ಜಯಲಕ್ಷ್ಮಿ ಪಾಟೀಲ್ ಅಂಕಣ – ಭಾವುಕತನ ತುಸು ಹೆಚ್ಚಿರುವ ಜನ ನಾವು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

52

ಲೋಣಿಯಿಂದ ನಾವು ಬೆಂಗಳೂರಿಗೆ ಬರಲು ಆಗ ನೇರ ಬಸ್, ಟ್ರೇನ್ ಏನೂ ಇರಲಿಲ್ಲವಾಗಿ, ಈಗಲೂ ಇಲ್ಲ ಆ ಮಾತು ಬೇರೆ, ನಗರ್ ವರೆಗೆ ನಮ್ಮ ಮನೆಯ ಸಾಮಾನುಗಳನ್ನು ಹೇರಿದ ಲಾರಿಯಲ್ಲೇ ಮಕ್ಕಳಿಬ್ಬರನ್ನೂ ಕರೆದುಕೊಂಡು ಹೊರಟೆವು. ನಗರ್ ಎಂದರೆ ಅಹ್ಮದ್’ನಗರ. ಅದೇನೋ ಲಾರಿ ಡ್ರೈವರ್ ಗೆ ಮುಂಚೆಯೇ ನಾವು ಊರು ತೊರೆದು ಹೊರಟಿರುವುದು ಗೊತ್ತಿತ್ತೆಂಬಂತೆ, ದಾರಿಯುದ್ದಕ್ಕೂ ಅಗಲುವಿಕೆಯ ಹಿಂದಿ ಹಾಡುಗಳನ್ನೇ ಹಾಡುತ್ತಿತ್ತು ಅವನ ಲಾರಿಯಲ್ಲಿದ್ದ ಕ್ಯಾಸೆಟ್ ಪ್ಲೇಯರ್! ನಾವಿಬ್ಬರೂ ಆ ಹಾಡುಗಳನ್ನು ಕೇಳುತ್ತಾ ಕಣ್ಣಲ್ಲಿ ಜಿನುಗುತ್ತಿದ್ದ ನೀರಪೊರೆಯ ಹಿಂಗಿಸಿಕೊಳ್ಳುತ್ತಾ ನಗುತ್ತಲೇ, ಏನ್ ವಿಚಿತ್ರ ಅಲ್ಲಾ? ಎಂದು ಮಾತಾಡಿಕೊಂಡೆವು.

ಬೆಂಗಳೂರಿನ ವಿಜಯನಗರದಲ್ಲಿ ಬಾಲ್ಕನಿಯಂತೆ ವಿಶಾಲವಾದ ಟೆರೆಸ್ ಇರುವ, ಹಾಲ್, ಎರಡು ಬೆಡ್ ರೂಮ್, ಡೈನಿಂಗ್ ರೂಮ್, ಕಿಚನ್ ಇರುವ ಮಹಡಿಯ ಮೇಲಿನ ಮನೆಯೊಂದನ್ನು ಖಾನ್ ಅವರ ಅಳಿಯ ನಮಗಾಗಿ ಬಾಡಿಗೆ ಹಿಡಿದಿಟ್ಟಿದ್ದರು. ಪ್ರಶಾಂತ ವಾತಾವರಣ. ನಾವು ನಾನ್ವೆಜ್ ತಿನ್ನುವುದಿಲ್ಲ ಎಂದು ಹೇಳಿಯೇ ಮನೆ ಬಾಡಿಗೆ ಹಿಡಿದಿದ್ದಾದರೂ, ನಾವಲ್ಲಿಗೆ ಹೋದ ಮೇಲೆ ಆ ಮನೆಯೊಡತಿ ಮತ್ತೂ ಹತ್ತಾರು ಸಲ ನಮ್ಮ ಜಾತಿಯನ್ನು ಕೇಳೀ ಕೇಳಿ ಕನ್ಫ಼ರ್ಮ್ ಮಾಡಿಕೊಂಡರು! ಅವರಿಗೆ ಮಾಂಸದಡುಗೆಯ ವಾಸನೆ ಆಗುತ್ತಿರಲಿಲ್ಲ. ಮಜಾ ಅಂದ್ರೆ ಅವರ ಔಟ್ ಹೌಸಲ್ಲಿದ್ದವರು ಮಾಂಸಹಾರಿಗಳಾಗಿದ್ದರು ಎನ್ನುವುದು. ಅದನ್ನೊಮ್ಮೆ ಕೇಳಿದೆ. ಅದಕ್ಕವರು, ಆ ಮನೆಯ ಅಡುಗೆಮನೆಯ ಕಿಟಕಿ ಹಿಂಬದಿಯಲ್ಲಿರುವುದರಿಂದ ಅಲ್ಲಿಂದ ಯಾವುದೇ ಥರದ ವಾಸನೆ ಅವರ ಮನೆಯವರೆಗೆ ಬರುವುದಿಲ್ಲವೆಂದೂ, ನಾವಿದ್ದ ಮನೆಯ ಅಡುಗೆ ಕೋಣೆ ಅವರ ಅಡುಗೆಕೋಣೆಯ ಮೇಲೆಯೇ ಇರುವುದರಿಂದ ಅಷ್ಟು ಸಲ ಕೇಳಬೇಕಾಯಿತೆಂದೂ ಹೇಳಿದಾಗ, ಅವರ ಸಮಸ್ಯೆ ಅರ್ಥವಾಗಿತ್ತು. ಬೆಂಗಳೂರಿನಲ್ಲಿ ಮನೆಯನ್ನು ಬಾಡಿಗೆಗೆ ಕೊಡುವಾಗ ವೆಜ್ಜಾ ನಾನ್ವೆಜ್ಜಾ ಅಂತ ಕೇಳಿ ಕೊಡುತ್ತಾರೆ ಎನ್ನುವುದೇ ಆಗ ನಮ್ಮನೆಯಲ್ಲಿ ಒಂದು ಗಾಸಿಪ್ ವಿಷಯವಾಗಿತ್ತು! ಸ್ವಲ್ಪ ಮಡಿವಂತಿಕೆಯ ಸ್ವಭಾವದವರಾಗಿದ್ದರೂ ಓನರ್ ಮನೆಯವರೆಲ್ಲಾ ತುಂಬಾ ಒಳ್ಳೆಯವರಾಗಿದ್ದರು. 

 ಮಕ್ಕಳನ್ನು ವಿಜಯನಗರದಲ್ಲಿನ ಕಾರ್ಡಿಯಲ್ ಸ್ಕೂಲಿಗೆ ಹಾಕಿದೆವು. ಇವರು ಖಾನ್ ಅವರಿಗೆ ಸಿಕ್ಕ ಪ್ರಾಜೆಕ್ಟನ್ನು ಸಾಕಾರಗೊಳಿಸಲು ಓಡಾಡತೊಡಗಿದರು. ಎಂಜಿ ರೋಡಲ್ಲಿ ಇವರ ಆಫೀಸು. 

ಬೆಂಗಳೂರಿಗೆ ಬಂದ ಆರು ತಿಂಗಳಿಗೆ ಮೂರನೇ ನಾದಿನಿ ಮಲ್ಲಮ್ಮನ ಮದುವೆ ನಿಶ್ಚಯವಾಯಿತು. ದೊಡ್ಡ ನಾದಿನಿಯ ಪತಿ ಗಂಡು ನೋಡಿದ್ದರು. ಈ ಸಲ ಮಲ್ಲಮಗೂ ಹುಡುಗ ಇಷ್ಟವಾಗಿದ್ದು ಮನಸಿಗೆ ನಿರಾಳವಾದಂತಾಗಿತ್ತು. ಮಾವನವರ ಮರಣಾನಂತರ ಬಂದ ಹಣ ಮದುವೆಗೆ ಸಾಲದಾಗಿ, ಮಾವನವರಿರುವಾಗಲೇ ಅವರೇ ಕಲಕೇರಿಯಲ್ಲಿ ಕೊಂಡ ಮೂರು ಸೈಟುಗಳಲ್ಲಿ, ನನ್ನ ಮೈದುನನ ಪಾಲಿನ ಸೈಟನ್ನು ಹೊರತುಪಡಿಸಿ ನಮ್ಮ ಪಾಲಿಗಿದ್ದ ಸೈಟನ್ನೂ ಸೇರಿ ಎರಡು ಸೈಟ್ ಮಾರಿ ಮದುವೆಗೆ ಹಣ ಹೊಂದಿಸಿ ಒಪ್ಪವಾಗಿ ಮದುವೆ ಮಾಡಿಕೊಟ್ಟೆವು. ಮದುವೆ ಮಾಡಿಕೊಟ್ಟಿದ್ದು ನಾವಾದರೂ ಅದಕ್ಕಾಗಿ ಎಲ್ಲ ಕೆಲಸ ಕಾರ್ಯಗಳನ್ನು ಪ್ರೀತಿಯಿಂದ ಹೊತ್ತು ಮಾಡಿದವರು ನನ್ನ ತವರಿನ ಬಳಗ. 

ನನ್ನ ತವರುಮನೆಯ ವಿಶೇಷವೇನೆಂದರೆ ಎಷ್ಟೇನೇ ಒಳ ಗುದುಮುರಿಗೆಗಳಿದ್ದರೂ ಮನೆ ಮದುವೆಗಳ ಹೊತ್ತಲ್ಲಿ ಎಲ್ಲ ಕುಟುಂಬಗಳೂ ಅದೆಲ್ಲವನ್ನು ಮರೆತು ಅಕ್ಕರೆಯಿಂದ ಜವಾಬ್ದಾರಿಗಳನ್ನು ಹೊತ್ತು ನಿಭಾಯಿಸುವುದಲ್ಲದೇ ಹಬ್ಬವಾಗಿಸಿಬಿಡುತ್ತಾರೆ ಮದುವೆಯನ್ನು. ಭಾವುಕತನ ತುಸು ಹೆಚ್ಚಿರುವ ಜನ ನಾವು.

ಮಲ್ಲಮ್ಮನ ಮದುವೆಗೂ ಮೊದಲೇ ಮೈದುನ ರಾಮನಗೌಡನ ಬಿಎ ಓದು ಮುಗಿದಿತ್ತು. ಮಾವನವರು ಸರಕಾರಿ ನೌಕರರಾಗಿದ್ದು (ಶಾಲಾ ಶಿಕ್ಷಕರು) ಕೆಲಸದಲ್ಲಿದ್ದಾಗಲೇ ತೀರಿಕೊಂಡಿದ್ದರಾದ್ದರಿಂದ ಅನುಕಂಪಾಧಾರಿತ ಕೆಲಸ ಹೆಂಡತಿ ಇಲ್ಲವೇ ಮಕ್ಕಳಿಗೆ ಸಿಗುವ ಅವಕಾಶ ಆಗ ಇತ್ತು. ನಮ್ಮತ್ತೆಯವರು ಓದಿದ್ದು ಕೇವಲ ನಾಲ್ಕನೇ ತರಗತಿಯವರೆಗೆ ಮತ್ತು ಅವರಿಗ್ಯಾವತ್ತೂ ಹೊರಗೆ ಹೋಗಿ ತರಕಾರಿಯನ್ನೂ ಸಹ ತಂದ ಅಭ್ಯಾಸವಿರಲಿಲ್ಲವಾಗಿ, ಅವರು ಮಾವನವರ ಜಾಗದ ಕೆಲಸ ಮಾಡುವುದು ಸಾಧ್ಯವಿಲ್ಲದ ಮಾತಾಗಿತ್ತು. ನನ್ನ ಪತಿ ಮನೆಯ ಹಿರಿಮಗನಾದ್ದರಿಂದ ಇವರಿಗೆ ಆ ಕೆಲಸ ಸಿಗಬೇಕಿತ್ತು. ಆದರೆ ಇವರು ಆ ಕೆಲಸ ಪಡೆದುಕೊಂಡರೆ, ಬಿಎ ಓದಿರುವ ರಾಮನಗೌಡನಿಗೆ ಸರಕಾರಿ ಕೆಲಸ ಸಿಗುವುದು ಅನುಮಾನ ಎಂದೆನಿಸತೊಡಗಿತು ನನಗೆ. ಹೇಗೂ ಇವರು ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಂಜಿನಿಯರ್ ಆದ್ದರಿಂದ ಮುಂದೆಯೂ ಖಾಸಗಿ ಕಂಪನಿಗಳಲ್ಲಿ ಕೆಲಸ ಸಿಗುತ್ತದೆ. ಆದರೆ ಬಿಎ ಓದಿದ ಮೈದುನಗೆ ಖಾಸಗಿ ಕಂಪನಿಗಳಲ್ಲಿ ಒಳ್ಳೆಯ ಉದ್ಯೋಗ ಸಿಗಲು ಸಾಧ್ಯವಿಲ್ಲದ ಮಾತು ಅನಿಸಿ, ಮಾವನವರ ಕೆಲಸ ಅವನಿಗೇ ಸಿಕ್ಕರೆ ಒಳ್ಳೆಯದು ಎಂದು ನನ್ನ ಪತಿ ಇದಿರು ನನ್ನ ವಿಚಾರವನ್ನಿಟ್ಟೆ. ಅವರಿಗೂ ಅದು ಸರಿ ಅನಿಸಿತು, ಒಪ್ಪಿದರು. ಇನ್ನು ಸರಕಾರಕ್ಕೆ ಹಿರಿಯ ಮಗನಿದ್ದಾಗಲೂ ಕಿರಿಯವನಿಗೇಕೆ ಎಂಬ ಕಾರಣ ಬರೆಯಬೇಕಲ್ಲ? ನಮ್ಮತ್ತೆಯವರ ಹೆಸರಿನಲ್ಲಿ ನಾನು ಈ ಕುರಿತು ಒಂದು ವಿನಂತಿ ಪತ್ರ ಬರೆದೆ ಸರಕಾರಕ್ಕೆ. ಅದರ ಒಕ್ಕಣಿಯ ಸಾರಾಂಶ ಹೀಗಿತ್ತು.

“ನಾನು ಅನಕ್ಷರಸ್ಥಳಾಗಿದ್ದು ಆರೋಗ್ಯವೂ ಅಷ್ಟಾಗಿ ಸರಿಯಿಲ್ಲದಿರುವ ಕಾರಣ ನನಗೆ ಅನುಕಂಪ ಆಧಾರಿತವಾಗಿ ದೊರೆಯುವ ಕೆಲಸವನ್ನು ಮಾಡಲು ಅಸಮರ್ಥಳಾಗಿರುತ್ತೇನೆ. ನನ್ನ ದೊಡ್ಡ ಮಗ ತನ್ನ ಹೆಂಡತಿಯ ಮಾತನ್ನು ಕೇಳಿಕೊಂಡು ನಮ್ಮ ಕಷ್ಟ ಸುಖಕ್ಕೆ ಆಗದೆ ನಮ್ಮಿಂದ ದೂರವಾಗಿದ್ದಾನೆ ಆದ್ದರಿಂದ ಅವನಿಗೆ ಕೊಡುವುದು ಬೇಡ. ನನ್ನ ಕಿರಿಯ ಮಗ ಬಿಎ ಪಾಸಾಗಿದ್ದು ನಮ್ಮ ಜೊತೆಗಿದ್ದು ಒಳ್ಳೆಯನಾಗಿರುವುದರಿಂದ, ದಯವಿಟ್ಟು ಅನುಕಂಪ ಆಧಾರಿತ ಕೆಲಸವನ್ನು ನನ್ನ ಕಿರಿಯ ಮಗನಾದ ರಾಮನಗೌಡ ಭೀಮನಗೌಡ ಪಾಟೀಲ್ ಇವನಿಗೇ ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ”

ನಮ್ಮತ್ತೆಗೆ ಅದನ್ನು ಓದಿ ಹೇಳಿ ಅವರಿಂದ ಸಹಿ ಹಾಕಿಸಿದೆ. ಅವರಿಂದ ‘ನಿನ್ನನ್ನ್ಯಾಕೆ ಕೆಟ್ಟವಳಾಗಿ ಬಿಂಬಿಸಿಕೊಂಡೆ, ಬೇರೆ ಏನಾದರೂ ಬರೆಯಬಹುದಿತ್ತು’ ಎನ್ನುವ ಪುಟ್ಟ ಮಾತನ್ನು ನಿರೀಕ್ಷಿಸಿದ್ದೆ. ಮುಗ್ಧ ಅತ್ತೆ, ಓದಿದ್ದನ್ನು ಕೇಳಿಸಿಕೊಂಡು, ನಾನು ಹೇಳಿದಲ್ಲಿಗೆ ನಗುತ್ತಾ ಸಹಿ ಹಾಕಿದರು. ಅರ್ಜಿ ಹಾಕಿದ ತಕ್ಷಣ ನೌಕರಿ ಸಿಗುತ್ತದೆಯೇ? ಅದಕ್ಕಾಗಿ ಕಾಯುವುದು ಅನಿವಾರ್ಯವಾಯಿತು. 

ಮಲ್ಲಮ್ಮನ ಮದುವೆ, ರಾಮನಗೌಡನ ಓದು ಎರಡೂ ಮುಗಿದು, ಕೊನೆಯ ನಾದಿನಿಯ ಓದು ಮಾತ್ರ ಮುಂದುವರೆದಿತ್ತು ಬಿಜಾಪುರದಲ್ಲಿ. ಕೇವಲ ಅದಕ್ಕಾಗಿ ಮನೆ ಬಾಡಿಗೆ ಕೊಟ್ಟು ಅವರೆಲ್ಲ ಅಲ್ಲಿರುವ ಬದಲು, ಅತ್ತೆ ಮತ್ತು ರಾಮನಗೌಡ ಬೆಂಗಳೂರಿಗೆ ಬಂದರೆ ಬಾಡಿಗೆ ಹಣದ ಉಳಿತಾಯವಾದರೂ ಆದೀತು ಎಂಬ ನಿರೀಕ್ಷೆಯನ್ನಿಟ್ಟುಕೊಂಡು ಅವರಿಬ್ಬರನ್ನೂ ಬೆಂಗಳೂರಿಗೆ ಕರೆಸಿಕೊಂಡೆವು. ಬಿಎ ಮೊದಲ ವರ್ಷದಲ್ಲಿ ಓದುತ್ತಿದ್ದ ಭಾರತಿಯ ಓದಿಗೆ ತೊಂದರೆಯಾಗದಿರುವಂತೆ, ಆಕೆಯನ್ನು ನನ್ನ ತಂದೆ ತಾಯಿಯ ಮನೆಯಲ್ಲಿ ಇರಿಸಿದೆವು. 

 ಬೆಂಗಳೂರಿಗೆ ಬಂದ ಮೇಲೆ ರಾಮನಗೌಡ ತನಗೂ ಏನಾದರೊಂದು ತಾತ್ಪೂರ್ತಿಕ ಕೆಲಸ ಕೊಡಿಸೆಂದು ತನ್ನ ಅಣ್ಣನಲ್ಲಿ ಕೇಳಿದಾಗ, ಇವರು construction ಕಂಪನಿಯೊಂದರಲ್ಲಿ ಸ್ಟೋರ್ ಕೀಪರ್ ಕೆಲಸ ಕೊಡಿಸಿದರು. ನಾಲ್ಕಾರು ದಿನ ಕೆಲಸಕ್ಕೆ ಹೋಗಿ ಬರುತ್ತಿದ್ದವನು, ತಾನು ಸೈಟಿನಲ್ಲಿಯೇ ಉಳಿಯುವುದಾಗಿ ಹೇಳಿದ ರಾಮನಗೌಡ. ಮನೆಯಿದ್ದೂ ಅಲ್ಲಿರುವುದು ಬೇಡ ಎಂದರೂ ಕೇಳದೇ ಅಲ್ಲಿ ಕಂಪನಿಯವರು ಕೊಟ್ಟ ರೂಮಲ್ಲಿ ವಾಸ ಮಾಡತೊಡಗಿದ. ನನಗೋ ಮನೆ ಊಟ ಇಲ್ಲದೆಯೇ ಮೈದುನ ಸೊರಗುತ್ತಾನೆ ಅನ್ನುವ ಚಿಂತೆ. ಆದರೆ ಅದಕ್ಕೆ ವಿರುದ್ಧವಾಗಿ ಮೈಕೈ ತುಂಬಿಕೊಂಡು ಮೊದಲೇ ಬೆಳ್ಳಗಿದ್ದ ಹುಡುಗ ಈಗ ಮುಟ್ಟಿದರೇ ರಕ್ತ ಚಿಮ್ಮುವಷ್ಟು ಚೆಂದವಾಗಿದ್ದ. ಅವನು ವಾರಕ್ಕೊಮ್ಮೆ ಮನೆಗೆ ಬಂದಾಗಲೆಲ್ಲ ಅಲ್ಲಿನ ಊಟವನ್ನು ಹೊಗಳಿದ್ದೇ ಹೊಗಳಿದ್ದು. 

ಮಾವನರ ಗಳಿಕೆ ಅಷ್ಟೂ ಮಲ್ಲಮ್ಮನ ಮದುವೆಗಾಗಿ ಖರ್ಚಾಗಿ ಕೈ ಖಾಲಿಯಾಗಿತ್ತು. ನಾವು ಇನ್ನೂ ರಾಮನಗೌಡ ಮತ್ತು ಭಾರತಿಯ ಮದುವೆಗಳನ್ನು ಮಾಡುವುದಿತ್ತಲ್ಲ, ಇವರೊಬ್ಬರ ದುಡಿಮೆಯಿಂದ ಅದು ಅಸಾಧ್ಯವೆನಿಸಿ, ನಾನೂ ಏನಾದರೂ ವ್ಯಾಪಾರ ಮಾಡಿ ಇವರಿಗೆ ನೆರವಾಗಬೇಕು ಎಂದು ನಿರ್ಧರಿಸಿದೆ. 

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: