ಹೇಮಾ ಹೆಬ್ಬಗೋಡಿ ಕಥೆ- ಫೆವಿಸ್ಟಿಕ್‌ ಜೇಡ!!

ಹೇಮಾ ಹೆಬ್ಬಗೋಡಿ

ಬೇಸಿಗೆ ರಜೆ ಚಿಂಚು ಮಿಂಚು ಇಬ್ಬರೂ ಮನೆಯ ಹೊರಗಡೆಯ ಕೈತೋಟದಲ್ಲಿ ಆಡುತ್ತಿದ್ದರು.

ʼಕಣ್ಣಾಮುಚ್ಚೆ ಕಾಡೆಗೂಡೆ

ಉದ್ದಿನ ಮೂಟೆ ಉರುಳೆ ಹೋಯ್ತು

ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ. ನಿಮ್ಮ ಹಕ್ಕಿ ಎಲ್ಲ ಬಚ್ಚಿಟ್ಟುಕೊಳ್ಳಿ

ಕೂ..ʼ

ಎನ್ನುತ್ತ ಮಿಂಚು ಅಕ್ಕ ಚಿಂಚುವನ್ನು ಹುಡುಕಲು ಶುರುಮಾಡಿದಳು. ಮಿಂಚು ಅತ್ತ ಹೋಗುತ್ತಿದ್ದಂತೆ ಅಲ್ಲೇ ಇದ್ದ ಬಾಗಿಲ ಹಿಂದೆ ಅಡಗಿದ್ದ ಚಿಂಚು ತಕ್ಷಣ ಹೊರಬಂದು ಐಸ್‌ ಪೈಸ್‌ ಅಂದಳು.

ʼಮತ್ತೆ ನಾನೇ ಕಣ್ಣುಮುಚ್ಚಿಕೊಬೇಕಾ ಹೋಗು ನಿನ್ನ ಜೊತೆ ಆಡೋಕೆ ಬರಲ್ಲʼ ಎಂದು ಮಿಂಚು ಅಳು ಮುಖ ಮಾಡಿಕೊಂಡು ಮನೆಯೊಳಗೆ ಹೋದಳು. ಅವಳ ಹಿಂದೆಯೇ ಬಂದ ಚಿಂಚು ʼಸರಿ ಸರಿ ಇದೊಂದು ಸಲ ಕಣ್ಣು ಮುಚ್ಚಿಕೋ ಹತ್ತಿರದಲ್ಲೇ ಬಚ್ಚಿಟ್ಟುಕೋತಿನಿ. ನೀನು ಹುಡುಕಿ ಬಿಟ್ಟರೆ ನಾನು ಔಟ್‌ʼ ಎಂದು ತಂಗಿಯನ್ನು ಒಪ್ಪಿಸಿ ಮತ್ತೆ ಆಡಲು ಕರೆದುಕೊಂಡು ಬಂದಳು.

ಮತ್ತೆ ಮಿಂಚು ʼಕಣ್ಣಾಮುಚ್ಚೆ ಕಾಡೆಗೂಡೆ..ʼ ಹೇಳಲು ಶುರುಮಾಡುತ್ತಿದ್ದಂತೆ ಚಿಂಚು ಮೆಟ್ಟಿಲ ಕೆಳಗೆ ಬಚ್ಚಿಟ್ಟುಕೊಳ್ಳಲು ಓಡಿದಳು. ಮೆಟ್ಟಿಲ ಕೆಳಗೆ ಸೈಕಲ್ಲು, ಹಳೆಯ ಡಬ್ಬಗಳು ಒಂದಿಷ್ಟು ಸಾಮಾನುಗಳಿದ್ದವು. ಚಿಂಚು ಅಲ್ಲಿ ಹೋಗಿ ಬಚ್ಚಿಟ್ಟುಕೊಂಡಳು.

ಮಿಂಚು ಅಕ್ಕನನ್ನು ಹುಡುಕುತ್ತಿದ್ದಳು. ಇದ್ದಕ್ಕಿದ್ದಂತೆ ಚಿಂಚು ʼಅಮ್ಮಾʼ ಎಂದು ಕೂಗಿಕೊಂಡು ಮನೆಯೊಳಗೆ ಓಡಿದಳು. ಮಿಂಚು ಅಕ್ಕನಿಗೆ ಏನಾಯಿತು ಅಂತ ತಿಳಿಯದೆ ಅವಳ ಹಿಂದೆಯೇ ಓಡಿದಳು.

ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತ ಕೂತಿದ್ದ ಅಮ್ಮ ʼಏನಾಯಿತು?ʼ ಎಂದಳು.

ಚಿಂಚು ಅಮ್ಮನ ಹತ್ತಿರ ಹೋಗಿ ಅಳುತ್ತ ʼಅಮ್ಮ … ಅಮ್ಮ… ಅಲ್ಲಿ ಜೇಡ.. ಇಲ್ಲಿ ಬಿತ್ತುʼ ಎಂದು ಹೇಳುತ್ತ ತನ್ನ ಭುಜ ತೋರಿಸಿದಳು.

ʼಬಾ ಇಲ್ಲಿ ನೋಡೋಣ. ಇಲ್ಲೇನೂ ಕಾಣುತ್ತಿಲ್ಲʼ ಎಂದು ಅಮ್ಮ ಚಿಂಚುವಿನ ಬಟ್ಟೆಗೆ ಮೆತ್ತಿಕೊಂಡಿದ್ದ ಧೂಳನ್ನು ಕೊಡವಿದಳು..

ʼಅಲ್ಲಿ ಜೇಡ.. ಹೀಗೆ ಜುಂಯ್‌ ಅಂತ ಜಾರಿಕೊಂಡು ಬಂದು ನನ್ನ ಮೇಲೆ ಬಿತ್ತು. ಅದನ್ನ ಹೀಗೆ ದೂಡಿದರೆ ಅದು ಉಯ್ಯಾಲೆ ಆಡುತ್ತಿದ್ದ ದಾರ ನನ್ನ ಕೈಗೆ ಅಂಟಿಕೊಂಡು ಬಿಟ್ಟಿತುʼ ಎಂದಳು.

ʼಅಷ್ಟಕ್ಕೆಲ್ಲ ಹೆದರ್ತಾರಾ? ಬಾ ನೋಡೋಣʼ ಎಂದು ಅಮ್ಮ ಚಿಂಚು ಮತ್ತು ಮಿಂಚುವನ್ನು ಕರೆದುಕೊಂಡು ಮೆಟ್ಟಿಲ ಹತ್ತಿರ ಹೋದಳು.

ಅಲ್ಲಿ ಜೇಡರ ಬಲೆಯಿತ್ತು.

ʼಅಮ್ಮ ಈ ಜೇಡ ಫೆವಿಸ್ಟಿಕ್‌ ಜೇಡ. ಅದರ ದಾರದ ಮನೆ ಮುಟ್ಟಿದರೆ ಅಂಟಿಕೊಂಡು ಬಿಡುತ್ತೆʼ ಎಂದು ಚಿಂಚು ಜೇಡರ ಬಲೆಯನ್ನು ತೋರಿಸುತ್ತಾ ಅಮ್ಮನಿಗೆ ಹೇಳಿದಳು.

ಅಮ್ಮ ನಗುತ್ತ ʼಅದು ಫೆವಿಸ್ಟಿಕ್‌ ಅಲ್ಲ ಚಿಂಚುʼ ಅಂದಳು.

ʼಹೌದಮ್ಮ ಅದು ಫೆವಿಸ್ಟಿಕ್‌ ಬೇಕಿದ್ದರೆ ನೀನೇ ನೋಡುʼ ಅಂತ ಕಡ್ಡಿಯಿಂದ ಅದರ ಬಲೆ ಕೀಳಲು ಹೋದಾಗ ಅದು ಕಡ್ಡಿಗೆ ಸುತ್ತಿಕೊಂಡಿತು. ʼನೋಡಿದೆಯಾ ನಾನು ಹೇಳಲಿಲ್ಲವಾ?ʼ ಎಂದು ಅಮ್ಮನ ಮುಂದೆ ಹಿಡಿದಳು.

ಅಷ್ಟರಲ್ಲಿ ಜೇಡ ಅಲ್ಲೇ ಹತ್ತಿರದಲ್ಲಿದ್ದ ಗಿಡದಿಂದ ನೂಲಿನ ಸಮೇತ ಜಾರಿ ಮಿಂಚುವಿನ ಮುಂದೆ ಓಲಾಡತೊಡಗಿತು. ಮಿಂಚು ʼಅಮ್ಮʼ ಅಂತ ಕೂಗಿಕೊಂಡಳು.

ಅಮ್ಮ ಚಿಂಚುವಿನ ಕೈಯಲ್ಲಿದ್ದ ಕಡ್ಡಿಯಿಂದ ನಿಧಾನವಾಗಿ ಜೇಡವನ್ನು ಕೆಳಗಿಳಿಸಿ ಗಿಡದ ಹತ್ತಿರ ಬಿಟ್ಟಳು. ಮಕ್ಕಳಿಬ್ಬರನ್ನು ಮನೆಯೊಳಗೆ ಕರೆದುಕೊಂಡು ಹೋದಳು.

ʼಅಮ್ಮ ಆ ಜೇಡ ದಾರದಲ್ಲಿ ಹಂಗೆ ಜುಂಯ್‌ ಅಂತ ಜಾರುತ್ತಲ್ಲ ಅದಕ್ಕೆ ಭಯ ಆಗಲ್ಲವಾ? ಅದು ಮನೆ ಕಟ್ಟಕ್ಕೆ ಆ ತರಹ ಉಯ್ಯಾಲೆ ಆಡೋಕೆ ಆ ದಾರ ಎಲ್ಲಿಂದ ತರುತ್ತೆ?ʼ ಅಂತ ಚಿಂಚು ಕೇಳಿದಳು.

ʼಆ ದಾರವನ್ನು ನೂಲು ಅಂತಾರೆ. ಅದು ಜೇಡದ ಹೊಟ್ಟೆ ಒಳಗಿನಿಂದಲೇ ಬರುತ್ತದೆ. ಅದರಲ್ಲಿ ಅಂಟಿನಂತಹ ಪದಾರ್ಥ ಇರುತ್ತೆ. ಅದಕ್ಕೆ ನಾವು ಮುಟ್ಟಿದಾಗ ಅದು ನಮಗೆ ಅಂಟಿಕೊಳ್ಳುವುದು. ಜೇಡ ಈ ನೂಲಿನಿಂದಲೇ ತನ್ನ ಬಲೆಯನ್ನು ನೇಯುತ್ತೆ. ತನ್ನ ಬೇಟೆಯನ್ನು ಹಿಡಿಯಲು ಅದಕ್ಕೆ ಈ ಬಲೆ ಸಹಾಯ ಮಾಡುತ್ತೆ. ಅಲ್ಲಿ ಸಿಕ್ಕಿಬೀಳುವ ಹುಳುಗಳೇ ಅದಕ್ಕೆ ಊಟʼ.

ʼಹೌದು ಬಲೆಯಲ್ಲಿ ಹುಳ ಸಿಕ್ಕಿಹಾಕಿಕೊಂಡಿರೋದನ್ನು ನೋಡಿದಿನಿ. ಹುಳ ಮಾತ್ರ ಅಂಟಿಕೊಳ್ಳುತ್ತೆ ಜೇಡಕ್ಕೆ ಆ ನೂಲು ಅಂಟಿಕೊಳ್ಳುವುದಿಲ್ಲವಾ ಅಮ್ಮ?ʼ ಎಂದು ಮಿಂಚು ಕೇಳಿದಳು.

ʼಇಲ್ಲ ಬಲೆಯಲ್ಲಿರುವ ಎಲ್ಲ ನೂಲಿನಲ್ಲಿ ಅಂಟಿರುವುದಿಲ್ಲ. ಅಂಟಿಲ್ಲದ ನೂಲಿನ ಮೇಲೆ ಮಾತ್ರ ಜೇಡ ಓಡಾಡುತ್ತೆʼ ಅಂತ ಅಮ್ಮ ಹೇಳಿದಳು.

ʼಓ ಆ ಜೇಡ ಎಷ್ಟು ಜಾಣ!!ʼ ಎಂದಳು ಮಿಂಚು.

ʼಜಾಣ ಅಲ್ಲ ಅದು ಜಾಣೆ. ಬಲೆ ನೇಯುವುದು ಹೆಣ್ಣುಜೇಡಗಳು ಮಾತ್ರʼ

ʼಅಮ್ಮ ಜೇಡ ನನ್ನ ಬಟ್ಟೆ ಮೇಲೆ ಬಿದ್ದಾಗ ಭಯ ಆಯ್ತು. ಜೇಡ ಏನೂ ಮಾಡೋದಿಲ್ಲವಾ?ʼ ಎಂದು ಚಿಂಚು ಕೇಳಿದಳು.

ʼಕೆಲವು ಜೇಡಗಳಲ್ಲಿ ಮಾತ್ರ ಹಾವಿನ ತರಹ ವಿಷವಿರುತ್ತೆ. ಅವು ಕಚ್ಚಿದರೆ ಮಾತ್ರ ಅಪಾಯ.ʼ

ʼಹೌದಾ! ಅಮ್ಮ ನಾವು ಜೇಡನ ತರಹ ನೂಲು ಮನೆ ಉಯ್ಯಾಲೆ ಕಟ್ಟೋಹಾಗಿದ್ದರೆ ಮಜ ಇರುತ್ತಿತ್ತು ಅಲ್ವಾ?ʼ ಅಂತ ಕಿಟಕಿಯಿಂದ ಹೊರಗೆ ಗಿಡದಲ್ಲಿ ಕಾಣುತ್ತಿದ್ದ ಜೇಡರ ಬಲೆಯನ್ನು ನೋಡುತ್ತ ಮಿಂಚು ಕೇಳಿದಳು.

ಅಮ್ಮ ನಗುತ್ತ ʼಸರಿ ಈಗ ಕೈಕಾಲು ತೊಳೆದು ಬನ್ನಿ ಊಟ ಮಾಡುವಿರಂತೆʼ ಅಂತ ಇಬ್ಬರನ್ನೂ ಕಳಿಸಿದಳು.

‍ಲೇಖಕರು Admin

November 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: