ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಹೆರಬೈಲ್ ದ್ಯಾವ್ರ ಹಬ್ಬಕ್ಕೆ ಹೆಂಗಸರು ಬರುವುದು ಬಹಳ ಕಡಿಮೆ ಎಂದು ನಾನು ಹೇಳಿದರೆ ಒಂದೆರಡು ಹೆಂಗಸರೂ ಇಲ್ಲ ಅಂತ ನೀವು ತಿಳಿದುಕೊಳ್ಳಬಾರದು. ಕೂಡಿದ ಸಾವಿರ ಜನರ ಪೈಕಿ ನೂರು ಅಥವಾ ನೂರೈವತ್ತರಷ್ಟು ಹೆಂಗಸರು ಇರುತ್ತಾರೆ ಹೌದಾದರೂ ಪೂಜೆ, ಪ್ರಸಾದ, ಹರಕೆ ತೀರಿಸೋದು ಎಲ್ಲವೂ ಮುಚ್ಚಂಜೆ ಮೀರಿದ ಹೊತ್ತಿಗೇ ಆಗುವುದರಿಂದ ಬಗಲಲ್ಲಿ, ಸೊಂಟದಲ್ಲಿ, ಕೈಯಲ್ಲಿ ಪುಟ್ಟ ಮಕ್ಕಳನ್ನು ತಂದ ಇವರೆಲ್ಲ ಪೂಜೆಯಾದದ್ದೇ.., ಕೊಟ್ಟ ಪ್ರಸಾದವನ್ನು ಅಲ್ಲೇ ತಿಂದು ಹೊರಟುಬಿಡುತ್ತಾರೆ ವಿನಾ ರಾತ್ರಿ ಹನ್ನೆರಡರ ಹೊತ್ತಿನ ಕೋಳಿಪಳ್ದಿ ಊಟಕ್ಕೆ ನಿಲ್ಲುವುದು ಅತೀ ಕಡಿಮೆ.

ನಮ್ಮೂರಿನಿಂದ ಅರ್ಧ ಕಿಲೋಮೀಟರ್ ದೂರದ ಹೈವೇಯಲ್ಲಿ ಬಲಕ್ಕೆ ತಿರುಗಿ ಹಿಚ್ಕಡ್ ಕ್ರಾಸಿನಲ್ಲಿ ಹಾಗೇ ಮುಂದೆ ಹೋಗಿ ಕಚ್ಚಾ ರಸ್ತೆಯಿಂದ ಒಳಗೆ ಹತ್ತು ನಿಮಿಷ ನಡೆದರೆ ಬೇಣ ಅಥವಾ ಸಣ್ಣ ಬೆಟ್ಟದ ನಡುವಲ್ಲಿ ದೂರದಿಂದಲೂ ಕಾಣುವ ಒಂದು ದೊಡ್ಡ ಮರವಿದೆ. ಅದರ ಕೆಳಗೆ ಬಟಾಬಯಲಲ್ಲಿ ನಿಂತ ಹೆರಬೈಲ್ ದ್ಯಾವನಿದ್ದಾನೆ. ಗುಡಿಗೋಪುರವಿಲ್ಲದ ಈತನಿಗೆ ನಾಯಿ ನರಿ ಬಂದು ಉಚ್ಚೆಗಿಚ್ಚೆ ಮಾಡುತ್ತಾವೆ ಎಂದು ಇತ್ತೀಚೆಗೆ ಸಣ್ಣ ಸಿಮೆಂಟು ಅರ್ಧಚಂದ್ರಾಕಾರದ ಗೂಡು ಕಟ್ಟಿ ಕಬ್ಬಿಣದ ಮೂರು ಸರಳು ಹಾಕಿ ಬೀಗ ಹಾಕಿದ್ದಾರೆ ಬಿಟ್ಟರೆ ಶತಮಾನಗಳಿಂದಲೂ ಹೆರಬೈಲು ದೇವನಿಗೆ ಸರ್ವ ಋತುವಿನಲ್ಲೂ ಬೆತ್ತಲೆಯಾಗಿ ನಿಂತೇ ರೂಢಿ.

ಗಂಗಾವಳಿ ತಡಿಯ ಬಹುತೇಕ ದ್ಯಾವ್ರುಗಳು ಇರೋದೇ ಹೀಗೆ; ಜುಗದೇವತಿ, ಭೂಮ್ತಾಯಿ ಪರಿವಾರ ದೈವದ ಗುತ್ತುಗಳು. ಜಟ್ಟಗ, ಬೀರ, ಜಾಡ, ಬೊಮ್ಮಯ್ಯ ದೇವರು, ಹುಲಿ ದ್ಯಾವ್ರು, ಮಾಸ್ತಿ.. ಪಟ್ಟಿ ಮಾಡುತ್ತ ಹೋದರೆ ಹೆಸರುಗಳೇ ಬುಟ್ಟಿಯಷ್ಟಾದಾವು. ಅದೆಷ್ಟೋ ಕಾಲದ ಹಿಂದೆ ರಾತ್ರಿ ಗಂಗಾವಳಿ ನದಿಗೆ ಮೀಯಲು ಹೋದ ಎಲ್ಲಾ ದೇವರುಗಳು ಮರಳಿ ಬರುವಾಗ ಸೂರ್ಯೋದಯವಾಗಿಹೋಗಿ ಎಲ್ಲರಿಗಿಂತ ಹಿಂದಿದ್ದ ಈ ಹೆರಬೈಲ ಇಲ್ಲೇ ಕಲ್ಲಾದ ಎಂಬ ಬಾಯಿಂದ ಬಾಯಿಗೆ ದಾಟಿದ ಸುದ್ದಿಯನ್ನು ಈಗಲೂ ಹಿರಿಯರೆಲ್ಲ ಕಿರಿಯರ ಕಿವಿಗೆ ದಾಟಿಸುತ್ತಾರೆ.

ಹೀಗೆ ಕುರುಚಲು ಕಾಡ ನಡುವೆ ಮರದ ಕೆಳಗೆ ಇರುವ ಈ ದೇವನಿಗೆ ಪೂಜೆ ಸಲ್ಲುವುದು ವರ್ಷಕ್ಕೊಮ್ಮೆ ಶ್ರಾವಣಮಾಸದ ಕೊನೆಯ ರವಿವಾರ ಮಾತ್ರ. ಬ್ರಾಹ್ಮಣರನ್ನು ಬಿಟ್ಟರೆ ಉಳಿದೆಲ್ಲ ಜಾತಿಯವರಿಗೆ ನಮ್ಮ ಕರಾವಳಿಯಲ್ಲಿ ಮೀನು ದಿನನಿತ್ಯದ ಆಹಾರ. ಶ್ರಾವಣಮಾಸದ ಒಂದು ತಿಂಗಳಲ್ಲಿ ಮಾತ್ರ ಮೀನು ಮಾಂಸ ತಿನ್ನುವುದಿಲ್ಲ ಇಲ್ಲಿನ ೭೦% ಜನ. ಇದು ಮೀನು ಮೊಟ್ಟೆಯಿಟ್ಟು ಮರಿಮಾಡುವ ಕಾಲವೂ ಹೌದು ಮತ್ತು ದೋಣಿ ಹಡಗುಗಳು ಕಡಲಿಗಿಳಿಯದ ಕಾಲವೂ ಹೌದು.

ಹೀಗೆ ಕೊನೆಯ ಶ್ರಾವಣ ರವಿವಾರ ಹೆರಬೈಲು ದ್ಯಾವರಿಗೆ ಕುರಿ ಕೋಳಿ ಬಲಿಕೊಟ್ಟು ಅಲ್ಲಿಯೇ ಎಲ್ಲವನ್ನು ಬೇಯಿಸಿ ತಿಂದು ಹಳ್ಳದಲ್ಲಿ ಬಾಯಿತೊಳೆದು ಮನೆಗೆ ಬರುವ ಜನ ಯಾವುದೇ ಕಾರಣಕ್ಕೂ ಅಲ್ಲಿನ ಪ್ರಸಾದವನ್ನು ಮನೆಯ ಹತ್ತಿರಕ್ಕೂ ತರುವಂತಿಲ್ಲ: ಇದು ಅನಾದಿ ಕಾಲದಿಂದ ನಡೆದು ಬಂದ ಪದ್ಧತಿ. 

ಏನಿದ್ದರೂ ಕವಲು ಹಾದಿಯಲ್ಲಿ ಸಿಗುವ ಹುಲಿದ್ಯಾವ್ರ ಮನೆ ಆಚೆಯೇ ಹಣೆಗಿಟ್ಟ ಕುಂಕುಮ ಒರೆಸಿ, ಮುಡಿಗೆ,ಕಿವಿಗೆ ಇಟ್ಟ ಹೂ ಪ್ರಸಾದ ತೆಗೆದಿಟ್ಟು, ಡಬ್ಬಿಯ ಪಂಚಕಜ್ಜಾಯ ತಿಂದು ಅಲ್ಲೇ ತೊಳೆದಿಟ್ಟು ಬರಬೇಕು. ಡಬ್ಬಿಯನ್ನು ಮರುದಿನ ಹೋಗಿ ತರಬಹುದು. ಹಾಗೇ ಅಡುಗೆ ಬೇಯಿಸಿದ ಹಂಡೆ ತೋಪುಗಳನ್ನು ಕೂಡ ಅಲ್ಲೇ ಬಿಟ್ಟು ಬಂದು ಮರುದಿನ ತರುತ್ತಾರೆ.

ಇಷ್ಟು ವರ್ಷಗಳ ವರೆಗೂ ಒಂದು ಪಾತ್ರೆಯೂ ಕಳುವಾದ ಉದಾಹರಣೆ ಇಲ್ಲ. ಈ ರಿವಾಜು ತಪ್ಪಿದ ವರ್ಷಏನಾದರೊಂದು ಆಗುತ್ತದೆ ಇಲ್ಲಾ ಪಟ್ಟೆಹುಲಿ ಕೊಟ್ಟಿಗೆ ಅಥವಾ ಮನೆಗೆ ಬರುತ್ತದೆ ಎಂಬುದು ಜನ ನಂಬಿಕೊಂಡು ಬಂದ ಸಂಗತಿ. ಇಷ್ಟಾದ ಮೇಲೆ ಶ್ರಾವಣ ತಿಂಗಳು ಮುಗಿದು ಮನೆಯಲ್ಲಿ ಗೌಲು ಪದಾರ್ಥ ಅಡಲು ಪರವಾನಿಗೆ ಸಿಕ್ಕ ಹಾಗೆ.

ದಾಗೀನು, ಕಿರೀಟ, ವಾದ್ಯ, ಜಾತ್ರೆ, ಮೆರವಣಿಗೆ, ಪೀಪಿ-ಬೆಂಡು ಬತ್ತಾಸಿನಂಗಡಿ, ಜಗಮಗ ದೀಪಗಳ ಸರಮಾಲೆ ಹೀಗೆ ಏನೊಂದೂ ಇಲ್ಲದ ನಮ್ಮ ಹೆರಬೈಲ ದೇವ ಇವಿಷ್ಟೂ ಇಲ್ಲ ಅಂದ ಮಾತ್ರಕ್ಕೆ ಕರಾಮತಿ ಇಲ್ಲದ ದೇವ್ರು ಅಂತ ನೀವು ತಿಳಿಯುವಂತಿಲ್ಲ. ಸುತ್ತ ಹತ್ತೂರಿನ ಜನ ವರ್ಷಪೂರ್ತಿಯ ರೋಗ ರುಜಿನ, ಕಷ್ಟ ಕಾರ್ಪಣ್ಯ, ಆರೋಗ್ಯ, ಮಕ್ಕಳು ಮರಿಯಾಗಲು, ನೌಕರಿ, ಹೊಸಮನೆ.. ಹೀಗೆ ಎಲ್ಲದಕ್ಕೂ ತಾವು ಇದ್ದ ಜಾಗದಿಂದಲೇ ಬೇಡಿಕೊಳ್ಳುವುದು ಮೊದಲು ಈ ಹೆರಬೈಲಿಗೆ.

ಹತ್ತು ತೆಂಗಿನಕಾಯಿ ಪ್ರಸಾದ ಮಾಡಿಕೊಡ್ತೇನೆ ನಿಂಗೆ.. ಐದು ಕೇಜಿ ಪುಟಾಣಿ ಪಂಚಕಜ್ಜಾಯ ಮಾಡಿಕೊಡ್ತೇನೆ.. ಈ ಸಲ ಒಂದು ಕುರಿ ಕೊಡ್ತೇನೆ.. ಒಂದು ಚೀಲ ಅಕ್ಕಿ ಕೊಡ್ತೇನೆ.. ಹಬ್ಬದ ಆಶೆಗೆ ಇಪ್ಪತ್ತೈದು ತೆಂಗಿನಕಾಯಿ ಕೊಡ್ತೇನೆ.. ಇಂಥಾದ್ದೊಂದು ಕೆಲಸ ನಿನ್ನಿಂದ ಆಗಬೇಕು.. ನಮಗಿದ್ದವನೇ ನೀನೊಬ್ಬ ನೀನಲ್ಲದೇ ಮತ್ಯಾರು ಆದಾರು ಹೇಳು ..? ನೀ ನಮ್ಮ ಕೈ ಬಿಡೂಕಿಲ್ಲ.. ಈ ಕೆಲಸ ಆಗದಿದ್ರೆ ನಿನ್ನ ಕಡೆಗೆ ಮುಖನೂ ಹಾಕುದಿಲ್ಲ ನೋಡು ಮತ್ತೆ.. ನಿನ್ನ ತಾಬಾ ಕೊಟ್ಟುಬಿಟ್ಟಿದ್ದೇನೆ ಮಗನನ್ನು ಉಳಿಸುವ ಜವಾಬ್ದಾರಿ ನಿಂದು.. ಎಂದೆಲ್ಲ ಜನ ಏಕವಚನದಲ್ಲಿ ಅವನಿಗೆ ತಾಕೀತು ಕೊಡುತ್ತಾರೆ. ಹರಕೆಯ ಆಶೆಗೆ ಬಿದ್ದು ಹಾಗೂ ಕಟ್ಟಪ್ಪಣೆಗೂ ಹೆದರಿ ಹೆರಬೈಲಣ್ಣ ಎಲ್ಲರನ್ನೂ ಇದುವರೆಗೆ ಕಾಪಾಡುತ್ತ ಬಂದದ್ದು ಖರೆ ಖರೆ.

ಜಾತಿ ಮತ ಧರ್ಮ ಮೀರಿ ಜನ ಸೇರುವ ಈ ಹಬ್ಬದಲ್ಲಿ ಪಂಕ್ತಿ ಭೇದವಿಲ್ಲ. ಬಡವ ಬಲ್ಲಿದ ದಲಿತ ಉಚ್ಚಕುಲ ಎಂಬ ವಿಂಗಡನೆಯಿಲ್ಲ. ಹರಕೆ ಕೊಟ್ಟ ಕುರಿ ಕೋಳಿಗಳನ್ನು ಯಾರೂ ಮನೆಗೆ ಒಯ್ಯುವಂತಿಲ್ಲ; ಅಲ್ಲೇ ಸ್ವಲ್ಪ ದೂರದಲ್ಲಿ ಒಲೆ ಹೂಡಿ, ಐದಾರು ಹಂಡೆ ಸಾರು, ಅನ್ನ ಬೇಯಿಸುತ್ತಾರೆ ಜನವೆಲ್ಲ ಕೂಡಾಡಿ.. ಪಡಮಾಡಿ..

ಮೂರು ಮಣ ಮಾಂಸಕ್ಕೆ ಅರ್ಧ ಮಣ ಮಸಾಲೆ ಬಿದ್ದರೆ ಪಳ್ದಿ ರುಚಿಕಟ್ಟಾಗದೇ ಇದ್ದೀತೇ? ಜಾತಿಪಂಥ ಮೀರಿ ಎಲ್ಲರೂ ಹೊಟ್ಟೆತುಂಬ ಒಟ್ಟಾಗಿ ಉಣ್ಣಲಿ ಎಂಬ ಕಾರಣಕ್ಕೇ ಮನೆಗೆ ಯಾರೂ ಒಯ್ಯಬಾರದು ಎಂಬ ಪದ್ಧತಿ ಮಾಡಿಟ್ಟರೇ ಈ ಹಿಂದಿನವರು..? ಅನ್ನಿಸುತ್ತದೆ ನನಗೆ.

ನಾನು ಐದಾರು ವರ್ಷದವಳಿದ್ದಾಗ ಅಜ್ಜಿಯ ಜೊತೆ ಎರಡೋ ಮೂರೋ ಮೈಲು ದೂರದ ಸಂಬಂಧಿಕರ ಊರಿಗೆ ಗದ್ದೆಹಾಳಿಯ ಮೇಲೆ ರಾತ್ರಿ ದೊಂದಿದೀಪ ಹಚ್ಚಿಕೊಂಡು ಕೋಳಿ ಹಬ್ಬಕ್ಕೆ ಹೋಗಿ ಜಗುಲಿಯಲ್ಲಿ ಕೂತು ಒಂದು ಹೋಳು, ಅರ್ಧ ಸೌಟು ಸಾರು ತಿಂದುಬಂದದ್ದು ನೆನಪಾಗುತ್ತಿದೆ.

ಈಗಲೂ ಸಾಕಿದ ಕೋಳಿ ಮಾರಿದರೆ ನಾಕು ಕಾಸು ಸಿಗುತ್ತದೆ ಎಂಬ ಬಡವರೇ ಹೆಚ್ಚಿರುವ ಊರು ನನ್ನೂರು. ಇನ್ನು ಮೂವತ್ತು ನಲವತ್ತು ವರ್ಷದ ಹಿಂದೆ ಹೇಗೆ ತತ್ವಾರ ಇರಬಹುದು ಊಹಿಸಿ.

ಹೀಗೆ ಹೂಡಿದ ಒಲೆಯ ಹಂಡೆಗಳಲ್ಲಿ ಪಳ್ದಿ ಕುದಿಯುತ್ತಿರುವಾಗ ಎಲ್ಲರೂ ಬಯಲಲ್ಲಿ ಕುಳಿತು ಈ ಮೊದಲೇ ತಾವು ಮನೆಯಿಂದ ಬೆಂಕಿಗೆ ಬಾಡಿಸಿಕೊಂಡು ತಂದ ಬಾಳೆಎಲೆಯನ್ನು ನೆಲದಲ್ಲಿ ಪುಟ್ಟ ಹೊಂಡತೋಡಿ ಇಟ್ಟುಕೊಳ್ಳುತ್ತಾರೆ. (ಈಗ ಅಡಿಕೆ ಹಾಳೆಯ ತಟ್ಟೆ) ರಾತ್ರಿ ಹನ್ನೊಂದು ಗಂಟೆ ಮೀರಿದ ಮೇಲೆ ಬೆಂದ ಸಾರು ಅನ್ನ ಬಡಿಸುತ್ತ ಹೋಗುವ ಬೀರಣ್ಣ, ಸೆಣ್ಣಪ್ಪಣ್ಣ, ಗೋಯ್ದಣ್ಣರನ್ನು ಊಟಕ್ಕೆ ಕುಳಿತ ಜನ ಮಾತಾಡಿಸುತ್ತಾರೆ ನಾಕು ಹೋಳು ಹೆಚ್ಚಿಗೆ ಬೀಳುತ್ತದೇನೋ ಎಂಬ ಆಶೆಗೆ.

ಸಾವಿರಾರು ಜನ ಊಟಕ್ಕೆ ಕುಳಿತಲ್ಲಿ ಈ ಅಣ್ಣಂದಿರಿಗೆ ಎಲ್ಲರ ಮುಖನೋಡುತ್ತ ಬಡಿಸುತ್ತ ಹೋದರೆ ಪುರವಟೆಯಾದೀತೇ.? ಸೊಂಟವೂ ಬಿದ್ದು ಕುತ್ತಿಗೆಯೂ ಉಳುಕಿ ಹೋದೀತು.. ಹಾಗಾಗಿ ಬಡಿಸುವಷ್ಟು ಹೊತ್ತು ಕೆಪ್ಪರು.. ಕೆವ್ಡರು.. ಈ ಬಗೆ ಬಗೆಯ ಅಣ್ಣಂದಿರು. ಆದರೂ ಹೆರಬೈಲು ಹಬ್ಬ ಅರೆಹೊಟ್ಟೆ ಮಾಡಿ ಯಾರನ್ನೂ ಮನೆಗೆ ಕಳಿಸಿದ್ದುಇತಿಹಾಸದಲ್ಲಿ ಇಲ್ಲ.

ಅಷ್ಟೇನೂ ಪದ್ಧತಿ ಪ್ರಕಾರ ಗರಂ ಮಸಾಲೆ ಬೀಳದಿದ್ದರೂ.. ಗಜಾಬಿಜಿ ತೆಂಗು ರುಬ್ಬಿ ಹಾಕಿದ್ದರೂ.. “ಅದೆಷ್ಟು ರುಚಿಕಟ್ಟಾದ ಸಾರು ಮಾರಾಯ/ಯ್ತಿ ಅದು”.. ಎಂದು ಹೆರಬೈಲ ಊಟ ಉಂಡ ಪ್ರತಿಯೊಬ್ಬರೂ ಪರಸ್ಪರ ಮಾತಾಡಿಕೊಳ್ಳುತ್ತ ಮನೆಗೆ ಹೋಗುವಾಗ ಅರ್ಧರಾತ್ರಿ ದಾಟಿರುತ್ತದೆ. ಹೆಂಗಸರೇನಾದರೂ ಅಲ್ಲಿ ಉಂಡು ಬಂದಿದ್ದರೆ ಮೂರು ದಿನವಾದರೂ ಕೈ ಗಮತ ಹೋಗದ ಕುರಿತು ಬಾಳೆಯ ಬುಡಕೆ ಬಟ್ಟಲು ತೊಳೆಯುವಲ್ಲಿ ಏನಾದರೂ ಹೆಳೆ ತೆಗೆದು ಮತ್ತೆ ಮತ್ತೆ ಆ ಮಾತಿಗೇ ಬಂದು ಅದೇ ಮೂರು ದಿನ ಮತ್ತೆ ಮತ್ತೆ ಮಾತಾಡಿಕೊಳ್ಳುತ್ತಾರೆ.

ಇನ್ನು ಪ್ರಸಾದದ ಸುದ್ದಿ.. ಹೇಳಿಕೆ ಮಾಡಿಕೊಂಡವರದ್ದೂ ಇನ್ನುಳಿದವರದ್ದೂ ಸೇರಿ ಜನಕ್ಕೆ ಪಂಚಕಜ್ಜಾಯ ತಲಾ ಅರ್ಧ ಕಿಲೋದ ಮೇಲೆಯೇ ಸಿಗುತ್ತದೆ ಅನ್ನಿ. ಹೊಟ್ಟೆ ತುಂಬ ಮುಕ್ಕುವ ಈ ಪ್ರಸಾದ ಉಂಡ ಮೇಲೆ ಮತ್ತೆ ಬಾಯಿಗೆ ಹೊಡೆಯುತ್ತ ಹೋದರೂ ಮನೆ ಹತ್ರ ಬಂದರೂ ಬಾಕಿ ಉಳಿದಿರುತ್ತದೆ. ಇದನ್ನು ಹೆಗಲ ಮೇಲಿನ ದಟ್ಟಿಯಲ್ಲಿ ಸುತ್ತಿ ಅಲ್ಲೆಲ್ಲಾದರೂ ಗೇರುಮರದ ಮೇಲಿಟ್ಟು ಮರುದಿನ ಹೆಂಗಸರು ಮಕ್ಕಳು ಬಂದು ತಿಂಬುವ ರೂಢಿ.

ಬರೀ ಇಷ್ಟನ್ನೇ ಹೇಳಿದರೆ ಇನ್ನೇನೋ ಬಾಕಿ ಇದೆ ಅಂತ ನಿಮಗೆ ಅನ್ನಿಸುತ್ತದೆ ಗೊತ್ತು: ಬಂದೆ ಅಲ್ಲಿಗೇ..

ಮೂರು ವರ್ಷದ ಹಿಂದೆ ಹತ್ತು ಕಾಯಿಯ ಪಂಚಕಜ್ಜಾಯ ಹೇಳಿಕೊಂಡ ನನಗೆ ಈ ಹೆರಬೈಲ ದೇವ- ನೈವೇದ್ಯ ಮುಗಿದು ನಾನೇ ಹೆಂಗಸರ ಗುಂಪಿಗೆ ಹೋಗಿ ಒಂದೊಂದು ಗೆರಟೆ ಪ್ರಸಾದ ಹಂಚುವಾಗ ಮೂವತ್ತು ವರ್ಷದಿಂದ ಎಲ್ಲಿದ್ದಾಳೆ.. ಹೇಗಿದ್ದಾಳೆ.. ಎಂದು ಗೊತ್ತಿಲ್ಲದೇ ಹೋದ, ಆಗಾಗ ನೆನಪಾಗುತ್ತಲೇ ಇರುವ ಅಂಬೇರಹಿತ್ತಲದ ಜಾನಕಿಯ ದರ್ಶನ ಮಾಡಿಸಿದ್ದ.

ಒಂದು ಕಂಬ ಹುಗಿದು ಕಟ್ಟಿದ ಟ್ಯೂಬಲೈಟ್ ಬೆಳಕು ನನ್ನ ಬೆನ್ನ ಕಡೆಯಿಂದ ಸಮಾ ಅವಳ ಮುಖದ ಮೇಲೆ ಬೀಳುತ್ತಿತ್ತು. ತಂದ ಪ್ಲ್ಯಾಸ್ಟಿಕ್ ಕೊಟ್ಟೆಯಲ್ಲಿ ಪ್ರಸಾದ ಹಾಕಿಸಿಕೊಳ್ಳುತ್ತ ತನ್ನ ಜೊತೆಯಿರುವ ಇಬ್ಬರು ಮಕ್ಕಳಿಗೂ ಪ್ರಸಾದಕ್ಕೆ ಕೊಟ್ಟೆ ಸರಿಯಾಗಿ ಹಿಡಿಸುವುದರಲ್ಲಿ ಮಗ್ನಳಾಗಿದ್ದಳು ಅವಳು.

ಕೊರಳ ಎರಡೆಳೆ ಕರಿಮಣಿ ಅಲ್ಲಲ್ಲಿ ಕಟ್ಟಿದ್ದ ನೂಲು ಗಂಟಿನಲ್ಲಿ ತೂಗುತ್ತಿತ್ತು. ಗಿಲೀಟಿನದೋ ಬೆಳ್ಳಿಯದೋ ಗೊತ್ತಾಗದ ತಾಳಿಯೊಂದು ಬಂದೋಬಸ್ತು ಇಲ್ಲ ತಾನು. ಎಷ್ಟೊತ್ತಿಗಾದರೂ ಬಿದ್ದೇ ಹೋಗುವೆ ಎಂದು ನೋಡಿದವರಿಗೆಲ್ಲ ಹೇಳುವಂತಿತ್ತು. ಪ್ರಸಾದ ಹಂಚುತ್ತ, ಹೆಂಗಸರನ್ನು ದಾಟುತ್ತ ಹೋಗುವ ಅಷ್ಟು ಹೊತ್ತಿನಲ್ಲಿ ಇದಿಷ್ಟು ಹಾಗೂ ಅವಳ ಹಣೆಯ ಮೇಲಿನ ದೊಡ್ಡ ಹುಡಿಕುಂಕುಮ ಅಷ್ಟೇ ನೋಡುವುದಾಯಿತು ನನಗೆ.

ಮೂವತ್ತು ವರ್ಷದ ಹಿಂದೆ ನಮ್ಮದು ಮೂರು ಕುತ್ರಿ(ಬಣವೆ) ಗದ್ದೆಯಾದರೆ ಜಾನಕಿಯ ಅಪ್ಪನದು ಹದಿನೇಳು ಕುತ್ರಿಯ ಗದ್ದೆ. ಉಣ್ಣಲು ತಿನ್ನಲು ಚನ್ನಾಗಿ ಇದ್ದವರು. ಕಲಿಯಲೂ ಹುಷಾರಿ ಜಾನಕಿ. ವರ್ಗಕ್ಕೆ ಮೊದಲು ಅಥವಾ ಎರಡು ನಾವಿಬ್ಬರು. ಇಂಥಾ ಜಾನಕಿಯನ್ನು ಆರನೇ ವರ್ಗದ ಎರಡು ವಿಷಯದಲ್ಲಿ ಬೇಕೂಂತ ನಪಾಸ್ ಮಾಡಿದ್ದರು.

ಪರೀಕ್ಷೆಗೂ ಹದಿನೈದು ದಿನ ಮೊದಲು ಗಿರಿಯಣ್ಣ ಮಾಸ್ತರ್ರು ಬೋರ್ಡಿನ ಮೇಲೆ ಒಬ್ಬೊಬ್ಬರನ್ನೇ ಕರೆದು ತಾವು ಹೇಳಿದ ಇಂಗ್ಲಿಷ್ ಪದ ಬರೆಸುತ್ತಿದ್ದರು.‌ ಕೈಯಲ್ಲಿ ರೂಲ್ ಕಟ್ಟಿಗೆ. ಒಂದು ಹೊಡೆತ ಬಿದ್ದರೆ ತಲೆತಿರುಗಿ ಬೀಳಬೇಕು. ಎಲ್ಲಿಂದಲೋ ಪನಿಷ್ಮೆಂಟ್ ಡೆಪ್ಯೂಟೇಶನ್ ಆಗಿ ಈ ಶಾಲೆಗೆ ಬಂದ ಅವರಿಗೆ ಮಕ್ಕಳ ಮೇಲೆ ಪ್ರೀತಿ ಕರುಣೆ ಏನೇನೂ ಇರಲಿಲ್ಲ. ಮನೆಯಲ್ಲೂ ಹೆಂಡತಿ ಮಾನಿಸುವುದಿಲ್ಲ ಹಾಗಾಗಿ ಹೀಗೆ ಅಂವ ಅಂತ ಅವರು ಬರದ ದಿನ ಅಕ್ಕೋರೆಲ್ಲ ಸೇರಿ ಗುಜುಗುಜು ಮಾತಾಡಿಕೊಳ್ಳುತ್ತಿದ್ದರು. ಅವನ ದೃಷ್ಟಿ ಕೂಡ ಸರಿ ಇಲ್ಲ ಎಂದೂ ಸೇರಿಸುತ್ತಿದ್ದರು.

ಇದಕ್ಕೆ ಸಂವಾದಿಯಾಗಿ ಗಿರಿಯಣ್ಣ ಮಾಸ್ತರ ನಾನು ಜಾನಕಿ ಇಬ್ಬರೇ ಇರುವಾಗ, ಅಥವಾ ವರ್ಗಕೋಣೆಯಲ್ಲಿ ಬರೀ ಮಕ್ಕಳೇ ಇದ್ದು ಇತರ ದೊಡ್ಡವರಾರೂ ಇಲ್ಲದೇ ಇರುವಾಗ ಹನ್ನೊಂದು ಹನ್ನೆರಡನೇ ವಯಸ್ಸಿಗೆ ಮೀರಿ ಬೆಳೆದಿರುವ ಅವಳ ಎದೆಯ ಕುರಿತು ಕೊಂಕು ಮಾತಾಡುತ್ತಿದ್ದ. ನಾನಾ ನೆವ ಹೂಡಿ ಬಳಿಗೆ ಕರೆದರೂ ಬರದೇ… ಸುಡು ಸುಡು ಕಣ್ಣಲ್ಲಿ ಅವನನ್ನು ನೋಡುತ್ತ ಯಾಕೆ? ಏನು? ಅಲ್ಲಿಂದೇ ಹೇಳಿ.. ಎಂಬ ಧಿಮಾಕು ಮಾಡುವ ಅವಳ ಕುರಿತು ಅವನಿಗೆ ಉರಿ ಇತ್ತು.

ಆಗಾಗ “ಎದೆ ಕುಣಿಸ್ತೇ ಹೋದಂಗಲ್ಲ ಮನೆಪಾಠ ನೀಟಾಗಿ ಬರೆಯೋದು” “ಎದೆ ಕುಣಿಸ್ತೇ ಹೋದಂಗಲ್ಲ ಅಮರವಾಣಿ, ಪೇಪರ್ ಓದೋದು” ಎಂದು ಎಲ್ಲ ಮಾತಿನಲ್ಲೂ ಎದೆಯನ್ನು ಎಳೆದು ತಂದು ಮಾತಾಡುತ್ತಿದ್ದ. ಜಾನಕಿ ಅಷ್ಟು ಸಣ್ಣ ವಯಸ್ಸಿಗೇ ಅವನ ಮೇಲೊಂದು ಉಡಾಫೆ ಬೆಳೆಸಿಕೊಂಡು” ಬಿಡೇ ಅಂವ ಬೊಚ್ಚ..” ಎಂದು ನಕ್ಕುಬಿಡುತ್ತಿದ್ದಳು.

ಆತ ಬೋರ್ಡಿನ ಮೇಲೆ ಹೀಗೆ ಇಂಗ್ಲಿಷ್ ಪದ ಬರೆಸುವ ಆ ದಿನ ಉಳಿದವರಿಗೆ ಬರೆಸುವ ಶಬ್ಧಗಳನ್ನೂ ಜಾನಕಿ ಕೈ ಮೇಲೆ ಬರೀ ಬೆರಳಲ್ಲಿ ನನಗೆ ಬರೆದು ತೋರಿಸುತ್ತಿದ್ದಳು. ಅದನ್ನು ಬರೆಯೋದು ಹಾಗೆ.. ಇದನ್ನು ಬರೆಯೋದು ಹೀಗೆ.. ಎಂದು. “ಕೈ ಮೇಲೆ ಬರ್ಕೊಂಡು ಕದ್ದು ಕಾಪಿ ಮಾಡಿ ಬೋರ್ಡ ಮೇಲೆ ಬರೆಯೋಕೆ ನೋಡ್ತಿಯೇನೆ..? ಮಾಡ್ತೇನೆ ನಿಂಗೆ” ಎಂದು ಅವಳನ್ನು ಎಳೆದುಕೊಂಡು ಹೋದ ಗಿರಿಯಣ್ಣ ಮಾಸ್ತರ ಅದೇ ಕೈ ಮೇಲೆ ಜೀವ ಹೋಗುವ ಹಾಗೆ ರೂಲ್ ಕೋಲಿನಲ್ಲಿ ಎರಡು ಹೊಡೆತ ಹಾಕಿದ್ದ. ಜಾನಕಿ ತಿರ್‌ತಿರಗಿ ಬಿದ್ದಿದ್ದಳು. ನೋವು ತಡೆಯದೇ ಬೊಬ್ಬೆ ಹಾಕುತ್ತ…..

“ಕಚ್ಚೆ ಹರುಕ ನನ್ ಮಗ್ನೇ.. ಎದೆ ಹಾರಸ್ತಾ ನಡೀತಿ ಅಂತ ಮಾತುಮಾತಿಗೂ ಹೇಳ್ತಿಯೇನೋ… ನನ್ನ ಎದೆ ನಿನ್ನ ತಲೆಮೇಲೆ ಒಜ್ಜೆಯಾಗಿ ಕೂತಿದೇನೋ… ನೀನು, ನಿನ್ನ ಹೆಂಡ್ತಿ ನನ್ನ ಎಣ್ಣೆ ತಿಕ್ಕಿ ಮೀಯಿಸಿ ದೊಡ್ಡಮಾಡಿರೇನೋ…?” ಎಂದೆಲ್ಲ ಚೀರಾಡಿ ಗಿರಿಯಣ್ಣ ಮಾಸ್ತರನ ನೆತ್ತಿಗೆ ಹಾರಿ ಕೂದಲು ಬಗ್ಗಿಸಿ ಮೂರು ಜನ ಅಕ್ಕೋರು ಬಿಡಿಸಲು ಬಂದರೂ ಬಿಡದೇ ರಣಕಾಳಿಯಂತೆ ಹಲ್ಲುಕಡಿಯುವುದನ್ನು ನಾವೆಲ್ಲ ಗಡಗಡ ನಡುಗುತ್ತ ಮೂಲೆ ಸೇರಿ ನೋಡಿದ್ದೆವು. ನಾಕಾರು ಮಕ್ಕಳು ಉಚ್ಚೆಯನ್ನೂ ಮಾಡಿಕೊಂಡಿದ್ದವು.

ಅಪ್ಪ‌ ಅವ್ವಿ ಶಾಲೆಗೆಲ್ಲ ಬಂದು ಮಾಸ್ತರರ ಹತ್ರ ಜಗಳಾಡುವ ದಿನಮಾನವಲ್ಲ ಅದು. ಶಾಲೆಗೆ ಹೋಗದಿದ್ರೆ ಮನೆಯಲ್ಲುಳಿ; ಕೆಲಸಮಾಡು: ಅನ್ನೋ ರೈತರ ಮನೆ ಹುಡುಗಿ ಅವಳು. ಇದಾದ ಮೇಲೆ ಎಂಟ್ಹತ್ತು ದಿನ ಶಾಲೆಗೆ ಬರದಿದ್ರೂ ಪರೀಕ್ಷೆ ದಿನ ಬಂದು ಎಲ್ಲವನ್ನೂ ಬರೆದು ಹೋಗಿದ್ದಳು. ತಾನು ಪಾಸಾಗುವುದಷ್ಟೇ ಅಲ್ಲ ವರ್ಗಕ್ಕೆ ಒಂದೆರಡು ನಂಬರ್ ಕೂಡ ಬರುವೆ ಅಂದುಕೊಂಡು ಏಪ್ರಿಲ್ ಹತ್ತು ಫಲಿತಾಂಶದ ದಿನ ಶಾಲೆಗೆ ಬಂದವಳಿಗೆ ಗಿರಿಯಣ್ಣ ಮಾಸ್ತರ ತನ್ನ ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ ಅವಳನ್ನು ನಪಾಸು ಮಾಡಿದ್ದ. ಇದು ಅನ್ಯಾಯ ಎಂದು ಎಲ್ಲರಿಗೂ ಗೊತ್ತಿದ್ದರೂ ಯಾರಿಗೂ ಅವನನ್ನು ಎದುರು ಹಾಕಿಕೊಳ್ಳುವ ಧೈರ್ಯವಿರಲಿಲ್ಲ.

ಎಲ್ಲದಕ್ಕಿಂತ ಹೆಚ್ಚಾಗಿ ಉತ್ತೀರ್ಣವಾಗಿ ಮನೆಗೆ ಹೋಗುವಾಗ ಅಂಗಡಿಯಲ್ಲಿ ಎಲ್ಲ ಚಾಕ್ಲೇಟು ಖರ್ಚಾಗಿ ಹೋದರೆ ಎಂದು ಜಾನಕಿ ಮನೆಯಿಂದ ಬರುವಾಗಲೇ ಎಲ್ಲರಿಗೂ ಕೊಡಲು ಎರಡೂ ಕಿಶೆ ತುಂಬ ಚಾಕ್ಲೇಟು ಖರೀದಿಸಿ ತುಂಬಿಕೊಂಡು ಬಂದಿದ್ದಳು. ಅಷ್ಟು ಭರವಸೆ ಇತ್ತವಳಿಗೆ ತಾನು ಪಾಸಾಗುವ ಬಗ್ಗೆ.

ಈ ಪಾಸೋ.. ನಪಾಸೋ.. ಎಂದು ಗುತ್ತಾಗುವ ಮೊದಲೇ ಚಾಕಲೇಟು ತಂದ ಕುರಿತಾಗಿ ಯಾವ ಮಕ್ಕಳೂ ಅವಳನ್ನು ಅವಮಾನಿಸದೇ ಇದ್ದರೂ ಅವಳಿಗೇ ಒಂದು ನಮೂನಿಯಾಗಿ ಅಳುತ್ತ ಮನೆಗೆ ಹೋಗಿಬಿಟ್ಟವಳು ತದನಂತರದಲ್ಲಿ ಶಾಲೆ ಕಡೆ ತಲೆಹಾಕಲಿಲ್ಲ. ಗಿರಿಯಣ್ಣ ಮಾಸ್ತರ ಬೇರೆ ಶಾಲೆಗೆ ಹೋದ ಮೇಲೆ ಉಳಿದೆಲ್ಲ ಅಕ್ಕೋರು ಅವಳ ಮನೆಬಾಗಿಲಿಗೇ ಹೋಗಿ ಪುಸಲಾಯಿಸಿದರೂ ಅವಳು ಮತ್ತೆ ಶಾಲೆಗೆ ಬರಲು ಒಪ್ಪಲಿಲ್ಲ.

ಉತ್ತಮ ಶಿಕ್ಷಣ ಪಡೆದು, ಒಳ್ಳೆಯದೊಂದು ಉದ್ಯೋಗವನ್ನೋ ನೌಕರಿಯನ್ನೋ ಹಿಡಿದು ತಕ್ಕಮಟ್ಟಿನ ಬದುಕು ಕಟ್ಟಿಕೊಳ್ಳಬಲ್ಲ ಒಂದು ಪುಟ್ಟ ಹುಡುಗಿಯ ಬದುಕನ್ನು ಆರನೇ ವರ್ಗದಲ್ಲೇ ಮೊಟಕುಗೊಳಿಸಿಬಿಟ್ಟಿದ್ದ ಗಿರಿಯಣ್ಣ ಮಾಸ್ತರ. ನೂರಕ್ಕೆ ತೊಂಭತ್ತರಷ್ಟು ಜನ ಇವಳದ್ದೇ ತಪ್ಪು ಎಂದು ಮಾತಾಡಿದ್ದರು. ಹಾಕಿದ್ರೆ ಎರಡು ಹೊಡ್ತ ಹಾಕ್ತಿದ್ದ. ಎದೆ ಬಗ್ಗೆ ಮಾತಾಡಿದ್ರೆ ನಾಕ್ ದಿನ ಮಾತಾಡ್ತಿದ್ದ. ಇವಳು ಸುಮ್ಮನಿದ್ರೆ ಆಗ್ತಿತ್ತಪ್ಪಾ. ಎಂಬ ಮಾತು ಎಲ್ಲರದಾಗಿತ್ತು.

ಹೌದೇ…?ಹೇಳಿದಷ್ಟು ಸುಲಭವೇ..? ಸುಮ್ಮನಿದ್ದುಕೊಂಡುಬಿಡುವುದು..ನಾಳೆಯ ಬದುಕು ಸರಳ, ಸುಲಲಿತ, ಸುಂದರವಾಗುತ್ತದೆಯೆಂದು ಎಲ್ಲದನ್ನೂ  ಒಪ್ಪಿಕೊಂಡುಬಿಡುವುದು..

ಹೆರಬೈಲ ದೇವ ಮನದ ಎಲ್ಲ ತುಮುಲಗಳಿಗೂ ಸಾಕ್ಷಿ ಎಂಬಂತೆ,ಬದುಕು ಇಷ್ಟೇ ಎಂಬುದನ್ನು ಗುತ್ತುಮಾಡುವಂತೆ ಆ ಬಟಾಬಯಲ್ಲಿ ಕೆಂಪು ಗಂಧ ಬಳಿದುಕೊಂಡು ನಿಂತಿದ್ದ. ಈ ಉತ್ಸವ ಮುಗಿದ ಮೇಲೆ ಮತ್ತದೇ ಅಂಧಕಾರದ ಒಂಟಿ ಭಂಟ ಅವನು.

ಜಾನಕೀ…ನಾನು ಕಣೇ..ಎಂದವಳಿಗೆ ನನ್ನನ್ನು ಪರಿಚಯಿಸಿಕೊಳ್ಳಲು ನನ್ನ ರೇಷ್ಮೆಸೀರೆ, ಒಂದಿಷ್ಟು ತೂಕದ ಒಡವೆಗಳು..ತಂದು ನಿಲ್ಲಿಸಿಕೊಂಡ ಕಾರು.. ನನ್ನ ಬಿಡಲಿಲ್ಲ.. ಒಂದೊಂದೇ ಹೆಜ್ಜೆ ಹಿಂದೆ ಸರಿಯುತ್ತ ಸರಿಯುತ್ತ ನಾನು ಕತ್ತಲೆಯಲ್ಲಿ ಉಳಿದುಕೊಂಡು ಬೆಳಕಿನಲ್ಲಿರುವ ಜಾನಕಿಯ ಆಕೃತಿಯನ್ನು ಇನ್ನೊಮ್ಮೆ ಮತ್ತೊಮ್ಮೆ ಮಗದೊಮ್ಮೆ ನೋಡುತ್ತಲುಳಿದೆ.. ಜಾನಕಿ ಬಡವಾಗಿದ್ದಳು.. ಅವಳ ಸಪಾಟು ಎದೆ ಇಷ್ಟು ದೂರದಿಂದಲೂ ನನಗೆ ಕಾಣುತ್ತಿತ್ತು..

November 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ವಾಸುದೇವ ಶರ್ಮಾ

    “ಬೆಳಕಿನಲ್ಲಿರುವ ಜಾನಕಿ…” ಅದೆಂತಹ ರೂಪಕ, ಅಬ್ಬಾ! ಲಿಂಗ ಸಂವೇದನೆಯಿಲ್ಲದ, ಮಕ್ಕಳ ಬಗ್ಗೆ ಪ್ರೀತಿಯಿಲ್ಲದ, ಮಕ್ಕಳ ಪ್ರತಿಭೆ ಗುರುತಿಸಿ ಗೌರವಿಸುವ ಸೈರಣೆ ಇಲ್ಲದ ಅದೆಷ್ಟು‌ ಮಾಸ್ಟರುಗಳಿಂದ ಮಕ್ಕಳು ನೊಂದಿರಬಹುದು, ಬದುಕ ಗತಿಯನ್ನೇ ಕಳೆದುಕೊಂಡಿರಬಹುದು. ಇಂತಹದು ಈಗಲೂ ಹೋಗಿಲ್ಲ. ಹೇಳಿದರೆ, ದೂರಿದರೆ ಉಡಾಫೆ ಮಾಡುವ ಶಿಕ್ಷಣ ಇಲಾಖೆ.

    ಹಾಸನದ ಬಳಿಯೊಂದು ಶಾಲೆಯಲ್ಲಿ ಹತ್ತನೇ ತರಗತಿಯ ಪ್ರತಿಶತ ಫಲಿತಾಂಶಕ್ಕಾಗಿ ಅದೆಷ್ಟೆಲ್ಲ ಕಸರತ್ತು‌ ಮಾಡುತ್ತಿದ್ದರು ಎಂಬುದನ್ನು ದೂರೊಂದರ ಜಾಡು ಹಿಡಿದು ನಾನು ಪರಿಶೀಲಿಸಿದಾಗ ತಿಳಿಯಿತು. ಸದ್ಯದಲ್ಲೇ ಬರೆಯುತ್ತೇನೆ.‌

    ಪ್ರತಿಕ್ರಿಯೆ
  2. Kiran Bhat

    ಬೊಚ್ಚು ಮಾಸ್ತರನಿಗೆ ಜಾನಕಿ ಇಕ್ಕಿದ್ದು ಸರೀ ಇದೆ.
    ಆದರೆ ಬೆಳಗಬಗುದಾದ ಬದುಕೊಂದು ಕಮರಿ ಹೋದದ್ದಕ್ಕೆ ಬೇಸರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: