ಸಂಧ್ಯಾ ಹೊನಗುಂಟಿಕರ್ ಸಣ್ಣ ಕಥೆ – ಕೂಸುಮರಿ ಮತ್ತು ನಗುವ ನಕ್ಷತ್ರಗಳು..

ಸಂಧ್ಯಾ ಹೊನಗುಂಟಿಕರ್

ಅದೆಂತಹ ಕರಾಳ ದಿನಗಳು. ಏಕಾಏಕಿ ನಾವು ಅನಾಥರಾಗಿಬಿಟ್ಟೆವು. ಯಾವ ಗೊತ್ತುಗುರಿ ಇಲ್ಲದೆ  ವರುಷಗಳು ಸೋರಿಹೋಗುತ್ತಿವೆ.ಹಿಂದಿನ ಸುವರ್ಣಮಯ ದಿನಗಳಲ್ಲಿ ಯಾರಾರದೊ ಹೆಗಲೇರಿ ಹಮ್ಮು ಬಿಮ್ಮುಗಳಿಂದ ಮೆರೆಯುತ್ತಿದ್ದ ನಾನು ಭವಿಷ್ಯ ಕಳೆದುಕೊಂಡು ಕುಳಿತಿರುವೆ. ನಿದ್ದೆಗೆಟ್ಟ ಮುದುಕಿ ಬೆಳಗಿನಲ್ಲಿ ಎದ್ದರೂ ಇತ್ತ ಓಡಾಡಲಾಗದೆ ಅತ್ತ ನಿದ್ದೆಯೂ ಮೂಡದೆ ಗೂನುಬೆನ್ನಿನ ಮೂಳೆಗಳನ್ನು ಸವರುತ್ತಾ ಕುಳಿತಂತೆ ನಾನೂ ಗೋಡೆಯ ಅಡ್ಡಪಟ್ಟಿಯಲ್ಲಿ ಕುಳಿತಿದ್ದೇನೆ. ಯಾರೂ ನನ್ನನ್ನು ನೋಡುವವರಿಲ್ಲ. ಕೈಗೆತ್ತಿಕೊಂಡು ಮೈ ನೇವರಿಸುವವರೂ ಇಲ್ಲ. ನಿಜ ನಾನು ಬಣ್ಣಗೆಟ್ಟಿದ್ದೇನೆ . ಆ ಮರುಕದಿಂದಲಾದರೂ ಯಾರಾದರೂ ನನ್ನೆಡೆಗೆ ದೃಷ್ಟಿ ಹಾಯಿಸಬೇಕಿತ್ತಲ್ಲವೇ ಎಂದು ಬಯಸುತ್ತದೆ ನನ್ನ  ಜೀವ.ಹಾಗಂತ ನಾನೊಬ್ಬನೆ ಈ ಸಂಕಟದಲ್ಲಿಲ್ಲ. ನನ್ನ  ಜೊತೆಗಾರರು ಅನೇಕರು ನೋವಿನಲ್ಲಿದ್ದಾರೆ.

ಯಾವಾಗಲೂ ಜೂನ್ ತಿಂಗಳಲ್ಲಿ ನಮ್ಮ ಚಟುವಟಿಕೆ ಭರದಿಂದ ಇರುತ್ತಿದ್ದರೂ ಎಪ್ರಿಲ್ ಮೇ ತಿಂಗಳ ಪ್ರಾರಂಭದಲ್ಲಿಯೇ ನಮಗೆ ಆದರದ ಆಮಂತ್ರಣ. ನಾವು ಮದುಮಕ್ಕಳಂತೆ ಸಿಂಗಾರಗೊಂಡು, ಹಲವು ಬಣ್ಣಗಳ ಮೆತ್ತಿಕೊಂಡು, ವಿಶೇಷ ವಸ್ತು ಒಡವೆ ಧರಿಸಿ ಮೈತುಂಬಾ ಸಿಂಚನ್, ಲಿಟಲ್ ಸಿಂಗಂ, ಮಿಕ್ಕಿಮೌಸ್ ಹೀಗೆ ಆ ವರುಷದ ಹೀರೋ ಹೀರೋಯಿನ್ ಗಳ ಮೆಹೆಂದಿ ಹಾಕಿಸಿಕೊಂಡಿರುತ್ತಿದ್ದೇವು.  ನಮಗಾಗಿಯೇ  ಚಿಕ್ಕ ಪುಟ್ಟ ಕಂದಮ್ಮಗಳು, ಹತ್ತು ಹನ್ನೆರಡು ವರುಷದ ಚಿಣ್ಣರು ಅಪ್ಪನ ಕೈಹಿಡಿದು ಅಂಗಡಿ ಹೊಕ್ಕಾಗ ದೀಪದಂತಹ ಹೊಳಪು ಆ ಪುಟ್ಟ ಕಣ್ಣುಗಳಲ್ಲಿ. ಆ ಬೆಳಕು ನಮ್ಮಲ್ಲಿ ಪ್ರತಿಫಲಿಸಿ ಇಡೀ ಅಂಗಡಿಯೆ ಬೆಳದಿಂಗಳಿಂದ  ತಂಪಾಗುತಿತ್ತು.. ಅಪ್ಪಂದಿರಿಗೋ ತಮ್ಮ ಮಕ್ಕಳಿಗಾಗಿ ಜಮೀನು ಖರೀದಿಸುತ್ತಿರುವಂತಹ ಉಮೇದು, ಹೆಮ್ಮೆ. ನಮ್ಮನ್ನೆಲ್ಲ ಎತ್ತಿ ಇಳಿಸಿ ಮೈಸವರಿ, ನಮ್ಮ ಹೊಟ್ಟೆ ಬಗೆದು, ನಮ್ಮ ಕೈ ಕಾಲುಗಳ ಎಳೆದು ನೋಡಿ ಕೊನೆಗೆ ನಮ್ಮವರಲ್ಲೇ ಒಬ್ಬರನ್ನು ಆಯ್ಕೆ ಮಾಡಿಕೊಂಡಾಗ ಉಳಿದವರಿಗೆ ಒಂದು ತರಹದ ದುಃಖ, ಇನ್ನೊಂದು ರೀತಿಯಲ್ಲಿ ಸಮಾಧಾನ. ಅವನಿಗೆ ಒಳ್ಳೆಯ ಮಾನ  ಸಿಕ್ಕಿತಲ್ಲ.. ಚೆನ್ನಾಗಿ ನೂರುಕಾಲ ಬಾಳಲಿ, ಆ ಮಗುವಿನ ಭವಿಷ್ಯಕ್ಕೆ ನೆರವಾಗಲಿ ಎಂದು ಹಾರೈಸಿ  ಬೀಳ್ಕೊಡುತ್ತಿದ್ದೆವು. ಹಾಗೆಯೇ ನಮ್ಮ ದಿನ ಯಾವತ್ತು ಬರುವುದೋ ಎಂದು ನಿಟ್ಟುಸಿರು ಬಿಡುತ್ತಿದ್ದೇವು.

ಹೌದು. ಈಗ ತುಂಬ ಕಷ್ಟ. ಪುಟಾಣಿಗಳ ಒಡನಾಟದ ಸ್ವರ್ಗದಲ್ಲಿ ವಿಹರಿಸುತಿದ್ದ ನಾವು ಈಗ ಹೀಗೆ ಶವಾಗಾರದಲ್ಲಿದ್ದಂತೆ ಇದ್ದೀವಲ್ಲ… ನಮಗೂ ಜೀವವಿದೆ, ಭಾವವಿದೆ. ಹಾಗಿದ್ದಾಗ ಜೀವಂತಿಕೆ ಇದ್ದಲ್ಲಿ ಅಹ್ಲಾದ ಇರುತ್ತದೆ. ಬದುಕು ಚೈತನ್ಯದಾಯಕ, ಎಂತಹುದೊ ಉತ್ಸಾಹದಿಂದಕೂಡಿರುವುದು.. ಈ ಕರೋನಾದ ಕರಾಳ ದಿನಗಳು ಬರದೇ ಇದ್ದರೆ ಜೂನ್ ತಿಂಗಳಲ್ಲಿ ಹೊಚ್ಚ ಹೊಸ ಪುಸ್ತಕಗಳ ವಾಸನೆ ನಮ್ಮೊಡಲಲಿ ಇರುತ್ತಿತ್ತು. ನಮ್ಮ ಉದರದಲ್ಲಿದ್ದ  ಚಿತ್ರ ವಿಚಿತ್ರ ಕಂಪಾಸು, ಅದರೊಳಗಿನ ಪೆನ್ಸಿಲ್ಲು, ತರತರಹದ ಶಾರ್ಪನರ್ರು, ಸೇಂಟೆಡ್ ರಬ್ಬರುಗಳು  ತಾಕಲಾಡುತ್ತ ಗೆಜ್ಜೆಯಂತೆ ಉಲಿಯುತ್ತಿದ್ದವು. ಮುಂದಿನ ಪುಟ್ಟ ಪಾಕೇಟಿನಲ್ಲಿ ಬೋರೆ ಹಣ್ಣು, ಹುಣಸೆ ಹಣ್ಣು ಬೆಲ್ಲ ಕುಟ್ಟಿದ ಉಂಡೆ, ಅಮ್ಮನಿಗೆ ಗೊತ್ತಾಗದಂತೆ ಚಿಕ್ಕಪ್ಪ ತಂದುಕೊಟ್ಟ ಚಾಕೊಲೇಟ್, ಕುರುಕುರೆಯ ಪ್ಯಾಕೇಟು ಹಾಗೂ ಒಂದಷ್ಟು ಕೆಂಪು ಇರುವೆಗಳೂ ಇರುತ್ತಿದ್ದವುಇರುತ್ತಿದ್ದವು.

ಇರುವೆಗಳಿದ್ದರೆ ನನಗೆ ಹೆದರಿಕೆ ಇಲ್ಲ. ಅವು ಮಾಡಿದ  ಉಪಕಾರ ನಾನು ಯಾವತ್ತೂ ಮರೆಯೋದಿಲ್ಲ. ಅದೊಂದು ದಿನ  ತರಗತಿಯಲ್ಲಿ ಸೋಹಿನಿಯ ನೋಟ್ಬುಕ್ ಕಳೆದಿತ್ತು. ಹಾಗಾಗಿ ಮಿಸ್ ಎಲ್ಲರ ಬ್ಯಾಗನ್ನು ಚೆಕ್ ಮಾಡಲು ಕ್ಲಾಸ್ ಮಾನಿಟರ್ ಅನ್ವಿತ್ ಗೆ ಹೇಳಿದರು. ಆತನಿಗೂ ನನಗೂ ಮೊದಲಿಂದಲೂ ಅಷ್ಟಕ್ಕಷ್ಟೆ. ನಾನು ಸ್ವಲ್ಪ ಮಾಟಾಗಿ ಮೈಮೇಲೆ ಸುಂದರವಾದ ಚಿತ್ರ ಬರೆದುಕೊಂಡಿದ್ದು ಸ್ಟೈಲಿಶ್ ಆಗಿದ್ದೆ. ಅಲ್ಲದೆ ನನ್ನ ಸುತ್ತಲೂ ಮಿನುಗುವ ಪುಟ್ಟ ಬಣ್ಣದ ಲೈಟುಗಳು ಆತನಿಗೆ ಹೊಟ್ಟೆಕಿಚ್ಚು ಉಂಟು ಮಾಡಿತ್ತು. ಹಾಗಾಗಿ ಆತ ನನ್ನ ಬಳಿ ಬಂದಾಗ ನನಗೆ ಆತಂಕ. ಆತ  ಅದೇ ಹೊಟ್ಟೆಕಿಚ್ಚಿನಿಂದ ನನ್ನ  ಹೊಳೆಯುವ ಕಣ್ಣಿನಂತಹ ಪುಟ್ಟ ಲೈಟ್  ಕಿತ್ತಿ ಬಿಡುವನೋ ಎಂದು  ಹೆದರಿದ್ದೆ. ಆತ ಲಿಟಲ್ ಸಿಂಗಂ ನಲ್ಲಿರೋ ಶಿಂಬಾಲನಂತೆ,ಹಿಂದಿ ಚಿನೆಮಾದ ಅಮರೀಶ್ ಪುರಿಯಂತೆ ಬಂದು ನನ್ನ ಮುಂದೆ ನಿಂತ.  ಹ್ಹಾ.. ಹ್ಹಾ.. ಹ್ಹಾ..ಎಂದು ಅಟ್ಟಹಾಸದ ನಗು ನಕ್ಕಂತಾಯಿತು. ನನಗೆ ಗೊತ್ತಿತ್ತು. ಸೋಹಿನಿ ನೋಟ್ಬುಕ್ಕು ನನ್ನಲ್ಲಿಲ್ಲ ಅಂತ. ಆದ್ರೆ ಅಕಸ್ಮಾತ್ ಅವನೇ ನನ್ನ ಹೊಟ್ಟೆಯಲ್ಲಿ ಸೇರಿಸಿದರೆ…. ನಾನೂ ಒಂದೊಂದು ಬಾರಿ ಮರೆಗುಳಿಯಾಗುತಿದ್ದೆ. ಅದಕ್ಕೆ ಹಾಗೆ ಅನ್ನಿಸಿತ್ತು. ಒಂದುವೇಳೆ ಇದ್ರೆ…. ಮಿಸ್ ಜೋರಾಗಿ “ಅನ್ವೀತ್ ಡೋಂಟ್ ವೇಸ್ಟ್ ಟೈಮ್” ಎಂದಾಗ ಆತ ತನಗಿರದ ಮೀಸೆಯ ಜಾಗವನ್ನು ಸವರಿಕೊಂಡು ನನ್ನ ದೊಡ್ಡ ಹೊಟ್ಟೆಯೊಳಗೆ ಕೈಹಾಕಲು ಜಿಪ್ ಎಳೆದ. ಆದರೆ ಈ ಮೊದಲೇ ಬಾಯಿ ತೆರೆದಿದ್ದ ನನ್ನ ಪುಟ್ಟ ಪಾಕೆಟ್ ನಲ್ಲಿದ್ದ ಸೇಂಗಾ ಚಿಕ್ಕಿಯ ವಾಸನೆ ಅವನ ಮೂಗನ್ನು ಕೆಣಕಿದಂತಾಗಿ ಕೈಯನ್ನು ಅದರೊಳಗೆ ಸೇರಿಸಿದ. ಆದರೆ ತಕ್ಷಣವೇ ಅದರೊಳಗಿದ್ದ ಆರೇಳು ಕೆಂಪು ಇರುವೆಗಳು ಅವನ ಕೈ ಕಚ್ಚಿ ಬಿಟ್ಟವು. ಆತ ಜೋರಾಗಿ ಹಾ… ಹೋ …ಎಂದು ಕುಣಿಯತೊಡಗಿದ. ಆ ಕುಣಿತಕ್ಕೆ ಆತನ ನಿಕ್ಕರ್ ಬಿಚ್ಚಿಬಿದ್ದು ಕ್ಲಾಸಿನಲ್ಲಿ ಎಲ್ಲರೂ ಜೋರಾಗಿ ನಗತೊಡಗಿದರು. ಮಿಸ್ ತಮ್ಮ ಕೈಯೊಳಗಿನ ಕೋಲಿನಿಂದ ಟೇಬಲ್ಲನ್ನು ಕುಟ್ಟಿ “ಕೀಪ್ ಕ್ವಾಯಟ್.    ಅನ್ವಿತ್ ಮೂವ್ ಟು ನೆಕ್ಸ್ಟ್” ಎಂದು ಕಿರುಚಿದರು. ಆತ ನನ್ನನ್ನು ಕೆಕ್ಕರುಗಣ್ಣಿನಿಂದ ನೋಡುತ್ತಾ ಉರಿಯುತಿದ್ದ ಕೈ ತುರಿಸುತ್ತ  ಮುಂದೆ ಹೋದ. ನನಗೂ ನಗು ತಾಳದೆ ನನ್ನ ಪುಟ್ಟ ಪುಟ್ಟ ಲೈಟಿನ ಕಣ್ಣುಗಳನ್ನು ಮಿನುಗಿಸಿ ನಕ್ಕುಬಿಟ್ಟೆ. ಹೀಗೆ ಬಂದ ಆಪತ್ತನ್ನು ಕೆಂಪಿರುವೆಗಳು ಪಾರು ಮಾಡಿದವು. ಹಾಗಾಗಿ ಅವು ನನ್ನ ಆಪ್ತ ಸ್ನೇಹಿತರೆಂದೇ ತಿಳಿದುಕೊಂಡಿರುವೆ.
       
ಎಲ್ಲಿ ಹೋದವು ಆ ದಿನಗಳು…
ಶಾಲೆಯ ಅಂಗಳದಲ್ಲಿ ಚಂದದ ಸಮವಸ್ತ್ರಗಳನ್ನು ಹಾಕಿಕೊಂಡ ಪುಟಾಣಿಗಳು…ಸ್ವಲ್ಪ ಭಾರವಾದರೂ ನಮ್ಮನ್ನು ಬೆನ್ನಿಗೇರಿಸಿಕೊಂಡು ಹಿಮಾಲಯವನ್ನು ಏರುವ  ತೇನಸಿಂಗನಂತೆ ತಿರುಗಾಡುವಾಗ ನಮ್ಮಲ್ಲೇ ಪರಸ್ಪರ ಒಂದು ನಗುವಿರುತ್ತಿತ್ತು. ಮೊದಲೆಲ್ಲ ನಮ್ಮ ಗಾತ್ರ ಪುಟ್ಟದಾಗೇ ಇತ್ತು. ಅದೇಕೋ ಜಂಕ್ ಫುಡ್ ತಿಂದು ತಿಂದು ಈಗಿನ ಜನರ ದೇಹ ಹೆಂಗೆ ಡುಮ್ಮ ಆಗಿದೆಯೊ ಹಂಗೆ ನಮಗೆ ತಿಳಿಯದಂಗೆ ನಾವು ದಪ್ಪ ಆಗತಾ ಹೋದ್ವಿ. ಮೊದಮೊದಲು ಹಗುರವಾಗಿದ್ದಾಗ ಮಕ್ಕಳು ನಮ್ಮನ್ನು ಬಹಳ ಪ್ರೀತಿ ಮಾಡತಿದ್ವು. ಆಮೇಲೆ ಹೆಣಭಾರವಾದ ನಮ್ಮನ್ನು ಹೊತ್ತುಕೊಂಡು ಹೋಗೋದು ಅವರಿಗೆ ಸಿಟ್ಟು ಬರತಿತ್ತು. ಆ ಕಾರಣಕ್ಕೆ ಮನೆಗೆ ಬಂದ ತಕ್ಷಣವೇ ನಮ್ಮನ್ನು ಇದೊಂದು ಪೀಡೆ ಎಂಬಂತೆ ನಮ್ಮನ್ನು ಎತ್ತಿ ಬಿಸಾಡೋರು. ಅವರಪ್ಪ ಅಮ್ಮಂದಿರು “ನಮಗೆ ಯಾವ ಬ್ಯಾಗುಗಳೂ ಇರಲಿಲ್ಲ. ಕೊಂಕಳದಲ್ಲೋ ಕೈಯಲ್ಲೊ ಹಿಡಕೊಂಡು ಹೋಗ್ತಿದ್ವಿ. ಮಳೆ ಬಂದ್ರೆ ಮನೇಲಿ ಒಂದು ದೊಡ್ಡ ಪ್ಲ್ಯಾಸ್ಟಿಕ್ ಚೀಲಕ್ಕೂ ಗತಿ ಇರತಿರಲಿಲ್ಲ. ನೀವು ನೋಡಿದ್ರೆ ಇಷ್ಟು ರೊಕ್ಕ ಸುರದ ತಂದು ಬ್ಯಾಗನ್ನು ಹೆಂಗೆ ಎತ್ತಿ ಒಗಿತೀರಿ “ಎಂದು ಬಯ್ಯೋರು. ಹಣ ಕೊಟ್ಟು ತಂದದೆಲ್ಲ ಶ್ರೇಷ್ಠ ವಾ … ಅಂತ ಮಕ್ಕಳಲ್ಲಿ ಪ್ರಶ್ನೆ ಮೂಡೋದು ಸಹಜ ಅಲ್ವಾ?

ಹಾಗಂತ ಅವರ ಮೇಲೆ ನಮಗೆ ಸಿಟ್ಟಿಲ್ಲ. ಅವುಗಳ ಅಸಹಾಯಕತೆಯೂ ನಮಗೆ ಅರ್ಥವಾಗ್ತದೆ. ಆದರೆ ಅವರ ಒಡನಾಟ ನಮಗೆ ಬಹಳಂದ್ರೆ ಬಹಳ ಪ್ರಿಯ.ಮಿಸ್ ಪಾಠ ಮಾಡುವಾಗ ಚಿಣ್ಣರು ಮಾಡುವ ತರಲೆಗಳು ನಮಗೆ ಮಾತ್ರ ಗೊತ್ತು. ಮುಂದಿನ ಬೆಂಚಿನ ಗೆಳೆಯನ  ಬೆನ್ನಮೇಲೆ ಪೆನ್ನಿಂದ ಬರೆಯುವುದೋ, ಗೆಳತಿಯರ ಜಡೆಗೆ ಕಾಗದದ ಗುಬ್ಬಿ ಸಿಗಿಸುವುದೊ, ಅವರ ಶರ್ಟಿಗೆ ಕಾಗದದ ಉದ್ದನೆಯ ಬಾಲ ಅಂಟಿಸುವುದೊ …ಹೀಗೆ ಏನೆಲ್ಲ….ತುಂಟಾಟಗಳು.ಆಗ ಕಿಸಕ್ಕೆಂದು ನಕ್ಕುಬಿಡುವ ಹಾಗಾಗುತಿತ್ತು. ಆದರೂ ಆ ಮಕ್ಕಳು ಮಿಸ್ ಕೈಗೆ ಸಿಕ್ಕುಬೀಳದಂತೆ ರಕ್ಷಿಸಲು ತಡೆದುಕೊಳ್ಳುತಿದ್ದೇವು. ಶಾಲೆ ಮುಗಿದ ಮೇಲೆ ಹೊರಗಿದ್ದ ಪುಸ್ತಕಗಳನ್ನು ಒಳಗೆ ಸೇರಿಸಿ ಜಿಪ್ ಎಳೆದರೂ ಸೈ ಬಿಟ್ಟರೂ ಸೈ. ಅವರು ನಮ್ಮನ್ನು  ಹೊತ್ತು ಗೇಟಿನತ್ತ ಓಡುವಾಗ ನಮಗೆ ಕುರಿಮರಿ ಆಟದ ಅನುಭವ. “ಕುರಿಮರಿ ಬೇಕೇ ಕುರಿಮರಿ” ಅಂತಲೋ “ಸಕ್ರಿ ಮೂಟೆ  ಬೇಕೆ ಸಕ್ಕರೆ ಮೂಟೆ” ಅಂತಲೋ ಪುಟ್ಟ ಮಗುವನ್ನು ಅಮ್ಮಂದಿರೋ, ಮೌಷಿ, ಮಾಮಾಗಳು ಆಡಿಸುವಂತಹ  ಅದೃಷ್ಟ ನಮ್ಮದು..ಈ ಚಿಣ್ಣರು ನಮ್ಮನ್ನು ಹೊತ್ತು ತಿರುಗುವಾಗ ನಮಗಾಗುವ ಖುಷಿ ನೀವು ಊಹಿಸಲೂ ಸಾಧ್ಯವಿಲ್ಲ ಬಿಡಿ.

ಮನೆಗೆ ಬಂದೊಡನೆ ಶೂ ಬಿಚ್ಚಿ ನನ್ನನ್ನೂ ಆಕಡೆ ಈಕಡೆ ಎಸೆದಾಗ ಸ್ವಲ್ಪ ನೋವಾಗುತ್ತಿತ್ತು ನಿಜ. ಆದರೆ ತಕ್ಷಣ  ಅಮ್ಮ ಬಂದು “ಮೊದಲು ನೀಟಾಗಿ ಸ್ಕೂಲ್ ಬ್ಯಾಗನ್ನು ಎತ್ತಿ ಜಾಗಕ್ಕಿಟ್ಟು ಬಾ. ಅಂದ್ರೆ ಮಾತ್ರ ನಿಂಗೆ ತಿಂಡಿ ಕೊಡ್ತೀನಿ “ಎಂದು ಜಬರಿಸಿದಾಗ ಅದು ‘ಹುಪ್ ‘ ಅಂತ ಮುಖ ಊದಿಸಿಕೊಂಡು ಕೊಂಡಾಗ ನನಗೆ ಒಳಗೊಳಗೇ ಕುಸುಕುಸು ನಗು .ಮೈ ಸಡಲಿಸಿಕೊಂಡು ಜೋಲು ಹೆಜ್ಜೆ ಇಡುತ್ತಾ ನನ್ನ ಕಿವಿ ಹಿಡಿದು ರೂಮಿಗೆ ಎಳೆದೊಯ್ಯುವಾಗ ನನಗೆ ಕಿರಿಕಿರಿ ಏನಿರಲಿಲ್ಲ… ಕೃಷ್ಣನನ್ನು ಯಶೋಧೆಯು ಕಿವಿಹಿಂಡಿ ಎಳೆದೊಯ್ದು ಕಂಬಕ್ಕೆ ಕಟ್ಟಿದಂತೆ ನನ್ನನ್ನು ಕರೆದೊಯ್ದ ಅನುಭವ. ಹೀಗೆ ನಾನು ಬಾಲಕೃಷ್ಣನ   ತುಂಟತನವನ್ನು ಅನುಭವಿಸುವ  ಅವಕಾಶ ಈ ಚಿಣ್ಣರು ಕಲ್ಪಿಸುವರು.ಅದರಲ್ಲೂ  ಓದಲು ಕುಳಿತಾಗ ಅವರ ತಂಗಿ ತಮ್ಮಂದಿಯರು ಜಗಳವಾಡಿ ಗುದ್ದಾಡಿ ನಮ್ಮ ಮೇಲೆ ಬಿದ್ದು ಹೊರಳಾಡಿದಾಗ ನಮಗೆ ಅದೆಂಥದ್ದೋ ಮಜವೋ ಮಜ. ತುಂಟ ತಮ್ಮ ಏನಾದ್ರೂ ನನ್ನ ಮೇಲೆ ಉರುಳಾಡಿದರೆ ಫಿರ್ಯಾದು ಶುರು “ಅವನು ನನ್ನ ಬ್ಯಾಗು  ಎಳೆದು ಹಾಕಿದಾ ಅಮ್ಮಾ….. ಅದೇನಾದ್ರೂ ಹರಿದು ಹೋದರೆ…” ಅಂತ ಅಳುತ್ತಾ ನನ್ನನ್ನು ಎದೆಗಪ್ಪಿಕೊಂಡು ನೇವರಿಸಿದಾಗ ನನಗೆ ಹಂಡೆಯಷ್ಟು ಪ್ರೀತಿ ಉಂಡ ಅನುಭವ.

ಒಮ್ಮೊಮ್ಮೆ ಅವರು ನಮ್ಮ ಬಗ್ಗೆ ನಿಷ್ಕಾಳಜಿ ಮಾಡಿದರೆ ಅಪ್ಪನ ಸಿಂಹಗರ್ಜನೆ ರೆಡಿ. “ಬ್ಯಾಗು ಹರಿದು ಹೋದರೆ ನಂಗೊತ್ತಿಲ್ಲ. ಇನ್ನೆರಡು ವರ್ಷ ಇದೇ ಬ್ಯಾಗನ್ನೇ ಇಟ್ಕೋಬೇಕು. ಹೊಸದು ಕೊಡಿಸೋಲ್ಲ” ಎಂದಾಗ ಆ ಪುಟಾಣಿ “ಎಂದೆಂದೂ ನಿನ್ನನು ಬಿಟ್ಟು ನಾನಿರಲಾರೆ” ಎಂಬ ಹಾಡಿನ ಭಾವ ಕಣ್ಣಲ್ಲಿ ಇಣುಕುತಿತ್ತು.

ಈಗ ಎರಡು ವರುಷಗಳೇ ಕಳೆದವು. ಕರೋನಾ ಎಂಬ ಪೀಡೆ ಬಂದು ಬದುಕು ನಮ್ಮ  ಛಿದ್ರ ವಾಯಿತು .ಅಂಗಡಿಯ ಮಾಲೀಕ ನಮ್ಮ ತಯಾರಿಕೆಗೆ ಜನೆವರಿಯಲ್ಲಿ  ಆರ್ಡರ್ ಕೊಟ್ಟು ಮಾರ್ಚ್ ನಲ್ಲಿಯೇ ಅಂಗಡಿ ತುಂಬಿಸಿಕೊಂಡಿದ್ದರು. ಇನ್ನೇನು ಏಪ್ರಿಲ್ ಕಳೆದರೆ ಪಾಲಕರು ಲಗ್ಗೆ ಇಡುತ್ತಾರೆ ಎಂಬ ಮಾತು ಸುಳ್ಳಾಯ್ತು. ಏಕಾಏಕಿ ದೇಶದಲ್ಲೆಲ್ಲ  ಲಾಕ್ ಡೌನ್ ಆಗಿ ಅಂಗಡಿಗಳೆಲ್ಲ ಮುಚ್ಚಿದಾಗ ನಮ್ಮ ಬದುಕು ಬೂಸುಗಟ್ಟಿತು. ಒಳಗೇ ಕುಳಿತು ನಮ್ಮಲ್ಲಿ ನಮಗೆ ಸಹ್ಯವಾಗದ  ಮುಗ್ಗಲು ವಾಸನೆ.ನಮ್ಮ ಹೊದಿಕೆಯ ಮೇಲೆ ನೊಣಗಳು ಮೊಟ್ಟೆಯಿಟ್ಟು, ಧೂಳು ಕೂತು, ಕರೆ ಕರೆಯಾಗತೊಡಗಿತು. ನಾವು ಒಳಗೊಳಗೆ ಮುನುಗುತ್ತಿದ್ದೆವು.ಗಾಳಿ ಬೆಳಕಿಲ್ಲದೆ ಉಸಿರುಗಟ್ಟಿತ್ತು. ಯಾವಾಗ ಶಾಲೆ ಪ್ರಾರಂಭವಾಗುವುದೊ ಯಾವಾಗ ಬೆಳಕಿಗೆ ಕಣ್ಣು ಮಿಟುಕಿಸುತ್ತೇವೆಯೋ  ಯಾವಾಗ ಚಿಣ್ಣರ ಕೂಸುಮರಿಯಾಗುತ್ತೇವೆಯೋ ಎಂಬ ಹಪಹಪಿಯಲ್ಲಿದ್ದೆವು. ಆದರೆ ಮತ್ತೊಂದು ಮಾರ್ಚ್, ಏಪ್ರಿಲ್, ಮೇನಲ್ಲಿ ಕೊರೋನಾ ಎರಡನೇ ಅಲೆ ಬಂದಾಗ ನಿಜಕ್ಕೂ ನಾವು ಬಸವಳಿದೆವು.ನಿರ್ಜೀವದಿಂದ ಹಣ್ಣುಗಾಯಿಯಾದೇವು.  ನಮ್ಮ ಮೇಲಿನ ಚಿತ್ತಾರಗಳೆಲ್ಲಾ ಮಾಸಲು ಬಣ್ಣಕ್ಕೆ ತಿರುಗಿದ್ದವು. ನಮ್ಮ ಕೈಗಳಿಗೆ ಭಾರ ಹೊರುವ ಚೈತನ್ಯ ಕಳೆಗುಂದಿತ್ತು. ಕಂದಮ್ಮಗಳು ಬೆನ್ನಿಗೇರಿಸಿಕೊಂಡರೆ ಕಡಿದು ನೆಲಕ್ಕೊರಗುವ ಭಯ ಮಾಲೀಕರಿಗೂ ಕಾಡುತ್ತಿತ್ತು. ನಮಗಂತೂ ಆತ್ಮವಿಶ್ವಾಸವೇ ಉಡುಗಿ ಹೋಗಿತ್ತು.

ಲಾಕ್ ಓಪನ್  ಆದ ನಂತರ ನಮ್ಮ  ಅಂಗಡಿಗಳ ಬಾಗಿಲು ತೆರೆದು  ನಮ್ಮ ಮೇಲೆ ಬೆಳಕು ಬಿದ್ದಿತು  ನಿಜ. ಆದರೆ  ನಮ್ಮನ್ನು ಯಾರೂ ಬಂದು ನೋಡುವವರಿರಲಿಲ್ಲ.ಅಂಗಡಿ ತೆರೆದರೂ ನಮ್ಮ ಬದುಕಿನಲ್ಲಿ ಯಾವ ಸುಧಾರಣೆ ಕಾಣಲಿಲ್ಲ. ಜೂನ್ ತಿಂಗಳು ಶುರುವಾಗಿ ಎರಡು ವಾರ ಕಳೆದಿತ್ತು.ಅದೊಂದು ದಿನ ನಮ್ಮ ಮಾಲೀಕ  ಕೆಲವು ಬೋರ್ಡ್ ತಂದಿದ್ದ .   “ಸ್ಕೂಲ್ ಬ್ಯಾಗ್  50% ಡಿಸ್ಕೌಂಟ್ ”  ಎಂದು ನಾವಿದ್ದ ಅಲ್ಮೇರಾಕ್ಕೆ ಅಂಟಿಸಿದ.  “ಬಾಯ್  ಒನ್ ಗೆಟ್ ಒನ್ ಫ್ರೀ ” ಎಂಬ ಲೇಬಲ್ಲನ್ನು ನಮ್ಮ ಪಕ್ಕದ ಅಲ್ಮೆರಾಕ್ಕೆ ಅಂಟಿಸಿದ. ಜಾಗತಿಕ ಮಟ್ಟದಲ್ಲಿ ರೂಪಾಯಿಯ ಮೌಲ್ಯ ಕುಸಿಯುತ್ತಲೇ ಇರುವಂತೆ ನಾವೂ ದಿನದಿನಕ್ಕೆ ನಮ್ಮ ಮೌಲ್ಯ ಕಳೆದುಕೊಳ್ಳುತ್ತಾ ಹೋದೆವು. ನಮ್ಮಲ್ಲಿ ಕೀಳರಿಮೆ ಆವರಿಸಿತು.

ಹಿಂದೊಮ್ಮೆ ಇಂತಹುದೆ ಖಿನ್ನತೆಗೆ ನಾವು ಒಳಗಾಗಿದ್ದು ನಿಜ. ಮಕ್ಕಳ ಆರೋಗ್ಯ ರಕ್ಷಣೆ ಯ ಇಲಾಖೆಯವರು ಭಾರವಾದ ಪುಸ್ತಕಗಳ ಬ್ಯಾಗು ಹೊತ್ತ ಕಾರಣಕ್ಕೇ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ನಮ್ಮ ಮೇಲೆ ಬಲವಾದ ಆರೋಪ ಹೊರಿಸಿದರು. ಅದಕ್ಕಾಗಿ ಇಡೀ ದೇಶದಲ್ಲೆ ಸಾಕಷ್ಟು ಚರ್ಚೆ ಚರ್ಚೆ ನಡೆದವು. ಶಿಕ್ಷಣ ತಜ್ಞರು ಆರೋಗ್ಯ ತಜ್ಞರು ಟೀವಿಗಳಲ್ಲಿ ಅದೆಷ್ಟು ಘನಘೋರ ವಾದವಿವಾದ, ಜಗಳವಾಡಿದರು. ನಮ್ಮನ್ನು ಬಲವಾದ ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಲಾಯಿತು. ನಮ್ಮ ಬದುಕು ಮುಗಿದೇ ಹೋಯಿತು ಎಂದು ನೊಂದುಕೊಂಡೆವು. ಮಕ್ಕಳು ದೇಶದ ಭವಿಷ್ಯ. ಅಂತವರ ಆರೋಗ್ಯ ನಮ್ಮಿಂದ ಹಾಳಾಗುವುದು ಬೇಡ ಎಂದು ನಮಗೂ ಅನ್ನಿಸಿದ್ದು ನಮ್ಮ ಅಫರಾದವನ್ನು ಒಪ್ಪಿಕೊಂಡೆವು.ಆದರೂ ಮಕ್ಕಳಿಂದ ದೂರವಾಗುವ ಕೆಟ್ಟ ಕಾಲ ಬಂತಲ್ಲ ಎಂದು ಕೊರಗಿದೇವು. ವಿಚಿತ್ರವೆಂದರೆ ಎಲ್ಲವೂ ಕ್ಷಣಿಕ.ನಮ್ಮ ಸೃಷ್ಟಿ ಕರ್ತರ ಹಣದ ಅಧಿಕಾರದ ಮುಂದೆ ಎಂತಹ ತಜ್ಞರು ಅಜ್ಞರೇ. ಅವರ ಕಾರ್ಖಾನೆಗಳ ಉಳಿವಿಗಾಗಿ ಅವರು ತೆತ್ತ ಬೆಲೆಗೆ ನಮ್ಮ ಉಳಿವೂ ನಿಶ್ಚಯವಾಯಿತು. ಆದರೆ ಮಕ್ಕಳ ಬೆಳವಣಿಗೆಯ ಅಂಶವೂ ಅಳಿದೂ ಹೋಯಿತು. ನಾವೂ ಅವರ ಬೆನ್ನ ಮೇಲೆ ಸವಾರಿ ಮಾಡುವಾಗ ಅವರ ಒಡನಾಟದಲ್ಲಿ ತುಂಟಾಟದಲ್ಲಿ ಸುಖಿಸುತ್ತೇವೆ ನಿಜ. ಆದರೆ ಅವರಿಗಾಗುವ ಹಾನಿ…?ಒಮ್ಮೊಮ್ಮೆ ನಮ್ಮನ್ನೂ ಕಾಡುತ್ತದೆ. ‘ಅಮ್ಮಾ ಬೆನ್ನು ನೋವು’ ಅಂದಾಗ ಮನಸ್ಸು ಅಳುಕುತ್ತದೆ.ಆಗ ಪ್ರಾಯಶ್ಚಿತ್ತಕ್ಕೆ ಹೃದಯ ತಾಕಲಾಡುತ್ತದೆ. ಆದರೆ ಅದನ್ನು ತಪ್ಪಿಸಲು ನಮ್ಮಿಂದ ಹೇಗೆ ಸಾಧ್ಯ? ವ್ಯವಸ್ಥೆಯ ಸಿಪಾಯಿಗಳು ನಾವು.

ಒಂದು ಮಧ್ಯಾಹ್ನದ ಸಮಯ.ವಿಷಾದ ತುಂಬಿಕೊಂಡ ಮಾಲೀಕನು ಸಮಯ ಕೊಲ್ಲಲು  ಕೌಂಟರ್ ನಲ್ಲಿದ್ದ ಪುಟ್ಟ ಟೀವಿಯಲ್ಲಿ ಕನ್ನಡ ನ್ಯೂಸ್  ನೋಡುತಿದ್ದ ” ವಾರ್ತೆಗಳು ಓದುತ್ತಿರುವವರು ಆನಂದ್ ರಾಜ್.ಕೊರೋನಾ ಪ್ರಯುಕ್ತ ರಾಜ್ಯದಾದ್ಯಂತ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸದಂತೆ ಶಿಕ್ಷಣ ಮಂತ್ರಿಗಳು ಹೊರಡಿಸಿದ ಆದೇಶದಿಂದ ಶಿಕ್ಷಣ ಸಂಸ್ಥೆಗಳು ಆತಂಕದಲ್ಲಿವೆ.ಕೊರೋನಾದ ಮೂರನೆಯ  ಅಲೆಯು ಮಕ್ಕಳಿಗೆ   ಹೆಚ್ಚು ಆತಂಕಕಾರಿಯಾಗಿದೆ. ಆದ್ದರಿಂದ   ಮಕ್ಕಳನ್ನು ಮನೆಯಲ್ಲಿಯೇ ಇರಿಸಿಕೊಳ್ಳಲು ನಿಭಾಯಿಸಲಾಗದ ತಾಯಿ ತಂದೆಗಳು ಆತಂಕದಲ್ಲಿದ್ದಾರೆ. ಶಿಕ್ಷಕರು ಆನ್ ಲೈನ್ ನಲ್ಲಿ ಮಕ್ಕಳಿಗೆ  ಅರ್ಥವಾಗುವಂತೆ ಪಾಠ ಮಾಡಲಾಗದೆ ಮತ್ತು  ಈಗ ದೊರೆಯುವ ಅರ್ಧ ಸಂಬಳವೂ ಕೈತಪ್ಪಿ ಹೋಗಬಹುದೆಂಬ ಆತಂಕದಲ್ಲಿದ್ದಾರೆ ” ಎಂಬ ವಾರ್ತೆ ಬಿತ್ತರವಾಗುತಿತ್ತು.

ಕರೋನಾದ ಹಾವಳಿಗೆ ಶಾಲೆ ಮುಚ್ಚಿ ಪುಸ್ತಕಗಳೂ ಅನಾಥರಾಗಿ ನಾವೂ ನೆಲೆ ತಪ್ಪಿದಾಗ ನಮಗೂ ಘಾಬರಿ ಆಗಿದ್ದು ನಿಜ. …ಮರುಕ್ಷಣವೆ ಹೀಗೊಂದು ಆಲೋಚನೆ ಸುಳಿಯಿತು. ಬಹುಶಃ ಈ ದುರಿತಕಾಲ ಮಗುವಿನ ರಕ್ಷಣೆಗೆ ಬಂದಿರಬಹುದೆ? ಶಾಲೆಗಳೆಂಬ ಬಂಧಿಖಾನೆಯಿಂದ ಅವರನ್ನು ಮುಕ್ತಗೊಳಿಸಲು ಬಂದಿರಬಹುದೆ..?ನಮ್ಮನ್ನು ಹೊರುವ ಕತ್ತೆಚಾಕರಿ ತಪ್ಪಿಸಲು ಕರೋನಾ ಎಂಬ ಮಾರಿ ದೇವತೆ ಆಗಮಿಸಿ ಈ ರೀತಿಯ ತಾಂಡವನೃತ್ಯಕ್ಕೆ ತೊಡಗಿರಬಹುದೆ…? ನಮ್ಮನ್ನು ಪಾಪ ಪ್ರಜ್ಞೆಯಿಂದ ಮುಕ್ತಗೊಳಿಸಲು ಬಂದಿರಬಹುದೆ? ಏನೆಲ್ಲ ಸಂಗತಿಗಳು ಸುಳಿದು ಮನಸ್ಸು ವಿಕ್ಷಿಪ್ತವಾಯಿತು.

ಟೀವಿಯಲ್ಲಿ ಶಾಲೆಗಳ ಸ್ಥಿತಿಗತಿಯ ಬಗ್ಗೆ ಚರ್ಚೆ ಸಂವಾದ ನಡೆದೇ ಇತ್ತು. “ಶಾಲೆಗೆ ಹೋಗಲಾಗದೆ ಗೆಳೆಯರನ್ನು ಭೇಟಿ ಆಗಲಾರದೆ ಅಂಗಳದ ಆಟೋಟಗಳಿಂದ ವಂಚಿತರಾದ ಚಿಣ್ಣರು ತಮ್ಮ ಹಳೆಯ ಸ್ಕೂಲ್ ಬ್ಯಾಗ್ ಗಳನ್ನು ನೇವರಿಸುತ್ತಾ ಕಣ್ಣಂಚಿನಲ್ಲಿ ನಿರಾಸೆಯನ್ನು ಲೇಪಿಸಿ ಕೊಂಡಿದ್ದಾರೆ.”ಎಂಬ ಸಂಗತಿ ಕೇಳಿದಾಗ ನಮಗೂ ಹೊಟ್ಟೆಯಲ್ಲಿ ಕೆಟ್ಟ ಸಂಕಟ.

ನಮ್ಮ  ಚಿಣ್ಣರೂ ಎಂತಹ ಸಂಕಟದಲ್ಲಿದ್ದಾರಲ್ಲ ಎಂದು  ಅತೀವ ಆತಂಕವಾಯಿತು.ನಮ್ಮ ಸಂತಸಕ್ಕೆ ಸದಾ ಕಾರಣವಾಗಿರುವ ಅವರನ್ನು ಹೇಗಾದರೂ ಮಾಡಿ ಖುಷಿಗೊಳಿಸಬೇಕಲ್ಲ ಎಂಬ ಯೋಚನೆ ಕಾಡತೊಡಗಿತ್ತು.

“ನಾವು ಸತ್ವಹೀನರಾಗಿ,ಬೆಲೆ ಕಳೆದುಕೊಂಡು,ಶವದಂತೆ ಸಾಲುಸಾಲಾಗಿ ಮಲಗಿದ್ದೇವೆ. ನಮ್ಮ ನಿಶಕ್ತತೆಗೆ ಮಹಾಮಾರಿ ಕರೋನ ಕಾರಣವಾಗಿದ್ದು ಹೀಗೆ ಈ ವರ್ಷವೂ ಶಾಲೆಗಳು ಮುಚ್ಚಿ ಹೋದರೆ ಮುಂದೊಂದು ದಿನ ನಮ್ಮ ಬದುಕು ತಿಪ್ಪೆಗೆ ಎಸೆಯಲ್ಪಡುತ್ತದೆ.ಆದ್ದರಿಂದ ಉಳಿದ ಬದುಕಾದರೂ ಸಾರ್ಥಕಗೊಳಿಸಲು  ನಮ್ಮನ್ನು ಮಕ್ಕಳ ಬಳಿ ತಲುಪಿಸಿ.  ಆ ನಕ್ಷತ್ರಗಳು ನಕ್ಕ ಬೆಳಕು ಛಿಲ್ಲನೆ ಈ ಭೂಮಿ ತುಂಬಲಿ ಎಂದು ಸಂಬಂಧಪಟ್ಟ ಇಲಾಖೆಗೆ  ತಿಳಿಸಬೇಕೆಂದು ನ್ಯೂಸ್ ರೂಮಿಗೆ ಪತ್ರ ಬರೆಯಲು ನಾವು ನಿರ್ಧರಿಸಿದೆವು .ನಾವಿಲ್ಲದೆ ಮಕ್ಕಳು ವಿದ್ಯೆ ಕಲಿಬಹುದು.ನಾವು ಅವರ ಕಲಿಕೆಗೆ ಸ್ವಲ್ಪಮಟ್ಟಿಗೆ ಪೂರಕ. ಆದ್ರೆ ನಮಗೆ..? ಮಕ್ಕಳ ಒಡನಾಟವಿಲ್ಲದಿದ್ರೆ ನಮಗೆಲ್ಲಿ ಅಸ್ತಿತ್ವ? ಅದಕ್ಕೇ ಕರೋನಾ ಮಹಾಮಾರಿ ತೊಲಗಲಿ. ನಮ್ಮನ್ನು ಮತ್ತೆ ಹಗೂರವಾಗಿಸಿ. ಪುಟಾಣಿಗಳ ಬೆನ್ನು ಬಾಗದಂತೆ ಅವರ ಬೆನ್ನಮೇಲೆ ಕೂಸುಮರಿಯಾಗಿಸಿ ಎಂದು ಮತ್ತೆ ಮತ್ತೆ ಮನವಿ ಸಲ್ಲಿಸಿದೇವು.

ಹೌದು. ನಮ್ಮ ಮನದಿಂಗಿತ ಹೊರಹಾಕಿ ನಾವು ಹಗುರವಾದೇವು. ಹಾಗಾಗಿ ಆ ರಾತ್ರಿ ಮಾತ್ರ ನಾವು ಸುಖದ ನಿದ್ದೆಯಲ್ಲಿದ್ದೇವು. ಮನವಿಗಳು ದೇವರಿಗೆ ತಲುಪುತ್ತವೆ. ಆದರೆ ಅದನ್ನು ಅಳವಡಿಸಬೇಕಾದ ಮನುಷ್ಯರಿಗೆ ಅದು ಕೇಳುವುದಿಲ್ಲವಲ್ಲ..?

‍ಲೇಖಕರು Admin

November 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: