ಹೇಮಾ ಖುರ್ಸಾಪೂರ ಕಥೆ- ನವಾಬನ ಬೆಳ್ಳಿಕೋಲು ಕುರ್ಚಿ…

ಹೇಮಾ ಖುರ್ಸಾಪೂರ

“ಜಾನೂ ಎಲ್ಲಿದಿಯಾ?” ಅಂತ ಪುಟ್ಟಮ್ಮಜ್ಜಿ ಕೂಗಿದಳು.

“ಬಂದೆ ಅಜ್ಜಿ.”

“ಅಜ್ಜನ ಕೋಲಿದು ನನ್ನಯ ಕುದುರೆ
ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ
ಕಾಲಿಲ್ಲದೆಯೇ ನಡೆಯುವ ಕುದುರೆ
ಕೂಳಿಲ್ಲದೆಯೇ ಬದುಕುವ ಕುದುರೆ…”

ಅಂತ ಹಾಡಿಕೊಂಡು ಕೋಲೊಂದನ್ನು ಹಿಡಿದು ಬಂದಳು ಜಾನು.

“ಓಹ್! ಈ ಕೋಲು ಎಲ್ಲಿ ಸಿಕ್ಕಿತು ನಿಂಗೆ?”

“ಆ ರೂಮಿನಲ್ಲಿತ್ತು. ಈ ಕೋಲು ಯಾರದಜ್ಜಿ?”

“ಕುದುರೆ ಅಜ್ಜಂದು.”

“ಕುದುರೆ ಅಜ್ಜ! ಯಾರಿದು?”

“ಅವರು ನಿನ್ನ ಅಜ್ಜನ, ಅಜ್ಜ. ಅವರ ಮನೆಯಲ್ಲಿ ಕುದುರೆ ಗಾಡಿ ಇತ್ತು. ಎಲ್ಲಿಗೆ ಹೋದರೂ ಅವರು ಕುದುರೆ ಮೇಲೆ ಹೋಗುತ್ತಿದ್ದರು. ಅದಕ್ಕೆ ಮಕ್ಕಳೆಲ್ಲ ಅವರನ್ನ ಕುದುರೆ ತಾತ ಅಂತ ಕರೀತಿದ್ರು.”

“ಓ…”

“ಆ ಕಾಲಕ್ಕೆ ನಮ್ಮೂರು ಸುತ್ತಮುತ್ತ ಅವರಷ್ಟು ಚೆನ್ನಾಗಿ ಕುದುರೆ ಓಡಿಸೋರು ಯಾರೂ ಇರಲಿಲ್ಲ. ಪಕ್ಕದೂರಿನ ನವಾಬರೂ ಕೂಡ ಈ ಅಜ್ಜನ ಜೊತೆ ಕುದುರೆ ಸವಾರಿಗೆ ಹೋಗುತ್ತಿದ್ದರಂತೆ.”

“ನವಾಬರು ಅಂದರೆ?”

“ರಾಜ ಅಂತ. ಅವರು ನಮ್ಮನೆಗೆ ಕೂಡ ಬಂದಿದ್ದರು.”

“ನಿಮ್ಮ ಮನೆಗೇ ಯಾಕೆ ಬಂದಿದ್ದು?”

“ನವಾಬರು ಹಾಗೆಲ್ಲ ಯಾರ ಮನೆಗೂ ಹೋಗೋದಿಲ್ಲ. ನನ್ನ ತಾತ ಬಹಳ ಬೇಕಾದವರು ಅಂತ ಅವರ ಮನೆಗೆ ಬಂದು ಹಾಲು ಕುಡಿದು ಹೋಗಿದ್ದರಂತೆ. ನವಾಬರು ಯಾರ ಮನೆಯಲ್ಲೂ ಎಂಥದ್ದೇ ಹಾಸಿಗೆ, ಕುರ್ಚಿ ಕೊಟ್ಟರೂ ಕೂರುತ್ತಿರಲಿಲ್ಲವಂತೆ. ಅವರ ಹತ್ತಿರ ಒಂದು ಬೆಳ್ಳಿಹಿಡಿಕೆ ಕೋಲು ಇತ್ತಂತೆ ಅದರ ಹಿಡಿಕೆ ಮಡಿಕೆ ತೆಗೆದರೆ ಅಂಗೈಗಲ ಚಾಪೆ ತರಹ ತೆರೆದುಕೋತ್ತಿಂತೆ. ಆ ಕೋಲನ್ನು ಅಲ್ಲಾಡದಂಗೆ ನಿಲ್ಲಿಸಬಹುದಿತ್ತಂತೆ. ಆಗ ಅದು ನೋಡೋಕೆ ಪುಟ್ಟ ಮೇಜಿನ ಹಾಗೆ ಇರೋದಂತೆ. ನವಾಬರು ಅದರ ಮೇಲೆ ಕೂರುತ್ತಿದ್ದರಂತೆ. ಅವರು ಎಲ್ಲಿಗೆ ಹೋದರು ಈ ಕೋಲನ್ನು ಹಿಡಿದೇ ಹೋಗುತ್ತಿದ್ದರಂತೆ.”

“ಹೌದಾ? ಯಾಕಜ್ಜಿ ಅವರು ಹಾಗೆ ಎಲ್ಲೆಂದರಲ್ಲಿ ಕೂರುತ್ತಿರಲಿಲ್ಲ? ಬಟ್ಟೆ ಗಲೀಜಾಗುತ್ತೆ ಅಂತಾನ?”

“ಅಲ್ಲ. ನವಾಬರ ಅಪ್ಪ ಸತ್ತಾಗ ಇವರಿನ್ನೂ ಸಣ್ಣಹುಡುಗ. ದೊಡ್ಡ ನವಾಬರು ಹೋದಮೇಲೆ ಇವರನ್ನೇ ರಾಜ ಮಾಡಿದರು. ಇವರನ್ನು ಕೊಂದು ರಾಜರಾಗಬೇಕು ಅಂತ ಬಹಳ ಜನ ಶತ್ರುಗಳು ಕಾಯುತ್ತಾ ಇದ್ದರಂತೆ. ಆ ಶತ್ರುಗಳಲ್ಲೊಬ್ಬ ಪಕ್ಕದ ಊರಿನ ರಾಜ. ಅವನು ಇವರನ್ನು ಕೊಲ್ಲೋಕೆ ಒಂದು ಉಪಾಯ ಮಾಡಿದನಂತೆ. ಬಡಗಿಯೊಬ್ಬನ ಹತ್ತಿರ ಒಂದು ಚೆಂದದ ಕುರ್ಚಿ ಮಾಡಿಸಿ ಅದರ ಮೇಲೆ ಕೂರೋಕೆ ಅಂತ ಹೇಳಿ ಮಾಡಿಸಿದ ದಿಂಬುಗಳಲ್ಲಿ ವಿಷದ ಮುಳ್ಳನ್ನು ಇಟ್ಟಿದ್ದನಂತೆ. ಅವನ ಮನೇಲಿ ಎಂಥದೋ ವಿಶೇಷ ಕಾರ್ಯಕ್ರಮ ಅಂತ ನೀವೂ ಬನ್ನಿ ಅಂತ ಈ ನವಾಬರಿಗೆ ಹೇಳಿಕಳಿಸಿದನಂತೆ. ಆಗ ನವಾಬರು ಅಲ್ಲಿಗೆ ಹೋದರಂತೆ. ಆ ಕುರ್ಚಿಯನ್ನ ನವಾಬರಿಗೆ ಕೂರಲಿಕ್ಕೆ ಅಂತ ಅಲ್ಲಿ ಹಾಕಿದ್ದರಂತೆ. ನವಾಬರು ಇನ್ನೇನು ಹತ್ತಿ ಕೂರಬೇಕು. ಅಷ್ಟರಲ್ಲಿ ಅದೆಲ್ಲೋ ಇದ್ದ ಬೆಕ್ಕು ಕುರ್ಚಿ ಮೇಲೆ ಹಾರಿತಂತೆ. ನವಾಬರು ಬೆಚ್ಚಿ ಹಿಂದಕ್ಕೆ ಸರಿದರಂತೆ. ಬೆಕ್ಕಿನ ಮೈಗೆ ಮುಳ್ಳು ಚುಚ್ಚಿ ಅದು ವಿಲವಿಲ ಒದ್ದಾಡಿ ಸತ್ತೋಯ್ತಂತೆ. ತಕ್ಷಣ ನವಾಬರ ಆಪ್ತರು ನವಾಬರನ್ನು ಅಲ್ಲಿಂದ ಹೇಗೋ ಬಚಾವು ಮಾಡಿ ಊರಿಗೆ ಕರೆದುಕೊಂಡು ಬಂದರಂತೆ. ಆವತ್ತು ಆ ಹಿರಿಯ ಮಂತ್ರಿಗಳು ನವಾಬರಿಗೆ ಹೇಳಿದರಂತೆ ನೀವು ಎಲ್ಲೇ ಕೂರೋ ಮೊದಲು ಆಸನ ಪರೀಕ್ಷೆಮಾಡಿ ಅಂತ. ಅದಕ್ಕೆ ನವಾಬರು ಎಲ್ಲೇ ಹೋದರು ಕೂರುತ್ತಿರಲಿಲ್ಲ.’

“ಹೌದಜ್ಜಿ ಕೂರೋಕು ಮೊದಲು ಕೂರೋ ಜಾಗ ನೋಡಬೇಕು. ನಮ್ಮ ಕ್ಲಾಸಲ್ಲಿ ಕೂಡ ಆ ಶಶಾಂಕ ಇದಾನಲ್ಲ ಅವನು ಕೂರೋ ಬೆಂಚು ಮೇಲೆ ಇಂಕು ಚೆಲ್ಲಿರುತ್ತಾನೆ ಇಲ್ಲ ಬಬಲ್‌ಗಂ ಹಚ್ಚಿಬಿಟ್ಟಿರುತ್ತಾನೆ. ನೋಡದೆ ಕೂತರೆ ಬಟ್ಟೆ ಎಲ್ಲ ಹಾಳಾಗುತ್ತೆ,” ಅಂದಳು ಜಾನು.

ಅಜ್ಜಿ ನಗುತ್ತ, “ಸರಿ. ನಡಿ ಈಗ ತೋಟದ ಕಡೆ ಹೋಗಿ ಬರೋಣ,” ಅಂತ ಹೊರಟಳು.

ಜಾನೂ ಕೋಲು ಹಿಡಿದು, “ಅಜ್ಜನ ಕೋಲಿದು…” ಹಾಡುತ್ತಾ ಅವಳ ಹಿಂದೆ ನಡೆದಳು.

‍ಲೇಖಕರು Admin

November 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: