ಎನ್ ಕೆ ಕಾವ್ಯಗಳ ರಂಗ ಪ್ರಸ್ತುತಿ ‘ಈ ಕರಿಯ ನೆರಳಲ್ಲಿ’

ಮಂಡಲಗಿರಿ ಪ್ರಸನ್ನ

ಕವಿ ಎನ್ ಕೆ ಹನುಮಂತಯ್ಯ ಕವಿತೆಗಳನ್ನಾಧರಿಸಿದ ʻಈ ಕರಿಯ ನೆರಳಲ್ಲಿʼ ಏಕವ್ಯಕ್ತಿ ರಂಗ ಪ್ರಸ್ತುತಿಯಲ್ಲಿ ಎನ್ ಕೆ ಪಾತ್ರಧಾರಿ ಸಾಗರ್ ಇಟೇಕರ್

ಸಮುದಾಯ ರಾಯಚೂರು ಈಚೆಗೆ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವ್ಯವಸ್ಥೆಗೊಳಿಸಿದ್ದ ಶೋಷಿತ ಸಮುದಾಯದ ಕವಿ ಎನ್.ಕೆ.ಹನುಮಂತಯ್ಯ ಅವರ ಕವಿತೆಗಳನ್ನಾಧರಿಸಿದ ʻಈ ಕರಿಯ ನೆರಳಲ್ಲಿʼ ಏಕವ್ಯಕ್ತಿ ರಂಗ ಪ್ರಸ್ತುತಿ ರಂಗಾಸಕ್ತರ ಜೊತೆ, ಕಾವ್ಯಸಕ್ತ ಮನಸುಗಳ ಎದೆ ತಟ್ಟಿತು. ಎನ್.ಕೆ. ಪಾತ್ರಧಾರಿ ಸಾಗರ್ ಇಟೇಕರ್ ಸುಮಾರು ಒಂದು ಗಂಟೆಗಳ ರಂಗಪ್ರಸ್ತುತಿಗೆ ಕಾವ್ಯ ಭಾಷೆಯ ಮೂಲಕವೆ ಜೀವ ತುಂಬಿದರು. ಒಂದು ನಾಟಕವನ್ನು ರಂಗಪ್ರಯೋಗವನ್ನಾಗಿ ನೋಡುವುದಕ್ಕೂ, ಕವಿಯೊಬ್ಬನ ಭಾವ ಜಗತ್ತನ್ನು ಕಾವ್ಯಗಳ ಮೂಲಕ ತೆರೆದಿಡುವ ಕ್ರಿಯೆಗೂ ತುಂಬಾ ವ್ಯತ್ಯಾಸವಿದೆ. ಎರಡನೆಯ ಸಂದರ್ಭದಲ್ಲಿ ನಟ ಕೇವಲ ಒಬ್ಬ ನಟನಾಗದೆ, ಪ್ರೇಕ್ಷರನ್ನೂ ತನ್ನ ಜಗತ್ತಿಗೆ ಸೆಳೆದುಕೊಂಡು ಪ್ರಭಾವ ಬೀರುತ್ತಾನೆ, ಇದು ತುಂಬಾ ಸವಾಲಿನ ಕೆಲಸ. ಪ್ರೇಕ್ಷಕರೂ ಭಾವಪರವಶರಾಗಿ ಅಭಿನಯಕ್ಕಿಂತಲೂ ರಮ್ಯ ಕಾವ್ಯ ಜಗತ್ತೊಂದನ್ನು ಪ್ರವೇಶಿಸಿ ಬಿಡುತ್ತಾರೆ.

ನಮ್ಮ ಸಮಕಾಲೀನ ಪ್ರತಿಭಾವಂತ ಕವಿ ಎನ್.ಕೆ.ಹನುಮಂತಯ್ಯ. ಆದರೆ ಅವರ ಅಕಾಲಿ ಸಾವು ಮಾತ್ರ ಒಂದು ದುರಂತವೆ. ಎನ್.ಕೆ. ಕವಿತೆಗಳನ್ನೇ ಆಧರಿಸಿದ ʻಈ ಕರಿಯ ನೆರಳಲ್ಲಿʼ ರಂಗ ಪ್ರಸ್ತುತಿಯಲ್ಲಿ ಮೂಡಿಬಂದ ಸಂಭಾಷಣೆಗಳು ರಮ್ಯ, ರಸವತ್ತಾದ ಶಬ್ದಗಳಾಗದೆ ಎನ್.ಕೆ. ಅವರ ಕಾವ್ಯ ಕುಂಚದ ತಳಮಳದ ಸಾಲುಗಳು.

ಹೂವಿಗಾಗಿ ಹುಚ್ಚನಾಗಿದ್ದಾಗ ಸರಿ ರಾತ್ರಿಗಳಲಿ ಅಲೆದಲೆದು ಕೂಗಿ ಕಪ್ಪು ಕೇದಗೆಯ ಹೂವಿತ್ತು ನೀನು ಅತ್ತಿದ್ದ.... ಗಣಗಣ ಕಾದು ಮೈಯೆಲ್ಲ ಬಿರುಕು ಬಿಟ್ಟಾಗ ಗೆರೆಗಳ ಮರೆಯಲ್ಲಿ ನೀರಾಗಿ ಹರಿದು ನನ್ನೊಳಗೆ ಕಡಲಾದದ್ದ.... ನೊಂದ ತೊಡೆ ತುಂಬ ಹುತ್ತಗಳೆದ್ದು ಸೂರ್ಯ ಚಂದ್ರರೂ ಪುಂಗಿಯೂದುವಾಗ ನೀನು ಹಾವಾಗಿ ಹರಿದು ನನ್ನೊಳಗೆ ಹೆಣ್ಣಾದದ್ದ.... ಮರೆತಿಲ್ಲ ನನ್ನವಳೆ’ (ಮರೆತಿಲ್ಲ ನನ್ನವಳೆ) ಹೀಗೆ, ಹೃದಯ ತಟ್ಟುವ ಆರ್ದ್ರತೆಯ ಕವಿತೆಯೊಂದರ ಮೂಲಕವೆ ಶುರುವಿಟ್ಟುಕೊಳ್ಳುವ ಕಾವ್ಯಯಾತ್ರೆ ಪುಂಖಾನುಪುಂಖವಾಗಿ ತೇಲುತ್ತ ಸಾಗುತ್ತದೆ. ಹಲವು ಕವಿತೆಗಳಲ್ಲಿ ಕವಿ ತನ್ನ ನೋವು, ಯಾತನೆ, ನಿರಾಸೆ, ಹತಾಶೆ, ಒಳಬೇಗುದಿಗಳನ್ನು ಹೊರಹಾಕಿರುವ ಸೂಚ್ಯಗಳಿವೆ. ಇರುಳ ಉರಿಪದರಲಿ ಹೆಣವಾಗಿ ಕೊಳೆಯುತ್ತಿದ್ದ ಅವಳು
ಮೇಲೆ ಬಿದ್ದ ಆ ಒಂದು ಮಳೆ ಹನಿಯ ಸದ್ದಿಗೆ ಕಣ್ತೆರೆದಳು
ಮೋಡದಾಲದ ನೀರ ಬಿಳಲನು ಏರಿ ಬಯಲ ಸೇರಿ
ಒಣ ಗರುಕೆಯ ಅನಾದಿ ಹೆಜ್ಜೆಗಳ ಮೇಲೆ
ಮಿರುಗೊ ಹನಿಯನು ಕಂಡು ಬೆರಳು ಸೋಕಿಸಿದಳು
ಹನಿಯೊಡೆದು ನದಿಯಾಯ್ತು’ (ಆ ಒಂದು ಹನಿ ಮಳೆ)
ಎನ್ನುವ ಸಾಲುಗಳನ್ನು ನಟ ಸಾಗರ್ ಭಾವಪೂರ್ಣವಾಗಿ ಪ್ರಕಟಗೊಳಿಸುತ್ತಾರೆ.
ಅವ್ವ ಎನ್ನುವ ಸುದೀರ್ಘ ಕವಿತೆಯಲ್ಲಿ:
ಅವ್ವೋ ಎಂಬ ದನಿ ಕರುಳಲ್ಲಿ ಜುಳಜುಳನೆ ಹರಿಯುವಾಗ ಮೂಲೆ ಮುಡುಕುಗಳಲಿ ಮಡಕೆ ಕುಡಿಕೆಗಳಲಿ ತಡಕುತಾಳೆ ನೆನಪಾಗಿ ಒಣಬೇರು ನರದೊಳಗೆ ಮಗನ ಮುಖದಲಿ ಕಳಸ ಹೊಂಬಾಳೆಗಳು ಹೊಳೆದು ಬಿಗಿದಪ್ಪಿ ಅತ್ತಾಳೆ ಮೌನೆ ಬಾಯ್ಬಿಡಿದು ಸಾಯುವಂತೆ! ಬಂಜೆ ಬಯಕೆಯ ಉಗುರು ಪರಪರಚಿ ಹಿಂಡಿದರು ಸೋರದಿದೆ ಕಣ್ಣೀರು’ ಎಂದು ಮುಂದುವರೆಯುವ ಕವಿತೆ: ಮಗ ಹಾಡೊಂದ ಹಾಡ್ಯಾನೆ
ಅವ್ವಾ…. ಅವ್ವಳ್ಳಿ….
ಅಲ್ಲಿ ಸೂರ್ಯನಿಲ್ಲದ ಬೆಳಗು
ಚಂದ್ರನಿಲ್ಲದ ಇರುಳು’ (ಹೊಸ ಸುದ್ದಿ ತಂದಿರುವೆ)
ಎನ್ನುವ ನೊಂದ ಅವ್ವನ ವಿವಿಧ ಮುಖಗಳ ಅನಾವರಣಗೊಳ್ಳುತ್ತದೆ.

ಹುಟ್ಟೆಂಬ ಬೇಗೆಯಲಿ ಮೋಡವಾಗಿ ಮೂಡಿದೋನು ಹೊಲಸೆಂಬ ಹಟ್ಟಿಯೊಳಗೆ ಮಳೆಯಾಗಿ ಹರಿದೋನು ಅರಿವೇ ಅಂಬೇಡ್ಕರ ಗುರುವೇ ಅಂಬೇಡ್ಕರ (ನೆಲದ ಮಳೆ) ಎನ್ನುವ ಕವಿತೆಯಲ್ಲಿ ಭಾರತ ಕಂಡ ಶ್ರೇಷ್ಠ ವಿಚಾರವಾದಿ ಅಂಬೇಡ್ಕರ್ ಅವರ ಹುಟ್ಟು-ಬದುಕಿನ ಪ್ರತಿ ಘಟನೆಗಳು ಸೂಕ್ಷ್ಮವಾಗಿ ಪ್ರಕಟಗೊಂಡಿವೆ. ರಂಗಪ್ರಸ್ತುತಿಯ ಶೀರ್ಷಿಕೆ ಕವಿ ಮಾತು’ ಕವಿತೆಯಲ್ಲಿ ಶೀರ್ಷಿಕೆಯಷ್ಟೇ ಅಲ್ಲಿನ ಕಾವ್ಯಸಾಲುಗಳು ಕೇಳುಗ, ನೋಡುಗನಿಗೆ ರಸಾನುಭವ ನೀಡುತ್ತವೆ:

ಈ ಕರಿಯ ಬೆನ್ನಲ್ಲಿ ಹಗಲಿರುಳು ತಣ್ಣಗೆ ಕೊರೆದಂತಾಗುತ್ತದೆ ಈ ಕರಿಯ ಬೆನ್ನಲ್ಲಿ ಸದಾ ಉರಿ ಉರಿ ಹಳೆಯ ಗಾಯಗಳು ನಗುತ್ತಿರಬಹುದು (ಕವಿಮಾತು) ಗೋವು ತಿಂದು ಗೋವಿನಂತಾದವನು’ ಕವಿತೆಯ ಈ ಸಾಲುಗಳು ಅಸ್ಪೃಶ್ಯನೊಬ್ಬನ ವೈಯುಕ್ತಿಕ ಬದುಕಿನ ತಳಮಳಗಳು, ಪ್ರಸ್ತುತ ರಾಷ್ಟ್ರ ರಾಜಕಾರಣಕ್ಕೆ, ಸಮಾಜದಲ್ಲಿ ಧರ್ಮ, ಜಾತಿ, ಸಂಸ್ಕøತಿಯ ಹೆಸರಿನಲ್ಲಿ ನಡೆಯುತ್ತಿರುವ ಅಶಾಂತಿಗೆ ಹಿಡಿದ ಕನ್ನಡಿಯಂತಿದೆ.

ಅಸ್ಪೃಶ್ಯ! ಹೌದು, ನಾನು ಗೋವು ತಿನ್ನುತ್ತೇನೆ ಗೋವು ತಿಂದು ಗೋವಿನಂತಾಗಿ ರೋಮರೋಮಗಳಲ್ಲು ಕೆಚ್ಚಲನು ಹೊತ್ತು ತಿರುಗುತ್ತೇನೆ ಕಸದ ತೊಟ್ಟಿಯಲಿ ಬಿದ್ದ ಕೂಸುಗಳಿಗೆ ಹಾಲು ಕುಡಿಸುತ್ತೇನೆ’ (ಗೋವು ತಿಂದು ಗೋವಿನಂತಾದವನು) ಹೀಗೆ ಒಟ್ಟು ಸುಮಾರು ಮೂವತ್ತು ಕವಿತೆಗಳನ್ನು ಆಧರಿಸಿದಈ ಕರಿಯ ಬೆನ್ನಲ್ಲಿ’ ಪ್ರಸ್ತುತಿಯಲ್ಲಿನ, `ಗಡಿಯಾರವಾಗುವವನು, ಸೂರ್ಯ ಭೂಮಿಯ ದಾರಿ, ಮಿಂಚುಹುಳ ಮತ್ತು ನಾನು, ಮಾಂಸದಂಗಡಿಯ ಮುಂದೆ ನವಿಲು, ಅವ್ವ ನಿಂತೇ ಇದ್ದಾಳೆ, ಹಿಮದ ಹೆಜ್ಜೆ, ಮಾತಿಲ್ಲದ ಮೇಲೆ, ಜನೆವರಿಯ ನಡುರಾತ್ರಿ….’ ಮೊದಲಾದ ಕವಿತೆಗಳ ಸಾಲುಗಳ ಮೂಲಕವೆ ಕವಿ ಮತ್ತು ಕಾವ್ಯಾಸಕ್ತರ ಮುಖಾಮುಖಿಯಾಗುತ್ತದೆ. ಬಹುತೇಕ ಕವಿತೆಗಳಲ್ಲಿ ಕವಿ ಎನ್.ಕೆ. ತಾನು ಹೇಳಬಯಸುವುದನ್ನು ನೋವಿನಿಂದಲೆ ಹೊರ ಜಗತ್ತಿಗೆ ತೆರೆದಿಡಲು ಪ್ರಯತ್ನಿಸುತ್ತಾರೆ. ಅದೆ ನೋವಿನ ಛಾಯೆ ನಟನೆಯಲ್ಲೂ ಮೇಳೈಸಿದೆ.

ಪ್ರವೀಣ ರೆಡ್ಡಿ ಗುಂಜಹಳ್ಳಿ ಅವರ ಪರಿಕಲ್ಪನೆ ಮತ್ತು ನಿರ್ದೇಶನದ ಮೂಲಕ ಕವಿಯೊಬ್ಬನ ಮನದ ಹೋಯ್ದಾಟಗಳನ್ನ ಯಶಸ್ವಿಯಾಗಿ ರಂಗದ ಮೇಲೆ ತರಲು ಪ್ರಯತ್ನಿಸಿದ ನಟ ಸಾಗರ್ ಇಟೇಕರ್ ಗಮನ ಸೆಳೆಯುತ್ತಾರೆ. ವಿ.ದೇವರಾಜ ಬೆಂಗಳೂರು ಅವರ ವಿನ್ಯಾಸ ಮತ್ತು ಸಂಗೀತ ಎನ್.ಕೆ. ಕವಿತೆಗಳ ಕೆಲ ಸಾಲುಗಳು ಕಣ್ಣನ್ನು ತೇವಗೊಳಿಸುತ್ತವೆ. ಲಕ್ಷ್ಮಣ ಮಂಡಲಗೇರಾ ಅವರ ಬೆಳಕು ಏಕವ್ಯಕ್ತಿ ಪ್ರದರ್ಶನದ ಹಲವು ಘಟನೆ, ಸನ್ನಿವೇಶಗಳು, ಪಾತ್ರಗಳನ್ನು ಸೀಮಿತವಾಗಿ ನೋಡಬೇಕಾದಂತಹ ಪರಿಸ್ಥಿತಿಯಲ್ಲೂ ಗಮನ ಸೆಳೆಯುತ್ತವೆ.

ಕೆಲ ತಿಂಗಳ ಹಿಂದೆ ರೋಹಿತ್ ವೇಮುಲು ಅವರ ಬದುಕನ್ನಾಧರಿಸಿದ ʻನಕ್ಷತ್ರ ಧೂಳು’ ಪ್ರಸ್ತುತಗೊಂಡ ನಂತರ ಈಗ ಮತ್ತೊಂದು ಏಕವ್ಯಕ್ತಿ ಪ್ರಸ್ತುತಿ ಯಶಸ್ಸು ಕಂಡದ್ದು ನಿರ್ದೇಶಕ ಪ್ರವೀಣ ರೆಡ್ಡಿ ಮತ್ತು ನಟ ಲಕ್ಷ್ಮಣ ಮಂಡಲಗೇರಾ ಅವರ ಪ್ರಯತ್ನದಿಂದ. ಇಂತಹ ಪ್ರಯತ್ನಕ್ಕೆ ಕೈಹಾಕಿದ ರಾಯಚೂರು ಸಮುದಾಯದ ಹಿರಿಯ ರಂಗಕರ್ಮಿ ವಿ.ಎನ್.ಅಕ್ಕಿ ಮತ್ತು ತಂಡದ ಪ್ರಯತ್ನ ಶ್ಲಾಘನೀಯ.

‍ಲೇಖಕರು Admin

November 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಡಿ. ಎಂ. ನದಾಫ್; ಅಫಜಲಪುರ

    ಎನ್. ಕೆ.ಹನುಮಂತಯ್ಯ.ನವರ ಕಾವ್ಯ ಯಾನವನ್ನು ಸಮರ್ಥವಾಗಿ ಪ್ರೇಕ್ಷಕರ ಎದೆಗೂಡಿಗೆ ಸಾಗಿಸಿದ ಮಂಡಲಗೆರಾ ಅವರಿಗೆ ಕೃತಜ್ಞತೆಗಳು.
    ಚಿತ್ರದ ಬೆನ್ನು ಮತ್ತು ಗೋವು ತಿಂದು ಗೋವಿನಂತಾದವನು ನನಗೆ ಹುಚ್ಚು ಹಿಡಿಸಿದ ಕವಿತೆಗಳು……..
    Nk We miss you
    ಡಿ. ಎಂ. ನದಾಫ್; ಅಫಜಲಪುರ

    ಪ್ರತಿಕ್ರಿಯೆ
  2. ಡಿ ಎಂ ನದಾಫ್ ಅಫಜಲಪುರ

    ಸಾಗರ್ ಇಟೆಕರ್
    ಅಭಿನಂದನೆಗಳು ಸರ್
    *ಡಿ ಎಂ ನದಾಫ್ ಅಫಜಲಪುರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: