’ಹೆಣ್ತನ’ ಎಂದರೆ ಏನೆಲ್ಲಾ, ಎಷ್ಟೆಲ್ಲಾ…. – ಸ್ವರ್ಣ

ಸ್ವರ್ಣ

“ಮೊದಲ ಬಾರಿಗೆ ಹೆಣ್ಣು ಅಂತ ನಿನಗೆ ಯಾವಾಗ ಅನ್ನಿಸ್ತು?” ಈ ಪ್ರಶ್ನೆ ಮೊನ್ನೆ ಎದುರಾಯ್ತು. ಹೆಣ್ಣು ಅಂತ ಅನಿಸೋದು ಅಂದ್ರೆ ? ನಾನು ಹುಟ್ಟಿದಾಗಿನಿಂದ ಎಂದು ಉತ್ತರಿಸಬೇಕೆನಿಸಿದರೂ , ಒಂದು ಘಳಿಗೆಯ ನಂತರ ಅದು ಉತ್ತರವೆಂದೆನಿಸಲಿಲ್ಲ . ಬುಧ್ಧಿ ಬಂದಾಗಿನಿಂದ ಬಟ್ಟೆ ಬರೆಯಲ್ಲಿ ಕಾಣುವ ಸತ್ಯ ಕ್ರಮೇಣ ಬೇರೆ ಬೇರೆ ರೀತಿಯಲ್ಲಿ ಮುಖಾ ಮುಖಿಯಾಗ ತೊಡಗುತ್ತದೆ. ಕೊನೆಗೊಮ್ಮೆ ಆ ಸತ್ಯ ನನ್ನಲ್ಲೇ ಇತ್ತು ಎಂದೂ ಅನ್ನಿಸಬಹುದು. ಆದ್ದರಿಂದ ಈ ಪ್ರಶ್ನೆಗೆ ಉತ್ತರ ಕೊಡುವುದು ಸಾಧ್ಯವಾ ? ಅನ್ನುವುದೇ ನನ್ನ ಮೊದಲ ಉತ್ತರವಾಗಿತ್ತು .
ನಾವು ಹುಟ್ಟುವ ಹೊತ್ತಿಗೆ ಹೆಣ್ಣು ಗಂಡು ಎರಡೂ ಒಂದೇ ಬಿಡು, “ಕುವರಿಯಾದೊಡೆ ಕುಂದೇನದರಿಂದ” ಎಂಬ ಆಲೋಚನಾ ಧಾಟಿ ಬಂದಾಗಿತ್ತು. ಹೆಣ್ಣು ಮಕ್ಕಳಿಗೂ ಊಟದಲ್ಲಿ ಹಾಲು ತುಪ್ಪ ಮೊಸರು , ಓದಲು ಕಾನ್ವೆಂಟು, ಓಡಾಡಲು ಲೂನ ಕೊಡಿಸುವ ಅಪ್ಪ ಅಮ್ಮಂದಿರ ಸಂಖ್ಯೆ ಬೆಳೆದಿತ್ತು. ಆದರೂ ಆಗೀಗ “ಫಸ್ಟ್ ಶೋ ಸಿನೆಮಾ ಬೇಡ, ಬೇಕಾದ್ರೆ ಮ್ಯಾಟ್ನಿಗೆ ಹೋಗು” , ಇಲ್ಲಾ “ಅದೇನು ಕುರ್ಚಿ ಮೇಲೆ ಕೂತು ಕಾಲು ಅಲ್ಲಾಡಿಸೋದು, ಹುಡುಗಿ ನೀನು, ಸ್ವಲ್ಪ ನಯ ನಾಜೂಕು ಕಲಿ” ಎಂಬಂತ ಡಯಲಾಗ್ ಕೇಳಿದಾಗ ಯಾಕಾದ್ರೂ ಹುಡುಗಿಯಾಗಿ ಹುಟ್ಟಿದ್ವಪ್ಪ ಅನ್ನಿಸಿದ್ದು ಉಂಟು. ಎಲ್ಲಕ್ಕೂ ಕಳಶವಿಟ್ಟಂತೆ ತಿಂಗಳ ಅತಿಥಿ ತರುವ ಬೆನ್ನು ನೋವು , ಹೊಟ್ಟೆ ನೋವಿಗೆ ಒದ್ದಾಡುವಾಗ ಹಾಳಾದ್ದು ಹೆಣ್ಣು ಜನ್ಮ ಅಂತ ಬೈದದ್ದು ಉಂಟು . ಶಾಲೆ ಮುಗಿದು ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದ ಕಾಲದಲ್ಲಿ ಮೀಸೆ ಮೂಡದ ಹುಡುಗನೊಬ್ಬ ಪಕ್ಕದಿಂದ ನಡೆದು ಮತ್ತೆ ಹಿಂತಿರುಗಿದರೆ, ಹುಚ್ಚು ಖೋಡಿ ಮನಸು, ಒಂದೇ ಬಾರಿ ನನ್ನ ನೋಡಿ ಅಂತ ಹಾಡಿದ ನೆನಪು ಮಸುಕು ಮಸುಕು.
ಓದಿದ ಡಿಗ್ರಿ ಕೆಲಸ ಕೊಡಿಸಿದ ಮೇಲೆ , ಚೆಕ್ ಬುಕ್ಕಿನ ಮೇಲೆ ಪ್ರಿಂಟಾದ ಹೆಸರು ನೋಡಿ ಖುಷಿ ಪಟ್ಟ ಕ್ಷಣ ಚಂದವಿತ್ತು. ನನ್ನ ಸಹಿಗೂ ಹಣ ಕೊಡ್ತಾರೆ ಅಂದ್ರೆ ಸಂತೋಷವೇ ತಾನೇ ? ಸರೀಕರು, ‘ಓದಿ ನಿನ್ನ ಕಾಲ ಮೇಲೆ ನೀನು ನಿಂತೆ , ಖುಷಿ ನಿನ್ನ ನೋಡಿದರೆ ‘ ಅಂದಾಗ ಅವರು ಮೊದಲು ಸೇರಿಸುತ್ತಿದ್ದ ‘ಹುಡುಗಿಯಾದ್ರೂ ! ‘ ಎಂಬ ಆಶ್ಚರ್ಯ ಸೂಚಕ ಮರೆತುಹೋಗಿರುತಿತ್ತು. ಸಂಗಾತಿಗಾಗಿ ಅಲೆವಾಗ ‘ಬಳೆ ಯಾಕೆ ಹಾಕಿಲ್ಲ’ , ‘ಸಂಬಳ ಎಷ್ಟು’ , ‘ಮದುವೆಯಾದ ಮೇಲೆ ನಾವು ಬೇಡಾ ಅಂದ್ರೆ ಕೆಲಸ ಬಿಡ್ತಿಯಾ’ …..ಅಂತೆಲ್ಲಾ ಕೇಳಿದಾಗ ಇನ್ನೂ ತಮ್ಮದೇ ಆದ ಡಿಮ್ಯಾಂಡ್ಗಳನಿಡುವ ವರ ಮಹಾಶಯರ ಕುಟುಂಬಗಳನ್ನು ನೋಡಿ ಹೆಣ್ಣಾದುದಕ್ಕೆ ಹೆಮ್ಮೆ ಪಟ್ಟು , ಎಲ್ಲದಕ್ಕೂ ಅಪ್ಪ ಅಮ್ಮನ ಮುಖ ನೋಡುವ ಜನ್ಮವನ್ನು ಹೀಗಳೆದದ್ದೂ ಇದೆ.
ಒಮ್ಮೆ ರೇಡಿಯೋ ಸ್ಟೇಷನ್ ಒಂದು, ಈ ವಿಷಯದ ಬಗ್ಗೆನೇ ಪ್ರಶ್ನೆ ಕೇಳಿತ್ತು “ ಗಂಡಸರೇ ನೀವೇಕೆ ಹೆಣ್ಣಾಗ ಬಯಸುತ್ತೀರಿ , ಒಂದು ಕಾರಣ ಕೊಡಿ “ ಮಾಮೂಲಿನಂತೆ ಗೆದ್ದವರಿಗೆ ೨ ಟಿಕೇಟು ಮೂರು ಪಾಸು ಅದೂ ಇದೂ ಕೊಡ್ತೀವಿ ಅನ್ನೋ ಅಮೀಷನೂ ಇತ್ತು. ಗೆದ್ದವನ ಉತ್ತರ ಏನಿರಬಹುದೆಂದು ನಾನೂ ಸ್ಟೇಶನ್ ಬದಲಾಯಿಸದೇ ಕೇಳುತ್ತಿದ್ದೆ. ಕೊನೆಗೆ ಗೆದ್ದವನನ್ನು ಘೋಷಿಸಿದ ರೇಡಿಯೋ ಉದ್ಘೋಶಕ ಉತ್ತರವನ್ನು ಹೇಳಿದಾಗ ಮೆಚ್ಚಿದ್ದೆ, “ನಾನು ಹೆಣ್ಣಾಗ ಬಯಸುತ್ತೇನೆ ಏಕೆಂದರೆ ಒಡಲೊಳಗೆ ಎರಡು ಹೃದಯಗಳ ಮಿಡಿತವನ್ನು ಒಂದೇ ಬಾರಿ ಕೇಳುವ ಸಾಧ್ಯತೆ ಇರುವುದು ಅವಳಿಗೆ ಮಾತ್ರ “ ಈ ಉತ್ತರ ಕೇಳಿ ೮-೧೦ ವರುಷಗಳು ಉರುಳಿದರೂ ಅದಿನ್ನೂ ನೆನಪಿನಿಂದ ಮಾಸಿಲ್ಲ . “ನನ್ ರಕ್ತ ಮಾಂಸ ಹಂಚ್ ಕೊಂಡು ಹುಟ್ಟಿದೆ “ ಅನ್ನೋದು ತುಂಬಾ ಸಿನಿಮೀಯ , ಯಾವ ತಾಯಿಯೂ ತನ್ನ ಮಗುವಿನ ಬಗ್ಗೆ ಹಾಗೆ ಯೋಚಿಸಲಾರಳು. ಹೆಣ್ತನವನ್ನು ಮೀರಿದವಳು ತಾಯಿಯಾಗುತ್ತಾಳೆ ಎಂದು ಸತ್ಯಕಾಮರು ಒಂದು ಕಡೆ ಹೇಳುತ್ತಾರೆ. ಅದೆಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ , ತಾಯಿಯಾಗುವ ಕ್ಷಣ ಹೆಣ್ಣೆಂಬುದರ ಅರಿವು ಕೊಟ್ಟ ಕ್ಷಣಗಳಲ್ಲಿ ಮೊದಲಿಗೆ ನಿಲ್ಲುತ್ತದೆ. ಆದರೆ ಆ ಅನುಭವವೊಂದೇ ಹೆಣ್ತನದ ಬುನಾದಿ ಎಂದು ನನಗನ್ನಿಸಿಲ್ಲ. ಹೆತ್ತರೆ ಮಾತ್ರ ತಾಯಿಯೇನು ? ಮನಸೊಂದರ ಕಂಬನಿಗೆ ಮರುಗುವ ಎಲ್ಲ ಜೀವಗಳಲ್ಲೂ ತಾಯ್ತನವಿದೆಯಲ್ಲವಾ? ಇದು ಹೆಣ್ತನದ ಪ್ರಶ್ನೆಗಿರುವ ಬಹು ದೊಡ್ಡ ಆಯಾಮ.
ಕಲೆ : ಅನು ಪಾವಂಜೆ
ಮಗುವೊಂದಕ್ಕೆ ಬೆಳೆಯಲು ಸಹಾಯ ಮಾಡಿ (ಬೆಳೆಸಿ ಅಲ್ಲ ) ತಾನೂ ಬೆಳೆದು , ಮರಿಗಳಿಗೆ ರೆಕ್ಕೆ ಬಂದು ಹಾರಿ ಹೋದ ಮೇಲೆ ಹೆಣ್ತನ ಇನ್ನಷ್ಟು ಮಾಗುತ್ತದೆಯೇ ? ಬದುಕಿನ ಪ್ರತೀ ಘಟ್ಟದಲ್ಲೂ ಹೆಣ್ಣೆಂಬುದು ಅರಿವಿಲ್ಲದಂತೆ ಅರಿವಾಗಿರಬಹುದು. ಸ್ತ್ರೀವಾದ , ಸಮಾನತೆಯ ಗುಂಗಿನಾಚೆಯೂ ಹೆಣ್ತನವಿದೆ.
ಇನ್ನೂ ಮುಂದುವರೆದರೆ ಹೆಣ್ಣು-ಗಂಡು ಮದುವೆ ಎಂಬ ಚಪ್ಪರದಡಿ ಒಟ್ಟಿಗೆ ಬಾಳಲಿ ಅಥವಾ ಒಬ್ಬರೇ ಬಾಳಿದರೂ ಬದುಕಿನ ಒಂದು ಘಟ್ಟದಲ್ಲಿ ಎಲ್ಲ ‘ತನ’ ಗಳನ್ನೂ ಮೀರಲು ಬಹುತೇಕರು ಪ್ರಯತ್ನಿಸುತ್ತಾರೆ . ಮಗುವೊಂದರ ಅಳುವಿಗೆ ಓಗೋಡದವರಾರು, ಕ್ರೌರ್ಯದ ಫಲವಾಗಿ ಹರಿವ ರಕ್ತಕ್ಕೆ ಮರುಗದವರಾರು, ಬುವಿಗೆ ಬರದೇ ಮಣ್ಣ ಸೇರಿದ ಹೆಣ್ಣು ಕೂಸಿಗೆ ಕಣ್ಣೀರು ಹಾಕದವರಾರು ? ಒಂದಿಲೊಮ್ಮೆ ಎಲ್ಲ ಜೀವಗಳಲ್ಲೂ ತಾಯ ಮಮತೆ , ತಂಗಿಯ ಆರ್ದ್ರತೆ , ಅಕ್ಕನ ವಾತ್ಸಲ್ಯ , ಅಜ್ಜಿಯ ಪ್ರೀತಿ ಎಲ್ಲವೂ ಕಂಡು ಬರುತ್ತವೆ .ಹಾಗಾಗಿ ಹೆಣ್ತನವೆಂಬುದು ಜೀವಿಯೊಂದರ ಸಾಮಾನ್ಯ ಲಕ್ಷಣ ಎಂದೆನ್ನಬಹುದೇನೋ ?
ಇಷ್ಟೆಲ್ಲಾ ಹೇಳಿದಾಗ್ಯೂ ಹೆಣ್ಣೆಂಬುದು ಅರಿವಾದುದು ಯಾವಾಗ ಎಂಬ ಪ್ರಶ್ನೆಗೆ ಒಂದೇ ಘಟನೆ ಅಥವಾ ಒಂದೇ ಉತ್ತರ ಕೊಡುವುದು ನನ್ನ ಮಟ್ಟಿಗೆ ಕಷ್ಟ .
 
ಅಮ್ಮ ಹಾಕುತ್ತಿದ್ದ ಪುಟ್ಟ ಪುಟ್ಟ ಫ್ರಾಕುಗಳ ನೆರಿಗೆಗಳ ಸಂಧಿಗಳಲಿ
ಕದ್ದು ಮುಚ್ಚಿ ತಿಂದ ಪಕ್ಕದ ಮನೆ ನೆಲ್ಲಿಕಾಯಿ ಒಗರಿನಲಿ
ಹದಿಮೂರು ತನ್ನೊಂದಿಗೆ ಹೊತ್ತು ತಂದ ಅತೀ ಭಾವುಕ ಕ್ಷಣಗಳಲಿ
ತುಂಟಾಟದ ಓರೆ ನೋಟಗಳಲಿ
ಮೊದಲ ಬಾರಿ ಬೆರಳುಗಳು ಬೆಸೆದುಕೊಂಡ ಬೆವರಿನಲಿ
ಇನ್ನು ನಿನ್ನ ಪಾಲಿಗೆ ನಾನಿಲ್ಲ ಎಂದವ ಎದ್ದು ಹೋದ ಘಳಿಗೆಯಲಿ
ಸ್ವಾವಲಂಬನೆಯೆಡೆಗಿಟ್ಟ ಪುಟ್ಟ ಪುಟ್ಟ ಹೆಜ್ಜೆಗಳಲಿ
ಕತ್ತಿನಲಿ ಕರಿ ಮಣಿ ನಕ್ಕ ಮುಹೂರ್ತದಲಿ
ಮತ್ತೆ ಎದುರಾದ ಸಂಸಾರ ಜಂಜಡಗಳಲಿ
ಕಂದ ಕೈಗೆ ಬಂದ ಮೂರ್ತಾಮೂರ್ತ ಕ್ಷಣಗಳಲಿ
ಎದೆಯುದ್ದ ಬೆಳೆದ ಮಗನುತ್ಸಾಹದಲಿ
ನನ್ನೆತ್ತರಕ್ಕೆ ಬೆಳೆದ ಮಗಳ ಕನಸುಗಳಲಿ
……
ಹೀಗೆ ಬರೆಯುತ್ತಾ ಹೋದಷ್ಟು ಸಾಲುಗಳು ಹುಟ್ಟುತ್ತಲೇ ಇರುತ್ತವೆ.ಹೆಣ್ತನವೆಂಬುದು ಈ ಎಲ್ಲಾ ಸಾಲುಗಳಲ್ಲಿ , ಸಾಲುಗಳ ನಡುವಿನಲ್ಲಿ ಅವಿತು ನಗುತ್ತಿರುತ್ತದೆ. ಅವಧಿಯ ಸಂಯೋಜಕಿ ಸಂಧ್ಯಾರಾಣಿ ಒಮ್ಮೆ ಬರೆದಿದ್ದರು :
“ನನ್ನಲ್ಲಿನ ನನ್ನನ್ನು
ಇಷ್ಟಿಷ್ಟೇ ತನ್ನೊ೦ದಿಗೆ ಒಯ್ಯುವ
ಅವನ ತೋಳುಗಳಲ್ಲಿ ,
ಸಾವಿನ ಅ೦ಜಿಕೆ, ಬದುಕಿನ ಆಕರ್ಷಣೆ! “.
ಈ ಸಾಲುಗಳು ಒಂದು ಅರ್ಥದಲ್ಲಿ ಹೆಣ್ಣಿನ ಬದುಕು ಮತ್ತು ತೊಯ್ದಾಟಗಳನ್ನು ಸಮರ್ಥವಾಗಿ ಕಟ್ಟಿಕೊಡುತ್ತವೆ. ಭಾವಲೋಕ ಮತ್ತು ಮರ್ತ್ಯ ಲೋಕದ ನಡುವಿನ ತೊಯ್ದಾಟದಲ್ಲಿ ಯಾವತ್ತೂ ಸಾವಿನ ಅಂಜಿಕೆಯ ಜೊತೆಗೇ ಬದುಕಿನ ಆಕರ್ಷಣೆ . ಅಂಜಿಕೆಯನ್ನು ಮೀರುವ ಹೊತ್ತೂ ಬದುಕಿನ ಭಾಗವೇ . ಅಂತಹ ಕೆಲ ಘಟ್ಟಗಳನ್ನು ದಾಟಿದ ನಂತರ ಅವಳ ಸಾಲುಗಳು ಹೀಗಿರಬಹುದೇ ?
ಅವನಲ್ಲಿ ಒಂದಾಗಿ
ಕಡೆಗೆ ಕೆಳಗುಳಿದು
ಮುತ್ತು, ರತ್ನಗಳಿಗೆ ಆಶ್ರಯವಾಗಿ
ಕಟ್ಟುವ ಮನೆಯ ಮರಳಾಗಿ
ಕೊನೆಗೆಲ್ಲ ತೊರೆದು ಮರುಭೂಮಿಯಾಗಿ
ಮತ್ತೆ ಬಯಲಾದೆ ನಾ ….
ಎಷ್ಟು ಬರೆದರೂ ಗೆಳತಿ ಕೇಳಿದ ಪ್ರಶ್ನೆಗೆ ಉತ್ತರ ಮಾತ್ರ ಇನ್ನೂ ಸಿಗಲಿಲ್ಲ . ಕೆಲ ಪ್ರಶ್ನೆಗಳಿಗೆ ಬದುಕೇ ಉತ್ತರ !

‍ಲೇಖಕರು G

March 8, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Nalini Somayaji

    ಹೆತ್ತರೆ ಮಾತ್ರ ತಾಯಿಯೇನು ? ಮನಸೊಂದರ ಕಂಬನಿಗೆ ಮರುಗುವ ಎಲ್ಲ ಜೀವಗಳಲ್ಲೂ ತಾಯ್ತನವಿದೆಯಲ್ಲವಾ? ಇದು ಹೆಣ್ತನದ ಪ್ರಶ್ನೆಗಿರುವ ಬಹು ದೊಡ್ಡ ಆಯಾಮ.
    ಈ ಸಾಲುಗಳು ಮನದಾಳದಲ್ಲಿ ಎಂದೆಂದೂ ಕಾಡುವ ಪ್ರಶ್ನೆ…ಉತ್ತರಿಸುವರು ಕೆಲವರಷ್ಟೆ

    ಪ್ರತಿಕ್ರಿಯೆ
  2. Badarinath Palavalli

    ಏಕ ಕಾಲದಲ್ಲಿ ಬಹುವಾಗಬಲ್ಲವಳು ಬಹುಶಃ ಹೆಣ್ಣು ಮಾತ್ರ.
    ಸಮಾನತೆ ಮತ್ತು ಸಮಪಾಲು ಒತ್ತಿಟ್ಟಿಗಿಟ್ಟರೆ, ಆಕೆ ನಾಯಕತ್ವವನ್ನು ತಂತುಗಳಲ್ಲೇ ಹೊತ್ತು ಬಂದವಳು. ಏನನ್ನಾದರೂ ನಡೆಸಲು ಆಕೆ ಮನಸ್ವೀ ಕೆಲಸ ಮಾಡುವವಳು.
    ತಾಯಿ ಆಮೇಲೆ ಮಗಳ ತಾಯಿ ಈ ವೃತ್ತ ಸಂಕ್ರಮಣದಲ್ಲಿ ಆಕೆ ಅತ್ಯಂತ ಜವಾಬ್ದಾರಿಯನ್ನು ಹೊರುವ ಜೀವ.
    ನೀವು ಉಲ್ಲೇಖಿಸಿದ ರೇಡಿಯೋದಲ್ಲಿ ಹೆಣ್ತನದ ವ್ಯಾಖ್ಯಾನ ಸರ್ವತ್ರ ಸತ್ಯ. ಹಾಗೆಯೇ ನೀವು ಬರೆಯುತ್ತಾ ಹೋದ ಬಿಡಿ ಸಾಲುಗಳನೂ ಮೀರಿ ಅನನ್ಯವಾಗಿ ನಿಲ್ಲಬಲ್ಲವಳು ಆಕೆ ಮಾತ್ರ.
    Sandhya Rani ಮೇಡಂ ಅವರ ಕವಿತೆಯ ಸಾಲುಗಳೂ ಮಾರಮಿಕವಾಗಿವೆ.
    ಒಟ್ಟಾರೆಯಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಶುಭ ದಿನ ಅವಧಿಯಲ್ಲಿ ಅಲಂಕರಿಸಿದ ಈ ನಿಮ್ಮ ಲೇಖನ ಸರ್ವಕಾಲಿಕ.

    ಪ್ರತಿಕ್ರಿಯೆ
  3. Sripathi Manjanabailu

    ಬರಹ ತುಂಬಾ ಅಪ್ಯಾಯಮಾನ. ಮರದ ಹಣ್ಣು ಅಲ್ಲ ತನಗಾಗಿ , ನದಿಯ ನೀರು ಅಲ್ಲ ತನಗಾಗಿ (ಕಬೀರನ ದೋಹಾದ ಒಂದು ಸಾಲು), ಅದುವೇ ಹಣ್ಣು -ಅದುವೇ ನೀರು ತಾಯ್ತನದ ಮೂಲ ಕಣ್ಣು-ಬೇರು . ಖುಷಿಯಾಯಿತು. ಮೊಳಕೆ ಗಟ್ಟಿ ಬೆಳೆಯ ಭಟ್ಟಿ. ಶುಭವಾಗಲಿ. .

    ಪ್ರತಿಕ್ರಿಯೆ
  4. Sunaath

    ಹೆಣ್ಣು ಹಾಗು ಗಂಡುಗಳಲ್ಲಿ (ಜೈವಿಕ ಭೇದವನ್ನು ಬಿಟ್ಟರೆ) ಏನಾದರೂ ಭೇದವಿದೆಯೆ? ಸಾಮಾಜಿಕವಾಗಿ ಇರಬಾರದು. ಆದರೆ ನನ್ನ ತಾಯಿಯೊಂದಿಗೆ, ತಂಗಿಯೊಂದಿಗೆ, ಹೆಂಡತಿಯೊಂದಿಗೆ ಹಾಗು ಹೆಣ್ಣುಮಕ್ಕಳೊಂದಿಗೆ ನಾನು ಕಳೆದ ದಿನಗಳು ಹೆಣ್ಣಿನ ಬಗೆಗೆ ನನಗೆ ವಿಶೇಷ ಪ್ರೀತಿಯನ್ನು ಹಾಗು ಗೌರವವನ್ನು ಹುಟ್ಟಿಸುತ್ತವೆ. ಹೆಣ್ಣು ಮನುಕುಲದ ತಾಯಿ. ಅಂತರರಾಷ್ಟ್ರೀಯ ಮಹಿಳಾ ದಿನದಂದು ಅವಳಿಗೆ ನನ್ನ ಶತಕೋಟಿ ಪ್ರಣಾಮಗಳು.

    ಪ್ರತಿಕ್ರಿಯೆ
  5. bharathi b v

    Swarna nannella maathoo neene aadiddiya ansthide … Pada padagaloo edeli koreda haagide …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: