ಎದುರು ಡಾಕ್ಟರ್ ಜೀವನ ,ಪಾಡು ಯಾರಿಗೂ ಬೇಡ. ಒಬ್ಬ ಡಾಕ್ಟರ್ ಹೆಂಡತಿಯಾಗಿ ಅವರ ಜೀವನದ ಒಳ ಹೊರಗಿನ ಎಳೆ ,ಎಳೆಯನ್ನೂ ಬಲ್ಲೆ .ನನ್ನ ಗಂಡ ಸರಕಾರಿ ವೈದ್ಯಾಧಿಕಾರಿಯಾಗಿ ನಿವೃತ್ತಿ ಹೊಂದಿರುವವರು. ಎಷ್ಟೇ. ಕುಗ್ರಾಮವಿದ್ದರೂ ಲೆಕ್ಕಿಸದೇ ಅಲ್ಲಿದ್ದು ,ಕುಟುಂಬಸಹಿತ , ದಿನದ 24 ಗಂಟೆಯೂ ಸೇವೆ ಸಲ್ಲಿಸಿದವರು .ಮನೆಯ ಎಲ್ಲ ಜವಾಬ್ದಾರಿನಾನು ಹೊತ್ತು ಅವರನ್ನು ದವಾಖಾನೆಗೆ ಬಿಟ್ಟು ಬಿಟ್ಟಿದ್ದೆ. ನನ್ನ ಮಗಳ ಮದುವೆ ಗೊತ್ತಾದಾಗ ಮಗಳು ಹೇಳುತ್ತಿದ್ದಳು -” ಅಮ್ಮ ,ಅಪ್ಪನಿಗೆ ಮದುವೆ ಪತ್ರಿಕೆ ಕಳಿಸಿಬಿಡು‌ಮರೆತಾರು ” ಅಂತ.ಅವರ ಪಾಡು ನೋಡಿ ನನ್ನ ಮಕ್ಕಳನ್ನು ಮೆಡಿಕಲ್ ಗೆ ಕಳಿಸು ದು ಬೇಡ ಎಂಬಷ್ಟು ಮನ ರೋಸಿ ಹೋಗಿತ್ತು. ಇದನ್ನೆಲ್ಲ ಯಾರಿಗೆ ಹೇಳಬೇಕು ? ಅವರಿಗೂ ಒಂದು ಖಾಸಗಿ ಜೀವನ ಇದೆ ಎಂಬ ಅರಿವು ಯಾರಿಗೂ ಇಲ್ಲ. ಅವರು ಮನುಷ್ಯರು ದೇವರಲ್ಲ ಎಂಬ ವಿಚಾರವೂ ಇರುವದಿಲ್ಲ.Thankless job ಏನೋ ಎಂದು ಒಮ್ಮೊಮ್ಮೆ ವಿಚಾರ ಸುಳಿಯುತ್ತದೆ. ಈಗಲಾದರೂ ಜನ ಆ ನಿಟ್ಟಿನಲ್ಲಿ ಯೋಚಿಸಿದರೆ ಒಳಿತೇನೋ ! ಈ ಲೇಖನ ಬರೆದದ್ದಕ್ಕೆ ಡಾ.ಲಕ್ಷ್ಮಣ್ .ಅವರಿಗೂ ,ಪ್ರಕಟಿಸಿದ ‘ಅವಧಿ ‘ ಗೂ ಧನ್ನವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: